Tuesday, 27 February, 2024

ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 4

Share post

ಜಾಹೀರಾತುಗಳು ಉತ್ಪನ್ನಗಳನ್ನು ಮಾರುವುದು, ಕಂಪನಿಯ ಧ್ಯೇಯ ಸಾರುವುದು, ಸಾಮಾಜಿಕ ಸಂದೇಶಗಳನ್ನು ಕಳುಹಿಸುವುದಲ್ಲದೇ, ಎಷ್ಟೋಬಾರಿ ಕಂಪನಿಗಳನ್ನು ಉಳಿಸಿದ್ದೂ ಉಂಟು. ಉತ್ಪನ್ನಗಳ ಮಾರಾಟ ಕೆಳಗಿಳಿದು, ಕಂಪನಿಯೇ ಮುಳುಗುತ್ತಿದ್ದ ಪರಿಸ್ಥಿತಿಯಲ್ಲಿ ಬಿಡುಗಡೆಯಾದ ಆ ಒಂದು ಜಾಹೀರಾತು, ಇಡೀ ಕಂಪನಿಗೊಂದು ಹುಲ್ಲುಕಡ್ಡಿಯಾಗಿ ನಿಂತು ಅದನ್ನು ಬಚಾಯಿಸಿ ಮತ್ತೆ ಜೀವ ತುಂಬಿದ್ದಿದೆ. ಕೆಲವೊಮ್ಮೆ ಈ ಜಾಹೀರಾತುಗಳು ಉತ್ಪನ್ನದ ಮಾರುಕಟ್ಟೆ ಹೆಚ್ಚಿಸಿದ್ದಷ್ಟೇ ಅಲ್ಲ, ಕಂಪನಿಯ ಬಗ್ಗೆ ಜನರಿಗಿದ್ದ ಗ್ರಹಿಕೆಯನ್ನೇ ಬದಲಾಯಿಸಿ ಅದರ ಬ್ರಾಂಡ್ ವ್ಯಾಲ್ಯೂವನ್ನು ಹೆಚ್ಚಿಸಿದ ಉದಾಹರಣೆಗಳೂ ಇವೆ.

 

2010ರಲ್ಲಿ ಪ್ರಾಕ್ಟರ್ ಅಂಡ್ ಗ್ಯಾಂಬಲ್’ನವರ ಓಲ್ಡ್ ಸ್ಪೈಸ್’ನ ಬ್ರಾಂಡಿಂಗ್ ಸಂಕಷ್ಟದಲ್ಲಿತ್ತು. ಅದೊಂದು ಹಳೆಯ ಪೀಳಿಗೆಯವರ ಬ್ರಾಂಡ್ ಎಂಬ ಗ್ರಹಿಕೆಯಿತ್ತು ಹಾಗೂ ಹೊಸಬರನ್ನು ಆಕರ್ಷಿಸಲು P&G ಅಸಮರ್ಥವಾಗಿತ್ತು. ಮಾತ್ರವಲ್ಲ, ಇಡೀ P&G ಕಂಪನಿಯೇ ಅ ವರ್ಷ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೂ ಧೈರ್ಯಮಾಡಿ ಜೂಜಿಗಿಳಿದ ಕಂಪನಿ ಆ ವರ್ಷ “The Man Your Man Could Smell Like” ಎಂಬ ಕ್ಯಾಂಪೇನ್ ಬಿಡುಗಡೆ ಮಾಡಿತು. ಇಸೈಯಾ ಮುಸ್ತಫಾ ಎಂಬ ನಟನನ್ನು ಬಳಸಿ ವೈಡೆನ್+ಕೆನಡಿ ಎಂಬ ಏಜೆನ್ಸಿ ತಯಾರಿಸಿದ ಹಾಸ್ಯಮಯ ಮತ್ತು ಆಕರ್ಷಕ ಜಾಹೀರಾತು ಸರಣಿ, ಈ ಬ್ರ್ಯಾಂಡನ್ನು ಮರುಸ್ಥಾಪಿಸಿದ್ದಲ್ಲದೇ, ಓಲ್ಡ್ ಸ್ಪೈಸ್ ಹೊಸ ಪೀಳಿಗೆಗೂ ಹೊಂದುವ ಉತ್ಪನ್ನವಾಗಬಹುದು ಎಂದು ನಿರೂಪಿಸಿತು.

 

1990ರ ದಶಕದಲ್ಲಿ ಆಪಲ್‌ ಆರ್ಥಿಕ ತೊಂದರೆಯಲ್ಲಿತ್ತು. “ಎಲ್ಲರಿಗೂ ಕಂಪ್ಯೂಟರ್, ಎಲ್ಲರಿಗೂ ಸಾಫ್ಟ್ವೇರ್” ಎಂಬ ಆಕ್ರಮಣಾಕಾರಿ ಮಾರ್ಕೆಟಿಂಗ್ ತಂತ್ರದಲ್ಲಿದ್ದ ಮೈಕ್ರೋಸಾಫ್ಟ್ ಎದುರು ನಿಲ್ಲಲಾಗದೇ ಒದ್ದಾಡುತ್ತಿತ್ತು. 1997ರಲ್ಲಿ ಸ್ಟೀವ್ ಜಾಬ್ಸ್ ಆಪಲ್ಲಿಗೆ ಮರಳಿ ಬಂದ. ಅವನಿಗೆ ಮೈಕ್ರೋಸಾಫ್ಟ್ ಜೊತೆಗೆ ಕುಸ್ತಿಗಿಳಿಯುವುದು ಇಷ್ಟವಿರಲಿಲ್ಲ. ಅವರೆದುರು ಗೆಲ್ಲಲಾಗುವುದಿಲ್ಲ ಎಂಬ ಹೆದರಿಕೆಯಿಂದಲ್ಲ, ಬದಲಿಗೆ ಅವನ ಆಲೋಚನೆ ಇದ್ದದ್ದೇ ಬೇರೆ. ಅಪಲ್ ಉತ್ಪನ್ನಗಳು “ಎಲ್ಲರಿಗೂ” ಅಲ್ಲ ಎಂಬುದು ಅವನ ಧೃಡನಂಬಿಕೆಯಾಗಿತ್ತು. ನಮ್ಮ ಕಂಪ್ಯೂಟರುಗಳು, ತಂತ್ರಾಂಶಗಳು ವಿಶೇಷ ವ್ಯಕ್ತಿಗಳಿಗಾಗಿ ರೂಪಿಸಲ್ಪಟ್ಟಿದ್ದು. ವಿಶೇಷ ಜನರ, ವಿಶೇಷ ಕೆಲಸಗಳಿಗಾಗಿ ಆಪಲ್ ಇರೋದು ಎಂಬ ಧ್ಯೇಯವನ್ನು ಆತ ಪ್ರಚುರಪಡಿಸಬಯಸಿದ್ದ. ಇದಕ್ಕಾಗಿ ಆಪಲ್ ನಡೆಸಿದ “ಪ್ರಪಂಚದ ಮೇಲೆ ದೊಡ್ಡರೀತಿಯ ಪ್ರಭಾವ ಬೀರಿದ ಮಾರ್ಟಿನ್ ಲೂಥರ್ ಕಿಂಗ್, ಥಾಮಸ್ ಎಡಿಸನ್, ಗಾಂಧೀ ಇತ್ಯಾದಿ ಅಪ್ರತಿಮ ವ್ಯಕ್ತಿಗಳನ್ನೊಳಗೊಂಡ” ಥಿಂಕ್ ಡಿಫರೆಂಟ್ ಅಭಿಯಾನವು ತನ್ನ “”Here’s to the Crazy Ones. The misfits. The rebels….” ಸಾಲುಗಳೊಂದಿಗೆ ಜಗತ್ತಿನಲ್ಲಿ ಸಂಚಲನವನ್ನೇ ಉಂಟುಮಾಡಿತು. ಆಪಲ್‌ನ ಬ್ರ್ಯಾಂಡ್ ಅನ್ನು ಮರುವ್ಯಾಖ್ಯಾನಿಸಿ, ಅದರ ನಂತರದ ಯಶಸ್ಸಿಗೆ ವೇದಿಕೆಯನ್ನು ಹೊಂದಿಸಿತು. ಅದಾದಮೇಲೆ ಆಪಲ್ ಹಿಂತಿರುಗಿ ನೋಡಿದ್ದೇ ಇಲ್ಲ. ಯಾವುದೇ ಹೊಸ ಪ್ರಾಡಕ್ಟ್ ಬಿಡುಗಡೆ ಮಾಡದೆಯೂ ವರ್ಷದೊಳಗೆ ಸ್ಟಾಕ್ ಬೆಲೆ ಮೂರುಪಟ್ಟಾಯ್ತು. ಮರುವರ್ಷ ಆಪಲ್, ಜೆಲ್ಲಿಬೀನ್ ಬಣ್ಣಗಳ ಐ-ಮ್ಯಾಕ್ ಬಿಡುಗಡೆ ಮಾಡಿತು. ಥಿಂಕ್ ಡಿಫರೆಂಟ್ ಕ್ಯಾಂಪೇನ್ ಇಲ್ಲದೇ ಹೋಗಿದ್ದಿದ್ದರೆ, ಈ ಬಣ್ಣಬಣ್ಣದ ಕಂಪ್ಯುಟರುಗಳನ್ನು ಗ್ರಾಹಕರು ಖಂಡಿತಾ ಮಕ್ಕಳಾಟಿಕೆಗಳೆಂದು ಜರಿದು ತಿರಸ್ಕರಿಸುತ್ತಿದ್ದರು.

 

 

ತನ್ನ ಪಿಜ್ಜಾಗಳ ಗುಣಮಟ್ಟಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದ ಡಾಮಿನೋಸ್ 2009ರಲ್ಲಿ ಒಂದು ಅಪಾಯಕಾರಿ ಹಾಗೂ ಧೈರ್ಯಶಾಲಿ ಹೆಜ್ಜೆಯೊಂದನ್ನಿಟ್ಟಿತು. ಸಾಮಾನ್ಯವಾಗಿ ಯಾವ ಕಂಪನಿಯೂ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ “ಇಗೊಳ್ಳಿ ಇಲ್ಲಿದೆ ನಮ್ಮ ಹೊಸಾ ಸುಧಾರಿತ ಪ್ರಾಡಕ್ಟು” ಅಂತಾ ಹೊಸಾ ಗಿಮಿಕ್ ಪ್ರಾರಂಭಿಸುತ್ತಾರೆ. ಆದರೆ ಡೊಮಿನೋಸ್ ತಮ್ಮ “Oh yes! We did” ಎಂಬ ಹೊಸಾ ಜಾಹೀರಾತಿನಲ್ಲಿ ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವ ಮತ್ತು ತಮ್ಮ ಪರಿಷ್ಕರಿಸಿದ ಪಾಕವಿಧಾನವನ್ನು ಪರಿಚಯಿಸುವ ಒಂದು ಪಾರದರ್ಶಕ ಅಭಿಯಾನವನ್ನು ಪ್ರಾರಂಭಿಸಿತು. ತಮ್ಮ ಪ್ರಾಡಕ್ಟ್ ಸರ್ವೇಗಳಲ್ಲಿ ಯಾರ್ಯಾರು ಡಾಮಿನೋಸ್ ಪೀಜ್ಜಾಗಳನ್ನು ಟೀಕಿಸಿದ್ದರೋ, ಅವರ ಮನೆಗೇ ತಮ್ಮ ಹೊಸಾ ಪೀಜ್ಜಾಗಳೊಂದಿಗೆ ಹೋಗಿ ಅವರಿಂದ ಪ್ರತಿಕ್ರಿಯೆ ಪಡೆಯುವ ಹೊಸಾ ಜಾಹೀರಾತಿನೊಂದಿಗೆ, ತಮ್ಮ ಬ್ರಾಂಡಿನ ಬಗೆಗೆ ಜನರಿಗಿದ್ದ ನಕಾರಾತ್ಮಕ ಗ್ರಹಿಕೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು ಮತ್ತು ಮಾರಾಟವನ್ನು ಹೆಚ್ಚಿಸಿಕೊಂಡಿತು. ಜನರಿಗೆ ಹೊಸ ಪಿಜ್ಜಾ ಮಾತ್ರವಲ್ಲ, ಡಾಮಿನೋಸ್’ನ ಈ ಧೈರ್ಯವೂ ಮೆಚ್ಚುಗೆಯಾಗಿ, ಕಂಪನಿ ಮತ್ತೆ ಲಾಭದೆಡೆಗೆ ಮುಖಮಾಡಿತು.

 

 

2006ರ ಫೋರ್ಡ್‌ನ “ಡ್ರೈವ್ ಒನ್” ಕ್ಯಾಂಪೇನ್ ಕೂಡಾ, ಇಳಿಮುಖವಾಗುತ್ತಿರುವ ಮಾರಾಟ ಮತ್ತು ಕಳಂಕಿತ ಇಮೇಜ್‌ನೊಂದಿಗೆ ಹೆಣಗಾಡುತ್ತಿದ್ದ ಕಂಪನಿಯ ಕಥೆಯನ್ನು ಬದಲಾಯಿಸಿತು. ವಾಹನಗಳ ಉತ್ತಮ ಗುಣಮಟ್ಟ ಮತ್ತು ನಾವೀನ್ಯತೆಗೆ ಹೇಗೆ ಫೋರ್ಡ್ ಒತ್ತು ನೀಡುತ್ತಿದೆ ಎಂಬ ಕಥೆಯನ್ನು ಹೇಳುತ್ತಾ ಬ್ರ್ಯಾಂಡ್‌ನ ಗ್ರಹಿಕೆ ಮತ್ತು ಮಾರಾಟವನ್ನು ಸುಧಾರಿಸಲು ಸಹಾಯ ಮಾಡಿ ಫೋರ್ಡ್’ಗೆ ಜೀವ ತುಂಬಿತು. ಇದರ ನಂತರ ಹಲವಾರು ಹೊಸಾ ನಿರ್ಧಾರಗಳೊಂದಿಗೆ ನಷ್ಟದಲ್ಲಿದ್ದ ಬ್ರಾಂಡ್ ಹಾಗೂ ಯೂನಿಟ್ಟುಗಳನ್ನು ಮಾರಿ ಅಥವಾ ಮುಚ್ಚಿ, ಫೋರ್ಡ್ ಹೊಸ ದಿಕ್ಕಿನೆಡೆಗೆ ಮುಖಮಾಡಿತು. ವೋಕ್ಸ್‌ವ್ಯಾಗನ್‌ನ “ದಿ ಫೋರ್ಸ್” ಜಾಹೀರಾತು (2011),  ಲೆಗೋ ಅವರ “Go Mini-man Go” ಅಭಿಯಾನಗಳು ಕೂಡಾ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದ, ಜನಪ್ರಿಯತೆ ಕುಂಠಿತವಾಗುತ್ತಿದ್ದ ಕಂಪನಿಗಳ  ಬ್ರ್ಯಾಂಡ್‌ನ ಪುನರುಜ್ಜೀವನಕ್ಕೆ ಕೊಡುಗೆ ನೀಡುವುದರ ಮೂಲಕ ಧನಾತ್ಮಕ buzz ಅನ್ನು ಸೃಷ್ಟಿಸಿ, ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿ ಕಂಪನಿಗಳ ಪುನರುಜ್ಜೀವನ ಹಾಗೂ ಯಶಸ್ಸಿಗೆ ಕೊಡುಗೆ ನೀಡಿದವು.

 

ಭಾರತದಲ್ಲೂ ಕೂಡಾ ಜಾಹೀರಾತುಗಳು ಸಂಕಷ್ಟದಲ್ಲಿದ್ದ ಕಂಪನಿಗಳನ್ನು ಪುನರುಜ್ಜೀವನಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ. 2004ರಲ್ಲಿ ಕ್ಯಾಡ್ಬರೀಸ್ ಚಾಕಲೇಟುಗಳಲ್ಲಿ ಹುಳಗಳಿವೆ ಎಂಬ ವಿವಾದ ಹುಟ್ಟಿದಾಗ, ಈ ಚಾಕಲೇಟು ದೈತ್ಯಕಂಪನಿಯ ಮಾರುಕಟ್ಟೆ ಗಣನೀಯವಾಗಿ ಕುಸಿಯಿತು. ಮಾರುಕಟ್ಟೆಗಿಂತಲೂ ಹೆಚ್ಚಾಗಿ ಅದರ ಬ್ರಾಂಡ್ ಹಾಗೂ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಯಿತು. ಈ ಬಿರುಗಾಳಿಯಿಂದ ಹೊರಬರಲು ಕ್ಯಾಡ್ಬರೀಸ್ “ಕುಛ್ ಖಾಸ್ ಹೈ” (ಏನೋ ವಿಶೇಷವಾದದ್ದಿದೆ) ಎಂಬ ಜಾಹೀರಾತು ಸರಣಿಯನ್ನು ಆರಂಭಿಸಿತು. ಮೊದಮೊದಲಿಗೆ ಈ ಜಾಹೀರಾತುಗಳು “ಹೌದೌದು ನಿಮ್ಮ ಚಾಕಲೇಟಿನಲ್ಲಿ ಬೇರೆಲ್ಲೂ ಸಿಗದ, ನಿಜಕ್ಕೂ ವಿಶೇಷವಾದದ್ದೇ ಇದೆ, ಅದೇ ಈ ಹುಳಗಳು” ಎಂಬ ಕುಹಕಕ್ಕೀಡಾದರೂ, ಕ್ಯಾಡ್ಬರೀಸ್ ಭಾರತೀಯರು ಎಲ್ಲಿ ಕರಗುತ್ತಾರೆ ಎಂದು ತಿಳಿದುಕೊಂಡೇ, ಪ್ರೀತಿ ಸಂಬಂಧಗಳು ಮತ್ತು ಕೌಟುಂಬಿಕ ಮೌಲ್ಯಗಳ ಸುತ್ತಲೇ ಸುತ್ತುವ ಜಾಹೀರಾತುಗಳೊಂದಿಗೆ ಈ ಕ್ಯಾಂಪೇನ್ ಪ್ರಾರಂಭಿಸಿದ್ದರಿಂದ, ನಿಧಾನಕ್ಕೆ ಜನರು ಮತ್ತೆ ಕ್ಯಾಡ್ಬರೀಸ್’ಗೆ ಮೊರೆಹೋದರು. ಎರಡೇ ವರ್ಷದಲ್ಲಿ ಕಳೆದುಹೋಗಿದ್ದ ಮಾರುಕಟ್ಟೆಯ ಭಾಗವನ್ನು ಮರಳಿ ಪಡೆದದ್ದು ಮಾತ್ರವಲ್ಲ, ಮೊದಲಿಗಿಂತಲೂ ಗಟ್ಟಿಯಾದ ಬ್ರಾಂಡ್ ವ್ಯಾಲ್ಯೂ ಗಳಿಸಿತು.

 

2015ರಲ್ಲಿ ನೆಸ್ಟ್ಲೆ ಕಂಪನಿಯ ಜನಪ್ರಿಯ ಉತ್ಪನ್ನ ಮ್ಯಾಗಿಯನ್ನು, ಅದರಲ್ಲಿ ಸೀಸ ಮತ್ತಿತರ ರಸಾಯನಿಕಗಳಿವೆ ಎಂಬ ಕಾರಣದಿಂದ ಸರ್ಕಾರ ಬ್ಯಾನ್ ಮಾಡಿದಾಗ, ನೆಸ್ಟ್ಲೆಗೆ ಭಾರೀ ಹಿನ್ನಡೆಯುಂಟಾಗಿತ್ತು. ನೂಡಲ್ಸ್ ಮಾರುಕಟ್ಟೆಯನ್ನು 80% ಆಕ್ರಮಿಸಿಕೊಂಡಿದ್ದ ಮ್ಯಾಗಿ, ಒಂದೇ ತಿಂಗಳಲ್ಲಿ ಸೊನ್ನೆಗಿಳಿದಿತ್ತು. ಆದರೆ ಇದನ್ನು ಆರುತಿಂಗಳ ಕಾಲ ಚೆನ್ನಾಗಿ ನಿಭಾಯಿಸಿದ ಕಂಪನಿ, ಸರ್ಕಾರ ಹೇಳಿದ ಎಲ್ಲಾ ಪರೀಕ್ಷೆಗಳನ್ನು ಸರ್ಕಾರ ಹೇಳಿದ ಪ್ರಯೋಗಾಲಯಗಳಲ್ಲೇ ಮಾಡಿಸಿ ಗೆದ್ದುಬಂತು. ಸರ್ಕಾರವನ್ನೇನೋ ಪ್ರಯೋಗಾಲಯದ ರಿಪೋರ್ಟು ಕೊಟ್ಟು ನಂಬಿಸಬಹುದು. ಆದರೆ ರಿಪೋರ್ಟು ತೋರಿಸಿ, ಜನರನ್ನು ಮ್ಯಾಗಿ ತಿನ್ನುವಂತೆ ಮಾಡುವುದು ಸಾಧ್ಯವೇ? ಸಾಧ್ಯವೇ ಇಲ್ಲ. ಜನರ ವಿಶ್ವಾಸವನ್ನು ಮರಳಿಪಡೆಯಲಿಕ್ಕೊಂದು ಒಳ್ಳೆಯ ಆಡ್ ಕ್ಯಾಂಪೇನ್ ಬೇಕು. ಈ ನಿಟ್ಟಿನಲ್ಲಿ ನೆಸ್ಟ್ಲೆ ಮಾಡಿದ ಮಾರ್ಕೆಟಿಂಗ್ ತಂತ್ರ ನಿಜಕ್ಕೂ ಜೀನಿಯಸ್ ಆಗಿತ್ತು. ನಮ್ಮ ಪ್ರಾಡಕ್ಟ್ ಹೇಗೆ ಒಳ್ಳೆಯದು ಅಂತೆಲ್ಲಾ ಹೇಳಲು ಹೋಗಲೇ ಇಲ್ಲ. ಬದಲಿಗೆ ಜನರ ತಮ್ಮ ಮ್ಯಾಗಿಯ ನೆನಪನ್ನು ಹಂಚಿಕೊಳ್ಳುವ “ನಾನು ಮತ್ತು ನನ್ನ ಮ್ಯಾಗಿ” ಎಂಬ ಕ್ಯಾಂಪೇನ್ ಪ್ರಾರಂಭಿಸಿ, ಹೇಗೆ ಭಾರತೀಯರ ಜೀವನ ಮ್ಯಾಗಿಯೊಂದಿಕೆ ಹಾಸುಹೊಕ್ಕಾಗಿದೆ ಎಂಬುದನ್ನು ನಿರೂಪಿಸಿತು. ನಾನು ಹಾಸ್ಟೆಲ್ಲಿನಲ್ಲಿದ್ದಾಗ ಈ ರೀತಿ ಮ್ಯಾಗಿ ತಿಂತಾ ಇದ್ದೆ, ನಾನು ಹೊಸದಾಗಿ ಕೆಲಸಕ್ಕೆ ಸೇರಿ ಮನೆಯಿಂದ ದೂರವಿದ್ದಾಗ ಈ ರೀತಿ ಮ್ಯಾಗಿ ತಿನ್ನುತ್ತಿದ್ದೆ, ನನ್ನ ಮ್ಯಾಗಿಗೆ ನಾನು ಉಪ್ಪಿನಕಾಯಿ ಸೇರಿಸಿ ಮಾಡ್ತಿದ್ದೆ, ನನ್ನ ಮ್ಯಾಗಿಗೆ ನಾನು ತರಕಾರಿ ಮಾತ್ರವಲ್ಲ ಚಿಕನ್ ಕೂಡಾ ಸೇರಿಸಿ ಮಾಡ್ತಿದ್ದೆ ಹೀಗೆ ನೂರಾರು ಜನರು ತಂತಮ್ಮ ಮ್ಯಾಗಿ ರೆಸಿಪಿಗಳನ್ನು ಹಂಚಿಕೊಳ್ಳುವಂತೆ ಮಾಡಿ, ಹೇಗೆ 1983ರಿಂದಲೂ ಮ್ಯಾಗಿ ಭಾರತೀಯರ ನೆಚ್ಚಿನ ಖಾದ್ಯವಾಗಿ ಉಳಿದಿದೆ ಎಂಬುದನ್ನು ಮರುನೆನಪಿಸುತ್ತಾ, ಮತ್ತೆ ಅಡುಗೆ ಮನೆಯ ಶೆಲ್ಫಿಗೆ ಸೇರಿತು. ಕೇವಲ ಅಲ್ಲಿಗೇ ನಿಲ್ಲದೇ ನೆಸ್ಟ್ಲೇ ಅಮ್ಮಂದಿರನ್ನೂ ಈ ಆಡ್-ಸ್ಪೇಸಿಗೆ ಎಳೆತಂದು “ನನ್ನ ಮಗನಿಗೆ ಬೇವಿನಸೊಪ್ಪಿನ ಒಗ್ಗರಣೆಯ ಮ್ಯಾಗಿ ಇಷ್ಟವಿತ್ತು, ಈಗ ಅವನ ಮಕ್ಕಳಿಗೂ ಅದೇ ಇಷ್ಟ ಅಂತಾ” ಹೇಳುವ ಅಮ್ಮ, “ಅಮ್ಮನಾಗಿ ನಾನು ನನ್ನ ಮಕ್ಕಳಿಗೆ ಕೆಟ್ಟ ಮ್ಯಾಗಿ ತಿನ್ನಿಸಲು ಸಾಧ್ಯವಾ?” ಅನ್ನುವ ಎಮೋಷನಲ್ ಪ್ರಶ್ನೆ ಕೇಳುವ ಅಮ್ಮಂದಿರ ಜಾಹೀರಾತನ್ನೂ ಮಾಡಿ ಮತ್ತೆ ತನ್ನ ಮಾರ್ಕೆಟ್- ಶೇರ್ ಮರಳಿಪಡೆಯಿತು.

 

 

ಫಿಡಿಲೈಟ್ ಸಂಕಷ್ಟದಲ್ಲಿದ್ದಾಗ ಹಾಸ್ಯಮಯ ಫೆವಿಕ್ವಿಕ್ ಜಾಹೀರಾತುಗಳು ಮತ್ತೆ ಅದನ್ನು ಎದ್ದುನಿಲ್ಲಿಸಿದವು. ತನಿಷ್ಕ್ ಹಳೆಯ ಪೀಳಿಗೆಯ ಬ್ರಾಂಡ್ ಎಂಬ ಹಣೆಪಟ್ಟಿಪಡೆಯುವ ಅಪಾಯದಲ್ಲಿದಾಗಲೇ ಮರುವಿವಾಹದ ಜಾಹೀರಾತುಗಳ ಮೂಲಕ ಹೊಸ ಪೀಳಿಗೆಯ ಮನ್ನಣೆಯನ್ನೂ ಗಳಿಸಿತು. ಇನ್ನೇನು ದಿವಾಳಿಯಾಗುತ್ತದೆ ಎಂಬ ಸ್ಥಿತಿಯಲ್ಲಿದ್ದ ವೋಡಾಫೋನ್’ನ ಝೂ-ಝೂಗಳ ಜಾಹೀರಾತು ಕಂಪನಿಗೆ ನವಚೈತನ್ಯ ತುಂಬಿತು. ಅಮುಲ್ 1966ರಲ್ಲಿ ತಂದು ಅಮುಲ್ ಗರ್ಲ್ ಹಾಗೂ “ಅಟ್ಟರ್ಲೀ ಬಟ್ಟರ್ಲೀ ಡೆಲಿಷಿಯಸ್” ಕ್ಯಾಂಪೇನ್ ಬಂದಾಗ ಅಮುಲ್ ನಷ್ಟದಲ್ಲೇನೂ ಇರಲಿಲ್ಲವಾದರೂ, ಅದಕ್ಕೆ ತನ್ನದೇ ಆದ ಬ್ರಾಂಡ್ ಐಡೆಂಟಿಟಿ ಇರಲಿಲ್ಲ. ಅಮ್ಮಂದರಿಗೂ ಮಕ್ಕಳಿಗೂ ಇಷ್ಟವಾಗುವ ಅಮುಲ್ ಗರ್ಲ್ ಅನ್ನು ರೂಪಿಸಿ, ಅವಳ ಮೂಲಕ ಅಪ್ಪಂದರಿಗೆ ಇಷ್ಟವಾಗುವ ಕ್ರೀಡೆ ಮತ್ತು ರಾಜಕೀಯದ ವಿಚಾರದ ಬಗ್ಗೆ ಮಾತನಾಡಿಸುತ್ತಾ ಅಮುಲ್ ಮನೆಯಲ್ಲಿ ಎಲ್ಲರ ಮನಗೆದ್ದು ನಿಂತದ್ದೂ ಒಂದು ಜೀನಿಯಸ್ ಕ್ಯಾಂಪೇನ್.

 

ಹೀಗೆ ಜಾಹೀರಾತುಗಳು ಬರೇ ವ್ಯಾಪಾರಕ್ಕೇ ಸೀಮಿತವಾಗದೇ, ನಮ್ಮ ನೆನಪುಗಳನ್ನು ತಾಜಾಗೊಳಿಸುತ್ತಾ, ಆಗಾಗ ಸಾಮಾಜಿಕ ಸಂದೇಶ ನೀಡುತ್ತಾ, ಈ ಉತ್ಪನ್ನಗಳನ್ನು ಬಳಸುವ ನಾವುಗಳು ಅದೆಷ್ಟು ವಿಭಿನ್ನರು ಎಂದು ಸಾರುತ್ತಾ, ಮರುಳುಮಾಡುತ್ತಾ ಮುಖದಮೇಲೊಂದು ನಗೆಮೂಡಿಸಿ ಕಾರ್ಯಸಾಧಿಸುತ್ತವೆ. ಜನರ ಭಾವನಾತ್ಮಕ ತಂತುಗಳನ್ನು ಮೀಟುತ್ತಾ, ಮೆದುಳಿಗೆ ಕೆಲಸಕೊಡುತ್ತಾ, ತಮ್ಮ ಮುಖ್ಯಕಾರ್ಯಸಾಧಿಸುವ ಜಾಹೀರಾತುಗಳ ಈ ಲೋಕದಲ್ಲಿ ಮೊಗೆದಷ್ಟೂ ಕಥೆಗಳಿವೆ, ಕಲಿತಷ್ಟೂ ಮುಗಿಯದ ಪಾಠಗಳಿವೆ. ಮೊದಲು ಪತ್ರಿಕೆಗಳಲ್ಲಿ, ಆಮೇಲೆ ರೇಡಿಯೋಗಳಲ್ಲಿ, ನಂತರ ಟಿವಿಗಳಲ್ಲಿ ನಮ್ಮನ್ನು ಮೋಡಿಮಾಡಿದ ಜಾಹೀರಾತುಗಳು, ಈಗ ಅಂತರ್ಜಾಲಕ್ಕೂ ಲಗ್ಗೆಯಿಟ್ಟು ಜಾಹೀರಾತು ಯಾವುದು, ವಾಸ್ತವ ಯಾವುದು ಅಂತಲೂ ಗೊತ್ತಾಗದಷ್ಟೂ ನಮ್ಮನ್ನು ಆವರಿಸಿಕೊಂಡಿವೆ. ಈ ಜಾಹೀರಾತುಗಳ ಮೋಡಿಯನ್ನು ಅನುಭವಿಸುತ್ತಲೇ, ಪೂರ್ತಿ ಮರುಳಾಗದೇ ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳುವ ಶಕ್ತಿ ನಿಮಗೆ ಉಳಿಯಲಿ ಎಂದು ಹಾರೈಸುತ್ತಾ, 2024ರೆಡೆಗೆ ಮುಂದುವರೆಯೋಣ. ಈ ಸರಣಿಯ ನಾಲ್ಕೂ ಭಾಗಗಳಲ್ಲಿ ಉದಾಹರಿಸಿದ ಜಾಹೀರಾತುಗಳನ್ನು ನೀವು ನೋಡಬೇಕೆಂದಿದ್ದಲ್ಲಿ, ಇಲ್ಲಿರುವ ಯೂಟ್ಯೂಬ್ ಲಿಂಕನ್ನು ಅವಲೋಕಿಸಿ.

 

 

0 comments on “ಜನರನ್ನು ಸೆಳೆಯುವ ಜಾಹೀರಾತಿನ ಮಾಯಾಲೋಕ – 4

Leave a Reply

Your email address will not be published. Required fields are marked *