Tuesday, 27 February, 2024

2024 – ಭಾರತದ ಮುಂದಿರುವ ರಾಜತಾಂತ್ರಿಕ ಸವಾಲುಗಳು

Share post

ಹೊಸ ವರುಷವೊಂದು ಹೊಸ್ತಿಲಲ್ಲಿದೆ. ನಮ್ಮ ಸಂಪ್ರದಾಯದ ಪ್ರಕಾರ ಇದು ಹೊಸವರ್ಷದ ದಿನವಲ್ಲ ಎಂಬ ಸಿನಿಕತವನ್ನು ಬಿಟ್ಟು, ಯಾರಿಗೆ ಆಚರಿಸಲು ಇಷ್ಟವಿದೆಯೋ ಅವರನ್ನವರಪಾಡಿಗೆ ಬಿಟ್ಟು, ಎಲ್ಲರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾ, ಮುಂದುವರಿಯೋಣ. ಕಳೆದ ವರ್ಷ ಸಾಧಿಸಿದ್ದು ಬಹಳಷ್ಟಿದೆ. ಮುಂದಿನ ವರ್ಷದಲ್ಲೂ ಮಾಡಬೇಕಾದ ಕೆಲಸ ಕಾರ್ಯಗಳೂ, ಜಗತ್ತು ಮತ್ತದರ ಸವಾಲುಗಳೂ ಹತ್ತಾರಿವೆ. ಕಳೆದ ಹತ್ತುವರ್ಷಗಳಿಂದ ಭಾರತ ಬೆಳೆದಿರುವ ರೀತಿ ಅನೂಹ್ಯ ಮತ್ತು ಅಗಾಧ. ಜಗತ್ತಿನಲ್ಲಿ ಭಾರತಕ್ಕೆ ಈಗಿರುವ ಮಹತ್ವ ಬೇರೆಯದೇ ರೀತಿಯದ್ದು. ಒಂದುಕಾಲದಲ್ಲಿ ತೃತೀಯ ಜಗತ್ತಿನ ದೇಶಗಳಲ್ಲೊಂದಾಗಿ ಗುರುತಿಸಲ್ಪಡುತ್ತಿದ್ದ ಭಾರತ ಇಂದು ಶಕ್ತಿಶಾಲಿ ದೇಶಗಳ ಸಾಲಿನಲ್ಲಿ ನಿಂತಿರುವುದು ಮಾತ್ರವಲ್ಲ, ಇತರೇ ಶಕ್ತಿಶಾಲಿ ದೇಶಗಳೂ ಕೂಡಾ “ಇದನ್ನು ಮಾಡುವ ಮುನ್ನ, ಭಾರತವನ್ನೊಮ್ಮೆ ಅವಲೋಕಿಸೋಣ, ಅವರ ಅಭಿಪ್ರಾಯನ್ನೂ ಪಡೆದು ಮುನ್ನಡೆಯೋಣ” ಎಂದು ಯೋಚಿಸುವ ಮಟ್ಟಕ್ಕೆ ಬಂದು ನಿಂತಿದೆ. ಈ ಬದಲಾವಣೆಯನ್ನು ಇದೇ ಜೀವಿತಕಾಲದಲ್ಲಿ ನೋಡುವ ಸೌಭಾಗ್ಯವು ನಮ್ಮದಾಗಿದ್ದು, ಹಾಗೂ ಅದನ್ನು ಸಾಧಿಸುವಂತಹಾ ನಾಯಕ ಸಿಕ್ಕಿದ್ದು, ನಮಗೆ ನಿಜಕ್ಕೂ ಹೆಮ್ಮೆಯ ಸಂಗತಿ.

ಕಳೆದ ವರ್ಷ ನಾವು ಬಹಳಷ್ಟನ್ನು ಸಾಧಿಸಿದೆವು. ಭಾರತ ಪ್ರಜಾಪ್ರಭುತ್ವದ ಹಾಗೂ ಸಾರ್ವಭೌಮತೆಯ ಪ್ರತೀಕವಾದ ಸಂಸತ್ ಭವನ ಹೊಸ ರೂಪಪಡೆಯಿತು. ಜಗತ್ತಿನೆಲ್ಲೆದೆ ಹರಡಿದ್ದ ಕರೋನ ನಂತರದ ಹೆದರಿಕೆಗಳ ನಡುವೆಯೂ ನಾವು ಆರ್ಥಿಕವಾಗಿ ಸಬಲವಾಗಿದ್ದು ಮಾತ್ರವಲ್ಲದೆ, ಎಲ್ಲರೂ ಅಚ್ಚರಿಪಡುವಂತೆ ನಾಲ್ಕನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತೆವು. ಯಶಸ್ವಿಯಾಗಿ ಚಂದ್ರನ ಮೇಲೆಳಿದ ನಾಲ್ಕನೇ ದೇಶವಾದೆವು. ಜಾಗತಿಕ ವೇದಿಕೆಗಳಲ್ಲಿ  ನಮ್ಮ ಚಲನಚಿತ್ರಗಳು ಗುರುತಿಸಲ್ಪಟ್ಟವು ಹಾಗೂ ಪುರಸ್ಕಾರ ಪಡೆದವು. ಜಾವಲಿನ್ ಎಸೆತ, ಬ್ಯಾಂಡ್ಮಿಂಟನ್, ಚೆಸ್, ಕ್ರಿಕೆಟ್, ಡ್ರೆಸ್ಸೇಜ್ ಮುಂತಾದ ಆಟೋಟಗಳಲ್ಲಿ ನಮ್ಮ ಕ್ರೀಡಾಪಟುಗಳು ಭಾರತದ ಧ್ವಜವನ್ನು ಎತ್ತರಕ್ಕೇರಿಸಿದರು. ತಂತ್ರಜ್ಞಾನದ ವಿಷಯಕ್ಕೆ ಬಂದರೆ ಆಕಾಸ್ ಕ್ಷಿಪಣಿ, ಐಎನ್ಎಸ್ ವಿಕ್ರಾಂತ್, 5ಜಿ, ಸೆಮಿಕಂಡಕ್ಟರ್ ಮಿಷನ್, ಆರ್ಟಿಮಿಸ್ ಒಪ್ಪಂದಗಳು, ಚಂದ್ರಯಾನ ಮುಂತಾದ ಮಹತ್ವದ ಮಜಲುಗಳನ್ನು ಮುಟ್ಟಿದೆವು. ಭಾರತೀಯ ರೈಲ್ವೆಗೆ ಹೊಸ ಸ್ವರೂಪ ಕೊಡುತ್ತಿರುವ ವಂದೇ ಭಾರತ್ ರೈಲುಗಳು ಹೆಚ್ಚೆಚ್ಚು ಸೇವೆಗಿಳಿದವು. ಜಗತ್ತಿನ ಬಲಿಷ್ಟ ರಾಷ್ಟ್ರಗಳ G20 ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರ ಮೆಚ್ಚುಗೆ ಪಡೆದೆವು. ಏರ್ ಇಂಡಿಯಾ ಮೂಲಕ ಒಂದೇಬಾರಿಗೆ 470 ಹೊಸ ಪ್ರಯಾಣಿಕ ವಿಮಾನಗಳ ಆರ್ಡರ್ ಕೊಟ್ಟು, ಸಂಚಲವನ್ನೇ ಮೂಡಿಸಿದೆವು. ಒಟ್ಟಿನಲ್ಲಿ 2023 ಖಂಡಿತವಾಗಿಯೂ ಭಾರತದ ವರ್ಷವಾಗಿತ್ತು.

ಈಗ ಭಾರತವು 2024ರ ಹೊಸ್ತಿಲಲ್ಲಿ ನಿಂತಿರುವಾಗ, ನಮ್ಮ ಮುಂದೆ ಇನ್ನೂ ಹೆಚ್ಚೆಚ್ಚು ರಾಜತಾಂತ್ರಿಕ ಸವಾಲುಗಳು ನಮ್ಮ ಮುಂದಿವೆ. ಹಾಗೆಯೇ ವಿಶ್ವದ ಅಂಕಣದಲ್ಲಿ ಇನ್ನಷ್ಟು ಛಾಪು ಮೂಡಿಸಲು ಅಸಂಖ್ಯಾತ ಅವಕಾಶಗಳೂ ನಮ್ಮ ಮುಂದಿವೆ. ಭೌಗೋಳಿಕ-ರಾಜಕೀಯ ಬದಲಾವಣೆಗಳಲ್ಲಿ, ಜಗತ್ತು ಪಡೆಯುತ್ತಿರುವ ಆರ್ಥಿಕ ರೂಪಾಂತರಗಳಲ್ಲಿ, ದಿನೇ ದಿನೇ ವಿಕಸಿತಗೊಳ್ಳುತ್ತಿರುವ ಜಾಗತಿಕ ಶಕ್ತಿಕೇಂದ್ರಗಳ ಆಟದಲ್ಲಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಭಾರತದ ಪಾತ್ರವು ಹೆಚ್ಚೆಚ್ಚು ನಿರ್ಣಾಯಕವಾಗುತ್ತಿದೆ. 2024ರಲ್ಲಿ ಭಾರತ ಎದುರಿಸಲಿರುವ ಐದು ಅತೀಮುಖ್ಯ ರಾಜತಾಂತ್ರಿಕ ಸವಾಲುಗಳು ಯಾವುದಾಗಿರಬಹುದು ಮತ್ತು ಈ ಸಂಕೀರ್ಣತೆಗಳನ್ನು ಚಾಣಾಕ್ಶತೆಯಿಂದ ನಿಭಾಯಿಸಲು ಭಾರತ ನೀಡಬೇಕಾದ ಆದ್ಯತೆಗಳನ್ನು ನಾವು ಅವಲೋಕಿಸೋಣ.

ಭೌಗೋಳಿಕ ದೈತ್ಯಶಕ್ತಿಗಳ ನಡುವಿನ ಸಮೋತಲನ:
ಭಾರತದ ವಿದೇಶಾಂಗ ನೀತಿಯು ಕಳೆದ ಕೆಲವರ್ಷಗಳಿಂದ ಪ್ರಮುಖ ಜಾಗತಿಕ ಶಕ್ತಿಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಚತುರತೆಯಿಂದ ನಡೆಸಿದೆ. ಮಧ್ಯಪ್ರಾಚ್ಯ, ರಷ್ಯಾ, ಆಫ್ರಿಕಾಗಳನ್ನು ಅಪ್ಪಿಕೊಂಡು ಸ್ವಾಗತಿಸಿದೆ. ಅಮೇರಿಕಾ, ಚೀನಾಗಳ ನಡುವಿನ ಸಂಬಂಧಗಳನ್ನು ಎಚ್ಚರದಿಂದ ಕಾಯ್ದುಕೊಂಡಿದೆ. ಕೆನಾಡಾ ಮತ್ತು ಯೂರೋಪುಗಳ ಕಣ್ಣಲ್ಲಿ ಕಣ್ಣಿಟ್ಟು ಹಿಮ್ಮೆಟ್ಟಿಸಿದೆ. ಪಾಕಿಸ್ಥಾನವನ್ನು ತಾನು ಮಾತ್ರವಲ್ಲ ಇಡೀ ಜಗತ್ತೇ ಸಂಪೂರ್ಣವಾಗಿ ಉಪೇಕ್ಷಿಸುವಂತೆ ಮಾಡಿದೆ. ವರ್ಷದ ಕೊನೆಯಲ್ಲಿ ಹಮಾಸ್’ನನ್ನು ತೃಪ್ತಿಪಡಿಸಲಿಕ್ಕಾಗಿ ಕತಾರ್ ಭಾರತಕ್ಕೆ ಸ್ವಲ್ಪ ಕಿರಿಕಿರಿಕೊಟ್ಟರೂ, ಭಾರತ ಅದನ್ನೂ ಸ್ಪಷ್ಟವಾಗಿ ಎದುರಿಸಿತು. ಬರುವ ವರ್ಷಗಳಲ್ಲಿ ಕತಾರ್ ಅನ್ನು ತನ್ನ ವ್ಯವಹಾರಗಳಿಂದ ದೂರವಿಡುವ ತಂತ್ರವನ್ನು ಭಾರತ ಅದಾಗಲೇ ಪ್ರಾರಂಭಿಸಿದೆ. ಮೂರನೇ ಅತೀದೊಡ್ಡ ಗ್ರಾಹಕದೇಶವಾದ ಭಾರತವನ್ನು ಎದುರುಹಾಕಿಕೊಂಡ ಕತಾರ್, ಮುಂದಿನ ನಡೆಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.

ಚೀನಾ ಸಂಬಂಧಗಳು ಮತ್ತು ಗಡಿ ಸಮಸ್ಯೆಗಳು:
ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತಾ ವಿಚಾರ ಇನ್ನೂ ಬಗೆಹರಿಯದ ಆದರೆ ನಿರ್ಣಾಯಕ ರಾಜತಾಂತ್ರಿಕ ಸವಾಲಾಗಿಯೇ ಉಳಿದಿದೆ. ಈ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಪರಿಹರಿಸಿಕೊಳ್ಳುವುದು ಆಗಲೇಬೇಕಾದ ವಿಚಾರ. ಮೇಲ್ನೋಟಕ್ಕೆ ಸಧ್ಯಕ್ಕೆ ಎಲ್ಲವೂ ಚೆನ್ನಾಗಿದ್ದಂತೆ ಕಂಡರೂ, ಎರಡು ದೇಶಗಳ ನಡುವಿನ ಸಂಬಂಧ ಹಲವುಮಜಲುಗಳಲ್ಲಿ ಹದೆಗೆಟ್ಟಿದೆ ಎಂಬುದು ಗೊತ್ತಿರುವ ವಿಚಾರವೇ. ಆರ್ಥಿಕವಾಫಿ ಚೀನಾವನ್ನು ಹಿಮ್ಮೆಟ್ಟಿಸಲು ಹಾಗೂ ಕೈಕಟ್ಟಿ ಕೂರಿಸಲು ಸಾಧ್ಯ ಎಂಬುದನ್ನು ಭಾರತ ನಿರೂಪಿಸಿಯಾಗಿದೆ. ಈ ಸಂಕೀರ್ಣವಾದ ಸಂಬಂಧವನ್ನು ನಿರ್ವಹಿಸುವಲ್ಲಿ ದೃಢವಾದ ಆಕ್ರಮಣಾತ್ಮಕ ನಿಲುವೂ ಬೇಕು, ಜೊತೆಗೇ ಇಬ್ಬರಿಗೂ ಸಾಮಾನ್ಯಶತ್ರುವಾಗಿರುವ ಅಮೇರಿಕಾದ ಆಟ ಕೊನೆಗೊಳಿಸುವಲ್ಲಿ ರಕ್ಷಣಾತ್ಮಕವಾದ ತಂತಗಾರಿಕೆಯೂ ಬೇಕು. ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಾ, ಸಂಘರ್ಷಗಳ ಅಪಾಯವನ್ನು ತಡೆಗಟ್ಟುತ್ತಾ 2024ರ ಭಾರತವು ಚತುರ ರಾಜತಾಂತ್ರಿಕತೆಯಲ್ಲಿ ತೊಡಗಬೇಕು. ಸಧ್ಯಕ್ಕೆ ಚೀನಾ ಎದುರಾಳಿಯಷ್ಟೇ, ವೈರಿಯಲ್ಲ ಎಂಬ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ನಮಗೆ ಚೀನಾದೊಂದಿಗೆ ಯುದ್ಧದ ಇರಾದೆಯಿಲ್ಲ ಎಂದು ಹೇಳುತ್ತಲೇ, ನಮ್ಮ ಗಡಿಪ್ರದೇಶದ ರಸ್ತೆಗಳು, ಸೇನಾ ನೆಲೆಗಳನ್ನು ಬಲಪಡಿಸಿಕೊಳ್ಳಬೇಕು.

ಆರ್ಥಿಕ ರಾಜತಾಂತ್ರಿಕತೆ ಮತ್ತು ವ್ಯಾಪಾರ ಒಪ್ಪಂದಗಳು:
ಜಾಗತಿಕ ಆರ್ಥಿಕತೆಯು 2023ರಲ್ಲಿ ವಾಯುಭಾರಕಡಿಮೆಯಾದ ಸಮುದ್ರದ ಸ್ಥಿತಿಯಲ್ಲಿದೆ. ಒಂದೆಡೆ ಕೆಲದೇಶಗಳು ಸದೃಡವಾಗಿ ಮುನ್ನಡೆಯುತ್ತಿದ್ದರೆ, ಸಾಂಪ್ರದಾಯಿಕವಾಗಿ ಶಕ್ತಿಶಾಲಿಯೆನಿಸಿಕೊಂಡಿದ್ದ ದೇಶಗಳು ಕುಸಿಯುತ್ತಲೇ ಸಾಗಿವೆ. ಹಾಗಾಗಿ ಭಾರತವು ವ್ಯಾಪಾರ ಸಂಬಂಧಗಳನ್ನು ಧೃಡಪಡಿಸುವಲ್ಲಿ ಒಂದೇ ನೀತಿಯನ್ನು ಅನುಸರಿಸಲು ಸಾಧ್ಯವಿಲ್ಲವಾಗಿದೆ. ಈಗ ನಮಗೆ ಬೇಕಿರುವುದು ಆರ್ಥಿಕ ರಾಜತಾಂತ್ರಿಕತೆ. 2025ಕ್ಕೆ ನಾವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ನಮ್ಮ ಕನಸಾಗಿತ್ತು. ಅದು ಸಧ್ಯಕ್ಕೆ ಕನಸಾಗಿಯೇ ಕಾಣುತ್ತಿದೆಯಾದರೂ, ಮುಂದಿನ ವರ್ಷ ನಾವು 5.5%ನಿಂದ 7%ವರೆಗೆ ಬೆಳೆಯುವುದನ್ನು ಯಾರೂ ತಡೆಯಲಾರರು. ನಾವು ಈ ವರ್ಷವೂ ಜಗತ್ತಿನ ಪಾಲಿಗೆ ಅತೀದೊಡ್ಡ ಮಾರುಕಟ್ಟೆಯೇ. ಹಾಗಾಗಿ ಹಳೆಯ ಮತ್ತು ಭಾರತಕ್ಕೆ ಅನಾನುಕೂಲವಾದ ವ್ಯಾಪಾರ ಒಪ್ಪಂದಗಳನ್ನು ಮುರಿದು, ನಮಗೆ ಲಾಭದಾಯಕ ನಿಯಮಗಳ ಬಗ್ಗೆ ಮಾತುಕತೆ ನಡೆಸುವುದು ಮತ್ತು ಭಾರತೀಯ ಸರಕು ಮತ್ತು ಸೇವೆಗಳಿಗಾಗಿ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುವುದಕ್ಕೆ ಇದು ಸಕಾಲ. ಆಹಾರ, ಹತ್ತಿ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ರಫ್ತನ್ನು ಹೆಚ್ಚಿಸಿ ಹೊಸ ಭಾಷ್ಯ ಬರೆಯಲು 2024 ಸೂಕ್ತ ಸಮಯ. ವಾಣಿಜ್ಯ ಪಾಲುದಾರರ ವೈವಿಧ್ಯೀಕರಣ ಮತ್ತು ಯಾವುದೇ ಒಂದು ಆರ್ಥಿಕತೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು 2024ರ ಮುಖ್ಯ ಉದ್ದೇಶಗಳಲ್ಲೊಂದಾಗಬೇಕು.

ಬಹುಪಕ್ಷೀಯ ಮಾತಕತೆಗಳು ಮತ್ತು ಜಾಗತಿಕ ಮುನ್ನೋಟ:
ವಿಶ್ವಸಂಸ್ಥೆ, G20, ಮತ್ತು BRICS ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತದ ಸಕ್ರಿಯ ಭಾಗವಹಿಸುವಿಕೆ ಅದಾಗಲೇ ಫಲಕೊಟ್ಟಿದೆ. ಜವಾಬ್ದಾರಿಯುತ ಜಾಗತಿಕ ನಾಯಕನಾಗಿ, ಹವಾಮಾನ ಬದಲಾವಣೆಯಿಂದ ಹಿಡಿದು ಆರೋಗ್ಯ ರಕ್ಷಣೆಯವರೆಗಿನ ವಿಷಯಗಳ ಕುರಿತು ಅಂತರರಾಷ್ಟ್ರೀಯ ನೀತಿಗಳನ್ನು ರೂಪಿಸಲು ಭಾರತದ ಕೊಡುಗೆ ಗಣನೀಯವಾಗಿ ಹೆಚ್ಚಿದೆ ಹಾಗೂ ಮನ್ನಣೆಗಳಿಸಿದೆ. ನಮ್ಮ ಬೆಳವಣಿಗೆಗೆ ಸಹಕಾರನೀಡಬಲ್ಲ ಸಮಾನ ಮನಸ್ಕ ರಾಷ್ಟ್ರಗಳನ್ನು ಅನ್ವೇಷಿಸುವುದು ಹಾಗೂ ಅವುಗಳೊಂದಿಗೆ ಸಂಬಂಧಗಳನ್ನು ಇನ್ನೂ ಹೆಚ್ಚು ಬಲಪಡಿಸುವುದು ಮತ್ತು ಜಾಗತಿಕ ಆಡಳಿತ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವುದು ಭಾರತದ ರಾಜತಾಂತ್ರಿಕ ಯಶಸ್ಸಿಗೆ ಪ್ರಮುಖವಾಗಲಿದೆ. ಕೋವಿಡ್ ಸಮಯದಲ್ಲಿ ವ್ಯಾಕ್ಸೀನ್ ಪೂರೈಕೆ ಮಾಡಿ ಸಂಪಾದಿಸಿದ ಸೌಹಾರ್ದ ಮತ್ತು ಸದ್ಭಾವನೆಗಳನ್ನು ಪುಟಕ್ಕಿಟ್ಟು, ಅದನ್ನು ಆರ್ಥಿಕ ಮತ್ತು ರಾಜತಾಂತ್ರಿಕ ಗಳಿಕೆಗಳಾಗಿ ಬದಲಾಯಿಸಲು ಇದು ಸೂಕ್ತ ಸಮಯ.

ಭಯೋತ್ಪಾದನೆ ನಿಗ್ರಹ ಮತ್ತು ಪ್ರಾದೇಶಿಕ ಸ್ಥಿರತೆ:
ಕಾಶ್ಮೀರ ಸಧೃಡವಾಗುತ್ತಿರುವ ಹಾಗೂ ಪಾಕಿಸ್ಥಾನ ಕುಸಿದುಬೀಳುತ್ತಿರುವ ಇದೇ ಕಾಲದಲ್ಲಿ, ಖಲಿಸ್ಥಾನ ನಮಗೆ ಹೊಸದೊಂದು ತಲೆನೋವಾಗಿ ಪರಿಣಮಿಸುತ್ತಿದೆ. ಎಪ್ಪತ್ತರ ದಶಕದಲ್ಲಿದ್ದಂತೆ ಖಲಿಸ್ಥಾನದ ಹೋರಾಟಕೇಂದ್ರ ಪಂಜಾಬ್ ಅಗಿ ಉಳಿದಿಲ್ಲ. ಈಗ ಖಲಿಸ್ಥಾನ ಹೋರಾಟ ಭಾರತ, ಕೆನಡ, ನೇಪಾಳ, ಬ್ರಿಟನ್, ಯುಎಇ ಮತ್ತು ಮಾಲ್ಡೀವ್ಸ್ ಮುಂತಾದ ದೇಶಗಳಲ್ಲಿ ಬೇರೂರುತ್ತಾ ವಿಚ್ಛಿದ್ರಕಾರೀ ಶಕ್ತಿಗಳನ್ನು ಸೃಷ್ಟಿಸುತ್ತಿದೆ. ಇದರ ಜೊತೆಗೇ ಚೀನಾವನ್ನೂ ಒಂದಂಕೆಯಲ್ಲಿಡಲು ಸಾಧ್ಯವಾದ ನಮಗೆ ಸುತ್ತಲಿನ ಪುಟಾಣಿ ದೇಶಗಳಾದ ಶ್ರೀಲಂಕಾ, ಮಾಲ್ಡೀವ್ಸ್, ಬರ್ಮಾ, ಬಾಂಗ್ಲಾ, ವಿಯೆಟ್ನಾಂಗಳ ಭಾರತವಿರೋಧೀ ನಿಲುವುಗಳನ್ನು ಹತ್ತಿಕ್ಕುವುದು ಕಬ್ಬಿಣದ ಕಡಲೆಯಾಗುತ್ತಿದೆ. ಅಲ್ಲಿನ ಚುನಾವಣೆ ಮತ್ತು ಸರ್ಕಾರಗಳನ್ನು ಭಾರತ ಸ್ನೇಹಿಯಾಗಿ ಪರಿವರ್ತಿಸುವುದು ಮತ್ತೆ ಮತ್ತೆ ಕಷ್ಟವಾಗುತ್ತಿದ್ದು, 2024ರಲ್ಲೂ ಇದು ನಮ್ಮ ಮುಖ್ಯ ಗುರಿಯಾಗಿಯೇ ಉಳಿಯಲಿದೆ. ಪ್ರಾದೇಶಿಕ ಸಹಕಾರವನ್ನು ಬಲಪಡಿಸುವುದು, ಗುಪ್ತಚರ ಮಾಹಿತಿ ಹಂಚಿಕೆಯ ಕಾರ್ಯವಿಧಾನಗಳನ್ನು ಉತ್ತೇಜಿಸುವುದು ಮತ್ತು ಉಗ್ರವಾದದ ಮೂಲ ಕಾರಣಗಳನ್ನು ಪರಿಹರಿಸುತ್ತಾ, ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೆರೆಯ ರಾಷ್ಟ್ರಗಳೊಂದಿಗೆ ವಿಶ್ವಾಸವನ್ನು ಬೆಳೆಸಲು ಮತ್ತು ಭದ್ರತಾ ಸಹಯೋಗವನ್ನು ಹೆಚ್ಚಿಸಲು ಇನ್ನೂ ಹೆಚ್ಚಿನ ದೃಢವಾದ ರಾಜತಾಂತ್ರಿಕ ಉಪಕ್ರಮಗಳ ಅಗತ್ಯ ನಮಗೆ ಮುಂದಿನ ವರ್ಷದಲ್ಲಿ ಕಾಣಬರಲಿದೆ.

75ನೇ ವಯಸ್ಸಿನ ಭಾರತ ಬಲಿಷ್ಟ ರಾಷ್ಟ್ರವೆಂಬ ಹೆಸರು ಪಡೆದಾಗಿದೆ. ಈ ವರ್ಷ ಆ ಹೆಸರನ್ನು ಉಳಿಸಿಕೊಳ್ಳುವ ಮತ್ತು ಶಾಶ್ವತಗೊಳಿಸುವ ಕೆಲಸವಷ್ಟೇ. 1960 ಮತ್ತು 70ರಲ್ಲಿ ಅಮೇರಿಕಾ ಮಾಡಿದ ತಂತ್ರಗಳ ಹಾದಿಯಲ್ಲೇ ಸಾಗಿದರೂ 2024 ನಮ್ಮ ಪಾಲಿಗೆ ಒಂದೊಳ್ಳೆಯ ವರ್ಷವಾಗಲಿದೆ. 50% ಪ್ರಯತ್ನವನ್ನು ಈಗಿರುವ ರಾಜತಾಂತ್ರಿಕ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲೂ, 20% ಪ್ರಯತ್ನವನ್ನು ಹೊಸ ಸಂಬಂಧಗಳ ಅಭಿವೃದ್ಧಿಯಲ್ಲೂ, 30% ಪ್ರಯತ್ನವನ್ನು ಶತ್ರುಗಳನ್ನು ಸದೆಬಡಿಯುವತ್ತಲೂ ಕೇಂದ್ರೀಕರಿಸುವುದು ನಮ್ಮ ಪ್ರಯತ್ನವಾಗಬೇಕು. ರಷ್ಯಾ, ಇಸ್ರೇಲ್, ಮಧ್ಯಪ್ರಾಚ್ಯ ಮತ್ತು ಬ್ರಿಕ್ಸ್ಗಳನ್ನು ಮತ್ತಷ್ಟು ಹತ್ತಿರವಾಗಿಸಿಟ್ಟುಕೊಂಡರೆ ಮುಂದಿನ ಕಷ್ಟದ ವರ್ಷವೊಂದನ್ನು ನಿಭಾಯಿಸಬಹುದು. ಹೌದು…..2023ಕ್ಕೆ ಹೋಲಿಸಿದ, 2024 ಕಷ್ಟದ ವರ್ಷವಾಗಲಿದೆ. ಎಲ್ಲರಿಗೂ ಒಳಿತಾಗಲಿ.

0 comments on “2024 – ಭಾರತದ ಮುಂದಿರುವ ರಾಜತಾಂತ್ರಿಕ ಸವಾಲುಗಳು

Leave a Reply

Your email address will not be published. Required fields are marked *