Wednesday, 28 February, 2024

“ನಿಜವಾದ ಸೆಕ್ಯುಲರ್ ರಾಜಧರ್ಮ ಯಾವುದಾಗಲು ಸಾಧ್ಯ?”

Share post

2002ರ ಗೋಧ್ರಾ ಗಲಭೆಗಳಾದಾಗ ಎಲ್ಲರೂ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಕೂತಿದ್ದರು. ರಾಜ್ಯ ಮತ್ತು ಕೇಂದ್ರಗಳಲ್ಲಿದ್ದ ವಿಪಕ್ಷದವರು ಮಾತ್ರವಲ್ಲದೇ, ಅಂದು ಗುಜರಾತಿನಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತದಪಕ್ಷವಾಗಿದ್ದ ಬಿಜೆಪಿಯೊಳಗೂ ಸಹ ಮೋದಿವಿರೋಧಿ ಅಲೆಯೆದ್ದಿತ್ತು. ಇಡೀ ದೇಶವೇ ಇಂತಹುದೊಂದು ಆಗ್ರಹಕ್ಕೆ ಉತ್ತರವನ್ನು ನಿರೀಕ್ಷಿಸಿ ಕುಳಿತಿದ್ದಾಗ ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿಯವರು ಹೇಳಿದ ಮಾತು ಒಂದೇ “ಮೋದಿಯವರು ರಾಜಧರ್ಮವನ್ನು ಪಾಲಿಸಲಿ”. ಪ್ರಧಾನಿಗಳು ಮೋದಿಯವರನ್ನು ಟೀಕಿಸುತ್ತಾರೆ, ರಾಜೀನಾಮೆಗೆ ಒತ್ತಾಯಿಸುತ್ತಾರೆ ಎಂದೆಲ್ಲಾ ಆಸೆಯಿಟ್ಟುಕೊಂಡವರಿಗೆ ಈ ಸಾಲಿನಿಂದ ನಿರಾಸೆಯಾಗಿತ್ತು. ಆದರೆ ಅರ್ಥವಾಗುವವರಿಗೆ ಅದು ಅರ್ಥವಾಗಿತ್ತು. ಆಗಿನ್ನೂ ರಾಜಕೀಯದಲ್ಲಿ ಅಷ್ಟೇನೂ ಆಸಕ್ತಿಯಿರದ ನನಗೆ “ರಾಜಧರ್ಮ ಎಂದರೇನು? ನಾವು ಜಾತ್ಯಾತೀತ, ಧರ್ಮನಿರಪೇಕ್ಷ, ಸೆಕ್ಯುಲರ್ ಎಂದೆಲ್ಲಾ ಕರೆದುಕೊಳ್ಳುವ ದೇಶ. ಇಂತಹ ದೇಶದಲ್ಲಿ, ಈ ಆಧುನಿಕ ಯುಗದಲ್ಲಿ ರಾಜಧರ್ಮವನ್ನು ನಿಭಾಯಿಸುವುದೆಂದರೇನು? ಈಗಂತೂ ರಾಜರುಗಳೇ ಇಲ್ಲದ ಪ್ರಜಾಪ್ರಭುತ್ವ. ಇಲ್ಲಿ ಯಾವ ರಾಜ, ಯಾವ ಧರ್ಮವನ್ನು ನಿಭಾಯಿಸಬೇಕು? 1947ರಲ್ಲಿ ಜಮ್ಮು-ಕಶ್ಮೀರದ ಹಿಂದೂ ರಾಜ, ತನ್ನ ಮುಸ್ಲಿಂ ಬಾಹುಳ್ಯದ ಪ್ರಜೆಗಳಿಡೆಗೆ ಯಾವ ಧರ್ಮವನ್ನು ನಿಭಾಯಿಸಿದ? ಹಿಂದೂ ಧರ್ಮವನ್ನೇ, ಮುಸ್ಲಿಂ ಧರ್ಮವನ್ನೇ? ಅಥವಾ ರಾಜನಿಗೇ ಬೇರೆ ಧರ್ಮವಿರುತ್ತದೆಯೇ?” ಎಂದೆಲ್ಲಾ ನನಗೆ ಆಲೋಚನೆ ಕಾಡಿ, ರಾಜಕೀಯದೆಡೆಗೆ ನನ್ನ ಆಸಕ್ತಿಯನ್ನು ಕುದುರಿಸಿದ್ದಂತೂ ಹೌದು.

 

ರಾಜಧರ್ಮವನ್ನು ಅರ್ಥೈಸಿಕೊಳ್ಳುವ ಮೊದಲು ನಾವು ಧರ್ಮವೆಂದರೇನು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಧರ್ಮವೆಂದರೆ ಸ್ಥೂಲವಾಗಿ “ಸರಿಯಾದದ್ದು” ಎನ್ನಬಹುದು. ಭಿಕ್ಷುಕನೊಬ್ಬ ‘ಧರ್ಮ ಮಾಡೀ ಸ್ವಾಮಿ” ಎಂದರೆ, ಅದರರ್ಥ ಭಿಕ್ಷೆ ಹಾಕಿ ಅಂತಲ್ಲ. “ನನ್ನ ಬಳಿಯಿಲ್ಲದ್ದು ನಿಮ್ಮ ಬಳಿಯಿದೆ. ಅದರಲ್ಲಿ ಸ್ವಲ್ಪ ನನಗೆ ಕೊಟ್ಟಾದಮೇಲೆ ನಿನಗೆ ಅಭಾವವುಂಟಾಗುವುದಿಲ್ಲ ಅಂತಾದರೆ, ನಿನ್ನ ವಿವೇಚನೆಯನ್ನು ಉಪಯೋಗಿಸಿ, ನನಗೆ ಏನು ಕೊಟ್ಟರೆ ಸರಿ ಅಂತನ್ನಿಸುತ್ತದೋ ಅದನ್ನು ಕೊಡು” ಎಂದರ್ಥ. ಧರ್ಮ ಮಾಡಿ ಅಂದಾಗ, ಸರಿಯಾದದ್ದು ಮಾಡಿ ಅಂತಾ ಅರ್ಥ. ನೀವು ಯಾರನ್ನಾದರೂ ಅಧರ್ಮಿ ಅಂತಾ ಯಾವಾಗ ಕರೀತೀರಿ? ಯಾವಾಗ ಕೆಲ ಪ್ರಾಕೃತಿಕ ವರ್ತನೆಗಳನ್ನೂ, ಕರುಣಾತ್ಮಕ ಗುಣಗಳನ್ನೂ ಮನುಷ್ಯ ಮರೆಯುತ್ತಾನೋ ಆಗವನು ಅಧರ್ಮಿಯಾಗ್ತಾನೆ, ತಾನೇ? ಯಾವುದು ಈ ಪ್ರಾಕೃತಿಕ ವರ್ತನೆಗಳು ಅಥವಾ ಕರುಣಾತ್ಮಕ ಗುಣಗಳು!? ಕೆಲ ತೀರಾ ಸರಳ ಉದಾಹರಣೆಗಳನ್ನು ನೋಡುವುದಾದರೆ “ದುರ್ಬಲರನ್ನು ಶೋಷಿಸದಿರುವುದು”, “ಕೊಟ್ಟ ಮಾತನ್ನು ಮರೆಯದಿರುವುದು”, “ಅಭಾವವಿಲ್ಲವೆಂದಾದಲ್ಲಿ ಉಳಿದವರೊಡನೆ ಹಂಚಿಕೊಳ್ಳುವುದು” ಇಂತವು. ಎಲ್ಲರಿಗೂ ಹೊಂದುವಂತಹ ಕೆಲ ನಿಯಮಗಳು. ಒಟ್ಟಿನಲ್ಲಿ ಪ್ರಕೃತಿಯೊಂದಿಗೇ ಬದುಕಿ ಈ ಇಡೀ ಜೀವನ ಹಾಗೂ ಜಗತ್ತನ್ನು ಸಹನೀಯ ಸಾಧ್ಯವಾಗಿಸುವಂತಾ ಕೆಲ ಕ್ರಮಗಳ ಸಮೂಹವನ್ನೇ ಒಟ್ಟಾಗಿ “ಧರ್ಮ” ಎನ್ನುವುದು. ಯಾವ ಕನಿಷ್ಟ ನಿಯಮಗಳನ್ನು ಮುರಿದರೆ ಒಂದು ಸಮುದಾಯ ಪರಸ್ಪರ ಕಚ್ಚಾಡಿ ಸಾಯುತ್ತದೆಯೋ ಆ ಕನಿಷ್ಟ ನಿಯಮಗಳೇ ಧರ್ಮ. ಸಮುದಾಯಗಳೇ ಸತ್ತಮೇಲೆ ಜಗತ್ತು ಉಳಿದಿದ್ದರೂ, ನಮ್ಮಪಾಲಿಗೆ ಅದು “ಇಲ್ಲವಾಗುತ್ತದೆ” ಅಲ್ಲವೇ? ಅದಕ್ಕೇ ಧರ್ಮವನ್ನು “ಜೀವನ ಹಾಗೂ ಜಗತ್ತನ್ನು ಸಾಧ್ಯವಾಗಿಸುವಂತಾ ಕೆಲ ಕ್ರಮಗಳ ಸಮೂಹ” ಎನ್ನುವುದೇ ಸೂಕ್ತ. Dharma doesn’t give life, but it preserves life. ಆ ಕಾರಣಕ್ಕಾಗಿ ಧರ್ಮ ಅಗತ್ಯ.

 

ಹಾಗಾದರೆ ಹಿಂದೂಧರ್ಮವೆಂದರೇನು? ಹಿಂದೂಧರ್ಮಕ್ಕೆ ಅನುಗುಣವಾಗಿ ಬದುಕುವುದು ಎಂದರೇನು? ವೇದಗಳನ್ನು ಪಾಲಿಸುವುದೇ? ಮನುಸ್ಮೃತಿಯ ಪ್ರಕಾರ ಬದುಕುವುದೇ? ವರ್ಷಕ್ಕೊಮ್ಮೆ ಗಣೇಶನ ಹಬ್ಬ ಮಾಡುವುದು ಹಿಂದೂಧರ್ಮವೇ? ಜನವರಿ ಒಂದರ ಬದಲು ಯುಗಾದಿಯನ್ನು ವರ್ಷದ ಮೊದಲ ದಿನ ಅನ್ನೋದೇ? ಭಗವದ್ಗೀತೆಯನ್ನು ಓದಿ ಅದರಂತೆಯೇ ಬದುಕುವುದೇ? ಯುಧಿಷ್ಟಿರ-ಯಕ್ಷ ಪ್ರಶ್ನೋತ್ತರದಂತೆ ಬದುಕುವುದೇ? ಅಲ್ಲ. ಹಿಂದೂಧರ್ಮವೆಂದರೆ ಯಾವುದೇ ಒಂದು ಪುಸ್ತಕ, ಪ್ರವಚನ ಅಥವಾ ವ್ಯಕ್ತಿ ಬರೆದಿಟ್ಟ ಡಾಕ್ಟರಿನ್ ಅಲ್ಲ. ಸರಳವಾಗಿ ಹೇಳಬೇಕೆಂದರೆ ಇಡಿಯ ಹಿಂದೂ ಧರ್ಮವನ್ನು ಒಂದು ಹೂವಿಗೆ ಹೋಲಿಸಬಹುದು. ಸಂಪ್ರದಾಯ, ಆಚರಣೆ, ಹಬ್ಬಗಳು, ಜ್ಯೋತಿಷ್ಯ, ವೇದಗಳು, ಅಷ್ಟಾಂಗ ಯೋಗಗಳು, ಸಂಗೀತ, ನಾಟ್ಯ, ಶಾಸ್ತ್ರಗಳೆಲ್ಲವೂ ಹೂವಿನ ಪಕಳೆಗಳಂತೆ. ಆದರೆ ಈ ಎಲ್ಲಾ ಪಕಳೆಗಳನ್ನು ಹಿಡಿದಿಡುವ ಶಲಾಕೆ ಏನಿದೆ ಅದು ‘ಧರ್ಮ’. ಇಡೀ ಹಿಂದೂ ಜೀವನಪದ್ದತಿಯ ಜೀವಾಳವೇ ಈ ಧರ್ಮವೆನ್ನುವ ಶಲಾಕೆ. ನಮ್ಮ ಹಿಂದೂ ಪದ್ದತಿಗಳು, ಸಂಪ್ರದಾಯ ಹಾಗೂ ನಂಬಿಕೆಗಳು ಅದರಿಂದಲೇ ಹೊಮ್ಮಿದ್ದು, ಅದರಿಂದಲೇ ಹಿಡಿದಿಡಲ್ಪಟ್ಟಿದ್ದು.

 

ಮೇಲೆ ಹೇಳಿದ ಕೆಲವಷ್ಟೇ ಧರ್ಮಗಳೇ? ಅಲ್ಲ, ಅವು ಕೆಲ ಸರಳ ಉದಾಹರಣೆಗಳಷ್ಟೇ. ಹಾಗೂ ಅವು ಸಮುದಾಯದ ಎಲ್ಲರಿಗೂ ಅನ್ವಯವಾಗುವಂತದ್ದು. ಇದಲ್ಲದೇ ಸಮಾಜದ ಬೇರೆ ಬೇರೆ ಸ್ಥರಗಳಲ್ಲಿರುವವರಿಗೆ ಧರ್ಮದ ಅರ್ಥ ಬೇರೆಬೇರೆಯಾಗಿರುತ್ತದೆ. ಆಗಿರಬೇಕು ಕೂಡಾ. ಶತ್ರುವೆಂದು ಪರಿಗಣಿಸಿದವನನ್ನು ಕೊಲ್ಲುವ ಹಕ್ಕು ಸಮಾಜದ ಎಲ್ಲರಿಗೂ ಇಲ್ಲ. ಹತ್ಯೆಯ ಪಶ್ಚಾತ್ತಾಪದೊಂದಿಗೆ ಬದುಕುವುದು ಎಲ್ಲರಿಗೂ ಸಾಧ್ಯವಿಲ್ಲವಾದ್ದರಿಂದ, ಹತ್ಯೆಯನ್ನು ಪಾಪವೆಂದೇ ಪರಿಗಣಿಸಿದ ನಮ್ಮ ಧರ್ಮ, ಅದರ ಜವಾಬ್ದಾರಿಯನ್ನು ಕೇವಲ ಕ್ಷತ್ರಿಯನಿಗೆ ವಹಿಸಿದೆ. ಅದು ಕ್ಷತ್ರಿಯನ ಧರ್ಮ. ಹೀಗೆಯೇ ಏನನ್ನೂ ಬಯಸದೇ, ಯಾವುದನ್ನೂ ಕೂಡಿಟ್ಟುಕೊಳ್ಳದೇ ಜನಹಿತಕ್ಕಾಗಿ ಬದುಕುವ, ಅವರ ನೈತಿಕ ನೆಲೆಗಟ್ಟನ್ನು ಹಸನುಗೊಳಿಸುವ ಬ್ರಾಹ್ಮಣಧರ್ಮವನ್ನೂ ಕಟ್ಟಿಕೊಟ್ಟಿದೆ. ಅದೇರೀತಿ ಸಮುದಾಯದ ನಾಯಕನಾದವನಿಗೆ ಧರ್ಮದ ಅರ್ಥ ಹಾಗೂ ಅಗತ್ಯ ಬೇರೆಯೇ ಇರುತ್ತದೆ. “ಎಲ್ಲರನ್ನೂ ಅವರವರ ಸಾಮರ್ಥ್ಯಕ್ಕನುಗುಣವಾಗಿ ನೋಡು ಹಾಗೂ ಸತ್ಕರಿಸು”, “ಸಮುದಾಯ ತೊಂದರೆಯಲ್ಲಿ ಸಿಕ್ಕಿಕೊಂಡಾಗ ಹೆಂಗಸರನ್ನು, ಮಕ್ಕಳನ್ನು, ಅಶಕ್ತರನ್ನು ಹಾಗೂ ಹಿರಿಯರನ್ನು ಮೊದಲು ಕಾಪಾಡು”, “ಸಾಮಾಜಿಕ ನಿಯಮಗಳು ಎಲ್ಲರಿಗೂ ಒಂದೇ ಇರಲಿ” ಮುಂತಾದ ನಿಯಮಗಳು ಧರ್ಮವಾಗುತ್ತವೆ. ಮುಂದೆ ಸಮುದಾಯಗಳು ಬೆಳೆದು ದೊಡ್ಡದಾದಂತೆ, ಬುಡಕಟ್ಟುಗಳು ರಾಜ್ಯಗಳಾದಾಗ ಈ ನಿಯಮಗಳೇ ರಾಜಧರ್ಮಗಳಾದವು. ಇದೇ ರಾಜಧರ್ಮವನ್ನು ವಾಜಪೇಯಿ ಉಲ್ಲೇಖಿಸಿದ್ದು.

 

ರಾಜ್ಯಭಾರ ಮಾಡುವುದು, ಪಕ್ಕದ ರಾಜ್ಯಗಳೊಂದಿಗೆ ವ್ಯವಹಾರ ಮಾಡುವ ರಾಜಕೀಯವನ್ನೂ, ಧರ್ಮದ ಚೌಕಟ್ಟಿನಲ್ಲೇ ನಡೆಸಿದ ಹೆಮ್ಮೆಯ ನಾಗರೀಕ ಜಗತ್ತು ಈ ಭರತಖಂಡ. ಅದನ್ನು ಸಾಧ್ಯವಾಗಿಸಿದ್ದೇ ಹಿಂದೂಧರ್ಮ. ಯಾಕೆಂದರೆ ಆ ರಾಜಕೀಯವೂ ಹಿಂದೂಧರ್ಮದ ನಿಯಮಗಳನ್ನು ಪಾಲಿಸಿಕೊಂಡೇ ಬೆಳೆದದ್ದು. ಭಾರತದ ಪುರಾಣದಲ್ಲಾಗಲೀ, ಇತಿಹಾಸದಲ್ಲಾಗಲೀ ರಾಜಕಾರಣದಲ್ಲಿ ರಾಜರುಗಳು ಯುದ್ಧಗೆದ್ದಾಗ ಎದುರಾಳಿ ಸೈನಿಕರನ್ನು ಸಾಮೂಹಿಕವಾಗಿ ತಲೆಕಡಿದ, ಒಂದುವೇಳೆ ಯಾರಾದರೂ ಹಾಗೆ ಮಾಡಿದ್ದರೆ ಅವರನ್ನು ನಮ್ಮ ಕಥೆಗಳಲ್ಲಿ ಧರ್ಮಿಗಳೆಂದು ಹೊಗಳಿದ ಒಂದೇ ಒಂದು ಉದಾಹರಣೆಯಿಲ್ಲ. ಸೋತ ರಾಜನ ಸಂಪತ್ತು ಗೆದ್ದವನದ್ದಾದರೂ, ಮನೆಮನೆಗೆ ನುಗ್ಗಿ ಹೆಂಗಸರನ್ನು ಅತ್ಯಾಚಾರ ಮಾಡಿ, ಮಕ್ಕಳ ತಲೆಕಡಿದ ವಿಜಯಿರಾಜರನ್ನು ಧರ್ಮಿಗಳಿಂದು ಹೊಗಳಿ ಪೂಜಿಸಿದ ಉದಾರಣೆಗಳಿಲ್ಲ. ಯಾಕೆಂದರೆ ರಾಜಧರ್ಮ ಅದನ್ನೊಪ್ಪುತ್ತಿರಲಿಲ್ಲ. ಅಂತಹ ವರ್ತನೆ ತೋರಿದವರನ್ನು ನಮ್ಮ ಕಥೆಗಳು ಯಾವ ಮುಲಾಜೂ ಇಲ್ಲದೇ ಅಧರ್ಮಿಗಳೆಂದೇ ಕಂಡಿವೆ. ಹಾಗೆಯೇ ಅಸುರರೆಂದು ಪರಿಗಣಿಸಲ್ಪಟ್ಟವರೂ ಧಾರ್ಮಿಕ ನಡಾವಳಿಗನುಗುಣವಾಗಿ ನಡೆದುಕೊಂಡಾಗ ಅವರನ್ನು ಹೊಗಳಿದೆ ಹಾಗೂ ಪೂಜಿಸಿದೆ. ಯಾಕೆಂದರೆ “ಧರ್ಮ” ಎಂದರೆ ಸರಿಯಾದದ್ದು ಎಂದಷ್ಟೇ. ಅದನ್ನು ಮಾಡುವವನ ವರ್ಣ, ಬಣ್ಣ, ಸಾಮಾಜಿಕ ಸ್ಥರ, ಲಿಂಗ ಯಾವುದೇ ಬೇಧವಿಲ್ಲದೇ…..”ಸರಿಯಾದದ್ದು” ಅಷ್ಟೇ.

ಆದರೆ ಇವತ್ತು ಯಾರಿಗೂ ರಾಜಕೀಯವನ್ನಾಗಲೀ, ರಾಜಧರ್ಮವನ್ನಾಗಲೀ ಅವೆರಡನ್ನೂ ರೂಪಿಸಿಕೊಟ್ಟ ಹಿಂದೂಧರ್ಮವನ್ನಾಗಲೀ ಅರ್ಥೈಸಿಕೊಳ್ಳುವ ಸಹನೆಯಾಗಲೀ, ಪರಿಜ್ಞಾನವಾಗಲೀ, ಪ್ರಜ್ಞೆಯಾಗಲೀ ಇಲ್ಲ. ಎಲ್ಲರೂ ಸೆಕ್ಯುಲರಿಸಮ್ಮಿನ ಭೂತವಡರಿಕೊಂಡವರೇ. ಯೂರೋಪಿನ ಚರ್ಚ್ ಮತ್ತು ಸ್ಟೇಟ್ ಅನ್ನು ಬೇರೆಯಾಗಿಸುವ ಸೆಕ್ಯುಲರಿಸಮ್ಮಿನ ಅಮಲಿನಲ್ಲಿ ತೇಲುತ್ತಾ ಧರ್ಮವನ್ನೇ ರಾಜಕೀಯದಿಂದ ಹೊರಗಿಡಹೊರಟವರು. ಸೆಕ್ಯುಲರ್ ಯೂರೋಪಿನ ಭ್ರೂಣಹತ್ಯೆಯ ಕಾನೂನುಗಳೂ ರೂಪುಗೊಂಡದ್ದು ಬೈಬಲ್ಲಿನ ಪ್ರಭಾವದಿಂದಲೇ, ಮಧ್ಯಪ್ರಾಚ್ಯದ ದೇಶಗಳ ರಾಜಕೀಯ, ಅಪರಾಧಶಾಸ್ತ್ರ ಮತ್ತು ಕಾನೂನುಗಳು ಕೂಡಾ ಕುರಾನಿನ ಬೋಧನೆಯಿಂದಲೇ ಪ್ರಭಾವಿತಗೊಂಡವು ಎಂಬುದನ್ನು ಒಪ್ಪುತ್ತಲೇ, “ಭಾರತದ ರಾಜಕಾರಣದಲ್ಲಿ ಧರ್ಮದ ಹಸ್ತಕ್ಷೇಪ ಸಲ್ಲದು” ಎಂದು ಘೋಷಣೆ ಕೂಗುವ ಗೋಸುಂಬೆಗಳ ಪಡೆಯೇ ಇಲ್ಲಿನ ಶಾಸಕಾಂಗ, ಕಾರ್ಯಾಂಗ, ನ್ಯಾಯಂಗಗಳಲ್ಲಿ ತುಂಬಿಹೋಗಿದೆ. ಈಗಂತೂ ಹಿಂದುತ್ವ ಬೇರೆ, ಹಿಂದೂಯಿಸಂ ಅಂದ್ರೆ ಬೇರೆ, ಹಿಂದೂ ಧರ್ಮ ಅಂದ್ರೆ ಬೇರೆ ಎಂದೆಲ್ಲಾ ಕೂಗಾಡುವ ಹೊಸದೇ ಟ್ರೆಂಡ್ ಶುರುವಾಗಿದೆ. ಹಿಂದೂಯಿಸಂ ಎಂಬ ಒಂದು ‘ಇಸಂ’ ಇರಲು ಸಾಧ್ಯವೇ ಇಲ್ಲ ಅಂತಾ ಈ ism ಎಂಬ ಪದದ ಮೂಲಗೊತ್ತಿರುವವರಿಗೆ ತಿಳಿದಿರುತ್ತೆ.

 

ಈ ಇಸಂ ಎಂಬ ಪ್ರತ್ಯಯದ ಮೂಲ ಪುರಾತನ ಗ್ರೀಕ್ ಭಾಷೆಯ ಇಸ್ಮೋಸ್ (-ismos) ಎಂಬ ಪ್ರತ್ಯಯ. ಇದರರ್ಥ ಜೊತೆಗಿರುವ, ಅನುಕರಿಸುವ ಎಂದಿತ್ತು. ಇದು ಲ್ಯಾಟಿನ್ನಿನಲ್ಲಿ -ismus ಆಗಿ, ಅಲ್ಲಿಂದ ಫ್ರೆಂಚಿನಲ್ಲಿ -ismeಯಾಗಿ ಇಂಗ್ಳಿಷಿನಲ್ಲಿ -ism ಆಯ್ತು. 1680ರಲ್ಲಿ ಈ ಇಸಮು ಎಂಬ ಕ್ರಿಯಾಪದವನ್ನು ನಾಮಪದವಾಗಿ ಬಳಸಲಾರಂಭಿಸಲಾಯ್ತು. ಉದಾಹರಣೆಗೆ baptize ಮಾಡುವುದನ್ನು baptism ಎಂದೂ, criticize ಮಾಡುವುದನ್ನು criticism ಎಂದೂ, plagiarize ಮಾಡುವುದನ್ನು plagiarism ಎಂದು ಕರೆಯಲು ಬಳಸಲಾಯ್ತು. 19ನೇ ಶತಮಾನದಲ್ಲಿ ಥಾಮಸ್ ಕಾರ್ಲೈಲ್ ಈ ಪದವನ್ನು ಒಂದು ಪೂರ್ವನಿಯೋಜಿತ ಐಡಿಯಾಲಜಿಗಳನ್ನ ಅಂದರೆ ಸಿದ್ಧಾಂತಗಳನ್ನ ಸೂಚಿಸಲು ಬಳಸಿದ. ಚಿಂತಕರಾದ ಜೂಲಿಯನ್ ಹಕ್ಸ್ಲೀ ಮತ್ತು ಜಾರ್ಜ್ ಬರ್ನಾರ್ಡ್ ಷಾ ಕೂಡಾ ಈ ಪದಗಳನ್ನು ತಮ್ಮ ಬರಹಗಳಲ್ಲಿ ಬಳಸಿ ಪ್ರಸಿದ್ಧಿಗೆ ತಂದರು. ಅಮೇರಿಕದಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ಈ -ಇಸಂ ಪ್ರತ್ಯಯಗಳನ್ನು ಅಂದಿನ ಸಾಮಾಜಿಕ ಚಳುವಳಿಗಳನ್ನು, ಅಂದರೆ ಫೆಮಿನಿಸಂ, ಪ್ಯಾಸಿಫಿಸಂ, ಅರ್ಲೀ ಸೋಷಿಯಲಿಸಂ ಇತ್ಯಾದಿಗಳನ್ನು ಉದ್ದೇಶಿಸಿ ಬಳಸಲಾಯಿತು. ಹೀಗೆ ಒಂದು ಸಿದ್ಧಾಂತವನ್ನು ವಿವರಿಸುವಾಗ ಇಸಂ ಎಂಬ ಪದ ಬಳಕೆಗೆ ಬಂತು.

 

ಹಿಂದುತ್ವ ಅನ್ನೋದು ಒಂದು ಸಿದ್ಧಾಂತ ಅಲ್ಲವೆಂದು ಎಲ್ಲರಿಗೂ ತಿಳಿದಿದೆ. ಇದು ಯಾರೋ ಕಮ್ಯೂನಿಸಂ, ಸೋಷಿಯಲಿಸಂನ ಸಿದ್ಧಾಂತಗಳನ್ನು ಓದಿ ತಲೆಕೆಡಿಸಿಕೊಂಡವರು ಹುಟ್ಟುಹಾಕಿದ ಪದವಷ್ಟೇ. ಹಿಂದೂಯಿಸಂ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ. ಇನ್ನುಳಿದದ್ದು ಎರಡು ಪದಗಳು, ಹಿಂದುತ್ವ ಹಾಗೂ ಹಿಂದೂಧರ್ಮ. ಇವೆರಡೂ mutually exclusive ಪದಗಳಲ್ಲ. ಒಂದನ್ನು ಬಿಟ್ಟು ಇನ್ನೊಂದನ್ನು ವಿವರಿಸಲು ಸಾಧ್ಯವಿಲ್ಲ. ಅಮೂರ್ತ ನಾಮಪದಗಳನ್ನು ಸೂಚಿಸಲು ಬಳಸುವ ‘ತ್ವ’, ಹಿಂದೂ ಪದದೊಡನೆ ಬಂದಾಗ ಹಿಂದುತ್ವವಾಗುತ್ತದೆ. ಗುರು ಅಂದರೆ ಭಾರವಾಗಿರುವ ವಸ್ತುವಿಗೆ ಗುರುತ್ವವಿರುತ್ತದೆ. ಪುರುಷನಿಗೆ ಪುರುಷತ್ವ, ನೇತೃಗೆ ನೇತೃತ್ವವಿದ್ದಂತೆ, ಹಿಂದೂವಿಗೆ ಹಿಂದುತ್ವ.  ಹಿಂದೂಧರ್ಮಕ್ಕನುಗುಣವಾಗಿ ಜೀವನ ನಡೆಸುವುದಷ್ಟೇ ಹಿಂದುತ್ವ. ಜೀವನವೆಂದರೆ ಅದು ಯಾರದ್ದೂ ಆಗಬಹುದು. ರಾಜನದ್ದಾಗಬಹುದು, ರೈತನದ್ದಾಗಬಹುದು, ಸೈನಿಕನದ್ದಾಗಬಹುದು, ವೈದ್ಯನದ್ದಾಗಬಹುದು, ಚಮ್ಮಾರ ಕಮ್ಮಾರ ಬಾಣಸಿಗ ಕೂಲಿ ಯಾರದ್ದೂ ಸಹ. ಯಾರ ಜೀವನವೂ, ಅವರ ವರ್ತನೆಗಳೂ, ಜೀವನ ನಿರ್ಧಾರಗಳು ಹಿಂದೂಧರ್ಮಕ್ಕನುಗುಣವಾಗಿರುತ್ತೋ ಅವನ ಜೀವನವೇ ಹಿಂದುತ್ವದ ಉದಾಹರಣೆ, ಅಷ್ಟೇ.

 

ಇದೇ ಕಾರಣಕ್ಕೆ ಕೆಲವರು “ಬಿಜೆಪಿ ಒಂದು ರಾಜಕೀಯಪಕ್ಷ. ಅವರು ಧರ್ಮದ ವಿಚಾರ ಮಾತನಾಡಬಾರದು” ಎಂದಾಗ ನನಗೆ ಆಶ್ಚರ್ಯವಾಗುತ್ತದೆ. ಯಾಕೆಂದರೆ ಹಿಂದೂ ಜೀವನಪದ್ದತಿಯಲ್ಲಿ ಎಲ್ಲಕಡೆಯೂ ಧರ್ಮದ ಎಳೆ ಇದೆ. ರಾಜಕೀಯದಲ್ಲೂ ಸಹ. ಇದೇ ಕಾರಣಕ್ಕೆ ವೈಯುಕ್ತಿಕವಾಗಿ ನನಗೆ ಯಾವುದೇ ಪಾರ್ಟಿ “ನಾನು ಹಿಂದೂ ಧರ್ಮದ ನಿಯಮಗಳಿಗೆ ಬದ್ಧನಾಗಿ ರಾಜ್ಯನಡೆಸುತ್ತೇನೆ” ಎಂದರೆ ನನಗದು ತಪ್ಪೆನಿಸುವುದಿಲ್ಲ. ಯಾಕೆಂದರೆ ಹಿಂದೂಧರ್ಮ ಯಾವತ್ತೂ ಬೇರೆ ನಂಬಿಕೆಗಳನ್ನು ತುಳಿದು, ತರಿದು ನಿಲ್ಲದೇ ವಸುದೈವ ಕುಟುಂಬಕಂ ಎಂಬ ತತ್ವದಡಿಯಲ್ಲಿ ಇವತ್ತಿನ ಚಿಂತಕರು ಹೇಳುವ ಸೆಕ್ಯುಲರಿಸಂ ಅನ್ನೇ ಪಾಲಿಸುತ್ತದೆ. ಆ ಲೆಕ್ಕದಲ್ಲಿ ನೋಡಿದರೆ ಹಿಂದೂಧರ್ಮವೊಂದೇ ನಿಜಕ್ಕೂ ಸೆಕ್ಯುಲರ್ ಆಗಿರಲು ಸಾಧ್ಯಕೂಡಾ.

0 comments on ““ನಿಜವಾದ ಸೆಕ್ಯುಲರ್ ರಾಜಧರ್ಮ ಯಾವುದಾಗಲು ಸಾಧ್ಯ?”

Leave a Reply

Your email address will not be published. Required fields are marked *