Tuesday, 27 February, 2024

ವ್ಯವಹಾರ ಮತ್ತು ಲಾಭಗಳು ಕೆಟ್ಟ ಪದಗಳಾಗಿದ್ದು ಯಾವಾಗ?

Share post

ದೇಶದ ನಾಯಕತ್ವ ಮತ್ತು ಸರ್ಕಾರಗಳ ಸಿದ್ಧಾಂತಗಳೇನೇ ಇರಲಿ, ದೇಶವೊಂದು ನಡೆಯಬೇಕಾದರೆ ವ್ಯಾಪಾರ ವ್ಯವಹಾರಗಳೆನ್ನುವುದು ಇರಲೇಬೇಕು. ಮಾನವ  ನಾಗರೀಕತೆಗಳು ಪ್ರಾರಂಭವಾದಾಗಲಿಂದಲೂ ಕೊಡುಕೊಳ್ಳುವಿಕೆಯ ವ್ಯಾಪಾರಗಳು ನಡೆದೇ ಇವೆ. ನಾಗರೀಕತೆಗಳು ಪ್ರಾರಂಭವಾಗುವ ಮುನ್ನವೂ ತಮ್ಮದೇ ರೂಪದಲ್ಲಿ ವ್ಯಾಪಾರಗಳಿದ್ದೇ ಇದ್ದವು. ಲಾಭ ಎನ್ನುವ ಪರಿಕಲ್ಪನೆ ಸ್ವಲ್ಪ ತಡವಾಗಿ ಬಂದಿರಬಹುದಷ್ಟೇ. ಕಳೆದ ಆರೂವರೆ ಸಾವಿರ ವರ್ಷಗಳ ನಾಗರೀಕತೆಗಳಲ್ಲೆಲ್ಲೂ ಲಾಭವೆನ್ನುವುದನ್ನು ಕೆಟ್ಟಪದವಾಗಿ ಕಂಡಿಲ್ಲ.  ಅದೊಂದು ವ್ಯಾಪಾರದ ಸಹಜ ಉತ್ಪನ್ನ. ಲಾಭವಿಲ್ಲದೇ ಯಾರೂ ಕೆಲಸಕ್ಕೆ ಕೈಹಾಕುವುದಿಲ್ಲ. ಹಾಕಬಾರದು ಕೂಡಾ. ಭಾರತೀಯ ಸಂಸ್ಕೃತಿಯಲ್ಲಿ ವ್ಯಾಪಾರ ನಡೆಸುವವರನ್ನು ವೈಶ್ಯರೆಂದೂ, ಲಾಭವೆನ್ನುವುದು ವೈಶ್ಯನ ಮೂಲಲಕ್ಷಣವೆಂದೇ ನೋಡಲಾಗುತ್ತದೆ. ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಕಮ್ಯೂನಿಸಂ ಹಾಗೂ ಸೋಷಿಯಲಿಸಂ ಸಿದ್ಧಾಂತಗಳು ಹುಟ್ಟಿದಾಗಲಿಂದೀಚೆಗೆ, ಸಮಾನತೆ ಎಂಬ ತಪ್ಪುಕಲ್ಪನೆಯೊಂದು ಹುಟ್ಟುಪಡೆದಾದ ನಂತರ ಈ ಪದಗಳನ್ನು ಕೆಟ್ಟಪದಗಳೆಂಬಂತೆ ನೋಡಲಾಗುತ್ತಿದೆ. ಮಾತ್ರವಲ್ಲ, ಇದರೊಟ್ಟಿಗೇ, ಲಾಭ ಪಡೆಯುವ ಮನುಷ್ಯರನ್ನೂ, ಲಾಭಗಳಿಸಬೇಕೆಂಬ ಮನೋಸ್ಥಿತಿಯನ್ನೂ ಪಾಪವೆನ್ನುವ ರೀತಿಯಲ್ಲಿ ನೋಡಲಾಗುತ್ತಿದೆ. ವ್ಯಾಪಾರದಲ್ಲಿ ತೊಡಗಿಕೊಂಡಿರುವವರನ್ನೂ, ವ್ಯಾಪಾರಕ್ಕೆ ಮುಖ್ಯವಾಗಿ ಬೇಕಾದ ಗುಣಗಳಾದ ವೃತ್ತಿಪರತೆ, ದಕ್ಷತೆ ಮತ್ತು ಶಿಸ್ತುಗಳನ್ನೂ ಕೆಟ್ಟಗುಣಗಳನ್ನಾಗಿ ನೋಡಲಾಗುತ್ತಿದೆ. ಇದೊಂದು ದುರಂತವಲ್ಲದೇ ಮತ್ತೇನೂ ಅಲ್ಲ. ನಿಜಕ್ಕೂ ನೋಡಿದರೆ, ಸಮಾನತೆಯ ಬೂಸಿಬಿಡುವ ಕಮ್ಯೂನಿಷ್ಟ್ ಸರ್ಕಾರಗಳೂ ಬ್ಯುಸಿನೆಸ್ಸನ್ನೇ ನಡೆಸೋದು. ಶಿಸ್ತಂತೂ ಅಲ್ಲಿ ಅತ್ಯಂತ ಪ್ರಮುಖ ಅಂಶ. ಆದರೆ ಇವರು ಇತರರಿಗೆ ಬ್ಯುಸಿನೆಸ್ ಮಾಡಬಾರದು, ಶಿಸ್ತೆನ್ನುವುದು ವೈಯುಕ್ತಿಕ ಸ್ವಾತಂತ್ರ್ಯದ ಹರಣ ಎನ್ನುತ್ತಾರೆ.

 

“ವ್ಯಾಪಾರೋ ನೈವ ಕಾರ್ಯಸ್ಯ, ಸ್ವಧರ್ಮಃ ಸಂಪ್ರವರ್ತತೇ. ಯಸ್ಯ ನಾಸ್ತಿ ಸ್ವಧರ್ಮಃ ವ್ಯಾಪಾರೋ ನ ತಸ್ಯ ಕಾರ್ಯತೇ.” ಎನ್ನುವುದರ ಮೂಲಕ ಚಾಣಕ್ಯ, ದೇಶ ಮತ್ತು ಸಮಾಜದಲ್ಲಿ ವ್ಯಾಪಾರ ಮತ್ತು ವಾಣಿಜ್ಯದ್ಯೋಮದ ಪ್ರಾಮುಖ್ಯತೆಯನ್ನು ಉಲ್ಲೇಖಿಸುತ್ತಾನೆ. ವ್ಯವಹಾರ, ಕರ್ತವ್ಯ ಮತ್ತು ಧರ್ಮ ಬೇರೆಬೇರೆಯ ಕಲ್ಪನೆಗಳಲ್ಲ. ತಾತ್ವಿಕ ನೆಲೆಗಟ್ಟಿನಲ್ಲಿ ಇವು ಮೂರೂ ಪ್ರತ್ಯೇಕ ಮಾತುಗಳಂತೆ ಕಂಡರೂ, ವಾಸ್ತವದಲ್ಲಿ ಒಂದರಿಂದೊಂದು ಬಿಡಿಸಲಾಗದ ಸಂಬಂಧವನ್ನು ಹೊಂದಿವೆ. ಧರ್ಮವೇ ಇಲ್ಲವಾದಲ್ಲಿ, ಕರ್ತವ್ಯವಿಲ್ಲ. ಮನುಷ್ಯನಿಗೆ ಕರ್ತವ್ಯವಿಲ್ಲದಿದ್ದಲ್ಲಿ, ಯಾವುದೇ ವ್ಯವಹಾರವೂ ತಲೆಯೆತ್ತುವುದಿಲ್ಲ. ಧರ್ಮದಿಂದ ಮಾರ್ಗದರ್ಶಿತವಾದ ವ್ಯವಹಾರವೇ ಇಲ್ಲದ್ದಲ್ಲಿ ಅನೈತಿಕತೆ ತಲೆಯೆತ್ತುದೆ. ಹಾಗೂ ಅನೈತಿಕತೆಯ ಬಾಹುಗಳು ದೊಡ್ಡದಾದಂತೆ ಅಧರ್ಮವವೂ ತಾಂಡವವಾಡುತ್ತದೆ. ಹಾಗಾಗಿ ಸಮಾಜದ ನೈತಿಕ ಹಾಗೂ ಮಾನಸಿಕ ಸ್ವಸ್ಥತೆಗೆ ವ್ಯವಹಾರವೊಂದು ಬೇಕೇಬೇಕು, ಮತ್ತದು ಧರ್ಮದಿಂದ ಪ್ರಭಾವಿತವಾಗಿರಬೇಕು ಎನ್ನುತ್ತಾನೆ. ವ್ಯಾಪಾರವೊಂದು ಕೇವಲ ಆರ್ಥಿಕ ಪ್ರಯೋಜನದ ಅನ್ವೇಷಣೆಯಲ್ಲ. ಅದು ಒಟ್ಟಾರೆ ಪ್ರಗತಿಯ ಕಾರ್ಯವಿಧಾನವೂ ಹೌದು. ವ್ಯವಹಾರಗಳಿದ್ದಲ್ಲಷ್ಟೇ ಹೊಸತೇನಾದರೂ ಹುಟ್ಟಲು ಸಾಧ್ಯ. ವ್ಯವಹಾರದ ಸಣ್ಣ ದೊಡ್ಡ ಸ್ಪರ್ಧೆಗಳು, ಸಾಮಾಜಿಕ ಸಮಸ್ಯೆಗಳಿಗೆ ಸೃಜನಶೀಲ ಪರಿಹಾರಗಳನ್ನೂ ಒದಗಿಸುತ್ತವೆ. ವ್ಯವಹಾರದ ಸ್ಪರ್ಧೆಯಿಂದ ಹುಟ್ಟುವ ತಾಂತ್ರಿಕ ಪ್ರಗತಿ, ವೈದ್ಯಕೀಯ ಪ್ರಗತಿಗಳು ಮನುಷ್ಯನ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜನರಿಗೆ ಹೊಸದನ್ನೇನಾರೂ ಕೊಡಬೇಕು ಎಂಬ ಉದ್ಯಮಶೀಲತೆ, ಸಮಾಜದ ಆರ್ಥಿಕತೆ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುತ್ತದೆ. ಕನಸಾಗಿದ್ದ ಆಲೋಚನೆಗಳನ್ನು ಮೂರ್ತರೂಪಕ್ಕಿಳಿಸಲು ಧೈರ್ಯವನ್ನೂ ನೀಡಿ ಸಬಲೀಕರಣಕ್ಕೆ ಓಂನಾಮ ಹಾಡುತ್ತದೆ. ಇದಲ್ಲದೆ, ವ್ಯಾಪಾರಗಳು ಸದೃಡ ಸಮಾಜ ಮತ್ತದರ ನೈತಿಕ ಉನ್ನತಿಯೆಡೆಗೂ ಕೊಡುಗೆ ನೀಡುತ್ತವೆ. ಈ ವ್ಯವಹಾರ ಸದೃಡವಾಗಿದ್ದರೆ, ಖಂಡಿತಾ ಅದರಿಂದ ಲಾಭ ಬಂದೇಬರುತ್ತದೆ. ಹೀಗೆ ಬಂದ ಲಾಭವನ್ನು ದಾನ ಧರ್ಮದ ಮೂಲಕ ಲೋಕೋಪಕಾರ, ಸಮುದಾಯಗಳ ಅಭಿವೃದ್ಧಿಯೆದೆಗೆ ವಿನಿಯೋಗಿಸಿ ಸಮಾಜವನ್ನು ಮತ್ತಷ್ಟು ಶಕ್ತಗೊಳಿಸಬಹುದು. ಕೌಶಲ್ಯವಿರುವ ಎಲ್ಲರಿಗೂ ಕೆಲಸದ ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ನೈತಿಕ ಆಚರಣೆಗಳನ್ನು ಪ್ರತಿಪಾದಿಸುತ್ತಾ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲೂ ಯೋಚಿಸಬಹುದು. ಹೀಗೇ ಬ್ಯುಸಿನೆಸ್ ಅನ್ನೋದನ್ನ ಜವಾಬ್ದಾರಿಯುತವಾಗಿ ನಿರ್ವಹಿಸಿದಾಗ ಪ್ರಗತಿಯ ಮುಖ್ಯ ಶಕ್ತಿಯಾಗಿಸಬಹುದು.

 

 

ಇನ್ನು ಲಾಭದ ವಿಚಾರಕ್ಕೆ ಬಂದರೆ “ಆರ್ಥೋ ನರೇಶ್ವರೋ ದೇಹೇ, ಸರ್ವಸ್ಯ ಪ್ರೇಷ್ಠತಮೋ ಧನಮ್, ನಿತ್ಯಂ ಯಾತ್ರಾಯಸ್ಯ ಧರ್ಮೋ, ಧರ್ಮಸ್ಯ ಸುಖಮ್ ಅವಾಪ್ನುಯಾತ್” ಎಂಬ ಶ್ಲೋಕದ ಮೂಲಕ  “ಮನುಷ್ಯನ ಜೀವನದಲ್ಲಿ ಲಾಭವೆನ್ನುವುದು ಅತ್ಯಂತ ಮುಖ್ಯವಾದುದು. ಎಲ್ಲಿ ವೈಯುಕ್ತಿಕ ದುರಾಸೆಯ ಸೋಂಕಿಲ್ಲದೆ ಹಾಗೂ ಅಧರ್ಮದ ಹಾದಿಯನ್ನು ಹಿಡಿಯದೇ ಸಂಪತ್ತಿನ ಅನ್ವೇಷಣೆ ನಡೆಯುತ್ತದೆಯೋ, ಆ ಧರ್ಮವನ್ನು ಸುಖ-ಸಂತೋಷ-ನೆಮ್ಮದಿಗಳೂ ಹಿಂಬಾಲಿಸುತ್ತವೆ” ಎಂದು ಹೇಳುತ್ತಾ ಲಾಭ ಎಂಬುದು ಹೇಗೆ ಆರ್ಥಿಕ ಬೆಳವಣಿಗೆಯ ಎಂಜಿನ್ ಎನ್ನುವುದನ್ನು ನಮ್ಮ ಸಂಸ್ಕೃತಿ ಹೇಳುತ್ತದೆ. ಇತ್ತೀಚೆಗೆ ಸಾಮಾನ್ಯವಾಗಿ ದುರಾಸೆಯ ಸಂಕೇತವಾಗಿ ನಿಂದಿಸಲ್ಪಡುವ ಲಾಭ ಎಂಬ ಪರಿಕಲ್ಪನೆ ಪ್ರತಿಯೊಂದು ಸುಸ್ಥಿರ ಉದ್ಯಮದ ಜೀವಾಳವೇ ಹೌದು. ಲಾಭವಿಲ್ಲದೆ, ಕಂಪನಿಗಳು ಸಂಶೋಧನೆ, ತಂತ್ರಜ್ಞಾನ ಅಥವಾ ಉದ್ಯೋಗಿಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಲಾಭದ ಹಣದಲ್ಲಿ ಮಾಡಲಾದ ಈ ಹೂಡಿಕೆಯು ಹೊಸ ಉದ್ಯೋಗ ಸೃಷ್ಟಿ, ಇನ್ನೂ ಹೆಚ್ಚು ಸುಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಗ್ರಾಹಕರಿಗೆ ಕೊಡುವುದು ಮಾತ್ರವಲ್ಲದೇ, ಆರ್ಥಿಕ ಉತ್ತೇಜನಕ್ಕೂ ಕಾರಣವಾಗುತ್ತದೆ. ಲಾಭ ಉತ್ಪಾದಿಸುವ ವ್ಯವಹಾರಗಳ ಮೂಲಕ ದೇಶಗಳು ಅಭಿವೃದ್ಧಿ ಹೊಂದುವುದರೊಂದಿಗೇ, ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭದಾಯಕವಾದ ಸಮೃದ್ಧಿಯ ಚಕ್ರಗಳನ್ನು ಸೃಷ್ಟಿಸುತ್ತವೆ. ಈ ಚಕ್ರಗಳೇ ದೇಶ ಮತ್ತು ಸಮಾಜವನ್ನು ಪ್ರಗತಿಯೆಡೆಗೆ ಕೊಂಡೊಯ್ಯುತ್ತವೆ. ಲಾಭ ಕೇವಲ ಸಂಪತ್ತನ್ನು ಸೃಷ್ಟಿಸುವುದು ಮಾತ್ರವಲ್ಲ,  ಮರುಹೂಡಿಕೆ, ವ್ಯವಹಾರದ ವಿಸ್ತರಣೆ ಮತ್ತು ಹೊಸ ಆವಿಷ್ಕಾರಗಳಿಗೆ ಬೇಕಾದ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಬುದ್ಧಿವಂತ ವ್ಯಾಪಾರಿಗಳು ಕೇವಲ ಲಾಭದ ಸಂಪತ್ತನ್ನು ಸಂಗ್ರಹಿಸಿಟ್ಟುಕೊಳ್ಳುವುದಲ್ಲ. ಬದಲಿಗೆ ಹೊಸ ಹೂಡಿಕೆಯ ಅವಕಾಶಗಳ ಬಗ್ಗೆ ಯೋಚಿಸುತ್ತಾರೆ. ಅದರಮೂಲಕ ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಪ್ರಗತಿಯ ಕನಸುಕಾಣುತ್ತಾರೆ. ಸಾಮಾಜಿಕ ಸುಸ್ಥಿರತೆಗೆ ನಾಂದಿ ಹಾಡುತ್ತಾರೆ. ಉದ್ಯೋಗಪತಿಯೊಬ್ಬ ತನ್ನ ಲಾಭ ಹಾಗೂ ಅದರ ಮೂಲಕ ತನ್ನ ಉದ್ಯಮ ವಿಸ್ತರಣೆಯನ್ನಷ್ಟೇ ಮುಖ್ಯ ಗುರಿಯಾಗಿಸಿಕೊಂಡಿರಬಹುದು. ಆದರೆ ಅವನಿಗರಿವಿದ್ದೋ, ಇಲ್ಲದೆಯೋ ಮ್ಯಾಕ್ರೋ-ಎಕಾನಮಿಕ್ ಮಟ್ಟದಲ್ಲಿ ಆತ ತನ್ನ ಆರ್ಥಿಕ ಸ್ವಾರ್ಥದೊಂದಿಗೆ, ಸಾಮಾಜಿಕ ಉನ್ನತಿಗೂ ಮೊದಲ ಮೆಟ್ಟಿಲುಗಳನ್ನು ಕಟ್ಟುತ್ತಿರುತ್ತಾನೆ.

 

 

ವ್ಯವಹಾರವೊಂದನ್ನು ಕಟ್ಟಲಿಕ್ಕೆ, ಅದನು ಲಾಭದಾಯಕವಾಗಿ ಮಾಡುವುದಕ್ಕೆ, ಅದರಿಂದ ಲಾಭವನ್ನು ಧಾರ್ಮಿಕ ರೀತಿಯಲ್ಲಿ ವಿನಿಯೋಗಿಸಲಿಕ್ಕೆ ವ್ಯಾಪಾರಿಗೆ ಶಿಸ್ತು ಹಾಗೂ ಪರಿಶ್ರಮ ಬಹಳ ಮುಖ್ಯ. ಆತನ ಸಾಧನೆಯ ಬೆನ್ನೆಲುಬು ಕೇವಲ ಶಿಸ್ತು ಮತ್ತು ಕಠಿಣ ಪರಿಶ್ರಮ. ನೀವು ಯಾವುದೇ ಯಶಸ್ವೀ ವ್ಯಾಪಾರಿ ಅಥವಾ ಯಶಸ್ವೀ ವ್ಯವಹಾರದ ಕಥೆಯನ್ನು ಅವಲೋಕಿಸಿದರೆ ನಿಮಗಲ್ಲಿ ಇವೆರಡು ಅಂಶಗಳು ಕಂಡೇ ಕಾಣುತ್ತವೆ. ಶಿಸ್ತೆಂದರೆ ಸಾಮಾನ್ಯವಾಗಿ ಕಠಿಣವಾದ, ಯಾವುದೇ ಕ್ರಿಯೇಟಿವಿಟಿಯೇ ಇರದ, ಸದಾ ಮುಖ ಗಂಟಿಕ್ಕಿಕೊಂಡೇ ಇರುವ ಗಂಭೀರ ವರ್ತನೆ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಆದರೆ ಜೀವನದಲ್ಲಿ ಮತ್ತು ಪ್ರಯತ್ನಗಳಲ್ಲಿ ಸ್ಥಿರತೆಯನ್ನು ತರಲು, ಗಮನವನ್ನು ಕೇಂದ್ರೀಕೃತಗೊಳಿಸಲು ಶಿಸ್ತು ಅತ್ಯಗತ್ಯ. ಶಾಲೆಯಲ್ಲಿ ಓದುತ್ತಿದ್ದ ಸಮಯವನ್ನೊಮ್ಮೆ ನೆನಪಿಸಿಕೊಳ್ಳಿ. ಸರಿಯಾದ ಸಮಯಕ್ಕೆ ಶಾಲೆಯನ್ನು ತಲುಪುವ ಅವಸರ, ಕೊಟ್ಟ ಜವಾಬ್ದಾರಿಗಳನ್ನು ತಪ್ಪಿಲ್ಲದೇ ನಿರ್ವಹಿಸುವ ಸಮರ್ಪಣಾಭಾವ, ಕಲಿಸಿದ ಪಾಠಗಳನ್ನು ನೆನಪಿಟ್ಟುಕೊಳ್ಳುವ ಮನಸ್ಥಿತಿ, ಕಲಿಯಬೇಕು ಮುಂದುವರೆಯಬೇಕು ಎಂಬ ಮೌಲ್ಯಗಳನ್ನು ತುಂಬಿದ್ದು ಯಾವುದು? ಗುರುಗಳು ಹಾಕಿಕೊಟ್ಟ ಶಿಸ್ತಿನ ಮಾರ್ಗದರ್ಶನವಲ್ಲದೇ ಮತ್ಯಾವುದೂ ಅಲ್ಲ. ವ್ಯಾಪಾರಿಯೊಬ್ಬ ಇದೇ ಶಿಸ್ತನ್ನು ತನ್ನಲ್ಲಿ ಮುಂದುವರೆಸಿಕೊಂಡು, ಅದನ್ನು ತನ್ನ ವ್ಯವಹಾರದಲ್ಲೂ, ಅದರಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲೂ ಕಾಣಬಯಸುತ್ತಾನೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಶಿಸ್ತು ಎನ್ನುವ ಪದವನ್ನು ಶಿಕ್ಷೆ ಎಂಬುದಕ್ಕೆ ಸಮಾನಾರ್ಥಕವಾಗಿ ಬಳಸುವುದು ಅಕ್ಷಮ್ಯ.

 

ನಾಲ್ಕನೆಯದಾಗಿ, ವೃತ್ತಿಪರತೆ. ಮಾಡುವ ಕೆಲಸದಲ್ಲಿ ಪೂರ್ಣಶ್ರಮವನ್ನು ಹಾಕುವುದು, ಕೆಲಸಕ್ಕೆ ಪೂರ್ಣವಾಗಿ ಬದ್ಧನಾಗಿರುವುದು, ವಹಿಸಿರುವ ಕೆಲಸವನ್ನು ಯಥಾವತ್ತಾಗಿ ಮುಗಿಸುವ ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಮಟ್ಟವನ್ನು ಮೀರದ ನಡವಳಿಕೆ ಇವೆಲ್ಲವೂ ಸೇರಿ ರೂಪತಾಳುವ ವೃತ್ತಿಪರತೆ ಅಥವಾ ಪ್ರೊಫೆಶನಲಿಸಂ, ಪ್ರತಿಯೊಂದು ವೃತ್ತಿಪರ ಸಂಬಂಧಗಳ ನಂಬಿಕೆಯ ತಳಹದಿಯಾಗಿ ಕೆಲಸಮಾಡುತ್ತದೆ. ತಾನು ಮಾಡುವ ವೃತ್ತಿ ಶ್ರೇಷ್ಟವಾದದ್ದು ಹಾಗೂ ಅದು ಜನರ ಜೀವನವನ್ನು ಬೇರೆ ಬೇರೆ ಹಂತದಲ್ಲಿ ಬದಲಾಯಿಸಬಲ್ಲದು ಎಂಬ ನಂಬಿಕೆಯನ್ನೂ, ಹಾಗೂ ಆ ವೃತ್ತಿಯೆಡೆಗೆ ತನ್ನ ಸಂಪೂರ್ಣ ಬದ್ಧತೆಯಿದೆ ಎಂಬುದನ್ನೂ ವೃತ್ತಿಪರ ಮನೋಸ್ಥಿತಿ ಕೊಡುತ್ತದೆ. ಇದರ ಮೂಲಕ ಡಾಕ್ಟರ್ ಇರಬಹುದು, ಸಂಸದನಿರಬಹುದು, ಸರ್ಕಾರೀ ಅಧಿಕಾರಿಯಿರಬಹುದು, ವೃತ್ತಿಪರತೆಯೆಂಬುದು ಪ್ರತಿಯೊಂದು ಕೆಲಸದಲ್ಲೂ ಹೊಣೆಗಾರಿಕೆ, ನೈತಿಕ ನಿರ್ಧಾರಗಳ ಕೈಗೊಳ್ಳುವಿಕೆ ಮತ್ತು ಉತೃಷ್ಠ ಸೇವೆಯ ಲಭ್ಯತೆಯನ್ನು ಖಾತ್ರಿಗೊಳಿಸುತ್ತದೆ.

 

 

ದೇಶವೊಂದರ ಪ್ರಗತಿಗೆ ಈ ನಾಲ್ಕೂ ಅಂಶಗಳು ಪ್ರಜೆಗಳಲ್ಲಿ ಅಡಕವಾಗಿರುವುದು ಅತ್ಯಂತ ಮುಖ್ಯ. ಸರ್ಕಾರವೊಂದು ಎಷ್ಟು ಬೇಕಾದರೂ ನೋಟುಗಳನ್ನು ಮುದ್ರಿಸಿ ಎಲ್ಲರಿಗೂ ಹಂಚಿ ಅಂಕಿಅಂಶಗಳ ಲೆಕ್ಕದಲ್ಲಿ ಶ್ರೀಮಂತವಾಗಿಸಸಬಹುದು. ಅದರೆ ದೇಶಕ್ಕಾಗಲೀ ಪ್ರಜೆಗಳಿಗಾಗಲೀ ವ್ಯವಾಹಾರಿಕ ಮನಸ್ಥಿತಿ, ಲಾಭದ ಇಚ್ಛೆಯಿಲ್ಲದಿದ್ದರೆ, ಮುದ್ರಿಸಿದ ನೋಟೆಲ್ಲವೂ, ಆದಷ್ಟು ಬೇಗ ಬೆಲೆಯಿಲ್ಲದ ಕಾಗದದ ಮುದ್ದೆಯಾಗುತ್ತದೆ. ವ್ಯಾಪಾರೀ ಮನಸ್ಥಿತಿ ಮತ್ತು ಲಾಭದ ಇಚ್ಛೆಯನ್ನು ಪಡೆಯಲಿಕ್ಕೆ ಶಿಸ್ತು ಹಾಗೂ ವೃತ್ತಿಪರತೆ ಎರಡು ಬೇಕೇ ಬೇಕು. ಶಿಸ್ತು ಮತ್ತು ವೃತ್ತಿಪರತೆಯುಳ್ಳ ವ್ಯಕ್ತಿಗಳು, ಸಂಸ್ಥೆಗಳು ಮತ್ತು ರಾಷ್ಟ್ರಗಳನ್ನು ಪ್ರಗತಿಯತ್ತ ಮುನ್ನಡೆಸುವ ಮಾರ್ಗದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ನಿರಂತರ ಬೆಳವಣಿಗೆಗೆ ಅಡಿಪಾಯ ಹಾಕುತ್ತಾರೆ, ಉತ್ಪನ್ನಗಳು, ಸೇವೆಗಳು ಮತ್ತು ಆಡಳಿತದ ಗುಣಮಟ್ಟಗಳು ಪ್ರತಿಯೊಬ್ಬರಿಗೂ ಒಂದೇರೀತಿಯಲ್ಲಿ ಸಿಗುವಂತೆ ಮಾಡುತ್ತಾರೆ. ಅವರ ಪ್ರಭಾವವು ಆರ್ಥಿಕ ಲಾಭಗಳನ್ನು ಮೀರಿ ವಿಸ್ತರಿಸುತ್ತದೆ, ಸಮಾಜಗಳ ನೈತಿಕ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಈ ನಾಲ್ಕೂ ಅಂಶಗಳ ಸಾಮರಸ್ಯದ ಏಕೀಕರಣ, ಹೆಚ್ಚು ಸಮಾನ ಹಾಗೂ ಸಮೃದ್ಧ ಜಗತ್ತಿಗೆ ಕಾರಣವಾಗಬಹುದು ಎಂಬುದನ್ನು ಅರಿತವರು, ಕೇವಲ ವ್ಯಾಪಾರಿಗಳಾಗಿ ಉಳಿಯುವುದಿಲ್ಲ. ಅವರನ್ನು ಬ್ಯುಸಿನೆಸ್-ಮ್ಯಾನ್ ಎನ್ನುವ ಬದಲು ಟೆಕ್ನೋಕ್ರಾಟ್ (ವ್ಯವಹಾರ ತಂತ್ರಜ್ಞ) ಎನ್ನುವುದು ಹೆಚ್ಚು ಸೂಕ್ತ. ಅವರು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವಿನ ಸಮತೋಲನವನ್ನು ಪ್ರೋತ್ಸಾಹಿಸುತ್ತಾ, ಸಾಮಾಜಿಕ ಸವಾಲುಗಳನ್ನು ಎದುರಿಸಲು ಲಾಭ ಮತ್ತು ವ್ಯವಹಾರದ ಶಕ್ತಿಯನ್ನು ಬಳಸಿಕೊಳ್ಳುತ್ತಾರೆ.

 

ಮತ್ತಿವರು ಕೇವಲ ಇದನ್ನೆಲ್ಲಾ ಮಾತಿನಲ್ಲಿ ತೋರಿಸುವುದಿಲ್ಲ. ತಮ್ಮ ವೈಯುಕ್ತಿಕ ಜೀವನದಲ್ಲಿ ಮತ್ತೆ ಮತ್ತೆ ಇವೆಲ್ಲವನ್ನೂ ನಿರೂಪಿಸಿರುತ್ತಾರೆ. ಬೇರೇನೋ ಆಗಿದ್ದವರು ವ್ಯಾಪಾರಿಗಳಾಗಿ ವ್ಯವಹಾರವೊಂದನ್ನು ಪ್ರಾರಂಭಿಸಿ, ನೂರಾರು ಅಪಾಯಗಳಿಗೆ ತಮ್ಮನ್ನು ಎದುರಾಗಿಸಿಕೊಂಡರೂ, ಶಿಸ್ತು, ಪರಿಶ್ರಮ ಮತ್ತು ವೃತ್ತಿಪರತೆಯಿಂದಾಗಿ ಯಶಸ್ಸನ್ನು ಮತ್ತೆ ಮತ್ತೆ ಕಂಡಿರುತ್ತಾರೆ. ಯಶಸ್ಸಿನ ವ್ಯಾಖ್ಯಾನವನ್ನು ಸದಾ ಬದಲಿಸುತ್ತಾ, ಉತ್ತಮಗೊಳಿಸಿರುತ್ತಾರೆ. ಲಕ್ಷಾಂತರ ಜನರ ಜೀವನವನ್ನು ಹಸನು ಮಾಡಿರುತ್ತಾರೆ. ಹಾಗಾಗಿ ಅಂತವರು “ಯುವಜನತೆ ವಾರಕ್ಕೆ ಎಪ್ಪತ್ತುಗಂಟೆಗಳಷ್ಟು ಕೆಲಸ ಮಾಡಬೇಕಾಗಬಹುದು” ಎಂದಾಗ ಸುಮ್ಮನೇ ಆಳಿಗೊಂದು ಕಲ್ಲು ತೂರುವ ಬದಲು, ಒಂದುಹೆಜ್ಜೆ ಹಿಂದೆಯಿಟ್ಟು ಅವರು ಹೇಳಿದ್ದೇನು ಎನ್ನುವುದನ್ನು ಅವಲೋಕಿಸುವ ಗುಣ ನಮ್ಮದಾಗಬೇಕು. ತಮ್ಮ ಲಾಭಕ್ಕೆ ಯಾರದ್ದೋ ಜೀವನ ಬಲಿಕೊಡುತ್ತಿದ್ದಾರೆ ಎನ್ನುವ ಮಾತುಗಳು ತೀರಾ ಅವಹೇಳನಕಾರಿ. Business, Profit, Discipline ಮತ್ತು Professionalism ಇವುಗಳನ್ನು ಕೆಟ್ಟಪದಗಳನ್ನಾಗಿ ನೋಡುವ ಸಮಾಜ, “ಇವೆಲ್ಲಾ ನನ್ನ ಎರಡನೆಯ ಆದ್ಯತೆಗಳು” ಎನ್ನುವ ದೇಶ, ಅದೆಷ್ಟೇ ನೈಸರ್ಗಿಕ ಸಂಪನ್ಮೂಲಗಳು ಅಥವಾ ಸಂಪತ್ತಿದ್ದರೂ, ಆದಷ್ಟು ಬೇಗ ಅಧೋಗತಿಗಿಳಿಯುತ್ತದೆ.

0 comments on “ವ್ಯವಹಾರ ಮತ್ತು ಲಾಭಗಳು ಕೆಟ್ಟ ಪದಗಳಾಗಿದ್ದು ಯಾವಾಗ?

Leave a Reply

Your email address will not be published. Required fields are marked *