Tuesday, 27 February, 2024

ನೀವು ಮನುಷ್ಯರೇ ಹೌದು ಅಂತಾ ನಿಮಗೆ ಖಾತ್ರಿಯಿದೆಯೇ?

Share post

ತಂತ್ರಜ್ಞಾನ ಮುಂದುವರೆದಂತೆಲ್ಲಾ ಮನುಷ್ಯನ ಕೆಲಸ ಕಡಿಮೆಯಾಗಿದೆ ಎಂದು ಭಾವಿಸುವವರಿದ್ದಾರೆ. ಆದರೆ ನಿಜಕ್ಕೂ ಮನುಷ್ಯನ ಕೆಲಸಗಳೇನೂ ಕಡಿಮೆಯಾಗಿಲ್ಲ, ಇದ್ದ ಕೆಲಸಗಳು ಮೊದಲಿಗಿಂತಾ ಸುಲಭವಾಗಿವೆ ಅಷ್ಟೇ. ಆ ಕೆಲಸಗಳನ್ನು ಸುಲಭವಾಗಿ ಮತ್ತು ಬೇಗ ಮುಗಿಸಿದ ಮನುಷ್ಯ ಸಮಯವನ್ನುಳಿಸಿ ಆ ಸಮಯದಲ್ಲಿ ಕೆಲಸವಿಲ್ಲದೇ ಕೂತಿಲ್ಲ. ಬೇರೆ ಇನ್ನೊಂದೇನೋ ಕೆಲಸ ಶುರುಹಚ್ಚಿಕೊಂಡಿದ್ದಾನೆ. ಹಾಗಾಗಿಯೇ, ಹದಿನೆಂಟನೇ ಶತಮಾನದಲ್ಲಿ ಒಂದು ಶತಕೋಟಿಯಿದ್ದ ನಾವುಗಳು, ಎಂಟು ಶತಕೋಟಿಯಾಗಿ ಬೆಳೆದರೂ, ಕೆಲಸಗಳನ್ನು ಕಡಿಮೆ ಅಥವಾ ಸುಲಭವಾಗಿಸುವ ತಂತ್ರಜ್ಞಾನದ ಬೆಳವಣಿಗೆಯಾದಮೇಲೂ ಹೆಚ್ಚೆಚ್ಚು ಮತ್ತು ಹೊಸಹೊಸ ಕೆಲಸಗಳನ್ನು ಸೃಷ್ಟಿಮಾಡಲಿಕ್ಕೆ ಸಾಧ್ಯವಾಗಿರುವುದು. ತಂತ್ರಜ್ಞಾನಗಳು ನಮ್ಮ ಕೆಲಸಗಳನ್ನು ಸುಲಭಮಾಡಿದ್ದರೂ ಕೂಡಾ, ಕೆಲವೊಂದು ಕಡೆ ಅವು ನಮಗೇ ಅಂದರೆ ಮನುಷ್ಯರಿಗೇ ಹೆಚ್ಚಿನ ಕೆಲಸವನ್ನು ಮಾಡಲು ಕೊಡುತ್ತಿವೆಯೇನೋ ಎಂದೆನಿಸುವುದೂ ಉಂಟು. ಈ ಮಾಹಿತಿ ಕೊಡು ಅಂತಾ ಕಂಪ್ಯೂಟರಿಗೆ ಹೇಳಿದರೆ, ಅದು ನಿಮಗೆ “ನೀನು ರೋಬೋಟ್ ಅಥವಾ ಇನ್ಯಾವುದೋ ಕಂಪ್ಯೂಟರ್ ಅಲ್ಲ ಅಂತಾ ನಿರೂಪಿಸು” ಎಂದು ಹೇಳುವುದನ್ನು ನೀವು ನೋಡಿರಬಹುದು. ನಾನೇ ಸೃಷ್ಟಿಸಿದ ಈ ಕಂಪ್ಯೂಟರ್, ನಾನು ಹೇಳಿದ ಆದೇಶವನ್ನು ಪಾಲಿಸುವುದನ್ನು ಬಿಟ್ಟು, ನನಗೇ ತಿರುಗಾ ಕೆಲಸ ಕೊಡುತ್ತಿದೆಯಲ್ಲಾ! ಈ ಕಂಪ್ಯೂಟರ್ರೇ ಒಂದು ರೋಬೋಟ್, ಇದು ನನಗೆ ನೀನು ರೋಬೋಟ್ ಅಲ್ಲ ಅಂತಾ ನಿರೂಪಿಸು ಅಂತಾ ಸವಾಲೆಸೆಯುತ್ತಿದೆಯಲ್ಲಾ!? ಎಂಬ ಆಶ್ಚರ್ಯ ನಿಮಗಾಗಿರಬಹುದಲ್ಲವೇ?

 

ಈ ರೀತಿಯ ಸವಾಲುಗಳಿಗೆ ಕ್ಯಾಪ್ಚಾ ಎನ್ನುತ್ತಾರೆ. ಹೌದು, CAPTCHA – Completely Automated Public Turing test to tell Computers and Humans Apart. ಅಂದರೆ ನೀವು ಮನುಷ್ಯರೋ, ಅಥವಾ ಮನುಷ್ಯರ ರೂಪದಲ್ಲಿರುವ ಕಂಪ್ಯೂಟರ್ ಪ್ರೋಗ್ರಾಮೋ ಅಥವಾ ರೊಬೋಟೋ ಅಂತಾ ಗುರುತಿಸುವ ಪರೀಕ್ಷೆ. ಟ್ಯೂರಿಂಗ್ ಟೆಸ್ಟ್ ಎಂದರೆ ಯಂತ್ರವೊಂದು ಮಾನವ ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದೇ ಎಂದು ನಿರ್ಧರಿಸುವ ಸರಳವಾದ ಆದರೆ ಹಿನ್ನೆಲೆಯಲ್ಲಿ ಕಪಟ ತಂತ್ರವಿರುವ ವಿಧಾನ. ಆಧುನಿಕ ಕಂಪ್ಯೂಟರುಗಳ ಪಿತಾಮಹ ಎಂದೇ ಹೆಸರುಪಡೆದ ಅಲನ್ ಟ್ಯೂರಿಂಗನ (1912-1954) ಸ್ಮರಣಾರ್ಥವಾಗಿ ಈ ಹೆಸರು. ಕ್ಯಾಪ್ಚಾದ ಮೂಲಭೂತ ಉದ್ದೇಶ, ಬಳಕೆದಾರರು ಮನುಷ್ಯರೇ ಎಂದು ಪರಿಶೀಲಿಸುವ ಮೂಲಕ ವೆಬ್‌ಸೈಟ್ ಅಥವಾ ಸಿಸ್ಟಮ್‌ಗೆ ಅನಧಿಕೃತ ಪ್ರವೇಶವನ್ನು ತಡೆಯುವುದು ಅಥವಾ ಕಡಿಮೆ ಮಾಡುವುದು. ಮನುಷ್ಯರಿಗೆ ಪರಿಹರಿಸಲು ಸುಲಭವಾದ ಆದರೆ ಬಾಟ್‌ಗಳಿಗೆ ಗಮನಾರ್ಹವಾಗಿ ಕಷ್ಟಕರವಾದ ಸವಾಲುಗಳನ್ನು ಒಡ್ಡುತ್ತಾ ಕ್ಯಾಪ್ಚಾ ಈ ಕೆಲಸ ಮಾಡುತ್ತದೆ. ಸವಾಲುಗಳೆಂದರೆ ಓದಲು ಅಸ್ಪಷ್ಟವಾದ ಪದಪುಂಜ, ಚಿತ್ರ ಅಥವಾ ವಸ್ತುಗಳನ್ನು ಗುರುತಿಸುವುದು, ಒಗಟುಗಳನ್ನು ಪರಿಹರಿಸುವುದು, ನಿರ್ದಿಷ್ಟ ವಸ್ತು/ಅಂಶವೊಂದನ್ನು ಕ್ಲಿಕ್ ಮಾಡುವುದು ಅಥವಾ ಮಾನವ-ರೀತಿಯ ಬುದ್ಧಿವಂತಿಕೆಯ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸುವುದು ಇತ್ಯಾದಿ. ಮೊದಲಿನ ಕ್ಯಾಪ್ಚಾಗಳಲ್ಲಿ ಅಸ್ಪಷ್ಟವಾಗಿ ಕಾಣುತ್ತಿರುವ ಪದವೊಂದನ್ನು ಟೈಪಿಸಲು ಹೇಳಲಾಗುತ್ತಿತ್ತು. ಇತ್ತೀಚಿನ ಕ್ಯಾಪ್ಚಾಗಳಲ್ಲಿ 3×3 ಚೌಕವಿನ್ಯಾಸದೊಳಗೆ ಒಂಬತ್ತು ಚಿತ್ರಗಳನ್ನು ನಿಮ್ಮೆಡೆಗೆ ಎಸೆದು ಅದರಲ್ಲಿ “ಎಲ್ಲೆಲ್ಲಿ ಟ್ರಾಫಿಕ್ ಲೈಟ್ ಇವೆ?” ಅಂತಲೋ, “ಯಾವ ಚಿತ್ರಗಳಲ್ಲಿ ಕಾರು ಇವೆ?” ಅಂತಲೋ, “ಎಲ್ಲೆಲ್ಲಿ ಸೈಕಲ್ಲುಗಳಿವೆ?” ಅಂತಲೋ ಗುರುತಿಸಲು ಹೇಳುತ್ತದೆ. ಇಂಡಿಯನ್ ರೈಲ್ವೇಸ್ ವೆಬ್ಸೈಟು ಬಳಸುವವರು ನೀವಾದರೆ, ಅಲ್ಲಿನ ಸರ್ವರ್ ನಿಮಗೆ 24+18, 49-27 ಈ ರೀತಿಯ ಸಣ್ಣದೊಂದು ಗಣಿತದ ಲೆಕ್ಕವನ್ನು ಕೊಟ್ಟು, ಉತ್ತರಿಸಲು ಹೇಳುತ್ತದೆ. ನಾನು ಕಳೆದವಾರ ಬಳಸಿದ ಮೈಕ್ರೋಸಾಫ್ಟಿನವರ ಹೊಸಾ ಕ್ಯಾಪ್ಚಾಗಳಲ್ಲಿ ಒಂದು ದಿಕ್ಕಿಗೆ ಮುಖಮಾಡಿರುವ ಮಾನವಕೈಯ 3D ಚಿತ್ರದ ಪಕ್ಕದಲ್ಲಿ ಒಂದು ಪ್ರಾಣಿಯ 3D ಚಿತ್ರವನ್ನು ಕೊಟ್ಟು, ಬಾಣದಗುರುತಿರುವ ಬಟನ್ನುಗಳನ್ನು ಬಳಸಿ ಪ್ರಾಣಿಯ ಮುಖವನ್ನೂ ಕೈ ಬೊಟ್ಟುಮಾಡಿರುವ ದಿಕ್ಕಿಗೇ ಸರಿಯಾಗಿ ತಿರುಗಿಸುವಂತೆ ಹೇಳಲಾಗುತ್ತದೆ.

ಮೈಕ್ರೋಸಾಫ್ಟಿನವರ ಕ್ಯಾಪ್ಚಾ

 

ಈ ಕ್ಯಾಪ್ಚಾಗಳ ರಚನೆ ಮಾನವ ಸೃಜನಶೀಲತೆ ಮತ್ತು ತಾಂತ್ರಿಕ ನಾವೀನ್ಯತೆಗಳ ಒಂದೊಳ್ಳೆಯ ಸಂಯೋಜನೆ. ಮೊದಲಿಗೆ, ವಿನ್ಯಾಸಕರು ಮನುಷ್ಯರಿಂದ ಸುಲಭವಾಗಿ ಬಗೆಹರಿಸಬಹುದಾದ, ಆದರೆ ಬಾಟ್‌ಗಳಿಗೆ ಪರಿಹರಿಸಲು ಕಠಿಣವಾದ ಸಮಸ್ಯೆಗಳ ಪರಿಕಲ್ಪನೆ ಮಾಡುತ್ತಾರೆ. ನಂತರ ಈ ಸಮಸ್ಯೆಗಳು, ಅವುಗಳ ಉತ್ತರ, ಹಾಗೂ ಉತ್ತರ ಪಡೆಯುವ ರೀತಿ ಈ ಮೂರು ಅಂಶಗಳನ್ನು ಬಳಸಿ ಮನುಷ್ಯರು ಮತ್ತು ಬಾಟ್‌ಗಳ ನಡುವೆ ವ್ಯತ್ಯಾಸವನ್ನು ತೋರಿಸುವಲ್ಲಿ ಪರಿಣಾಮಕಾರಿ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ ಈ ಅಂಶಗಳನ್ನು ಒಳಗೊಂಡ ಅಲ್ಗಾರಿದಮ್ ಅನ್ನು ವೆಬ್ ಪೇಜಿನ ಸೋರ್ಸ್ ಕೋಡ್’ನಲ್ಲಿ ಸೇರಿಸಿ ಕಾರ್ಯಗತಗೊಳಿಸಲಾಗುತ್ತದೆ. ಕ್ಯಾಪ್ಚಾವನ್ನು ತೀರಾಕ್ಲಿಷ್ಟಕರವಾಗಿಸಿದರೆ ಸಾಮಾನ್ಯ ಬಳಕೆದಾರನಿಗೂ ಕಷ್ಟವಾಗಬಹುದು. ಅದೇ ಕಾರಣಕ್ಕೆ ಇದರಲ್ಲಿ ಕ್ಲಿಷ್ಟತೆ ಹಾಗೂ ಸುಲಭತೆಯ ನಡುವಿನ ಗೆರೆಯನ್ನು ಗುರುತಿಸಿ, ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯುವುದು ಹಾಗೂ ಬಳಕೆದಾರನಿಗೆ ಒಂದೊಳ್ಳೆಯ ಸೇವೆಯನ್ನು ಕೊಡುವುದು ಎರಡನ್ನೂ ನಿಭಾಯಿಸಬೇಕಾಗುತ್ತದೆ. ಅಸ್ಪಷ್ಟ ಅಕ್ಷರಗಳನ್ನು ಓದುವ ಕ್ಯಾಪ್ಚಾಗಳಿದ್ದಾಗ ಅಕ್ಷರಗಳನ್ನು ಓದಲು ಓಸಿಆರ್ ತಂತ್ರಾಂಶಗಳಿದ್ದರೂ ಕೂಡಾ ಆಗ ಅವಿನ್ನೂ ವಿರೂಪಗೊಂಡ ಅಕ್ಷರಗಳನ್ನು ಓದುವಷ್ಟು ಶಕ್ತವಾಗಿರಲಿಲ್ಲ. ಪೋಲೀಸರು ಜಾಗೃತರಾದಷ್ಟೂ ಕಳ್ಳರು ಜಾಗೃತರಾದಂತೆ, ಈ ಪದ ಆಧಾರಿತ ಕ್ಯಾಪ್ಚಾ ಸಮಸ್ಯೆಗಳನ್ನು ಪರಿಹರಿಸಬಲ್ಲ ಬಾಟ್’ಗಳೂ ಬಂದವು. ಓಸಿಆರ್ ತಂತ್ರಾಶ ಕ್ಷೇತ್ರದಲ್ಲಿ ಆದ ಬೆಳವಣಿಗೆ, ಈ ಕ್ಯಾಪ್ಚಾ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲ ಕ್ಷಮತೆಗೆ ಅನುವಾಯ್ತು. ನಿಧಾನಕ್ಕೆ ಚಿತ್ರ-ಆಧಾರಿತ ಕ್ಯಾಪ್ಚಾಗಳು ಬಳಕೆಗೆ ಬಂದವು. ಅದರಲ್ಲಿ ವಸ್ತುಗಳನ್ನು ಗುರುತಿಸುವ, ಅಲ್ಲಿ ಚಿತ್ರಗಳ ಸರಣಿಯೊಳಗೆ ನಿರ್ದಿಷ್ಟ ವಸ್ತುಗಳನ್ನು ಗುರುತಿಸುವ ಹಾಗೂ ಕೆಳಗೊಂದು ಬಾಕ್ಸಿಗೆ ಟಿಕ್ ಮಾಡುವ ಪರಿಪಾಠ ಆರಂಭವಾಯ್ತು.

OCR based CAPTCHA

 

ನಿಮಗಿಲ್ಲೊಂದು ವಿಚಾರ ಆಶ್ಚರ್ಯಕರವಾಗಿ ಕಾಣಬಹುದು. ಬಾಟ್ ಒಂದಕ್ಕೆ ಇದನ್ನೆಲ್ಲಾ ಮಾಡಲು ಹೇಗೆ ಅಸಾಧ್ಯ? ಎಂತೆಂದದೋ ಕ್ಲಿಷ್ಟ ಪ್ರೋಗ್ರಾಮುಗಳನ್ನು ಬರೆಯುವವರಿಗೆ, ಎಐ ಬಳಸಿ ಅಸ್ಪಷ್ಟ ಪಠ್ಯ ಅಥವಾ ಚಿತ್ರವನ್ನು ಗುರುತಿಸುವ, ಬಾಕ್ಸೊಂದಕ್ಕೆ ಟಿಕ್ ಮಾಡುವ ಪ್ರೋಗ್ರಾಮುಗಳನ್ನು ಬರೆಯುವುದು ಕಷ್ಟವೇ? ಕದಿಯಬೇಕು ಅಂತಾ ಆಸಕ್ತಿಯಿರುವವನಿಗೆ ಇದೊಂದು ಕೆಲಸ ಯಾವ ಲೆಕ್ಕದ್ದು ಎಂದನಿಸಬಹುದು. ಆದರೆ ಇಲ್ಲೊಂದೆರಡು ಸ್ವಾರಸ್ಯಕರ ಅಂಶಗಳಿವೆ. ಮೊದಲನೆಯದು ಆರ್ಥಿಕ ಅಂಶ. ತನ್ನ ವೆಬ್ಸೈಟನ್ನು ಸುರಕ್ಷಿತವಾಗಿಸಿಕೊಳ್ಳುವ ಮಾಲೀಕನಿಗೆ, ಅದಕ್ಕಾಗಿ ಹಣತೆತ್ತು ಕ್ಯಾಪ್ಚಾದಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಅಗತ್ಯ ಮತ್ತು ಕ್ಷಮತೆ ಎರಡೂ ಇರುತ್ತದೆ. ಆದರೆ ಆ ಕ್ಯಾಪ್ಚಾವನ್ನು ಗೆಲ್ಲುವ ಬಾಟ್ ತಯಾರಿಸಲು ಕ್ಯಾಪ್ಚಾಕ್ಕಾಗಿ ಮಾಡಿದ್ದಕ್ಕಿಂತಲೂ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವಿರುತ್ತದೆ. ಆ ಹೂಡಿಕೆಗೆ ಕಳ್ಳ ತಯಾರಿರುವುದಿಲ್ಲ ಅಥವಾ ಆ ಆರ್ಥಿಕ ಕ್ಷಮತೆ ಅವನಲ್ಲಿರುವುದಿಲ್ಲ.

 

ಎರಡನೆಯದು ಮಾನವನ ಅಸಾಧಾರಣ ಅರಿವಿನ ಸಾಮರ್ಥ್ಯದ(cognitive abilities) ಅಂಶ. ಬಾಟ್‌ಗಳು ಅದೆಷ್ಟು ಶಕ್ತಿಶಾಲಿಯಾಗಿದ್ದರೂ, ದೃಶ್ಯ ಗ್ರಹಿಕೆ ಮತ್ತು ಭಾಷಾ ತಿಳುವಳಿಕೆಯ ವಿಷಯದಲ್ಲಿ ದಡ್ಡರೇ. ಮಾನವರು ಸಲೀಸಾಗಿ ಅರ್ಥೈಸಿಕೊಳ್ಳಬಹುದಾದ ವಿಕೃತ ಹಾಗೂ ಅಸ್ಪಷ್ಟ ಅಕ್ಷರಗಳನ್ನು ಗುರುತಿಸಲು, ಸಂಕೀರ್ಣ ಪಠ್ಯವನ್ನು ಅರ್ಥೈಸಿಕೊಳ್ಳಲು ಇಂದಿಗೂ ತಿಣುಕಾಡುತ್ತವೆ. ಚಿತ್ರ-ಆಧಾರಿತ ಸವಾಲುಗಳಲ್ಲಿ 3×3 ಲೇಔಟ್’ನಲ್ಲಿ ಬರುವ ಆ ಚಿತ್ರಗಳ ನಡುವಿನ ಬಾರ್ಡರ್ ತೀರಾ ತೆಳುವಾಗಿರುವುದನ್ನು ನೀವು ನೋಡಿರಬಹುದು. ಜಗತ್ತನ್ನು ವರ್ಷಾನುಗಟ್ಟಲೇ ನೋಡಿರುವ ಮಾನವನ ಮೆದುಳಿಗೆ, ಎರಡು ಚಿತ್ರಗಳು ಅದೆಷ್ಟೇ ಹತ್ತಿರವಿದ್ದರೂ ಅವನ್ನು ಬೇರೆಬೇರೆಯಾಗಿ ನೋಡುವುದು ತೀರಾಸುಲಭದ ಕೆಲಸ. AI ಪ್ರೋಗ್ರಾಮುಗಳಿಗೆ ಇದು ಕಬ್ಬಿಣದ ಕಡಲೆಯೇ.

 

ಮೂರನೆಯದು ಹಾಗೂ ಅತೀ ಮುಖ್ಯದ್ದು, ಮನುಷ್ಯನ ಕಪಿಬುದ್ಧಿಯ ಮೇಲೆ ಅವಲಂಬಿತವಾದ ಮನೋವೈಜ್ಞಾನಿಕ ಅಂಶ. ಮನುಷ್ಯ ಕೊಟ್ಟಕೆಲಸವನ್ನಷ್ಟೇ ಮಾಡೋದು ತೀರಾ ಕಡಿಮೆ. ಎಷ್ಟೋ ಬಾರಿ ಕ್ಯಾಪ್ಚಾಗಳಲ್ಲಿ ನೀವು ಟೈಪಿಸಿದ್ದು ಅಥವಾ ಚಿತ್ರ ಗುರುತಿಸಿದ್ದು ಗಣನೆಗೇ ಬರುವುದಿಲ್ಲ. ಬರೇ I am not a robot ಎಂಬ ಬಾಕ್ಸನ್ನು ಟಿಕ್ ಮಾಡಿದ್ದಷ್ಟೇ ಮುಖ್ಯವಾಗುತ್ತದೆ. ನಿಮಗೆ ಕಂಪ್ಯೂಟರಿನ ಸ್ಕ್ರೀನಿನಲ್ಲಿ ಬಾಕ್ಸ್ ಒಂದರ ಮೇಲೆ ಕ್ಲಿಕ್ ಮಾಡಲು ಹೇಳಿದರೆ ನೀವು ಯಾವತ್ತೂ ನಿಮ್ಮ ಮೌಸನ್ನು ಸರಳರೇಖೆಯಲ್ಲಿ ಓಡಿಸಿ ಬಾಕ್ಸನ್ನು ತಲುಪುವುದಿಲ್ಲ. ಅಡ್ಡಾದಿಡ್ಡಿಯಾಗಿ ಮೌಸ್ ಪಾಯಿಂಟರನ್ನು ನಾಲ್ಕುಬಾರಿ ಸ್ಕ್ರೀನಿನ ಸುತ್ತೆಲ್ಲಾ ಪ್ರದಕ್ಷಿಣೆ ಹೊಡೆಸಿಯೇ ಟಿಕ್ ಬಾಕ್ಸ್ ಇದ್ದಲ್ಲಿಗೆ ತಲುಪುವುದು. ಬಾಟ್ ಪ್ರೋಗ್ರಾಮ್ ಹಾಗಲ್ಲ. ಅದು ತೀರಾ ತರ್ಕಬದ್ಧವಾಗಿ ಬಾಕ್ಸ್ ಅನ್ನು ಹುಡುಕಿ ಅದನ್ನು ಸರಳರೇಖೆಯಲ್ಲೇ ತಲುಪಿ ಕ್ಲಿಕ್ಕಿಸುತ್ತದೆ. ಈ ಸೊಫಿಸ್ಟಿಕೇಷನ್ನೇ ಬಾಟ್’ಗೆ ಮುಳುವಾಗುತ್ತದೆ. “ಇಷ್ಟೆಲ್ಲಾ ಚಂದದಲ್ಲಿ ಸೈನಿಕನ ಮಾರ್ಚ್-ಫಾಸ್ಟಿನಂತೆ ಯಾವ ಮನುಷ್ಯನೂ ಮೌಸ್ ಓಡಿಸುವುದಿಲ್ಲ, ಇದು ಬಾಟ್” ಅಂತಾ ಕ್ಷಣಮಾತ್ರದಲ್ಲಿ ಕಂಪ್ಯೂಟರಿಗೆ ತಿಳಿದುಬಿಡುತ್ತದೆ. ಇದು ಮಾತ್ರವಲ್ಲದೇ, ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನೂ ಓದಿ ನೋಡುವ ಈ ಸೈಟುಗಳು ನಿಮ್ಮನ್ನು ಒಂದೇ ಕ್ಷಣದಲ್ಲಿ ಮನುಷ್ಯರು ಅಂತಾ ಗುರುತಿಸಿಬಿಡುತ್ತವೆ. ಯಾಕೆಂದರೆ ಬಾಟ್’ಗಳು ಹುಚ್ಚ ವೆಂಕಟ್’ನ ವಿಡಿಯೋ, ರಾಗಿದೋಸೆಯ ರೆಸಿಪಿ, ಯಲಹಂಕದ ಬಾಡಿಗೆ, ಉತ್ತರಹಳ್ಳಿಯ ಸೈಟಿನ ಬೆಲೆ, ಮೋದಿ ರಾಹುಲ್ಗಾಂಧಿ ಬಗ್ಗೆಯೆಲ್ಲಾ ತಲೆಕೆಡಿಸಿಕೊಂಡಿರುವುದಿಲ್ಲ, ಬಾಂಬೆಸ್ಟಾಕ್ ಎಕ್ಸ್ಚೇಂಜು, ದಿಷಾ ಪಟಾನಿ ಹಾಟ್ ಪಿಕ್ಸ್ ಅಂತಲೂ ಗೂಗಲಿಸಿರುವುದಿಲ್ಲ. ನಿಮ್ಮ ಮೌಸ್ ಚಲನೆ, ಟೈಪಿಂಗ್ ನಡವಳಿಕೆ, ಕೆಲಸವೊಂದನ್ನು ಮುಗಿಸಲು ನೀವು ತೆಗೆದುಕೊಳ್ಳುವ ಸಮಯ ಇವೆಲ್ಲಾ ತಿಳಿದಿರುವ, ನೀವು ಭೇಟಿಕೊಟ್ಟ ಸೈಟುಗಳ ಕುಕೀಗಳನ್ನು ಅರೆದುಕುಡಿದಿರುವ ಇಂದಿನ ಬ್ರೌಸರುಗಳಿಗೆ ನೀವು ಅರಿಷಡ್ವರ್ಗಗಳನ್ನು ಗೆಲ್ಲದ ಹುಲುಮಾನವರು ಅಂತಾ ಮೊದಲೇ ಗೊತ್ತಿರುತ್ತದೆ. ಹಳೆಯ ಕ್ಯಾಪ್ಚಾಗಳಲ್ಲಿ ನಿಮ್ಮ ಉತ್ತರ ಏಕ್ದಂ ಕರಾರುವಕ್ಕಾಗಿರಬೇಕಿತ್ತು. ಈಗ ಹಾಗಲ್ಲ, ಕೆಲವೆಡೆ ಕ್ಯಾಪ್ಚಾ ಸುಮ್ಮನೇ ಫಾರ್ಮಾಲಿಟಿಯಷ್ಟೇ. ಹಾಗಾಗಿಯೇ ನಿಮ್ಮ ಉತ್ತರದಲ್ಲೊ ಸಣ್ಣದೊಂದೆರಡು ತಪ್ಪಿದ್ದರೂ ಅದು ನಗಣ್ಯವಾಗುತ್ತದೆ. ಏನೂ ಕಪಿಕೆಲಸ ಮಾಡದೇ ನೇರವಾಗಿ ಕೊಟ್ಟ ಸಮಸ್ಯೆಯನ್ನಷ್ಟೇ ಬಗೆಹರಿಸಿದರೆ ಕಂಪ್ಯೂಟರ್ ನಿಮ್ಮನ್ನು ಬಾಟ್ ಎಂದು ಪರಿಗಣಿಸುವ ಸಾಧ್ಯತೆ ಹೆಚ್ಚು! ಅಯ್ಯೋ ಯಾರಾದ್ರೂ ನನ್ನ ಬ್ರೌಸಿಂಗ್ ಹಿಸ್ಟರಿ ನೋಡಿದ್ರೆ ಏನು ಕತೆ ಅಂತಾ ಹೆಚ್ಚಿನವರಿಗೆ ಗಾಬರಿಯಿರುತ್ತದೆ. ಕ್ಯಾಪ್ಚಾ ವಿಷಯಕ್ಕೆ ಬಂದರೆ ನಿಮ್ಮ ಇದೇ ವಿಲಕ್ಷಣ ಬ್ರೌಸಿಂಗ್ ಹಿಸ್ಟರಿ ವರವಾಗುತ್ತದೆ.

ಕ್ಯಾಪ್ಚಾಗಳನ್ನು ಗುರುತಿಸುವಾಗ ಮೌಸ್’ನ ಚಲನೆ. ರೋಬೋಟುಗಳು ಇಲ್ಲಿ ಎಡದಿಂದ ಬಲಕ್ಕೆ ಒಂದಾದಮೇಲೊಂದರಂತೆ ಯಾಂತ್ರಿಕವಾಗಿ ಆಯ್ಕೆ ಮಾಡುತ್ತವೆ. ಮನುಷ್ಯರು ಇವಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡುತ್ತಾರೆ.

 

ಹಾಗೆಯೇ, ನಿಮಗಿದು ಗೊತ್ತೇ? ಪಠ್ಯಆಧಾರಿತ ಮತ್ತು ಚಿತ್ರ ಆಧಾರಿತ ಕ್ಯಾಪ್ಚಾಗಳು ಸಾವಿರಾರು ಜನರ ಹೊಟ್ಟೆಪಾಡಿಗೂ ಕಾರಣವಾಗಿವೆ. ಇವುಗಳನ್ನು ಸೃಷ್ಟಿಸುವ ಹಾಗೂ ಸರಿಯುತ್ತರಗಳನ್ನು ಬರೆದುಕೊಡುವ ಕೆಲಸ ಆರ್ಥಿಕವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಷ್ಟೋ ಕೆಲಸಗಳನ್ನು ಸೃಷ್ಟಿಸಿದೆ. ಕ್ಯಾಪ್ಚಾ ಫಾರ್ಮಿಂಗ್ ಎಂದು ಕರೆಯಲ್ಪಡುವ ಈ ಕೆಲಸಕ್ಕೆ ತೀರಾ ಕಡಿಮೆ ಹಣಕ್ಕೆ, ಸಣ್ಣದೊಂದು ಕೆಳಕು ರೂಮಿನಲ್ಲಿ ಕೂತು, ಒಂದು ಸಾವಿರ ಸಮಸ್ಯೆ+ಪರಿಹಾರಕ್ಕೆ ಒಂದು ಡಾಲರ್ ಲೆಕ್ಕದಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ದಿನವಿಡೀ ಕಂಪ್ಯೂಟರ್ ಮುಂದೆ ಕೂತು ಕಣ್ಣು ಹಾಳುಮಾಡಿಕೊಂಡು, ಅಂತರ್ಜಾಲದ ಸುರಕ್ಷತೆಗಾಗಿ ಕಡಿಮೆ ಸಂಬಳದ ಕೂಲಿ ಮಾಡಿಸಿಕೊಳ್ಳುವ ಈ ಕೆಲಸ, ಡಿಜಿಟಲ್ ಆರ್ಥಿಕತೆಯಲ್ಲಿ ಕಾರ್ಮಿಕರ ಶೋಷಣೆಯನ್ನು ಎತ್ತಿ ತೋರಿಸುತ್ತದೆ.

0 comments on “ನೀವು ಮನುಷ್ಯರೇ ಹೌದು ಅಂತಾ ನಿಮಗೆ ಖಾತ್ರಿಯಿದೆಯೇ?

Leave a Reply

Your email address will not be published. Required fields are marked *