Saturday, 27 April, 2024

ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 2

Share post

ಜಾಹೀರಾತುಗಳ ಮೂಲೋದ್ದೇಶ ಉತ್ಪನ್ನಗಳ ಮಾರಾಟವೇ ಆಗಿದ್ದರೂ, ಕಂಪನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ ಇರಾದೆಯೇ ಇದ್ದರೂ, ಮನುಷ್ಯರು ಮಾಡುವ ಕೆಲಸಗಳಲ್ಲಿ ತಪ್ಪಾಗಲೇ ಬೇಕಲ್ಲ. ಮತ್ತು ಆಗಿದೆ ಕೂಡಾ. ಜಾಹೀರಾತುಗಳ ವಿಷಯದಲ್ಲಿ ನೂರಾರು ತಪ್ಪುಗಳಾಗಿವೆ. ಕೆಲವೆಡೆ ನಿಜಕ್ಕೂ ತಪ್ಪು ಸಂದೇಶವೇ ಹೋಗಿ, ಜನರು ಕೋಪಗೊಂಡಿದ್ದಾರೆ. ಕೆಲವೆಡೆ ಉತ್ಪನ್ನಗಳನ್ನೇ ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ, ಮತ್ತೆ ಕೆಲವೆಡೆ ಜಾಹೀರಾತಿನ ಸಂದೇಶ ತಪ್ಪು ಅರ್ಥಕ್ಕೆ ಎಡೆಮಾಡಿಕೊಟ್ಟು ನಿರ್ಧಿಷ್ಟ ಸಮುದಾಯಗಳು ಕಂಪನಿಗಳು ಹಾಗೂ ಉತ್ಪನ್ನಗಳು ಗ್ರಾಹಕರ ಕೋಪಕ್ಕೆ ತುತ್ತಾಗಿವೆ. ಜಾಹೀರಾತಿನಿಂದಾಗಿ ಇದುವರೆಗೂ ದೇಶಗಳ ನಡುವೆ ಯುದ್ಧಗಳು ಶುರುವಾಗಿಲ್ಲವಾದರೂ, ಯುದ್ಧಕಾಲದ ಜಾಹೀರಾತುಗಳನ್ನುಪಯೋಗಿಸಿಕೊಂಡು ದೇಶಗಳು ಪರಸ್ಪರ ಚುಚ್ಚಿಕೊಂಡಿವೆ. ಪಾಕಿಸ್ಥಾನ ದುರ್ಬಲವಾಗಿರುವ ಈ ಕಾಲದಲ್ಲೇ ಫಾಗ್ ಜಾಹೀರಾತುಗಳು ಯಾವುದೇ ವಿವಾದವಿಲ್ಲದೇ ಪ್ರಸಾರವಾಗಲು ಸಾಧ್ಯ. ಹತ್ತುವರ್ಷದ ಹಿಂದೆ ಇಂತಹುದೊಂದು ಜಾಹೀರಾತನ್ನು ನಿಲ್ಲಿಸುವಂತೆ ಸರ್ಕಾರೀ ಆದೇಶಗಳೇ ಬರಬಹುದಾಗಿದ್ದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

 

ಜಾಹೀರಾತುಗಳನ್ನು ವಿನ್ಯಾಸಗೊಳಿಸುವಾಗ ಗ್ರಾಹಕರ ಮನೋಸ್ಥಿತಿ ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮೂಲಭೂತ ಅಗತ್ಯ. ಮಾರ್ಕೆಂಟಿಂಗ್ ವಿಚಾರಕ್ಕೆ ಬಂದರೆ Consumer behavior ಎನ್ನುವಂತದ್ದು ಸದಾ ಬದಲಾಗುವ ಮ್ಯಾಕ್ರೋ ಅಂಶ. ಕಾರು, ಬೈಕು ಮುಂತಾದ ಉತ್ಪನ್ನಗಳ ವಿ‍ಚಾರದಲ್ಲಿ ಇದು ಆರು ತಿಂಗಳಿಗೊಮ್ಮೆ ಬದಲಾದರೆ, ಚಿಲ್ಲರೆ ವ್ಯಾಪಾರ ಅಂದರೆ FMCG ಉತ್ಪನ್ನಗಳ ವಿಚಾರದಲ್ಲಿ ಕದಿನೈದು ದಿನಕ್ಕೊಮ್ಮೆ ಬದಲಾಗಬಹುದು. ಕಂಪನಿಗಳು ಜಾಹೀರಾತಿನ ಕಾಲ್ಪನಿಕ ವಿಚಾರ ಮುಗಿಸಿ, ಶೂಟಿಂಗ್ ಮುಗಿಸಿ, ಟಿವಿ ಪೇಪರುಗಳಲ್ಲಿ ಬಿಡುಗಡೆ ಮಾಡುವಷ್ಟರಲ್ಲಿ ಜನರ ಮನಸ್ಸು ಬದಲಾಗಿರುವ ಸಾಧ್ಯತೆಯಿರುತ್ತದೆ.

 

ಗ್ರಾಹಕರಿಂದ ವ್ಯಾಪಕವಾಗಿ ತಪ್ಪಾಗಿ ಅರ್ಥೈಸಲ್ಪಟ್ಟ ಜಾಹೀರಾತಿನ ಆರಂಭಿಕ ನಿದರ್ಶನಗಳಲ್ಲಿ ಬಹುಷಃ 1992ರ ಹೂವರ್ ಕಂಪನಿಗ ಜಾಹೀರಾತನ್ನು ಹೆಸರಿಸಬಹುದು. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಗೃಹಬಳಕೆಯ ಉತ್ಪನ್ನಗಳನ್ನು ತಯಾರಿಸುವ ಹೂವರ್ ಎಂಬ ಬ್ರಿಟಿಷ್ ಕಂಪನಿ “ನಮ್ಮ ಕಂಪನಿಯ ಉತ್ಪನ್ನಗಳನ್ನು ಖರೀದಿಸಿದವರಿಗೆ ಅಮೇರಿಕಕ್ಕೆ ಹೋಗಿಬರಬಲ್ಲ ಎರಡು ಉಚಿತ ವಿಮಾನ ಟೀಕೇಟುಗಳನ್ನು ಘೋಷಿಸಿತ್ತು. ಅವರಿಟ್ಟಿದ್ದು ಎರಡೇ ನಿಯಮ. ಮೊದಲನೆಯದು, ಉತ್ಪನ್ನ ಹೂವರ್ನದ್ದೇ ಆಗಿರಬೇಕು. ಎರಡನೆಯದು, ನಿಮ್ಮ ಖರೀದಿ ನೂರು ಪೌಂಡಿಗಿಂತಾ ಹೆಚ್ಚಿರಬೇಕು. 1990ರ ಆರ್ಥಿಕ ಕುಸಿತದ ಕಾರಣದಿಂದ ಮಾರಾಟ ಕಡಿಮೆಯಾಗಿದ್ದೆ ಹೂವರ್ ಕಂಪನಿಯ ಅಂದಾಜೇನಿತ್ತು ಅಂದ್ರೆ, ಜನ ನೂರು ಪೌಂಡಿನ ಖರೀದಿ ಮಾಡಿದರೂ,  ಅಮೇರಿಕದ ಹಾರಾಟಕ್ಕೆ ತುಂಬಬೇಕಿದ್ದ ಫಾರಂ, ಅಲ್ಲಿಗೆ ಹೋದಾಗ ಆಗಬಹುದಾದ ಖರ್ಚು ಇತ್ಯಾದಿಗಳಿಂದಾಗಿ ಹೆಚ್ಚಿನ ಜನ ಈ ಟಿಕೇಟೀಗಾಗಿ ಹಾತೊರೆಯುವುದಿಲ್ಲ. ಮಾರಾಟವಾಗದೇ ಉಳಿದಿರುವ ನಮ್ಮ ದೊಡ್ಡಮೊತ್ತದ ಉತ್ಪನ್ನಗಳೂ ಉಗ್ರಾಣದಿಂದ ಹೊರಬರಲಿವೆ, ಎಂದಾಗಿತ್ತು. ಆದರೆ ಜನ ಅದನ್ನು ಅರ್ಥೈಸಿಕೊಂಡಿದ್ದೇ ಬೇರೆ ರೀತಿ. “ಸಣ್ಣ ಸಣ್ಣದ್ದು ನಾಲ್ಕೈದು ಐಟಂ ಕೊಂಡರೂ ಕೂಡಾ ನೂರು ಪೌಂಡ್ ಬಿಲ್ ಆಗುತ್ತೆ, ಸುಮಾರು ಆರುನೂರು ಪೌಂಡಿನ ಅಮೇರಿಕಾ ಟೂರಿನ ಟಿಕೇಟ್ ಸಿಗುತ್ತೆ” ಎಂದು ಮುಗಿಬಿದ್ದ ಜನರನ್ನು ನೋಡಿ ಹೂವರ್ ಗಾಬರಿ ಬಿದ್ದಿತು. ಹೆಚ್ಚು ಲಾಭ ತರುವ ಫ್ರಿಡ್ಜ್, ವಾಷಿಂಗ್ ಮಷೀನ್ ವ್ಯಾಪಾರ ಹೆಚ್ಚುತ್ತೆ ಅಂದುಕೊಂಡಿದ್ದ ತಂತ್ರ ಉಲ್ಟಾ ಹೊಡೆದು ಬರೀ ಹೇರ್ ಡ್ರೆಯರ್ರು, ಶೇವರ್, ವಾಕ್ಯೂಂ ಕ್ಲೀನರ್ ತರಹದ ಕಡಿಮೆ ಲಾಭದ ಉತ್ಪನ್ನಗಳಷ್ಟೇ ಮಾರಾಟವಾಗಿದ್ದು ಮಾತ್ರವಲ್ಲದೇ, ಸಾವಿರಾರು ಜನರ ಟಿಕೇಟ್ ಬೇಡಿಕೆಬಂದು ಕೂತಿದೆ! ಮೂರೇ ದಿನದಲ್ಲಿ ಈ ಆಫರ್ ಅನ್ನು ನಿಲ್ಲಿಸಿದರೂ ಕೂಡಾ, ಮಿಲಿಯನ್ನುಗಟ್ಟಲೇ ವೆಚ್ಚದ ಟಿಕೇಟ್ ಅರ್ಜಿಗಳು ಬಂದು ಬಿದ್ದಾಗಿತ್ತು. ಟಿಕೇಟಿಗಾಗಿ ಕಾದು ಕೂತವರಿಂದ ಒಂದೇ ತಿಂಗಳಲ್ಲಿ ಕಂಪನಿಗೆ ಸೂರಾರು ಲೀಗಲ್ ನೋಟೀಸುಗಳು ಜಾರಿಯಾಯ್ತು. ಇಂತಹುದೊಂದು “ಮೋಸದ ಜಾಹೀರಾತು” ಕೊಟ್ಟೀದ್ದಕ್ಕಾಗಿ, ಹೂವರ್ ಕಂಪನಿಗಿದ್ದ ರಾಯಲ್ ವಾರಂಟ್ (ಬ್ರಿಟೀಷ್ ಅರಮನೆಗೆ ಉತ್ಪನ್ನಗಳನ್ನು ಪೂರೈಸುವ ಕಾಂಟ್ರಾಕ್ಟ್) ರದ್ದಾಯ್ತು. ಕೆಲವೇ ಸಮಯದಲ್ಲಿ ಹೂವರ್ ತನ್ನ ಯೂರೋಪ್ ವಹಿವಾಟನ್ನು ತನ್ನ ಸ್ಪರ್ಥಿ ಕಂಪನಿಯಾದ ಕ್ಯಾಂಡಿಗೆ ಮಾರಿತು. ಒಂದಿಡೀ ವ್ಯಾಪಾರ ಘಟಕವನ್ನೇ ಮುಳುಗಿಸಲು ಒಂದೇ ಒಂದು ಜಾಹೀರಾತು ಸಾಕಾಯ್ತು.

ಆರ್ಥಿಕ ನಷ್ಟದ ತಲೆಬಿಸಿ ಒಂದು ರೀತಿಯಾದ್ದಾದರೆ, ಸಾರ್ವಜನಿಕ ಅವಮಾನ ಇನ್ನೊಂದು ತರಹದ್ದು. ಹಣವನ್ನು ಇವತ್ತಲ್ಲ ನಾಳೆ ಹೇಗೋ ಇನ್ನೊಂದು ವ್ಯಾಪಾರದಿಂದ ಗಳಿಸಬಹುದು. ಆದರೆ ಬ್ರಾಂಡ್’ಗೆ ಆಗುವ ಧಕ್ಕೆಯನ್ನು ಸರಿಪಡಿಸುವುದು ಬಹಳ ಕಷ್ಟ. ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುವುದಲ್ಲದೇ, ವ್ಯಾಪಾರಕ್ಕೂ ಪೂರ್ತಿ ಹೊಡೆತ. ಎರಡನ್ನೂ ಸರಿದೂಗಿಸುವಷ್ಟರಲ್ಲಿ ಆರ್ಥಿಕ ಮತ್ತು ಮಾನಸಿಕ ಹೊಡೆತ, ಜೊತೆಗೇ ಸ್ಪರ್ಧಿಗಳು ಈ ಅವಕಾಶವನ್ನೇ ಬಳಸಿಕೊಂಡು ಇಡೀ ಕಂಪನಿಯನ್ನೇ ಮಟ್ಟಹಾಕಲಿಕ್ಕೂ ತಯಾರಾಗಿರ್ತಾರೆ. ಯಾವುದೋ ಒಂದು ವ್ಯವಹಾರದಲ್ಲಾದ ಗಲಾಟೆ ಬೇರೆ ಕಡೆಗೂ ಹಬ್ಬುತ್ತದೆ. ಹೆಚ್ ಅಂಡ್ ಎಂ ಎಂಬ ವಸ್ತ್ರೋತ್ಪನ್ನಗಳ ಕಂಪನಿಯ ಜಾಹೀರಾತೊಂದದಲ್ಲಿ ರೂಪದರ್ಶಿಯಾಗಿದ್ದ ಆಫ್ರಿಕನ್ ಅಮೇರಿಕನ್ ಮಗುವಿನ ಚಿತ್ರದ ಕೆಳಗೆ “Coolest monkey in the jungle” ಎಂಬ ಅಡಿಬರಹ ಕೊಟ್ಟಿದ್ದಕ್ಕೆ ಜನ ಜನಾಂಗೀಯ ನಿಂದನೆಯ ಆರೋಪ ಮಾಡಿ ಸಿಟ್ಟಿಗೆದ್ದು ಹೆಚ್ ಅಂಡ್ ಎಂ ಮಾತ್ರವಲ್ಲ, ಅವರ ಬೇರೆ ಬ್ರಾಂಡುಗಳಾದ ಸಿಓಎಸ್ ಮತ್ತು ವೀಕ್-ಡೇಗಳನ್ನೂ ಜನ ಬಹಿಷ್ಕಾರ ಹಾಕಿದರು.

 

ನಿಮ್ಮ ಕಂಪನಿಯ ಉತ್ಪನ್ನವನ್ನು ಪ್ರತಿನಿಧಿಸುವ ನಟ, ಇನ್ಯಾವುದೋ ಉತ್ಪನ್ನದ ಜಾಹೀರಾತಿನಲ್ಲಿ ಏನೋ ತಪ್ಪು ಮಾತನಾಡಿದರೆ, ನಿಮಗೂ ಕಷ್ಟ ಕಟ್ಟಿಟ್ಟದ್ದೇ! ಕೆಲ ವರ್ಷಗಳ ಹಿಂದೆ ಅಮೀರ್ ಖಾನನಿಗೆ ಭಾರತದಲ್ಲಿ ಸುರಕ್ಷಿತವೆನಿಸುತ್ತಿಲ್ಲ ಎಂದಾಗ ಆದ ಗಲಾಟೆ ನೆನಪಿದೆಯೇ? ಸ್ನಾಪ್-ಡೀಲ್ ಕಂಪನಿಯ ಜಾಹೀರಾತಿಗಾಗಿ ಬಂದಿದ್ದ ಅಮೀರ್ ಅದೇ ಪ್ರೆಸ್ ಮಾತುಕತೆಯಲ್ಲಿ ಭಾರತದ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾತಿಗಿಳಿದು ಕೊಟ್ಟ ಕೆಲ ಹೇಳಿಕೆಗಳಿಂದಾಗಿ ಸ್ನಾಪ್-ಡೀಲ್ ಮಾತ್ರವಲ್ಲ ಟಾಟಾ ಸ್ಕೈ, ಸ್ಯಾಮ್ಸಂಗ್, ಕೋಕಾ ಕೋಲಾ, ಗೋದ್ರೇಜ್ ಇತ್ಯಾದಿಯಾಗಿ ಹತ್ತಾರು ಕಂಪನಿಗಳು ಪೆಟ್ಟು ತಿಂದವು. ಸೆಲೆಬ್ರೆಟಿಗಳನ್ನು ಬ್ರಾಂಡ್ ಪ್ರತಿನಿಧಿಗಳನ್ನಾಗಿಸಿಕೊಳ್ಳುವುದರ ತೊಂದರೆಯೇ ಅದು. ಅವರು ತಮ್ಮ ದೊಡ್ಡ ಅಭಿಮಾನಿಬಳಗದಿಂದಾಗಿ ನಿಮ್ಮ ಬ್ರಾಂಡನ್ನು ಗೆಲ್ಲಿಸಲೂಬಲ್ಲರು. ಒಂದೇ ಒಂದು ಮಾತಿನಿಂದಾಗಿ ನಿಮ್ಮ ಕಂಪನಿಯ ದಶಕಗಳ ಕೆಲಸವನ್ನು ನೆಲಸಮ ಮಾಡಲೂಬಲ್ಲರು. ಅಮೀರ್ ಖಾನ್ ಬಹಿಷ್ಕಾರಕ್ಕೊಳಗಾದ ವರ್ಷದಲ್ಲೇ ಭಾರತದಲ್ಲಿ ಹಲವಾರು ಸೆಲೆಬ್ರಿಟಿಗಳ ಮಾತುಗಳು ಟೀಕೆಗೊಳಗಾದವು ಮಾತ್ರವಲ್ಲ ಅವರನ್ನು ಪ್ರತಿನಿಧಿಗಳಾಗಿ ಬಳಸುತ್ತಿದ್ದ ಕಂಪನಿಗಳು ಸುಸ್ತಾಗಿ ಹೋದವು.

ಸಾಮಾಜಿಕ ವಿಷಯಗಳನ್ನು ತನ್ನ ಉತ್ಪನ್ನಗಳೊಂದಿಗೆ ಸಮ್ಮಿಳಿಸಿ ಮಾರ್ಕೆಟ್ ಮಾಡುವ ತಂತ್ರ ಹೊಸದೇನಲ್ಲ. ಆದರೆ ದಿನೇದಿನೇ ಹೆಚ್ಚೆಚ್ಚು ಸೂಕ್ಷ್ಮವಾಗುತ್ತಿರುವ ಇಂದಿನ ಜಗತ್ತಿನಲ್ಲಿ ಕಂಪನಿಗಳು ಸಾಮಾಜಿಕ ಕಳಕಳಿಯನ್ನು ತಮ್ಮ ಜಾಹೀರಾತಿನಿಂದ ದೂರವಿಟ್ಟಷ್ಟೂ ಒಳ್ಳೆಯದು. ಸಿಎಸ್ಆರ್ ಅಡಿಯಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ನಡೆಸುವುದಕ್ಕೂ, ಜಾಹೀರಾತಿನಲ್ಲಿ ಸಾಮಾಜಿಕ ಕಳಕಳಿ ತೋರಿಸುವುದಕ್ಕೂ ವ್ಯತ್ಯಾಸವಿದೆ. ಇಂದಿನ ಜನರು ಹೆಚ್ಚೆಚ್ಚು ಮಾಹಿತಿಯುಳ್ಳವರು ಮಾತ್ರವಲ್ಲ ಯಾವುದೇ ವಿಚಾರದ ಬಗ್ಗೆ ತಕ್ಷಣವೇ ಧ್ವನಿಯೆತ್ತುವಷ್ಟು ಧೈರ್ಯಶಾಲಿಗಳು. ಸಾಮಾಜಿಕ ತಾಣಗಳಿಂದಾಗಿ ಅವರ ಈ ಧ್ವನಿಗೆ ತಕ್ಷಣದ ವೇದಿಕೆಗಳು ಲಭ್ಯವಿವೆ. 2020ರಲ್ಲಿ ಹಿಂದೂ ಮುಸ್ಲಿಂ “ಸಾಮರಸ್ಯ”ದ ಏಕತ್ವಂ ಎಂಬ ಜಾಹೀರಾತನ್ನು ತನಿಷ್ಕ್ ಬಿಡುಗಡೆ ಮಾಡಿ ಎಂತಹ ಇಕ್ಕಟ್ಟಿಗೆ ಸಿಲುಕಿತು ಎಂಬ ಉದಾಹರಣೆ ನಿಮಗೆ ನೆನಪಿರಬಹುದು. ಜಾಹೀರಾತಿನಲ್ಲಿ ಅಜೆಂಡಾ ತುರುಕಿ ಎಷ್ಟೋ ಬ್ರಾಂಡುಗಳು ಪೆಟ್ಟು ತಿಂದಿವೆ. ಸರ್ಫ್ ಎಕ್ಸೆಲ್ ಕೂಡಾ ಹೋಲಿಯ ದಿನದಂದು ನಮಾಜಿಗೆ ಹೋಗುವ ಹುಡುಗನನ್ನು ಹಿಂದೂ ಹುಡುಗಿಯೊಂದು ಬಚಾಯಿಸುವ ಜಾಹೀರಾತು ಕೂಡಾ ಒಂದೇ ವಾರದಲ್ಲಿ ಎತ್ತಂಗಡಿಯಾಯ್ತು.

 

ಜಾಹೀರಾತುಗಳು ಅನಗತ್ಯ ವಿವಾದಕ್ಕೂ ಕಾರಣವಾದ ಹಲವಾರು ಉದಾಹರಣೆಗಳಿವೆ. ಫೇರ್ ಅಂಡ್ ಲವ್ಲೀ ಎಂಬ ಉತ್ಪನ್ನವೊಂದು ಬೆಳ್ಳಗಿದ್ದರೇ ಸಮಾಜದಲ್ಲಿ ಮರ್ಯಾದೆ ಎನ್ನುವಂತಾ ಸಂದೇಶವೊಂದನ್ನು ದಶಕಗಟ್ಟಲೇ ಭಾರತೀಯರ ಮನಸ್ಸಿನಲ್ಲಿ ಮೂಡಿಸಿತ್ತು. ಸಮಾಜ ಅದನ್ನು ನಂಬಿದ್ದು ಮಾತ್ರವಲ್ಲದೇ, ಯಾವುದೋ ಒಂದು ಕಂಪನಿಯ ಉತ್ಪನ್ನದ ಮಾರಾಟಕ್ಕೋಸ್ಕರ ತಮ್ಮದೇ ಸಮಾಜದ ಜನರನ್ನು ಅವರ ಮೈಬಣ್ಣದ ಕಾರಣಕ್ಕೆ ಹೀಗಳೆಯುವಂತಾಗಿದ್ದು, ಭಾರತೀಯ ಸಮಾಜದ ದುರಂತಗಳಲ್ಲೊಂದು. ನಿವ್ಯಾ ಬ್ರಾಂಡಿನ ಡಿಯೋಡರೆಂಟ್ ಒಂದು “ಬೆಳ್ಳಗಿದ್ದರೆ ಶುದ್ಧವಾಗಿದ್ದಂಗೆ” ಎನ್ನುವ ಜಾಹೀರಾತನ್ನು ಪ್ರಸಾರಗೊಳಿಸಿದ ಒಂದೇ ವಾರದಲ್ಲಿ ಯೂರೋಪಿನಾದ್ಯಂತ ಹಿಗ್ಗಾಮುಗ್ಗಾ ಬೈಯಿಸಿಕೊಳ್ತು. ಭಾರತೀಯರು ಕೆಲ ವಿಚಾರಗಳ ಬಗ್ಗೆ ಎಷ್ಟು ಸೂಕ್ಷರೋ, ಇನ್ನು ಕೆಲವು ವಿಚಾರಗಳಲ್ಲಿ ಅಷ್ಟೇ ಸಂವೇದನಾರಹಿತರು ಎನ್ನುವುದನ್ನು ಈ ಎರಡು ಉದಾಹರಣೆಗಳೇ ಹೇಳುತ್ತವೆ.

 

ಇದೇ ಕಾರಣಕ್ಕೆ ಆಪಲ್ ಒಂದು ಮಾರ್ಕೆಟಿಂಗ್ ಜೀನಿಯಸ್. ತನ್ನ ಜಾಹೀರಾತುಗಳನ್ನು ಅದು ತನ್ನ ಉತ್ಪನ್ನಗಳಷ್ಟೇ ಜತನದಿಂದ ಉತ್ಕೃಷ್ಟಮಟ್ಟದಲ್ಲಿ ತಯಾರಿಸುತ್ತದೆ. ಆದರೆ ಎಲ್ಲಾ ರೀತಿಯ ಸೆಲೆಬ್ರಿಟಿ ಜಾಹೀರಾತುಗಳಿಂದ ದೂರವಿರುತ್ತದೆ. ಬೇಕಾದರೆ ತನ್ನ ಹೊಸಾ ಫೋನನ್ನು ಹಾಲಿವುಡ್ ಬಾಲಿವುಡ್ ನಟನಟಿಯರಿಗೆ ಉಚಿತವಾಗಿ ಕೊಟ್ಟು, ಜೊತೆಗೆ ಹಣವನ್ನೂ ಕೊಟ್ಟು ಹೋದಲ್ಲೆಲ್ಲಾ ಆ ಹೊಸಾ ಫೋನನ್ನು ಹಿಡಿದುಕೊಂಡು ಹೋಗುವಂತೆ ಪಾಪರಾಜ್ಜಿಗಳಿಗೆ ತೋರಿಸುವಂತೆ ಕೇಳಿಕೊಳ್ಳುತ್ತದೆ. ಆದರೆ ಅವರನ್ನು ತನ್ನ ಜಾಹೀರಾತಿನಲ್ಲಿ ಸುತಾರಾಂ ಹಾಕಿಕೊಳ್ಳುವುದಿಲ್ಲ. ಯಾಕೆಂದರೆ ಈ ಸೆಲೆಬ್ರಿಟಿಗಳು ಟೈಂಬಾಂಬ್ ಇದ್ದಂತೆ ಎನ್ನುವುದನ್ನು ಆಪಲ್ ಮತ್ತೆ ಮತ್ತೆ ನೋಡಿ ಕಲಿತಿದೆ. ಸೆಲೆಬ್ರಿಟಿಯೊಬ್ಬ ಬ್ಲಾಕ್ ಲೈವ್ಸ್ ಮ್ಯಾಟರ್ ಅಂತಾ ಕೂತ್ರೆ ಕರಿಯಲ್ಲದವರು ನಿಮ್ಮ ಉತ್ಪನ್ನವನ್ನು ಕೊಳ್ಳುವುದನ್ನು ನಿಲ್ಲಿಸುತ್ತಾರೆ, ಅದೇ ಪಾಕಿಸ್ಥಾನದ ಬಾವುಟ ಹಿಡಿದರೆ ಜಗತ್ತಿನ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಭಾರತವನ್ನು ಕಳೆದುಕೊಳ್ಳಬಹುದು, ಭಾರತದ ಬಾವುಟ ಹಿಡಿದರೆ ಚೀನಾದ ಮಾರುಕಟ್ಟೆ ಅಲ್ಲಾಡುತ್ತದೆ. ಅದಕ್ಕೇ ಆಪಲ್ ಸದಾಕಾಲ ಜನಸಾಮಾನ್ಯರನ್ನು ಅಂದರೆ ನನ್ನ ನಿನ್ನಂತವರನ್ನು, ತಮ್ಮ ಉತ್ಪನ್ನವನ್ನು ನಿಜಕ್ಕೂ ಇಷ್ಟಪಟ್ಟು ಕೊಂಡುಕೊಳ್ಳುವವರನ್ನು ಬಳಸಿಕೊಳ್ಳುತ್ತದೆ. ಅದರಲ್ಲೂ ಆದಷ್ಟೂ ಮುಖಗಳನ್ನು ದೂರವಿಟ್ಟು ನಿಜಕ್ಕೂ ತನ್ನ ಉತ್ಪನ್ನ ಮಾಡಬಹುದಾದ ಕೆಲಸಗಳನ್ನೇ ಜಾಹೀರಾತಾಗಿ ಬಳಸಿಕೊಳ್ಳುತ್ತದೆ. ಅಲ್ಲು ಅರ್ಜುನ್ ಶತುಗಳನ್ನು ಸದೆಬಡಿಯಲಿಕ್ಕೂ, ಅವ ಯಾವ ಬನಿಯನ್ ಹಾಕುತ್ತಾನೆ ಎಂಬುದಕ್ಕೆ ಸಂಬಂಧವಿಲ್ಲದಿದ್ದರೂ, ಪ್ರಕಾಶ್ ರಾಜನ ನಟನೆಗೂ ಇಂಡನ್ ಟೀಎಂಟಿ ಕಂಬಿಯ ಗಟ್ಟಿತನಕ್ಕೂ ಸಂಬಂಧವೇ ಇಲ್ಲದಿದ್ದರೂ ಜಾಹೀರಾತು ಕೊಡುವ ಹಾಗೆ ಆಪಲ್ ಮಾಡುವುದಿಲ್ಲ. ನಾವೇ ತೆಗೆದ ಫೋಟೋಗಳನ್ನು, ನಮ್ಮದೇ ಉತ್ಕೃಷ್ಟ ಪ್ರಾಜೆಕ್ಟುಗಳನ್ನು #ShotOniPhone ಅನ್ನುವ ಹ್ಯಾಷ್ಟ್ಯಾಗಿನಡಿಯಲ್ಲಿ ತೋರಿಸುತ್ತದೆ. ಬಳಕೆದಾರರೇ ಬ್ರಾಂಡಿನ ಪ್ರತಿನಿಧಿಯಾಗುವ ಅನನ್ಯ ಉದಾಹರಣೆಯಿದು.

ನಮ್ಮ ಸೋಪಿನಲ್ಲಿ ನೀಲಿಯಿದೆ, ನಮ್ಮ ಪೇಸ್ಟಲ್ಲಿ ಉಪ್ಪಿದೆ, ನಮ್ಮ ಐಸ್ಕ್ರೀಂನಲ್ಲಿ ರೋಗನೋರ್ಧಕ ಶಕ್ತಿಯಿದೆ ಎನ್ನುತ್ತಾ ಎಲ್ಲವನ್ನೂ ಹೇಳುವ ಜಾಹೀರಾತುಗಳ ನಡುವೆ ಏನನ್ನೂ ಹೇಳದೇ ಎಲ್ಲವನ್ನೂ ಹೇಳುವ ರೀತಿಯೂ ಇದೆ. ಉತ್ಪನ್ನದ ಸುತ್ತ ಒಂದು ಕಥೆಯನ್ನು ಹೆಣೆದು, ಗ್ರಾಹಕರನ್ನು ಸೆಳೆಯುವ ಜಾಹೀರಾತುಗಳಲ್ಲಿ ಕೆಲವು ಜಗದ್ವಿಖ್ಯಾತ ಕತೆಗಳೂ ಇವೆ. ಮುಂದಿನವಾರಕ್ಕೆ ಆ ಕತೆಗಳಿರಲಿ.

0 comments on “ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 2

Leave a Reply

Your email address will not be published. Required fields are marked *