Sunday, 21 April, 2024

“ಗ್ರಾಹಕನ ರಕ್ತಹೀರುವ ಬ್ಯಾಂಕಿಗೆ ಡಿಚ್ಚಿ ಕೊಟ್ಟ ಡಿಮಿಟ್ರಿ”

Share post

ಅರ್ಥಶಾಸ್ತ್ರದ ಮೂಲಕ ಜೀವನದ ಅಮೂಲ್ಯ ಪಾಠಗಳನ್ನು ಹೇಳಿಕೊಟ್ಟ ಚಾಣಕ್ಯನ ಮಾತುಗಳಲ್ಲೊಂದು “ವ್ಯಕ್ತಿಯೊಬ್ಬ ತೀರಾ ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ನೆಟ್ಟಗಿರುವ ಮರಗಳನ್ನೇ ಮೊದಲು ಕಡಿಯುವುದು”. ಜಗತ್ತಿನ ಉಳಿದವರು ಹೇಗಾದರೂ ಇರಲಿ, ನಾನು ನೈತಿಕವಾಗಿ ಸ್ವಚ್ಚವಾಗಿರುತ್ತೇನೆಂದು ಎಷ್ಟೋ ಬಾರಿ ಅಂದುಕೊಂಡರೂ, ಕೆಲಜನರಿಂದ ಮತ್ತೆಮತ್ತೆ ಮೋಸಹೋದಮೇಲೆ, ಮೇಲಿನ ಮಾತು ಪದೇ ಪದೇ ಚುಚ್ಚುವುದುಂಟು.

 

ಬ್ಯಾಂಕುಗಳೊಂದಿಗೆ ವ್ಯವಹಾರ ಮಾಡದವರು ಯಾರಿಲ್ಲ ಹೇಳಿ? ಹಣದ ವ್ಯವಹಾರ ಮಾಡುವ ಬ್ಯಾಂಕುಗಳ ಹಿಂದೆ ಮುಂದೆ ತಿಳಿದಿರುವ ನನಗಂತೂ ನೈತಿಕತೆ ಸದಾ ಪ್ರಶ್ನಾರ್ಥಕವೇ. ಅವರ ಅರ್ಜಿಗಳಲ್ಲಿ ಇಲ್ಲಸಲ್ಲದ ಕರಾರುಗಳನ್ನು ಯಾರೂ ಓದಲಾಗದ ಸಣ್ಣ ಅಕ್ಷರಗಳಲ್ಲಿ ಬರೆದು, ನಮ್ಮಿಂದ ಹತ್ತಾರು ರೀತಿಯ ಸುಲಿಗೆ ಮಾಡಿ ಕೊನೆಗೆ “ನೀವಿಲ್ಲಿ ಇದಕ್ಕೆ ಒಪ್ಪಿ ಸಹಿಮಾಡಿದ್ದೀರಿ ನೋಡಿ” ಅಂತಾ ಅಸಂಖ್ಯಪುಟಗಳನ್ನು ನಮ್ಮ ಮುಖಕ್ಕೆ ಹಿಡಿದು ನಮ್ಮನ್ನೇ ಚಿತ್ ಮಾಡುವುದುಂಟು. ನಾನು ನೀವು ಬೆನ್ನುಬಗ್ಗಿಸಿ ದುಡಿದ ಹಣವನ್ನು ನಮಗೇ ತಿಳಿಯದಂತೆ ಎಲ್ಲೆಲ್ಲೋ, ಎಷ್ಟೋ ಬಾರಿ ನೈತಿಕವಾಗಿ ಒಪ್ಪಲಾಗದ ವಿಚಾರಗಳನ್ನೂ ಹೂಡಿಕೆಮಾಡಿ, ಅದರ ಮೂಲಕ ನಮಗೆ ಬಡ್ಡಿ ಕೊಟ್ಟು, ಅವರ ಪಾಪದಲ್ಲಿ ನಮ್ಮನ್ನೂ ಪಾಲುದಾರರನ್ನಾಗಿಸುವ ಈ ಸಂಸ್ಥೆಗಳ ಮೇಲೆ ನನ್ನ ಹೇವರಿಕೆ ಇದ್ದದ್ದೇ.

 

ಪರವಾನಿಗೆಯಿಲ್ಲದ ಪಿಸ್ತೂಲಿ‌ನಿಂದ ನೀವೊಂದು ಕೊಲೆ ಮಾಡಿದರೆ, ನ್ಯಾಯಾಧೀಶರು ಆಯುಧದ ಮೂಲವನ್ನು ಕೇಳುವುದಿಲ್ಲ. ಬದಲಿಗೆ ಅವರು ಕೊಲೆ ವಿಚಾರಣೆ ನಡೆಸುತ್ತಾರೆ. ಹೀಗೆಯೇ ಇಂತಹ ಪರಿಸ್ಥಿತಿಗಳಲ್ಲಿ ನಮ್ಮನ್ನು ಉಳಿಸಬೇಕಾದ ರಿಸರ್ವ್ ಬ್ಯಾಂಕ್, ಐಆರ್ಡಿಎ, ಸೆಬಿ ಮುಂತಾದ ನಿಯಂತ್ರಕ ಸಂಸ್ಥೆಗಳೂ ಸಹ ತಮ್ಮದೇ ನಿಯಮಗಳ ಸ್ಪಷ್ಟಉಲ್ಲಂಘನೆಯಾಗಿದ್ದರೂ ಸಹ ನ್ಯಾಯಕ್ಕಿಂತ ಕ್ಷುಲ್ಲಕ ತಾಂತ್ರಿಕತೆಗಳ ಮೇಲೆ ಕೇಂದ್ರೀಕೃತವಾಗಿ ಸದಾ ನೈತಿಕಹಾದಿಯಲ್ಲಿ ನಡೆಯುವ ನಮ್ಮ ನಿರ್ಧಾರವನ್ನೇ ಪ್ರಶ್ನಾರ್ಥಕವಾಗಿಸಿಬಿಡುತ್ತಾರೆ.

 

ನಮಗೆ ಕಾರ್ಡು ಅಕೌಂಟು ಕೊಡುವಾಗ ನೀವೇ ಇಂದ್ರ ಚಂದ್ರ ಅಂತೆಲ್ಲಾ ಹೊಗಳಿ, ನಮ್ಮ ಕಾರ್ಡು ತಗೊಳ್ಳಿ, ನಿಮಗೆ ಕತ್ರೀನಾಳ ಜೊತೆ ಡಿನ್ನರ್ರು ಕೊಡ್ತೀವಿ ಅಂತೆಲ್ಲಾ ಆಸೆ ತೋರಿಸಿ ತಮ್ಮ ಪ್ರಾಡಕ್ಟು ಮಾರಿ ಹೋಗ್ತಾರೆ. ಕೊನೆಗೆ ತಿಂಗಳ ಬಿಲ್ ಬಂದಾಗ ನಿಮಗೆ ಅದರಲ್ಲಿನ ಚಾರ್ಜುಗಳನ್ನ ಎಣಿಸಿ ಹೃದಯಾಘಾತವಾಗುವುದೊಂದು ಬಾಕಿಯಿರುವುದು ಸಾಮಾನ್ಯ ತಾನೇ? ಕರೆಮಾಡಿ ದೂರಿದರೆ “ಸಾರ್ ಇವೆಲ್ಲಾ ನಮ್ಮ ಸಾಮಾನ್ಯ ಶುಲ್ಕಗಳು. ಬೇಕಾದರೆ ನಮ್ಮ ಟರ್ಮ್ಸ್ ಅಂಡ್ ಕಂಡೀಷನ್ನಿನ ಪುಟ 46, ಪ್ಯಾರ 3ರ ಹದಿನೇಳನೇ ಸಾಲು ನೋಡಿ. ಇದು ನಮ್ಮ ಸೈಟಲ್ಲೂ ಇದೆ. ನೀವೇ ಒಪ್ಪಿ ಸಹಿಮಾಡಿದ್ದೀರಾ” ಅಂತಾರೆ. ಅಲ್ಲಿರುವ ಸಣ್ಣಕ್ಷರದ ಸಾಲುಗಳನ್ನು ಓದುವ ಬದಲು ನಾರಾಯಣ ನೇತ್ರಾಲಯಕ್ಕೆ ಓಡುವುದೇ ಒಳ್ಳೆಯದು ಎಂದು ಬೇಸ್ತುಬಿದ್ದು ಚಾರ್ಜುಗಳನ್ನೆಲ್ಲಾ ಕಟ್ಟುತ್ತೀರ, ಹೌದು ತಾನೇ?

 

ನಮ್ಮ ಇವತ್ತಿನ ಕಥಾನಾಯಕ ನಮ್ಮನಿಮ್ಮಂತೆಯೇ ಬೇಸ್ತುಬಿದ್ದವನಾದರೂ, ಆತ ನಮ್ಮನಿಮ್ಮಂತೆ ಸುಮ್ಮನೇ ಕೂರಲಿಲ್ಲ. ಬ್ಯಾಂಕಿಗೆ ಅದೇ ರೀತಿಯಲ್ಲಿ ಪಾಠ ಕಲಿಸಿದ. ಇದು 2008ರ ಕಥೆ. ಮಾಸ್ಕೋದ ದಕ್ಷಿಣಕ್ಕೆ 500 ಕಿಮೀ ದೂರದ ವಾರೋನ್ಯೇಷ್ ನಗರವಾಸಿ ಡಿಮಿಟ್ರಿ ಅಗಾರ್ಕೋವ್, ಟಿಂಕಾಫ್ ಕ್ರೆಡಿಟ್ ಸಿಸ್ಟಮ್ ಎಂಬ ಸಂಸ್ಥೆ ತನ್ನ ಕಾರ್ಡುಗಳಲ್ಲಿ ಸೂಪರ್-ಮಾರ್ಕೆಟ್ ಖರೀದಿಗಳ ಮೇಲೆ 30% ಕ್ಯಾಷ್-ಬ್ಯಾಕ್ ಕೊಡ್ತೀವಿ ಎನ್ನುವ ಜಾಹೀರಾತು ನೋಡಿ ಆಸೆಯಿಂದ ಕೊಂಡ. ಮೊದಲ ತಿಂಗಳ ಬಿಲ್ ನೋಡಿದವನೇ ಹೌಹಾರಿ 30% ಕ್ಯಾಷ್-ಬ್ಯಾಕ್ ಯಾಕೆ ಕೊಟ್ಟಿಲ್ಲ ಎಂದು ಬ್ಯಾಂಕಿಗೆ ಫೋನಾಯಿಸಿದರೆ, ಆ ಆಫರ್ ಆಗ ಇತ್ತು, ಈಗಿಲ್ಲ ಎಂಬ ಉತ್ತರ ಬಂತು. ಮುಂದಿನ ತಿಂಗಳ ಬಿಲ್ ಕಟ್ಟಲು ಮರೆತವನಿಗೆ ಮೂರನೇ ತಿಂಗಳ ಬಿಲ್ಲಿನಲ್ಲಿ 45% ಬಡ್ಡಿ ಹಾಕಿದ್ದು ನೋಡಿ ಗಾಬರಿಯಾಗಿ ಬ್ಯಾಂಕಿಗೆ ಎಡತಾಕಿ ನಿಮ್ಮ ಜಾಹೀರಾತಿನಲ್ಲಿ 12.9% ಬಡ್ಡಿದರ ಇತ್ತು, ಇದ್ಯಾಕೆ ಇಲ್ಲಿ 45% ಹಾಕಿದ್ದೀರಿ ಎಂದು ಕೇಳಿದವನಿಗೆ ಏನೇನೋ ತಿರುವು-ಮುರುವು ಉತ್ತರ ಕೊಟ್ಟ ಬ್ಯಾಂಕಿನವರ ಮೇಲೆ ತಾಳಲಾರದ ಕೋಪಬಂತು. “ಹಾಗಾದರೆ ನನಗೀ ಕಾರ್ಡ್ ಬೇಡ. ಕಾರ್ಡ್ ರದ್ದುಮಾಡಿ” ಎಂದದ್ದಕ್ಕೆ, “ಇಲ್ಲ ಎರಡು ವರ್ಷದ ಕಮಿಟ್ಮೆಂಟ್ ಇದೆ. ಕಾರ್ಡ್ ತೆಗೆದುಕೊಂಡವರು ಎರಡು ವರ್ಷದೊಳಗೆ ರದ್ದು ಮಾಡಿದರೆ ಇಷ್ಟು ರೂಬಲ್ ಶುಲ್ಕವಿದೆ” ಎಂದರು. “ಇದು ಮೋಸ ಕಣ್ರೀ” ಎಂದು ಬ್ಯಾಂಕಿನವರೆಡೆಗೆ ಘರ್ಜಿಸಿದವನಿಗೆ “ನೋಡಿ ಸಾರ್ ಇಲ್ಲಿ ಈ ಪುಟ, ಈ ಸಾಲಿನಲ್ಲಿ ನಾವು ಬರೆದಿದ್ದೇವೆ 45% ಬಡ್ಡಿ, ಎರಡು ವರ್ಷದ ಕಮಿಟ್ಮೆಂಟು ಅಂತಾ” ಎಂದು ಬ್ಯಾಂಕಿನವರು ಮರುಘರ್ಜಿಸಿ ಅಗಾರ್ಕೋವ್’ನನ್ನು ಸುಮ್ಮನಾಗಿಸಿದರು. “ಇದನ್ನೆಲ್ಲಾ ಯಾರು ಓದ್ತಾರೆ ಸಾರ್” ಎಂದು ಮೆತ್ತಗಾದವನಿಗೆ “ಓದಬೇಕು ಸಾರ್. ಸೈನ್ ಮಾಡುವ ಮೊದಲು ಎಲ್ಲವನ್ನೂ ಓದಬೇಕು” ಎಂದು ಮತ್ತಷ್ಟು ಚಪಾತಿ ಮಾಡಿ ಸಾಗಹಾಕಿದರು.

ಟೀಂಕಾಫ್ ಕ್ರೆಡಿಟ್ ಸಿಸ್ಟಮ್ ಕಂಪನಿಗೆ ಕಹಿಗುಳಿಗೆ ನಂದಿಸಿದ ಡಿಮಿಟ್ರಿ ಆರ್ಗಾಕೋವ್

ನಾಗರಹಾವಿನ ರಾಮಾಚಾರಿಯಂತೆ ಬುಸುಗುಡುತ್ತಾ ಮನೆಗೆಬಂದ ಆಗಾರ್ಕೋವ್ ಮುಂದಿನ ಆರುತಿಂಗಳು ಕೂತು ಬ್ಯಾಂಕಿನವರ ತರಹದ್ದೇ ಒಂದು ಕರಾರುಪತ್ರ ತಯಾರಿಸಿದ. ಅಕ್ಷರವಿನ್ಯಾಸ, ಪೇಪರಿನ ಬಣ್ಣ, ಎಲ್ಲಿ ಅಂಡರ್ಲೈನ್, ಐಟಲಿಕ್ಸ್, ಬೋಲ್ಡ್ ಇತ್ತೋ ಎಲ್ಲವನ್ನೂ ಯಥಾವತ್ತಾಗಿ ವಿನ್ಯಾಸ ಮಾಡಿದ. ಅದರಲ್ಲಿ ತನ್ನದೇ ಆದ ಬಡ್ಡಿದರ, ರದ್ದತಿದರ, ಇತ್ಯಾದಿಗಳನ್ನು ಚಂದವಾಗಿ ಬರೆದ. ಅದೂ ಹೇಗೆ ಅಂತೀರಿ! ಈ ಕಾರ್ಡ್ ತೆಗೆದುಕೊಂಡವರಿಗೆ ಯಾವುದೇ ವಾರ್ಷಿಕಶುಲ್ಕ ಇರುವುದಿಲ್ಲ. ಅನಿಯಮಿತ ಸಾಲ ಸೌಲಭ್ಯವಿದೆ. ಬಡ್ಡಿ, ಕಮಿಷನ್ ಹಾಗೂ ತಡಪಾವತಿ ಶುಲ್ಕ ಸೊನ್ನೆ. ಮಾತ್ರವಲ್ಲ ಬ್ಯಾಂಕ್ ಏನಾದರೂ ಈ ಕಾರ್ಡನ್ನು ರದ್ದುಗೊಳಿಸಿದರೆ ಗ್ರಾಹಕನಿಗೆ ಆರುಮಿಲಿಯನ್ ರೂಬಲ್ (ಸುಮಾರು 1,81,000 ಡಾಲರ್) ಪರಿಹಾರಧನ ಕೊಡುವುದಾಗಿ, ಅವರದೇ ಒಪ್ಪಂದದಲ್ಲಿರುವಂತೆ ಸಣ್ಣ ಅಕ್ಷರಗಳಲ್ಲಿ ಬರೆದ. ಬ್ಯಾಂಕಿನ ವೆಬ್ಸೈಟ್ ಹೆಸರು ಮತ್ತು ವಿನ್ಯಾಸದ್ದೇ ಒಂದು ಡೊಮೈನ್ ಮಾಡಿ, ಅಲ್ಲೂ ಎಲ್ಲಾ ಆಫರ್ ಹಾಗೂ ಕರಾರುಗಳನ್ನು ಬರೆದಿಟ್ಟ. ಅದಾದಮೇಲೆ ಬ್ಯಾಂಕಿನಲ್ಲಿ ಕಾರ್ಡ್ ಒಂದಕ್ಕೆ ಅರ್ಜಿ ಹಾಕಿ, ಅದರ ದಸ್ತಾವೇಜುಗಳನ್ನು ಸಹಿಮಾಡುವಾಗ ಅವರ ಕರಾರು ಕೈಪಿಡಿಯ ಬದಲು, ತಾನೇ ತಯಾರುಮಾಡಿದ ಕೈಪಿಡಿಯನ್ನು ಸೇರಿಸಿದ. ನಾವು ಹೇಗೆ ಬ್ಯಾಂಕಿನ ಕಾಗದಗಳನ್ನು ಓದದೇ ಸೈನ್ ಮಾಡುತ್ತೇವೆಯೋ….ಹಾಗೆಯೇ ಬ್ಯಾಂಕು ಕೂಡಾ ತನ್ನ ದಾಖಲೆಗಳನ್ನು ಓದದೇ ಸೈನ್ ಮಾಡಿತು. ಅಲ್ಲಿಗೆ ನಮ್ಮ ಹೀರೋನ ಮೊದಲ ವಿಜಯ ಕೈಗೆ ಬಂತು.

 

ಮುಂದಿನ ಎರಡು ವರ್ಷ ಡಿಮಿಟ್ರಿ ಅಗಾರ್ಕೋವ್ ತನ್ನ ಕಾರ್ಡನ್ನು ಉಜ್ಜಿದ್ದೇ ಉಜ್ಜಿದ್ದು. ಆದರೆ ಎಷ್ಟಂದರೂ ನಮ್ಮ ಹೀರೋ ಹೀರೋನೇ. ಯಾಕೆಂದರೆ ಆತ ಪುಗಸಟ್ಟೆ ಕಾರ್ಡ್ ಸಿಕ್ಕಿತೆಂದು ಸೀದಾ ಹೋಗಿ ಗುಚ್ಚಿ, ಪ್ರಾಡಾ, ಶನೆಲ್ ಪ್ರಾಡಕ್ಟುಗಳನ್ನೇನೂ ಕೊಳ್ಲಲಿಲ್ಲ. ಕ್ಲಬ್ಬಿಗೆ ಹೋಗಿ ಮಜಾ ಮಾಡಲಿಲ್ಲ. ಯಾವರೀತಿಯ ಹೊಸಾ ಖರ್ಚನ್ನೂ ಮಾಡದೇ ತನ್ನ ತಿಂಗಳ ನಾರ್ಮಲ್ ಖರ್ಚುಗಳೇನಿವೆ ಅಷ್ಟು ಮಾತ್ರ ನಿಭಾಯಿಸಿದ. ಆ ಕಾರ್ಡ್ ಬಳಸಿ ದಿನಸಿ ತಂದ, ಸಿನಿಮಾ ನೋಡಿದ, ತನ್ನ ದೈನಂದಿನ ಹೋಟೆಲಿನಲ್ಲಿ ಊಟಮಾಡಿದ, ವೋಡ್ಕಾ-ಬಿಯರ್ ಕುಡಿದ, ಕರೆಂಟ್ ಬಿಲ್ ಕಟ್ಟಿದ, ಕಾರಿಗೆ ಪೆಟ್ರೋಲ್ ಹಾಕಿಸಿದ, ಅಮ್ಮನ ಮನೆಗೆ ಹೋಗಲು ಟಿಕೇಟು ಖರೀದಿಸಿದ. ಹೀಗೇ ಅವನ ಜೀವನ ಹೇಗೆ ಇತ್ತೋ ಹಾಗೇ ಇತ್ತು. ಆದರೆ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲಿಲ್ಲ ಅಷ್ಟೇ. ಆರುತಿಂಗಳ ನಂತರ ಕಾರ್ಡಿನ ಬಿಲ್ ಕಟ್ಟಲು ಬ್ಯಾಂಕಿನಿಂದ ನೋಟೀಸ್ ಬರಲಾರಂಭಿಸಿತು. ಸುಮ್ಮನೇ ತೆಗೆದುಬದಿಗಿಟ್ಟ. ಜೀವನ ಮುಂದುವರೆಸಿದ.

 

2010ರಲ್ಲಿ ಲಾಯರ್ ನೋಟೀಸ್ ಬಂತು. ಟಿಂಕಾಫ್ ನಮ್ಮ ನಾಯಕನಿಗೆ ಕಾರ್ಡಿನ ಬಿಲ್ಲು ಹಾಗೂ ತಡಪಾವತಿ ಶುಲ್ಕಗಳನ್ನೆಲ್ಲಾ ಸೇರಿಸಿ 45,000 ರೂಬಲ್ ಕಟ್ಟು, ಇಲ್ಲವಾದಲ್ಲಿ ಕೋರ್ಟಿಗೆ ಬಾ ಎಂದು ಬೆದರಿಸಿತು. ಆಗಾರ್ಕೋವ್ ತಣ್ಣಗೆ ನಾನು ಯಾವ ಶುಲ್ಕವನ್ನೂ ಕಟ್ಟುವ ಅಗತ್ಯವಿಲ್ಲ ಎಂದು ಹೇಳಿ ಕರಾರು ಕೈಪಿಡಿಯನ್ನು ಕೋರ್ಟಿನ ಕೈಯಲ್ಲಿಟ್ಟ. ಬೇಕಾದರೆ ಆ ಕೈಪಿಡಿಯ ಫುಟರಿನಲ್ಲಿರುವ ಬ್ಯಾಂಕ್ ಸೈಟಿಗೆ ಹೋಗಿ ನೋಡಿ, ಅಲ್ಲೂ ಇದೇ ಕರಾರುಗಳಿವೆ ಎಂದ. ಕೋರ್ಟ್ ಅದನ್ನೂ ನೋಡಿ “ಹೌದು ನಿಮ್ಮ ವಾದ ಸರಿಯಿದೆ” ಎಂದು ಹೇಳಿ “ಬಡ್ಡಿ, ತಡಪಾವತಿಶುಲ್ಕಗಳೆಲ್ಲಾ ಬೇಡ, ನೀನು ಕೊಂಡಿರುವ ವಸ್ತುಗಳ ಬಿಲ್ ಏನಿದೆ ಆ 19,000 ರೂಬಲ್ಲುಗಳನ್ನು ಪಾವತಿಸು” ಎಂದಿತು.

 

ಬ್ಯಾಂಕಿನವರಿಗೆ ಆಘಾತ!! “ಅಲ್ಲಾ ಸಾರ್, ಇದು ಫೋರ್ಜರಿ ದಾಖಲೆ” ಎಂದರು. ಬ್ಯಾಂಕಿನ ಅಧಿಕಾರಿಗೆ ನ್ಯಾಯಾಧೀಶರು “ಇಲ್ಲಿ ಸಹಿ ಮಾಡಿರುವುದು ನೀವೇ ತಾನೇ, ಈ ಸೀಲು ಇಲ್ಲಿರುವ ದಿನಾಂಕ ಎಲ್ಲವೂ ನಿಮ್ಮ ಕಾಪಿಯಲ್ಲೂ ಇದೆ ತಾನೆ? ಹಾಗಿದ್ದ ಮೇಲಿದು ಪೋರ್ಜರಿ ಹೇಗೆ?” ಎಂದು ಕೇಳಿ ಫೋರ್ಜರಿ ಕೇಸನ್ನು ಖುಲಾಸೆ ಮಾಡಿದರು. “ಸರ್, ಇದು ಮೋಸ. ಆತ ಬ್ಯಾಂಕಿನ ದಾಖಲೆಗಳನ್ನು ಬದಲಿಸಿದ್ದಾನೆ” ಎಂದು ಆರೋಪಿಸಿ ಇನ್ನೊಂದು ಕೇಸು ಜಡಿದರು. ಅದಕ್ಕೆ ಜಡ್ಜ್ “ನೀವು ಮುಂದಿಟ್ಟ ಒಪ್ಪಂದವನ್ನು ಆತ ಬದಲಿಸಿದ್ದರೂ, ಆ ಬದಲಾದ ಒಪ್ಪಂದಕ್ಕೆ ಎರಡೂ ಪಾರ್ಟಿಗಳು ಒಪ್ಪಿ ಸಹಿಮಾಡಿದ ಮೇಲೆ ಅದು ಅಸಲಿ ಒಪ್ಪಂದವೇ. ಈ ಕರಾರಿನಲ್ಲಿರುವುದು ನಿಮ್ಮ ಅಸಲಿ ಸಹಿ ಮತ್ತು ಸೀಲು ತಾನೇ? ಅಸಲಿ ಅಲ್ಲವಾದರೆ ಹೇಳಿ. ಫೋರ್ಜರಿ ಕೇಸು ದಾಖಲಿಸುವ” ಎಂದು ಕೇಳಿ ಬ್ಯಾಂಕಿನ ಬಾಯ್ಮುಚ್ಚಿಸಿದರು. “ಅದು ಸರ್, ನಾವು ನೋಡದೇ ಸಹಿ ಮಾಡಿಬಿಟ್ಟೆವು ಸರ್” ಎಂದ ಬ್ಯಾಂಕಿಗೆ, ಜಡ್ಜ್ “ಓದಬೇಕು ಸಾರ್. ಸೈನ್ ಮಾಡುವ ಮೊದಲು ಎಲ್ಲವನ್ನೂ ಓದಬೇಕು” ಎಂದು ಹೇಳಿ, “ಕೋರ್ಟಿನ ಸಮಯ ಬರ್ಬಾದು ಮಾಡಬೇಡಿ ಹೋಗಿ” ಅಂತಾ ಬೈದು ಕಳಿಸಿದರು.

 

19,000ಸಾವಿರ ರೂಬಲ್ ಪಡೆದು ಪೆಚ್ಚುಮೋರೆ ಹಾಕಿಕೊಂಡ ಬ್ಯಾಂಕ್, ತಕ್ಷಣವೇ ಆ ಕಾರ್ಡನ್ನು ರದ್ದು ಮಾಡಿತು. ಇದಾದ ಎರಡೇ ತಿಂಗಳಿಗೆ ಆಗಾರ್ಕೋವ್, ಕಾರ್ಡ್ ರದ್ದು ಮಾಡಿದ್ದಕ್ಕಾಗಿ (ಹಳೆಯ ಕರಾರಿನಂತೆ) 6 ಮಿಲಿಯನ್ ರೂಬಲ್, ಹಾಗೂ ತನ್ನನ್ನು ಸುಖಾಸುಮ್ಮನೇ ಕೋರ್ಟಿಗೆ ಎಳೆದದ್ದಕ್ಕೆ ಪರಿಹಾರವಾಗಿ 18 ಮಿಲಿಯನ್ ರೂಬಲ್, ಒಟ್ಟು 24 ಮಿಲಿಯನ್ ರೂಬಲ್ ಕೇಳಿ ಬ್ಯಾಂಕಿಗೆ ಲಾಯರ್ ನೋಟೀಸ್ ಕಳುಹಿಸಿದ. ತೀರ್ಪು ಆಗಾರ್ಕೋವನ ಪರವಾಗಿಯೇ ಬಂತು. “ನಾನು ಬ್ಯಾಂಕಿನವರಷ್ಟು ಕೆಳಮಟ್ಟಕ್ಕಿಳಿಯುವುದಿಲ್ಲ. ಅವರಿಗೆ ಪಾಠ ಕಲಿಸಕ್ಕಷ್ಟೇ ನಾನಿದನ್ನು ಮಾಡಿದ್ದು, ಹಣಕ್ಕಲ್ಲ” ಅಂತಾ ಹೇಳಿ ಆಗಾರ್ಕೋವ್ ತನ್ನ ಕೇಸ್ ವಾಪಾಸ್ ಪಡೆದ.

 

“ಇದನ್ನು ಹೀಗೇ ಬಿಡುವುದಿಲ್ಲ. ಇದೀಗ ನೈತಿಕತೆಯ ಪ್ರಶ್ನೆ. ಇದೀಗ ಬ್ಯಾಂಕ್ ವಂಚನೆಯ ಪ್ರಕರಣ” ಎಂದು ಕಿಡಿಕಾರಿದ್ದ ಟಿಂಕಾಫ್’ನ ಸಿಇಓ ಕೊನೆಗೆ ಕೋರ್ಟಿನ ಹೊರಗೆ ಸೆಟಲ್ಮೆಂಟ್ ಮಾಡಿಕೊಂಡ. ತಾವು ಮಾಡಿದರೆ ನಿಯಮಬದ್ದ ಎನ್ನುವ ಬ್ಯಾಂಕುಗಳು, ಅದೇ ತಮಗೆ ಮೋಸವಾದರೆ ನೈತಿಕತೆಯ ವರಸೆ ಹಿಡಿದದ್ದು ಎಂತಾ ತಮಾಷೆಯಲ್ಲವೇ. ಒಟ್ಟಿನಲ್ಲಿ ಬ್ಯಾಂಕಿನವರ ಕಹಿಗುಳಿಗೆಯನ್ನು ಕಾನೂನಿನ ಚೌಕಟ್ಟಿನಲ್ಲೇ ಅವರಿಗೆ ತಿನ್ನಿಸಿ ನೀರುಕುಡಿಸಿದ ಸಾಮಾನ್ಯರಲ್ಲಿ ಅಸಾಮಾನ್ಯ ಡಿಮಿಟ್ರಿಗೊಂದು ಶಭಾಷ್ ಹೇಳಲೇಬೇಕು.

 

0 comments on ““ಗ್ರಾಹಕನ ರಕ್ತಹೀರುವ ಬ್ಯಾಂಕಿಗೆ ಡಿಚ್ಚಿ ಕೊಟ್ಟ ಡಿಮಿಟ್ರಿ”

Leave a Reply

Your email address will not be published. Required fields are marked *