Tuesday, 19 March, 2024

‘ರಸಭರಿತ’ ಕಥೆ

Share post

ದೆಹಲಿಯಲ್ಲಿ ಕೆಲಸಮಾಡುವಾಗ ಒಬ್ಳು ಒಡಿಸ್ಸಿ ಹುಡ್ಗಿ ನಮ್ಮಾಫೀನ ಆಫೀಸ್ ಸರ್ವೀಸಸ್ ಡೀಪಾರ್ಟ್ಮೆಂಟಿನಲ್ಲಿದ್ಲು. ನಾನು ಆಗ ಕೆಲಸಕ್ಕೆ ಸೇರಿದ ಮೊದಲ ದಿನ ಬಂದು, ನನ್ನ ನಾಯಿಬೆಲ್ಟು (ಐಡಿ ಕಾರ್ಡು ಕಣ್ರೀ), ಆಕ್ಸೆಸ್ ಕಾರ್ಡು, ಮೊಬೈಲ್ ಫೋನು, ಕಾರ್ ಪಾರ್ಕಿಂಗ್ ಸ್ಟಿಕ್ಕರು ಎಲ್ಲಾ ಕೊಡೋಕೆ ಬಂದಿದ್ಲು. ಆಕೆಯ ಹೆಸರೇನು ನೋಡೋಣ ಅಂತಾ ಅವಳ ಕತ್ತಿನಲ್ಲಿ ನೇತಾಡ್ತಿದ್ದ ಐಡಿಕಾರ್ಡಿನ ಮೇಲೆ ಕಣ್ಣಾಡಿಸಿದೆ. ಎದೆ ಧಸಕ್ಕಂತು!

 

ಯಾಕಂದ್ರೆ ಅವಳ ಹೆಸರು “ರಸಭರಿತ” ಅಂತಾ ಇತ್ತು!!

ಕಣ್ಣುಜ್ಜಿ ನೋಡ್ಕಂಡೆ. ಆ ಕಾರ್ಡು ಇದ್ದ ಜಾಗ, ಆ ಹೆಸರು ಎರಡೂ ನೋಡಿ, ತಲೆಯಲ್ಲಿ ಏನೇನೋ ಈಕ್ವೇಷನ್ನುಗಳೆಲ್ಲಾ ಕ್ರಿಯೇಟ್ ಆಗಿ ಮೈಯೆಲ್ಲಾ ಗಡಗಡ ಅಂತು. “ಇದೆಂತಾ ಹೆಸರು!? ರಸಭರಿತ ಅಂತೆ. ರಸಭರಿತವೇ ಇರಬಹುದು. ಹಾಗಂತಾ ಹೇಳ್ಕಂಡು ತಿರುಗಾಡ್ಬೇಕಾ!? ಯಾವ ಅಪ್ಪ ಅಮ್ಮ ಇಂತಾ ಹೆಸರಿಡ್ತಾರೆ!? ಇದೇನಾದ್ರೂ, ಆಫೀಸಿಗೋಸ್ಕರ ಅಂತಾ ಇವ್ಳೇ ಇಟ್ಕಂಡ ಹೆಸ್ರಾ? ಎಂತಾ ಕಂಪನಿ ಸೇರ್ಕಂಡುಬಿಟ್ನಪ್ಪಾ! ಇಲ್ಲೇನಾದ್ರೂ ಮನುಷ್ಯರ ಹೆಸರಿನ ಬದಲು ಅನ್ವರ್ಥನಾಮಗಳನ್ನೇನಾದ್ರೂ ಪ್ರಿಂಟ್ ಮಾಡೋ ಅಭ್ಯಾಸವಿದ್ಯಾ!? ಈಗೆಲ್ಲಾ ಇಂತ ಇನಿಷಿಯೇಟಿವ್ಗಳನ್ನ ಕೂಲ್ ಅಂತಾ ಬೇರೆ ಕರೀತಾರೆ. ನನ್ನ ಕಾರ್ಡಿನಲ್ಲಿನಾದ್ರೂ ನನ್ನ ಹೆಸರು “ಸಿಳ್ಳೇಕ್ಯಾತ” ಅಂತ್ಲೋ, ನಾನು ಕಪ್ಪಗೆ ಉದ್ದಕ್ಕೆ ಇದ್ದದ್ದರಿಂದ “ಕರಿಬಾಳೆಕಾಯಿ” ಅಂತ್ಲೋ, “ಕಾಳಿಂಗನ್ಹಾವು” ಅಂತೇನಾದ್ರೂ ಪ್ರಿಂಟಾಗಿದ್ಯಾ!?” ಅಂತಾ ಚೆಕ್ ಮಾಡ್ದೆ. ಇಲ್ಲ..ರಾಘವೇಂದ್ರ ಅಂತಲೇ ಇತ್ತು. ಸಮಾಧಾನವೂ ಆಯ್ತು.

 

ನನ್ನ ಗಡಿಬಿಡಿ ನೋಡಿ ಮಿಸ್.ರಸಭರಿತ “ಕ್ಯಾ ಹುವಾ! ಆಲ್ ವೆಲ್? ಯುವರ್ ನೇಮ್ ಈಸ್ ಪ್ರಿಂಟೆಡ್ ರಾಂಗ್? ಶುಡ್ ಇಟ್ ಬಿ ರಾಘವನ್?” ಅಂದ್ಳು. ಸ್ವಲ್ಪ ಸುಧಾರಿಸಿಕೊಂಡು “ಇಲ್ಲಾ ತಾಯಿ. ಸರ್ಯಾಗಿಯೇ ಪ್ರಿಂಟಾಗಿದೆ. ಥ್ಯಾಂಕ್ಯೂ ಥ್ಯಾಂಕ್ಯೂ. ನಿಮ್ಮನ್ನ ಮೊದಲ ಸಲ ನೋಡಿದ್ದು ನಾನು. ಅಂಡ್ ಯೂ ಆರ್…” ಅಂತಾ ಕೈ ಚಾಚಿದೆ.

 

“ಓಹ್ ಸ್ಸಾರಿ! ಐ ಆಮ್ ಸಬರಿತಾ. ಯೂ ಆಲ್ರೆಡೀ ನೋ ಐ ವರ್ಕ್ ವಿತ್ ಆಫೀಸ್ ಸರ್ವೀಸಸ್. ನೈಸ್ ಮೀಟಿಂಗ್ ಯೂ. ಕಾಲ್ ಮಿ ಆನ್ 2308 ಇಫ್ ಯೂ ನೀಡ್ ಎನಿಥಿಂಗ್” ಅಂದು ಕೈಕುಲುಕಿ ಹೋದ್ಳು.

 

ಮೆದುಳಲ್ಲೆಲ್ಲೋ ಒಂದ್ಕಡೆ “ಓಹ್..ಸಬರಿತಾ..ಆರ್ ಎ ಸಬರಿತಾ…R A SABARITA…ಸಧ್ಯ” ಅಂತಾ ನಿಟ್ಟುಸಿರೂ ಕೇಳ್ತು. ಇನೊಂದ್ಕಡೆಯಿಂದಾ “ಥತ್….ಕೊಳಕು ನನ್ಮಗ್ನೇ! ಸಬರಿತಾ ಅನ್ನೋದನ್ನ ರಸಭರಿತ ಅಂತಾ ಏನೇನೋ ಯೋಚಿಸಿಬಿಟ್ಯಲ್ಲೋ…ಫಟಾರ್!” ಅಂತ ಶಬ್ದ ಬಂತು. ತಲೆ ಮುಟ್ಟಿ ನೋಡಿಕೊಂಡೆ. “ಅಯ್ಯೋ! ನನ್ ತಪ್ಪೇನಿದೆ ಇದ್ರಲ್ಲಿ!? ಎಲ್ಲಾ “ಇಂಗ್ಳೀಷಿನ ತಪ್ಪು” ಅಂತಾ ಸಮಾಧಾನ ಮಾಡ್ಕೊಳ್ತಾ ಅಲ್ಲೇ ತಲೆ ನೀವಿಕೊಂಡೆ”

 

#ದೇವ್ರಾಣೆ_ನಿಜ

0 comments on “‘ರಸಭರಿತ’ ಕಥೆ

Leave a Reply

Your email address will not be published. Required fields are marked *