Tuesday, 27 February, 2024

ಸಂತೋಷವನ್ನೆಲ್ಲಾ ಫಲಿತಾಂಶಕ್ಕಾಗಿಯೇ ಮೀಸಲಿಡಬೇಡಿ. ಸಂತೋಷವಾಗಿರಿ ಅಷ್ಟೇ

Share post

ಕ್ರಿಕೆಟ್ ಜ್ವರ ಇನ್ನೂ ಇಳಿದಿಲ್ಲ. ನಿರುತ್ಸಾಹದ ಅಲೆಗಳು ಇನ್ನೂ ಸಪಾಟಾಗಿಲ್ಲ. ಸ್ವಘೋಷಿತ ತಜ್ಞರ ವಿಮರ್ಶೆಗಳು, ವಿಮರ್ಶೆಯ ಹೆಸರಿನಲ್ಲಿ ಕೂರಂಬುಗಳು ಇನ್ನೂ ತಣ್ಣಗಾಗಿಲ್ಲ. ಸೋಲಿನ ಕಾರಣದ ಹುಡುಕಾಟ ನಿಂತಿಲ್ಲ. ತಂಡಕ್ಕೆ, ನಾಯಕನಿಗೆ, ಆ ಬೌಲರನಿಗೆ, ಈ ಬ್ಯಾಟ್ಸ್ಮನ್ನನಿಗೆ, ತರಬೇತುದಾರನಿಗೆ, ಆಯ್ಕೆಸಮಿತಿಗೆ, ಎದುರಾಳಿ ತಂಡಕ್ಕೆ, ಪಾಕಿಸ್ಥಾನಕ್ಕೆ, ಮೋದಿಗೆ ಇನ್ನೂ ಬೈದು ಮುಗಿದಿಲ್ಲ. ಹಾಗಾಗಿ ಇವತ್ತಿನ ಬರಹದ ಓದುಗರು ಕಡಿಮೆಯೇ ಇರಬಹುದು. ಆದರೆ ಜೀವನ ನಿಲ್ಲುವುದಿಲ್ಲ, ನಿಲ್ಲಲೂಬಾರದು ನೋಡಿ. ಬನ್ನಿ ಒಂದು ಕತೆ ಕೇಳೋಣ.

 

ಗುಡ್ಡವೊಂದರ ಮೇಲೆ ಕುಟುಂಬವೊಂದು ವಾಸವಾಗಿತ್ತು. ಪ್ರತಿದಿನ ಸೂರ್ಯೋದಯವಾದ ತಕ್ಷಣ, ಮನೆಯ ಯಜಮಾನ ತನ್ನ ಹೆಗಲ ಮೇಲೆ ಉದ್ದನೆಯ ಕೋಲೊಂದರ ಎರಡೂ ಬದಿಗೆ ಎರಡೆರಡು ಕೊಡಪಾನಗಳನ್ನು ನೇತು ಹಾಕಿಕೊಂಡು ಗುಡ್ಡದ ತಳದಲ್ಲಿದ್ದ ನೀರಿನ ಝರಿಯಿಂದ ನೀರನ್ನು ತರಲು ಹೋಗುತ್ತಿದ್ದ. ಪ್ರತಿದಿನವೂ ಬೆಳಗೆದ್ದು ನಾಲ್ಕುಬಾರಿ ನೀರುತಂದು ಮನೆಯಲ್ಲಿದ್ದ ಹಂಡೆಯೊಂದಕ್ಕೆ ತುಂಬಿಸಿಡೋದು ಅವನ ಅಭ್ಯಾಸವಾಗಿತ್ತು. ಅವನ ನಾಲ್ಕು ಕೊಡಪಾನಗಳಲ್ಲೊಂದರಲ್ಲಿ ಕೆಲ ಬಿರುಕುಗಳಿದ್ದವು. ಹಾಗಾಗಿ, ಪ್ರತಿಬಾರಿ ಅದನ್ನು ಪೂರ್ತಿಯಾಗಿ ತುಂಬಿಸಿಕೊಂಡು ಹೊರಟರೂ ಮನೆ ತಲುಪುವಷ್ಟರಲ್ಲಿ ಅದರ ಅರ್ಧದಷ್ಟು ನೀರು ಮಾತ್ರ ಉಳಿಯುತ್ತಿತ್ತು.

ಅಪ್ಪನ ಈ ಅಭ್ಯಾಸವನ್ನು ಮಗ ಚಿಕ್ಕಂದಿನಿಂದಲೂ ನೋಡುತ್ತಲೇ ಇದ್ದ. ವರ್ಷಗಳು ಕಳೆದಂತೆ, ವಯಸ್ಸಾದಂತೆ ವಯೋಸಹಜ ದಾರ್ಷ್ಟವೂ, ಅಪ್ಪನ ಬುದ್ಧಿವಂತಿಕೆಯ ಅನುಮಾನವೂ ಸೇರಿ ಒಂದು ದಿನ ಅವನ ತಲೆಯಲ್ಲಿ ಪ್ರಶ್ನೆಯೊಂದು ಮೂಡಿತು. “ಅಪ್ಪಾ ನಿನ್ನನ್ನ ವರ್ಷಗಳಿಂದ ನೊಡ್ತಿದ್ದೀನಿ. ಈ ಬಿರುಕು ಬಿಟ್ಟ ಕೊಡಪಾನವನ್ನ ಇನ್ನೂ ಯಾಕೆ ಹೊರ್ತಿದ್ದೀಯ? ನೀನೇ ಹೇಳುತ್ತಿರ್ತೀಯಲ್ಲ, ಯಾವುದಕ್ಕೆ ತನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಯೋಗ್ಯತೆಯಿಲ್ಲವೋ, ಯಾರು ತನಗೆ ಕೊಟ್ಟ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಅಸಮರ್ಥರೋ ಅವರನ್ನು ಬದಲಾಯಿಸಿ ಮುಂದುವರಿಯಬೇಕು ಅಂತಾ. ಈ ಕೊಡಪಾನವೂ ಅಂತಹುದ್ದೇ ಒಂದು ಅಪೂರ್ಣತೆ, ಅಸಮರ್ಥತೆ ಮತ್ತು ಅನರ್ಹತೆಗಳ ಆಗರ. ಇದರಿಂದ ನಿನಗೇ ಹೆಚ್ಚಿನ ಕೆಲಸ. ತುಂಬಿಸಿ ತರುವ ನಾಲ್ಕು ಕೊಡಪಾನ ನೀರು, ಮನೆಗೆ ಬರುವಾಗ ಮೂರೂವರೆಯಾಗಿರ್ತದೆ. ಯಾಕಿದನ್ನು ಬಿಸಾಕಿ ಬೇರೆ ತಗೊಳ್ಳಲ್ಲ ನೀನು?” ಎಂದು ಕೇಳಿದ.

 

ಇದನ್ನು ಸಮಾಧಾನದಿಂದ ಕೇಳಿಸಿಕೊಂಡ ಅಪ್ಪನಿಗೆ ನಾನೂ ಹುಡುಗನಾಗಿದ್ದಾಗ ನನ್ನಪ್ಪನಿಗೆ ಹೀಗೇ ಜೋರಾಗಿ ಪ್ರಶ್ನೆ ಹಾಕ್ತಿದ್ದೆ ಅಂತಾ ನೆನಪಾಯ್ತು. “ಮಗನೇ ಆ ಕೊಡಪಾನದಲ್ಲಿ ಬಿರುಕಿದೆ ಅಂತಾ ನನಗೊತ್ತು. ಅದರಲ್ಲಿ ಅರ್ಧ ನೀರು ಸೋರಿಹೋಗ್ತದೆ ಅಂತಲೂ ಗೊತ್ತು. ಬೇರೆ ಕೊಡಪಾನಕ್ಕೆ ಹೋಲಿಸಿದರೆ ಇದನ್ನು ಬಿಸಾಕಲೇ ಬೇಕು ಅಂತಲೂ ಗೊತ್ತು” ಎನ್ನುತ್ತಾ ಕೋಲು ಮತ್ತು ಕೊಡಪಾನ ಕೆಳಗಿಟ್ಟ ಅಪ್ಪ, ನಡೆದು ಬಂದ ದಾರಿಯನ್ನೊಮ್ಮೆ ನೋಡಿ, “ಮಗಾ ನಿನಗೇನು ಕಾಣುತ್ತೆ ಈ ದಾರಿಯಲ್ಲಿ?” ಅಂತಾ ಕೇಳಿದ. “ಇಲ್ಲಿ ಕಾಣಲಿಕ್ಕೇನಿದೆ, ನೇರಕ್ಕೊಂದು ದಾರಿ, ಕೆಳಗೆ ಹಳ್ಳದವರೆಗೆ, ಎರಡೂ ಕಡೆ ಮರಗಳು. ಮನೆಯ ಆಚೀಚೆ ದೂರದೂರದವರೆಗೂ ಹೆಚ್ಚಿನ ಜಾಗ ಹುಲ್ಲುಗಾವಲೇ ಆಗಿದ್ದರೂ, ಹಳ್ಳದಿಂದ ನಮ್ಮ ಮನೆಗೆ ಬರುವ ಈ ದಾರಿಯಲ್ಲಿ ಮಾತ್ರ ಮರಗಳಿವೆ. ವರ್ಷಕ್ಕೊಮ್ಮೆ ನೀನು ನನ್ನ ಕೈಲಿ ಈ ಮರಗಳ ರೆಂಬೆಕೊಂಬೆಯನ್ನೆಲ್ಲಾ ಅಲ್ಲಲ್ಲಿ ಕಡಿಸಿ ಸರಿ ಮಾಡಿಸ್ತೀಯ. ಮರಗಳ ಬುಡದಲ್ಲೊಂದಷ್ಟು ಚಂದದ ಹೂಗಿಡಗಳು. ಇಷ್ಟೇ ಕಾಣ್ತಿರೋದು. ನಂಗೆ ನಮ್ಮನೆಗೆ ಬರೋ ಈ ದಾರಿ ಇಷ್ಟ. ಈ ಮರಗಳ ತಂಪು ನೆರಳು ಆ ಬಣ್ಣಬಣ್ಣದ ಹೂಗಳು ಎಷ್ಟೂ ಚಂದ” ಎಂದ ಮಗ.

 

“ಸರಿಯಾಗಿ ಹೇಳಿದ್ದೀ. ಅಕ್ಕಪಕ್ಕವೆಲ್ಲವೂ ಹುಲ್ಲುಗಾವಲೇ ಆಗಿದ್ದರೂ ನಮ್ಮನೆಯ ದಾರಿಯಲ್ಲಿ ಮಾತ್ರ ಮರಗಳು. ಈ ಮರಗಳು ಇಲ್ಲಿರೋದಕ್ಕೆ ಈ ಒಡಕು ಕೊಡಪಾನವೇ ಕಾರಣ” ಎಂದ ಅಪ್ಪನ ಮಾತು, ಮಗನಿಗೆ ಅರ್ಥವಾಗಲಿಲ್ಲ. “ಅದು ಹೇಗಪ್ಪಾ? ಕೊಡಪಾನಕ್ಕೂ ಮರಕ್ಕೂ ಏನು ಸಂಬಂಧ? ಒಂದು ದಿನವೂ ನೀನು ನಿಂತು ಈ ಮರಗಳಿಗೆ ನೀರುಣಿಸಿದ್ದನ್ನ ನಾನು ನೋಡಲಿಲ್ಲ. ಆ ಸಸಿಗಳನ್ನ ನೆಟ್ಟಿದ್ದಷ್ಟೇ. ಅದರಲ್ಲೂ ಹೆಚ್ಚಿನದನ್ನ ನಾನು ಮತ್ತೆ ಅಮ್ಮ ನೆಟ್ಟಿದ್ದು. ವರ್ಷಕ್ಕೊಮ್ಮೆ ರೆಂಬೆ ಕಡಿಯೋದು ನಾನು. ಸುಮ್ಮನೇ ಆ ಕೊಡಪಾನಕ್ಕೆ ಶಭಾಷ್ ಹೇಳಬೇಡಿ, ಹೇಳುವುದದರೆ ನನಗೆ ಹೇಳಿ” ಅಂದ. “ಹೌದು ಮಗಾ ನೆಟ್ಟಿದ್ದು ನೀನು, ರೆಂಬೆ ಕೊಂಬೆ ಸರಿಮಾಡಿದ್ದು ನೀನು, ಆದರೆ ದಿನಾಲೂ ಅದಕ್ಕೆ ನೀರುಣಿಸಿದ್ದು, ಇದೇ ಒಡಕು ಕೊಡಪಾನ. ನಾನು ನೀರು ತಗಂಡು ಮೇಲೆ ಬರುವಾಗ ಒಂದು ಸಲ ಈ ಕಡೆ, ಇನ್ನೊಂದು ಆ ಕಡೆ ಈ ಒಡಕು ಕೊಡಪಾನ ಇರುವಂತೆ ಹೆಗಲ ಮೇಲಿಟ್ಟುಕೊಂಡು ಬರ್ತಿದ್ದೆ. ಇದೇ ಅಪರಿಪೂರ್ಣ, ಪೂರ್ತಿ ನೀರು ಹೊರಲಿಕ್ಕೆ ಅಸಮರ್ಥ, ಅನರ್ಹವಾದ ಕೊಡಪಾನದ ಬಿರುಕುಗಳೇ ಹನಿಹನಿಯಾಗಿ ಆ ಸಸಿಗಳಿಗೆ ನೀರುಣಿಸಿದ್ದು. ಗಿಡದ ಬೇರುಗಳೆಲ್ಲಾ ಅಲ್ಲಾಡುವಂತೆ ಧೋ ಎಂದು ಸುರಿಯಲಿಲ್ಲ, ಗಿಡಕ್ಕೆ ಸಾಕೇ ಆಗದಂತೆ ಅರ್ಧ ಅಥವಾ ಕಾಲು ಹನಿಯನ್ನಷ್ಟೇ ಕೊಡಲಿಲ್ಲ. ಏಕ್ ಧಂ ಸರಿಯಾದ ರೀತಿಯಲ್ಲಿ ಇಷ್ಟಿಷ್ಟೇ ನೀರನ್ನ ಹನಿಹನಿಯಾಗಿ ಕೊಟ್ಟಿದ್ದು ಇದೇ ಕೊಡಪಾನದ ಚಿಕ್ಕ ಬಿರುಕುಗಳು. ಒಮ್ಮೆ ಮರಗಳು ಸರಿಯಾಗಿ ಬೆಳೆದ ಮೇಲೆ, ಅವುಗಳ ಬುಡದಲ್ಲಿ ಹೂಗಿಡಗಳನ್ನ ನೆಟ್ಟೆ. ಅವಕ್ಕೂ ನೀರುಣಿಸಿ ಹೂಗಳು ಚಿಗುರುವಂತೆ ಮಾಡಿ, ಇಡೀ ದಾರಿಯನ್ನ ಚಂದಾಗಿಸಿದ್ದು ಇದೇ ಒಡಕು ಕೊಡಪಾನ ಕಣಪ್ಪಾ” ಎಂದ ಅಪ್ಪ.

ಮೊದಲು ಗೊಂದಲವಿದ್ದ ಮುಖದಲ್ಲಿ ಅಪ್ಪನ ಮಾತು ಅರ್ಥವಾದಂತೆ ನಿಧಾನವಾಗಿ ಆಶ್ಚರ್ಯ ಮೂಡಿತು. ಬಿರುಕು ಇರುವುದು ತನಗೇ ಗೊತ್ತಿಲ್ಲದಂತೆ ದಾರಿಯುದ್ದಕ್ಕೂ ಪ್ರತಿದಿನ ನೀರು ಚಿಮುಕಿಸಿದ ಕೊಡಪಾನದಲ್ಲಲ್ಲ, ಬದಲಿಗೆ ಬಿರುಕನ್ನು ಅಸಮರ್ಥತೆಯೆಂದುಕೊಂಡ ಮತ್ತು ಅದನ್ನು ಬೇರೆ ಕೊಡಪಾನದೊಂದಿಗೆ ಹೋಲಿಸಿದ ನನ್ನ ಯೋಚನೆಯ ರೀತಿಯಲ್ಲಿ ಎಂದವನಿಗೆ ಅರಿವಾಗಿತ್ತು. ಒಂದು ಕಾಲದಲ್ಲಿ ಬಂಜರು ಮತ್ತು ಜೀವರಹಿತವಾಗಿದ್ದ ದಾರಿಯ ಇಂದಿನ ಸೌಂದರ್ಯಕ್ಕೆ ಇದೇ ಕೊಡಪಾನದ ಬಿರುಕು ಕಾರಣ ಎಂದರಿವಾದೊಡನೆಯೇ ಅವನ ಜೀವನದ ಹಲವಾರು ಅನಿಸಿಕೆಗಳೂ, ನಿರ್ಧಾರಗಳೂ ಅಲ್ಲಾಡಲು ಪ್ರಾರಂಭವಾಗಿತ್ತು.

 

“ಈಗ ಹೇಳು ಮಗಾ ಇದು ‘ಒಡೆದ ಕೊಡಪಾನ’ವೋ ಅಥವಾ ‘ನೀರುಣಿಸುವ ಕೊಡಪಾನ’ವೋ? ಇದೇ ನೀತಿ ಜೀವನಕ್ಕೂ ಅನ್ವಯವಾಗ್ತದೆ. ನಮ್ಮ ಅನುಭವ ಬದಲಾಗಬೇಕಾದರೆ ನಮ್ಮ ಕಥೆಗಳೂ, ನಾವದನ್ನು ನೋಡುವ ಆಸ್ವಾದಿಸುವ ಹಾಗೂ ಹೇಳುವ ರೀತಿಗಳೂ ಬದಲಾಗಬೇಕು ಮಗಾ. ಎಲ್ಲದಕ್ಕೂ ಒಂದೇ ನಿಯಮವನ್ನ ಅನ್ವಯಿಸೋದು, ಎಲ್ಲವನ್ನೂ ಒಂದೇ ಅನುಭೂತಿಯಡಿಯಲ್ಲಿ ತೂಗೋದು, ಎಲ್ಲದೂ ಹೀಗೆಯೇ ಅಂತಾ ಷರಾ ಬರೆಯೋದು ಕಡಿಮೆಯಿದ್ದಷ್ಟೂ ಜೀವನ ಇಷ್ಟಿಷ್ಟೇ ಹೆಚ್ಚು ತೆರೆದುಕೊಳ್ತದೆ. ಜಗತ್ತು ಅಷ್ಟಷ್ಟೇ ಹೆಚ್ಚು ಅರ್ಥವಾಗ್ತದೆ” ಅಂತಾ ಅಪ್ಪ ಹೇಳಿದಾಗ, ಮಗ ಒಡೆದ ಕೊಡಪಾನವನ್ನು ಅಪ್ಪಿಕೊಂಡಿದ್ದ.

 

ಈ ಕತೆಯನ್ನ ಕ್ರಿಕೆಟಿಗೆ ಹೋಲಿಸುವ ಅಗತ್ಯವಿಲ್ಲವಾದರೂ, ಅಲ್ಲಲ್ಲಿ ಕೆಲ ಸಾಮ್ಯತೆಗಳನ್ನು ಕಾಣಬಹುದು. ಕಳೆದ ನಲವತ್ತೈದು ದಿನಗಳಿಂದೀಚೆಗೆ ಜನರೆಂಬ ತಜ್ಞರ ವಿಶ್ಲೇಷಣೆಗಳು, ಅವರ ಪ್ರೀತಿಗಳು, ಅವರ ಸ್ವ-ಶಭಾಶ್’ಗಳೂ, ಅವರವರ ನೇವರಿಕೆಗಳು ಎಲ್ಲವೂ ಒಂದೇ ದಿನದಲ್ಲಿ ಜರ್ರೆಂದು ಇಳಿದು, ಅದೇ ತಂಡದ ಬಗ್ಗೆ ಕಟುವಾದ ನಿಂದನೆಗೆ ಇಳಿದರು. ನಾನು ನೋಡಿದ ಈ ರಾತ್ರೋರಾತ್ರಿ ತಜ್ಞರಲ್ಲಿ ಬಹಳಷ್ಟು ಜನರ ವಿಮರ್ಶೆ ಆಟದ ಬಗ್ಗೆ, ಯಾವ ಆಟಗಾರ ಏನನ್ನು ಸರಿಯಾಗಿ ಮಾಡಿದ ಅಥವಾ ಮಾಡಲಿಲ್ಲ ಎಂಬುದರ ಬಗ್ಗೆಯಿರಲಿಲ್ಲ. ಬದಲಿಗೆ ನಾನು ಬೆಂಬಲಿಸುವವ, ನನ್ನಿಷ್ಟದವ ಇವನು, ಹಾಗಾಗಿಯೇ ನನ್ನ ಬೆಂಬಲ ಇವನಿಗೆ ಎಂಬೆಲ್ಲ ವಿಮರ್ಶೆಗಳೂ ತಮಗೆ ಜಗತ್ತಿನಿಂದ ಬೇಕಾದ ಸ್ವಯಂ ದೃಢೀಕರಣ (self-validation)ದ ಕೂಗೇ ಆಗಿತ್ತು. ನಾಯಕನನ್ನೂ, ಒಂದಷ್ಟು ಪಂದ್ಯಗಳಲ್ಲಿ ಸ್ಥಿರಪ್ರದರ್ಶನ ತೋರಿದ ಆಟಗಾರರನ್ನೂ, ಎಲ್ಲದರಲ್ಲೂ ಚೆನ್ನಾಗಿ ಆಡದಿದ್ದರೂ ಕೆಲವೊಂದು ಪಂದ್ಯಗಳಲ್ಲಿ ಅಚಾನಕ್ಕಾಗಿ ಚೆನ್ನಾಗಿ ಆಡಿದವನನ್ನೂ, ಇಡೀ ಪಂದ್ಯಾವಳಿಯಲ್ಲಿ ಚೆನ್ನಾಗಿ ಆಡದವನನ್ನೂ, ಆಡದೇ ಹೊರಬಿದ್ದವನನ್ನೂ ಬಿಡದೇ ಎಲ್ಲರನ್ನೂ ಸಮಾನವಾಗಿ ದೂಷಿಸಲಾಯ್ತು. ಶನಿವಾರದವರೆಗಿದ್ದ ಪ್ರೀತಿ ಭಾನುವಾರಕ್ಕೆ ಇಲ್ಲವಾಗಿತ್ತು. ಮೊನ್ನೆ ಹೂವಾಗಿದ್ದ ಹೃದಯ ನಿನ್ನೆಗೆ ಕಲ್ಲಾಗಿತ್ತು.

 

ಯಾಕೆ ನಾವು ಹೀಗಾಗಿಬಿಡ್ತೀವಿ? ಆಟವೊಂದನ್ನು ಇಷ್ಟಪಡುವುದು, ಆಟಗಾರನನ್ನು ಹಚ್ಚಿಕೊಳ್ಳುವುದು ತಪ್ಪಲ್ಲ, ಭಾರತದಲ್ಲಿ ಕ್ರಿಕೆಟ್ ಬೆಳೆದಿರುವ ರೀತಿನೋಡಿದಾಗ ಈ ಅಭಿಮಾನ ಹಾಗೂ ಅತೀ ಅಭಿಮಾನ ಎರಡೂ ಸಹಜವೇ. ಆದರೆ ಆಟವೊಂದರಲ್ಲಿ ಗೆಲುವು ಒಬ್ಬರಿಗೆ ಮಾತ್ರವೇ ಅನ್ನೋದು ಗೊತ್ತಿದ್ದೂ, ಕಳೆದ ನೂರುವರ್ಷಕ್ಕೂ ಹೆಚ್ಚಿನ ಕಾಲದಿಂದ ಈ ಆಟವನ್ನು ಆಡುತ್ತಿದ್ದರೂ, ನೋಡುತ್ತಿದ್ದರೂ ಆಟದ ಪಲಿತಾಂಶದೊಂದಿಗೆ ಸಂತೋಷವನ್ನು ಸಮ್ಮಿಳಿಸುವ ಅಗತ್ಯದಿಂದ ನಾವು ಯಾಕೆ ಹೊರಬಂದಿಲ್ಲ? ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆಗಳಲ್ಲೊಂದಾದರೂ, ಈ ಪಂದ್ಯಾವಳಿ ಪ್ರಾರಂಭವಾದಾಗ ನನಗೆ ವೈಯುಕ್ತಿಕವಾಗಿ ಕ್ರಿಕೆಟ್ ಬಗ್ಗೆ ಆಸಕ್ತಿಯೇ ಕಮ್ಮಿಯಾಗಿ ಹೋಗಿತ್ತು. ವಿಶ್ವಕಪ್ ಹತ್ತಿರಬರುತ್ತಿದ್ದಂತೆ, ಭಾರತದ ತಂಡ ಕಳಪೆ ಪ್ರದರ್ಶನವನ್ನೇನೂ ಕೊಡುತ್ತಿರಲಿಲ್ಲವಾದರೂ, “ಏನೋ ಒಂದು ಕಮ್ಮಿಯಾಗಿದೆ” ಎನ್ನುವ ತರದಲ್ಲೇ ಇತ್ತು. ಈ ತಂಡ ಕಪ್ ಗೆಲ್ಲೋದು ಹೌದಾ! ಎನ್ನುವ ಅನುಮಾನ ಎಲ್ಲರ ಮನಸ್ಸಿನಲ್ಲೂ ಇತ್ತು. ನಮ್ಮೆಲ್ಲರ ನಿರೀಕ್ಷೆಯನ್ನೂ ಮೀರಿ ಒಂದೂ ಪಂದ್ಯವನ್ನು ಸೋಲದೇ, ಅಂತಿಮ ಪಂದ್ಯವನ್ನು ತಲುಪುವ ಹಾದಿಯಲ್ಲಿ ಹಲವಾರು ದಾಖಲೆಗಳನ್ನೂ ಮುರಿದು, ಅತ್ಯದ್ಭುತ ಅನುಭವವನ್ನೇ ಕೊಟ್ಟ ಈ ನಮ್ಮ ತಂಡ, ಸಧ್ಯದ ಮಟ್ಟಿಗೆ ನನಗೆ ಜಗತ್ತಿನ ಸರ್ವಶ್ರೇಷ್ಟ ತಂಡವೇ. “ಎಷ್ಟೆಲ್ಲಾ ದಾಖಲೆ ಮುರಿದು ಏನು ಪ್ರಯೋಜನ? ಕಪ್ ಯಾರದ್ದೋ ಪಾಲಾಯಿತು” ಅಂತಾ ಅಳುವವರನ್ನು ನೋಡಿದೆ. ಅಂದರೆ ಇವರ ಸಂತೋಷದ ಕೊಡಪಾನದ ಪ್ರತಿಹನಿಯೂ ತುಳಕಲಿಕ್ಕಾಗಿ ಅಂತಿಮ ಪಂದ್ಯಕ್ಕಾಗಿಯೇ ಕಾದು ಕುಳಿತಿತ್ತು. ಮಧ್ಯದ ಅಷ್ಟೂ ಪ್ರದರ್ಶನಗಳನ್ನೂ ಮರೆತು, ಪಂದ್ಯಾವಳಿಯಲ್ಲೇ ಅತ್ಯಂತ ಹೆಚ್ಚು ರನ್, ಹೆಚ್ಚು ವಿಕೆಟ್ ದಾಖಲೆ ಬರೆದ ನಮ್ಮವರ ಅಷ್ಟೂ ಬೆವರನ್ನ ಒಂದು ಪಂದ್ಯ ಅಳಿಸಿಹಾಕುವುದು ಹೌದೇ?

ಯಾವತ್ತೂ ಕೂಡಾ ಇವತ್ತು ಇದೇ ತಂಡ ಗೆಲ್ಲೋದು ಅಂತಾ ಹೇಳೊಕಾಗೋದಿಲ್ಲ ಅನ್ನೋದನ್ನ ಕ್ರಿಕೆಟ್ ಮತ್ತೆ ಮತ್ತೆ ನಿರೂಪಿಸಿದೆ. ಈ ಪಂದ್ಯಾವಳಿಯಲ್ಲೂ ನೆೆದರ್ಲ್ಯಾಂಡ್ ಅಫ್ಘಾನಿಸ್ಥಾನದಂತಹ ತಂಡಗಳು ಮತ್ತದನ್ನೇ ನೆನಪಿಸಿವೆ. ಮೊನ್ನೆಯ ದಿನ ಆಸ್ಟ್ರೇಲಿಯಾದ ದಿನವಾಗಿತ್ತು ಅಷ್ಟೇ. ಅವತ್ತಿನ ದಿನದ ಆಟವನ್ನು ಅವರು ಚೆನ್ನಾಗಿ ಆಡಿದರು. ಕೆಲವೇ ವಾರದ ಹಿಂದೆ ಒಂಬತ್ತನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯ ಪುಟಿದೆದ್ದ ರೀತಿ, ಯಾವ ಮೊತ್ತಕ್ಕೂ ಹೆದರದೇ ಬೆನ್ನಟ್ಟಿದ ರೀತಿ ನಿಜವಾದ ಕ್ರಿಕೆಟ್ ಆಸಕ್ತರಿಗೆ ರೋಮಾಂಚನ ಹುಟ್ಟಿಸಬೇಕಾದದ್ದೇ. ನಾವು ಸೋತದ್ದೂ ಅದೇ ದೈತರ ಮೇಲೆ. ಇದೀಗ ನಮಗೆ ಬೇಕಾದದ್ದು ನ ದೈನ್ಯಂ ನ ಪಲಾಯನಂ ಎಂಬ ಮನಸ್ಥಿತಿಯಷ್ಟೇ. ಸೋತ ಕಾರಣಕ್ಕೆ ನಾವು ನಮ್ಮ ತಂಡಕ್ಕೆ ಕರುಣೆಯನ್ನೂ ತೋರಿಸಬೇಕಾಗಿಲ್ಲ, ಸಿಟ್ಟು ತೋರಿಸಿ ಬೆಂಬಲವನ್ನೂ ಹಿಂಪಡೆಯಬೇಕಿಲ್ಲ. ನಾಳೆಯಲ್ಲ ನಾಡಿದ್ದು ಮತ್ತದೇ ಆಸೀಗಳ ಮೇಲೆ ಟಿಟ್ವೆಂಟಿ ಪಂದ್ಯವಿದೆ. ಧೂಳು ಕೆಡವಿಕೊಂಡು ರೆಡಿಯಾಗಿ ನಮ್ಮ ತಂಡದೊಂದಿಗೆ ನಿಲ್ಲಬೇಕಷ್ಟೇ. ಒಳ್ಳೆಯ ಆಟವನ್ನು ಬಯಸುವ ನಾವು ಒಳ್ಳೆಯ ಅಭಿಮಾನಿಗಳೂ ಆಗೋಣ.

0 comments on “ಸಂತೋಷವನ್ನೆಲ್ಲಾ ಫಲಿತಾಂಶಕ್ಕಾಗಿಯೇ ಮೀಸಲಿಡಬೇಡಿ. ಸಂತೋಷವಾಗಿರಿ ಅಷ್ಟೇ

Leave a Reply

Your email address will not be published. Required fields are marked *