Friday, 26 April, 2024

ಭಾರತ ಮತ್ತು ಭಾರತೀಯತೆಯನ್ನು ಕಟ್ಟಿಕೊಡುವ ದೇವಸ್ಥಾನ ಪ್ರವಾಸಗಳು

Share post

ಚಿಕ್ಕವರಿದ್ದಾಗ ಬೇಸಿಗೆ ರಜೆಯಲ್ಲಿ ನಮ್ಮ ಅಪ್ಪ-ಅಮ್ಮ, ಎಲ್ಲಾ ಹೆಚ್ಚಿನ ಪೋಷಕರಂತೆಯೇ, ಟೂರು ಪ್ಲಾನ್ ಮಾಡೋರು. ಹೆಚ್ಚಿನ ಬಾರಿ ಈ ಟೂರುಗಳಲ್ಲಿ ದೇವಸ್ಥಾನಗಳಿರುವ ಜಾಗಗಳೇ ಇರುತ್ತಿದ್ದದ್ದು. ಚಿತ್ರದುರ್ಗದ ಕೋಟೆ, ಜೋಗದ ಜಲಪಾತ ಹಾಗೂ ರಾಯಚೂರಿನ ಥರ್ಮಲ್ ಪವರ್ ಪ್ಲಾಂಟ್ ಈ ಮೂರೇ ಟೂರುಗಳಲ್ಲಿ ನಮಗೆ ಬಹುಷಃ ದೇವಸ್ಥಾನ ಅನ್ನೋದು ಎರಡನೇ ಮುಖ್ಯ ಆಕರ್ಷಣೆಯಾಗಿದ್ದದ್ದು. ಆದರೂ ಆ ಟೂರುಗಳಲ್ಲೂ ಏಕನಾಥೇಶ್ವರ, ಸಿಗಂದೂರು, ಮಂತ್ರಾಲಯಗಳು ಸೈಡಲ್ಲಿ ಇದ್ದೇ ಇದ್ದವು. ನಾನು ಒಂಬತ್ತನೇ ಕ್ಲಾಸಿನಲ್ಲಿದ್ದಾಗ ಕೊಪ್ಪದಿಂದ ಇಡೀ ದಕ್ಷಿಣಭಾರತಕ್ಕೊಂದು ಟೂರಿಗೆ ಹೋಗಿದ್ದೆ. ಹದಿನೈದು ಹದಿನಾರು ದಿನದ್ದು. ನನ್ನ ಬಾಲ್ಯದ ಅತ್ಯಂತ ಉದ್ದದ ಪ್ರವಾಸ ಇದೇ. ಇದರಲ್ಲಂತೂ ದೇವಸ್ಥಾನಗಳ ಭೇಟಿಯದ್ದೇ ದೊಡ್ಡಪಾಲು. ಮೈಸೂರು, ಗುರುವಾಯೂರು, ತಿರುವನಂತಪುರಂ, ಕನ್ಯಾಕುಮಾರಿ, ನಾಗರಕೋಯಿಲ್, ಚಿದಂಬರಂ, ಮಧುರೈ, ಶ್ರೀರಂಗಂ, ತಿರುಚ್ಚಿ, ಪಳನಿ, ತಿರುಪತಿ, ಶ್ರೀಶೈಲಂ….ಹೀಗೇ ಲೆಕ್ಕವೇ ಇಲ್ಲದಷ್ಟು ದೇವಸ್ಥಾನಗಳನ್ನು ನೋಡಿಬಿಟ್ಟೆ. ಒಟ್ಟಿನಲ್ಲಿ ನನ್ನ ಹೈಸ್ಕೂಲು ಮುಗಿಯುವವರೆಗೂ ದೇವಸ್ಥಾನಗಳ ಭೇಟಿಯಿಲ್ಲದೇ ಯಾವ ಟೂರೂ ಸಂಪೂರ್ಣವಾದದ್ದೇ ಇಲ್ಲ. ಅಪ್ಪ-ಅಮ್ಮ ಅದನ್ನು ನಮ್ಮ ಜ್ಞಾನಾರ್ಜನೆಗಾಗಿ ಮಾಡಿದರೋ, ರಜಾಸಮಯದಲ್ಲಿ ಸ್ವಲ್ಪ ಮಜಾ ಮಾಡೋಣ ಅಂತಾ ಮಾಡಿದರೋ, ಎಲ್.ಟಿ.ಸಿ ಕ್ಲೇಮ್ ಮಾಡೋಕೆ ಮಾಡಿದರೋ….ಅದೆಲ್ಲಾ ಇವತ್ತಿಗೆ ನಗಣ್ಯ. ಆದರೆ ನನಗೆ ಜಗತ್ತು ಸುತ್ತುವಹುಚ್ಚು ಹತ್ತಿದ್ದೇ ನನಗೆ ಆ ವಾರ್ಷಿಕ ತಿರುಗಾಟಗಳಲ್ಲಿ.

ಆದರೆ ಆಗ ನನಗೆ ನಾವು ಬರೀ ದೇವಸ್ಥಾನಗಳಿಗೇ ಹೋಗ್ತಿವಿ ಅಂತಾ ಕಿರಿಕಿರಿಯಿತ್ತು. ಮೈಸೂರಿಗೆ ಹೋದರೆ ಕೆಆರೆಸ್ಸಿಗಿಂತಾ ಮುಂಚೆ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದಕ್ಕೆ, ರಾಯಚೂರಿಗೆ ಹೋದಾಗ ಪವರ್ ಪ್ಲಾಂಟಿಗಿಂತಾ,ಕೃಷ್ಣಾನದಿಯ ಸೇತುವೆಗಿಂತಾ, ಮಂತ್ರಾಲಯವೇ ಮೊದಲದಿನದ ಪ್ಲಾನ್ ಆಗಿದ್ದಕ್ಕೆ ಅಪ್ಪನ ಹತ್ರ ಕೊಯ್ಯೋಮರ್ರೋ ಅಂದಿದ್ದೆ. ಎಲ್ಲಾ ಹೆಚ್ಚಿನ ಭಾರತೀಯ ಪೋಷಕರಂತೆಯೇ ನನ್ನಪ್ಪನೂ, ಸಮಾಧಾನದಿಂದ ವಿವರಿಸುವುದನ್ನು ಬಿಟ್ಟು, ಪಟಾರಂತ ಬೆನ್ನ ಮೇಲೆ ನಾಲ್ಕು ಕೊಟ್ಟು ನನ್ನನ್ನು ಸುಮ್ಮನಾಗಿಸಿದರು. ಇವತ್ತಿಗೂ ನಾನು ಊರಿಗೆ ಬಂದಾಗ ಅಪ್ಪ ಏನಾದ್ರೂ ಕಾರು ತೆಗೆಯೋ ಪ್ಲಾನ್ ಮಾಡಿದ್ದಾರೆ ಅಂದರೆ ಎಲ್ಲೋ ಹತ್ತಿರದಲ್ಲಿ ದೇವಸ್ಥಾನದ ಭೇಟಿ ಉಂಟು ಅಂತಲೇ ಲೆಕ್ಕ. ಅದಿಲ್ಲದಿದ್ದರೂ ನಮ್ಮ ಕುಟುಂಬದಲ್ಲಿ ವಾರ್ಷಿಕ ಶೃಂಗೇರಿ-ಮಾರಣಕಟ್ಟೆ-ಕೊಲ್ಲೂರು-ಆನೆಗುಡ್ಡೆ-ಧರ್ಮಸ್ಥಳ-ಸುಬ್ರಹ್ಮಣ್ಯ-ಹೊರನಾಡು-ಶೃಂಗೇರಿ ಒಂದು ಸುತ್ತು ಆಗೇ ಆಗುತ್ತದೆ. ಸ್ಟೇರಿಂಗ್ ಹಿಂದೆ ಕೂತರೇ ಅಲ್ಲೇ ಅಂಟಿಕೊಳ್ಳುವ ನಾನಂತೂ ಒಂದೆರಡು ಸಲ ಶೃಂಗೇರಿ-ಆನೆಗುಡ್ಡೆ-ಧರ್ಮಸ್ಥಳ-ಸುಬ್ರಹ್ಮಣ್ಯ-ಹೊರನಾಡು-ಶೃಂಗೇರಿ ಇಷ್ಟನ್ನೂ ಬೆಳಿಗ್ಗೆ ಐದಕ್ಕೆ ಹೊರಟು, ರಾತ್ರಿ ಹನ್ನೊಂದರೊಳಗೆ ಒಂದೇ ದಿನದಲ್ಲಿ ಮುಗಿಸಿದ್ದುಂಟು. ಮೊದಲಬಾರಿಯ ಈ ರೀತಿಯ ಟೆಂಪಲ್-ರನ್ ನಂತರ ನನ್ನ ಅರ್ಧಾಂಗಿ “ನನ್ ಕೈಲಿ ಇಷ್ಟೆಲ್ಲಾ ಒಂದೇ ದಿನಕ್ಕೆ ಆಗಲ್ಲ” ಅಂತಾ ಖಡಾಖಂಡಿತವಾಗಿ ಹೇಳಿದಮೇಲೆ, ಇವನ್ನು ಎರಡು ದಿನಕ್ಕೆ ಭಾಗಮಾಡಲಾಯ್ತು.

 

ಯಾಕೆ ಇಷ್ಟೆಲ್ಲಾ ಪೀಠಿಕೆ ಅಂದ್ರೆ, ಇವತ್ತು ಕೂತು ಯೋಚಿಸಿದರೆ ಆ ದೇವಸ್ಥಾನಗಳ ದರ್ಶನಗಳನ್ನು ಸಣ್ಣವನಿದ್ದಾಗಲೇ ಮಾಡಿಸಿದ್ದಕ್ಕೆ ಅಪ್ಪ-ಅಮ್ಮನಿಗೆ ಒಂದು ಧನ್ಯವಾದ ಹೇಳಲೇಬೇಕು. ಸೆಕ್ಯುಲರಿಸಮ್ಮಿನ ಭೂತದ ಕೈ ಮೇಲಾಗಲು ಪ್ರಾರಂಭವಾಗುತ್ತಿದ್ದ ಆ ಕಾಲದಲ್ಲಿ, ಎಲ್ಲವನ್ನೂ ಪ್ರತಿಭಟಿಸುವ ಉಮೇದಿನ ಅ ವಯಸ್ಸಿನಲ್ಲೇ ದೇವಸ್ಥಾನಗಳ ಮೂಲಕನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಬೇರುಗಳನ್ನು ಬಲಪಡಿಸಿದ್ದೇ ಆ ಪ್ರವಾಸಗಳು. ಅಗಾಧಪ್ರತಿಭೆಯ ನಮ್ಮ ಪೂರ್ವಜರ ಕೆಲಸಗಳನ್ನೂ ಪರಿಚಯಿಸಿದ್ದೇ ಆ ಪ್ರವಾಸಗಳು. ದಕ್ಷಿಣಭಾರತದ ಪ್ರವಾಸವಂತೂ ನನ್ನ ಮೇಲೆ ದೊಡ್ಡಪರಿಣಾಮವನ್ನೇ ಬೀರಿತು. ನಮ್ಮ ಸಂಸ್ಕೃತಿ, ಇತಿಹಾಸ, ಹಿರಿಮೆಗಳು ಗೊತ್ತಾಗಿದ್ದೇ ಈ ದೇವಸ್ಥಾನಗಳ ಪ್ರವಾಸ ಮೂಲಕ. ಮನುಷ್ಯ ತನ್ನ ಬೇರುಗಳನ್ನು ಸಣ್ಣವನಿದ್ದಾಗಲೇ ಅನುಭವಿಸಿದಷ್ಟೂ, ಅಧ್ಯಯನ ಮಾಡಿದಷ್ಟೂ ಒಳ್ಳೆಯದು ಅಂತಾ ನನ್ನ ಅಭಿಪ್ರಾಯ.

ಈ ತಿರುಗಾಟಗಳು ಬರೀ ದೇವಸ್ಥಾನಗಳ ದರ್ಶನವಲ್ಲ. ನನ್ನ ಪಾಲಿಗೆ ಖಂಡಿತವಾಗಿಯೂ ಅದು ಭಾರತದರ್ಶನವೇ. ದೇವಸ್ಥಾನದ ಭೇಟಿಯೆಂದರೇನು ಬರೀ ದೇವರ ದರ್ಶನವೇ? ಖಂಡಿತಾ ಇಲ್ಲ. ಪ್ರತಿಯೊಂದು ದೇವಸ್ಥಾನವೂ ಬೇರೆ, ಪ್ರತಿಯೊಂದು ದೇವರೂ ಬೇರೆ, ಆಯಾ ಊರಿನ ಅಲಂಕಾರ ರೀತಿಗಳೂ ಬೇರೆ, ಅಲ್ಲಿನ ಪೂಜಾಕ್ರಮಗಳು ರೀತಿಗಳೂ ಬೇರೆ, ಕುಂಕುಮವೂ ಅದರ ಬಣ್ಣ ನುಣುಪು ಕೂಡಾ ಬೇರೆ, ದೇವಸ್ಥಾನದ ಪಕ್ಕದಲ್ಲೇ ಸಿಗುವ ತಿಂಡಿತಿನಿಸುಗಳೂ ಬೇರೆ. ಅಯ್ಯೋ ದೇವಸ್ಥಾನಗಳ ಹೊರಗೆ ಭಿಕ್ಷಾಟನೆಗಾಗಿ ಕೂರುವವರ ವರ್ತನೆಗಳೂ ಬೇರೆ ಸ್ವಾಮಿ! ಕರ್ನಾಟಕದಲ್ಲೇ ನೀವು ನೂರು ದೇವಸ್ಥಾನಗಳಿಗೆ ಹೋಗಿ ಬನ್ನಿ.ಅಲ್ಲಿ ಎಲ್ಲಾ ಕಡೆಯೂ ಲಾಡುವೋ ಪಂಚಕಜ್ಜಾಯ ಪ್ರಸಾದವೋ ಇದ್ದೇ ಇರುತ್ತದೆ. ಆದರೂ ಆ ಎಲ್ಲಾ ಪ್ರಸಾದಗಳು, ಅದರ ರುಚಿ, ಅದರ ಘಮ ಎಲ್ಲವೂ ಬೇರೆಬೇರೆಯೇ. ಎಷ್ಟೋ ಕಡೆಯ ಪಂಚಾಮೃತ, ಲಾಡುಗಳನ್ನು ತಿಂದಕೂಡಲೇ ಅದ್ಯಾವ ದೇವಸ್ಥಾನದ್ದು ಎಂದು ಹೇಳುವಷ್ಟು ವಿಶಿಷ್ಟವಾಗಿರುತ್ತವೆ. ಆನೆಗುಡ್ಡೆಯಲ್ಲಿ ನೆನೆಸಿದ ಕಡಲೆಯ ಪ್ರಸಾದ ಕೊಡುತ್ತಾರೆ, ಅದರೊಂದಿಗೆ ಅಲ್ಲಿನ ಪಂಚಕಜ್ಜಾಯ ಬೆರೆಸಿ ತಿನ್ನುವುದು ನನಗಿಷ್ಟ. ಸೌತಡ್ಕ ದೇವಸ್ಥಾನದಲ್ಲಿ ಕೆಲವೊಮ್ಮೆ ಅವಲಕ್ಕಿ ಬೆಲ್ಲ ಕೊಡುವುದುಂಟು. ಅದನ್ನು ತಿಂದವನಿಗೆ ಇನ್ನೊಂದು ಬಾರಿ ಸಿಗಬಾರದಿತ್ತೇ ಎಂದೆನಿಸದಿದ್ದರೆ ಕೇಳಿ. ಧರ್ಮಸ್ಥಳದ ಕಾಯಿಬೆಲ್ಲ ಪ್ರಸಾದ ಹಾಗೂ ಶೃಂಗೇರಿಯ ಶ್ರೀಪ್ರಸಾದ ಎರಡು ಕೂಡಾ ಅಮೆಚೂರ್ ದೇವಸ್ಥಾನದರ್ಶಿಗಳಿಗೆ ಒಂದೇ ಎಂದೆನಿಸಿದರೂ, ಪ್ರೊಫೆಷನಲ್ ಪ್ರವಾಸಿಗಳಿಗೆ ಎರಡರ ಮಧ್ಯದ ವ್ಯತ್ಯಾಸ ತಕ್ಷಣ ತಿಳಿದುಬರುತ್ತೆ. ನಿಜಕ್ಕೂ ಭಾರತದ ಪ್ರತಿಯೊಂದು ದೇವಸ್ಥಾನಗಳು ವೈವಿಧ್ಯತೆಯನ್ನು ಸಾರುವ ತಾಣಗಳೇ. ಬಹಳಷ್ಟು ಜನರಿಗೆ ಜೈನ ದೇವಸ್ಥಾನಗಳಲ್ಲೂ ಪ್ರಸಾದ ಸಿಗುತ್ತದೆ ಎಂಬ ಅಂದಾಜಿರಲಿಕ್ಕಿಲ್ಲ. ಗಾಂಧೀನಗರದ ಬಳಿಯಿರುವ ಮಹುದೀ ದೇವಸ್ಥಾನದಲ್ಲಿ ಸಿಗುವ ಸುಖ್ಡೀ ಎಂಬ ತುಪ್ಪ, ಬೆಲ್ಲ ಮತ್ತು ಹಿಟ್ಟಿನ ಪ್ರಸಾದ ನೀವು ತಿಂದು ನೋಡಬೇಕು, ಹುಬ್ಬೇರಿಸುವುದು ಗ್ಯಾರಂಟಿ. ಈ ದೇವಸ್ಥಾನದ ಒಂದು ನಿಯಮವೇನೆಂದರೆ, ಅಲ್ಲಿ ಕೊಟ್ಟಪ್ರಸಾದವನ್ನು ದೇವಾಲಯದಿಂದ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ. ಅಲ್ಲೇ ತಿಂದು ಮುಗಿಸಬೇಕು, ಅಥವಾ ಯಾರಾದರೂ ಯಾತ್ರಿಗಳಿಗೆ ಹಂಚಬೇಕು!

ಪ್ರಸಾದ

ಇನ್ನು ದೇವಸ್ಥಾನಗಳಲ್ಲಿ ಮಧ್ಯಾಹ್ನದ ಊಟಪ್ರಸಾದವಂತೂ ಬೇರೆಯದೇ ಅನುಭೂತಿ. ಕೂತರೆ ಬರೇ ಇದರಬಗ್ಗೆಯೇ ಒಂದು ಪ್ರಬಂಧಬರೆಯುವಷ್ಟು ವಿಚಾರಗಳಿವೆ. ಹಿಂದೂ ದೇವಸ್ಥಾನಗಳಲ್ಲಿ ಅನ್ನಪ್ರಸಾದವೆಂಬುದು, ದೇವರದರ್ಶನದಷ್ಟೇ ಮಹತ್ವದ್ದು. ಹೊರನಾಡು ಶೃಂಗೇರಿಯಲ್ಲಂತೂ “ಭೋಜನಾಲಯ ಮುಚ್ಚುವ ಸಮಯವಾಯ್ತು, ಮೊದಲು ಅಲ್ಲಿಗೆ ಹೋಗಿ ಆಮೇಲೆ ದೇವರ ದರ್ಶನಕ್ಕೆ ಹೋಗಿ” ಎನ್ನುವ ಪದ್ದತಿಯೂ ಇದೆ. ಪ್ರತಿಯೊಂದು ದೇವಸ್ಥಾನದ ಅನ್ನಪ್ರಸಾದಾಲಯವೂ, ಅದರ ಪರಿಮಳವೂ ಬೇರೆ ಬೇರೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಮಲಶಿಲೆ, ಆನೆಗುಡ್ಡೆ, ಸಿರಿಗೆರೆ, ನಂದಿಗ್ರಾಮ, ಶೃಂಗೇರಿ, ಹೊರನಾಡು, ಕಟೀಲು, ಇಡಗುಂಜಿ, ಉಡುಪಿ, ಗೋಕರ್ಣ, ಸೋಂದಾ, ಮುರುಡೇಶ್ವರ, ಕೋಟಿಲಿಂಗೇಶ್ವರ, ಶರಣಬಸವೇಶ್ವರ, ದುರ್ಗಾಪರಮೇಶ್ವರಿ, ಚಾಮುಂಡಿ, ಕೊಲ್ಲೂರು, ನಂಜನಗೂಡು ಪ್ರತಿ ದೇವಸ್ಥಾನದ ಅನ್ನ ಪ್ರಸಾದವೂ ತನ್ನದೇ ರೀತಿಯಲ್ಲಿ ಚಂದ. ಅನ್ನದ ಹದ, ಸಾಂಭಾರಿನ ರುಚಿ, ಬಡಿಸುವ ರೀತಿ, ತಟ್ಟೆಯೋ,ಬಾಳೆಲೆಯೋ, ಮುತ್ತುಗದೆಲೆಯೋ, ಕೆಳಗೆ ಕೂತು ಊಟವೋ, ಟೇಬಲ್ಲಿನ ಮೇಲೆ ಕೂತು ಊಟವೋ, ಪಲ್ಯ ಪಾಯಸವಿದೆಯೋ ಇಲ್ಲವೋ…ಹೀಗೇ ಪ್ರತಿಯೊಂದು ದೇವಸ್ಥಾನವೂ ಅನನ್ಯ. ಕೆಲವು ದೇವಾಲಯಗಳಲ್ಲಿ ರಾತ್ರಿ ಪ್ರಸಾದವೂ ಇದೆ. ಹೊರನಾಡು ಅನ್ನಪೂರ್ಣೆಯ ಸನ್ನಿಧಾನದಲ್ಲಂತೂ ಪ್ರವಾಸಿಗಳಿಗೆ ಬೆಳಿಗ್ಗೆಯ ತಿಂಡಿ-ಕಾಫಿಯೂ ಇದೆ. ಖಂಡಿತವಾಗಿಯೂ ಹಿಂದೂದೇವಾಲಯಗಳ ಅನ್ನದಾನದ ಬಗ್ಗೆ ಒಂದು ಪಿಎಚ್ಡಿಯನ್ನೇ ಮಾಡುವಷ್ಟು ವಿಷಯಗಳಿವೆ. ಕರ್ನಾಟಕ ಮಾತ್ರವಲ್ಲ ತಿರುಪತಿ, ಮಂತ್ರಾಲಯ, ಪಳನಿ, ಶ್ರೀಶೈಲಂ, ತ್ರಿಶೂರ್, ಅಂಬಳಾಪುರ, ಮಧುರೈ,ಕಾಮಾಕ್ಯ, ಬಿಕಾನೇರ್, ವೈಶ್ನೋದೇವಿ, ಶಿರಡಿ, ಪುರಿ ಪ್ರತಿಯೊಂದರ ಅನ್ನಪ್ರಸಾದಗಳೂ ವಿಶಿಷ್ಟ ಅನುಭವಗಳು. ಭಾರತದಲ್ಲಿ ಪ್ರತಿಯೊಂದು ಧರ್ಮವೂ ಆಧ್ಯಾತ್ಮಿಕ ಹಸಿವನ್ನು ತಣಿಸುವುದರೊಂದಿಗೆ, ಹೊಟ್ಟೆಯ ಹಸಿವನ್ನೂ ನೋಡಿಕೊಂಡಿವೆ. ಅಮೃತಸರದ ಗೋಲ್ಡನ್ ಟೆಂಪಲ್ಲಿನ ಲಂಗರ್ ಅಂತೂ ಜಗತ್ಪ್ರಸಿದ್ಧ. ಸಿಖ್ಖರ ಆಹಾರಯಜ್ಞವಂತೂ ಬೇರೆಯದೇ ಹಂತದ್ದು.

ಅನ್ನ ಪ್ರಸಾದ

ಕೆಲವೆಡೆ ಕೇವಲ ಹೂವಿನಿಂದ, ಕೆಲವೆಡೆ ಗರಿಕೆ ಹುಲ್ಲು ಸೇರಿಸಿ, ಕೆಲವೆಡೆ ಚಂದದ ಪೀತಾಂಬರದ ಬಟ್ಟೆ ತೊಡಿಸಿ, ಇನ್ನು ಕೆಲವೆಡೆ ಅರಿಶಿನ-ಕುಂಕುಮ-ಕೇಸರಿಚಂದನ-ಗಂಧ-ಭಸ್ಮ-ಕರ್ಪೂರಗಳಿಂದ, ಮತ್ತೆ ಕೆಲವೆಡೆ ಬಂಗಾರದೊಡವೆಗಳಿಂದ, ಕೆಲವೆಡೆ ಮುಖವಾಡಗಳಿಟ್ಟು, ಕೆಲವೆಡೆ ಯಾವ ಆಡಂಬರವೂ ಇಲ್ಲದೇ ಮಾಡುವ ಬೇರೆ ಬೇರೆ ಸಿಂಗಾರಗಳೂ ಭಾರತೀಯ ಪರಂಪರೆ ದೇವರನ್ನು ಹೇಗೆ ಕಾಣುತ್ತದೆ ಎಂಬುದನ್ನು ಹೇಳಿಕೊಡುತ್ತದೆ. ಗೋವರ್ಧನ ಪೂಜೆಯ ದಿನ ಗೋಕುಲದಲ್ಲಿ ಗೋಮಯದಿಂದಲೇ ಮಾಡಿದ ಗೋವರ್ಧನ ಗಿರಿಯನ್ನು ಮಾಡಿ, ಪಕ್ಕದಲ್ಲಿ ಕೃಷ್ಣನನ್ನು ನಿಲ್ಲಿಸಿ ಪೂಜಿಸುತ್ತಾರೆ. ಗೋದಾವರಿ ಪ್ರಾಂತ್ಯದಲ್ಲಿ ಅಕ್ಕಿಹಿಟ್ಟಿನ ಉಂಡೆಯನ್ನೇ ಈಶ್ವರನನ್ನಾಗಿಸಿ, ಕೆಂಪುನೀರನ್ನೇ ಪಾರ್ವತಿಯನ್ನಾಗಿಸಿ ಅದರಲ್ಲೇ ಅರ್ಧನಾರೀಶ್ವರ ಪೂಜೆ ಮಾಡುತ್ತಾರಂತೆ. ಒಬ್ಬನೇ ಶಿವ ತಮಿಳುನಾಡಿನಲ್ಲಿ ಸಮಸ್ತ ಬೆಳ್ಳಿಬಂಗಾರದಲ್ಲಿ ವಿಜೃಂಭಿಸಿದರೆ, ಕಾಶಿಯಲ್ಲಿ ಬರೀ ನೀರು ತುಳಸಿಯಲ್ಲೇ ಸಂಪ್ರೀತನಾಗುತ್ತಾನೆ, ಉಜ್ಜೈನಿಯಲ್ಲಿ ಭಸ್ಮಭೂಷಿತನಾಗಿ ನಿಲ್ಲುತ್ತಾನೆ. ವಿಷ್ಣುವಂತೂ ತಿರುಪತಿಯಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ದೇವರಾಗಿ ನಿಂತರೆ, ಬೇಲೂರಿನಲ್ಲಿ ಬಿಳಿ ಪಂಚೆ, ಬೆಳ್ಳಿಯ ಅಲಂಕಾರದಲ್ಲಿ ಕಲ್ಲಿನ ಕೇಶವನಾಗಿ ನಿಲ್ಲುತ್ತಾನೆ, ಪುರಿಯಲ್ಲಿ ಬರೀ ಮರದಮೂರ್ತಿಯಾಗಿ ನಿಲ್ಲುತ್ತಾನೆ. ಹನುಮಂತ ಒಂದೆಡೆ ಬರೀ ಚಂದನಬಳಿದುಕೊಂಡು ನಿಂತರೆ, ಇನ್ನೊಂದೆಡೆ ನವರತ್ನ ಖಚಿತ ಗಧೆ ಹಿಡಿದು ಪೀತಾಂಬರ ಧರಿಸುತ್ತಾನೆ. ಕೃಷ್ಣ, ಗಣೇಶ, ನಂದಿ, ಶಾರದೆ, ದುರ್ಗಿಯರೂ ಅಷ್ಟೇ, ಪ್ರತಿಯೊಂದು ದೇವಸ್ಥಾನದಲ್ಲಿ ಬೇರೆಬೇರೆ ರೀತಿಯ ಅಲಂಕಾರಗೊಂಡು, ಆಯಾ ಪ್ರಾಂತ್ಯದ ವೈಶಿಷ್ಟ್ಯವನ್ನ ಸಾರುತ್ತಾರೆ. ಆ ಪ್ರತಿಯೊಂದು ಅಲಂಕಾರ ಪ್ರಕಾರವೂ, ತಾಳ್ಮೆಯ ಅತ್ಯುತೃಷ್ಟ ಸ್ವರೂಪವೆಂಬುದು ನನ್ನ ಅಭಿಪ್ರಾಯ. ಆ ಕೆಲಸದಲ್ಲಿ ನೀವು ಅರ್ಜೆಂಟು ಮಾಡುವಂತೆಯೇ ಇಲ್ಲ. ಮೊದಲ ಹಂತದ ಹಾರದಿಂದ ಕಟ್ಟಕಡೆಯ ಹೂವು ಇಡುವವರೆಗೂ, ಉಸಿರು ಬಿಗಿಹಿಡಿದೇ ಕೆಲಸಮಾಡಬೇಕು. ಇಲ್ಲವಾದಲ್ಲಿ ಇಡೀ ಅಲಂಕಾರ ಹದೆಗೆಡುವುದು ಗ್ಯಾರಂಟಿ. ಹದೆಗೆಟ್ಟರೆ ಮತ್ತೆ ದರ್ಶನಕ್ಕೆ, ಅರ್ಚನೆಗೆ ಆರತಿಗೆ ಎಲ್ಲದಕ್ಕೂ ತಡವೇ ಸರಿ. ನವರಾತ್ರಿಯಂದು ಒಂಬತ್ತು ರೀತಿಗಳಲ್ಲಿ ಅವತಾರವೆತ್ತುವ ದೇವಿ, ಒಂದುದಿನ ಉಗ್ರನರಸಿಂಹನಾಗುವ, ಮರುದಿನ ಮೋಹಿನಿಯಾಗುವ ವಿಷ್ಟು, ಇವತ್ತು ಚಕ್ರಧಾರಿಯಾಗಿಯೂ, ನಾಳೆ ಕುಚೇಲನ ಕಾಲುತೊಳೆಯುವ ಅಲಂಕಾರದಲ್ಲಿಯೂ ನಿಲ್ಲುವ ಕೃಷ್ಣ, ಹೀಗೆ ಕಥೆಗಳನ್ನು ಹೇಳುವ ದೇವರ ಅಲಂಕಾರಗಳು, ಸಂಸ್ಕೃತಿಯನ್ನು ಕಾಪಿಡುವ ಆಸ್ಥೆಯ ಸ್ವರೂಪಗಳು.

ಅಲಂಕಾರಗಳು

ಈ ದೇವಸ್ಥಾನಗಳ ವಾಸ್ತುಶಿಲ್ಪವೆಂಬ ಅದ್ಭುತವನ್ನಂತೂ ಒಂದು ಲೇಖನದಲ್ಲಿ ಬರೆದು ಮುಗಿಸಲು ಸಾಧ್ಯವೇ ಇಲ್ಲ. ಅದಕ್ಕೆ ಬೇರೆಯದೇ ಲೇಖನಸರಣಿ ಬೇಕು ಬಿಡಿ. ದೇವಸ್ಥಾನಗಳ ಪ್ರಾಮುಖ್ಯತೆ, ದೇವಸ್ಥಾನಗಳಿಂದ ಸಮಾಜಕ್ಕೆ ಸಿಗುವ ಕೊಡುಗೆಗಳು, ‘ಸಾಮಾಜಿಕ ಹೂಡಿಕೆ’ಗಳು ಎಲ್ಲವನ್ನೂ ವಸ್ತುನಿಷ್ಟವಾಗಿ ಅರ್ಥಮಾಡಿಸುವ ಈ ಪ್ರವಾಸಗಳು ನಮ್ಮೆಲ್ಲರ ವಯಸ್ಸಿನ ಮತ್ತು ಮನಸ್ಸಿನ ಬೆಳವಣಿಗೆಯ ಅವಿಭಾಜ್ಯ ಅಂಗಗಳು. ನೀವು ಉತ್ತರದವರೇ ಆದರೂ ಕಾಶಿಗೆ ಹೋಗಿಬಂದನಂತರ, ರಾಮೇಶ್ವರಕ್ಕೊಮ್ಮೆ ಯಾಕೆ ಹೋಗಿಬರಬೇಕು? ನೀವು ದಕ್ಷಿಣದಲ್ಲೇ ವಾಸವಿದ್ದರೂ ಉತ್ತರದ ಚಾರ್ ಧಾಮ್ ಯಾಕೆ ನೋಡಿಬರಬೇಕು? ಈ ತೀರ್ಥಯಾತ್ರೆಗಳ ಮಹತ್ವ ಏನು? ಅವು ಹೇಗೆ ನಿಮಗೆ ಭಾರತವನ್ನು ಕಟ್ಟಿಕೊಡುತ್ತವೆ? ನಿಮ್ಮನ್ನು ಹೇಗೆ ಹೆಚ್ಚೆಚ್ಚು ಭಾರತೀಯನನ್ನಾಗಿಸುತ್ತದೆ? ಎಂಬುದನ್ನು ಅರ್ಥಮಾಡಿಕೊಂಡಾಗಲೇ ನೀವು ಹಿಂದೂ ಆಗುವತ್ತ ಹತ್ತಿರವಾಗಲು ಸಾಧ್ಯ. ಇದೇ ಕಾರಣಕ್ಕೆ ಕರ್ನಾಟಕದ ನಮಗೂ ಅಯೋಧ್ಯೆಯ ರಾಮ, ಮತ್ತವನ ದೇವಸ್ಥಾನವೂ ಮುಖ್ಯ ಎಂಬುದು ನೆನಪಿರಲಿ. ಇನ್ನೇಳು ದಿನದಲ್ಲಿ ಅಯೋಧ್ಯೆಯ ಮೊದಲ ಹಂತ ಸಾಕಾರಗೊಳ್ಳಲಿದೆ. ಜೈಶ್ರೀರಾಂ!

0 comments on “ಭಾರತ ಮತ್ತು ಭಾರತೀಯತೆಯನ್ನು ಕಟ್ಟಿಕೊಡುವ ದೇವಸ್ಥಾನ ಪ್ರವಾಸಗಳು

Leave a Reply

Your email address will not be published. Required fields are marked *