Tuesday, 28 May, 2024

ಜಗತ್ತು ಕೇಳಿದಾಗಲೆಲ್ಲಾ ಬದಲಾಗಲೇಬೇಕೆಂದೇನಿಲ್ಲ

Share post

“ಜಗತ್ತು ಬದಲಾಗ್ತಿದೆ, ನಾವೂ ಬದಲಾಗಬೇಕು. ಇಲ್ಲಾಂದ್ರೆ ಹಿಂದುಳಿದು ಬಿಡ್ತೀವಿ” ಎನ್ನುವ ಮಾತನ್ನ ದೈನಂದಿನ ಜೀವನದಲ್ಲಿ ಹಲವು ಬಾರಿ ಕೇಳ್ತಾ ಇರ್ತೀವಿ. ಬಹಳಷ್ಟು ಸಲ ಇದು ನಿಜ ಕೂಡಾ. ಈಗಿನ ಜಗತ್ತು ಓಡುವ ವೇಗ ನೋಡಿದರೆ ಎಂತವರಿಗೂ ಒಂದುಸಲ ಹೆದರಿಕೆಯಾಗುತ್ತದೆ. ಇವತ್ತಿದ್ದ ತಂತ್ರಜ್ಞಾನ ನಾಳೆಯಿಲ್ಲ, ನಾವು ಮಾಡುವ ಕೆಲಸಗಳಲ್ಲೂ ಸಹ ಇವತ್ತಿದ್ದ ಪರಿಕಲ್ಪನೆ ಮುಂದಿನ ವರ್ಷ ಇರಲ್ಲ, ಕೆಲವು ನಾಯಕರುಗಳ ಯುದ್ಧದಾಹ ನೊಡಿದ್ರೆ ಇವತ್ತಿದ್ದ ದೇಶವೂ ನಾಳೆ ಇರುತ್ತೋ ಇಲ್ವೋ ಹೇಳೊಕಾಗಲ್ಲ. ಆದ್ದರಿಂದ ಸದಾ ಬದಲಾವಣೆಗಳಿಗೆ ತೆರೆದುಕೊಂಡಿರಬೇಕಾದದ್ದು ಇವತ್ತಿನ ಜರೂರು. ಟ್ರೂ ಬ್ಲಾಕ್ ಅನ್ನೋದು ಸಿಆರ್ಟಿ ಟಿವೀಯಲ್ಲಿ ಮಾತ್ರವೇ ಸಾಧ್ಯ, ಹಾಗಾಗಿ ಅದರಲ್ಲೇ ಎಲ್ಲಾ ಕಾರ್ಯಕ್ರಮ ನೋಡ್ತೀನಿ ಅಂತಾ ಕೂತರೆ, ಕ್ರಿಕೆಟ್ಟಿನ ರೀಪ್ಲೇ ನೋಡೋದಕ್ಕೂ ಕಷ್ಟವಾಗಿ ಹೋಗುತ್ತೆ. ಸ್ಮಾರ್ಟ್ ಟೀವಿಗಳ ಮೂಲಕ ಓಟಿಟಿಗಳಲ್ಲಿರುವ ಒಳ್ಳೊಳ್ಳೆಯ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನೇ ಕಳೆದುಕೊಳ್ತೀವಿ. ಯಾವುದೋ ಒಂದನ್ನು ಪಡೆಯೋದಕ್ಕೆ ಹೋಗಿ, ಇನ್ನೆಷ್ಟೋ ಕೈತಪ್ಪಿ ಹೋಗುತ್ತೆ. ನಿಮ್ಮ ಸುತ್ತಲಿನ ಜನರು ಬದಲಾಗದಿದ್ದರೆ, ಅವರನ್ನೇ ಬದಲಾಯಿಸಿಬಿಡಿ (when you can’t change the people, change the people) ಎಂಬ ಮಾತನ್ನೂ ನೀವು ಕೇಳಿರಬಹುದು.

ವ್ಯಾಪಾರ ವಹಿವಾಟು ನಡೆಸುವವರು ನೀವಾದರೆ, ಹಲವು ಬದಲಾವಣೆಗಳಿಗೆ ತೆರೆದುಕೊಳ್ಳುವ ಮನಸ್ಸು ಇನ್ನೂ ಹೆಚ್ಚು ಅತ್ಯಗತ್ಯ. ನಿಮಗಿಷ್ಟ ಇರಲಿ, ಇಲ್ಲದಿರಲಿ ಗ್ರಾಹಕ ಬದಲಾಗ್ತಾ ಇದ್ದಾನೆ, ಆತನ ಅಭಿರುಚಿ ಬದಲಾಗ್ತಾ ಇದೆ. ಅಂದಮೇಲೆ ತಾವೂ, ತಮ್ಮ ಉತ್ಪನ್ನ ಅಥವಾ ಸೇವೆಗಳೂ ಅದಕ್ಕೆ ತಕ್ಕನಾಗಿ ಬದಲಾಗಲೇ ಬೇಕು. 90ರ ದಶಕದ ಹೋಟೆಲುಗಳಲ್ಲಿ ಶುಚಿತ್ವಕ್ಕಾಲೀ, ಹೋಟೆಲಿನ ಒಳಾಂಗಣ ಸೌಂದರ್ಯಕ್ಕೇನೂ ಮುಖ್ಯವಾದ ಗಮನವಿರುತ್ತಿರಲಿಲ್ಲ. ಅಲ್ಲಿಗೆ ಹಿಂದೆ ಬಂದಾಗಿನ ಅನುಭವ, ರುಚಿ ಮತ್ತು ಬೆಲೆ ಇವೇ ಮಾನದಂಡವಾಗಿದ್ದವು. ಶೃಂಗೇರಿಯ ಮಲ್ಲಿಕಾರ್ಜುನ ಬೀದಿಯಲ್ಲೊಂದು ಮಲ್ಲಿಕಾ ಮಂದಿರ ಎಂಬ ಹೋಟೆಲಿತ್ತು. ಹೊರಗಡೆಯಿಂದ ಅದನ್ನು ಹೋಟೆಲ್ ಅಂತಾ ಗುರುತಿಸಲಿಕ್ಕಿದ್ದ ದಾರಿಯೆಂದರೆ ಅದರ ಮಧ್ಯದಲ್ಲಿ ನಿಂತಿದ್ದ ವಡೆ, ಬನ್ಸು ಇತ್ಯಾದಿಗಳನ್ನು ಜೋಡಿಸಿಡುವ ಗಾಜಿನ ಕಪಾಟೊಂದೇ. ಅದರ ಗಾಜು ಕೂಡಾ ಎಣ್ಣೆಯ ಜಿಡ್ಡಿನಿಂದಾಗಿ ಸದಾ ಮಂಕಾಗೇ ಇದ್ದು, ತನ್ನ ಹಿಂದೆ ಏನಿದೆ ಎಂಬ ಗುಟ್ಟನ್ನು ಪೂರ್ತಿ ಬಿಟ್ಟುಕೊಡದೇ, ಗ್ರಾಹಕರ ಊಹಾಶಕ್ತಿಯನ್ನು ಚುರುಗಾಗಿಯೇ ಇಡುತ್ತಿತ್ತು. ಹೋಟೆಲಿನ ಬೆಂಚು ಟೇಬಲ್ಲುಗಳ ಬಣ್ಣ ಯಾವುದು ಊಹಿಸಲಿಕ್ಕೂ ಸ್ವಲ್ಪ ಕಷ್ಟವಿತ್ತು. ಪ್ಲೈವುಡ್ ಇತ್ಯಾದಿಗಳ ಲೇಪವಿಲ್ಲದೇ, ಅವನ್ನು ಮಾಡಿಸಿದಾಗ ಯಾವ ಬಣ್ಣವಿತ್ತೋ, ಅದು ಮಂಕಾದರೆ ಯಾವ ಬಣ್ಣ ಸಿಗುತ್ತದೆಯೋ ಅದರಲ್ಲಿದ್ದವು. ಮಂಕಾದ ಮೂಲೆಯಲ್ಲಿ ಕೂತ ನೀವು ತಿಂದದ್ದು ಏನೆಂದು ನಿಮಗೆ ಮಾತ್ರವೇ ಗೊತ್ತಾಗುತ್ತಿದ್ದದ್ದು. ಆದರೂ ಹೋಟೆಲ್ ತುಂಬಾ ಜನಪ್ರಿಯ. ಯಾಕೆಂದರೆ ಅಲ್ಲಿನ ತಿಂಡಿಗಳ ರುಚಿ, ಮತ್ತದರ ಬೆಲೆ ಎರಡೂ ಕೂಡಾ ಶೃಂಗೇರಿಯ ಹಳಬರ ಮಟ್ಟಿಗೆ ಸರಿಸಾಟಿಯಿಲ್ಲದ್ದು. 1970ರ ದಶಕದಿಂದಲೂ ಘಟ್ಟದ ಕೆಳಗಿನಿಂದ ಶೃಂಗೇರಿಗೆ ಬರುತ್ತಿದ್ದ ಹಳೆಯ ತಲೆಮಾರಿನವರೆಲ್ಲಾ ಹೋಗುತ್ತಿದ್ದದ್ದು ಅದೊಂದೇ ಹೋಟೆಲ್ಲಿಗೆ. ಆ ಹೋಟೆಲ್ಲಿನಲ್ಲಿ 2010ರವರೆಗೂ ನಾನು ಬದಲಾವಣೆ ಕಂಡಿದ್ದೇ ಇಲ್ಲ. ಹೆಚ್ಚೆಚ್ಚು ಹೊಸ ಪ್ರವಾಸಿಗರು ಬರುವ ಶೃಂಗೇರಿಯಲ್ಲಿ, ಆ ಹಳೇ ಹೊಟೆಲ್ ಸ್ವಾಭಾವಿಕವಾಗಿಯೇ ಒಂದು ದಿನ ಮುಚ್ಚಿಹೋಯ್ತು.

ಆ ವ್ಯಾಪಾರ ಯಾವ ಕಾರಣಕ್ಕೆ ಮುಚ್ಚಿಹೋಯ್ತೋ ಗೊತ್ತಿಲ್ಲ. ಆದರೆ ಬದಲಾವಣೆಗೆ ಮನಸ್ಸೊಡ್ಡದ ವ್ಯವಹಾರಗಳು ನಿಂತು ಹೋಗುವುದು ಸಾಮಾನ್ಯ. ಆದರೆ ಇವತ್ತಿನ ಕತೆ, ಹೊಸಬರಿಂದ ತೀವ್ರ ಸ್ಪರ್ಧೆಯನ್ನು ಎದುರಿಸಿ, ನಷ್ಟದೆಡೆಗೆ ಮುಖಮಾಡಿ ನಿಂತಾಗ, ಉತ್ಪನ್ನದಲ್ಲಿ ಬದಲಾವಣೆ ಮಾಡುವ ಅವಕಾಶವಿದ್ದರೂ ಮಾಡದೇ, ಅವಡುಗಚ್ಚಿ ನಿಂತು, ಸ್ವಲ್ಪವೇ ಸ್ವಲ್ಪ ತಂತ್ರವನ್ನು ಬದಲಾಯಿಸಿ ಮತ್ತೆ ಯಶಸ್ಸುಕಂಡ ಪ್ರಾಡಕ್ಟ್ ಒಂದರದ್ದು. ಹೌದು ಸ್ವಾಮಿ, ಬದಲಾವಣೆ ಮಾಡೋದಿಲ್ಲ ಅಂತಾ ನಿಂತು ಗೆದ್ದವರ ಉದಾಹರಣೆಯಿದು.

ಡೆಟ್ಟಾಲ್ ಹೆಸರು ಕೇಳದವರು ಯಾರಿದ್ದಾರೆ? ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಎಷ್ಟೋ ದಶಕಗಳಿಂದ ಜನಪ್ರಿಯ ಬ್ರಾಂಡ್ ಈ ಡೆಟ್ಟಾಲ್. ಇದರ ಮಾಲೀಕ ಲೈಝಾಲ್, ಡ್ಯೂರೆಕ್ಸ್, ಏರ್-ವಿಕ್, ಹಾರ್ಪಿಕ್, ಸ್ಟ್ರೆಪ್ಸಿಲ್ಸ್ ಇತ್ಯಾದಿಗಳನ್ನು ಮಾರುವ ರೆಕಿಟ್. 1932ರಲ್ಲಿ ಬ್ರಿಟನ್ನಿನ ಯಾರ್ಕ್ಶೈರ್ ಎಂಬ ಊರಿನ ವಿಜ್ಞಾನಿ ವಿಲಿಯಂ ಕೋಲ್ಬ್ರೂಕ್ ರೆನೋಲ್ಡ್ಸ್ ತಯಾರಿಸಿದ, ಈ ಬ್ಯಾಕ್ಟೀರಿಯಾನಾಶಕ/ಸೋಂಕುನಿವಾರಕ ಫಾರ್ಮ್ಯುಲಾವನ್ನು 1937ರಲ್ಲಿ ರೆಕಿಟ್ ಅಂಡ್ ಕೋಲ್ಮನ್ ಎಂಬ ಕಂಪನಿ ಕೊಂಡುಕೊಂಡಿತು. ಇಂದಿನವರೆಗೂ ಅದರ ಮೂಲ ಫಾರ್ಮ್ಯುಲಾದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಹತ್ತು ಚಮಚ ನೀರಿಗೆ, ಒಂದು ಚಮಚ ಡೆಟ್ಟಾಲ್ ಬೆರೆಸಿದರಾಯ್ತು. ಧೂಮದ ಬಣ್ಣದ ನೀರು ತಯಾರಾಗುತ್ತದೆ, ಅದನ್ನು ನೇರವಾಗಿ ಗಾಯವಾದ ಜಾಗಕ್ಕೆ ಹಚ್ಚಬಹುದು ಅಥವಾ ನೆಲ ಸ್ವಚ್ಛಮಾಡಲು ಬಳಸಬಹುದು. ಗ್ರಾಹಕರಿಗೆ ಕಳೆದ ಎಂಬತ್ತು ವರ್ಷಗಳಿಂದಲೂ ಇಷ್ಟವಾಗಿರುವ ಈ ಉತ್ಪನ್ನ ರೆಕಿಟ್’ನ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಗಳಲ್ಲೊಂದು. ನೂರಾರು ದೇಶಗಳಲ್ಲಿ ಮಾರಾಟವಾಗುವ ಡೆಟ್ಟಾಲ್’ಗೆ ಎಷ್ಟೋ ಮಾರುಕಟ್ಟೆಗಳಲ್ಲಿ ಪ್ರತಿಸ್ಪರ್ಧಿಯೇ ಇಲ್ಲ! ಭಾರತೀಯ ಮಾರುಕಟ್ಟೆಯನ್ನೂ ದಶಕಗಳ ಕಾಲ ಏಕಚಕ್ರಾಧಿಪತಿಯಾಗಿ ಆಳಿದ ಈ ಡೆಟ್ಟಾಲ್’ಗೆ ಎದುರಾಳಿಯಾಗಿ, ತೊಂಬತ್ತರ ದಶಕದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತನ್ನ ಸಾವ್ಲೋನ್ ಎಂಬ ಉತ್ಪನ್ನವನ್ನು ತಂದಿತು. ಈ ಸ್ಪರ್ಧೆಗೆ ಇಳಿಯುವಾಗ ನಡೆಸಿದ ಸಮೀಕ್ಷೆಯಲ್ಲಿ ಜೆ-ಅಂಡ್-ಜೆ’ಗೆ ತಿಳಿದ ಅಂಶವೇನೆಂದರೆ, ಡೆಟ್ಟಾಲ್ ಒಂದು ಅತ್ಯುತ್ತಮ ಪ್ರಾಡಕ್ಟು. ಬೆಲೆಯೂ ತೀರಾ ಹೆಚ್ಚೇನಲ್ಲ. ಆದರೆ ಅದರ ಬಗ್ಗೆ ಕೆಲ ಗ್ರಾಹಕರಿಗಿದ್ದದ್ದು ಒಂದೇ ದೂರು. “ಗಾಯವಾದ ಜಾಗಕ್ಕೆ ಡೆಟ್ಟಾಲ್ ಹಚ್ಚಿದಾಗ ಒಂದೆರಡು ನಿಮಿಷ ಭಯಂಕರ ಉರಿಯುತ್ತದೆ ಎಂದಷ್ಟೇ. ಅದೊಂದು ಬಿಟ್ಟರೆ ಡೆಟ್ಟಾಲ್ ನಮಗೆ ತೀರಾ ಇಷ್ಟವಾದ, ನಂಬಿಕಸ್ತ ಉತ್ಪನ್ನ” ಎಂದರು.

ಈ ದೈತ್ಯ ಬ್ರಾಂಡನ್ನೆದುರಿಸಿ ಮಾರುಕಟ್ಟೆಗೆ ಇಳಿಯಲಿಕ್ಕೇ ದೊಡ್ಡ ಎಂಟ್ರಿ ಬ್ಯಾರಿಯರ್ ಇರುವಾಗ, ಜೆ-ಅಂಡ್-ಜೆ ತನಗೆ ಸಿಕ್ಕಿದ ಈ ಓಬವ್ವನ ಕಿಂಡಿಯಂತಾ ಒಂದೇ ಅಂಶವನ್ನು ಬಳಸಿಕೊಂಡೇ ತನ್ನ ಉತ್ಪನ್ನವನ್ನು ಹೊರಗೆಬಿಟ್ಟಿತು. ಅವರ ಜಾಹೀರಾತುಗಳಲ್ಲಿದ್ದದ್ದು “ನಮ್ಮ ಸಾವ್ಲೋನ್, ಬೇರೆ ಆಂಟಿಬ್ಯಾಕ್ಟಿರಿಯಲ್ಲುಗಳ ಹಾಗೆ ಉರಿಯುವುದಿಲ್ಲ. ನಿಮ್ಮ ಮಕ್ಕಳ ಮತ್ತು ನಿಮ್ಮ ಕೋಮಲ ಚರ್ಮವನ್ನು, ಕೋಮಲವಾಗಿಯೇ ಸ್ವಚ್ಛ ಮಾಡುತ್ತದೆ” ಎಂಬ ಸಾಲಷ್ಟೇ. “ಡೆಟ್ಟಾಲ್ ಅಂದ್ರೆ ಉರಿ” ಎಂಬ ಅಂಶವನ್ನು ನೆನಪಿಸುತ್ತಾ ತಮ್ಮ ಉತ್ಪನ್ನವನ್ನು ಪರಿಚಯಿಸಿದ ಈ ಮಾರ್ಕೆಟಿಂಗ್ ತಂತ್ರ ಅತ್ಯದ್ಭುತವಾಗಿ ಕೆಲಸ ಮಾಡಿ, ಎರಡೇ ವರ್ಷದಲ್ಲಿ ಸುಮಾರು 27% ಮಾರುಕಟ್ಟೆ ಸಾವ್ಲೋನ್’ನದ್ದಾಯ್ತು. ಇದನ್ನೇ ಬೇರೆ ದೇಶಗಳಲ್ಲೂ ಬಳಸಿ, ಜಾನ್ಸನ್ ಅಂಡ್ ಜಾನ್ಸನ್ ಗ್ರಾಹಕರನ್ನು ಸೆಳೆಯಿತು. ಇದರ ಸಫಲತೆಯನ್ನು ಕಂಡೇ, ನಾವು ನೀವು ಗಾಯವಾದಾಗ ಬಳಸುತ್ತಿದ್ದ, ಆಸ್ಪತ್ರೆಗಳಲ್ಲಿ ಹಚ್ಚುತ್ತಿದ್ದ, ಭಯಂಕರ ಉರಿಯ “ಟಿಂಕ್ಚರ್ ಆಫ್ ಅಯೋಡಿನ್” ಕೂಡಾ, ಉರಿಯೇ ಇಲ್ಲದ “ಪೋವೋಡಿನ್-ಅಯೋಡಿನ್” ಆಯ್ತು, ನೆನಪಿದೆಯಾ?

ಮೊದಮೊದಲಿಗೆ ರೆಕಿಟ್ ಹೆಚ್ಚೇನೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಮುಂದಿನ ಹತ್ತುವರ್ಷಗಳಲ್ಲಿ ಸಾವ್ಲೋನ್, ಡೆಟ್ಟಾಲ್’ಗೆ ತೀವ್ರ ಸ್ಪರ್ಧೆಯನ್ನೊಡ್ಡಿತು. “ಉರಿಯೊಲ್ಲ” ಎಂಬ ಒಂದೇ ಸಾಲು ಹಿಡಕೊಂಡು, ಹತ್ತಿರ ಹತ್ತಿರ 50% ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯನ್ನು ಹತ್ತಿಕ್ಕಲು ಡೆಟ್ಟಾಲ್’ಗಿದ್ದದ್ದು ಒಂದೇ ಮಾರ್ಗ. ತನ್ನ ಉತ್ಪನ್ನದಲ್ಲಿದ್ದ ಉರಿಯನ್ನು ತೆಗೆಯಬೇಕು. ಅಂದರೆ ಪ್ರಾಡಕ್ಟಿನ ಫಾರ್ಮ್ಯೂಲಾ ಬದಲಾಯಿಸಬೇಕು. ಸಮಯದೊಂದಿಗೆ ಬದಲಾವಣೆಯೊಂದೇ ಸೂಕ್ತ ಎಂಬ ಸಲಹೆಯೂ ರೆಕಿಟ್’ನ ಬ್ರಾಂಡ್ ಮ್ಯಾನೇಜರುಗಳಿಗೆ ಹೋಯ್ತು. ಆದರೆ, ಭಾರತದ ಅಕ್ಕಪಕ್ಕದ ಒಂದು ಮಾರುಕಟ್ಟೆಯಲ್ಲಿ ಗಲಿಬಿಲಿಯಾದದ್ದಕ್ಕೆ ಅರವತ್ತು ವರ್ಷ ಹಳೆಯ ಫಾರ್ಮ್ಯೂಲಾವನ್ನು ಬದಲಾಯಿಸಲು ರೆಕಿಟ್ ತಯಾರಿರಲಿಲ್ಲ. ಹಾಗಂತಾ ಸುಮ್ಮನಿರುವಂತೆಯೂ ಇಲ್ಲ. ನಷ್ಟವೂ ಬಾಗಿಲು ತಟ್ಟುತ್ತಿದೆ. ಏನು ಮಾಡುವುದು!? ಎರಡು ತಿಂಗಳ ಸಮೀಕ್ಷೆ, ತಲೆಬಿಸಿಯ ನಂತರ ಡೆಟ್ಟಾಲ್’ನ ಬ್ರಾಂಡ್ ಮ್ಯಾನೇಜರುಗಳು ಒಂದು ನಿರ್ಧಾರಕ್ಕೆ ಬಂದರು. ಸಾವ್ಲೋನ್’ನವರು ಯಾವುದನ್ನ ನಮ್ಮ ದೌರ್ಬಲ್ಯ ಎಂದಿದ್ದರೋ ಅದನ್ನೇ ತಿರುಗುಬಾಣವಾಗಿ ಬಳಸಲು ಮುಂದಾದರು. ಹೇಗೆ?

ನಾವೆಲ್ಲಾ ಸಣ್ಣಕ್ಕಿದ್ದಾಗ ಹುಷಾರಿಲ್ಲದಿದ್ದರೆ, ಬಿದ್ದೆದ್ದು ಬಂದರೆ ನಮಗೆ ಔಷಧಿ ಕೊಡುವಾಗ, ಅಪ್ಪ-ಅಮ್ಮ-ಅಜ್ಜಿ ಎಲ್ಲಾ ಏನು ಹೇಳ್ತಾ ಇದ್ದರು ನೆನಪಿಸಿಕೊಳ್ಳಿ? “ಮಗಾ, ಮೊದಲಿಗೊಂಚೂರು ಉರಿಯುತ್ತೆ. ಹಚ್ಚಿದ ಜಾಗದಲ್ಲಿ ಉರೀತಿದೆ ಅಂದ್ರೆ ಔಷ್ದಿ ಕೆಲಸ ಮಾಡ್ತಿದೆ ಅಂತಾ ಅರ್ಥ. ಟಾನಿಕ್ ಕಹಿ ಇದೆ ಅಂದ್ರೆ ಸ್ಟ್ರಾಂಗ್ ಇದೆ ಅಂತಾ ಅರ್ಥ” ಅಂತಾ ಹೇಳ್ತಿದ್ದರು ಅಲ್ಲವೇ? ಔಷದಿ ಹೆಚ್ಚೆಚ್ಚು ಕಹಿ ಇದ್ದಷ್ಟೂ ಹೆಚ್ಚು ಪರಿಣಾಮಕಾರಿ. ಉರಿಯಾದಷ್ಟೂ ಬೇಗ ಗುಣವಾಗುತ್ತೆ ಅನ್ನೋದು ಭಾರತೀಯ ಉಪಖಂಡದಲ್ಲಿ ಚಾಲ್ತಿಯಲ್ಲಿದ್ದ ನಂಬಿಕೆ. ಇದನ್ನೇ ಬಳಸಿಕೊಂಡ ಡೆಟ್ಟಾಲಿನ ಮ್ಯಾನೇಜರುಗಳು ಹೊಸಾ ಜಾಹೀರಾತನ್ನು ಬಿಡುಗಡೆ ಮಾಡಿದರು. “ಆಂಟಿಸೆಪ್ಟಿಕ್ ಹಚ್ಚಿದಾಗ ಉರಿಯಲೇ ಇಲ್ಲ ಅಂತಾದರೆ, ಬ್ಯಾಕ್ಟೀರಿಯಗಳು ಸತ್ತದ್ದಕ್ಕೇನು ಗ್ಯಾರಂಟಿ?” ಎಂಬ ಪ್ರಶ್ನೆಯ ಮೂಲಕ, ಸಾವ್ಲೋನ್ ಬಗೆಗೆ ಗ್ರಾಹಕರಿಗಿದ್ದ ನಂಬಿಕೆಯನ್ನು ಅಲ್ಲಾಡಿಸಿ, “ನಮ್ಮ ಪ್ರಾಡಕ್ಟ್ ಬಳಸಿದರೆ ಉರಿಯುತ್ತೆ ಹೌದು. ಆದರೆ ಜಲೇಗಾ, ತಭೀ ತೋ ಚಲೇಗಾ” ಎಂಬ ಸಾಲಿನ ಮೂಲಕ ಮೈಕ್ ಡ್ರಾಪ್ ಮಾಡಿದ ರೆಕಿಟ್, ಒಂದೇ ತಿಂಗಳಲ್ಲಿ ಗ್ರಾಹಕರ ಮನಗೆದ್ದಿತು. ಮುಂದಿನ ಎರಡು ವರ್ಷಗಳಲ್ಲಿ, ಪ್ರಾಡಕ್ಟನ್ನಾಗಲೀ ಜಾಹೀರಾತನ್ನಾಗಲೀ ಬದಲಾಯಿಸದೆ, ಕಳೆದು ಹೋಗಿದ್ದ ಗ್ರಾಹಕರನ್ನು ತನ್ನದಾಗಿಸಿಕೊಂಡಿತು. ಜೊತೆಗೇ ನೆಲ ಒರೆಸಲಿಕ್ಕೇ ಬೇರೆ ಡೈಲ್ಯೂಟೆಡ್ ಡೆಟ್ಟಾಲ್ ಒಂದನ್ನೂ, ಜೊತೆಗೇ ಲೈಝಾಲ್ ಅನ್ನೂ ಬಿಡುಗಡೆ ಮಾಡಿ, ಆ ವಿಭಾಗದಲ್ಲೂ ಮಾರುಕಟ್ಟೆಯಲ್ಲಿ ಸಿಂಹಪಾಲು ತನ್ನದಾಗಿಸಿಕೊಂಡಿತು. ಗಾಯಕ್ಕೆ ಹಚ್ಚುವ ಆಂಟಿಸೆಪ್ಟಿಕ್ ಒಂದನ್ನೇ ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿದ್ದ ಸಾವ್ಲೋನ್, ನೆಲ ಒರೆಸುವ ದ್ರಾವಣದ ಮಾರಾಟದಲ್ಲಾದರೂ ಇದ್ದಿದ್ದರೆ, ಇಲ್ಲಿ ಆದ ನಷ್ಟವನ್ನು ಆ ಕಡೆ ನಿಭಾಯಿಸಿಕೊಳ್ಳಬಹುದಾಗಿತ್ತು. ಆದರೆ ಒಂದೇ ಆಟದಲ್ಲಿ, ಸಾವ್ಲೋನಿನ ಮೂಲಸತ್ವಕ್ಕೂ, ಪರ್ಯಾಯ ವ್ಯವಹಾರಕ್ಕೂ ಪೆಟ್ಟುಕೊಟ್ಟ ರೆಕಿಟ್, ತನ್ನಲ್ಲಿ ಬದಲಾವಣೆಯೇ ಮಾಡಿಕೊಳ್ಳದೇ, ಸಾವ್ಲೋನ್ ಅನ್ನು ಚೆಕ್-ಮೇಟ್ ಮಾಡಿತು. ಕುಸಿಯುತ್ತಲೇ ಹೋದ ಮಾರ್ಕೆಟ್ ಶೇರ್’ನಿಂದಾಗಿ, ಜೆ-ಅಂಡ್-ಜೆ ಸಾವ್ಲೋನ್ ಬ್ರಾಂಡ್ ಅನ್ನು 2015ರಲ್ಲಿ ಐಟಿಸಿಗೆ ಮಾರಿ ಕೈತೊಳೆದುಕೊಂಡಿತು.

ಡೆಟ್ಟಾಲ್’ನ ಅಧಿಪತ್ಯವನ್ನು ಸಾವ್ಲೋನ್ ಅಲ್ಲಾಡಿಸಿದ, ನಂತರ ಸಾವ್ಲೋನ್ ಅನ್ನು ಡೆಟ್ಟಾಲ್ ಮಣ್ಣುಮುಕ್ಕುಸಿದ ಎರಡು ಕಥೆಗಳು ಮಾರ್ಕೆಟಿಂಗ್ ಜಗತ್ತಿನಲ್ಲಿ ಅನನ್ಯ. ಕಳೆದ ತಿಂಗಳು ಊರಿನಲ್ಲಿದ್ದಾಗ ಮಲ್ಲಿಕಾಮಂದಿರವನ್ನು ನೆನಪಿಸಿಕೊಂಡು ಅಲ್ಲಿಗೆ ಹೋದರೆ, ಹೋಟೆಲ್ ರಾಘವೇಂದ್ರ ಎಂಬ ಬೋರ್ಡ್ ಕಾಣಿಸಿತು. ಮಾರಾಟವಾಯ್ತೋ ಅಥವಾ ಬರೀ ಹೆಸರಿನ ಬದಲಾವಣೆಯೋ ಗೊತ್ತಿಲ್ಲ. ಸಾಮಾನ್ಯವಾಗಿ ಹೋಟೆಲೊಂದು ಹೊಸದಾಗಿ ಪ್ರಾರಂಭವಾದರೆ ಅದರ ಹೊರ ಒಳವಿನ್ಯಾಸವೆಲ್ಲಾ ಬದಲಾಗುತ್ತದೆ. ತಮಾಷೆಯ ವಿಚಾರವೆಂದರೆ ಮಲ್ಲಿಕಾ ಮಂದಿರವೆಂಬುದು ರಾಘವೇಂದ್ರ ಹೋಟೆಲ್ ಆದರೂ ಕೂಡಾ, ಯಾವ ಚಹರೆಯನ್ನೂ ಬದಲಾಯಿಸಿರಲಿಲ್ಲ. ಅದೇ ಮಂಕು ಪಿಠೋಪಕರಣಗಳು, ಅದೇ ಹಳೆಯ ನೆನಪು ಹುಟ್ಟಿಸಬಲ್ಲ ಬಾಗಿಲು. ಆದರೆ ಡೆಟ್ಟಾಲ್ ಗೆದ್ದಂತೆ, ಮಲ್ಲಿಕಾ ಮಂದಿರ ಗೆಲ್ಲಲಿಲ್ಲ. ಹಾಗಾಗಿ, ರೆಕಿಟ್’ನಲ್ಲಿರುವಂತಾ ಮಾರ್ಕೆಟಿಂಗ್ ಅಥವಾ ಬ್ರಾಂಡ್ ಮ್ಯಾನೇಜರುಗಳು ನಿಮ್ಮಲ್ಲಿಲ್ಲವಾದರೆ ಸುಧಾರಣೆಗೆ ಸದಾ ತಯಾರಾಗಿರಿ.

0 comments on “ಜಗತ್ತು ಕೇಳಿದಾಗಲೆಲ್ಲಾ ಬದಲಾಗಲೇಬೇಕೆಂದೇನಿಲ್ಲ

Leave a Reply

Your email address will not be published. Required fields are marked *