Tuesday, 27 February, 2024

ಬೋರ್ಡ್ ಕಂಟ್ರೋಲ್ + ಆಲ್ಟ್’ಮನ್ + ಡಿಲೀಟ್ = ಓಪನ್ ಎಐ ಲಾಕೌಟ್

Share post

ಕಳೆದವಾರ ಕಾರ್ಪೊರೇಟ್ ಜಗತ್ತು ಬೋರ್ಡ್ ರೂಂ ಕಾಳಗವೊಂದರ ರೋಚಕ ಬಹುಮಜಲುಗಳ ಬಂಡಾಯದ ತಿರುವುಮುರುವುಗಳ ಕಥೆಯೊಂದಕ್ಕೆ ಸಾಕ್ಷಿಯಾಯ್ತು. ಇಡೀ ಜಗತ್ತಿನ ತಾಂತ್ರಿಕ ಚಹರೆಯನ್ನೇ ಚಾಟ್ ಜಿಪಿಟಿಯ ಮೂಲಕ ಬದಲಿಸುವ ಪಣತೊಟ್ಟ ಸ್ಯಾಮ್ ಆಲ್ಟ್-ಮನ್ ಎಂಬ ವಿಕ್ಷಿಪ್ತ ವ್ಯಕ್ತಿ ಈ ಇಡೀ ಕಥೆಯ ಕೇಂದ್ರಬಿಂದುವಾಗಿದ್ದ. ವಿಜ್ಞಾನ ತಂತ್ರಜ್ಞಾನ ಜಗತ್ತನ್ನು ಅವಲೋಕಿಸುವ ಅಭ್ಯಾಸದವರು ನೀವಾದರೆ, ಈ ಜಗತ್ತಿನಲ್ಲಿ ಪ್ರತೀ ಮೂರುದಶಕಕ್ಕೊಮ್ಮೆ ಹೀಗಾಗುವುದನ್ನು ಗಮನಿಸಿರುತ್ತೀರಿ. “ಜಗತ್ತು ಯೋಚಿಸುವ ರೀತಿಯೇ ಸರಿಯಿಲ್ಲ, ನಾನಿದಕ್ಕೊಂದು ತಿರುವುಕೊಡುತ್ತೇನೆ” ಎಂಬ ನಂಬಿಕೆಯಿಂದ ಹತ್ತಿಪ್ಪತ್ತು ವರ್ಷಕ್ಕೊಬ್ಬ ವ್ಯಕ್ತಿ ಹೊರಡುತ್ತಾನೆ. ಆತನನ್ನು ತಪ್ಪು ಎಂದು ನಿರೂಪಿಸಲು ಇಡೀ ಜಗತ್ತು ಪಣಕಟ್ಟಿ ನಿಲ್ಲುತ್ತದೆ. ಆತನ ಯೋಚನಾಲಹರಿ ಸರಿಯಿಲ್ಲ ಎಂಬ ಕಾರಣಕ್ಕೋ, ಅಥವಾ ಆತನ ಯೋಚನಲಹರಿ ನಮ್ಮ ಜೀವನವನ್ನು ತೀರಾ ದೊಡ್ಡ ರೀತಿಯಲ್ಲಿ ಬದಲಾಯಿಸಿಬಿಡುತ್ತದೆ ಹಾಗೂ ಆ ಬದಲಾವಣೆಗೆ ನಾವು ತಯಾರಿಲ್ಲ ಎಂಬ ಕಾರಣಕ್ಕೋ, ಅಥವಾ ಆತ ಸರಿಯೇ ಇರಬಹುದು, ಆದರೆ ಅವನೇ ಸರಿ ಯಾಕಾಗಬೇಕು? ನಾನ್ಯಾಕಾಗಬಾರದು? ಅವನಿಗೆ ಸಿಗಬಹುದಾದ ಆ ಜನಪ್ರಿಯತೆ ನನಗ್ಯಾಕೆ ಸಿಗಬಾರದು ಎಂಬ ಕಾರಣಕ್ಕೋ ಒಟ್ಟಿನಲ್ಲಿ ಜಗತ್ತು ಇಂತಹ ತಾಂತ್ರಿಕಹುಚ್ಚರ ಆಟಕ್ಕೆ ಕಡಿವಾಣ ಹಾಕಬಯಸುತ್ತದೆ. ಇತಿಹಾಸದುದ್ದಕ್ಕೂ ನೋಡಿದಾಗ ಕೆಲವರು ಈ ಆಟದಲ್ಲಿ ಗೆದ್ದರೆ ಇನ್ನುಕೆಲವರು ಸೋತಿದ್ದಾರೆ. ಗೆಲಿಲಿಯೋ ಗೆಲಿಲೈ, ನಿಕೊಲಾ ಟೆಸ್ಲಾ, ರೋಸಾಲಿಂಡ್ ಫ್ರಾಂಕ್ಲಿನ್, ಗ್ರೆಗೋರ್ ಮೆಂಡಲ್, ಬಾರ್ಬರಾ ಮೆಕ್-ಕ್ಲಿಂಟಾಕ್, ಆಂಟೋನಿ ಲವೋಸಿಯರ್, ಜಗದೀಶ್ಚಂದ್ರ ಭೋಸ್, ಅಲನ್ ಟ್ಯೂರಿಂಗ್ ಮುಂತಾದ ಹೆಸರುಗಳಿಗೆ ಸಿಗಬೇಕಾದ ಪ್ರಸಿದ್ದಿ ಸಿಗಲೇ ಇಲ್ಲ. ಅವರ ಹೆಸರಲ್ಲಿ ಬೇರೆ ಯಾರೋ ಜನಪ್ರಿಯತೆ ಪಡೆದರು, ಅಥವಾ ಬೇರಾವುದೋ ಕಾರಣಕ್ಕೆ ಹಿನ್ನೆಲೆಗೆ ದೂಡಲ್ಪಟ್ಟರು. ಸ್ಟೀವ್ ಜಾಬ್ಸ್, ಇಲೋನ್ ಮಸ್ಕ್ ಮತ್ತೀಗ ಸ್ಯಾಮ್ ಆಲ್ಟ್-ಮನ್’ನಂತಹ ಕೆಲವರಷ್ಟೇ ಇದನ್ನು ಹೋರಾಟವಾಗಿ ತೆಗೆದುಕೊಂಡು, ಜಗತ್ತಿಗೆದುರಾಗಿ ನಿಂತು, ತಮ್ಮ ಆಲೋಚನೆಗಳಲ್ಲಿ ಹುರುಳಿದೆ ಅಂತಾ ತೋರಿಸಿಕೊಟ್ಟಿದ್ದು.

Sam Altman

ಹಾಗೆ ನೋಡಿದರೆ ಜಿಪಿಟಿ ಎಂಬ ಕಲ್ಪನೆ ಸ್ಯಾಮ್’ನದ್ದೇನೂ ಅಲ್ಲ. ಅವನಿಂತಲೂ ಮುಂಚೆಯೇ ಗೂಗಲ್ ಕೃತಕ ಬುದ್ಧಿಮತ್ತೆಯಲ್ಲಿ ಹೂಡಿಕೆ ಮಾಡಿತ್ತು ಹಾಗೂ ಬಹಳಷ್ಟು ಮುನ್ನಡೆಯನ್ನೂ ಸಾಧಿಸಿತ್ತು. ಸ್ಯಾಮನ ಓಪನ್ ಎಐ ಕಂಪನಿಯೂ ಪೂರ್ತಿ ಅವನದ್ದೇನಲ್ಲ. ಅವನ ಅಲೋಚನೆಗೆ ನೀರೆರೆದು ಹುರಿದುಂಬಿಸಿ 10 ಬಿಲಿಯನ್ ಡಾಲರ್ ಹಣ ಹೂಡಿದ್ದು ಮೈಕ್ರೋಸಾಫ್ಟ್. ಓಪನ್ ಎಐನಲ್ಲಿ 49% ಪಾಲುದಾರನಾಗಿರುವ ಸತ್ಯ ನಾಡೆಲ್ಲ ಸಾರಥ್ಯದ ಮೈಕ್ರೋಸಾಫ್ಟ್, ಓಪನ್ ಎಐ ಬೆಳೆದಂತೆಲ್ಲಾ, ಅದರ ಮಾರುಕಟ್ಟೆಯ ಮೌಲ್ಯ ಹೆಚ್ಚಾದಂತೆಲ್ಲಾ, ತನ್ನ 49% ಪಾಲನ್ನು ಉಳಿಸಿಕೊಳ್ಳಲಿಕ್ಕೆ ಇನ್ನೂ ಹತ್ತು ಬಿಲಿಯನ್ ಡಾಲರ್ ಹಣ ಹೂಡಲು ತಯಾರಿದೆ. ತನ್ನ ಅಜೂರ್ ಕ್ಲೌಡ್ ಪ್ಲಾಟ್ಫಾರಂ ಅನ್ನು ಬಳಸಿಕೊಳ್ಳಲು ಓಪನ್ ಎಐಗೆ ಸಂಪೂರ್ಣ ಬೆಂಬಲ ಕೊಟ್ಟು ಬೆಳೆಸಲು ತಯಾರಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಕ್ರೋಸಾಫ್ಟಿನ ಮುಂದಿನ ಹೆಜ್ಜೆ ಏನು ಎಂಬುದನ್ನು ಈ ಹೂಡಿಕೆಯ ತಂತ್ರವನ್ನು ನೋಡಿಯೇ ನೀವು ಊಹಿಸಬಹುದು. ಉಳಿದೆಲ್ಲಾ ಜಿಪಿಟಿ ಆಟಗಾರರನ್ನು ಹಿಂದೂಡಿ, ಓಪನ್ ಎಐ’ನ ಕನಸಿನ ಕೂಸುಗಳಾದ ಚಾಟ್ ಜಿಪಿಟಿ ಮತ್ತು ಡಾಲ್-ಇ ಮೂಲಕ ತಂತ್ರಜ್ಞಾನ ಮತ್ತು ಎಐ ಜಗತ್ತನ್ನು ತನ್ನದಾಗಿಸಿಕೊಳ್ಳಲು, ಅದರ ಮೂಲಕ ತಂತ್ರಜ್ಞಾನ ಕ್ಷೇತ್ರದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು, ಹಾಗೂ ಸಾಧ್ಯವಾದಷ್ಟೂ ಆಪಲ್ ಮತ್ತು ಗೂಗಲ್ಲುಗಳನ್ನು ಹಿಂದಿಕ್ಕಿ ಏಕಚಕ್ರಾಧಿಪತಿಯಾಗಲು ಮೈಕ್ರೋಸಾಫ್ಟ್ ಹುನ್ನಾರ ನಡೆಸಿದೆ.

 

ಇದು ಗೂಗಲ್ಲಿಗೆ ಇಷ್ಟವಿಲ್ಲ. ಎಐ ಕ್ಷೇತ್ರದಲ್ಲಿ ಮೊತ್ತಮೊದಲಿಗೇ ಹೂಡಿಕೆ ಮಾಡಿದ್ದ ಗೂಗಲ್ ತನ್ನ ಉಳಿದೆಲ್ಲಾ ಪ್ರಾಡಕ್ಟುಗಳ ಜೊತೆಗೆ ಬಾರ್ಡ್ ಅನ್ನೂ ನಿಧಾನಕ್ಕೆ ಜನಪ್ರಿಯಗೊಳಿಸುವ ತಂತ್ರದಲ್ಲಿತ್ತು. ಆದಷ್ಟೂ ನಿಖರವಾದ ಪರಿಹಾರಗಳೊಂದಿಗೇ ಆಟಕ್ಕಿಳಿಯುವ ಗೂಗಲ್, ಎಐಗೆ ಜಗತ್ತು ಇನ್ನೂ ರೆಡಿಯಾಗಿಲ್ಲ ಎಂಬ ಅಂದಾಜಿನಲ್ಲೇ ಇತ್ತು. ಹಾಗಾಗಿ ಇವತ್ತಿನ ಜಿಪಿಟೀಗಳೇನಿವೆ ಆ ರೀತಿಯ ಉತ್ಪನ್ನವೊಂದನ್ನು 2025ರ ಹೊತ್ತಿಗೆ ಮಾರುಕಟ್ಟೆಗೆ ತರುವ ತಯಾರಿಯಲ್ಲಿತ್ತು. ಆದರೆ ಸ್ಯಾಮ್ ಆಲ್ಟ್’ಮನ್ ಎಂಬ ಜೀನಿಯಸ್ ಇಡೀ ಪ್ರಕ್ರಿಯೆಯನ್ನೇ ಸರಳಗೊಳಿಸಿ ಈ ಆಟವನ್ನು ಕನಿಷ್ಟ ಮೂರ್ನಾಲ್ಕು ವರ್ಷ ಹತ್ತಿರಕ್ಕೆ ತಂದ. ಹಾಗೂ ಇಂತಹ ಜೀನಿಯಸ್ ಒಬ್ಬನನ್ನು ತಕ್ಷಣಕ್ಕೆ ಗುರುತಿಸುವಲ್ಲಿ ಹಾಗೂ ಅವನಿಗೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಕೊಟ್ಟು ಹುರಿದುಂಬಿಸುವಲ್ಲಿ ಮೈಕ್ರೋಸಾಫ್ಟ್ ಎಲ್ಲರನ್ನೂ ಹಿಂದಿಕ್ಕಿತು. ಈ ನಡೆ ಹಾಗೂ ಅದರ ಫಲಿತಾಂಶವಾಗಿ ಹೊರಬಂದ ಚಾಟ್-ಜಿಪಿಟಿ ಎಂಬ ಉತ್ಪನ್ನ ಇಡೀ ಜಗತ್ತನ್ನೇ ಬೆರಗುಗೊಳಿಸಿತು. ಗೂಗಲ್ ಮಟ್ಟಿಗೆ ಇದು ಪಕ್ಕಾ ಆಮೆ ಮತ್ತು ಮೊಲದ ರೇಸಿನದ್ದೇ ಕತೆ. ನಾನೇ ಮುಂದಿದ್ದೇನೆ, ಎಂಬ ಅಂದಾಜಿನಲ್ಲಿದ್ದ ಗೂಗಲ್ಲಿಗೆ ಸ್ಯಾಮ್ ಸಿಡಿಲಿನಂತಾ ಪೆಟ್ಟನ್ನೇ ಕೊಟ್ಟಿದ್ದ. ತಂತ್ರಜ್ಞಾನ ಜಗತ್ತಿನಲ್ಲಿ ಒಂದೋ ನೀವು ನಿಮ್ಮ ಎದುರಾಳಿಗಿಂತಾ ಒಳ್ಳೆಯ ಪ್ರಾಡಕ್ಟನ್ನು ಬಿಡುಗಡೆ ಮಾಡಬೇಕು, ಇಲ್ಲಾದರೆ ಅವನ ವೇಗವನ್ನು ನಿಧಾನಿಸಬೇಕು. ಗೂಗಲ್ ಕೈಲಿ ಮೊದಲನೆಯ ಆಟವಂತೂ ಸಾಧ್ಯವಿರಲಿಲ್ಲ. ಚಾಟ್ ಜಿಪಿಟೀಗೆ ಉತ್ತರವಾಗಿ ಆತುರಾತುರವಾಗಿ ಬಾರ್ಡ್ ಅನ್ನು ಬಿಡುಗಡೆ ಮಾಡಿದರೂ, ಅದು ಗೂಗಲ್ಲಿನ ಮುಖದ ಮೇಲೇ ಮಕಾಡೆ ಬಿತ್ತು. ಇದೇ ಕಾರಣಕ್ಕೆ ಗೂಗಲ್ ಸ್ಯಾಮ್’ನನ್ನು ಅವನ ದೌರ್ಬಲ್ಯ ಎಲ್ಲಿದೆ ಎಂಬುದನ್ನು ಕಂಡುಹಿಡಿದು ಅಲ್ಲಿ ಪೆಟ್ಟುಕೊಡಲು ನೋಡಿತು.

ಇದ ಫಲಶ್ರುತಿಯೇ, ಕಳೆದ ವಾರ ನಡೆದ ಓಪನ್ ಎಐ’ನ ಬೋರ್ಡ್ ರೂಂ ಬಂಡಾಯ. ತನ್ನ ವಿಲಕ್ಷಣ ವ್ಯಕ್ತಿತ್ವಕ್ಕೆ ಹೆಸರಾದ ಸ್ಯಾಮ್, ಯಾರ ಅಂಕೆಗೂ ಸಿಗದ ಅಸಾಮಿ. ಎಷ್ಟೋ ನಿರ್ಧಾರಗಳನ್ನು ಯಾರಿಗೂ ಹೇಳದೇ ರಾತ್ರೋರಾತ್ರಿ ತಾನೇ ನಿರ್ಧರಿಸುತ್ತಿದ್ದ ಸ್ವತಂತ್ರ ಚಿಂತಕ. ತಂಡಕ್ಕೆ ತಿಳಿಸದೆಯೇ ಇಡೀ ಕೋಡ್ ಅನ್ನೇ ತನಗಿಷ್ಟ ಬಂದಂತೆ ಬದಲಿಸಿ, ಮಾರನೇ ದಿನ ಬೆಳಿಗ್ಗೆ ಕಾಫಿಗೆ ಕೂತಾಗ ಉಳಿದವರಿಗೆ ಹೇಳುತ್ತಿದ್ದವ. ಪ್ರೋಗ್ರಾಮರ್ ಆಗಿದ್ದವ ಮ್ಯಾನೇಜರ್ ಆಗಿ ಬದಲಾದಾಗಲೂ ಅವನ ಚಿಂತನೆಯಲ್ಲಿ ಯಾವ ಬದಲಾವಣೆಯೂ ಬರಲಿಲ್ಲ. ಪ್ರೋಗ್ರಾಮರುಗಳನ್ನು ಹೇಗೋ ಉತ್ಪನ್ನದ ಉನ್ನತ ಅಂಶಗಳನ್ನು ತೋರಿಸಿ ಸುಮ್ಮನಾಗಿಸಬಹುದು. ಹಣ ಹೂಡಿದ ಹೂಡಿಕೆದಾರರು ಹಾಗೂ ಬೋರ್ಡ್ ರೂಂ ಎಕ್ಸಿಕ್ಯೂಟಿವ್’ಗಳು ಹಾಗಲ್ಲ. ಅಂಟು ಅಹಮಿಕೆಯ ಜಿಗುಟುಮುದ್ದೆಗಳವು. ನನ್ನನ್ನು ಕೇಳದೆ ಇದ್ದನ್ನು ಮಾಡಿದವ ನೀನು, ನಾಳೆ ನನಗೆ ಹೇಳದೆ ಕಂಪನಿಯನ್ನೇ ಮಾರಿಬಿಟ್ಟೀಯೆ ಎನ್ನುವವರು. ಸ್ಯಾಮನ ಕತೆಯಲ್ಲಿ ಅದೇ ಆಗಿದ್ದು ಕೂಡಾ. ತನಿಗಿಷ್ಟ ಬಂದವರನ್ನು ತನಗಿಷ್ಟ ಹುದ್ದೆಗೆ ನೇಮಕ ಮಾಡುವುದು, ಯಾರ್ಯಾರ ಜೊತೆಗೋ ಪಾರ್ಟನರ್ಶಿಪ್ ಮಾಡಿಕೊಳ್ಳುವುದು, ಬೋರ್ಡಿಗೇ ತಿಳಿಸದೇ ಹಣವನ್ನು ಇನ್ನೆಲ್ಲೋ ಹೂಡಿಕೆಮಾಡುವುದು ಇಂತಹ ವರ್ತನೆಯನ್ನು ಬೋರ್ಡ್ ಮಟ್ಟದ ಕಾರ್ಪೋರೇಟ್ ವಲಯ ಸಹಿಸುವುದಿಲ್ಲ. ಅವರಿಗೆ ತಮ್ಮ ಹಣದ ಹಿಡಿತ ತಪ್ಪುವ ಭಯ. ಇದನ್ನು ಚೆನ್ನಾಗಿ ಅಧ್ಯಯನ ಮಾಡಿದ ಗೂಗಲ್, ಓಪನ್ ಎಐನ ಬೋರ್ಡಿನ ಒಬ್ಬೊಬ್ಬರೇ ಸದಸ್ಯರ ಮೇಲೆ ಸಾಮ ದಾನ ಬೇಧ ದಂಡದ ತಂತ್ರಗಳ ಮೂಲಕ ಪ್ರಭಾವ ಬೀರಿ, ಕಳೆದ ವಾರ ಸ್ಯಾಮನ ವಿರುದ್ದ ಸಿಡಿದೇಳುವಂತೆ ಮಾಡಿತು. ಅದೂ ಎಂತಹಾ ಬಂಡಾಯ ಅಂತೀರಿ? “ನೀನು ಮಾಡಿದ್ದು ಸರಿಯಿಲ್ಲ. ಇನ್ಮೇಲೆ ಹೀಗೆ ಮಾಡಬೇಡ” ಅಂತಾ ಹೇಳಿ ಕೈಮೇಲೊಂದು ಪೆಟ್ಟು ಕೊಡುವ ಟೀಚರನಂತೆ ಮಾಡಲಿಲ್ಲ. ನಿನ್ನಂತವ ಈ ಶಾಲೆಗೇ ಅವಮಾನ ಅಂತಾ ಹೇಳುವ ಮುನ್ನಾಭಾಯಿ ಎಂಬಿಬಿಎಸ್ಸಿನ ಡಾ.ಅಸ್ಥಾನರಂತೆ, ಸ್ಯಾಮನಿಗೆ ಬೇರಾವ ಅವಕಾಶವನ್ನೂ ಕೊಡದೇ ಕೆಲಸದಿಂದ ಆ ಕೂಡಲೇ ಅಮಾನತು ಮಾಡುವಂತಾ ಬಂಡಾಯ ಮಾಡಿಸಿತು. ಒಟ್ಟಿನಲ್ಲಿ ಸುಂದರ್ ಪಿಚಾಯ್’ನ ಸಂಸ್ಥೆ ಓಪನ್ ಎಐ ಬೋರ್ಡ್ ರೂಂನ Control ತೆಗೆದುಕೊಂಡು ಸ್ಯಾಮ್ Altಮ್ಯಾನ್’ನನ್ನು, ಆಡಳಿತ ಮಂಡಳಿಯಿಂದಲೇ Delete ಮಾಡಿಸಿತು. ತಕ್ಷಣವೇ ಕಾರ್ಯಪ್ರವೃತ್ತವಾದ ಸತ್ಯ ನಾಡೆಲ್ಲರ ಮೈಕ್ರೋಸಾಫ್ಟ್ ಆಲ್ಟ್’ಮ್ಯಾನ್’ನನ್ನು ತನ್ನ ಎಐ ವಿಭಾಗದ ಮುಖ್ಯಸ್ಥನನ್ನಾಗಿಸಿ, ಎಲ್ಲಾ ಕೆಲಸಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು, “ಇಲ್ಲಿದೆ ನಿಮ್ಮನೆ, ಅಲ್ಲಿದ್ದೆ ಸುಮ್ಮನೆ” ಅಂತಾ ಸಮಾಧಾನ ಮಾಡಿಸಿತು. ಮರುದಿನ ಆಲ್ಟ್’ಮ್ಯಾನ್ ಆಫೀಸಿಗೇ ಬರುವುದಿಲ್ಲವೆಂದು ತಿಳಿದ ಓಪನ್ ಎಐ ಎಂಜಿನಿಯರುಗಳು ದಂಗೆಯೆದ್ದರು. ಇದರ ನಂತರ ಕೆಲವೊಂದಷ್ಟು ತೆರೆಮರೆಯ ಪ್ರಹಸನಗಳು ನಡೆದು ಸ್ಯಾಮ್ ಮರಳಿ ಓಪನ್ ಎಐಗೇ ಬರುವುದೆಂದೂ, ಆತನನ್ನು ಕೆಲಸದಿಂದ ಕಿತ್ತುಹಾಕಿದ ಬೋರ್ಡ್ ಅನ್ನೇ ಕಿತ್ತುಹಾಕಿ, ಹೊಸಾ ಬೋರ್ಡ್ ಅನ್ನು ನೇಮಿಸಲಾಗುವುದೆಂದೂ, ಸ್ಯಾಮ್ ಕೂಡಾ ತನ್ನ ಕಾರ್ಯವೈಖರಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳುತ್ತಾನೆಂದೂ ಹೇಳಲಾಯ್ತು. ಇನ್ನೆಷ್ಟು ದಿನ ಈ ಸಂಸಾರ ನಡೆಯುವುದೋ ನೋಡಬೇಕು. ಒಟ್ಟಿನಲ್ಲಿ ಪಕ್ಕಾ ನೆಟ್ಫ್ಲಿಕ್ಸಿನ ಡ್ರಾಮಾದಂತೆಯೇ ಒಂದು ಡ್ರಾಮಾ 36 ಘಂಟೆಗಳಲ್ಲಿ ನಡೆದು ಹೋಯ್ತು.

 

1985ರಲ್ಲಿ ಆಪಲ್’ನ ಸ್ಥಾಪಕನಾದ ಸ್ಟೀವ್ ಜಾಬ್ಸ್ ಅನ್ನು ಕೂಡಾ ಅಲ್ಟ್’ಮನ್ನನ ಅಮಾನತಿಗೆ ಇವತ್ತು ಕೊಟ್ಟ ಕಾರಣಗಳನ್ನೇ ಕೊಟ್ಟು ಅಂದಿನ ಸಿಇಒ ಜಾನ್ ಸ್ಕಲ್ಲಿ ಬೋರ್ಡಿನ ಮನವೊಲಿಸಿ ಅಮಾನತುಗೊಳಿಸಿದ್ದ. 1997ರಲ್ಲಿ ಆಪಲ್’ಗೆ ಮರಳಿದ ಜಾಬ್ಸ್ ಆ ಕಂಪನಿಯ ರೂಪುರೇಷೆಯನ್ನೇ ಸಂಪೂರ್ಣವಾಗಿ ಬದಲಾಯಿಸಿ ಅದನ್ನು ಟೆಕ್ ಜಗತ್ತಿನ ದೈತ್ಯ ಕಂಪನಿಯನ್ನಾಗಿಸಿದ. 2011ರಲ್ಲಿ ಹೆವ್ಲೆಟ್-ಪ್ಯಾಕರ್ಡ್’ನ ಸಿಇಒ ಲಿಯೋ ಅಪೋಥಿಕೆರ್’ನನ್ನು ಕೂಡಾ ಇದೇ ರೀತಿಯ ಬೋರ್ಡ್ ರೂಂ ಬಂಡಾಯದಲ್ಲಿ ಅಮಾನತುಗೊಳಿಸಿ, ಇ-ಬೇ’ಯ ಮಾಜಿ ಸಿಇಒ ಮೆಗ್ ವಿಟ್ಮ್ಯಾನ್ ಕುರ್ಚಿಗೇರಿದ್ದ. 2012ರಲ್ಲಿ ಯಾಹೂ!ವಿನ ಸಿಇಒನನ್ನೂ, 2002ರಲ್ಲಿ ಫ್ರೆಂಚ್ ಮಾಧ್ಯಮ ಕಂಪನಿ ವಿವೆಂಡಿಯ ಸಿಇಒನನ್ನೂ, 2018ರಲ್ಲಿ ಟೆಸ್ಲಾದ ಸ್ಥಾಪಕ, ಚೇರ್ಮನ್ ಮತ್ತು ಸಿಇಒ ಆಗಿದ್ದ ಎಲೋನ್ ಮಸ್ಕನನ್ನೂ ಹೀಗೇ ಬಂಡಾಯವೆದ್ದ ಬೋರ್ಡುಗಳು ಒಂದೇ ಮೀಟಿಂಗಿನಲ್ಲಿ ಹೊರಗೆ ಕಳಿಸಿದ್ದವು.

 

ಕಂಪನಿಯ ಸ್ಥಾಪಕನನ್ನೇ ಕೆಲಸದಿಂದ ತೆಗೆದುಹಾಕುವುದು ಭಾರತೀಯ ನೈತಿಕ ತರ್ಕಗಳ ಪ್ರಕಾರ ಸ್ವಲ್ಪ ಅಮಾನವೀಯ ಎಂದೆನಿಸಬಹುದು. ಅಮೇರಿಕನ್ ಕಾರ್ಪೊರೇಟ್ ಜಗತ್ತು ಈ ಮಟ್ಟಿಗೆ ಯಾವ ಮಡಿ ಮೈಲಿಗೆಯೂ ಇಲ್ಲದೆ, ಕಂಪನಿಗೆ ಮುಳುವಾಗಬಲ್ಲ ಯಾರನ್ನಾದರೂ ಕಿತ್ತೆಸೆಯುತ್ತದೆ. ಆ ಕ್ಯಾಪಿಟಲಿಸ್ಟಿಕ್ ಸಮೀಕರಣಗಳನ್ನು ಅರ್ಥೈಸಿಕೊಳ್ಳುವುದು, ಆರ್ಥಿಕ ವ್ಯವಹಾರಗಳ ಅನುಭವಿಲ್ಲದವರಿಗೆ, ಕಾರ್ಪೋರೇಟ್’ಗಳ ಒಳನೋಟ ಇಲ್ಲದವರಿಗೆ ಅಷ್ಟು ಸುಲಭದ ಕೆಲಸವಲ್ಲ. ಭಾರತದಲ್ಲೂ ಇಂತಹ ಒಂದೆರಡು ಉದಾಹರಣೆಗಳಿದ್ದರೂ, ಅವು ಮೇಲಿನ ಅಮೇರಿಕನ್ ಉದಾಹರಣೆಗಳಿಗೆ ತೀರಾ ಸಮನಾದವಲ್ಲ. 2016ರಲ್ಲಿ ಟಾಟಾ ಗ್ರೂಪಿನ ಚೇರ್ಮನ್ ಸ್ಥಾನದಲ್ಲಿದ್ದ ಸೈರಸ್ ಮಿಸ್ತ್ರಿಯನ್ನೂ ಹೀಗೇ ಅಚಾನಕ್ಕಾಗಿ ಬೋರ್ಡ್ ರೂಂ ಕದನದ ಕಾರಣಕ್ಕಾಗಿಯೇ ಕೆಳಗಿಳಿಸಲಾಗಿತ್ತು. 2017ರಲ್ಲಿ ಇನ್ಫಿಯ ವಿಶಾಲ್ ಸಿಕ್ಕಾ ಕೂಡಾ ಮೂರ್ತಿ-ನಿಲೇಕಣಿ-ಪೈಗಳ ಜೊತೆಗಿನ ಬೋರ್ಡ್ ರೂಂ ವಾರ್ ಅನ್ನು ಗೆಲ್ಲಲಾಗದೇ ಕೆಳಗಿಳಿದಿದ್ದರು. 2011ರಲ್ಲಿ ತನ್ನದೇ ಕಂಪನಿಯ ಸಿಇಒ ವಿರುದ್ಧ ತನ್ನದೇ ಜನರನ್ನು ಭುಗಿಲೆಬ್ಬಿಸಿ ಸಿಇಒಗಳನ್ನು ರಾಜೀನಾಮೆ ಕೊಡುವಂತೆ ಮಾಡಿ, ಚೇರ್ಮನ್ ಅಜೀಂ ಪ್ರೇಂಜೀ ತನ್ನ ನಂಬಿಕಸ್ಥನನ್ನು ಕೂರಿಸಿದ್ದರು.

 

ಮನುಷ್ಯರನ್ನೇ ಬದಲಿಸಬಲ್ಲ ಬುದ್ಧಿಮತ್ತೆಗಳನ್ನು ತಯಾರಿಸುತ್ತಿರುವ ಕಂಪನಿಯ ಮನುಷ್ಯರಿಗೂ, ಮನುಷ್ಯಸಹಜವಾದ ಅರಿಷಡ್ವರ್ಗಗಳನ್ನು ಗೆಲ್ಲಲಾಗಲಿಲ್ಲ. ತಂತ್ರಜ್ಞಾನ ಎಷ್ಟು ಮುಂದುವರೆದರೂ, ಒಬ್ಬರನ್ನೊಬ್ಬರು ಕಾಲೆಳೆಯುವುದನ್ನು ನಿಲ್ಲಿಸುವ, ಅಸೂಯೆ ದ್ವೇಷ ಮೋಹಗಳನ್ನು ಗೆಲ್ಲುವ ತಂತ್ರಜ್ಞಾನ ಬರಲಿಕ್ಕಿಲ್ಲ ಬಿಡಿ.

0 comments on “ಬೋರ್ಡ್ ಕಂಟ್ರೋಲ್ + ಆಲ್ಟ್’ಮನ್ + ಡಿಲೀಟ್ = ಓಪನ್ ಎಐ ಲಾಕೌಟ್

Leave a Reply

Your email address will not be published. Required fields are marked *