Wednesday, 28 February, 2024

ಅಸ್ಸಾಂ ರೆಜೆಮೆಂಟ್ ಹಾಡಿ ಹೊಗಳುವ ‘ಬದ್ಲೂರಾಂ ಕಾ ಬದನ್’

Share post

“ಏಕ್ ಖೂಬ್ಸೂರತ್ ಲಡ್ಕಿ ಥಿ…
ಉಸ್ಕೊ ದೇಖ್ ಕೆ ರೈಫಲ್ಮನ್…
ಚಿಂದೀ ಖೀಚ್ನಾ ಭುಲ್ ಗಯಾ…
ಹವಾಲ್ದಾರ್ ಮೇಜರ್ ದೇಖ್ ಲಿಯಾ…
ಉಸ್ಕೊ ಪಿಟ್ಟೂ ಲಗಾಯಾ…
ಬದ್ಲೂರಾಂ ಏಕ್ ಸಿಪಾಹೀ ಥಾ…
ಜಪಾನ್ ವಾರ್ ಮೇ ಮರ್ ಗಯಾ…
ಕ್ವಾರ್ಟರ್ ಮಾಸ್ಟರ್ ಸ್ಮಾರ್ಟ್ ಥಾ…
ಉಸ್ನೇ ರಾಷನ್ ನಿಕಾಲಾ…
ಬದ್ಲೂರಾಂ ಕಾ ಬದನ್ ಜಮೀನ್ ಕೆ ನಿಚೇ ಹೈ…
ತೋ ಹಮೇ ಉಸ್ಕಾ ರೇಷನ್ ಮಿಲ್ತಾ ಹೈ…
ಶಭಾಶ್… ಹಲ್ಲೇಲೂಯಾ…
ತೋ ಹಮೇ ಉಸ್ಕಾ ರೇಷನ್ ಮಿಲ್ತಾ ಹೈ…”

ಇದ್ಯಾವ ಹಾಡು? ಹುಡುಗಿಯನ್ನು ನೋಡ್ತಾ ಸೆಫ್ಟೀ-ಪಿನ್ ಎಂಗೇಜ್ ಮಾಡದೇ ಬಂದೂಕು ಹಿಡಿದ ಸಿಪಾಯಿಗೆ ಮೇಜರ್ ಶಿಕ್ಷೆ ಕೊಟ್ಟ ಕಥೆಯೇನೋ ಯಾರೋ ಹೊಸಾ ಸೈನಿಕನ ಕಥೆಯಿರಬಹುದು. ಆದರೆ ಯಾರೀ ಬದ್ಲೂರಾಂ? ಅವನ ದೇಹ ಅಲ್ಲೆಲ್ಲೋ ಭೂಮಿಯಡಿ ಇರೋದಕ್ಕೆ ಅದನ್ನ ಯಾಕೆ ಹಾಡು ಮಾಡಬೇಕು? ಎಂಬ ಪ್ರಶ್ನೆಗಳು ನಿಮಗೆ ಬರುತ್ತಿವೆಯೇ?

ಮನುಷ್ಯ ಮೂಲತಃ ಒಬ್ಬ ಸ್ವಾರ್ಥಿ ಪ್ರಾಣಿ. ಆತ ಏನಿದ್ದರೂ ಮೊದಲು ತನ್ನ ಬೇಡಿಕೆಗಳನ್ನು ಪೂರೈಸಿಕೊಂಡೇ ನಂತರ ಪಕ್ಕದವರ ಅಗತ್ಯಗಳನ್ನು ನೋಡಿಕೊಳ್ಳುವುದು. ತನ್ನನ್ನು ಅಪಾಯದಿಂದ ಕಾಪಾಡಿಕೊಳ್ಳುವಾಗ ಮಾತ್ರವಲ್ಲ ಬರಗಾಲ, ಪ್ರವಾಹ ಪರಿಸ್ಥಿತಿಗಳಲ್ಲಿಯೂ ಮನುಷ್ಯ ಮೂಲ ಸ್ವಭಾವ ಅದೇ. ಇದರಲ್ಲಿ ಅವನ ತಪ್ಪೇನೂ ಇಲ್ಲ, ಯಾಕೆಂದರೆ ಪ್ರಕೃತಿ ಸ್ವಾರ್ಥವನ್ನು ಅವನ ಡಿಎನ್ಎನಲ್ಲಿಯೇ ತುಂಬಿದೆ. ಯಾಕೆಂದರೆ ಮನುಷ್ಯ ಪ್ರಭೇಧ ಜಗತ್ತಿನ ಜೀವರಾಶಿಗಳಲ್ಲಿ ಅತ್ಯಂತ ಶಕ್ತಿಶಾಲಿ ಪ್ರಭೇಧವೇನೂ ಅಲ್ಲ. ಓಡುವುದರಲ್ಲಿ, ನೋಡುವುದರಲ್ಲಿ, ಭಾರ ಎತ್ತುವುದರಲ್ಲಿ, ಗುರಿಕಟ್ಟುವುದರಲ್ಲಿ, ಬೇಟೆಯಾಡುವುದರಲ್ಲಿ ಎಲ್ಲದರಲ್ಲೂ ನಾವು ಸಾಮಾನ್ಯರಲ್ಲಿ ಸಾಮಾನ್ಯರಷ್ಟೇ. ಮಿಲಿಯನ್ನುಗಟ್ಟಲೇ ಕಾಲ ಬೇರೆ ಪ್ರಾಣಿಗಳ ಆಹಾರವಾಗಿಯೇ ಬದುಕಿದ್ದ ಮನುಷ್ಯ ತನ್ನನ್ನು ಕಾಪಾಡಿಕೊಳ್ಳುವ ವಿಚಾರಬಂದಾಗ ಮೊದಲು ತನ್ನನ್ನು ತಾನು ಕಾಪಾಡಿಕೊಳ್ಳುವ ಸ್ವಾರ್ಥವನ್ನೇ ನೋಡುತ್ತಾನೆ. ಅದು ಪ್ರಕೃತಿಸಹಜ ಕೂಡಾ. ಮನುಷ್ಯಮಾತ್ರವಲ್ಲ ಹೆಚ್ಚಿನ ಪ್ರಾಣಿಗಳೂ ಇದೇ ಗುಂಪಿಗೆ ಸೇರುತ್ತವೆ. ಜಿಂಕೆ, ಕರಡಿ, ಹುಲಿ, ಸಿಂಹಗಳೂ ಕೂಡಾ ಅಪಾಯಕ್ಕಿಡಾದಾಗ ತನ್ನ ಮಕ್ಕಳನ್ನು ಕಾಪಾಡುವ ಸಣ್ಣ ಪ್ರಯತ್ನವನ್ನು ಮಾಡುತ್ತವಾದರೂ, ಪ್ರಾಣಕ್ಕೆ ಕುತ್ತು ಎಂದು ಗೊತ್ತಾದಾಗ ಕೊನೆಗೆ ತಮ್ಮ ಸಂರಕ್ಷಣೆಯನ್ನೇ ಮುಖ್ಯವಾಗಿಸಿಕೊಳ್ಳುತ್ತವೆ.

ಇದೇಕಾರಣಕ್ಕೆ ಮನುಷ್ಯರು ನಿಸ್ವಾರ್ಥದ ಮಜಲಿನೆಡೆಗೆ ಹೆಜ್ಜೆಹಾಕಿದಾಗ ಅವರು ಅಸಾಮಾನ್ಯರು, ತ್ಯಾಗಮಯಿಗಳು, ವಿಶಾಲಹೃದಯದವರು ಎನಿಸಿಕೊಳ್ಳುವುದು. ಯಾವತ್ತು ಮನುಷ್ಯ ತನಗಿಂತ ಇತರರನ್ನು ಹಾಗೂ ಅವರ ಅಗತ್ಯಗಳನ್ನು ಮುಂದಿಡುತ್ತಾನೋ ಆಗ ಸಹಜವಾಗಿಯೇ ಸಮಾಜದಲ್ಲಿ ಗ್ರೇಟ್ ಎನಿಸಿಕೊಳ್ಳುತ್ತಾನೆ. ಕಳೆದ ಹತ್ತು ಹದಿನೈದು ಸಾವಿರ ವರ್ಷಗಳಿಂದ ಮನುಷ್ಯ ಸಂಘಜೀವಿಯಾದ ನಂತರ ನಿಧಾನಕ್ಕೆ ‘ನನ್ನ ಗುಂಪು’, ‘ನನ್ನ ಸಂಸಾರ’, ‘ನನ್ನ ಮಕ್ಕಳು’ ಮುಂತಾದ ಭಾವನೆಗಳನ್ನು ಬೆಳೆಸಿಕೊಳ್ಳಲಾರಂಭಿಸಿದ. ಅದ್ಯಾವುದೋ ಮುಖ್ಯಘಟ್ಟದಲ್ಲಿ ಪಂಗಡಗಳು ರೂಪುಗೊಳ್ಳಲಾರಂಭಿಸಿದಾಗ, ಈ ಪಂಗಡಗಳಲ್ಲೇ ಅಧಿಕಾರಿಗಳು, ಕೆಲಸಗಾರರು, ಮನೆಯಲ್ಲೇ ಇದ್ದು ಸಂಸಾರ ನೋಡಿಕೊಳ್ಳುವವರು ಮುಂತಾದ ಕೆಲಸಗಳ ವಿಂಗಡಣೆಯಾದಾಗ, ಪಂಗಡದ ರಕ್ಷಣೆಗೆಂದು ಬೇರೆಯದೇ ಒಂದು ಘಟಕವನ್ನು ಸೃಷ್ಟಿಸಿ ಅದಕ್ಕೆ ಸೈನ್ಯವೆಂದು ಕರೆಯಲಾಯ್ತು. ಪಂಗಡದ ಉಳಿದ ಸದಸ್ಯರು ಮುಖ್ಯಸೈನ್ಯಕ್ಕೆ ಸಹಾಯದ ಅಗತ್ಯವಿದ್ದಲ್ಲಿ ಮಾತ್ರ ಬರುವಂತಾ ಮೀಸಲು ಪಡೆಗಳಾದರು. ಆದರೂ ಈ ಮುಖ್ಯಪಡೆಯ ಸದಸ್ಯರು ಸೈನ್ಯದ ಅಪಾಯಗಳ ಅರಿವಿದ್ದೂ ಯಾಕೆ ಈ ಕೆಲಸಕ್ಕೆ ಒಪ್ಪಿಕೊಂಡರು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಅಲ್ಲವೇ. ನಿಮಗೆ ಯಾರಾದರೂ ಕರೆದು ನಾಳೆಯಿಂದ ನೀನು ಉಳುಮೆಮಾಡಬೇಕಿಲ್ಲ, ಬೇಟೆಗೆ ಹೋಗಬೇಕಿಲ್ಲ, ಅಡುಗೆಮಾಡಬೇಕಿಲ್ಲ ಬೇರೇನೂ ಮಾಡಬೇಕಿಲ್ಲ. ನಿನ್ನ ಕೆಲಸ ನಮ್ಮನ್ನೆಲ್ಲಾ ರಕ್ಷಿಸುವುದು. ಅದೊಂದೇ ನಿನ್ನ ಕೆಲಸ. ಆದರೆ ಈ ಕೆಲಸದಲ್ಲಿ ನೀನು ಗಾಯಗೊಳ್ಳಬಹುದು, ಕೈಕಾಲು ಶಾಶ್ವತವಾಗಿ ಊನವಾಗಬಹುದು, ಹೆಚ್ಚೆಂದರೆ ನಿನ್ನ ಜೀವಹೋಗಬಹುದು ಎಂದರೆ ಹೇಗಾಗಬಹುದು? ಯಾಕೆ ಯಾರಾದರೂ ತನ್ನ ಜೀವವನ್ನು ಉಳಿದವರಿಗೋಸ್ಕರ ಪಣವಿಡುತ್ತಾನೆ ಹೇಳಿ? ಸೈನ್ಯದ ಪರಿಕಲ್ಪನೆ ಪ್ರಾರಂಭವಾಗಿ ಸಹಸ್ರಾರು ವರ್ಷಗಳಾದರೂ, ಸ್ವಾರ್ಥಿ ಮನುಷ್ಯನ ಮನಸ್ಸಿನ ಈ ನಿಸ್ವಾರ್ಥ ಮೂಲೆಯೊಂದು ನಿಲುಕಿಗೇ ಸಿಗಲಾಗದ ವಿಚಾರ.

ಇವತ್ತು ಮನುಷ್ಯ ನಾಗರೀಕನಾಗಿ ಗೂಪುಗೊಂಡು, ಸಮಾಜದ ಪ್ರತಿಯೊಬ್ಬನಿಗೂ ಹತ್ತು ಹಲವು ಕೆಲಸಗಳನ್ನು ವಿಂಗಡಿಸಿಕೊಂಡಿದ್ದಾನೆ. ಸಮಾಜದ ಎಲ್ಲರೂ ಸೈನಿಕರಾಗುವ ಅಗತ್ಯ ಇವತ್ತಿಗಿಲ್ಲ. ನನ್ನ ಬದಲು ಬೇರಾದರೂ ಸೈನ್ಯಕ್ಕೆ ಹೋಗಲಿ ಅನ್ನುವಷ್ಟು ಜನಸಂಖ್ಯೆಯಿದ್ದರೂ, ಸೈನ್ಯಕ್ಕೆ ಸೇರುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೂ ಜೀವನದಲ್ಲಿ ಒಂದು ನಾಯಿಗೆ ಹಚಾ ಅನ್ನುವಷ್ಟೂ ಧೈರ್ಯವಿಲ್ಲದ ಕೆಲವರು “ಅಯ್ಯೋ ಅವರೆಲ್ಲಾ ಮನೆಯ ಬಡತನದಿಂದಾಗಿ, ಗ್ಯಾರಂಟಿ ಸಂಬಳಕ್ಕೆ ಸೈನ್ಯ ಸೇರ್ತಿರೋದು. ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ ಬಿಡ್ರೀ” ಅಂತೆಲ್ಲಾ ಅಮೇಧ್ಯತಿನ್ನುವ ಮಾತನಾಡುತ್ತಾರೆ. ಇರಬಹುದು, ಕೆಲವರು ಬಡತನದಿಂದಲೂ ಸೈನ್ಯ ಸೇರಿರಬಹುದು. ಆದರೆ ಸಾಯುವುದೇ ಅವನ ಹಣೆಬರಹವಾಗಿದ್ದಿದರೆ ಟಿಪ್ಪೂ ಡ್ರಾಪಿನಿಂದ ಹಾರಿಯಾದರೂ ಸಾಯಬಹುದಿತ್ತು. ಬದಲಿಗೆ “ಬಡತನದಲ್ಲಿ ಊಟವಿಲ್ಲದೇ ಸಾಯುವ ಬದಲು, ಇದ್ದಷ್ಟು ದಿನ ಯಾವುದಾದರೂ ಕೆಲಸಕ್ಕೆ ಉಪಯುಕ್ತನಾಗುತ್ತೇನೆ, ನನ್ನ ಪ್ರಾಂತ್ಯವನ್ನು ಕಾಪಾಡಿ, ಶತ್ರುಗಳನ್ನು ಹೊಸಕಿ ಹಾಕಿತ್ತೇನೆ. ಇದೇ ಕಾರ್ಯದಲ್ಲಿ ಅವನ ಗುಂಡಿಗೆ ಎದೆಕೊಟ್ಟು ಸಾಯುತ್ತೇನೆ” ಅಂತಾ ನಿರ್ಧರಿಸಿ ಸೈನ್ಯ ಸೇರಿದವನ ಧೈರ್ಯವನ್ನೂ ಮೆಚ್ಚದೇ ಇರಲಾರಿರಿ. ಹೀಗೆ ನಿಸ್ವಾರ್ಥಿಯಾಗಿ ಹೊರಡುವ ಆ ಚೇತನಗಳಿಗೆ ಎಷ್ಟು ನಮಸ್ಕಾರ ಹೇಳಿದರೂ ಸಾಲದು. ಪ್ರೀತಿ ಎಂತೆಂತಾ ಹುಚ್ಚುಕೆಲಸವನ್ನೂ ಮಾಡಿಸುತ್ತೆ. ಮಧ್ಯರಾತ್ರಿಯಲ್ಲಿ ಅವಳ ಮನೆಮುಂದೆ ನಿಲ್ಲಿಸುತ್ತೆ. ಕೈಯಲ್ಲಿ ಕ್ಯಾಮರಾ ಹಿಡಿದು ಹುಚ್ಚನಂತೆ ತಿರುಗಾಡಿಸುತ್ತೆ. ನಾಯಿಮರಿಯನ್ನು ಮುದ್ದುಮಾಡಿಸುತ್ತೆ. ಕೈಯಲ್ಲಿ ಬಂದೂಕು ಹಿಡಿದು ಗಡಿಯನ್ನೂ ರಕ್ಷಿಸುತ್ತೆ. ನೀವು ಯಾರನ್ನ ಪ್ರೀತಿಸುತ್ತೀರಿ ಅನ್ನುವುದರಮೇಲೆ ಈ ಹುಚ್ಚು ಅವಲಂಬಿತವಷ್ಟೇ.

ಈ ಸೈನಿಕರ ಜೀವನವೇ ನನಗೊಂತರಾ ವಿಸ್ಮಯ. ನೋಡಲು ನನ್ನನಿಮ್ಮಂತೆಯೇ ಇರುವ ಈ ಜೀವಗಳ ಜೀವನೋತ್ಸಾಹವೇ ಅದಮ್ಯ. ಒಮ್ಮೆ ರಜೆಕಳೆದು ಸೇವೆಗೆ ಮರಳಿದರೆ ಇನ್ಯಾವಾಗ ಸಂಸಾರದ ಮುಖ ನೋಡುವುದೋ ತಿಳಿಯದು. ನೋಡುತ್ತೀವೋ ಇಲ್ಲವೋ ಎಂಬುದೂ ತಿಳಿಯದು. ಆದರೂ, ತನ್ನದೆಲ್ಲವನ್ನೂ ತನ್ನದಲ್ಲವೆಂದು ಬದಿಗಿಟ್ಟು, ತನ್ನವರೇ ಅಲ್ಲದವರ ರಕ್ಷಣೆಗೆ, ಬಂದೂಕು ಹಿಡಿದು ಬಿಸಿಲು ಮಳೆ ಚಳೆ ಗಾಳಿಗೆ ಎದೆಯೊಡ್ಡುತ್ತಾರೆ. ಈ ಪ್ರಯತ್ನದಲ್ಲಿ ತಮ್ಮದೇ ಕೈ, ಕಾಲು, ಕಣ್ಣು ಕೆಲವೊಮ್ಮೆ ಜೀವವನ್ನೂ ಕಳೆದುಕೊಳ್ಳುತ್ತಾರೆ. ನಾಳೆಯ ಸೂರ್ಯನನ್ನು ನೋಡುತ್ತೇನೋ ಎಂಬ ಯಾವ ಖಾತ್ರಿಯಿಲ್ಲದಿದ್ದರೂ ನಗುತ್ತಲೇ ಮಲಗಲು ಬಂಕರಿಗೆ ಹೋಗುತ್ತಾರೆ. ಈ ಅನಿಶ್ಚತತೆಗೋ ಏನೋ ಬದುಕಿದ್ದಷ್ಟೂ ದಿನ ಸೈನಿಕರು ಬದುಕುವ ರೀತಿ ಚಂದ. ಶಿಸ್ತಾದ ದಿನಚರಿ, ಕಟ್ಟುಮಸ್ತಾದ ದೇಹ, ಬೆಳಗಿನ ಓಟಕ್ಕೊಂದು, ಮೆಸ್ಸಿನಲ್ಲಿ ಊಟಕ್ಕೆ ಕೂತಾಗಲೊಂದು, ಡ್ಯೂಟಿಯಲ್ಲಿದ್ದರೆ ಒಂದು, ಡ್ಯೂಟಿಯಿಲ್ಲದೇ ವಿಶ್ರಾಂತಿಯಲ್ಲಿದ್ದರೊಂದು, ಕ್ಯಾಂಪ್ ಬಿಟ್ಟು ಹೊರಹೋಗುವುದಿದ್ದರೆ ಅದಕ್ಕೊಂದು ಬೇರೆಯದೇ ಸಮವಸ್ತ್ರಗಳು, ಒಳ್ಳೆಯ ಊಟ, ಅದನ್ನು ತಿನ್ನಲೂ ಒಂದು ರೀತಿಯ ಶಿಸ್ತು! ಭೂಸೈನ್ಯಕ್ಕೆ ಹೋಲಿಸಿದರೆ ನೌಕಾದಳ ಮತ್ತು ವಾಯುದಳಲ್ಲಂತೂ ರಾಜವೈಭವದ ಜೀವನ. ಯುದ್ಧವಿಲ್ಲದ ಕಾಲದಲ್ಲಿ ಸದಾ ಒಂದಲ್ಲೊಂದು ಚಟುವಟಿಕೆ. ಹಾಸ್ಯ, ಹಾಡು, ಜೋಕುಗಳಿಂದ ಕೂಡಿದ ಸಂಜೆಗಳು. ಸೈನಿಕನ ಸಾವು ಹೇಗಿರುತ್ತೋ ಗೊತ್ತಿಲ್ಲ, ಆದರೆ ಇದ್ದಷ್ಟೂ ದಿನ ಆತನ ಜೀವನ ಸಂತೋಷದಿಂದರಬೇಕು ಎಂಬುದೇ ಸೈನ್ಯದ ಉದ್ದೇಶ. ಒಟ್ಟಿನಲ್ಲಿ ಸೈನ್ಯ ಚಂದವಾಗಿ ಬದುಕುವುದನ್ನು ಕಲಿಸಿಕೊಡುತ್ತದೆ.

ಹೌದು ಬಿಸಿಲು ಮಳೆ ಗಾಳಿಗೊಡ್ಡಿ ಗಡುಸಾದ ಈ ಜೀವಗಳಿಗೂ ಹಾಡು ಹಸೆಗಳಿಗೂ ಒಂದು ನವಿರಾದ ಸಂಬಂಧವಿದೆ. ಮಹಾಯುದ್ಧದ ಕಾಲದಲ್ಲಂತೂ ಭಾರತೀಯ ಸೈನಿಕರ ಹಾಡು ನೃತ್ಯಗಳ ಬಗ್ಗೆಯೇ ವಿವರವಾದ ಲೇಖನಗಳು ಲಭ್ಯವಿವೆ. ಪ್ರಪಂಚದಾದ್ಯಂತದ ಸೈನ್ಯಗಳ ಬಗ್ಗೆ ನಿಖರವಾಗಿ ಗೊತ್ತಿಲ್ಲ, ಆದರೆ ಭಾರತೀಯ ಸೇನೆಯ ಪ್ರತಿಯೊಂದು ದಳಕ್ಕೂ, ಪ್ರತಿಯೊಂದು ರೆಜಿಮೆಂಟಿಗೂ ತನ್ನದೇ ಆದ ಇತಿಹಾಸ, ಅದಕ್ಕೆ ತಕ್ಕಂತೆ ಲಾಂಛನ, ಅದಕ್ಕೊಂದು ಧ್ವಜ, ಬೇರೆಬೇರೆಯದೇ ವಿರಾಮ ಸಮವಸ್ತ್ರಗಳು ಎಲ್ಲವೂ ಇವೆ. ಮಾತ್ರವಲ್ಲ ಪ್ರತಿಯೊಂದು ರೆಜೆಮೆಂಟಿಗೂ ತನ್ನದೇ ಆದ ಒಂದು ಹಾಡು ಕೂಡಾ ಇದೆ. ಈ ಹಾಡುಗಳಿಗೂ ಒಂದು ಇತಿಹಾಸ ಮತ್ತು ಪ್ರಾಮುಖ್ಯತೆ ಇದ್ದೇ ಇರುತ್ತದೆ. ಮರಾಠಾ ರೆಜಿಮೆಂಟಿನ ಹಾಡು ಸ್ಪೂರ್ತಿ ಗೀತ್ ಶಿವಾಜಿ ಮಹಾರಾಜ ಮತ್ತವನ ಸೈನಿಕರ ನೆನಪು ತರಿಸಿದರೆ, ಸೈನ್ಯದ ಅತ್ಯಂತ ಪುರಾನ ರೆಜಿಮೆಂಟಾದ ಪಂಜಾಬಿ ರೆಜಿಮೆಂಟಿನ ಹಾಡು ಅವರ ಧೈರ್ಯ ಸ್ಥೈರ್ಯದ ಗುಣಗಾನ ಮಾಡುತ್ತದೆ. ಈ ಹಾಡುಗಳಲ್ಲಿ ಅಸ್ಸಾಂ ರೆಜಿಮೆಂಟಿನ ಹಾಡು “ಬದ್ಲೂರಾಂ ಕ ಬದನ್” ಕುತೂಹಲಕಾರಿಯಾದದ್ದು. “ಬದ್ಲೂರಾಂನ ಮೃತದೇಹ ಭೂಮಿಯಡಿಯಲ್ಲಿದೆ, ಹಾಗೂ ಅವನ ರೇಶನ್ ನಮಗೆ ಸಿಗ್ತಿದೆ. ಶಭಾಶ್” ಎನ್ನುವರ್ಥದ ಈ ಹಾಡಿನ ಇತಿಹಾಸವೂ ಕುತೂಹಲಕಾರಿಯಾದದ್ದು.

1944ರ ಮೊದಲ ಏಪ್ರಿಲ್’ನಂದು ಬ್ರಿಟಿಷ್-ಭಾರತೀಯಸೇನೆಯ ಅಸ್ಸಾಂ ರೆಜಿಮೆಂಟಿನ 1ನೇ ಬೆಟಾಲಿಯನ್ ಕೊಹಿಮಾದ ಸುತ್ತಮುತ್ತ ಪೋಸ್ಟ್ ಆಗಿತ್ತು. ಲೆಫ್ಟಿನೆಂಟ್ ಜನರಲ್ ರೆನ್ಯಾ ಮುಟಗುಚಿ ನೇತೃತ್ವದ ಇಂಪೀರಿಯಲ್ ಜಪಾನೀಸೈನ್ಯದ ಹದಿನೈದನೇ ತುಕಡಿಯನ್ನು ಎದುರಿಸುವುದು ಈ ಬೆಟಾಲಿಯನ್ನಿನ ಜವಾಬ್ದಾರಿಯಾಗಿತ್ತು. 1944ರ ಈ “ಕೊಹಿಮಾ ಕದನ” ಮತ್ತು “ಇಂಫಾಲ್ ಕದನ”ಗಳು “ಬ್ರಿಟನ್ನಿನ ಶ್ರೇಷ್ಠ ಯುದ್ಧ”ಗಳನ್ನು ಬ್ರಿಟಿಷ್ ನ್ಯಾಷನಲ್ ಆರ್ಮಿ ಮ್ಯೂಸಿಯಂ ಹೇಳುತ್ತದೆ. ಈ ಯುದ್ಧಗಳನ್ನು “ಸ್ಟಾಲಿನ್ಗ್ರಾಡ್ ಆಫ್ ದಿ ಈಸ್ಟ್” ಎಂದೂ ಕರೆಯತ್ತಾರೆಂದರೆ ಆ ಕದನಗಳ ಭೀಕರತೆಯನ್ನು ನೀವು ಊಹಿಸಿಕೊಳ್ಳಬಹುದು. ಈ ರೆಜಿಮೆಂಟಿನಲ್ಲಿ ಬದ್ಲೂರಾಮ್ ಎಂಬ ರೈಫಲ್‌ಮ್ಯಾನ್ ಇದ್ದ. ಯುದ್ಧದ ಎರಡನೇ ದಿನವೇ ಬದ್ಲೂರಾಮ್ ಗಾಯಗೊಂಡು ಕೊನೆಯುಸಿರೆಳೆದ. ಸೈನ್ಯದ ನಿಯಮಗಳ ಪ್ರಕಾರ ತುಕಡಿಯಲ್ಲಿ ಎಷ್ಟು ಸೈನಿಕರಿದ್ದಾರೋ ಅದರ ಪ್ರಕಾರ ಊಟತಿಂಡಿಯ ರೇಷನ್ ಮುಖ್ಯಾಲಯದಿಂದ ಬರುತ್ತಿತ್ತು. ಬದ್ಲುರಾಮ್‌ನ ಮರಣದ ನಂತರ, ಕ್ವಾರ್ಟರ್ ಮಾಸ್ಟರ್ (ತುಕಡಿಯ ಸರಬರಾಜು ಮುಖ್ಯಸ್ಥ) ಅವನ ಹೆಸರನ್ನು ಪಡಿತರ ಪಟ್ಟಿಯಿಂದ ತೆಗೆದುಹಾಕುವುದನ್ನು ಮರೆತರೋ, ಆ ಗುಡ್ಡಗಾಡು ಪ್ರದೇಶದಲ್ಲಿ ವೈರ್‌ಲೆಸ್ ಬಹಳಷ್ಟು ಸಮಸ್ಯೆಗಳನ್ನು ನೀಡುತ್ತಿದ್ದರಿಂದ ಮುಖ್ಯಾಲಯಕ್ಕೆ ಸುದ್ಧಿ ತಲುಪಲಿಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ಆತನ ಸಾವನ್ನು ವರದಿಮಾಡಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ತುಕಡಿ ಬದ್ಲೂರಾಮನ ಹೆಸರಿನಲ್ಲಿ ಪಡಿತರವನ್ನು ಸೆಳೆಯುತ್ತಲೇ ಇತ್ತು. ಹತ್ತು ಹದಿನೈದು ದಿನಗಳಲ್ಲಿ, ಜಪಾನಿನ ಪಡೆಗಳು ಕೊಹಿಮಾವನ್ನು ಸಂಪೂರ್ಣ ವಶಕ್ಕೆ ಪಡೆದು ಸರಬರಾಜು ಮಾರ್ಗಗಳನ್ನು ಕತ್ತರಿಸಿದವು. ಗುಡ್ಡವೊಂದರ ಮೇಲಿದ್ದ ನಮ್ಮ ಕಥಾನಾಯಕರುಗಳಿಗೆ ಪಡಿತರವನ್ನು ವಾಯುಸೇನೆ ಪೂರೈಸಿದ್ದರೂ, ಜಪಾನಿಯರ ಆಂಟಿ-ಏರ್ಕ್ರಾಫ್ಟ್ ಬಂದೂಕುಗಳು ಅದಕ್ಕೂ ಸಂಚಕಾರ ತಂದೊಡ್ಡಿದ್ದವು.

ಈ ತುಕಡಿಗೆ, ಯುದ್ಧದ ಪ್ರಾರಂಭದ ದಿನಗಳಲ್ಲಿ ಹೆಚ್ಚುವರಿ ಸರಬರಾಜುಗಳು ಬರುತ್ತಿದ್ದರಿಂದ, ಕೆಲವು ಸೈನಿಕರು ತೀರಿಕೊಂಡದ್ದರಿಂದಾಗಿ, ಉಳಿದ ಅವರ ಪಾಲಿನ ಪಡಿತರವನ್ನು ಬಳಸಿಕೊಂಡು ತುಕಡಿ ಬದುಕುಳಿಯಿತು. ಮರಣಹೊಂದಿದವರ ಗೌರವಾರ್ಥವಾಗಿ ಈ ಹಾಡನ್ನು “ಬದ್ಲುರಾಮ್ ಕಾ ಬದನ್ ಜಮೀನ್ ಕೇ ನೀಚೆ ಹೈ, ತೋ ಹಮೇ ಉಸ್ಕಾ ರಾಷನ್ ಮಿಲ್ತಾ ಹೈ” ಸಾಹಿತ್ಯದೊಂದಿಗೆ ಸಂಯೋಜಿಸಲಾಗಿದೆ. 1946ರಲ್ಲಿ ಮೇಜರ್ ಎಮ್. ಟಿ. ಪ್ರೊಕ್ಟರ್ ಅವರು ರಚಿಸಿದ ಈ ಹಾಡನ್ನು “ಜಾನ್ ಬ್ರೌನ್’ಸ್ ಬಾಡಿ – ಬ್ಯಾಟಲ್ ಹೈಮ್ ಆಫ್ ದಿ ರಿಪಬ್ಲಿಕ್” ಎಂಬ ಹಾಡಿನ ಸಂಗೀತಕ್ಕೆ ಹೊಂದಿಸಿ, ಅಸ್ಸಾಂ ರೆಜಿಮೆಂಟ್‌ನ ಅಧಿಕೃತ ರೆಜಿಮೆಂಟಲ್ ಸಾಂಗ್ ಆಗಿಸಲಾಗಿದೆ. ಅಸ್ಸಾಂ ರೆಜಿಮೆಂಟಿಗೆ ಸೇರುವ ಎಲ್ಲಾ ಸೈನಿಕರು ಶಿಲ್ಲಾಂಗ್‌ನಲ್ಲಿ ಅವರ ತರಬೇತಿ ಮುಗಿಸಿದ ನಂತರ ಮೆರವಣಿಗೆಯಲ್ಲಿ ಹಾಗೂ ಇತರ ಸಂದರ್ಭಗಳಲ್ಲಿ ಈ ಹಾಡನ್ನು ಕಡ್ಡಾಯವಾಗಿ ಹಾಡುತ್ತಾರೆ. ಕೆಳಗಿರುವ ವಿಡಿಯೋದಲ್ಲಿ ಅಸ್ಸಾಂ ರೆಜಿಮೆಂಟಿನ ಹೊಸಾ ಸೈನಿಕರು ಈ ಹಾಡನ್ನು ಹಾಡುತ್ತಿರುವುದನ್ನು ನೋಡಬಹುದು.

ಭಾರತ ಮತ್ತು ಅಮೇರಿಕನ್ ಸೈನಿಕರು ಕಳೆದ ವರ್ಷದ ತರಬೇತಿ ಕಾರ್ಯಕ್ರಮದಲ್ಲಿ ಈ ಹಾಡನ್ನು ಹಾಡುತ್ತಿರುವ ವಿಡಿಯೋ.

“ಢಲ್ ಗಯಾ ದಿನ್, ಹೋ ಗಯೀ ಶಾಮ್….” ಹಾಡಿಗೆ ಮಾರ್ಚ್ ಮಾಡುತ್ತಿರುವ ಇಂಡಿಯನ್ ರಿಸರ್ವ್ ಬೆಟಾಲಿಯನ್.

ಮೊನ್ನೆ 1917 ಎಂಬ ಚಿತ್ರವನ್ನು ಮತ್ತೊಮ್ಮೆ ನೋಡಿದಾಗ, ಅದರ ಕೊನೆಯ ಅಂಕ ಪ್ರಾರಂಭವಾಗುವ ಮುನ್ನ I am a poor wayfaring stranger ಎಂಬ ಒಂದು ಹಾಡು ಬರುತ್ತದೆ. ಅದನ್ನು ಕೇಳಿ ಅರ್ಥೈಸಿಕೊಂಡರೆ ಸೈನಿಕನ ಜೀವನದ ಅರ್ಥತಿಳಿದು ಮೈಜುಮ್ಮೆನ್ನುವುದು, ಜೊತೆಗೇ ಆ ಸೀನಿನಲ್ಲಿ ಸೈನಿಕರ ಮುಖಭಾವಗಳು ಹಾಗೂ ಆ ಚಿತ್ರಣದ ಶೈಲಿ ನಿಮ್ಮ ಗಂಟಲುಬ್ಬಿಸುವುದೂ ಖಂಡಿತಾ. ಅದನ್ನು ನೋಡಿದಾಗ ನಮ್ಮ ಸೈನಿಕರ ಜೊತೆಗೆ ಈ ಬದ್ಲೂರಾಮನೂ ನೆನಪಾದ.

0 comments on “ಅಸ್ಸಾಂ ರೆಜೆಮೆಂಟ್ ಹಾಡಿ ಹೊಗಳುವ ‘ಬದ್ಲೂರಾಂ ಕಾ ಬದನ್’

Leave a Reply

Your email address will not be published. Required fields are marked *