Thursday, 25 April, 2024

“ವಿನಾಶದ ತಾಂಡವದೊಳಗೆ ಅಸಂಬದ್ಧವಾಗಿಯಾದರೂ ಅರಳುವ ಚೈತನ್ಯ”

Share post
ಮೌಂಟ್ ತಂಬೋರಾ ಜ್ವಾಲಾಮುಖಿ

ಈ ಲೇಖನ ಪ್ರಾರಂಭವಾಗುವುದು 1815ರಲ್ಲಿ ಇಂಡೋನೇಷ್ಯಾದ ಮೌಂಟ್ ತಂಬೋರಾ ಜ್ವಾಲಾಮುಖಿ ಸ್ಫೋಟಿಸಿವುದರೊಂದಿಗೆ. ತಂಬೋರಾ ಜ್ವಾಲಾಮುಖಿಯ ಸ್ಪೋಟ ದಾಖಲೀಕೃತ ಮಾನವ ಇತಿಹಾಸದ ಅತ್ಯಂತ ಶಕ್ತಿಶಾಲಿ ಸ್ಫೋಟ. ನಿಮ್ಮಲ್ಲಿ ಕೆಲವರಿಗೆ 1980ರ ಭೀಕರ ಸೇಂಟ್ ಹೆಲೆನ್ಸ್ ಸ್ಪೋಟ ಜ್ವಾಲಾಮುಖಿ ನೆನಪಿರಬಹುದು. ನಮ್ಮ ಶಾಲೆಗಳಲ್ಲಿ ನಮಗೆ ಅಂಕಪಟ್ಟಿ ಇರುವಂತೆಯೇ ಜ್ವಾಲಾಮುಖಿಗಳ ಸ್ಪೋಟಕ್ಕೂ ಒಂದರಿಂದ ಏಳರವರಿಗಿನ ಅಂಕಪಟ್ಟಿಯಿದೆ. ಸೇಂಟ್ ಹೆಲೆನ್ಸ್ ಸ್ಪೋಟ ಈ ಸೂಚ್ಯಂಕದಲ್ಲಿ 5 ಅಂಕಗಳಿಸಿತ್ತು. 1991ರ ಅತೀಭೀಕರ ಮೌಂಟ್ ಪಿನಾಟೂಬೋ ಜ್ವಾಲಾಮುಖಿ ಸ್ಪೋಟ 6 ಅಂಕಗಳಿಸಿತ್ತು. ಅಂದರೆ ಪಿನಾಟೂಬೋ, ಹೆಲೆನ್ಸ್’ಗಿಂತಾ ಹತ್ತುಪಟ್ಟು ಹೆಚ್ಚು ಭೀಕರ. ಆದರೆ ಮೌಂಟ್ ತಂಬೋರಾ 7 ಅಂಕಗಳಿಸಿತ್ತು. ಅಂದರೆ ಪಿನಾಟೂಬೋ ಸ್ಪೋಟಕ್ಕಿಂತಾ ಹತ್ತುಪಟ್ಟು, ಹೆಲೆನ್ಸ್’ಗಿಂತಾ 100 ಪಟ್ಟು ಹೆಚ್ಚು ಶಕ್ತಿಶಾಲಿಯಾದ ಸ್ಪೋಟವಾಗಿತ್ತು. ಸುಮಾರು ಹನ್ನೊಂದುಸಾವಿರ ಜನರು ಒಂದೇದಿನದಲ್ಲಿ ಸಾವನ್ನಪ್ಪಿದರು. ಮುಂದಿನ ಮೂರ್ನಾಲ್ಕು ವಾರದಲ್ಲಿ ಸುಮಾರು 58,000 ಸಾವಿರ ಜನ ಹಸಿವು, ಸಾಂಕ್ರಾಮಿಕ ರೋಗ ಮುಂತಾದ ಪರೋಕ್ಷಕಾರಣಗಳಿಂದಾಗಿ ಮರಣಹೊಂದಿದರು. ಆದರೆ ನಿಜವಾದ ದುರಂತ ಬಂದಿದ್ದೇ ಇದರ ನಂತರ.

ಜ್ವಾಲಾಮುಖಿ ಸ್ಫೋಟದಿಂದಾಗಿ ಕಲ್ಲು ಮತ್ತು ದೂಳು ಆಕಾಶದಲ್ಲಿ ಸುಮಾರು 26 ಮೈಲುಗಳಷ್ಟು ಎತ್ತರಕ್ಕೆ ಏರಿ, ವಾಯುಮಂಡಲದೆತ್ತರಕ್ಕೆ ತಳ್ಳಲ್ಪಟ್ಟವು. ನಮಗೆ ಗಾಳಿ, ಶೀತ, ಉಷ್ಣತೆಯನ್ನು ಕೊಡುವ ಉಷ್ಣವಲಯ (troposphere) ಸುಮಾರು ಒಂಬತ್ತು ಮೈಲು ಎತ್ತರವಿರುತ್ತದೆ. ಇದರ ಮೇಲಿರುವ ವಾಯುಮಂಡಲ (stratosphere) ಸುಮಾರು ಮೂವತ್ತೊಂದು ಮೈಲು ಎತ್ತರಕ್ಕೆ ವ್ಯಾಪಿಸಿದೆ. ಮಾನವ ಇತಿಹಾಸದಲ್ಲಿ ವಾಯುಮಂಡಲದವರೆಗೆ ದೂಳುತಲುಪಿದ ನೈಸರ್ಗಿಕ ವಿಕೋಪಗಳು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಇಡೀ ದಖನ್ ಪ್ರಸ್ಥಭೂಮಿಯನ್ನು ಎರಡಡಿವರೆಗೆ ಮುಚ್ಚಿಡಬಹುದಾದಷ್ಟು ಬೂದಿಯನ್ನು ತಂಬೋರಾ ಜ್ವಾಲಾಮುಖಿ ಹೊರಹಾಕಿತು. ಸಾಮಾನ್ಯವಾಗಿ ಹೊಗೆ, ಬೂದಿ, ಧೂಳು ಉಷ್ಣವಲಯವನ್ನು ಮಾತ್ರವೇ ತಲುಪಿ, ಆ ಜಾಗದಲ್ಲಷ್ಟೇ ಪರಿಣಾಮ ಬೀರುತ್ತವೆ. ಆದರೆ ವಾಯುಮಂಡಲ ಹಾಗಲ್ಲ. ಅದು ಭೂಮಿಯ ಚಲನಾನುಪಾತದಲ್ಲಿ ಚಲಿಸುವುದಿಲ್ಲ. ಹಾಗಾಗಿ ಇಲ್ಲಿಗೆ ತಲುಪುವ ಅವಶೇಷಗಳು ಜಗತ್ತಿನಾದ್ಯಂತ ಪರಿಣಾಮ ಬೀರಿ ಹಾನಿಯುಂಟುಮಾಡುತ್ತವೆ. ಎರಡು ತಿಂಗಳ ಹಿಂದೆ ಸ್ಯಾನ್-ಫ್ರಾನ್ಸಿಸ್ಕೋದ ಕಾಡ್ಗಿಚ್ಚಿನಿಂದ ಹೊಗೆ ಮತ್ತು ಬೂದಿ ಆಕಾಶವನ್ನು ಕಡುಗೆಂಪು ಬಣ್ಣಕ್ಕೆ ತಿರುಗಿಸಿದ ಚಿತ್ರಗಳನ್ನು ನೋಡಿರಬಹುದು. ತಂಬೋರಾ ಸ್ಪೋಟ ಇದೇ ಪರಿಣಾಮವನ್ನು ಹೆಚ್ಚೂಕಮ್ಮಿ ಇಡೀ ವಿಶ್ವಕ್ಕೆ ಹರಡಿತು. ಅದೂ ಒಂದೆರಡು ದಿನ ಅಥವಾ ವಾರವಲ್ಲ, ಹಲವಾರು ತಿಂಗಳುಗಳವರೆಗೆ. ಹೀಗೆ ಪ್ರಾರಂಭವಾಗಿದ್ದೇ “ಬೇಸಿಗೆಯಿಲ್ಲದ ವರ್ಷ”.

ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಿದ ಬೂದಿಯಿಂದಾಗಿ 1816ರಲ್ಲಿ ಜಾಗತಿಕ ಸರಾಸರಿ ತಾಪಮಾನ ಸುಮಾರು 1.5 ಡಿಗ್ರಿಗಳಷ್ಟು ಕುಸಿಯಿತು. ದಾಖಲಾದ ಇತಿಹಾಸದ ಅತ್ಯಂತ ತಂಪುವರ್ಷ ಇದಾಗಿತ್ತು. ಯುರೋಪಿನಲ್ಲಿ ಜುಲೈನ ಬೇಸಿಗೆಯಲ್ಲೂ ಹಿಮ ಬೀಳುತ್ತಲೇ ಇತ್ತು. ಸಾಮಾನ್ಯವಾಗಿ ಡಿಸೆಂಬರಿನಲ್ಲಿ ಹಿಮಕಾಣುತ್ತಿದ್ದ ನ್ಯೂಯಾರ್ಕ್ ಈ ಬಾರಿ ಆಗಸ್ಟಿನಲ್ಲೇ ಒಂದಡಿ ಹಿಮದಡಿಯಲ್ಲಿತ್ತು. ಅದೂ ಎಂತಹಾ ಹಿಮ? ಬಿಳಿಬಣ್ಣದ ನಿಶ್ಕಲ್ಮಷ ಬಿಳಿಹಿಮವಲ್ಲ. ಬದಲಿಗೆ ಬೂದುಮಿಶ್ರಿತ ಕಿತ್ತಳೆ ಬಣ್ಣದ್ದ ಹೇವರಿಕೆ ಹುಟ್ಟಿಸುವ ಹಿಮ. ಸೂರ್ಯನಬೆಳಕಿಲ್ಲದೇ ಪ್ರಪಂಚದೆಲ್ಲೆಡೆ ಬೆಳೆಗಳು ವಿಫಲವಾಗಿ ಕೃಷಿ ಕುಂಠಿತವಾಯಿತು. ಬರಗಾಲದ ಕರಿನೆರಳು ಕಾಣಿಸಲಾರಂಭಿಸಿತು. ಅದಾಗಲೇ ನೆಪೋಲಿಯನಿಕ್ ಯುದ್ಧಗಳಿಂದ ನಿತ್ರಾಣಗೊಂಡಿದ್ದ ಯೂರೋಪ್ ಬೆಚ್ಚಿಬಿದ್ದಿತು. ಯೂರೋಪಿನ ಆಹಾರಬುಟ್ಟಿಗಳಾದ ಜರ್ಮನಿ, ಇಟಲಿ ಮತ್ತು ಸ್ಪೇನ್’ಗಳಲ್ಲಿ ಆಹಾರ ಬೆಲೆಯೊಂದಿಗೇ, ಹಸಿವಿನಿಂದ ಹತಾಶರಾದ ಜನರ ಆಕ್ರೋಶವೂ ಆಕಾಶಕ್ಕೇರಿ ಅಲ್ಲಲ್ಲಿ ದಂಗೆಗಳು ಪ್ರಾರಂಭವಾದವು.

ಈ ರೀತಿ ಹಸಿವಿನಿಂದ ಬಳಲುತ್ತಿದ್ದ ಜರ್ಮನ್ನರಲ್ಲಿ ಜಸ್ಟಸ್ ವಾನ್ ಲೈಬಿಗ್ ಎಂಬ 13 ವರ್ಷದ ಹುಡುಗನೂ ಒಬ್ಬ. ಶಾಲೆಯಲ್ಲಿ ಲೈಬಿಗ್ ದನಕಾಯಲೂ ಲಾಯಕ್ಕಿಲ್ಲದವನು ಎಂದು ಗುರುಗಳಿಂದ ಬೈಸಿಕೊಳ್ಳುತ್ತಿದ್ದ ಅಷ್ಟೇನೂ ಪ್ರತಿಭಾವಂತನಲ್ಲದ ಹುಡುಗ. ಆದರೆ ಅವನಿಗೆ ಪ್ರಯೋಗಳೆಂದರೆ ತುಂಬಾ ಇಷ್ಟವಿತ್ತು. ಅಪ್ಪನ ಬಣ್ಣದ ಕಾರ್ಖಾನೆಯಲ್ಲಿ ಕೈಗಾರಿಕಾ ರಸಾಯನಶಾಸ್ತ್ರಕ್ಕೆ ಪರಿಚಿತನಾಗಿದ್ದ ಲೈಬಿಗ್ 1816ರ ಬರಗಾಲದ ಪರಿಣಾಮದಿಂದ ತೀವ್ರವಾಗಿ ಪ್ರಭಾವಿತನಾಗಿ ಎರಡು ನಿರ್ಧಾರಗಳನ್ನು ತೆಗೆದುಕೊಂಡ. ಮೊದಲನೆಯದು, ‘ನಾನು ರಸಾಯನಶಾಸ್ತ್ರಜ್ಞನಾಗುತ್ತೇನೆ’. ಎರಡನೆಯದು, ‘ನನ್ನ ರಸಾಯನಶಾಸ್ತ್ರವೃತ್ತಿಯನ್ನು ಕೃಷಿಯನ್ನು ಸುಧಾರಿಸಲು ಮೀಸಲಿಡುತ್ತೇನೆೆ’ ಎಂದು.

ಜಸ್ಟಸ್ ವಾನ್ ಲೈಬಿಗ್

ಆತ ಬರೀ ನಿರ್ಧಾರ ಮಾತ್ರ ಮಾಡಲಿಲ್ಲ. ಅದನ್ನು ಸಾಧಿಸಿದ ಕೂಡಾ. ತೀವ್ರಪರಿಶ್ರಮ ಹಾಕಿ 21ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ. ಆರೋಗ್ಯಕರವಾದ ಮತ್ತು ಹೆಚ್ಚು ಇಳುವರಿಯ ಬೆಳೆಯನ್ನು ಪಡೆಯಲು ಸಾರಜನಕ (Nitrogen) ಎಷ್ಟು ಮುಖ್ಯ, ಮತ್ತು ಅದನ್ನು ಕೃತಕವಾಗಿ ಪೂರೈಸಲು ಅಮೋನಿಯಾವನ್ನು ಹೇಗೆ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಂಡವರಲ್ಲಿ ಲೈಬಿಗ್ ಮೊದಲನೆಯವ. ಬೆಳೆಗಳಿಗೆ ಬೇಕಾಗಿರುವುದು ಕೇಜಿಗಟ್ಟಲೆ ಗೊಬ್ಬರವಲ್ಲ. ಒಂದೇ ಒಂದು ಪೋಷಕಾಂಶದ ಕೊರತೆ ಇಳುವರಿಯನ್ನು ತೀವ್ರವಾಗಿ ಕುಗ್ಗಿಸುತ್ತದೆ, ಹಾಗೂ ಹೆಚ್ಚಿನ ಸಮಯದಲ್ಲಿ ಆ ಪೋಷಕಾಂಶ ಸಾರಜನಕ ಎಂಬುದನ್ನು ನಿರೂಪಿಸಿದ. ಭೂಮಿತಾಯಿ ಯಾವಾಗಲೆಲ್ಲಾ ಹೆಚ್ಚಿನ ಇಳುವರಿ ಕೊಡಲಿಲ್ಲವೋ, ಆಗೆಲ್ಲಾ ಅಮೋನಿಯಾದ ಬಳಕೆಯ ಮೂಲಕ ಅದನ್ನು ಸರಿದೂಗಿಸಬಹುದೆಂದು ಪ್ರಯೋಗಳ ಮೂಲಕ ಕಂಡುಹಿಡಿದ. ಲೈಬಿಗ್‌ನ ಈ ಸಂಶೋಧನೆಗಳು ಮುಂದಿನ ದಶಕಗಳಲ್ಲಿ ಸುಧಾರಣೆಯಾಗಿ, ವಿಶೇಷವಾಗಿ ಕೃತಕ ಅಮೋನಿಯಾದ ತಯಾರಿಕೆಗೆ ನಾಂದಿಹಾಡಿ, ಅಮೋನಿಯಾ ಆಧಾರಿತ ರಸಗೊಬ್ಬರ ಉದ್ಯಮಕ್ಕೆ ಕಾರಣವಾಗಿ, ಜಾಗತಿಕ ಕೃಷಿಯನ್ನು ಆಮೂಲಾಗ್ರವಾಗಿ ಬದಲಾಯಿಸಿತು.

ಈಗ ನಮಗಿಲ್ಲಿ ಕೂತು ಇದೇನೂ ದೊಡ್ಡ ವಿಷಯವಲ್ಲ ಅಂತೆನಿಸಬಹುದು. ಆದರೆ ಆಧುನಿಕ ಜಗತ್ತಿನಲ್ಲಿ ವಿಮಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಹಾರಾಟ ಅಥವಾ ದೂರದರ್ಶನದ ಆವಿಷ್ಕಾರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಅಮೋನಿಯದ ಸಂಶ್ಲೇಷಣೆಗೆ ಕೊಡಲಾಗುತ್ತದೆ. ಅದಿಲ್ಲವಾಗಿದ್ದಿದ್ದರೆ 1900ರಲ್ಲಿ ಕೇವಲ 1.6 ಶತಕೋಟಿಯಿದ್ದ ಭೂಮಿಯ ಜನಸಂಖ್ಯೆ 7.8 ಶತಕೋಟಿಗೆ ತಲುಪುವುದು ಅಸಾಧ್ಯವಾಗುತ್ತಿತ್ತು.

ತನ್ನೂರಿನಿಂದ 7800 ಮೈಲಿ ದೂರದಲ್ಲಿ ಸ್ಪೋಟಗೊಂಡು ಜರ್ಮನ್ ಬರಗಾಲಕ್ಕೆ ಕಾರಣವಾದ, ಮೌಂಟ್ ತಂಬೋರಾದ ಘಟನೆ ನಡೆಯದಿದ್ದಿದ್ದರೆ ಆತ ರಸಾಯನಶಾಸ್ತ್ರ ಹಾಗೂ ಕೃಷಿಯತ್ತ ಗಮನಹರಿಸುತ್ತಿದ್ದನೇ ಮತ್ತು ಸಾರಜನಕ ಆಧಾರಿತ ಗೊಬ್ಬರವನ್ನು ಕಂಡುಹಿಡಿಯುತ್ತಿದ್ದನೇ? ಬಹುಷಃ ಇಲ್ಲ!! ಇದನ್ನೇ ನೋಡಿ ಜಗದ್ವಿಚಿತ್ರ ಅನ್ನೋದು. ಎಲ್ಲೋ ಒಂದು ಜ್ವಾಲಾಮುಖಿ ಸ್ಫೋಟಗೊಂಡು, ಇನ್ಯಾವುದೋ ಬೇರೆ ಖಂಡದ ಮಗುವೊಂದನ್ನು ತನ್ನ ಮನೆ, ದೇಶ ಮತ್ತು ಗ್ರಹವನ್ನು ಹೇಗೆ ಒಳ್ಳೆಯರೀತಿಯಲ್ಲಿ ಪೋಷಿಸಬೇಕು ಎಂಬುದರ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತದೆ!! 1816ರಲ್ಲಿ ಯಾರಿಗೂ ಈ ಎರಡು ಘಟನೆಗಳನ್ನು ಒಂದೇ ಸಾಲಿನಲ್ಲಿ ಸಂಪರ್ಕಿಸಲು ಸಾಧ್ಯವೇ ಇರಲಿಲ್ಲ. ಆದರೂ ಅದು ನಡೆಯಿತು.

ಕಾರ್ಲ್ ವಾನ್ ಡ್ರೈಸ್

ಇದೊಂದೇ ಕಥೆಯಲ್ಲ. ತಂಬೋರಾ ತಂದ ಬರಗಾಲ, ವಿಶ್ವನಿಯಮದ ಹತ್ತು-ಹಲವು ಅಸಂಕಲ್ಪಿತ ಹರವುಗಳಲ್ಲಿ ಸಂಚಲನಗಳಿಗೆಡೆಮಾಡಿಕೊಟ್ಟಿತು. ಕುದುರೆಗಳಿಗೆ ತಿನ್ನಿಲು ಮೇವಿಲ್ಲದೇ ಕುದುರೆಗಳು ಸತ್ತಾಗ, ಗಾಡಿಎಳೆಯಲು ಪರ್ಯಾಯಮಾರ್ಗ ಹುಡುಕುತ್ತಾ ಜರ್ಮನ್ ಸಂಶೋಧಕ ಕಾರ್ಲ್ ವಾನ್ ಡ್ರೈಸ್ ಬೈಸಿಕಲ್ ಅನ್ನು ಕಂಡುಹಿಡಿದ. ಅಮೇರಿಕಾದಲ್ಲಿ ಈಶಾನ್ಯ ಯುಎಸ್ಎ ಅಂದರೆ ಆಗಿನ ನ್ಯೂಇಂಗ್ಲೆಂಡ್‌ನ ಜನರು, ಬೂದಿಯ ಪರಿಣಾಮ ಕಡಿಮೆಯಿದ್ದ ಮಧ್ಯದ ಬಯಲು ಪ್ರದೇಶಗಳಿಗೆ ವಲಸೆ ಹೋದರು. ಜನರನ್ನು ಒಗ್ಗೂಡಿಸಿದ ಈ ಆಹಾರಾವಲಂಬಿತ ವಲಸೆಯ ಪರಿಣಾಮವಾಗಿ ಗುಲಾಮಗಿರಿ-ವಿರೋಧಿ ಆಂದೋಲನ ಗಟ್ಟಿಯಾಗಿ, ಕೆಲವೇ ವರ್ಷಗಳಲ್ಲಿ ಪೂರ್ವಅಮೇರಿಕಾದಲ್ಲಿ ಗುಲಾಮಗಿರಿ ನಿಂತೇಹೋಯಿತು. ಖಾಲಿಬಿದ್ದಿದ್ದ ಅಮೇರಿಕಾದ ಹೃದಯಭಾಗ ಜನಾವೃತ್ತವಾಗಿ ಎರಡೇ ವರ್ಷದಲ್ಲಿ ಇಂಡಿಯಾನಾ ಮತ್ತು ಇಲಿನಾಯ್ ಎಂಬ ರಾಜ್ಯಗಳೇ ಹುಟ್ಟಿಕೊಂಡವು. ಚೀನಾದ ಯಾಂಗ್ತ್ಸೆ ಕಣಿವೆಯಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹಗಳು ಹೆಚ್ಚೆಚ್ಚು ಜನರನ್ನು ಕರಾವಳಿಯೆಡೆಗೆ ತಳ್ಳಿ, ಅಲ್ಲಿನ ಜನಸಂಖ್ಯಾ ವಿತರಣೆ ಐದೇವರ್ಷದಲ್ಲಿ ಸಂಪೂರ್ಣ ಬದಲಾಗಿಹೋಯ್ತು. ಜನರೇ ಇಲ್ಲದ ಶಾಂಘೈ ಜನನಿಬಿಡ ನಗರವಾಯ್ತು. ಈಶಾನ್ಯ ಭಾರತದ ಪರ್ವತಗಳಿಂದ ಜನ ಬಂಗಾಳದೆಡೆಗೆ ಹರಿದುಬಂದರು. ವರ್ಣಚಿತ್ರಗಳಲ್ಲಿ ಕೆಂಪು ಹಾಗೂ ಗಾಡಬೂದು ಬಣ್ಣಗಳು ಮುನ್ನೆಲೆಗೆ ಬಂದವು. ಚಿತ್ರಕಾರರು ಸೂರ್ಯ ಮತ್ತು ಚಂದ್ರರನ್ನು ಚಿತ್ರಿಸಿದ್ದೇ ಕಡಿಮೆ. ಆ ಕಾಲದಲ್ಲಿ ರಚನೆಯಾದ ಕವನಗಳಲ್ಲಿ ವಿಷಾದ ಭಾವ ಮೊದಲಿಗಿಂತಾ ಹೆಚ್ಚಿತ್ತು. ಇಷ್ಟೆಲ್ಲಾ ಅನೂಹ್ಯ ರೀತಿಯಲ್ಲಿ ಮನುಕುಲವನ್ನು ತಟ್ಟಿ ಜಗತ್ತನ್ನು ಬದಲಾಯಿಸಿದ್ದು ನಮಗೆ ವಿಕೋಪವೆನಿಸಬಹುದಾದ ಒಂದು ಜ್ವಾಲಾಮುಖಿಯ ಸ್ಪೋಟ.


ಈಗ ನಾವು ಯೋಚಿಸಬೇಕಾದದ್ದೇನೆಂದರೆ, ಈ ಬಾರಿ ಭೂಮಿಯನ್ನು ಆವರಿಸಿಕೊಂಡಿರುವ ನಾವು ಶನಿಯೆಂದು ಭಾವಿಸಿರುವ ಕರೋನಾ ವೈರಸ್, ಯಾವ್ಯಾವ ಅಸಂಕಲ್ಪಿತ ವಿಷಯಗಳಿಗೆ ಚಾಲನೆ ಕೊಡಬಹುದು?

ಈಗ ನೋಡಿ ಕರೋನಾದಿಂದ ನಮಗೇನು ಉಪಯೋಗವಾಯ್ತು ಅಂತಾ ಯಾರಿಗಾದರೂ ಪ್ರಶ್ನೆ ಕೇಳಿದರೆ ಪಟ್ಟನೇ ಉತ್ತರಿಸೋದು ಸುಲಭವಲ್ಲ. ಅದೂ ಅಲ್ಲದೇ ಕರೋನಾದ ಕೆಟ್ಟಪರಿಣಾಮಗಳೆಲ್ಲಾ ಬಂದಾಯ್ತೋ, ಇನ್ನೂಬರಲಿಕ್ಕಿದೆಯೋ ಎಂಬುದಿನ್ನೂ ತಿಳಿದಲ್ಲ. ಹೇಳದೇ ಕೇಳದೇ ನಮ್ಮಮೇಲೆಸೆಯಲಾದ ಈ ಸಮಸ್ಯಾಪ್ರವಾಹಕ್ಕೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬಲಿಯಾಗಿದ್ದಾರೆ. ಆದರೆ ಅದರೊಟ್ಟಿಗೇ ಜನರಿಗೆ ಹೊಸಾ ಅಪಾಯಗಳ, ಹೊಸಾ ರೀತಿಯ ಆಟ, ಪಾಠ, ಕೆಲಸ, ಬದುಕು ಎಲ್ಲದರ ಅರಿವೂ ಆಗಿದೆ. ಕುಟುಂಬವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು, ವ್ಯವಹಾರವನ್ನು ಹೇಗೆ ನಡೆಸಬೇಕು ಮತ್ತು ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸಂಪೂರ್ಣವಾಗಿ ಹೊಸಾ ದೃಷ್ಟಿಕೋನಗಳು ಬೆಳೆದುಕೊಂಡಿವೆ. ನಾವು ಜೀವನದಲ್ಲಿ ಎಷ್ಟೋ ಅನಗತ್ಯ ಖರ್ಚುಗಳನ್ನೂ, ಕೆಲಸಗಳನ್ನೂ ಮಾಡುತ್ತಿದ್ದೆವು ಎಂಬ ಅರಿವು ಮೂಡಿದೆ. ಪ್ರಯಾಣದ ಅಗತ್ಯ ಕಡಿಮೆಯಾಗಿದೆ. ಬೆಂಗಳೂರಿನಲ್ಲೇ ಇದ್ದು ವೃತ್ತಿಜೀವನ ನಡೆಸಬೇಕು ಎಂಬ ಮಾತು ಸುಳ್ಳೆಂದು ಮನವರಿಕೆಯಾಗಿದೆ. ಮೊದಲಿಗಿಂತಲೂ ಉತ್ತಮ ಲಸಿಕೆಗಳನ್ನು ಮೊದಲಿಗಿಂತಲೂ ವೇಗವಾಗಿ ತಯಾರಿಸುತ್ತಿದ್ದೇವೆ. ವೈದ್ಯರ ಜ್ಞಾನದ ಹರವು ಹೆಚ್ಚಿದೆ. ಬಯೋಮೆಟ್ರಿಕ್, ಟಚ್-ಲೆಸ್ ತಂತ್ರಜ್ಞಾನಗಳು ಹಿಂದೆಂದಿಗಿಂತಲೂ ಹೆಚ್ಚು ಶಕ್ತವಾಗಿವೆ. ಬಹುಶಃ ಇದರ ನಂತರದ, ಎರಡನೇ ಹಂತದ ಪರಿಣಾಮಗಳಲ್ಲಿ ಎಂಆರ್‌ಎನ್‌ಎ ಲಸಿಕೆಗಳ ಬಗ್ಗೆ ನಮ್ಮ ಹೊಸ ಜ್ಞಾನ ಕ್ಯಾನ್ಸರಿನಂತಹ ಹಳೇ ಕಾಯಿಲೆಗಳಿಗೆ ಔಷಧವನ್ನೂ ಕೊಡಬಹುದಾದ ಸಾಧ್ಯತೆಯೂ ಇದೆ.

ವಿಕಸನೀಯ ಜೀವಶಾಸ್ತ್ರದಲ್ಲಿ ಫಿಶರ್‌ನ ನೈಸರ್ಗಿಕ ಆಯ್ಕೆಯ ಮೂಲಭೂತ ಪ್ರಮೇಯ ಎಂಬ ಒಂದು ಸಿದ್ಧಾಂತವಿದೆ. ಈ ಸಿದ್ದಾಂತದ ಪ್ರಕಾರ ಜೀವಪ್ರಬೇಧವೊಂದರಲ್ಲಿ ಅಸಮಾನತೆ ಹೆಚ್ಚಿದ್ದಷ್ಟೂ ಅದರ ಅಸ್ತಿತ್ವ ಸಾಧ್ಯತೆ ಹೆಚ್ಚಿರುತ್ತದೆ. ಜೀವಪ್ರಬೇಧ ವೈವಿಧ್ಯಮಯವಾಗಿದ್ದಾಗ, ಹೊಸಗುಣಲಕ್ಷಣಗಳ ಮುಂದಿನ ತಲೆಮಾರನ್ನು ಆಯ್ಕೆಮಾಡಿಕೊಳ್ಳಲು ಪ್ರಕೃತಿಗೆ ಹೆಚ್ಚೆಚ್ಚು ಅವಕಾಶಗಳು ದೊರೆಯುತ್ತವೆ. ಯಾವ ಗುಣಲಕ್ಷಣಗಳು ಯಾವಾಗ ಮತ್ತು ಹೇಗೆ ಉಪಯುಕ್ತವಾಗುತ್ತವೆ ಎಂದು ನಮಗ್ಯಾರಿಗೂ ತಿಳಿದಿಲ್ಲ, ತಿಳಿಯುವುದೂ ಇಲ್ಲ; ಜೀವವಿಕಾಸವು ಕೆಲಸ ಮಾಡುವುದೇ ಹಾಗೆ. ಆದರೆ ನಿಮ್ಮಲ್ಲಿ ಹೆಚ್ಚೆಚ್ಚು ಗುಣಲಕ್ಷಣಗಳಿದ್ದಷ್ಟೂ, ಅವುಗಳಲ್ಲಿ ಉಪಯುಕ್ತವಾದದ್ದು – ಅದು ಯಾವುದೇ ಆಗಿರಲಿ – ಪ್ರಕೃತಿಯಲ್ಲಿ ಎಲ್ಲೋ ಒಂದು ಕಡೆ ಉಳಿದಿರುತ್ತದೆ. ಎಲ್ಲೋ ಸ್ಪೋಟವಾದ ಜ್ವಾಲಾಮುಖಿ ಇನ್ನೆಲ್ಲೋ ಗಟ್ಟಿನಿರ್ಧಾರಕ್ಕೆ ಕಾರಣವಾಗುವ ಪುನಶ್ಚೈತನ್ಯವೂ ಇಂತಹ ಲಕ್ಷಣಗಳಲ್ಲೊಂದು.

ಇವೆಲ್ಲದರ ಆಚೆ, 2020-21ರ ಆಚೆ, ಈ ಖಾಯಿಲೆ-ಲಸಿಕೆಗಳಾಚೆ ಒಂದು ದೊಡ್ಡದಾದ, “ಅಲ್ಲೇನಿದೆಯೋ ಗೊತ್ತಿಲ್ಲದ” ವಿಶಾಲವಾದ ಕಪ್ಪುಬಯಲೊಂದಿದೆ ಇದೆ. ಈ ಇಡೀವರ್ಷ ಅದೆಷ್ಟು ಅನೂಹ್ಯ ವಿಚಾರಗಳಿಗೆ ಓಂನಾಮ ಹಾಡಿದೆಯೋ ನಮಗೇ ಗೊತ್ತಿಲ್ಲ. ಏಳು ಶತಕೋಟಿ ಜನರ ಜೀವನವನ್ನು ತಲೆಕೆಳಗಾಗಿಸಿದ, ಅವರೆಂದಿಗೂ ಊಹಿಸದಂತಹ ಸಂಗತಿಗಳಿಗೆ ದಾರಿಮಾಡಿಕೊಟ್ಟ ಕೊರೋನಾ ಸುಮ್ಮನೇ ಹೋಗುವುದಿಲ್ಲ. ನಮ್ಮ ಜೀವನ ಮಾತವಲ್ಲ ನಾಗರೀಕತೆಯನ್ನೆ ಬದಲಾಯಿಸಬಲ್ಲದು, ಬದಲಾಯಿಸುತ್ತದೆ ಕೂಡಾ. ಅದ್ಯಾವ ಬದಲಾವಣೆ ಎನ್ನುವುದನ್ನು ಅನುಭವಿಸಿಯೇ ನೋಡಬೇಕಷ್ಟೇ. ಕಳೆದ ವಾರ ಲಸಿಕೆಯ ಸುದ್ದಿಬಂದಾಗ, ಹಲವರು “ಸುರಂಗದ ಕೊನೆಯಲ್ಲಿ ಬೆಳಕು ಕಾಣ್ತಾ ಇದೆ” ಎಂದರು. ಇರಬಹುದು. ಆದರೆ ಮುಂದೆ ಏನಾಗುತ್ತದೆ ಎನ್ನುವುದರ ಅಲ್ಪಊಹೆಯೂ ನಮಗಿಲ್ಲ ಎಂಬುದು ನನ್ನ ಅಭಿಪ್ರಾಯ.

0 comments on ““ವಿನಾಶದ ತಾಂಡವದೊಳಗೆ ಅಸಂಬದ್ಧವಾಗಿಯಾದರೂ ಅರಳುವ ಚೈತನ್ಯ”

Leave a Reply

Your email address will not be published. Required fields are marked *