Thursday, 18 April, 2024

“ಜೀವನ ಇಷ್ಟೆಲ್ಲಾ ನೀರಸವಾದರೆ ಹೇಗೆ ಸ್ವಾಮಿ!?” ಎಂದ ಪೀಟರ್ ಫ್ರಾಯ್ಕೆನ್

Share post

ಈ ಜಗತ್ತಿನಲ್ಲಿ ಸ್ಪೂರ್ತಿದಾಯಕ ಮತ್ತು ಮಹತ್ವಾಕಾಂಕ್ಷಿ ವ್ಯಕ್ತಿತ್ವಗಳಿಗೇನೂ ಕಡಿಮೆಯಿಲ್ಲ. ರಾಜರ ರಾಜನೆನಿಸಿಕೊಂಡ ಈಜಿಪ್ಟಿನ ಅಮೆನ್ಹೋಟೆಪ್, ಇಡೀ ಜಗತ್ತನ್ನೇ ಜಯಿಸ ಹೊರಟ ಅಲೆಕ್ಸಾಂಡರ್-ತೈಮೂರ್-ಚೆಂಗೀಸ್’ಖಾನರು, ಪ್ರಜೆಗಳ ಪ್ರಭುತ್ವಕ್ಕೊಂದು ಭಾಷ್ಯ ಬರೆದ ಪ್ಲೇಟೋ-ಅರಿಸ್ಟಾಟಲ್-ಸಾಕ್ರಟೀಸರು, ಮನುಕುಲವನ್ನು ವಿಜ್ಞಾನದ ಹೆಗಲಮೇಲೆ ಕೂರಿಸಿದ ಆರ್ಕಿಮಿಡೀಸ್-ಭಾಸ್ಕರಾಚಾರ್ಯ-ವರಾಹಮಿಹಿರ-ಯೂಕ್ಲಿಡರು, ತತ್ವಜ್ಞಾನವೆಂಬ ಜಗತ್ತಿನ ಹೆಬ್ಬಾಗಿಲನ್ನು ತೆರೆದಿಟ್ಟ ಹೆರಾಕ್ಲೀಟಸ್-ಪಾಣಿನಿ-ಹೆರೋಡೋಟಸ್-ಪಾರ್ಶ್ವನಾಥ-ಆದಿಶಂಕರರು, ಅಸಾಮಾನ್ಯ ರೀತಿಯಲ್ಲಿ ಭಾರತದ ಭೂಪಟವನ್ನು ವಿಸ್ತರಿಸಿದ ಚಂದ್ರಗುಪ್ತ ಮೌರ್ಯ, ಯುದ್ಧದಲ್ಲೇ ಜೀವನ ಕಳೆದು ಕೊನೆಗೆ ಯುದ್ಧರಂಗದಲ್ಲೇ ಜ್ಞಾನೋದಯ ಹೊಂದಿದ ಬಾಹುಬಲಿ-ಅಶೋಕರು, ಜಗತ್ತಿನ ಧಾರ್ಮಿಕ ಭೂಪಟ ಬದಲಿಸಿದ ಚಕ್ರವರ್ತಿ ಕಾಂನ್ಸ್ಟಂಟೈನ್, ಎಲ್ಲರನ್ನೂ ಒಗ್ಗೂಡಿಸುವ ಇರಾದೆಯಿದ್ದ ಲಿಂಕನ್-ವಾಷಿಂಗ್ಟನ್ನರು, ಎಲ್ಲರನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು ಪ್ರಪಂಚವನ್ನಾಳಬಯಸಿದ ಹಿಟ್ಲರ್-ಸ್ಟಾಲಿನ್ನರು, ಇಂತವರನ್ನು ಎದುರುಹಾಕಿಕೊಂಡು ನಿಂತ ಚರ್ಚಿಲ್-ರೂಸವೆಲ್ಟ್-ಟ್ರೂಮನ್ನರು, ಮನುಷ್ಯರು ಭೂಮಿಯನ್ನೇ ಬಿಟ್ಟು ಬೇರೊಂದು ಗ್ರಹದಲ್ಲಿ ನೆಲೆಸಬೇಕೆಂದು ಪಣತೊಟ್ಟಿರುವ ಎಲೋನ್ ಮಸ್ಕ್ ಹೀಗೆ ಉದ್ದದ ಪಟ್ಟಿಯೇ ಇದೆ.

ಇಂತಹವರಲ್ಲದೇ, ಬೇರೆ ಬೇರೆ ರೀತಿಯಲ್ಲಿ ಕುತೂಹಲಕಾರಿಯೆನಿಸುವ ಮನುಷ್ಯರಿಗೂ ಈ ಜಗತ್ತಿನಲ್ಲಿ ಕಮ್ಮಿಯೇನಿಲ್ಲ. ಗಾಜನ್ನೇ ಆಹಾರವಾಗಿ ತಿನ್ನುವವರು, ಒಂದೇ ಕೈಯಲ್ಲಿ ಲಾರಿಯನ್ನೆಳಿಳೆಯುವವರು, ಧ್ರುವಗಳನ್ನು ಕಾಲ್ನಡಿಗೆಯಲ್ಲೇ ಸುತ್ತಿಬಂದವರು, ಸಾವಿರಾರು ಪುಸ್ತಕಗಳನ್ನು ಓದಿದವರು, ನೂರಾರು ಪುಸ್ತಕಗಳನ್ನು ಬರೆದವರು, ಹುಲಿ ಕರಡಿಗಳನ್ನು ಕೈಯಾರೆ ಕೊಂದವರು, ಬದುಕಲಾಗದ ಪರಿಸ್ಥಿತಿಗಳನ್ನೆದುರಿಸಿಯೂ ಬದುಕಿಬಂದವರಿಂದ ತುಂಬಿದ ಈ ಜಗತ್ತು ಕೌತುಕಗಳ ಆಗರ. ಈ ರೀತಿಯ ಒಂದೊಂದು ಕೆಲಸಗಳನ್ನು ಒಬ್ಬೊಬ್ಬರು ಮಾಡಿ ಬದುಕುವುದೇ ಮೂಗಿನ ಮೇಲೆ ಬೆರಳಿಡುವಷ್ಟು ಅಚ್ಚರಿಯೆನ್ನಿಸುವಾಗ, ಇಂತಹುದ್ದನ್ನೆಲ್ಲಾ ಒಬ್ಬನೇ ಮನುಷ್ಯ ಮಾಡಿಬಂದರೆ ನಿಮ್ಮ ಬೆರಳು ಮೂಗಿಗಿಂತಲೂ ಮೇಲೆ ಹೋಗಬಹುದಲ್ಲವೇ? ಹೌದು, ಒಬ್ಬನೇ ಮನುಷ್ಯ ಇಂತಹ ಒಂದಲ್ಲ ಎರಡಲ್ಲ ಹತ್ತು ಹಲವು ಅತಿಮಾನುಷವಾದ ಸಾಧನೆಗಳನ್ನು ಮಾಡಿದ್ದಾನೆಂದರೆ ನಂಬುತ್ತೀರಾ? ಅವನೊಬ್ಬನಿದ್ದಾನೆ….ಅಲ್ಲಲ್ಲ ಅವನೊಬ್ಬನಿದ್ದ. ಹಾಗೂ ಅಂತಹ ಮನುಷ್ಯರ ಪಟ್ಟಿಯಲ್ಲಿ ಬಹುಷಃ ಇವತ್ತಿಗೂ ಅವನೊಬ್ಬನ ಹೆಸರೇ ಇರುವುದು. ಅವನೇ ಪೀಟರ್ ಫ್ರಾಯ್ಕನ್ (Peter Freuchen).

ಪೀಟರನ ಸಾಧನೆಗಳ ಕೆಲವು ಸ್ಯಾಂಪಲ್ಲುಗಳನ್ನು ನೋಡಿ. ಇವ ನಮ್ಮನಿಮ್ಮಂತೆ ಐದೂವರೆ, ಆರಡಿಯೆತ್ತರದ ಸಾಧಾರಣ ಮನುಷ್ಯನಲ್ಲ. ಆರು ಅಡಿ ಏಳಿಂಚು ಎತ್ತರದ ದೈತ್ಯದೇಹಿ. ಉತ್ತರಧ್ರುವಕ್ಕೆ ಹೋಗಿ ಜೀವಂತ ಮರಳಿಬಂದವರೇ ಒಬ್ಬಿಬ್ಬರಿದ್ದ ಕಾಲದಲ್ಲಿ ಪೀಟರ್ ಒಂದೆರಡಲ್ಲ ಹತ್ತಾರುಬಾರಿ ಪ್ರವಾಸ ಹೋಗಿ ಬಂದ. ಕೈಯಾರೆ ಹಿಮಕರಡಿಯೊಂದನ್ನು ಕೊಂದು ಅದರ ಚರ್ಮವನ್ನೇ ಅಂಗಿಯಾಗಿಸಿಕೊಂಡ. ಹಿಮಪಾತದಡಿ ಸತ್ತೇಹೋದ ಎಂದಂದುಕೊಂಡವರೆಲ್ಲಾ ಬೆಚ್ಚುವಂತೆೆ ಮೂರುದಿನದ ನಂತರದ ಎದ್ದುಬಂದ. ಹಿಮಕೊರೆತಕ್ಕೆ ಸಿಕ್ಕು ಕೊಳೆಯಲಾರಂಭಿಸಿದ್ದ ಕಾಲ್ಬೆರಳುಗಳನ್ನು ತಾನೇ ಕಚಕ್ಕೆನ್ನಿಸಿ, ಹೊಲಿಗೆ ಹಾಕಿಕೊಂಡ. ಹತ್ತಾರುಬಾರಿ ಮರುಮುದ್ರಣಕಂಡ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ. ನಾಜಿಗಳನ್ನು ಎದುರುಹಾಕಿಕೊಂಡು, ಮರಣದಂಡನೆಗೆ ಗುರಿಯಾಗಿ, ಅದರಿಂದಲೂ ತಪ್ಪಿಸಿಕೊಂಡ. ಪತ್ರಿಕೆಯೊಂದರ ಸಂಪಾದಕನಾದ. ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಕ್ಕೆ ಕಥೆ ಬರೆದು, ನಟನಾಗಿಯೂ ಪಾತ್ರವಹಿಸಿದ. ಮೂರುಬಾರಿ ಮದುವೆಯಾದ. ಕ್ವಿಜ್ ಶೋ ಒಂದರಲ್ಲಿ ಕಟ್ಟಕೊನೆಯ ಪ್ರಶ್ನೆಗೂ ಉತ್ತರಹೇಳಿ ಲಕ್ಷಾಂತರ ಹಣಗೆದ್ದ…..ಸಾಕಾ ಇನ್ನೂ ಬೇಕಾ? ಸ್ವಲ್ಪ ಉಸಿರೆಳೆದುಕೊಳ್ಳಿ. ಇದನ್ನೇ ಸ್ವಲ್ಪ ವಿವರವಾಗಿ ಕೇಳೋಣವಂತೆ.

1886ರಲ್ಲಿ ಡೆನ್ಮಾರ್ಕಿನಲ್ಲಿ ಜನಿಸಿದ ಪೀಟರ್ ಫ್ರಾಯ್ಕನ್ ಅಷ್ಟೇನೂ ಸ್ಥಿತಿವಂತ ಕುಟುಂಬಕ್ಕೆ ಸೇರಿದವನಲ್ಲ. ಸಣ್ಣದೊಂದು ಅಂಗಡಿ ನಡೆಸುತ್ತಿದ್ದ ಅವನ ಅಪ್ಪ ಎಲ್ಲಾ ಮಧ್ಯಮವರ್ಗದ ಅಪ್ಪಂದಿರಂತೆಯೇ ಮಗನಿಗೆ ಒಳ್ಳೆಯದೊಂದು ಕೆಲಸ ಸಿಕ್ಕಿ, ಸಂಸಾರಕ್ಕೆ ದಾರಿಯಾದರೆ ಸಾಕು ಎಂದು ದೇವರಿಗೆ ಬೇಡುತ್ತಿದ್ದವ. ಹೇಗೋ ಸ್ಕೂಲುಮುಗಿಸಿದ ಪೀಟರ್, ಅಪ್ಪನ ಆಸೆಯಂತೆ ವೈದ್ಯಕೀಯಕೋರ್ಸಿಗೆ ಊರಿನಿಂದ ದೂರದಲ್ಲಿದ್ದ ಕೋಪನ್-ಹೇಗನ್ ವಿಶ್ವವಿದ್ಯಾನಿಲಯದಲ್ಲಿ ಸೇರಿದ. ಮನೆಯಿಂದ ಹೊರಬಂದವನಿಗೆ ಸ್ವಾತಂತ್ರ್ಯದ ಅರಿವಾಗಿದ್ದು ಮಾತ್ರವಲ್ಲ, ಈ ರೀತಿ ಓದಿ ಕೆಲಸಕ್ಕೆ ಸೇರಿ ಮದುವೆಯಾಗಿ ಸೆಟಲ್ ಆಗುವವ ನಾನಲ್ಲ ಎಂದೂ ಅರಿವಾಯ್ತು. 1906ರಲ್ಲಿ ಡಾಕ್ಟರಿಕೆಗೆ ತಿಲಾಂಜಲಿ ಬಿಟ್ಟು, ಉತ್ತರಧ್ರುವವನ್ನು ಹುಡುಕಿಕೊಂಡು ಗ್ರೀನ್-ಲ್ಯಾಂಡಿನೆಡೆಗೆ ಹೊರಟಿದ್ದ ಗುಂಪೊಂದನ್ನು ಸೇರಿಕೊಂಡ. ಆ ಗುಂಪು ತಮ್ಮ ಪ್ರಯಾಣವನ್ನು ಅರ್ಧದಲ್ಲೇ ಕೈಬಿಟ್ಟರೂ, ಪೀಟರ್ ಮತ್ತವನ ಜೊತೆಗಾರ ಕ್ನುದ್ ರಾಸ್ಮುಸ್ಸೆನ್ ಆ ಹಡಗನ್ನೇ ಬಾಡಿಗೆಗೆ ಪಡೆದು ಮುಂದುವರೆದರು. ಉತ್ತರ ಆರ್ಕ್ಟಿಕ್ ಸಮುದ್ರದ ಹೆಪ್ಪುಗಟ್ಟಿದ್ದ ನೀರನ್ನು ಗೆಲ್ಲಲಾಗದೇ, ಆ ಹಡಗು ನೂರಾರು ಕಿಲೋಮೀಟರ್ ದೂರದವರೆಗೂ ಹಿಮವೇ ಕಾಣುತ್ತಿದ್ದ ದಿಗಂತೆದೆಡೆಗೆ ಮುಖಮಾಡಿ ಸಮುದ್ರದ ಮಧ್ಯದಲ್ಲೇ ನಿಂತುಹೋಯ್ತು. ಹಡಗನ್ನು ಅಲ್ಲೇ ಬಿಟ್ಟು, ನಾಯಿಗಳಿಂದ ಎಳೆಯಲ್ಪಡುವ ಸ್ಲೆಡ್ಜ್ ಮೇಲೆ ಕೂತು ಹೊರಟ ಇಬ್ಬರೂ ಮಹಾಶಯರೂ ಮುಂದಿನ 600 ಮೈಲಿ, ಅಂದರೆ ಸುಮಾರು ಒಂದುಸಾವಿರ ಕಿಲೋಮೀಟರ್ ದೂರವನ್ನು ನಾಯಿಬಂಡಿಯಲ್ಲೇ ಸವೆಸಿದರು! ಹೀಗೆ ಹಿಂದುಮುಂದಿಲ್ಲದ ಈ ಪ್ರಯಾಣದಲ್ಲಿ ಈ ರಾಮಸ್ವಾಮಿ-ಕೃಷ್ಣಸ್ವಾಮಿಗಳು ದಾರಿಯಲ್ಲಿ ಸಿಕ್ಕ ಗ್ರೀನ್-ಲ್ಯಾಂಡಿನ ಸ್ಥಳೀಯ ಬುಡಕಟ್ಟು ಜನಾಂಗವಾದ ಇನುಯಿಟ್’ರೊಂದಿಗೆ ಸಂಪರ್ಕಬೆಳೆಸಿಕೊಂಡು ಅವರ ಭಾಷೆ ಕಲಿತು, ಅವರೊಂದಿಗೆ ಎಷ್ಟೋತಿಂಗಳುಗಟ್ಟಲೇ ಹಿಮಕರಡಿ, ಮೀನು, ತಿಮಿಂಗಿಲ, ವಾಲ್ರಸ್’ಗಳನ್ನು ಬೇಟೆಯಾಡುತ್ತಾ ವಾಸಮಾಡಿದ್ದುಬಂದರು. ಉತ್ತರಧ್ರುವವನ್ನು ತಲುಪಲಾಗಲಿಲ್ಲ ಎಂಬ ಬೇಸರವೇನೂ ಅವರಿಗಿರಲಿಲ್ಲ ಯಾಕೆಂದರೆ ಅದು ಅವರ ಗುರಿಯೇ ಆಗಿರಲಿಲ್ಲ. ಅವರಿಗಿದ್ದದ್ದು ಜಗತ್ತುತಿರುಗಬೇಕು ಎಂಬ ಹುಚ್ಚಷ್ಟೇ. ಆದರೆ ಒಂದು ಪ್ರಯಾಣದಲ್ಲಿ ಈ ಹುಚ್ಚು ವಾಸಿಯಾಗುವ ಲಕ್ಷಣವೇ ಇರದೇ, ಇವರಿಬ್ಬರೂ ಸೇರಿ ಗ್ರೀನ್-ಲ್ಯಾಂಡಿನ ಕೇಪ್-ಯಾರ್ಕ್’ನಲ್ಲಿ 1910ರಲ್ಲಿ ‘ಥೂಲೆ ಎಕ್ಸ್ಪೆಡಿಷನ್ಸ್’ ಎಂಬುದೊಂದು ಕಂಪನಿಪ್ರಾರಂಭಿಸಿ, ಉತ್ತರಧ್ರುವ ಹಾಗೂ ಇನುಯಿಟ್’ರನ್ನು ಅಧ್ಯಯಿಸಬಯಸುವರೊಂದಿಗೆ ವ್ಯವಹಾರ ಆರಂಭಿಸಿದರು. ನಮ್ಮ ಪೀಟರ್ ಇಲ್ಲಿಂದಲೇ ಮುಂದಿನ ಹದಿನಾಲ್ಕುವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಗ್ರೀನ್-ಲ್ಯಾಂಡ್, ಆರ್ಕ್ಟಿಕ್ ಸಮುದ್ರ ಹಾಗೂ ಉತ್ತರಧ್ರುವಪ್ರದೇಶವನ್ನು ಇಂಚಿಂಚೂ ಜಾಲಾಡಿದ. ಈ ಮುಂಚೆ ಯಾರೂ ತಲುಪದ, ಸ್ಥಳೀಯ ಇನುಯಿಟ್ಟರಿಗೇ ಗೊತ್ತಿಲ್ಲದ ಜಾಗಗಳಿಗೆಲ್ಲಾ ತಲುಪಿದ. ಉತ್ತರಧ್ರುವದ ನಕ್ಷೆಯನ್ನು ಮನುಕುಲಕ್ಕೆ ಬರೆದುಕೊಟ್ಟ.

ಪೀಟರ್ ಮತ್ತವನ ಧ್ರುವ ಸಾಹಸಗಳ ಜೊತೆಗಾರ ಕ್ನುದ್ ರಾಸ್ಮುಸ್ಸೆನ್

ಇವನಿಗೆ ತಿರುಗುವ ಹುಚ್ಚು ಎಷ್ಟಿತ್ತೆಂದರೆ ಕುಡಿತಕ್ಕೆ ಕೂತಾಗ ಸ್ನೇಹಿತನೊಬ್ಬ ‘ಗ್ರೀನ್-ಲ್ಯಾಂಡಿನ ಉತ್ತರಕ್ಕಿರುವ ಪಿಯರಿ-ಲ್ಯಾಂಡ್ ಪರ್ಯಾಯದ್ವೀಪವಲ್ಲ, ಅದೊಂದು ದ್ವೀಪ. ಯಾಕೆಂದರೆ ನಡುವೆ ಒಂದು ನದಿಯಿದೆ’ ಅಂತಾ ಹೇಳಿದ್ದನ್ನ ತಪ್ಪೆಂದು ನಿರೂಪಿಸಲಿಕ್ಕೆಂದೇ ಪೀಟರ್ ಸಾವಿರ ಕಿಲೋಮೀಟರ್ ಕಾಲ್ನಡಿಗೆಯ ಪ್ರಯಾಣಮಾಡಿಬಂದ. ಈ ಪ್ರಯಾಣದ ನಡುವಿನಲ್ಲಿ, ಇವನಿದ್ದ ಟೆಂಟ್ ಹಿಮಪಾತದ ಅಡಿಗೆ ಸಿಕ್ಕಿ, ಆ ಹಿಮ ಘನೀಭವಿಸಿ ಪೀಟರ್ ಭೂಬಂಧಿಯಾಗಿ ಮೂರುದಿನ ಕಳೆದ. ಸಲಕರಣೆಗಳೆಲ್ಲಾ ನಾಪತ್ತೆ, ಆಹಾರವೆಲ್ಲಾ ಖಾಲಿ, ಉಸಿರೂ ಕೂಡ ಹನಿಯಾಗುವಷ್ಟು ಚಳಿ. ಆತ ಹೊರಹೋಗುವುದಾದರೂ ಹೇಗೆ? ಪೀಟರ್ ಅಲ್ಲೇ ಕಕ್ಕಸುಮಾಡಿ. ಅದು ಘನೀಭವಿಸಿ ಮರದಷ್ಟು ಗಟ್ಟಿಯಾದ ಮೇಲೆ, ಅದನ್ನೇ ಚಾಕುವಿನಂತೆ ಬಳಸಿ ಟೆಂಟನ್ನು ಕತ್ತರಿಸಿ, ಹಿಮವನ್ನು ಅಗೆದು ಹೊರಬಂದ!! ಹೊರಬಂದವನಿಗೆ ಕಾಲುಗಳೆರಡೂ ಮರಗಟ್ಟಿಹೋಗಿವೆ ಎಂದು ತಿಳಿಯಿತು. ಮೂರೂವರೆ ಕಿಲೋಮೀಟರ್ ದೂರವಿದ್ದ ಬೇಸ್-ಕ್ಯಾಂಪಿನವರೆಗೂ ತೆವಳಿಯೇ ತಲುಪಿ ಸ್ವಲ್ಪ ಬೆಚ್ಚಗಾದವನಿಗೆ, ಎರಡೂ ಕಾಲಿನ ಕೆಲ ಬೆರಳುಗಳು ಹೈಪೋಥರ್ಮಿಯಾ ಅಂದರೆ ಅತೀವ ಶೀತದಿಂದಾಗಿ ಕೊಳೆತುಹೋಗಿವೆ ಎಂಬುದು ತಿಳಿದುಬಂತು. ಡಾಕ್ಟರು ಕ್ಯಾಂಪಿಗೆ ಬರಲು ಇನ್ನೂ ಎರಡು ದಿನ ಬೇಕು. ಅಷ್ಟರಲ್ಲಿ ಇಡೀ ಕಾಲೇ ಕೊಳೆಯಬಹುದು! ಹೆಚ್ಚೇನೂ ಯೋಚಿಸದೆ ಸುತ್ತಿಗೆ-ಉಳಿ ಹಿಡಿದ ಪೀಟರ್ ಒಟ್ಟು ಆರು ಕಾಲ್ಬೆರಳುಗಳನ್ನು ಪುಡಿಯೆಬ್ಬಿಸಿದ. ತಾನೇ ಹೊಲಿಗೆಯನ್ನೂ ಹಾಕಿಕೊಂಡು ಪ್ರಯಾಣ ಮುಂದುವರೆಸಿ, ಪಿಯರಿ-ಲ್ಯಾಂಡ್ ಗ್ರೀನ್-ಲ್ಯಾಂಡಿಗೇ ಸೇರಿದ ಭಾಗ ಎಂದು ನಿರೂಪಿಸಿದ!! ಈ ಉಂಗುಷ್ಟಕುಸುರಿಕೆಲಸದಲ್ಲಿ ಆತ ಮಾಡಿದ್ದ ಕೆತ್ತನೆಗಳು ಸ್ವಲ್ಪ ಸರಿಯಾಗದೇ ಕೆಲದಿನಗಳ ನಂತರ ಡಾಕ್ಟರುಗಳು ಪೀಟರನ ಎಡಗಾಲನ್ನು ಒಂದೂವರೆಯಡಿಷ್ಟು ಕತ್ತರಿಸಿ ಮರದ ಕಾಲನ್ನು ಜೋಡಿಸಿದರು. ಆಗಿನ್ನೂ ನಮ್ಮ ಜೈಪುರ್ ಕಾಲುಗಳಂತವು ಇರಲಿಲ್ಲವಾದ್ದರಿಂದ, ಅವನಿಗೆ ಕೊಟ್ಟದ್ದು ಮರದಗೂಟದಂತಹ ಕಾಲಷ್ಟೇ. ಇದೇನೂ ಅವನ ಸಾಹಸಗಳುಗೆ ಕಡಿವಾಣ ಹಾಕಲಿಲ್ಲ. ಅದರನಂತರವೂ ಮತ್ತೆ ಆರ್ಕ್ಟಿಕ್ ಅನ್ವೇಷಣೆ ಮುಂದುವರೆಸಿ, ಇನುಯಿಟ್ಟರ ಹೆಂಗಸರಲ್ಲೊಬ್ಬಳನ್ನೇ ಮದುವೆಯೂ ಆಗಿ ಎರಡು ಮಕ್ಕಳ ಅಪ್ಪನೂ ಆಗಿ, ಬರುತ್ತಿದ್ದ ಪ್ರಯಾಣಿಕರಿಗೆ ಧ್ರುವದ ಗೈಡ್ ಆಗಿ ಕೆಲಸಮಾಡುತ್ತಿದ್ದ. ಈ ಬುಡಕಟ್ಟಿನ ಸಂಸಾರ ಸ್ಪಾನಿಷ್ ಫ್ಲೂ’ಗೆ ಬಲಿಯಾದ ನಂತರ ಪೀಟರ್ ಡೆನ್ಮಾರ್ಕಿಗೆ ಮರಳಿದ.

ಪೀಟರ್, ತನ್ನ ಮೊದಲ ಹೆಂಡತಿ ನವರಾನಾ ಮಕುಪಾಲುಕ್ ಮತ್ತು ಕುಟುಂಬದೊಂದಿಗೆ

1924ರಲ್ಲಿ ಮ್ಯಾಗ್ಡಲೀನ್ ಎಂಬ ಡಚ್ ಶ್ರೀಮಂತೆಯೊಬ್ಬಳನ್ನು ಮದುವೆಯಾಗಿ, ಅವಳ ಅಪ್ಪ ನಡೆಸುತ್ತಿದ್ದ ‘Ude of Hjemme’ ಪತ್ರಿಕೆಗೆ ಸಂಪಾದಕನಾದ. ಈ ಪತ್ರಿಕೆ ಇಂದಿಗೂ ನಡೆಯುತ್ತಿರುವ ಡೆನ್ಮಾರ್ಕಿನ ಅತ್ಯಂತ ಹಳೆಯ ಪತ್ರಿಕೆ. ಜೊತೆಗೇ ಪೂರ್ಣಪ್ರಮಾಣದ ಬರಹಗಾರನಾದ. ಉತ್ತರಧ್ರುವದ ಅನುಭವಗಳನ್ನು ಅಕ್ಷರರೂಪಕ್ಕಿಸಿದ, ಪಂಡಿತರ ಸಂಶೋಧನಾಬರಹಗಳಿಗೆ ಜೊತೆಯಾದ. ಐದು ಪುಸ್ತಕಗಳನ್ನೂ ಪ್ರಕಟಿಸಿ, ಹದಿನೇಳು ಪಿಎಚ್ಡಿ ಪ್ರಬಂಧಗಳ ಸಹ-ಬರಹಗಾರನೂ ಆದ. ಇವನು ಬರೆದ ಪುಸ್ತಕವೊಂದರ ಮೇಲೆ ಆಧಾರಿತ ‘ಎಕ್ಸಿಮೋ-ಮಲಾ ದ ಮಾಗ್ನಿಫಿಸಿಯೆಂಟ್’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಯೂ ದೊರಕಿತು! ಆ ಚಿತ್ರದ ಕಥೆ-ಚಿತ್ರಕಥೆ ಇವನದ್ದೇ, ಜೊತೆಗೆ ಚಿತ್ರದ ಖಳನಾಯಕನೂ ಇವನೇ!

ಇರಿ ಇರಿ ಇನ್ನೂ ಮುಗಿದಿಲ್ಲ…..ಎರಡನೇ ಮಹಾಯುದ್ಧದ ಕಾಲದಲ್ಲಿ ಡೆನ್ಮಾರ್ಕಿಗೆ ಬಂದಿಳಿದ ನಾಜಿ ಸೇನೆ ಯಹೂದಿ ಎಂಬ ಒಂದೇ ಕಾರಣಕ್ಕೆ ಪೀಟರನನ್ನು ಬಂಧಿಸಿತು. ಮೊದಲು ಕೇವಲ ಜೈಲುಪಾಲಾಗಿದ್ದವನಿಗೆ, ಕೆಲ ಹಳೆಯ ಅಂಕಣಗಳಲ್ಲಿ ಹಿಟ್ಲರನನ್ನು ಟೀಕಿಸಿದ ವಿಚಾರ ನಾಜಿಗಳಿಗೆ ತಿಳಿದಾಕ್ಷಣ ಮರಣದಂಡನೆಯೂ ಘೋಷಣೆಯಾಯ್ತು. ಆದರೆ ನಮ್ಮ ಹೀರೋನನ್ನು ಬಂಧಿಸಿಡುವ ಜೈಲಿರಲು ಸಾಧ್ಯವೇ!? ಜೈಲಿಗೇ ಕನ್ನಹಾಕಿ ಸ್ವೀಡನ್ನಿಗೆ ಪರಾರಿಯಾದ. ಡಾಗ್ಮಾರ್ ಎಂಬ ರೂಪಸಿಯನ್ನು ಪ್ರೀತಿಸಿ, 1945ರಲ್ಲಿ ನಾಜಿಗಳು ಸ್ವೀಡನ್ನಿಗೆ ಬರುವ ಸುದ್ಧಿ ತಿಳಿದೊಡನೇ ಅವಳೊಂದಿಗೆ ಅಮೇರಿಕಾಕ್ಕೆ ಹಾರಿದ. ಆಕೆಯನ್ನು ಮದುವೆಯೂ ಆದ. ಜಗದ್ವಿಖ್ಯಾತ ಛಾಯಾಚಿತ್ರಗ್ರಾಹಕ ಇರ್ವಿಂಗ್ ಪೆನ್ನ್ ತೆಗೆದ ಚಿತ್ರದಲ್ಲಿ ತಾನೇ ಕೈಯ್ಯಾರೆ ಕೊಂದ ಹಿಮಕರಡಿಯ ಚರ್ಮದ ಕೋಟು ಧರಿಸಿನಿಂತ ಆರಡಿ ಏಳಿಂಚಿನ ದೈತ್ಯ ಹಾಗೂ ಐದೂವರೆಅಡಿಯ ರೂಪಸಿಯ ಅಜಗಜಾಂತರದ ಜೋಡಿಯನ್ನು ನೀವಿಲ್ಲಿ ಕಾಣಬಹುದು.

ಪೀಟರ್ ಮತ್ತವನ ಮೂರನೇ ಹೆಂಡತಿ ಡಾಗ್ಮಾರ್ ಕೊಹೆನ್.

ಮುಂದಿನದಿನಗಳನ್ನು ಅಮೇರಿಕದಲ್ಲೇ ಕಳೆದರೂ ಫ್ರಾಯ್ಕೆನ್ ಒಂದುದಿನವೂ ಸುಮ್ಮನೇ ಕೂತವನಲ್ಲ. ಹಲವಾರು ಅನ್ವೇಷಣೆಗಳಲ್ಲಿ ಪಾಲ್ಗೊಂಡ. ಇನ್ನೂ ಇಪ್ಪತ್ತನಾಲ್ಕು ಪುಸ್ತಕಗಳನ್ನು ಬರೆದ. ‘The 64,000 Dollar show” ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರ ಪೂರ್ತಿ 64,000 ಡಾಲರ್ ಗೆದ್ದ ಐದನೇ ವ್ಯಕ್ತಿಯಾದ!! 1957ರಲ್ಲಿ ಕೊನೆಯುಸಿರೆಳೆಯುವ ಮೂರೇ ದಿನ ಮೊದಲು ತನ್ನ ಕೊನೆಯ ಪುಸ್ತಕ ‘The Book of Seven Seas” ಅನ್ನು ಮುಗಿಸಿದ್ದನೆಂದರೆ ಅವನ ಜೀವನ ಅದೆಷ್ಟು ಚಟುವಟಿಕೆಗಳಿಂದ ಕೂಡಿತ್ತು ಎಂದು ನೀವು ಊಹಿಸಬಹುದು. ಅಮೇರಿಕಾದಲ್ಲಿದ್ದಷ್ಟು ದಿನ ಭಾಗವಹಿಸಿದ ಅನ್ವೇಷಣೆಗಳಲ್ಲಿ, ಪ್ರತಿದಿನವೂ ಡ್ಯಾನಿಷ್ ರಾಯಲ್ ಲೈಬ್ರರಿಗೆ ದಿನಕ್ಕೊಂದರಂತೆ ಪತ್ರ ಬರೆಯುತ್ತಿದ್ದ ಪೀಟರ್, ತನ್ನ ಮರಣದ ಐವತ್ತು ವರ್ಷದ ಬಳಿಕ ಅವನ್ನು ತೆರೆಯುವಂತೆ ಕೇಳಿಕೊಂಡಿದ್ದ. 2007ರಲ್ಲಿ ಈ ಪತ್ರಗಳನ್ನು ಲೈಬ್ರರಿ ಪ್ರಕಟಿಸಿದಾಗ, ಆ ಪತ್ರಗಳ ಮೂಲಕ ತನ್ನ ಸಾಹಸಗಾಥೆಯನ್ನು ನೆನಪಿಸಿ ಮತ್ತೊಮ್ಮೆ ಜಗತ್ತಿನ ಹುಬ್ಬೇರಿಸಿದ ಪೀಟರ್, ಸಾಮಾನ್ಯರಿಗೆ ಅಸಾಧ್ಯವಾದ ಹಲವು ಭೂಮಿಕೆಗಳಲ್ಲಿ ಮಿಂಚಿದ ಏಕೈಕ ವ್ಯಕ್ತಿ.

ಪೀಟರ್ ಮತ್ತವನ ಮೂರನೇ ಹೆಂಡತಿ. ಪೀಟರನ ಮರದ ಕಾಲನ್ನು ನೀವಿಲ್ಲಿ ಗಮನಿಸಬಹುದು

ಇಂದು ರಜನೀಕಾಂತನ ಬಗ್ಗೆ ಅತಿಮಾನುಷ ಜೋಕುಗಳನ್ನು ಕೇಳುತ್ತಾ ನಗುವ ನಮಗೆ, ಎಲ್ಲಾ ಸವಲತ್ತು, ತಂತ್ರಜ್ಞಾನಗಳು ಲಭ್ಯವಿದ್ದರೂ ಏನನ್ನಾದರೂ ಮಾಡಲಿಕ್ಕೆ ಸೋಂಬೇರಿತನ ತೋರುವ ನಮಗೆ ಪೀಟರನಂತಹಾ ವ್ಯಕ್ತಿಯೊಬ್ಬ ಇದ್ದ ಎನ್ನುವುದೂ ಊಹಿಸಲಾಗದ ಸಂಗತಿಯೇನೋ ಅಲ್ಲವೇ!

ಅವನ ಜೀವನವನ್ನು ವಿವರಿಸುವ ಎರಡು ವಿಡಿಯೋಗಳು ಇಲ್ಲಿವೆ.

0 comments on ““ಜೀವನ ಇಷ್ಟೆಲ್ಲಾ ನೀರಸವಾದರೆ ಹೇಗೆ ಸ್ವಾಮಿ!?” ಎಂದ ಪೀಟರ್ ಫ್ರಾಯ್ಕೆನ್

Leave a Reply

Your email address will not be published. Required fields are marked *