Friday, 26 April, 2024

”ಜೀವ ಪೊರೆಯುವ ಆಹಾರ, ಜೀವನ ಪ್ರೀತಿಯ ಪ್ರತೀಕವೂ ಹೌದು”

Share post

ಊಟವೆನ್ನುವುದು ಮತಧರ್ಮಗಳಿಂತಾ ಹಳೆಯ ಜೀವನಪಾಠ. ಊಟದ ಇತಿಹಾಸದಿಂದ ಹಿಡಿದು, ಅದನ್ನು ತಯಾರಿಸುವ ರೀತಿ, ಅದರೊಳಗೆ ಹೋಗುವ ಸಾಮಾಗ್ರಿಗಳು, ಅವುಗಳ ವೈಯುಕ್ತಿಕ ಪರಿಮಳ ಹಾಗೂ ರುಚಿ, ಅವುಗಳನ್ನು ಮಿಶ್ರ ಮಾಡುವ ರೀತಿ, ಅವೆಲ್ಲಾ ಮಿಶ್ರವಾದ ನಂತರ ಹುಟ್ಟುವ ಹೊಸದೇ ಆದ ಒಂದು ಅಲೌಕಿಕ ರುಚಿ ಮತ್ತು ಪರಿಮಳ ಇವೆಲ್ಲವೂ ಜೀವನಪ್ರೀತಿಯ ಗುರುತುಗಳು. ಒಳ್ಳೆಯ ಊಟ ಜೀವನಕ್ಕೆ ಕೊಡೋ ಅರ್ಥವೇ ಬೇರೆ. ಗೀತೆಯ 15 ನೇ ಅಧ್ಯಾಯದ 14ನೇ ಶ್ಲೋಕದಲ್ಲಿ ಕೃಷ್ಣ ಕೂಡಾ “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾ ದೇಹ ಮಾಶ್ರಿತಃ, ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್” ಎನ್ನುತ್ತಾನೆ. ಈ ಅಧ್ಯಾಯವನ್ನು ಪುರುಷೋತ್ತಮ ಪ್ರಾಪ್ತಿ ಯೋಗವೆಂದೂ, ಪ್ರಸಾದ ಯೋಗವೆಂದೂ ಕರೆಯುತ್ತಾರೆ. ಈ ಅಧ್ಯಾಯವನ್ನು ಪ್ರಸಾದಯೋಗವೆಂದು ಕರೆಯಲು ಈ ಶ್ಲೋಕವೇ ಕಾರಣ. ಏಕೆಂದರೆ ಇದರಲ್ಲಿ ಭಗವಂತನು ಜಠರಾಗ್ನಿ ಸ್ವರೂಪದಿಂದ ಸರ್ವ ಪ್ರಾಣಿಗಳ ದೇಹದಲ್ಲೂ ಇದ್ದು, ಆ ಜೀವಿಗಳು ತಿನ್ನುವ ನಾಲ್ಕು ವಿಧವಾದ ಆಹಾರವನ್ನು (ಭಕ್ಷ್ಯ, ಭೋಜ್ಯ, ಜೋಷ್ಯ, ಲೇಹ್ಯ) ಪ್ರಾಣಾಪಾನದ ಆಧಾರದಿಂದ ಜೀರ್ಣ ಮಾಡುತ್ತೇನೆ ಎಂದಿದ್ದಾನೆ. “You are what you eat”, “Show me your plate, and I will who you are” ಎಂಬ ಇಂಗ್ಲೀಶ್ ನಾಣ್ಣುಡಿಗಳೂ ಇದನ್ನೇ ಹೇಳುತ್ತವೆ. ನಮ್ಮ ಆಹಾರಕ್ರಮ, ಆಹಾರಪ್ರೀತಿ ನಮ್ಮ ಜೀವನವನ್ನು ನಾವು ಊಹಿಸಿದ್ದಕ್ಕಿಂತಾ ಹೆಚ್ಚು ನಿಯಂತ್ರಿಸುತ್ತದೆ. ಹೀಗೆ ನಾವು ತಿನ್ನುವ ಆಹಾರವೇ ನಾವ್ಯಾರು ಎನ್ನುವುದನ್ನು ಮಾತ್ರವಲ್ಲ, ನಮ್ಮ ಕರ್ಮಫಲ ಹಾಗೂ ಮೋಕ್ಷದ ಸಾಧ್ಯತೆಯನ್ನೂ ನಿಯಂತ್ರಿಸುತ್ತದೆ ಎಂದಾಯಿತು.

ಇದೇ ಕಾರಣಕ್ಕೆ ಕುಕರಿ ಶೋಗಳೂ ನನಗೆ ಇಷ್ಟದವು. ಅವು ಪ್ರತಿಭಾಪ್ರದರ್ಶನ ಕಾರ್ಯಕ್ರಮಗಳು ಮಾತ್ರವಲ್ಲದೇ ಅವುಗಳಲ್ಲಿ ಕರ್ಣಶಿಕ್ಷೆ ಮತ್ತು ಅಕ್ಷುಶಿಕ್ಷೆ ನೀಡುವ ರಿಯಾಲಿಟೀ ಶೋ ನಿರ್ವಾಹಕರುಗಳೂ, ಹೆಚ್ಚಿನ ಧಾರಾವಾಹಿಗಳು ಮತ್ತು ಬಿಗ್ಬಾಸುಗಳಲ್ಲಿರುವಂತಾ ಅಲ್ಪಮತಿ ಪ್ರದರ್ಶನವೂ ಇಲ್ಲದಿರುವುದರಿಂದ, ಅವು ಒಳ್ಳೆಯ ಕಾಲಹರಣಕ್ಕೆಡೆಮಾಡಿಕೊಡುತ್ತವೆ. ಜೊತೆಗೆ ಕೊನೆಯಲ್ಲಿ ಒಂದೇನೋ ಚಂದದ್ದನ್ನು ಕಲಿತ ತೃಪ್ತಿಯೂ ಇರುತ್ತದೆ. ಕೇವಲ ಅಡುಗೆ ಕಾರ್ಯಕ್ರಮಗಳು ಮಾತ್ರವಲ್ಲ ಒಂದು ಪುಸ್ತಕದಲ್ಲಾಗಲೀ, ಸಿನಿಮಾದಲ್ಲಾಗಲೀ, ಫೋಟೋದಲ್ಲಾಗಲೀ ಅದರ ಕಥೆ ಅಥವಾ ಪರಿಸ್ಥಿತಿಗೆ ತಕ್ಕಂತೆ ಅಲ್ಲೊಂದು ಆಹಾರಪ್ರಕಾರವನ್ನೋ, ಅದನ್ನು ತಯಾರು ಮಾಡುತ್ತಿರುವ ರೀತಿಯನ್ನೋ ತೋರಿಸಿದರೆ ನನಗಿಷ್ಟ. ಸ್ವಲ್ಪ ಪುಕ್ಕಟೆ ಸಮಯ ಸಿಕ್ಕಿದರೆ ಯೂಟ್ಯೂಬಿನಲ್ಲಿ ಯಾವುದಾದರೂ ಕುಕರಿ ಶೋ ನೋಡ್ತಾ ಕೂರ್ತೀನಿ. ಹೊಸಹೊಸದನ್ನೆಲ್ಲಾ ಪ್ರಯತ್ನಿಸ್ತೀನಿ. ನನಗೇನು ಇಂತದ್ದೇ ಅಡುಗೆ ಆಗಬೇಕಂತಿಲ್ಲ. ಸಸ್ಯಾಹಾರವೋ, ಮಾಂಸಾಹಾರವೋ, ಸಮುದ್ರಾಹಾರವೋ ಯಾವುದಾದರೂ ಸರಿ. ಭಾರತದದ್ದಾದರೆ ಉಡುಪಿ, ಗೋವನ್, ಚೆಟ್ಟಿನಾಡ್, ಹೈದ್ರಾಬಾದಿ, ಮೈಥಿಲಿ, ಮಾಲ್ವಾಣಿ, ಕೊಂಕಣಿ, ಮೊಘಲಾಯ್, ಅವಧಿ, ಒಡಿಯಾ, ಗುಜರಾತೀ, ಸಿಂಧೀ, ಮರಾಠೀ, ಆಂಗ್ಲೋ-ಇಂಡಿಯನ್, ಧಮ್-ಪಕ್ತ್, ಬೆಂಗಾಲಿ, ಕಶ್ಮೀರಿ, ಕುಮಾವ್ನಿ, ಜೈನ್ ಸಾತ್ವಿಕ್, ಪಂಜಾಬೀ, ರಾಜಾಸ್ಥಾನೀ ಆಹಾರಪ್ರಕಾರಗಳ ತಯಾರಿಕೆಯನ್ನು ನೋಡುವುದು, ಸಾಧ್ಯವಾದಲ್ಲಿ ಪ್ರಯತ್ನಿಸುವುದು, ಗೆಳೆಯರ ಜೊತೆಗೂಡಿ ಅದರ ಆನಂದವನ್ನು ಅನುಭವಿಸುವುದೂ ಜೀವನವನ್ನು ನನಗೆ ಆಹ್ಲಾದಕರಗೊಳಿಸುವ ಚಟುವಟಿಕೆ. ಹಾಗೆಯೇ ಮೋದಿ ಚೀನಾ ಆಪ್ ಬ್ಯಾನ್ ಮಾಡಿದ್ರೂ ಕೂಡಾ ಚೈನೀಸ್ ಅಡುಗೆಯನ್ನೂ ಬಿಡದೆ ಸಿಂಗಪೂರಿಯನ್, ಥಾಯ್, ಇಂಡೋನೇಷಿಯನ್, ಜಪಾನೀಸ್ ಅಡುಗೆಗಳನ್ನೂ, ಅರೇಬಿಕ್, ಈಸ್ಟರ್ನ್ ಯೂರೋಪಿಯನ್, ಇಟಾಲಿಯನ್, ಫ್ರೆಂಚ್, ಮೆಕ್ಸಿಕನ್, ಲ್ಯಾಟಿನ್ ಅಮೇರಿಕನ್, ನೈಜೀರಿಯನ್ ಎಲ್ಲ ಪಾಕಪ್ರಕಾರಗಳನ್ನೂ ಏಕಪ್ರಕಾರದಲ್ಲಿ ಪ್ರೀತಿಸಿ, ತಯಾರಿಸಿ, ತಯಾರಿಸೋಕೆ ಬರದಿದ್ರೂ ಬಿಡದೇ ತಿಂದು ಜಗತ್ಪ್ರೀತಿಯನ್ನು ಉಳಿಸಿಕೊಳ್ಳೋದು ಮಾನವನ ಕರ್ತವ್ಯವೆಂದೇ ನಂಬಿ ಅವೆಲ್ಲ ಕರ್ತವ್ಯಗಳನ್ನೂ ನಿಭಾಯಿಸಿದ್ದೀನಿ. “ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ. ಸಾಯೋಮುನ್ನ ತಿನ್ಲೇಬೇಕು ಎಲ್ಲಾತಿಂಡಿ” ಅಂತಲೇ ನನ್ನ ಬಲವಾದ ನಂಬಿಕೆ. ಜಿಹ್ವಾಚಾಪಲ್ಯವೇ ಜೀವನಚಾಪಲ್ಯ ಎಂಬಷ್ಟರ ಮಟ್ಟಿಗೆ ಆಹಾರದ ಸುತ್ತ ಸುತ್ತುವ ಜೀವ ನನ್ನದು.


ಹಬ್ಬಗಳು ನಮಗೆ ಪ್ರಿಯವಾಗುವುದೂ ಅವು ಒದಗಿಸುವ ರಸಗವಳ, ಹಾಗೂ ಹಬ್ಬಕ್ಕೆ ತಕ್ಕಂತೆ ಬರುವ ಕಾಲೋಚಿತ ತಿನಿಸುಗಳಿಗಾಗಿಯೇ. ನಮ್ಮ ಮನೆಯಲ್ಲಿ ಸಂಕ್ರಾಂತಿಗೆ ಸಕ್ಕರೆ ಅಚ್ಚು ಮತ್ತು ಸಿಕಲುಂಡೆ, ಯುಗಾದಿಗೆ ಅತಿರಸ, ಗಣೇಶನ ಹಬ್ಬಕ್ಕೆ ಚಕ್ಕುಲಿ-ಕೋಡುಬಳೆ-ಮೋದಕ, ದೀಪಾವಳಿಗೆ ಹೋಳಿಗೆ-ರವೆಉಂಡೆ, ತುಳಸಿಪೂಜೆಗೆ ಕೋಸಂಬರಿ ಅಥವಾ ಕಡ್ಲೆ ಹುಸಲಿ ಮುಂತಾದವು ಪೂರ್ವನಿರ್ಧಾರಿತ ಭಕ್ಷ್ಯಗಳು. ಒಂದು ಹಬ್ಬಕ್ಕೆ ಸೀಮೆಅಕ್ಕಿ ಪಾಯಸವಾದರೆ, ಇನ್ನೊಂದಕ್ಕೆ ಗೋಧಿಯದ್ದು, ಮತ್ತೊಂದಕ್ಕೆ ಶಾವಿಗೆಯದ್ದು, ಮಗದೊಂದಕ್ಕೆ ಗಸಗಸೆಯದ್ದು, ಇನ್ನೊಂದಕ್ಕೆ ಕಡ್ಲೇಬೇಳೆಯದ್ದು. ಹಾಗೂ ಆ ಭಕ್ಷ್ಯಗಳು ಆ ಹಬ್ಬಕ್ಕೆ ಮಾತ್ರವೇ ಮೀಸಲು, ಬೇರೆ ಹಬ್ಬಗಳಲ್ಲಿ ಮಾಡುವುದಿಲ್ಲ. ಬೇರೆ ಬೇರೆ ಮನೆಗಳಲ್ಲಿ ಬೇರೆ ಬೇರೆ ಪೂರ್ವನಿರ್ಧಾರಿತ ಭಕ್ಷ್ಯಗಳಿರಬಹುದು. ಹೀಗೆ ವರ್ಷವಿಡೀ ಆ ತಿನಿಸಿಗಾಗಿ ಕಾಯುವ ವಿರಹವೂ ಒಂತರಾ ಚಂದ ಅಲ್ಲವೇ?

ಹಬ್ಬದ ಭಕ್ಷ್ಯಗಳು

ಹಬ್ಬದೂಟವೂ ಉಳಿದ ದಿನದ ಊಟದಂತಾದರೇನು ಮಜಾ ಹೇಳಿ? ಬೇರೆ ದಿನಗಳಂತೆ ಅವತ್ತೂ ಬೆಳಿಗ್ಗೆ ಉದ್ದಿನದೋಸೆ, ಜೋನಿಬೆಲ್ಲ ತಿಂದು ಮಧ್ಯಾಹ್ನದೂಟಕ್ಕೆ ಚಪಾತಿ-ಪಲ್ಯ ಮಾಡಿ ಮುಗಿಸಿದರೇನು ಚೆನ್ನ? ಹಬ್ಬದ ದಿನ ಪ್ರಾರಂಭವಾಗಬೇಕಾದದ್ದೇ ಬೆಳಿಗ್ಗೆ ತುಳಸಿಯ ಪೂಜೆಗೆಂದು ಒಡೆದ, ಹಾಲಿನ್ನೂ ಒಣಗದ, ತಾಜಾ ಕಾಯಿಯತುರಿ ಹಾಕಿ ಮಾಡಿರೋ ಬೇಳೆಯ ಕೋಸಂಬರಿ, ಬೆಲ್ಲ-ಏಲಕ್ಕಿ ಪಾಕಕ್ಕೆ ಜೊತೆಯಾದ ಗರಿಗರಿ ಅವಲಕ್ಕಿಯಿಂದ. ಅದಿಲ್ಲವೆಂದರೆ ಒತ್ತುಶಾವಿಗೆ-ಕಾಯಿರಸದಿಂದ. ಮಧ್ಯಾಹ್ನದ ಊಟಕ್ಕೆ ಚಿಟಿಕೆ ಸಕ್ಕರೆ ಹಾಕಿಹುರಿದ ಈರುಳ್ಳಿಯಿರುವ ಬೀನ್ಸ್ ಪಲ್ಯ, ಬೆಲ್ಲದ ನೀರಿನಲ್ಲಿ ನೆನೆಸಿಟ್ಟ ಅನಾನಸ್ಸಿನ ಕೂಟು, ಬಾದಾಮಿ ಗೋಡಂಬಿ ತುಂಡುಮಾಡಿ ಹಾಕಿರೋ ತಾಜಾ ಗಸಗಸೆ ಪಾಯಸ, ಚೆನ್ನಾಗಿ ಹುರಿದ ಕಡ್ಳೇಬೀಜವನ್ನೊಳಗೊಂಡ, ಧಾರಾಳವಾಗಿ ನಿಂಬೆಹಣ್ಣು ಹಿಂಡಿರೋ ಚಿತ್ರಾನ್ನ, ಗೋಡಂಬಿ-ಕಾಳುಮೆಣಸು-ಕಾಯಿಚಕ್ಕೆ ಹಾಕಿ ಮಾಡಿರೋ ಪೊಂಗಲ್, ತಂಪುಕಾಯಿಗೊಂದು ಮುಷ್ಟಿ ಹುರಿಗಡ್ಲೆ ಹಾಕಿ ಮಾಡಿದ ಚಟ್ನಿ, ಹುಣಸೇಹಣ್ಣು ಕಿವುಚಿದ ತಿಳಿಸಾರು, ತುಪ್ಪ-ಇಂಗಿನ ಒಗ್ಗರಣೆ ಇಟ್ಟ ಸಣ್ಣೀರುಳ್ಳಿ ಆಲೂ ನುಗ್ಗೆ ಸಾಂಬಾರು, ಆಯಾಹಬ್ಬದ ಸಂದರ್ಭಕ್ಕೆ ತಕ್ಕನಾಗಿ ಮಾಡಿದ ಸಿಹಿಭಕ್ಷ್ಯ, ರಸವತ್ತಾದ ಒಂದು ಮಜ್ಜಿಗೆಹುಳಿ, ವಾಳ್ಯದಕ್ಕಿ ಅನ್ನ, ಬದೀಲೊಂಚೂರು ಕೊಚ್ಚುಪ್ಪಿನಕಾಯಿ, ಒಂಚೂರು ಬಾಳೆಮೂತಿ ತೊಕ್ಕು, ಸೈಡಿಗೊಂದು ಚಮಚ ತುಪ್ಪ, ಒಂದೆರಡು ಸಂಡಿಗೆ, ಹಪ್ಪಳ ಇಷ್ಟುತಿಂದು ಮಧ್ಯಾಹ್ನ ಒಂದು ಗಡದ್ದಾಗಿ ನಿದ್ದೆ ಹೊಡೆದರೆ, ಇನ್ನೊಮ್ಮೆ ಆ ಹಬ್ಬದೂಟಕ್ಕಾಗಿ ಮುಂದಿನ ವರ್ಷದ ಹಬ್ಬದವರೆಗೂ ಕಾಯಬೇಕು. ಹೀಗೇ ಹಬ್ಬಗಳಿಗೆ ಅದೆಷ್ಟೇ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯಿರಲಿ, ಅದಕ್ಕೊಂದು ಆಹಾರದ ಹಿನ್ನೆಲೆಯೂ ಇದ್ದೇ ಇದೆ ಹಾಗೂ ಅದೇ ಆ ಹಬ್ಬದ ಮುಖ್ಯ ಆಕರ್ಷಣೆಯೂ ಹೌದು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವಂತಿಲ್ಲ.

ಹಬ್ಬದ ಊಟ

ಈ ರೀತಿಯ ಅಭ್ಯಾಸಗಳು ಸಸ್ಯಾಹಾರಕ್ಕೆ ಮಾತ್ರ ಸೀಮಿತವಲ್ಲ. ಮಾಂಸಾಹಾರವೂ ಕೂಡಾ ನಮ್ಮ ಜೀವನದ ಕಥೆಗಳು ಮತ್ತು ಹಬ್ಬಗಳೊಂದಿಗೇ ಬೆರೆತು ಹೋಗಿವೆ. ದೈವದ ಹರಕೆಗೆ ಅಕ್ಕಿಕಡುಬಿನ ಜೊತೆ ಕೋಳಿ ಅಥವಾ ಮಟನ್ ಸಾರು, ತಿಥಿಗೆ ಕೋರಿರೊಟ್ಟಿ ಕೋಳಿ ಸಾರು, ಗಣಪತಿ ಹಬ್ಬದ ಮರುದಿನದ ಇಲಿವಾರಕ್ಕೆ ಅಕ್ಕಿರೊಟ್ಟಿ, ಅಣಬೆ ಪಲ್ಯ, ಶ್ರಾವಣ ಮತ್ತು ಕಾರ್ತಿಕಮಾಸಗಳು ಮುಗಿದದಿನದಂದು ಭೂತಾಯಿ ಮೀನಿನ ಫ್ರೈ ಅಥವಾ ಸಾರು, ಮೊದಲ ದೀಪಾವಳಿ ಮುಗಿಸಿ ಅಳಿಯನನ್ನು ಕಳುಹಿಸುವ ದಿನ ಹಂದಿಮಾಂಸದ ಪದಾರ್ಥ ಇರಲೇಬೇಕು.

ಭಾರತದಲ್ಲಿ ಆಹಾರಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕೊಟ್ಟ ಬೇರೆ ಯಾವ ಆಧುನಿಕ ನಾಗರೀಕತೆಯೂ ಕೊಟ್ಟಿರಲಿಕ್ಕಿಲ್ಲ. ಆಹಾರ ಕೇವಲ ಹೊಟ್ಟೆತುಂಬಿಸುವುದಕ್ಕಷ್ಟೇ ಅಲ್ಲ, ಅದು ಜೀವವನ್ನುಳಿಸುವುದರಿಂದಾಗಿ ಮತ್ತು ತಪ್ಪಾಗಿ ಸೇವಿಸಿದಾಗ ಅದರಿಂದ ಮರಣವೂ ಸಾಧ್ಯವಿರುವುದರಿಂದಾಗಿ ಅದು ನಮಗೆ “ಅನ್ನಂ ಪರಬ್ರಹ್ಮ ಸ್ವರೂಪಂ” ಕೂಡಾ ಹೌದು. ನೂರು ಕಿಲೋಮೀಟರಿಗೊಮ್ಮೆ ಬದಲಾಗುವ ಭಾರತದ ಆಹಾರವೈವಿಧ್ಯಷ್ಟು ವರ್ಣರಂಜಿತ ಆಹಾರಪದ್ದತಿ ಇಡೀ ಜಗತ್ತಿನಲ್ಲೆಲ್ಲೂ ನಿಮಗೆ ಕಾಣಸಿಗುವುದಿಲ್ಲ. ದೋಸೆ ಮೈಸೂರಲ್ಲೇ ಬೇರೆ, ಮಂಗಳೂರಲ್ಲೇ ಬೇರೆ, ದಾವಣಗೆರೆಯಲ್ಲೇ ಬೇರೆ. ಮಸಾಲೆಯ ಶೈಲಿ ಕುಮಟಾದಲ್ಲೇ ಬೇರೆ, ಕಲಬುರ್ಗಿಯಲ್ಲೇ ಬೇರೆ. ಇದು ಕೇವಲ ಭೌಗೋಳಿಕ ವ್ಯತ್ಯಾಸಗಳನ್ನು ಮಾತ್ರವಲ್ಲ, ಜಾತಿವಾರು ಪಂಗಡಗಳನ್ನೂ ಮುನ್ನೆಲೆಗೆ ತರುತ್ತದೆ. ಮಂಡ್ಯದ ಗೌಡರ ಊಟಕ್ಕೂ, ಮಲೆನಾಡ ಗೌಡರ ಊಟಕ್ಕೂ ವ್ಯತ್ಯಾಸವಿದೆ. ಯಾಕೆಂದರೆ ಮುದ್ದೆಯೊಂದಿಗೆ ತಿನ್ನುವ ಮಾಂಸಕ್ಕೆ ಅರೆಯುವ ಮಸಾಲೆ, ಅಕ್ಕಿರೊಟ್ಟಿಯೊಂದಿಗೆ ಅಥವಾ ಕಡುಬಿನೊಂದಿಗೆ ತಿನ್ನುವ ಮಾಂಸಕ್ಕೆ ಹೊಂದುವುದಿಲ್ಲ. ತಮಿಳರಲ್ಲಿ ಚೆಟ್ಟಿಯಾರರ ಊಟಕ್ಕೂ, ಅಯ್ಯಂಗಾರಿಗಳ ಊಟಕ್ಕೂ ಅದರದ್ದೇ ವೈಶಿಷ್ಟಗಳಿವೆ. ಕೇರಳದಲ್ಲಿ ಕ್ಯಾಥೊಲಿಕ್ ಸಿರಿಯನ್ನರ ಊಟ, ನಾಯರುಗಳ ಊಟ, ನಂಬಿಯಾರುಗಳ ಊಟ, ಮಲಬಾರಿ ಮಾಪಿಳ್ಳೆಗಳ ಊಟ ಎಲ್ಲವೂ ತಮ್ಮದೇ ಆದ ರೀತಿಯಲ್ಲಿ ಅಮೃತಸಮಾನ. ಮಹಾರಾಷ್ಟ್ರದಲ್ಲಿ ಚಿತ್ಪಾವನ ಮನೆಯೂಟ, ಪಾಟೀಲರ, ಪೇಶ್ವೆಗಳ, ವಂಜಾರಿಗಳ ಮನೆಯೂಟದ ವ್ಯತ್ಯಾಸಗಳೇ ಭಾರತದ ವೈವಿಧ್ಯತೆಯ ಕುರುಹು. ನಮ್ಮ ಈ ವೈವಿಧ್ಯಮಯ ದೇಶದಲ್ಲಿ ಊಟವೂ ಆಯಾ ಪ್ರಾಂತ್ಯಕ್ಕೆ, ಸ್ಥಳೀಯ ವಾತಾವರಣಕ್ಕೆ, ಅಲ್ಲಿನ ಜನರಕಸುಬಿಗೆ, ಆ ಪ್ರಾಂತ್ಯದಲ್ಲಿ ಪ್ರಾಬಲ್ಯವಿದ್ದ ಅಥವಾ ಪ್ರಾಬಲ್ಯವಿರುವ ಜಾತಿ ಅಥವಾ ಮತಕ್ಕೆ, ಅವರ ಧಾರ್ಮಿಕ ನಂಬಿಕೆಗೆ, ಆ ಜಾಗವನ್ನು ಆಳಿದ ರಾಜಮನೆತನಕ್ಕೆ ಹೊಂದಿಕೊಂಡಂತೆ ಹೆಸರಾಗುವುದು ಸಾಮಾನ್ಯ. ಹೌದು ರಾಜಮನೆತನಕ್ಕೂ ಆಹಾರಕ್ಕೂ ಕೂಡಾ ಸಂಬಂಧವಿದೆ. ರಾಜಮನೆತನಗಳು ತಮಗರಿವಿಲ್ಲದಂತೆಯೇ ಕಾಲಾಂತರದಲ್ಲಿ ತಮ್ಮ ಸಾಮ್ರಾಜ್ಯಗಳ ಆಹಾರಪದ್ಧತಿಗಳ ಮೇಲೆ ಪ್ರಭಾವ ಬೀರಿದವು. ನಮ್ಮ ಮೈಸೂರು ಪಾಕ್ ಹಾಗೂ ಬಿಸಿಬೇಳೆಬಾತು, ಕೇರಳದ ಅವಿಯಲ್, ಕಾಶ್ಮೀರದ ನವರತನ್ ಕೂರ್ಮಾ, ಬಂಗಾಳದ ರೆಝಾಲಾ ಹೇಗೆ ಜನರಿಗೆ ಮತ್ತು ರಾಜರುಗಳಿಗೇ ತಿಳಿಯದಂತೆ ‘ರಾಜೌತಣ’ದಿಂದ ಕಾಲಾನುಕ್ರಮದಲ್ಲಿ ದೈನಂದಿನ ಊಟವಾಗಿ ಬದಲಾಯ್ತು ಅನ್ನೋ ವಿಷಯಗಳನ್ನು ತಿಳಿದಾಗಲೆಲ್ಲಾ ಹೇಗೆ ನಾಗರೀಕತೆ, ರಾಜ-ಪ್ರಜೆಗಳೆಂಬ ಪರಿಕಲ್ಪನೆಗಳು ನಾವು ಮೇಲ್ಮೈಯಲ್ಲಿ ಅರ್ಥೈಸಿಕೊಂಡಷ್ಟು ಸುಲಭವಲ್ಲ ಎಂಬುದು ತಿಳಿಯುತ್ತಾ ಹೋಗುತ್ತೆ. ಹೇಗೆ ಒಬ್ಬ ರಾಜ ತನ್ನ ಬಾಣಸಿಗ ಮಾಡಿದ ಅಡುಗೆಯನ್ನು ಮೆಚ್ಚಿ, ‘ನನ್ನ ಪ್ರಜೆಗಳೂ ಇದನ್ನು ಸವಿಯುವಂತಾಗಲಿ. ಇದನ್ನು ಬೇರೆಯವರಿಗೂ ಹೇಳಿಕೊಡು’ ಎಂದ ಆ ಕ್ಷಣ, ಮುಂದೊಂದು ದಿನ ಆ ಇಡೀ ಪ್ರದೇಶದ ಸಾಂಸ್ಕೃತಿಕ ಗುರುತಾಗಿ ಘನೀಭವಿಸಿ ನಿಲ್ಲುತ್ತೆ ಎಂಬ ಕಥೆಗಳೇ ಆಶ್ವರ್ಯ!

ಆಹಾರದ ಬಗ್ಗೆ ಈಗೆಲ್ಲಾ ಜನ ಇಷ್ಟು ತಲೆಕೆಡಿಸಿಕೊಳ್ಳುತ್ತಾರಾ ಅನ್ನುವ ಅನುಮಾನ ನನಗೆ. ಈಗೇನಿದ್ದರೂ ಫಾಸ್ಟ್-ಫುಡ್ ಜಗತ್ತು. ಇನ್ಸ್ಟಂಟ್ ಉಪ್ಪಿಟ್ಟು, ದಿಢೀರ್ ಇಡ್ಲಿ, ರೆಡಿ ಮೇಡ್ ಚಪಾತಿ, ರೆಡಿ ಟು ಈಟ್ ಪಾಲಕ್ ಪನೀರ್, ಪಾಯಸ ರೆಡಿ ಮಿಕ್ಸ್, ಬಿಸಿನೀರು ಬೆರೆಸಿದರೆ ತಯಾರಾಗುವ ರಸಂ ಕಾಲಕ್ಕ ಬಂದಿದ್ದೇವೆ. ಮುಂದಿನ ಹಬ್ಬಗಳೂ ಇವುಗಳ ಪ್ರಾಬಲ್ಯಕ್ಕೆ ಮಣಿಯುವ ಅಪಾಯದಲ್ಲೇ ನಾವಿದ್ದೇವೆ. ಮೊದಲು ಆಹಾರ ಸೇವನೆಯ ಮೊದಲು ಅನ್ನಪೂರ್ಣೇ ಸದಾಪೂರ್ಣೇ…ಹೇಳಿ ಚಿತ್ರಾಹುತಿ ಕೊಡುತ್ತಿದ್ದರಂತೆ. ಈಗ ಬರೀ ಚಿತ್ರ ತೆಗೆದು ಇನ್ಸ್ಟಾಗ್ರಾಮಿಗೆ ಅಂಟಿಸುತ್ತಾರೆ. ಆಹಾರ ತಯಾರಿಕಾ ಕ್ರಮವಾಗಲೀ, ಅದರ ಹಿಂದಿನ ಕಥೆಗಳಲ್ಲಾಗಲೀ ಆಸಕ್ತಿಯಿಲ್ಲದ, ‘ಒಟ್ಟು ಒಂದು ಊಟ ಬಂದರೆ ಸಾಕು’ ಎಂಬ ಮನಸ್ಥಿತಿಯವರನ್ನು ನೋಡಿದಾಗ ನಾವು ಬರ್ತಾ ಬರ್ತಾ ನಾಗರೀಕತೆಯೆಂಬ ರಥಕ್ಕೆ ಜೋಡಿಸಿರುವ, ‘ನಿಧಾನಕ್ಕೆ ಕತ್ತೆಗಳಾಗುತ್ತಿರುವ, ಒಂದುಕಾಲದ ಕುದುರೆಗಳು’ ಅನ್ನಿಸದಿರೋಲ್ಲ. ನಾವುಗಳು ಎಂದೋ ಮಾಡಿ ಮಡಿಕೆಯೊಳಗಿಟ್ಟು, ಇಟ್ಟ ನಂತರ ಅದರ ಮುಚ್ಚಳವನ್ನೇ ತೆಗೆಯದ ಅಡುಗೆಯಂತಾಗುತ್ತಿದ್ದೇವೆ ಎಂಬುದನ್ನ ನೋಡಿ, ತಿಂದ ಕಲ್ಕತ್ತಾ ಬಿರಿಯಾನಿಯಲ್ಲಿ ಆಲೂಗೆಡ್ಡೆಯೇ ಸಿಗದಿದ್ದಾಗ ಆದಂತೆ ಪಿಚ್ಚೆನಿಸುತ್ತದೆ.

0 comments on “”ಜೀವ ಪೊರೆಯುವ ಆಹಾರ, ಜೀವನ ಪ್ರೀತಿಯ ಪ್ರತೀಕವೂ ಹೌದು”

Leave a Reply

Your email address will not be published. Required fields are marked *