Sunday, 28 April, 2024

ಮೂರ್’ನ ನಿಯಮ ಹಾಗೂ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗುವತ್ತ ಭಾರತದ ಪಯಣ

Share post

ಜಗತ್ತು ವೇಗವಾಗಿ ಬೆಳೆಯುತ್ತಿದೆ ಅನ್ನುವ ಮಾತನ್ನು ನಾವು ಸದಾ ಕೇಳುತ್ತಲೇ ಇರುತ್ತೇವೆ. ಹಾಗೂ ಆ ಬೆಳವಣಿಗೆಯ ಬಗ್ಗೆ ಹೆಮ್ಮೆಯನ್ನೂ ಪಡುತ್ತೇವೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ ಎನ್ನುತ್ತಲೇ, ಹೀಗಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು ಅನ್ನುವ ಕನಸನ್ನೂ ಕಾಣುತ್ತೇವೆ. ಹೌದು ಕೆಲ ಬೆಳವಣಿಗೆಗಳು ಚಂದ. ಇನ್ನು ಕೆಲವು ಬೆಳವಣಿಗೆಗಳು ಆಗದಿದ್ದರೆ ಚೆಂದವಿತ್ತೇನೋ, ಅಥವಾ ಸ್ವಲ್ಪ ನಿಧಾನಕ್ಕೆ ಆಗಿದ್ದರೂ ಒಳ್ಳೆಯದಿತ್ತೇನೋ ಎಂಬ ಬೇಸರ ಆಗುವುದುಂಟು. ಆದರೆ ನಮ್ಮ ಇಷ್ಟಾನಿಷ್ಟಗಳ ನಡುವೆಯೂ ಮ್ಯಾಕ್ರೋ ಹಂತದ ಬೆಳವಣಿಗೆಗಳು ನಿಲ್ಲುವುದಿಲ್ಲ. ಯಾಕೆಂದರೆ ಈ ಬೆಳವಣಿಗೆಗಳು ಒಬ್ಬಿಬ್ಬರ ಕೊಡುಗೆಗಳಲ್ಲದೇ, ಅವುಗಳ ಹಿಂದೆ ಹಲವಾರು ಕಾರಣಗಳಿರುವುದರಿಂದ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಅದರ ವಿರುದ್ಧವಾಗಿ ಯೋಚಿಸಿದರೂ ಒಟ್ಟಾರೆ ಬೆಳವಣಿಗೆ ನಿಲ್ಲುವುದಿಲ್ಲ.

 

ತಂತ್ರಜ್ಞಾನದ ಬೆಳವಣಿಗೆ ಇದಕ್ಕೊಂದು ಒಳ್ಳೆಯ ಉದಾಹರಣೆ. ಕಂಪ್ಯೂಟರ್ ಜಗತ್ತಿನಲ್ಲಿ ಮೂರ್’ನ ನಿಯಮ ಎಂಬುದೊಂದಿದೆ. 1965ರಲ್ಲಿ, ಅಂದರೆ ಇಂದಿನ ಆಧುನಿಕ ಕಂಪ್ಯೂಟರುಗಳು ಇನ್ನೂ ಶೈಶವಾವಸ್ಥೆಯಲ್ಲಿದಾಗಲೇ, ಗೋರ್ಡನ್ ಮೂರ್ ಎಂಬ ಅಮೇರಿಕನ್ ವಿಜ್ಞಾನಿ ಮತ್ತು ಉದ್ಯಮಿ ಹೇಳಿದ ಪ್ರಕಾರ “ಮೈಕ್ರೋಚಿಪ್‌ನಲ್ಲಿನ ಟ್ರಾನ್ಸಿಸ್ಟರ್‌ಗಳ ಸಂಖ್ಯೆ ಪ್ರತೀ ಎರಡು ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತದೆ, ಹಾಗೂ ಇದು ನಮ್ಮ ಯಂತ್ರಗಳ ಕಂಪ್ಯೂಟಿಂಗ್ ಶಕ್ತಿಯನ್ನು ಒಂದು ಪಟ್ಟು ಅಥವಾ ಎರಡು ಪಟ್ಟಲ್ಲ, ಬದಲಿಗೆ ಘಾತೀಯ ಮಟ್ಟದಲ್ಲಿ (exponential rate) ಹೆಚ್ಚಿಸುತ್ತದೆ”. ಒಂದು ವಿದ್ಯುನ್ಮಾನ ಪ್ರೋಸೆಸರಿನಲ್ಲಿರುವ ಟ್ರಾನ್ಸಿಸ್ಟರುಗಳ ಸಂಖ್ಯೆಗೂ, ಆ ಪ್ರೋಸೆಸರ್ ಒಂದೇಸಲಕ್ಕೆ ಮಾಡಬಲ್ಲ ಪ್ರತ್ಯೇಕ ಕೆಲಸಗಳ ಸಂಖ್ಯೆಗೂ ನೇರ ಅನುಪಾತವಿರುತ್ತದೆ. ಸುಲಭವಾಗಿ ಹೇಳಬೇಕೆಂದರೆ ಹೆಚ್ಚೆಚ್ಚು ಟ್ರಾನ್ಸಿಸ್ಟರುಗಳಿದ್ದರೆ, ಹೆಚ್ಚೆಚ್ಚು ಕೆಲಸಗಳನ್ನು ಮಾಡಬಲ್ಲ ಶಕ್ತಿಯಿದೆ ಎಂದರ್ಥ. ಈ ಮಾತು ಹೇಳಿದ ಮೂರುವರ್ಷದ ನಂತರ 1973ರಲ್ಲಿ ಗೋರ್ಡನ್ ಮೂರ್ ಇಂಟೆಲ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ. ಮಾತ್ರವಲ್ಲ, ಗೋರ್ಡನ್ನ ಈ ನಿಯಮವನ್ನು ಇಂಟೆಲ್ ಹಲವಾರು ದಶಕಗಳಿಂದ ನಿರೂಪಿಸುತ್ತಲೂ ಇದೆ. ಗೋರ್ಡನ್ನನ ಈ ಮಾತು ಎಷ್ಟು ಸತ್ಯವಾಗಿತ್ತೆಂದರೆ ಆತ ಹೇಳಿದ ಈ ಮಾತು 1975ರ ಹೊತ್ತಿಗೆ ಒಂದು ನಿಯಮವಾಗಿಯೇ ಗುರುತಿಸಲ್ಪಟ್ಟಿತು.

1971ರಲ್ಲಿ ಇಂಟೆಲ್ ತಯಾರಿಸಿದ ಮೊದಲ ಜನಪ್ರಿಯ 4004 ಪ್ರೋಸೆಸರ್’ನಲ್ಲಿ ಇದ್ದದ್ದು ಕೇವಲ 2,300 ಟ್ರಾನ್ಸಿಸ್ಟರುಗಳು. 1974ರಲ್ಲಿ ಇದು ಆರುಸಾವಿರವನ್ನು ಮುಟ್ಟಿ, 1978ರಲ್ಲಿ ಬಂದ 8086 ಪ್ರೋಸೆಸರಿನಲ್ಲಿ ಟ್ರಾನ್ಸಿಸ್ಟರುಗಳ ಸಂಖ್ಯೆ 29,000ಕ್ಕೇರಿತ್ತು! 1982ರಲ್ಲಿ ಇದು 134,000 ಟ್ರಾನ್ಸಿಸ್ಟರುಗಳಿಗೇರಿ, 1985ರಲ್ಲಿ 275,000 ಆಗಿ, 1989ರಲ್ಲಿ 600,000 ಟ್ರಾನ್ಸಿಸ್ಟರುಗಳಾಗಿ ಮುಂದುವರೆಯುತ್ತಾ, ಇಂದಿನ ಹೊಚ್ಚಹೊಸ ಪ್ರೋಸೆಸರ್ ಆದ 2023ರ ಸಫೈರ್ ರ್ಯಾಪಿಡ್ ಎಂಬ ಪ್ರೋಸೆಸರಿನಲ್ಲಿ 44 ಬಿಲಿಯನ್ ಟ್ರಾನ್ಸಿಸ್ಟರುಗಳಿಗೇರಿದೆ. ಈ ಸಂಖ್ಯೆಯ ಅಳತೆಯನ್ನು ತಂತ್ರಜ್ಞಾನದ ಆಳದ ಅರಿವಿಲ್ಲದ ನಾವು ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ. ಈ ವರ್ಷ ಆಪಲ್ ಸಂಸ್ಥೆ ಬಿಡುಗಡೆ ಮಾಡಿದ ಎಂ2 ಅಲ್ಟ್ರಾ ಎಂಬ ಪ್ರೋಸೆಸರಿನಲ್ಲಿ ಬರೋಬ್ಬರಿ 134 ಬಿಲಿಯನ್ ಟ್ರಾನ್ಸಿಸ್ಟರುಗಳಿವೆ. ಅಮೇರಿಕಾದ ಅಪೋಲೋ11 ಗಗನನೌಕೆಯನ್ನು ಚಂದ್ರನ ಮೇಲಿಳಿಸಿದ ಕಂಪ್ಯೂಟರ್ ಮಾಡುತ್ತಿದ್ದ ಅಷ್ಟೂ ಕೆಲಸವನ್ನು, ಇವತ್ತಿನ ಪೀಳಿಗೆಯ ಮಕ್ಕಳು ತಮ್ಮ ಅಪ್ಪ-ಅಮ್ಮಂದಿರಿಗೆ “ಕಾಲ್ ಮಾಡಲಿಕ್ಕೆ, ಸಣ್ಣ ಪುಟ್ಟ ಬ್ರೌಸಿಂಗ್ ಮಾಡಲಿಕ್ಕೆ ಬಿಟ್ರೆ ಯೂಟ್ಯೂಬಲ್ಲಿ ಯಕ್ಷಗಾನ ನೋಡಲಿಕ್ಕಷ್ಟೇ ಕಣ್ರೀ, ಸಾಮಾನ್ಯದ್ದು ಸಾಕು” ಎಂದು ಕೊಡಿಸುವ ಒಪ್ಪೋ ವಿವೋಗಳ ಮೊದಲ ಹಂತದ ಒಂದೇ ಮೊಬೈಲ್ ಫೋನು ಮಾಡಬಲ್ಲದು. ಮೇಲೆ ಹೇಳಿದ ಸಫೈರ್ ರ್ಯಾಪಿಡ್ ಅಥವಾ ಆಪಲ್’ನ ಎಂ2 ಇವ್ಯಾವುವೂ ಯಾವುದೋ ಸೂಪರ್ ಕಂಪ್ಯೂಟರಿನಲ್ಲಿ ಅಡಗಿ ಕುಳಿತು ಅನೂಹ್ಯವಾದ ಕೆಲಸಮಾಡುತ್ತಿರುವ ಆಟಿಕೆಗಳಲ್ಲ. ಇವೆಲ್ಲವೂ ನಮ್ಮ ದೈನಂದಿನ ಕೆಲಸಗಳಿಗೆ ಬಳಕೆಯಾಗುವ ಕಂಪ್ಯೂಟರುಗಳಲ್ಲೇ ಅಡಕವಾಗಿವೆ ಎಂದರೆ ತಂತ್ರಜ್ಞಾನದ ಬೆಳವಣಿಗೆ ಎಷ್ಟಿದೆ ಎಂದು ನಿಮಗೊಂದು ಸಣ್ಣ ಅಂದಾಜು ಸಿಗಬಹುದು. ನಾವು ಮಾಡುತ್ತಿರುವ ಕೆಲಸಗಳು ಅಷ್ಟೂ ಜಟಿಲವಾಗುತ್ತಿವೆಯೋ, ಜನರಿಗೆ ನಿಜಕ್ಕೂ ಇಷ್ಟೆಲ್ಲಾ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆಯೋ ಇಲ್ಲವೋ, ಅಥವಾ ಕಂಪನಿಗಳೇ ನಮಗೆ ಹೆಚ್ಚೆಚ್ಚು ವೇಗದ ಕಂಪ್ಯೂಟರುಗಳ ಹುಚ್ಚುಹಿಡಿಸುತ್ತಿವೆಯೋ ಎಂಬುದೇ ಗೊತ್ತಾಗದಷ್ಟು ಗೋಜಲಿನ ನಡುವೆ ತಂತ್ರಜ್ಞಾನ ಬೆಳೆಯುತ್ತಲೇ ಇದೆ, ನಾಗಾಲೋಟದಲ್ಲಿ ಓಡುತ್ತಲೇ ಇದೆ. ಯಾವ ಕಂಪನಿಯೂ ಕೂಡಾ “ಸಾಕು ಸಾಕು ಇಷ್ಟು ಕಂಪ್ಯೂಟಿಂಗ್ ಶಕ್ತಿ ಸಾಕು ನಮಗೆ, ಇಶ್ಟು ಜಾಗದಲ್ಲಿ ಇಷ್ಟೇ ಟ್ರಾನ್ಸಿಸ್ಟರುಗಳನ್ನು ಕೂರಿಸೋಕೆ ಸಾಧ್ಯ, ಕ್ವಾಂಟಮ್ ಟನಲಿಂಗ್ ಕತ್ತು ಹಿಸುಕುತ್ತಿದೆ, ದಣಿವಿಲ್ಲದೇ ಇಷ್ಟೆಲ್ಲಾ ಕೆಲಸಮಾಡುವ ಈ ಪ್ರೋಸೆಸರುಗಳನ್ನು ತಂಪುಮಾಡುವ ಕೆಲಸ ಜಟಿಲವಾಗ್ತಿದೆ, ಬ್ಯಾಟರಿಗಳ ಕ್ಷಮತೆಯನ್ನೂ ಹೆಚ್ಚಿಸಬೇಕಾಗಿ ಬರ್ತಿದೆ, ಇದರಿಂದಾಗಿ ಜಾಗತಿಕ ಬಿಸಿಯೇರಿಕೆಗೂ ನಾವು ಕಾರಣವಾಗ್ತಿದ್ದೀವಿ, ಸಾಕು ನಿಲ್ಲಿಸೋಣ” ಅಂತಾ ಯಾರೂ ಹೆಜ್ಜೆ ಹಿಂದಿಡುತ್ತಲೇ ಇಲ್ಲ. ಇದೂ ಒಂದು ಮ್ಯಾಕ್ರೋ ಬೆಳವಣಿಗೆ, ಒಂದು ಕಂಪನಿ ಸುಮ್ಮನಾದರೆ, ಇನ್ನೈದು ಕಂಪನಿಗಳು ನಾವು ಮುಂದುವರೀತೀವಿ ಅಂತಾ ಹೊರಡುತ್ತಿವೆ.

 

 

ಮೂರ್’ನ ನಿಯಮವನ್ನು ನಾವು ಜೀವನದಲ್ಲಿ ಬೇರೆ ಬೇರೆ ರೂಪಗಳಲ್ಲೂ ಕಾಣಬಹುದು. ಕಂಪನಿಯೊಂದರ ಲಾಭಗಳಿಕೆ, ಜಾಲತಾಣವೊಂದರ ಸದಸ್ಯರ ಸಂಖ್ಯೆ, ಹಬಲ್ ಟೆಲಿಸ್ಕೋಪ್ ನಂತರದ ಕಾಲದಲ್ಲಿ ವಿಶ್ವದ ಬಗ್ಗೆ ನಮ್ಮ ಅರಿವಿನ ಬೆಳವಣಿಗೆ, ಸೌರಶಕ್ತಿಯ ಉತ್ಪಾದನೆ, ಹತ್ತೊಂಬತ್ತನೇ ಶತಮಾನದಿಂದೀಚೆಗೆ ಜಗತ್ತಿನ ಜನಸಂಖ್ಯೆ ಇವೆಲ್ಲವೂ ಕೂಡಾ ಸಮಯದೊಂದಿಗೆ ಘಾತೀಯ ಬೆಳವಣಿಗೆಯನ್ನೇ ಕಂಡಿವೆ. ಈ ವಿಚಾರಗಳ ಅಂಕಿಅಂಶ ಹಾಗೂ ನಮ್ಮ ಮಾನಸಿಕ ಹರವು ಪ್ರತೀ ಎರಡು ವರ್ಷಕ್ಕೊಮ್ಮೆ ದ್ವಿಗುಣಗೊಳ್ಳುತ್ತಿದೆ. ದೇಶಗಳ ಆರ್ಥಿಕ ಬೆಳವಣಿಗೆಯೂ ಈ ಮ್ಯಾಕ್ರೋ ಬೆಳವಣಿಗೆಗಳಲ್ಲೊಂದು. ಇದಕ್ಕೆ ಸರ್ಕಾರದ ಕೆಲ ಅಂಶಗಳು ಹೆಚ್ಚಿನ ಸಹಾಯ ಒದಗಿಸಬಲ್ಲವಾದರೂ, ಸರ್ಕಾರವೊಂದೇ ಈ ಬೆಳವಣಿಗೆಯನ್ನು ಮುಂದೆ ನಡೆಸಲಾರದು. ಈ ಬೆಳವಣಿಗೆಗೆ ಬೆನ್ನೆಲುಬಾಗಿ ನೀತಿಗಳನ್ನು ರೂಪಿಸಿ, ಅದಕ್ಕೆ ಇಂಬುಕೊಡುವಂತೆ ಮೂಲಭೂತ ಸೌಕರ್ಯಗಳನ್ನಷ್ಟೇ ಸರ್ಕಾರ ನಿರ್ಮಿಸಬಲ್ಲದು. ಇಲ್ಲಿಂದ ಮುಂದೆ ಇವುಗಳ ಉಪಯೋಗಪಡೆದು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವುದು ಸಂಪೂರ್ಣವಾಗಿ ದೇಶದ ನಾಗರೀಕರು, ಉದ್ಯಮಿಗಳು ಹಾಗೂ ಹೂಡಿಕೆದಾರರ ಕೆಲಸ. ಸಶಕ್ತ ಆರ್ಥಿಕತೆಯಿರುವ ದೇಶದಲ್ಲಿ, ಇದರಲ್ಲಿ ಒಂದಿಷ್ಟು ಜನ ಉದಾಸೀನ ತೋರಿದರೂ, ಉಳಿದವರು ಇದನ್ನು ಮುಂದುವರಿಸಿಯೇ ತೀರುತ್ತಾರೆ. ಶೇರ್ ಮಾರುಕಟ್ಟೆಯಲ್ಲಿ Bearಗಳು ಎಷ್ಟೇ ವಾಸ್ತವಿಕ ಅಂಕಿಅಂಶಗಳನ್ನೂ, ವ್ಯವಹಾರಿಕವಾದ ನೈಜ ಕಾರಣಗಳನ್ನು ಕೊಟ್ಟು ಮಾರುಕಟ್ಟೆಯನ್ನು ನಿಧಾನವಾಗಿ ಗಂಭೀರತೆಯಿಂದ ಮುಂದುವರೆಸಲು ನೋಡಿದರೂ, Bullಗಳ ಆಶಾವಾದವೇ ಕೊನೆಗೆ ಮೇಲುಗೈ ಪಡೆಯುವುದು. ಈ ಮೇಲುಗೈ ಆಟವೇ 2000ನೇ ಇಸವಿಯಲ್ಲಿ 6000ದಲ್ಲಿದ್ದ ಮುಂಬೈ ಸ್ಟಾಕ್ ಎಕ್ಸ್ಚೇಂಜ್ ಅನ್ನು ಇವತ್ತು 64,000 ಸಾವಿರದ ಆಸುಪಾಸಿನಲ್ಲಿ ನಿಲ್ಲಿಸಿರುವುದು. ನಿಜಾರ್ಥದಲ್ಲಿ ದೇಶದ ಸಂಪತ್ತನ್ನೂ, ಆರ್ಥಿಕ ಶಕ್ತಿಯನ್ನೂ ವೃದ್ಧಿಪಡಿಸಬಲ್ಲ ಈ ಒಂದು ಬೆಳವಣಿಗೆ ಎಲ್ಲರಿಗೂ ಹಿತವಾದದ್ದು ಕೂಡಾ.

 

ಭಾರತದ ಆರ್ಥಿಕತೆಯನ್ನು ಉದಾಹರಣೆಯಾಗಿ ನೋಡಿದರೆ, ನಮ್ಮ ಪ್ರಧಾನಿಯವರು 2019ರಲ್ಲಿ “2025ರೊಳಗೆ ನಾನು ಭಾರತವನ್ನು, 2.6 ಟ್ರಿಲಿಯನ್ನಿನಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ನೋಡಲು ಬಯಸುತ್ತೇನೆ” ಎಂದಾಗ ಬಹಳಷ್ಟು ಜನರು ನಕ್ಕಿದ್ದರು. ನಮ್ಮ ವಿರೋಧಪಕ್ಷದ ನಾಯಕರುಗಳಂತೂ ಕುಹಕವಾಡಿ, ಕರೋನಾ ನಂತರದ ಕಾಲದಲ್ಲಿ ಇದು ಅಸಾಧ್ಯದ ಮಾತು ಎಂದಿದ್ದವರೇ, ದೇಶದಲ್ಲಿ ಪ್ರತೀವರ್ಷ ಹೆಚ್ಚುತ್ತಿರುವ ತೆರಿಗೆ ಸಂಗ್ರಹ, ಜಿಡಿಪಿಯ ವೃದ್ಧಿ, ಕೈಗಾರಿಕಾ ಬೆಳವಣಿಗೆ, ರಸ್ತೆಗಳ ನಿರ್ಮಾಣದ ವೇಗ, ವಾಹನಗಳ ಮಾರಾಟಗಳ ಅಂಕಿಅಂಶಗಳನ್ನು ನೋಡಿದಮೇಲೆ ನಿಧಾನಕ್ಕೆ ವರಸೆ ಬದಲಿಸಿ “ಅಯ್ಯೋ ಅದರಲ್ಲೇನಿದೆ, ಇದೆಲ್ಲಾ ಸಾಮಾನ್ಯವಾಗಿ ನಡೆಯುನ ಬೆಳವಣಿಗೆಗಳು. ಮೋದಿ ಏನೇ ಮಾಡದೇ ಇದ್ದರೂ, ಭಾರತ 5 ಟ್ರಿಲಿಯನ್ ಆರ್ಥಿಕತೆ ಆಗೇ ಆಗುತ್ತದೆ” ಎಂದಿದ್ದರು. ಆದರೆ ಇವರುಗಳು ಮರೆಯುವ ವಿಚಾರವೇನೆಂದರೆ ಭಾರತ ತನ್ನ ಮೊತ್ತಮೊದಲ ಟ್ರಿಲಿಯನ್ ಡಾಲರ್ ಗೆರೆ ದಾಟಿದ್ಯಾವಾಗ ಎನ್ನುವುದನ್ನು. ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷದ ನಂತರ 2007ರಲ್ಲಿ, ಅಂದರೆ ನಾವು ಜಾಗತೀಕರಣಕ್ಕೆ ತೆರೆದುಕೊಂಡ ಪೂರ್ತಿ 16 ವರ್ಷದ ನಂತರ. ನಮ್ಮ ದೇಶ ಮತ್ತದರ ನಾಯಕರು ಆರ್ಥಿಕ ಪ್ರಗತಿಯನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಅಧಿಕಾರದಲ್ಲಿರುವುದು, ತಮ್ಮ ಕುಟುಂಬದ ಕುಡಿಗಳನ್ನು ಗಟ್ಟಿಯಾಗಿಸಿಕೊಳ್ಳುವುದು, ತಮ್ಮ ಜಾತಿ ಸಮುದಾಯಗಳನ್ನು ಸಬಲೀಕರಿಸಿಕೊಳ್ಳುವುದರಲ್ಲೇ ನಾವು 60 ವರ್ಷ ಕಳೆದೆವು. 1995-96ರಲ್ಲಿ ಉದ್ದೇಶಪೂರ್ವಕವಾಗಿಯಲ್ಲದಿದ್ದರೂ, ಅನಿವಾರ್ಯವಾಗಿ ಜಾಗತೀಕರಣಕ್ಕೆ ತೆರೆದುಕೊಂಡ ಮೇಲೇ ಭಾರತಕ್ಕೆ ಅರಿವಾಗಿದ್ದು “ಓಹೋ! ನನಗೂ ಈ ಶಕ್ತಿಯಿದೆ ಹಾಗೂ ನಾವೂ ಇದರಮೇಲೆ ಗಮನ ಹರಿಸಬೇಕು ಎಂದು”. ನಮ್ಮ ಆರ್ಥಿಕತೆ ಎರಡು ಟ್ರಿಲಿಯನ್ ಡಾಲರ್ ಗೆರೆದಾಟಿದ್ದು 2015ರಲ್ಲಿ, ಅಂದರೆ ಮೊದಲ ಟ್ರಿಲಿಯನ್ ದಾಟಿದ ಎಂಟು ವರ್ಷದಲ್ಲಿ. ಇದಾಗಿ ಏಳುವರ್ಷದಲ್ಲಿ ಅಂದರೆ 2022ರಲ್ಲಿ ನಾವು ಮೂರು ಟ್ರಿಲಿಯನ್ನಿನ ರೇಸ್ ಗೆದ್ದಿವು. ಇದೇ ಲೆಕ್ಕದಲ್ಲಿ ನೋಡಿದರೆ, ಹಾಗೂ ಭಾರತದ ಓಟವನ್ನು ಗಮನಿಸಿದರೆ ಮುಂದಿನ ಎಂಟುವರ್ಷದಲ್ಲಿ ನಮಗೆ ಆರು ಟ್ರಿಲಿಯನ್ ದಾಟುವುದು ಯಾವ ಕಷ್ಟದ ಮಾತೂ ಅಲ್ಲ. 2030ರೊಳಗೆ ನಮ್ಮನ್ನು ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕಶಕ್ತಿಯಾಗುವುದನ್ನು ತಡೆಯುವುದನ್ನು ಸಧ್ಯಕ್ಕಂತೂ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಬೆಳವಣಿಗೆ ಇದೇರೀತಿ ಮುಂದುವರೆದರೆ 2030-40ರ ನಡುವೆ ನಮ್ಮ ಆರ್ಥಿಕ ಶಕ್ತಿಯನ್ನು ಪ್ರತೀ ಎರಡು ವರ್ಷಕ್ಕೊಮ್ಮೆ ಒಂದೊಂದು ಟ್ರಿಲಿಯನ್ ಡಾಲರ್ ಹೆಚ್ಚಿಸಬಹುದು. ಭಾರತದ ಆರ್ಥಿಕತೆ ಸಧ್ಯಕ್ಕೆ ಮೂರ್’ನ ನಿಯಮವನ್ನು ಜೀವಂತವಾಗಿ ನಮಗೆ ದೃಷ್ಟೀಕರಿಸಿ ಕೊಡುತ್ತಿದೆ.

Trillion Dollar Race

ಆದರೆ, ಮೂರ್’ನ ನಿಯಮಕ್ಕೂ ಕೆಲ ಅಡಿಪಾಯಗಳ ಅಗತ್ಯವಿದ್ದೇ ಇದೆ. ಪ್ರೋಸೆಸರಿನಲ್ಲಿ ಟ್ರಾನ್ಸಿಸ್ಟರುಗಳನ್ನು ಸುಮ್ಮನೇ ತುರುಕಲಾಗುವುದಿಲ್ಲ. ವಿದ್ಯುನ್ಮಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಸರ್ಕ್ಯೂಡ್ ಬೋರ್ಡುಗಳ ವಿನ್ಯಾಸ, ಮಾಹಿತಿ ಪ್ರಸರಣಾ ವೇಗ ಹಾಗೂ ಸಿಲಿಕಾನ್ ಸಂಸ್ಕರಣಾ ಕ್ಷೇತ್ರದಲ್ಲೂ ತಾಂತ್ರಿಕ ಬೆಳವಣಿಗೆಗಳಾಗಬೇಕು. ಹಾಗೆಯೇ ಆರ್ಥಿಕತೆಯೊಂದು ಬೆಳೆಯಬೇಕಾದರೆ ಸದೃಡ ಹಾಗೂ ದೀರ್ಘಕಾಲ ನಿಲ್ಲಬಲ್ಲ ಸರ್ಕಾರವಿರಬೇಕು, ಹೂಡಿಕೆದಾರರಿಗೆ ವಿಶ್ವಾಸ ಹುಟ್ಟಿಸುವ ಶಕ್ತಿಶಾಲಿ ನಿಯಮಾವಳಿಗಳಿರಬೇಕು, ಉತ್ಪನ್ನ ಮತ್ತು ಸೇವೆಗಳು ಕ್ಷಿಪ್ರವಾಗಿ ತಲುಪಲು ಗಟ್ಟಿಯಾದ ಮೂಲಭೂತ ಸೌಕರ್ಯಗಳಿರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ನಂಬುವ, ಜೊತೆಗೆ ಕೈಜೋಡಿಸುವ ಬೇರೆ ಆರ್ಥಿಕತೆಗಳಿರಬೇಕು. ಮೋದಿ ದೇಶಕ್ಕೆ ಏನು ಮಾಡಿದ್ದಾನೆ ಎಂದು ಕೇಳುವ ಮುನ್ನ ಹಿಂದಿನ ಸಾಲನ್ನು ಇನ್ನೊಮ್ಮೆ ಓದಿ, ಅದಕ್ಕೆ ಸಮಾನಾಂತರವಾಗಿ ದೇಶದಲ್ಲಿ ಆಗಿರುವ ಕೆಲಸಗಳನ್ನು ನೋಡಿ. ಅಗತ್ಯವಿದ್ದವರಿಗೆ ಸಹಾಯಹಸ್ತ ನೀಡಿ, ಅಗತ್ಯಬಿದ್ದಲ್ಲಿ ಎದೆತಟ್ಟಿ ಎದುರಾಳಿಯ ಕಣ್ಣಲ್ಲಿ ಕಣ್ಣಿಟ್ಟು ನಿಂತು, ಉಳಿದೆಲ್ಲೆಡೆ ತೆರೆದ ತೋಳುಗಳ ಆಲಿಂಗನ ಕೊಟ್ಟು ಭಾರತವನ್ನು ನಂಬಿಕಸ್ಥ ದೇಶವಾಗಿ ಬ್ರಾಂಡ್ ಆಗಿ ಮಾಡಿರುವುದು ಅದೂ ಕೇವಲ ಹತ್ತುವರ್ಷದಲ್ಲಿ, ಒಬ್ಬ ಕರ್ಮಯೋಗಿಗಲ್ಲದೇ ಸಾಮಾನ್ಯ ಮನುಷ್ಯರಿಗೆ ಸಾಧಿಸಲು ಅಸಾಧ್ಯ.

 

ಈ ಬಾರಿಯ ಮಹೂರ್ತದ ಟ್ರೇಡಿಂಗ್ ಚೆನ್ನಾಗಿಯೇ ಆಗಿದೆ. 2030ರ ಹೊತ್ತಿಗೆ ಇದೇ ಸೆನ್ಸೆಕ್ಸ್ ಒಂದೂವರೆ ಲಕ್ಷಕ್ಕೆ ಮುಟ್ಟಲಿ ಎಂದು ಆಶಿಸುತ್ತಾ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

0 comments on “ಮೂರ್’ನ ನಿಯಮ ಹಾಗೂ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗುವತ್ತ ಭಾರತದ ಪಯಣ

Leave a Reply

Your email address will not be published. Required fields are marked *