Friday, 26 April, 2024

ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 3

Share post

ಜಾಹೀರಾತಿನ ಮುಖ್ಯ ಉದ್ದೇಶವೇ ಉತ್ಪನ್ನವನ್ನು ಮಾರುವುದಾದರೂ, ಹಲವಾರು ಬಾರಿ ಕಂಪನಿಗಳು ಈ ಮಾರಾಟದ ಮದ್ಯೆ ಸಂದೇಶಗಳನ್ನೂ ಸೇರಿಸಲು ಪ್ರಯತ್ನಪಡುವುದುಂಟು. ಇದೊಂದು ತೀರಾ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಈ ವಿಚಾರದಲ್ಲಿ ಎಲ್ಲಾ ಜಾಹೀರಾತುಗಳು ಸಫಲತೆ ಕಂಡಿದ್ದಿಲ್ಲ. ಹಾಗೆ ನೋಡಿದರೆ, ಈ ರೀತಿಯ ಜಾಹೀರಾತುಗಳು ಸಂದೇಶಕೊಟ್ಟು ಜನಪ್ರಿಯವಾದದ್ದಕ್ಕಿಂತಾ ಸೋಲುಕಂಡಿದ್ದೇ ಹೆಚ್ಚು. ಸಂದೇಶಕೊಡುವಲ್ಲಿ ವಿಫಲವಾದದ್ದು ಮಾತ್ರವಲ್ಲ, ಕೆಲವೊಮ್ಮೆ ತಪ್ಪುಸಂದೇಶ ಕೊಟ್ಟು, ವಿವಾದ ಸೃಷ್ಟಿಸಿ ಉತ್ಪನ್ನಕ್ಕೆ ಸಿಗಬೇಕಾಗಿದ್ದ ಮಾರುಕಟ್ಟೆಯನ್ನು ಸಂಕುಚಿತಗೊಳಿಸಿ ನಷ್ಟವನ್ನೂ ಉಂಟುಮಾಡಿವೆ. ಈ ಸೂಕ್ಷ್ಮ ಪ್ರಕ್ರಿಯೆಯನ್ನು ನಾಜೂಕಾಗಿ ನಿಭಾಯಿಸಿ, ಗ್ರಾಹಕರ ಮತ್ತು ಮಾರುಕಟ್ಟೆಯ ಎಲ್ಲಾ ಸಾಂಸ್ಕೃತಿಕ ಮಜಲುಗಳನ್ನೂ ಅರ್ಥೈಸಿಕೊಂಡು, ಸಂದೇಶವನ್ನೂ ಕೊಟ್ಟು, ಮಾರುಕಟ್ಟೆಯ ಜೊತೆಗೆ ಗ್ರಾಹಕರ ಮನಸ್ಸನ್ನೂ ಗೆದ್ದ ಉದಾಹರಣೆಗಳು ಕೆಲವಿವೆ. ಮತ್ತಿವು ಜಾಹೀರಾತುಗಳ ಲೋಕದಲ್ಲೇ ಅತ್ಯುತ್ತಮವೆಂಬ ಹೆಸರನ್ನೂ ಗಳಿಸಿವೆ.

 

ಸಂವಹನದ ವಿಚಾರಕ್ಕೆ ಬಂದರೆ, ಎರಡು ಜನರ ನಡುವೆ ಸಫಲ ಸಂಪರ್ಕವನ್ನು ಸಾಧಿಸಲಿಕ್ಕೆ ನಂಬಿಕಾರ್ಹವಾದ ಕೆಲವೊಂದು ದಾರಿಗಳಿವೆ. ನೀವು ಯಾರೋ ಹೊಸಬರೊಟ್ಟಿಗೆ ಮಾತನಾಡುವುದಿರಬಹುದು, ಬೋರ್ಡ್ ಮಟ್ಟದ ಪವರ್ಪಾಯಿಂಟ್ ಪ್ರೆಸೆಂಟೇಷನ್ನೇ ಇರಬಹುದು, ಅಥವಾ ಒಂದು ದೊಡ್ಡಮಟ್ಟದ ಕಾರ್ಯಕ್ರಮ ಇರಬಹುದು ಜನರನ್ನು ನಿಮ್ಮ ಮಾತಿನೆಡೆಗೆ ಆಕರ್ಷಿಸಲಿಕ್ಕೆ, ತಮ್ಮ ಸಫಲತೆಯನ್ನು ಹಲವಾರುಬಾರಿ ನಿರೂಪಿಸಿರುವ ಕೆಲವೊಂದು ಸೂತ್ರಗಳಿವೆ. ನಿಮ್ಮ ಮಾತನ್ನು ಹಾಸ್ಯದೊಂದಿಗೆ ಪ್ರಾರಂಭಿಸುವುದು, ಮೊದಲ ಕ್ಷಣದಲ್ಲೇ ಒಂದು ಅತ್ಯುತ್ತಮ ಮಾಹಿತಿಯನ್ನು ಕೊಡುವುದು, ಇಲ್ಲವೇ ಮೊದಲ ಸ್ಲೈಡಿನಲ್ಲೇ ಒಂದು ಕುತೂಹಲ, ಆಶ್ಚರ್ಯ ಅಥವಾ ಗಾಬರಿಗೊಳಿಸುವಂತಹಾ ವಿಚಾರವೊಂದನ್ನು ತೋರಿಸುವುದು, ಈ ಮೂರೂ ನಿಮ್ಮ ಕೇಳುಗರನ್ನು ಹಿಡಿದಿಡುವ ಗ್ಯಾರಂಟಿಯನ್ನು ಕೊಡುತ್ತವೆ. ಗ್ರಾಹಕರೊಂದಿಗೆ ಅತ್ಯಂತ ಸಫಲ ಮನೋಸಂಪರ್ಕವನ್ನು ಸಾಧಿಸಲು ಜಾಹೀರಾತುಗಳು ಈ ನಿಗದಿತ ಕಾರ್ಯಸೂಚಿಗಳನ್ನು ಪಾಲಿಸುತ್ತವೆ. ಐಟಿಸಿ ಕಂಪನಿಯ ಬಿಂಗೋ ಎಂಬ ಚಿಪ್ಸ್’ನ ಜಾಹೀರಾತುಗಳು ನಿಮಗೆ ನೆನಪಿರಬಹುದು. ತನ್ನ “ಮ್ಯಾಡ್ ಆಂಗಲ್” ಎಂಬ ಚಿಪ್ಸಿನ ಜಾಹೀರಾತಿನಲ್ಲಿ “ಗ್ಲಾಡ್ ಬ್ಯಾಂಗಲ್ಸ್” ಎಂಬ ಬಳೆಗಳ ಜಾಹೀರಾತೊಂದನ್ನು ಸೇರಿಸಿ (ಹೌದು ಜಾಹೀರಾತಿನೊಳಗೊಂದು ಜಾಹೀರಾತು ತೋರಿಸಿ), ಮ್ಯಾಡ್ ಅಂಗಲ್ಸ್-ಗ್ಲಾಡ್ ಬ್ಯಾಂಗಲ್ಸ್ ಎಂಬ ಪದಗಳೊಂದಿಗೆ ಆಟವಾಡಿ, ತಮಾಷೆಯ ಆದರೆ ನೆನಪಿಟ್ಟುಕೊಳ್ಳಬಹುದಾದ ಜಾಹೀರಾತೊಂದನ್ನು ತೋರಿಸಿ ಮಾರುಕಟ್ಟೆಯನ್ನು ಗೆದ್ದಿತ್ತು.

 

 

ಇನ್ನು ಮಾಹಿತಿಯನ್ನು ತೋರಿಸಿ ಕಣ್ಸೆಳೆಯುವ ಜಾಹೀರಾತುಗಳಿಗಂತೂ ಲೆಕ್ಕವೇ ಇಲ್ಲ. 80% ಡಾಕ್ಟರುಗಳು ನಂಬುವ ಟೂತ್ಪೇಸ್ಟ್, 99% ಕೀಟಾಣುಗಳನ್ನು ಕೊಲ್ಲುವ ಸೋಪು, “ಹತ್ತರಲ್ಲಿ ಎಂಟುಜನ ಯುವಕಯುವತಿಯರು ಹೀಗೆ ಹೇಳುತ್ತಾರೆ….” ಎಂದೆಲ್ಲಾ ಪ್ರಾರಂಭಿಸಿ ತಮ್ಮ ಉತ್ಪನ್ನದ ಕಥೆಯನ್ನು ನಿಧಾನಕ್ಕೆ ಸೇರಿಸುವುದು ಜಾಹೀರಾತಿನ ಲೋಕದ ಅತ್ಯಂತ ಸಾಮಾನ್ಯ ಸೂತ್ರವಾಗಿದೆ. ಹಾರ್ಲಿಕ್ಸ್, ಬೋರ್ನ್ವೀಟಾ, ಪಾಂಡ್ಸ್, ಫೇರ್ ಅಂಡ್ ಲವ್ಲೀ, ಹಾರ್ಪಿಕ್, ಲೈಫ್-ಬಾಯ್ ಡೆಟ್ಟಾಲ್‘ಗಳೆಲ್ಲವೂ ತಮ್ಮ ಸಂದೇಶವನ್ನು ಈ ರೀತಿಯ ಒಂದು ಮಾಹಿತಿಯುಕ್ತ ಸಾಲಿನೊಂದಿಗೇ ಪ್ರಾರಂಭಿಸುತ್ತವೆ. ಮತ್ತಿದು ಗಂಭೀರ ಪ್ರವೃತ್ತಿಯ ಗ್ರಾಹಕರಿಗೆ ಮನಮುಟ್ಟುತ್ತದೆ ಕೂಡಾ. ನೀವು ಅನುಭವಿಸುತ್ತಿರುವ ನಿಜ ತೊಂದರೆಯೇನು, ನೀವಲ್ಲದೇ ಎಷ್ಟು ಜನರು ಇದೇ ತೊಂದರೆಯನ್ನು ಅನುಭವಿಸುತ್ತಿದ್ದರು ಹಾಗೂ ಅವರಲ್ಲೆಷ್ಟು ಜನರಿಗೆ ನಮ್ಮ ಉತ್ಪನ್ನದಿಂಡ ಪರಿಹಾರ ಸಿಕ್ಕಿದೆ ಅಥವಾ ನಿಮ್ಮ ತೊಂದರೆಯನ್ನು ನಮ್ಮ ಉತ್ಪನ್ನ ಎಷ್ಟರಮಟ್ಟಿಗೆ ಕಡಿಮೆ ಮಾಡಬಲ್ಲದು ಎಂಬ ಮಾಹಿತಿಯನ್ನೂ, ಜೊತೆಗೇ “ನೀವು ನಮ್ಮ ಮಾತನ್ನೇ ನಂಬಬೇಕು ಅಂತಿಲ್ಲ. ಇದನ್ನು ದೊಡ್ಡ ದೊಡ್ಡ ಸಂಸ್ಥೆಗಳು ಮತ್ತು ಅಧಿಕೃತ ಸಂಶೋಧನೆಗಳೇ ಹೇಳಿವೆ ನೋಡಿ” ಎಂಬ ಯಾವುದೋ ಮೆಡಿಕಲ್ ಸಂಸ್ಥೆಯ ಧೃಡತೆಯ ಸೀಲೊಂದನ್ನೂ ಒತ್ತಿ ತೋರಿಸುವುದು, ಡಾಕ್ಟರುಗಳೇ ಹೇಳಿದ್ದಾರೆ ಎಂದು ಹೇಳುವುದು, ಉತ್ಪನದ ಉತ್ಕೃಷ್ಟ ಗುಣಮಟ್ಟವನ್ನು ಎತ್ತಿ ತೋರಿಸುವುದು, ಗ್ರಾಹಕರ ನಂಬಿಕೆಯನ್ನು ಪಡೆಯುವೆಡೆಗೆ ಒಂದು ಖಚಿತ ಹೆಜ್ಜೆಯನ್ನು ಒದಗಿಸುತ್ತದೆ. 1995ರ ಆಸುಪಾಸಿನ ಉಜಾಲಾದ ಜಾಹೀರಾತು ನೆನಪಿದೆಯಾ? “ಲೀಟರೀಗೆ ನಾಲ್ಕು ತೊಟ್ಟು…” ಎಂಬ ಮಾಹಿತಿಯನ್ನು ಕೊಡುವ ಆ ಜಿಂಗಲ್ ಹಾಡು ಇಂದಿಗೂ ನಮ್ಮೆಲ್ಲರ ಮನದಲ್ಲಿ ಅಚ್ಚೊತ್ತಿದಂತಿದೆ.

 

ಉತ್ಪನ್ನದೆಡೆಗೆ ಕುತೂಹಲವನ್ನು ಮೂಡಿಸುವ ಜಾಹೀರಾತುಗಳು ಅತ್ಯಂತ ಕ್ಲಿಷ್ಟ ಹಾಗೂ ಅತ್ಯಂತ ದುಬಾರಿ ಕೂಡಾ. ಜಾಹೀರಾತಿನ ಸ್ಲಾಟುಗಳು ದುಬಾರಿ ವೆಚ್ಚದ್ದು. ಹೀಗಿದ್ದಾಗ ಗ್ರಾಹಕರನ್ನು ತಕ್ಷಣಕ್ಕೆ ಸೆಳೆದು ತಮ್ಮ ವಿಚಾರ ಹೇಳಿ ಮುಗಿಸುವ ಸೂತ್ರಕ್ಕೇ ಹೆಚ್ಚಿನ ಕಂಪನಿಗಳು ಮೊರೆಹೋಗುತ್ತವೆ. ಆದರೆ ಕಂಪನಿ ಮೊದಲಬಾರಿಗೆ ಮಾರುಕಟ್ಟೆಗೆ ಬರುತ್ತಿದೆಯಾದಲ್ಲಿ ಅಥವಾ ಕಂಪನಿಯ ಬಳಿ ದುಡ್ಡು ದಂಡಿಯಾಗಿದ್ದರೆ, ಉತ್ಪನ್ನವನ್ನೇ ತೋರಿಸದೇ ಅಥವಾ ಇಷ್ಟೇ ಇಷ್ಟು ತೋರಿಸಿ ಮೂವತ್ತು ಸೆಕೆಂಡಿನವರೆಗೂ ಗ್ರಾಹಕರನ್ನು ಹಿಡಿದಿಟ್ಟು ಅತ್ಯಂತ ಕೊನೆಯಲ್ಲಿ ಉತ್ಪನ್ನವನ್ನು ತೋರಿಸುವಂತಾ ಸಾಹಸಕ್ಕೆ ಕೈಹಾಕುತ್ತವೆ. 1985ರಲ್ಲಿ ಲಿವೈಸ್ ಬಿಡುಗಡೆ ಮಾಡಿದ ವ್ಯಕ್ತಿಯೊಬ್ಬ ಬಟ್ಟೆಒಗೆಯುವ ಅಂಗಡಿ (ಲಾಂಡ್ರೋಮ್ಯಾಟ್)ನಲ್ಲಿ ನಿಂತು ತನ್ನ ಜೀನ್ಸ್ ಪ್ಯಾಂಟ್ ಅನ್ನು ನಿಧಾನಕ್ಕೆ ಬಿಚ್ಚುತ್ತಾ ಒಗೆಯಲು ಹಾಕುವ ಜಾಹೀರಾತು ಸಾಕಷ್ಟು ಸಂಚಲನ ಮೂಡಿಸಿತ್ತು. ಇಡೀ ಜಾಹೀರಾತಿನಲ್ಲಿ ಎಲ್ಲೂ ಮಾತೇ ಇರಲಿಲ್ಲ. ಆದರೆ ಕೊನೆಯವರೆಗೂ ಕುತೂಹಲ ಕಾದಿಟ್ಟುಕೊಂಡು, ಸುಮಾರು ಇಪ್ಪತ್ತು ವರ್ಷ ಹಿಂದೆಯೇ ನಿಂತುಹೋಗಿದ್ದ ಲೀವೈಸ್ 501 ಉತ್ಪನ್ನವನ್ನು ಮತ್ತೆ ಬಿಡುಗಡೆ ಮಾಡಲೋಸುಗ ಕೊಟ್ಟ ಈ ಜಾಹೀರಾತು, ಲೀವೈಸ್’ನ ಜೀನ್ಸ್ ಮಾರಾಟವನ್ನು 800% ಹೆಚ್ಚಿಸಿದ್ದಲ್ಲದೇ, ಜಾಹೀರಾತು ಏಜೆನ್ಸಿಗಳಿಗೆ ಹೊಸದೊಂದು ಹಾದಿಯನ್ನೇ ಕಟ್ಟಿಕೊಟ್ಟಿತು.

 

 

ಭಾರತದಲ್ಲಿ ಈ ಕುತೂಹಲದ ಸೂತ್ರವನ್ನು ಸ್ವಲ್ಪ ಹಾಸ್ಯದೊಂದಿಗೆ ಸಮ್ಮಿಳಿಸಿ ಅತ್ಯಂತ ಸಫಲತೆ ಕಂಡ ಜಾಹೀರಾತು ಸರಣಿಯೆಂದರೆ ಫೆವಿಕಾಲ್’ನದ್ದು. ತಾನು ಮನೆಕೆಲಸದಲ್ಲಿ ನಿರತವಾಗಿದ್ದಾಗ, ಒಂದೇ ಕಡೆ ಕೂರದೇ ಆಗಾಗ ಎದ್ದೆದ್ದು ಹೋಗುವ ತನ್ನ ಮಗುವನ್ನು ಯ ಗೋಳು, ತನ್ನ ಸಾಮರ್ಥ್ಯಕ್ಕಿಂತಾ ಹೆಚ್ಚು ಜನರನ್ನು ಹೊತ್ತು ರನ್ ಆಫ್ ಕಚ್’ನಲ್ಲಿ ತೊಯ್ದಾಡುತ್ತಾ ಸಾಗುವ ಟ್ರಕ್, ಎತ್ತರದ ಕಟ್ಟಡವೊಂದರಿಂದ ಇನ್ನೇನು ಬಿದ್ದೇಬಿಡುತ್ತಾಳೇನೋ ಅನಿಸುವ ಹೀರೋಯಿನ್ ಹಾಗೂ ಆಕೆಯ ಕೈ ಹಿಡಿದಿರುವ ಹೀರೋ ಮುಂತಾದ ಜಾಹೀರಾತುಗಳು, ಭಾರತದ ಕೆಲ ಸೂಕ್ತ ಮತ್ತು ಹಾಸ್ಯಮಯ ಸನ್ನಿವೇಶಗಳನ್ನು ಗಂಭೀರವಾಗಿಯೇ ತೋರಿಸುತ್ತಾ, “ಇದು ಫೆವಿಕಾಲ್’ನ ನಂಟು. ಅಷ್ಟು ಸುಲಭಕ್ಕೆ ಬಿಡುವಂತದ್ದಲ್ಲ” ಎಂಬ ಸಾಲಿನೊಂದಿಗೆ ಅದನ್ನು ನೋಡುವ ನಿಮ್ಮ ಮನಸ್ಸಿನಲ್ಲಿ ಒಂದು ನಗುವನ್ನೂ, ಫೆವಿಕಾಲ್’ನ ಬ್ರಾಂಡ್ ಅನ್ನೂ ಅಚ್ಚೊತ್ತಿ ಮುಂದುವರೆಯುತ್ತಿದ್ದವು. ಏನನ್ನೂ ಹೇಳದೇ ಎಲ್ಲವನ್ನೂ ಹೇಳಿ ಮುಗಿಸಿರುತ್ತಿದ್ದವು.

 

 

ಈ ರೀತಿಯದ್ದೇ ಕೊನೆಯವರೆಗೂ ಕುತೂಹಲ ಉಳಿಸುವ ಇನ್ನೊಂದು ಭಾರತೀಯ ಜಾಹೀರಾತೆಂದರೆ, ಬಹುಷಃ ಹ್ಯಾಪಿಡಂಟ್ ಚ್ಯೂಯಿಂಗ್ ಗಮ್ಮಿನದ್ದು. ಹಲ್ಲನ್ನು ಬೆಳ್ಳಗಾಗಿಸುವುದಕ್ಕೂ, ಹಲ್ಲೇ ದೀಪದಂತೆ ಬೆಳಕನ್ನು ಸೂಸುವುದಕ್ಕೂ ವ್ಯತ್ಯಾಸವಿದೆ ಎಂಬ ತಾರ್ಕಿಕ ದೋಷವೇ ಇದ್ದರೂ ಅದನ್ನೆಲ್ಲಾ ಮರೆಸಿ ನೋಡುಗರನ್ನು ನಗಿಸಿ, ಬ್ರಾಂಡ್ ರೀಕಾಲ್ ಅನ್ನು ಗಟ್ಟಿಗೊಳಿಸುವ ಈ ಜಾಹೀರಾತು ಆ ವರ್ಷದ ಹಲವಾರು ಬಹುಮಾನಗಳನ್ನು ಗೆದ್ದಿತು. ತನ್ನ ಉತ್ಪನ್ನದ ಬಗ್ಗೆ ಏನೂ ಹೇಳದೇ, ಜಗತ್ತಿನ ಪ್ರಸಕ್ತ ಆಗುಹೋಗುಗಳನ್ನೇ ಗುರಿಯಾಗಿಸಿಕೊಂಡು ನಡೆಸಿದ ಅಮುಲ್’ನ ಅಟ್ಟರ್ಲೀ ಬಟ್ಟರ್ಲೀ ಡೆಲೀಷಿಯಸ್ ಕ್ಯಾಂಪೇನ್ ಕೂಡಾ ಭಾರತೀಯ ಜಾಹೀರಾತು ಲೋಕದಲ್ಲಿ ಹೊಸದೊಂದು ಕಥೆಯನ್ನು ಬರೆದವು. ಕಳೆದ ಹತ್ತು ವರ್ಷದಲ್ಲಿ ಅಮುಲ್ ತನ್ನ ಟೀವಿ ಜಾಹೀರಾತು ಮಾತ್ರವಲ್ಲದೇ, ಸಾಮಾಜಿಕ ತಾಣಗಳನ್ನೂ ಗುರಿಯಾಗಿಸಿಕೊಂಡು ಹರಿಬಿಟ್ಟ ಕಾರ್ಟೂನುಗಳು ಜನಪ್ರಿಯತೆಯ ಉತ್ತುಂಗ ತಲುಪಿದವು.

 

ಈ ಎಲ್ಲಾ ಸೂತ್ರಗಳಿಗಿಂತಲೂ ಉತ್ಕೃಷ್ಟ ಸೂತ್ರವೊಂದಿದೆ. ಅದು ಭಾವನೆಗಳನ್ನು ಮುಟ್ಟುವ, ಸೂಕ್ಷ್ಮವಾಗಿ ಮೀಟುವ ಸೂತ್ರ. ಇದನ್ನು ಬಳಸಿಕೊಳ್ಳುವುದು ಸುಲಭ ಮತ್ತು ಕಷ್ಟ ಎರಡೂ ಹೌದು. ಸುಲಭದ ತಂತ್ರಗಳಲ್ಲಿ ಕುಟುಂಬ, ಸ್ನೇಹ ಇತ್ಯಾದಿಗಳನ್ನು ಸಂಬಂಧಗಳನ್ನು ಬಳಸಿಕೊಂಡರೆ, ಕಷ್ಟದ ತಂತ್ರಗಳಲ್ಲಿ ಮನುಷ್ಯನ ವ್ಯಕ್ತಿತ್ವ, ಆಸೆ ಮುಂತಾದ ಅರಿಷಡ್ವರ್ಗಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಜಾಹೀರಾತುಗಳು ತೀರಾ ಕ್ಲೀಷೆಯಾಗುವ ಅಪಾಯವಿದ್ದರೂ ಕೂಡಾ, ಗೆದ್ದರೆ ಖಂಡಿತವಾಗಿಯೂ ಅತ್ಯಂತ ಸಫಲಜಾಹೀರಾತಾಗಬಲ್ಲ ಶಕ್ತಿಯುಳ್ಳವು. ಆಪಲ್’ನ 1984 ಜಾಹೀರಾತು “ಎಲ್ಲಾ ಕಟ್ಟಳೆಗಳನ್ನು ಮೀರಿ, ಭಿನ್ನವಾಗಿ ನಿಲ್ಲಬೇಕು” ಎನ್ನುವ ಸಂದೇಶ ಕೊಟ್ಟು ದಂತಕತೆಯಾದರೆ, 1988ರಲ್ಲಿ ನೈಕಿ ಬಿಡುಗಡೆ ಮಾಡಿದ “Just Do It” ಜಾಹೀರಾತು ಆ ಸಾಲನ್ನು ಶಾಶ್ವತವಾಗಿ ಕಂಪನಿಯ ಹೆಸರಿನೊಂದಿಗೆ ಜೋಡಿಸಿದ್ದಲ್ಲದೇ, ಯಾವ ಮಾತೂ ಆಡದೇ, ಹೆಚ್ಚಿನ ಭಾಷಣ ಬಿಗಿಯದೇ, ನೈಕಿಯ ಶೂಗಳಿಗಿಂತಲೂ ಹೆಚ್ಚಾಗಿ ಸೋಲೊಪ್ಪದ ಮಾನವ ಚೈತನ್ಯ, ಗೆಲ್ಲಬೇಕೆಂಬ ದೃಡನಿರ್ಧಾರ, ಅದಕ್ಕಾಗಿ ದುಡಿಯುವ ಸ್ಪೂರ್ತಿ ಮತ್ತು ಅಗತ್ಯವಾದ ಸಬಲೀಕರಣದ ಬಹ್ಹೆ ಮಾತನಾಡುತ್ತಾ ಒಂದೊಳ್ಳೆಯ ಸಂದೇಶವನ್ನು ಕೊಟ್ಟು, ಜಗತ್ತಿನ ಅಗ್ರ ಜಾಹೀರಾತುಗಳಲ್ಲೊಂದಾಯ್ತು.

 

2011ರ ಫೋಲ್ಕ್ಸ್-ವ್ಯಾಗನ್ನಿನ ರಿಮೋಟ್ ಎಂಜಿನ್ ಸ್ಟಾರ್ಟ್ ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಲೋಸುಗವಾಗಿ ನಿರ್ಮಾಣವಾದ The Force ಎಂಬ ಜಾಹೀರಾತಿನಲ್ಲಿ, ಮಗ ಸ್ಟಾರ್-ವಾರ್ಸ್ ಚಿತ್ರದ ಪಾತ್ರವಾದ ಡಾರ್ತ್-ವೇಡರ್’ನ ಪೋಷಾಕು ಧರಿಸಿ, ಅಪ್ಪನ ಕಾರಿನ ಮುಂದೆ ನಿಂತು, ಬರೀ ಕೈಸನ್ನೆಯಲ್ಲೇ ಎಲ್ಲವನ್ನೂ ನಿಯಂತ್ರಿಸುವ ಡಾರ್ತ್ ವೇಡರನಂತೆಯೇ ಆಟವಾಡುತ್ತಿರುವಾಗ, ಅಪ್ಪ ಮನೆಯೊಳಗಿಂದಲೇ ಎಂಜಿನನ್ನು ಸ್ಟಾರ್ಟ್ ಮಾಡಿದಾಗ, ಮಗ ಒಂದು ಕ್ಷಣಕ್ಕೆ ತನ್ನ ಶಕ್ತಿಯಿಂದಲೇ ಕಾರ್ ಸ್ಟಾರ್ಟ್ ಆಯಿತೇನೋ ಎಂದು ಆಶ್ಚರ್ಯಪಡುವ ದೃಶ್ಯದಮೂಲಕ, ನಿರ್ಜೀವ ವಸ್ತುವಾದ ಕಾರ್’ನೊಂದಿಗೆ ಅಪ್ಪ-ಮಕ್ಕಳ ಬಾಂಧವ್ಯ, ಮಾನವ ಸಹಜ ಭಾವನೆಗಳನ್ನು ಸಮ್ಮಿಳಿಸಿ ಅದನ್ನೊಂದು ದೃಶ್ಯ-ಕಾವ್ಯವಾಗಿಸಿದ್ದರು. ಹೋಂಡಾ 2005ರಲ್ಲಿ ಯಾವ ರೂಪದರ್ಶಿಗಳನ್ನೂ ಬಳಸದೇ, ತನ್ನ ಅಕ್ಕಾರ್ಡ್ ಕಾರಿನ ಬಿಡಿಭಾಗಳನ್ನೇ ಬಳಸಿ, ಒಂದು ಬಿಡಿ ಭಾಗ ಬಂದು ಇನ್ನೊಂದಕ್ಕೆ ತಾಗುತ್ತಾ ಸಾಗುತ್ತಾ, ಒಂದಕ್ಕೊಂದು ಪರಿಪೂರ್ಣ ಸಾಮರಸ್ಯದಲ್ಲಿ ಸಾಗುತ್ತಾ ಕೊನೆಗೆ ಕಾರಿನ ಕೀಯನ್ನು ಒತ್ತಿ ಕಾರೊಂದು ಮುಂದೆ ಸಾಗಿ ಬರುವಂತೆ ತೋರಿಸಿತ್ತು. “ನಮ್ಮ ಕಾರುಗಳಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ” ಎಂಬ ಸಂದೇಶ ಕೊಟ್ಟ ಈ ವಿಡಿಯೋ, ಬಹುಷಃ ಅಂದಿನ ಕಾಲಕ್ಕೆ ಅತ್ಯಂತ ಹೆಚ್ಚು ಟೇಕ್’ಗಳನ್ನು ತೆಗೆದುಕೊಂಡ ಜಾಹೀರಾತಾಗಿತ್ತು, ಹಾಗೂ ಆ ವರ್ಷದ “ಅತ್ಯಂತ ಹೆಚ್ಚು ನೋಡಲ್ಪಟ್ಟ ಜಾಹೀರಾತು” ಕೂಡಾ ಆಗಿತ್ತು.

 

2009ರಲ್ಲಿ ಗೂಗಲ್ ಕೂಡಾ ಯಾವುದೇ ರೂಪದರ್ಶಿಯಿಲ್ಲದೇ, ಯಾರಿಂದಲೂ ಒಂದೇ ಒಂದು ಮಾತನ್ನೂ ಆಡಿಸದೆ, ಹೇಗೆ ಒಬ್ಬ ಅಮೇರಿಕನ್ ಹುಡುಗ ಪ್ಯಾರಿಸಿಗೆ ಉನ್ನತ ಶಿಕ್ಷಣಕ್ಕೆಂದು ಹೋಗಿ, ಅಲ್ಲೊಬ್ಬ ಹುಡುಗಿಯ ಪ್ರೀತಿಯಲ್ಲಿ ಬಿದ್ದು, ಶಿಕ್ಷಣ ಮುಗಿಸಿ ಕೆಲಸ ಹುಡುಕಿಕೊಂಡು, ವರ್ಷಗಳ ನಂತರ ಅವಳನ್ನೇ ಮದುವೆಯಾಗಿ, ಸಂಸಾರವೊಂದನ್ನು ಪ್ರಾರಂಭಿಸುವ ಕಥೆಯನ್ನು ಕಂಪ್ಯೂಟರ್ ಪರದೆ ಮೇಲೆ ಒಂದಷ್ಟು ಸರಣಿ ಗೂಗಲ್ ಸರ್ಚುಗಳ ಮೂಲಕವೇ ತೋರಿಸುತ್ತಾ ಹೋಗುವ Parisian Love ಜಾಹೀರಾತು ಆ ವರ್ಷದ ಅತ್ಯುತ್ತಮ ಜಾಹೀರಾತುಗಳ ಪಟ್ಟಿಯಲ್ಲಿ ಸೇರಿತ್ತು.

 

 

ಹೀಗೆ ಜಾಹೀರಾತೆಂದರೆ ಮಾತೇ ಆಡಬೇಕಿಲ್ಲ ಎಂಬುದನ್ನು ನಿರೂಪಿಸಿದ ಕಥೆಗಳು ಸಾಕಷ್ಟಿವೆ. ಹಾಗೂ ಇವೆಲ್ಲವೂ ಜಾಹೀರಾತು ಲೋಕದ ಅಗ್ರಗಣ್ಯ ಸ್ಥಾನಕ್ಕೆ ಸೇರಿದ್ದು ಮಾತ್ರವಲ್ಲ, ಮಾನವ ಪ್ರತಿಭೆಯ ಅತ್ಯುತ್ಕೃಷ್ಟ ನಿದರ್ಶನಗಳೂ ಹೌದು. ಮುಂದಿನ ಕೊನೆಯ ಭಾಗದಲ್ಲಿ, ಮುಳುಗಿತ್ತಿದ್ದ ಕಂಪನಿಗಳನ್ನು ಬದುಕಿಸಿದ ಕೆಲ ಜಾಹೀರಾತುಗಳ ಬಗ್ಗೆ ತಿಳಿಯೋಣ.

0 comments on “ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 3

Leave a Reply

Your email address will not be published. Required fields are marked *