Monday, 29 April, 2024

ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 1

Share post

ಜಾಹೀರಾತುಗಳು ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಗಂತೂ ಜಾಹೀರಾತುಗಳು ಬಲು ಇಷ್ಟ ಹೌದಾದರೂ, ಜಾಹೀರಾತುಗಳನ್ನು ಮೆಚ್ಚುವ ಮನಸೋಲುವ ವಯಸ್ಕರಿಗೂ ಏನು ಕಮ್ಮಿಯಿಲ್ಲ. ಬಣ್ಣದ ಬಣ್ಣದ ಮಾತುಗಳು, ಈಡೇರುತ್ತೋ ಇಲ್ಲವೋ ಆದರೂ ಚಂದಚಂದದ ಭರವಸೆಗಳು, ನಮ್ಮ ಪ್ರಾಡಕ್ಟನ್ನು ಬಳಸದೇ ಹೋದರೆ ನಿಮ್ಮ ಜೀವನವೇ ವ್ಯರ್ಥ, ನಮ್ಮ ಎದುರಾಳಿಯ ಉತ್ಪನ್ನವನ್ನು ಬಳಸುತ್ತಿದ್ದೀರ ಎಂದಾದಲ್ಲಿ ನೀವೆಂತ ಮೂರ್ಖರು, ನಿಮ್ಮ ಜೀವನವನ್ನೇ ಬದಲಾಯಿಸಿಕೊಳ್ಳೋಕೆ ನಾವು ಎಂತಹಾ ಒಳ್ಳೆಯ ಅವಕಾಶ ಕೊಡ್ತಾ ಇದ್ದೀವಿ ಮುಂತಾದುವೆಲ್ಲವನ್ನೂ ಚಂದವಾಗಿ ಸಿಹಿಯಾಗಿ ಜಾಣತನದಲ್ಲಿ ಹೇಳುತ್ತಾ ಮರುಳುಮಾಡುವ ಜಾಹೀರಾತುಗಳು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗಗಳು. ಈ ಜಾಹೀರಾತುಗಳು ನಮ್ಮನ್ನು ಟೀವಿ, ಮೊಬೈಲ್, ಸುದ್ಧಿಪತ್ರಿಕೆ, ರೇಡಿಯೋ, ದಾರಿಬದಿಯ ಬ್ಯಾನರ್ರುಗಳಿಂದ ಹಿಡಿದು, ತಿಂದು ಕೈ ಒರೆಸಿಕೊಳ್ಳುವ ಟೀಷ್ಯೂ ಪೇಪರಿನವರೆಗೂ ಆಕ್ರಮಿಸಿಕೊಂಡಿವೆ.

 

ಈ ಜಾಹೀರಾತುಗಳನ್ನು ಸೃಷ್ಟಿಸುವುದು ಮಾರ್ಕೆಟಿಂಗಿನ ಕೆಲಸದ ಇಡೀ ಸರಣಿಯಲ್ಲಿ ಬಹುಷಃ ಅತ್ಯಂತ ತ್ರಾಸದಾಯಕ ಕೆಲಸ. ಯಾಕೆಂದರೆ ಈ ಜಾಹೀರಾತನ್ನು ಸೃಷ್ಟಿಸುತ್ತಿರುವುದು ಕಂಪನಿಯ ಮಾಲೀಕನಿಗಾಗಿಯಲ್ಲ, ಅಥವಾ ಉತ್ಪನ್ನವನ್ನು ಸೃಷ್ಟಿಸಿದ ಇಂಜಿನಿಯರನಿಗಾಗಿಯಲ್ಲ. ಬದಲಿಗೆ ಅದನ್ನು ಬಳಸುವ ಬಳಕೆದಾರನಿಗೆ. ನಮ್ಮ ಉತ್ಪನ್ನದಲ್ಲಿ ಎಂತೆಂತಾ ಒಳ್ಳೆಯ ಗುಣಲಕ್ಷಣಗಳಿವೆ ಅಂತಾ ಹೇಳೋದು ಜಾಹೀರಾತಿನ ಮುಖ್ಯ ಉದ್ದೇಶವಾದರೂ ಕೂಡಾ, ಬಳಕೆದಾರನಿಗೆ “ಇದು ನಿಮಗೆ ಯಾಕೆ ಬೇಕು?” ಎನ್ನುವುದನ್ನು ಮನದಟ್ಟು ಮಾಡಿಕೊಡುವುದು ಇನ್ನೂ ಮುಖ್ಯ. ನಮ್ಮ ಉತ್ಪನ್ನ ಯಾರಿಗಾಗಿ? ಈ ಉತ್ಪನ್ನ ಕೊಳ್ಳುವವರ್ಯಾರು ಎಂಬುದನ್ನು ಮೊದಲು ನಿರ್ಧರಿಸಬೇಕು? ಅದರ ನಂತರವೇ ಜಾಹೀರಾತಿನ ನಿರ್ಮಾಣ ಕಾರ್ಯ ಪ್ರಾರಂಭ.

ಇದನ್ನು ತಿಳಿಸಲಿಕ್ಕೆ ಮೊದಲಿಗೆ ಮಾರುಕಟ್ಟೆಯನ್ನು ಅಧ್ಯಯಿಸುವ ಅತ್ಯಂತ ತ್ರಾಸದಾಯಕವಾದ ಕೆಲಸವೊಂದನ್ನು ಮಾಡಬೇಕು. ನೂರಾರು ಪ್ರಶ್ನೆಗಳ ಮಾಲಿಕೆಯನ್ನು ಸಾವಿರಾರು ಜನರಮುಂದಿಟ್ಟು ಅವರ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಜನರ ಅಗತ್ಯ ಮತ್ತು ಮನೋಭಾವವನ್ನು ಅಧ್ಯಯಿಸಬೇಕು. ಇದರಿಂದ ಜಾಹೀರಾತಿನ ಮೂಲ ಉದ್ದೇಶ ಹಾಗೂ ಜಾಹೀರಾತಿನ ಗುರು ಯಾರ ಕಡೆಗಿರಬೇಕು ಎಂಬುದನ್ನು ನಿರ್ಧರಿಸಬಹುದು. ಮಾತ್ರವಲ್ಲ, ಜಾಹೀರಾತನ್ನು ಎಲ್ಲಿ ಪ್ರಸರಿಸಬೇಕು ಎಂಬುದೂ ನಿರ್ಧಾರವಾಗುತ್ತದೆ. ಕಾರುಮಾರುಕಟ್ಟೆಯ ದೈತ್ಯ ಜನರಲ್ ಮೋಟಾರ್ಸ್ ತನ್ನ ಕಾರುಗಳ ಮತ್ತು ಪಿಕ್ಪಪ್-ಟ್ರಕ್ಕುಗಳ ಬಗ್ಗೆ ಅಮೇರಿಕಾದ ಬಾಲಮಂಗಳ ಚಂಪಕದಂತಹಾ ಮಕ್ಕಳ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿತ್ತು. ಮಕ್ಕಳೆಲ್ಲಿ ಕಾರು ಕೊಳ್ತಾರೆ, ಅವರಪ್ಪ ಅಮ್ಮ ಅಲ್ಲವೇ ಎಂಬ ಪ್ರಶ್ನೆ ಮೂಡಬಹುದಲ್ಲವೇ. ಜಿಎಂ ಕಂಪನಿಯ ಈ ಜಾಹೀರಾತು ತಂತ್ರದಲ್ಲಿ ಎರಡು ಕುತೂಹಲಕಾರೀ ಅಂಶಗಳಿದ್ದವು. ಅವರ ಮಾರ್ಕೆಟ್ ರೀಸರ್ಚ್ ಪ್ರಕಾರ, ಬಹಳಷ್ಟು ಅಮೇರಿಕನ್ ಅಪ್ಪ ಅಮ್ಮಂದಿರಿಗೆ ಕುಟುಂಬಕ್ಕೊಂದು ಕಾರು ಕೊಳ್ಳುವಾಗ ಯಾವ ಕಾರು ಎಂಬ ನಿರ್ಧಾರದಲ್ಲಿ ಮಕ್ಕಳ ಅಭಿಪ್ರಾಯವೂ ಮುಖ್ಯವಾಗುತಿತ್ತು. ಆ ಕಾರಿನಲ್ಲಿ ಮಕ್ಕಳಿಗೆ ಯಾವ ರೀತಿಯ ವೈಶಿಷ್ಟ್ಯಗಳಿರಬೇಕು ಎಂಬುದೂ ಮುಖ್ಯವಾಗುತ್ತಿತ್ತು. ಎರಡನೆಯದಾಗಿ, ಎಳೆಯ ಮಕ್ಕಳ ಮನಸ್ಸಲ್ಲಿ ತಮ್ಮ ಬ್ರಾಂಡಿನ ಅಚ್ಚು ಮೂಡಿಸುವುದರಿಂದ, ಆ ಮಕ್ಕಳು ದೊಡ್ಡವರಾಗಿ ಕಾರು ಕೊಳ್ಳುವ ಹಂತಕ್ಕೆ ಬಂದಾಗ ಅವರ ಮನಸ್ಸಿನಲ್ಲಿ ಮೊದಲಿಗೆ ಮೂಡುತ್ತಿದ್ದದ್ದೇ ಜಿಎಂ ಹೆಸರು. ಕನ್ಸ್ಯೂಮರ್ ಅಡ್ಕೋಕಸಿ ಹಾಗೂ ಬ್ರಾಂಡ್ ರೀಕಾಲ್ ಎಂಬ ಈ ಎರಡು ಮಾರ್ಕೆಟೀಂಗ್ ತಂತ್ರಗಳ ಆಧಾರದ ಮೇಲೆ ಜಿಎಂ ಮಕ್ಕಳ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದದ್ದು.

ಅದಾದನಂತರ ಜನರ ಮನಸ್ಸಿಗೆ ನಾಟುವಂತಹಾ, ಆದರೆ ನಾಟಿಸುವ ಈ ಪ್ರಕ್ರಿಯೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತಹಾ ಸಂದೇಶವಿರುವ ದೃಶ್ಯಕಾವ್ಯವೊಂದನ್ನು ಸೃಷ್ಟಿಸುವ ಸೂಕ್ಷ್ಮ ಹಂತವನ್ನು ದಾಟಬೇಕು. ಅದಾದನಂತರ ಈ ಸಂದೇಶವನ್ನು ಯಾರ ಕೈಯಲ್ಲಿ ಹೇಳಿಸಬೇಕು, ಈ ದೃಶ್ಯಕಾವ್ಯದಲ್ಲಿ ಯಾರಿರಬೇಕು ಎಂಬ ಮಹತ್ವದ ನಿರ್ಧಾರವನ್ನೂ ತೆಗೆದುಕೊಳ್ಳಬೇಕು. ಕೊನೆಗೆ ಈ ಪ್ರಕ್ರಿಯೆ ಜಾಹೀರಾತನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಪ್ರಸಾರ ಮಾಡಬೇಕು ಎಂಬ ನಿರ್ಧಾರದಲ್ಲಿ ಕೊನೆಗೊಳ್ಳುತ್ತದೆ. ಅಮೇರಿಕಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ಫುಟ್ಬಾಲ್ ಲೀಗ್ (NFL) ಆಟದ ಫೈನಲ್ ದಿನವನ್ನು ಸೂಪರ್ ಬೌಲ್ ಸಂಡೇ ಎಂದು ಕರೆಯಲಾಗುತ್ತದೆ. ಆ ದಿನ ಸ್ಟೇಡಿಯಂನಲ್ಲಿ ಮತ್ತು ಟೀವಿಯಲ್ಲಿ ಆಟ ನೋಡುವವರ ಸಂಖ್ಯೆ ಬೇರೆಲ್ಲಾ ದಿನಗಳಿಗಳಿಗಿಂತಾ ಹೆಚ್ಚು. ಹಾಗಾಗಿ ಈ ದಿನದ ಜಾಹೀರಾತು ಸ್ಲಾಟ್’ಗೆ ತೀರಾ ಹೆಚ್ಚು ಬೇಡಿಕೆ. ಮಿಲಿಯನ್ನುಗಟ್ಟಲೇ ಜನರನ್ನು ಒಂದೇ ಕ್ಷಣಕ್ಕೆ ಗ್ಯಾರಂಟೀಯಾಗಿ ತಲುಪಬಹುದಾದ ಅಂದಿನ ಸ್ಲಾಟ್’ಗಾಗಿ ಜಾಹೀರಾತು ಕಂಪನಿಗಳ ನಡುವೆ ಯುದ್ಧವೇ ನಡೆಯುತ್ತದೆ. ಕಳೆದವರ್ಷದ ಸೂಪರ್ ಬೌಲ್ ಭಾನುವಾರದಂದು ತನ್ನ ಅಲೆಕ್ಸಾ ಧ್ಯನಿ ಸಹಾಯಕ ತಂತ್ರಾಂಶದ 90 ಸೆಕೆಂಡಿನ ಜಾಹೀರಾತಿಗಾಗಿ ಅಮೆಜಾನ್ 22 ದಶಲಕ್ಷ ಡಾಲರ್ ಖರ್ಚುಮಾಡಿದೆ. ಇಡೀ ಸೂಪರ್ ಬೌಲ್ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ಜಾಹೀರಾತು!

 

ಸೂಪರ್ ಬೌಲ್ ಜಾಹೀರಾತುಗಳು ತಮ್ಮ ದುಬಾರಿ ಖರ್ಚಿಗೆ ಮಾತ್ರವಲ್ಲ, ಜಾಹೀರಾತು ಕ್ಷೇತ್ರದಲ್ಲೇ ತಮ್ಮ ಹೊಸತನ ಮತ್ತು ಶ್ರೇಷ್ಠತೆಗೆ ಹೆಸರೂ ಪಡೆದಿವೆ. ಅದರ ಪ್ರಸಾರದ ಸಮಯಕ್ಕೆ ಕಂಪನಿಗೆ NFLಗೆ ಎಷ್ಟು ಖರ್ಚು ಮಾಡುತ್ತವೋ, ಅದರ ನಿರ್ಮಾಣಕ್ಕೂ ಅಷ್ಟೇ ಖರ್ಚು ಮಾಡುತ್ತವೆ. 1984ರಲ್ಲಿ ಆಪಲ್ ತನ್ನ ಪ್ರಸಿದ್ಧ ಮಾಕಿಂತಾಷ್ ಕಂಪ್ಯೂಟರ್ ಜಾಹೀರಾತಿಗೂ ಇದೇ ಸೂಪರ್ ಬೌಲ್ ದಿನವನ್ನೇ ಆಯ್ಕೆಮಾಡಿಕೊಂಡಿತ್ತು. ಆ ಜಾಹೀರಾತನ್ನು ನಿರ್ದೇಶಿಸಿದ್ದು ಪ್ರಖ್ಯಾತ ಹಾಲಿವುಡ್ ಸಿನಿಮಾ ನಿರ್ದೇಶಕ ರಿಡ್ಲಿ ಸ್ಕಾಟ್. ದೆಸೆಯನ್ನೇ ಬದಲಾಯಿಸುವ ಜಾಹೀರಾತು ಎಂದಾಕ್ಷಣ ನನಗೆ ನೆನಪಾಗುವುದು 90ರ ದಶಕದ ಭಾರತದಲ್ಲಿ ಬಂದ ಫಿಡೋ-ಡೀಡೋ ಎಂಬ ಕಡ್ಡಿ ಮನುಷ್ಯ ನಿಮಗೆ ನೆನಪಿರಬಹುದು. ಈ ಕಡ್ಡಿ ಮನುಷ್ಯನನ್ನು ಸೃಷ್ಟಿಸಿದ್ದು ಅಮೇರಿಕನ್ನರಾದರೂ, ಭಾರತದಲ್ಲಿ ಅಳಿವಿನಂಚಿನಲ್ಲಿದ್ದ ಪೆಪ್ಸಿ ಕಂಪನಿಯ 7 ಅಪ್’ಗೆ ಮರುಹುಟ್ಟು ನೀಡಿದ್ದೇ ಈ ಫಿಡೋ-ಡಿಡೋ. ಭಾಷೆ, ಜನಾಂಗ, ದೈಹಿಕ ಚಹರೆ ಯಾವುದರೂ ಹಂಗೂ ಇಲ್ಲದ ಫಿಡೋ ಡೀಡೋ ವಿಶ್ವದಾದ್ಯಂತ ಪೆಪ್ಸಿಯ ಬೇರೆ ಬೇರೆ ಉತ್ಪನ್ನಗಳಿಗೆ ಜೀವತುಂಬಿತು.

ಭಾರತೀಯ ಜಾಹೀರಾತು ಕ್ಷೇತ್ರದ ಮಾತನ್ನಾಡುವಾಗ ಕೆಲವೊಂದನ್ನು ನಾವು ನೆನಪಿಸಿಕೊಳ್ಳಲೇಬೇಕು. ನೆನಪಿಸಿಕೊಳ್ಳುವುದು ಮಾತ್ರವಲ್ಲ, ಅವನ್ನು ಮರೆಯುವುದೂ ಸಾಧ್ಯವಿಲ್ಲ. ಭಾರತೀಯ ಗ್ರಾಹಕರ ನೆನಪಿಲಿನಲ್ಲಿ ಸದಾ ಉಳಿಯುವ ಕೆಲವೊಂದು ಜಾಹೀರಾತುಗಳಲ್ಲಿ ಲಿರಿಲ್ ಸೋಪ್ ಮೊದಲ ಹೆಸರು ಪಡೆಯುತ್ತದೆ. ಅಲೆಕ್ ಪದಮ್ಸೀ ಮತ್ತು ನೀನಾ ಮರ್ಚೆಂಟ್ ಸೃಷ್ಟಿಸಿದ ಈ ಜಾಹೀರಾತು ಹಿಂದೂಸ್ಥಾನ್ ಯೂನಿಲಿವರ್’ನ (ಎಂದಿನ ಯೂನಿಲಿವರ್) ಬ್ರಾಂಡ್ ಅನ್ನು ಗಟ್ಟಿಮಾಡಿದ್ದು ಮಾತ್ರವಲ್ಲದೇ, “ಲಿರಿಲ್ ಹುಡುಗಿ” ಎಂಬ ಪ್ರತ್ಯೇಕ ಬ್ರಾಂಡ್ ಅನ್ನೇ ಸೃಷ್ಟಿಸಿತು. ಮೊತ್ತಮೊದಲ ಲಿರಿಲ್ ಹುಡುಗಿಯಾಗಿ ಕಂಡುಬಂದ ಕಾರೆನ್ ಲೂನೆಲ್ ಪ್ರಸಿದ್ಧಿಗೇರಿದ್ದು ಮಾತ್ರವಲ್ಲದೇ, ನೂರಾರು ಸ್ತೀ ಮಾಡಲ್ಲುಗಳು ಮುಂದಿನ ಲಿರಿಲ್ ಗರ್ಲ್ ಆಗಲು ಬಯಸುವಂತಾಯ್ತು. ಲಿರಿಲ್ ಜಾಹೀರಾತಿನಲ್ಲಿ ಕಂಡುಬಂದರೆ ನಮ್ಮ ವೃತ್ತಿಜೀವನವೇ ಮುಂದಿನ ಹಂತಕ್ಕೆ ಮೇಲೇರುತ್ತದೆ ಎಂಬ ನಂಬಿಕೆ ಸೃಷ್ಟಿಯಾಯ್ತು. ಪ್ರೀತಿ ಝೀಂಟಾ ಕೂಡಾ ಲಿರಿಲ್ ಹುಡುಗಿಯಾಗಿಯೇ ಪ್ರಸಿದ್ಧಿ ಪಡೆದು ಬಾಲಿವುಡ್ಡಿಗೆ ಕಾಲಿಟ್ಟದ್ದು. ಮುಂದೆ ಪೂಜಾ ಬಾತ್ರಾ, ಹೃಷಿತಾ ಭಟ್, ದೀಪಿಕಾ ಪಡುಕೋಣೆ ಕೂಡಾ ಇದೇ ಪ್ರಸಿದ್ಧಿಯನ್ನು ಪುನರಾವರ್ತಿಸಿದರು.

 

ಇನ್ನೊಂದು ಸದಾ ನೆನಪಿನಲ್ಲುಳಿಯುವ ಜಾಹೀರಾತೆಂದರೆ ಕ್ಯಾಡ್’ಬರೀಯ ಕ್ರಿಕೆಟ್ ಜಾಹೀರಾತು. ಹುಡುಗಿಯೊಬ್ಬಳು, ತನ್ನ ಗೆಳೆಯ ಕ್ರಿಕೆಟ್ ಬ್ಯಾಟ್ಸ್ಮನ್ ಸಿಕ್ಸರ್ ಹೊಡೆದು ಶತಕ ಪೂರೈಸಿದ ಕೂಡಲೇ, ಕಾವಲಿಗೆ ನಿಂತ ಪೋಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಆಟದಮೈದಾನಕ್ಕೆ ಧುಮುಕಿ ಸಂಭ್ರಮವನ್ನು ಆಚರಿಸುವ ಜಾಹೀರಾತು ಕ್ಯಾಡ್’ಬರಿಯನ್ನು ಕೇವಲ ಜಾಕಲೇಟು ಮಾತ್ರವಲ್ಲ, ಭಾರತದಲ್ಲಿ ಸಂಭ್ರಮಾಚರಣೆಯ ಭಾಗವಾಗಿ ಮೇಲೇರಿಸಿತು. ಪರಸ್ಪರ ಭೇಟಿಯಾಗುವಾಗ ಕ್ಯಾಡ್’ಬರಿ ಒಂದನ್ನು ಖರೀಧಿಸುವ ಪರಿಪಾಟ ಜನರಿಗೇ ಗೊತ್ತಿಲ್ಲದಂತೆ ಬೆಳೆಯಿತು. ಈ ಜಾಹೀರಾತನ್ನೇ ಕ್ಯಾಡ್’ಬರೀ 2000ದ ಮೊದಲ ದಶಕದಲ್ಲಿ “ಪಪ್ಪೂ ಪಾಸ್ ಹೋಗಯಾ” ಹಾಗೂ “ಕುಛ್ ಮೀಠಾ ಹೋ ಜಾಯೆ” ಎಂದು ಮುಂದುವರಿಸಿ, ಸೆಲಬ್ರೇಷನ್ಸ್ ಎಂಬ ಉತ್ಪನ್ನದ ಸಾಲನ್ನೂ ಪ್ರಾರಂಭಿಸಿ, ಭಾರತೀಯರ ಹಬ್ಬ ಮತ್ತಿತರ ಶುಭದಿನಗಳಲ್ಲಿ ಸಿಹಿಹಂಚುವ ಸಂಪ್ರದಾಯಕ್ಕೂ ಕಾಲಿಟ್ಟು, ತನ್ನ ಮಾರುಕಟ್ಟೆಯ ಅಧಿಪತ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿತು.

 

ನಾವೆಲ್ಲರೂ ನೆನಪಿಟ್ಟುಕೊಳ್ಳಬಹುದಾದ ಇನ್ನೆರಡು ಜಾಹೀರಾತುಗಳೆಂದರೆ ಹಚ್ ಕಂಪನಿಯ ನಾಯಿಯದ್ದು ಹಾಗೂ ಇದೇ ಹಚ್ ಮುಂದೆ ವೋಡಾಫೋನ್ ಆದಾಗ ಬಂದ ಝೂಝೂಗಳದ್ದು. ಎಲ್ಲಿ ಹೋದರೂ ನಮ್ಮ ನೆಟ್ವರ್ಕ್ ನಿಮ್ಮನ್ನು ನಿಯತ್ತಿನ ನಾಯಿಯಂತೆ ಹಿಂಬಾಲಿಸುತ್ತದೆ ಎಂಬುದನ್ನು ಹೇಳಿದ ಜಾಹೀರಾತಿನ ನಂತರ ಹಚ್’ನ ಬ್ರಾಂಡ್ ಪ್ರಸಿದ್ಧಿಯಲ್ಲಿ ಮೇಲೀರಿದ್ದೂ ಅಲ್ಲದೇ, ಆ ಜಾಹೀರಾತಿನಲ್ಲಿ ಬಂದ ಪಗ್ ತಳಿಯ ನಾಯಿಯ ದರವನ್ನೂ ಆಕಾಶಕ್ಕೇರಿಸಿತ್ತು. ಐಪಿಎಲ್’ನ ಎರಡನೇ ಸೀಸನ್ ಸಮಯದಲ್ಲಿ ಬಂದ ಝೂಝೂಗಳಂತೂ ವೋಡಾಫೋನ್ ಅನ್ನು ಹಿಂದೆಂದಿಗೆಂತಲೂ ಜನಪ್ರಿಯಗೊಳಿಸಿದವು. ವೊಡಾಫೋನ್ ಆ ವರ್ಷ ಝೂಝೂ ಪಾತ್ರಗಳ ಕೀಚೈನ್ ಟೀಶರ್ಟ್ ಮಗ್ ಇತ್ಯಾದಿಗಳ ಮಾರಾಟದ ಲೈಸಿನ್ಸಿನಿಂದಲೇ ಒಂದಷ್ಟು ಕೋಟಿ ದುಡಿಯಿತು. ಕುತೂಹಲಕಾರೀ ವಿಷಯವೆಂದರೆ ಈ ಎರಡೂ ಜಾಹೀರಾತುಗಳು ಬರುವ ಮುನ್ನ ಹಚ್ ಮತ್ತು ವೊಡಾಫೋನ್ ಕಂಪನಿಗಳು ತೀರಾ ಆರ್ಥಿಕ ಸಂಕಷ್ಟದಲ್ಲಿದ್ದವು. ಈ  ಜಾಹೀರಾತುಗಳಿಂದ ಎರಡೂ ಕಂಪನಿಗಳಿಗೆ ಹೊಸಜೀವ ಸಿಕ್ಕಿತು. ಈ ಎರಡೂ ಜಾಹೀರಾತುಗಳ ಕಲ್ಪನೆ ಬಂದದ್ದು ಓಗಿಲ್ವಿ ಅಂಡ್ ಮ್ಯಾಥರ್ಸ್ ಎಂಬ ಜಾಹೀರಾತು ಕಂಪನಿಯಿಂದ. ಈ ಎರಡರ ಮೂಲಕರ್ತೃವೂ ರಾಜೀವ್ ರಾವ್ ಎಂಬ ಒಬ್ಬನೇ ವ್ಯಕ್ತಿ. ಆ ಹಾಡುಗಳು, ಆ ನಾಯಿ, ಝೂಝೂ ಎಂಬ ಹೆಸರು, ಅವುಗಳ ರೇಖಾಚಿತ್ರ, ಕೈಕಾಲು ಆಡಿಸುವಾಗ ಎಲ್ಲೂ ಮಡಿಕೆ ಬರದಂತೆ ಯಾವ ಮೆಟೀರಿಯಲ್ಲಿನಿಂದ ಮಾಡಿದ ಪೋಷಾಕು ಧರಿಸಬೇಕು ಎಲ್ಲದ ಹಿಂದೆಯೂ ಬಹಳಷ್ಟು ಸಂಶೋಧನೆ ಮತ್ತು ಅಧ್ಯಯನ ನಡೆಸಿ ರಾಜೀವ್ ಈ ಜಾಹೀರಾತುಗಳನ್ನು ಮಾಡಿದ್ದರು.

ಏನನ್ನೂ ಹೇಳದೇ ಎಲ್ಲವನ್ನೂ ಹೇಳುವ ಡ್ಯೂರೆಕ್ಸ್ ಕಂಪನಿಗ ಕಾಂಡೋಂ ಜಾಹೀರಾತುಗಳನ್ನು, ಭಾರತದಲ್ಲಿ ಕಾಮಸೂತ್ರ ಎಂಬ ಬ್ರಾಂಡ್ ಪ್ರಯತ್ನಿಸಿತಾದರೂ, ಅಷ್ಟೇನೂ ಜನಪ್ರಿಯವಾಗಲಿಲ್ಲ. ಹಾಗಂತಾ ಜಾಹೀರಾತುಗಳು ಚಂದವಿರಲಿಲ್ಲ ಅಂತಲ್ಲ. ಭಾರತೀಯ ಸಮಾಜವೇ ಆಗಿನ್ನೂ ಕಾಂಡೋಂ ಎಂಬ ಪದವನ್ನು ಅಸ್ಪೃಷ್ಯವಾಗಿರಿಸಿತ್ತು. ವಿಸ್ಪರ್ ಮುಂತಾದ ಮಹಿಳಾ ನೈರ್ಮಲ್ಯ ಉತ್ಪನ್ನಗಳದ್ದೂ ಇದೇ ಕತೆ. ಆ ಜಾಹೀರಾತುಗಳಲ್ಲಿ ಇದ್ಯಾವ ನೀಲಿದ್ರವದ ಬಗ್ಗೆ ಮಾತನಾಡುತ್ತಿದ್ದಾರೆ ಅಂತಾ 1990-2000ದ ದಶಕದ ಭಾರತದ ಗಂಡುಹುಡಗರೆಲ್ಲರೂ ತಲೆಕೆಡಿಸಿಕೊಂಡಿದ್ದೇ ಆಗಿತ್ತು.

 

ಕೊರಿಯನ್ ಮತ್ತು ಥಾಯ್ ಜಾಹೀರಾತುಗಳಲ್ಲಿರುವ ಭಾವುಕತೆ, ಹಾಸ್ಯ, ಮನಮುಟ್ಟುವ ಸಂದೇಶ, ಕೆಲವೊಮ್ಮೆ ಕೊನೆಯ ಸೆಕೆಂಡಿನವರೆಗೂ ಯಾವುದರ ಜಾಹೀರಾತು ಇದು ಗೊತ್ತಾಗದೇ ಕಾಡೂವ ಗೊಂದಲ ಎಲ್ಲವೂ ಅತ್ಯುತ್ಕೃಷ್ಟ ಅಂತಲೇ ನನ್ನ ಭಾವನೆ. ಅದನ್ನು ನೋಡಿಯೇ ಅನುಭವಿಸಬೇಕು. ಈ ವಿಷಯಗಳ ಬಗ್ಗೆ ಬಹುಷಃ ಪುಟಗಟ್ಟಲೇ ಬರೆಯಬಹುದು. ಜಾಹೀರಾತು ಎನ್ನುವುದು ಅತ್ಯಂತ ಸೂಕ್ಷ್ಮ ವಿಷಯ. ಕಂಪನಿಗಳಿಗೆ ಮಾತ್ರವಲ್ಲ, ಆ ಉತ್ಪನ್ನವನ್ನು ಬಳಸುವ ಗ್ರಾಹಕರಿಗೂ, ಉತ್ಪನ್ನನ್ನು ಬಳಸದಿದ್ದರೂ ಜಾಹೀರಾತನ್ನು ನೋಡುವ ಸಮಾಜಕ್ಕೂ ಕೂಡಾ. ಕಂಪನಿಗಳ ನಡುವೆ ನಡೆಯುವ ಜಾಹೀರಾತು ಸಮರ ಕೆಲವೊಮ್ಮೆ ಸಮುದಾಯಗಳ ನಡುವೆಯ ಕದನಾಗಿಯೂ ರೂಪತಾಳುತ್ತದೆ. ಇಂತಹ ಕೆಲವು ಉದಾಹರಣೆಗಳ ಬಗ್ಗೆ ಮುಂದಿನವಾರ ತಿಳಿಯೋಣ.

0 comments on “ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 1

Leave a Reply

Your email address will not be published. Required fields are marked *