Saturday, 27 April, 2024

ಸೆಕ್ಯುಲರಿಸಮ್ಮಿನ ರೋಗ ಅಂಟದೆಯೇ ಮುಗಿದ, G20 ಶೃಂಗಸಭೆ

Share post

ಮನುಷ್ಯ ಮೂಲತಃ ಸಂಘಜೀವಿಯಾದರೂ, ಬೆಳೆದಂತೆಲ್ಲಾ ಆತನಿಗೆ ತನ್ನದೇ ಒಂದು ಅಸ್ಮಿತೆಯನ್ನು ರೂಪಿಸಿಕೊಳ್ಳುವ ಅಗತ್ಯ ಮತ್ತೆ ಮತ್ತೆ ಕಂಡುಬರುತ್ತದೆ. ಮೊತ್ತಮೊದಲ ನಾಗರೀಕತೆ, ಮನುಷ್ಯರನ್ನು ಒಂದುಗೂಡಿಸಿದರೂ ಸಹ, ಎರಡು ನಾಗರೀಕತೆಗಳು ಮುಖಾಮುಖಿಯಾದಾಗ, ನಿಧಾನಕ್ಕೆ ಅಸೂಯೆಯೋ, ಶಕ್ತಿಯ ಅಗತ್ಯತೆಯೋ ಮೇಲುಗೈ ಸಾಧಿಸಿ ನಿನಗಿಂತಾ ನಾನು ಕಡಿಮೆಯಿಲ್ಲ ಎಂದು ತೋರಿಸುವ ಚಾಳಿಗೆ ಎಲ್ಲರೂ ಬಿದ್ದವರೇ. ಮೊದಲಿನ ನಾಗರೀಕತೆಗಳಲ್ಲಿ ತನಗೆ ಕಂಡಿದ್ದೆಲ್ಲಾ ಮತ್ತು ತನಗೆ ಬೇಕಾದದ್ದೆಲ್ಲಾ ನನ್ನದೇ ಎಂಬ ಮನೋಭಾವವೇ ಮೊದಲಾಗಿದ್ದರಿಂದ, ಅಲ್ಲಿ ಮಾತುಕತೆಯ ಸಂಧರ್ಭವೇ ಬಿದ್ದಿರಲಿಕ್ಕಿಲ್ಲ. ಆದರೆ ಯಾರೋ ಒಬ್ಬ ರಾಜ “ಸುಖಾಸುಮ್ಮನೇ ಒಂದಷ್ಟು ಜೀವಗಳನ್ನು ಬಲಿಕೊಡುವುದು ಬೇಡ, ಇದನ್ನು ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ” ಅಂತಲೋ, “ನನ್ನ ಬಳಿ ಅವನಷ್ಟು ದೊಡ್ಡ ಸೈನ್ಯವಿಲ್ಲ, ಆದರೆ ಸೋಲಲೂ ನನಗಿಷ್ಟವಿಲ್ಲ, ಇದನ್ನು ಹೇಗೆ ಬಗೆಹರಿಸಿಕೊಳ್ಳೋದು” ಅಂತಲೋ ಯೋಚಿಸಿದಾಗ ರಾಜತಾಂತ್ರಿಕತೆ ಎಂಬುದು ಅಧಿಕೃತವಾಗಿ ಹುಟ್ಟಿಕೊಂಡಿತು. ಆದರೂ ಎಲ್ಲಾ ಸಂಸ್ಕೃತಿಗಳಲ್ಲೂ ಕೃಷ್ಣಸಂಧಾನದ ಕಥೆ ಇರುವುದಿಲ್ಲವಾದ್ದರಿಂದ, ಎರಡನೇ ಮಹಾಯುದ್ಧ ಮುಗಿಯುವವರೆಗೂ ಶತ್ರುವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲಿಕ್ಕೆ ಹೆಚ್ಚಾಗಿ ಬಳಕೆಯಾದದ್ದು ದೈಹಿಕ ಶಕ್ತಿಯೇ. ಹದಿನಾರನೇ ಶತಮಾನದವರೆಗೂ, ವಿಜ್ಞಾನ-ತಂತ್ರಜ್ಞಾನಗಳು ಯುದ್ಧರಂಗಕ್ಕೆ ಕಾಲಿಡುವವರೆಗೂ, ರಾಜತಾಂತ್ರಿಕತೆಯೆಂಬುದು ಅಲ್ಲಲ್ಲಿ, ಆಗಾಗ, ಯುದ್ಧದ ಮೊದಲು ಹಾಗೂ ಕೊನೆಯ ಹಂತದಲ್ಲಷ್ಟೇ ಬಳಕೆಯಾಗುತ್ತಿದ್ದ ಪದ ಮತ್ತು ತಂತ್ರ.

 

ಮೊದಲ ಅಣುಬಾಂಬ್ ಸ್ಪೋಟವಾದ ನಂತರ, ಅದರ ವಿನಾಶಕ ಶಕ್ತಿಯ ಅಗಾಧತೆಯ ಅಂದಾಜು ಮನುಷ್ಯನಿಗೆ ಸರಿಯಾಗಿ ತಿಳಿದ ದಿನ ಇಡೀ ಮನುಕುಲ ಒಂದು ಕ್ಷಣ ಅವಕ್ಕಾಗಿ ನಿಂತಿತು. ಮರುಕ್ಷಣವೇ ಸುಧಾರಿಸಿಕೊಂಡು, ಅಲ್ಲಿಂದ ಮುಂದಿನ ಮೂವತ್ತು ವರ್ಷಗಳಲ್ಲಿ ತಮ್ಮ ಮಿಲಿಟರಿಯನ್ನು ಅಣುಬಾಂಬುಗಳ ದಾಸ್ತಾನನ್ನು ವರ್ಷದಿಂದ ವರ್ಷಕ್ಕೆ ನೂರು, ಮುನ್ನೂರು, ಐನೂರು, ಸಾವಿರ ಪಟ್ಟು ಹೆಚ್ಚಿಸಿಕೊಂಡು, ಪರಸ್ಪರರ ವಿರುದ್ಧ ಗುರಿಯಾಗಿಟ್ಟುಕೊಂಡು ನಿಂತವು. ಇವತ್ತಿನ ಲೆಕ್ಕದ ಪ್ರಕಾರ ಜಗತ್ತಿನಲ್ಲಿ ಒಟ್ಟು ಇರುವ ಅಣುಬಾಂಬುಗಳ ಸಂಖ್ಯೆ 12,512. ಅದರಲ್ಲಿ 5,889 ಬಾಂಬುಗಳು ರಷ್ಯಾದ ಬಳಿಯಿದ್ದರೆ, 5,244 ಬಾಂಬುಗಳು ಅಮೇರಿಕದ ಬಳಿಯಿವೆ. ಉಳಿದ 1,379 ಬಾಂಬುಗಳು ಏಳು ದೇಶಗಳ ನಡುವೆ ಹಂಚಿಹೋಗಿವೆ. ಹಾಗೂ ಈ ಬಾಂಬುಗಳಲ್ಲಿ 85ರಿಂದ 90%, ಕ್ಷಿಪಣಿಯೊಂದರ ತಲೆಯಲ್ಲಿ ಕೂತಾಗಿದೆ. ಅದರ ಗುರಿ ಯಾವುದೆಂದೂ ನಿರ್ಧಾರವಾಗಿಯಾಗಿದೆ. ಗುಂಡಿಯೊತ್ತಿದರೆ ತಡವಿಲ್ಲದೇ ಹೊರಟು ಜಗತ್ತಿನ ಯಾವುದೋ ನಿರ್ಧಾರಿತ ಮೂಲೆಯಿಂದಕ್ಕೆ ತಲುಪಿ ನರಬಲಿ ಪಡೆಯಲಿಕ್ಕೆ ತಯಾರಾಗಿವೆ. ಆದರೆ ಯಾರೂ ಮೊದಲ ಬಾಂಬನ್ನು ಹಾರಿಸಲು ಸಧ್ಯಕ್ಕೆ ಮುಂದಾಗಿಲ್ಲ. ಇಡೀ ಜಗತ್ತೇ ಒಂದುರೀತಿಯಲ್ಲಿ ಮೆಕ್ಸಿಕನ್ ಸ್ಟ್ಯಾಂಡ್-ಆಫ್ (ಮೂರು ಜನ ಶತ್ರುಗಳು, ಎರಡೂ ಕೈಯಲ್ಲಿ ಒಂದೊಂದು ಬಂದೂಕುಗಳನ್ನು ಹಿಡಿದು, ಉಳಿದಿಬ್ಬರ ಕಡೆ ಗುರಿಮಾಡಿ ನಿಂತಿರುವ) ಪರಿಸ್ಥಿತಿಯಲ್ಲಿದೆ.

 

 

ಮಿಲಿಟರಿ ಶಕ್ತಿಯಲ್ಲಿ ಮೇಲುಗೈ ಸಾಧಿಸಿರುವ ಅಮೇರಿಕಾ, ನೇಟೋ ರಾಷ್ಟ್ರಗಳು, ರಷ್ಯಾ, ಚೀನಾದಂತಹ ರಾಷ್ಟ್ರಗಳು ತಮ್ಮ ಆಯುಧಶಕ್ತಿಯನ್ನು ತೋರಿಸಿ, ಉಳಿದ ದೇಶಗಳನ್ನು ಹೆದರಿಸಿ ತಮ್ಮ ಅಂಕೆಯಲ್ಲಿಟ್ಟುಕೊಳ್ಳುತ್ತವೆ. ಜೊತೆಗೇ ಪಾಕಿಸ್ಥಾನ ಮತ್ತು ಉತ್ತರ ಕೊರಿಯಾ ಬಿಟ್ಟರೆ ಉಳಿದೆಲ್ಲಾ ಅಣುಶಕ್ತಿ ರಾಷ್ಟ್ರಗಳೂ ಜಗತ್ತಿನ ಆರ್ಥಿಕ ಹೆವಿ-ವೈಟುಗಳೇ. ಈ ಶಕ್ತಿಯೊಂದಿಗೆ ಈ ದೇಶಗಳು ಬೇರೆ ರಾಷ್ಟಗಳ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವ ಅಥವಾ ಆರ್ಥಿಕ ಪ್ರೋತ್ಸಾಹವನ್ನು ನೀಡುವ ಸಾಮರ್ಥ್ಯವನ್ನೂ ಹೊಂದಿವೆ. ಈ ಮಿಲಿಟರಿ ಮತ್ತು ಆರ್ಥಿಕ ಬಲಗಳು, ಮೂರನೇ ಬಲವೊಂದನ್ನು ಉಡುಗೊರೆಯಾಗಿ ನೀಡುತ್ತವೆ. ಅದೇ ರಾಜಕೀಯ ಪ್ರಭಾವಬಲ. ಮೊದಲಿನೆರದಡು ಶಕ್ತಿಗಳನ್ನು ಬಳಸಿ, ಬೇರೆ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಮೈತ್ರಿಕೂಟಗಳನ್ನು ಕಟ್ಟಿಕೊಂಡು, ಜಗತ್ತನ್ನು ನಿಯಂತ್ರಿಸಲು ಮುಂದಾಗುತ್ತವೆ. ಈ ಮೂರೂಬಲಗಳನ್ನು ಅಂದರೆ ಮಿಲಿಟರಿ, ಆರ್ಥಿಕ ಮತ್ತು ರಾಜಕೀಯ ಬಲಗಳನ್ನು ಹಾರ್ಡ್ ಪವರ್ ಎಂದು ಕರೆಯಲಾಗುತ್ತದೆ.

 

 

ಆದರೆ ಕೇವಲ ಮಿಲಿಟರಿ ಶಕ್ತಿಯನ್ನಷ್ಟೇ ನಂಬಿಕೊಳ್ಳದೇ, ಅಥವಾ ಅದರಲ್ಲಿ ನಂಬಿಕೆಯಿಡದ ದೇಶಗಳು ಏನು ಮಾಡಬಹುದು? ಹಾರ್ಡ್ ಪವರ್ ತೋರಿಸಿ ಹೆದರಿಸುವ ದೇಶಗಳ ಅಡಿಯಾಳಾಗದೇ ಬದುಕುವುದು ಹೇಗೆ? ಯೂರೋಪನ್ನೇ ಅಲ್ಲಾಡಿಸಿದ ಎರಡು ಮಹಾಯುದ್ಧಗಳ ನಡುವೆಯೂ ಸ್ವಿಟ್ಝರ್ಲ್ಯಾಂಡ್ ಹೇಗೆ ಬದುಕುಳಿಯಿತು? ಒಂದೇ ಒಂದು ಅಣುಬಾಂಬ್ ತನ್ನ ಬಳಿಯಿರದ ಜಪಾನ್, ದಕ್ಷಿಣಕೊರಿಯಾ, ನಾರ್ವೆಯಂತಹಾ ರಾಷ್ಟ್ರಗಳು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು, ಬೇರೆ ರಾಷ್ಟ್ರಗಳಿಂದ ನಂಬಿಕೆ ಮತ್ತು ಗೌರವ ಪಡೆಯಲು ಏನುಮಾಡಿವೆ? ಜಗತ್ತಿನ ಹಲವಾರು ದೇಶಗಳು ಈ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಂಡಿವೆ ಮತ್ತು ಈ ನಿಟ್ಟಿನಲ್ಲಿ ಕೆಲಸವನ್ನೂ ಮಾಡಿವೆ. ಜಗಳಗಂಟ ಹಾರ್ಡ್ ಪವರ್ ರಾಷ್ಟ್ರಗಳಿಗೆ ಬಗ್ಗದೇ ನಿಂತು, ಅವರಷ್ಟು ಮಿಲಿಟರಿಬಲವಿಲ್ಲದೆಯೂ ಜಗತ್ತಿನ ಮೇಲೆ ತಮ್ಮದೇ ಆದ ಪ್ರಭಾವ ಬೀರಿ, ಜಗತ್ತಿನಾದ್ಯಂತ ಜನಪ್ರಿಯವಾಗುಳಿಯುವ ಈ ತಂತ್ರಕ್ಕೆ ‘ಸಾಫ್ಟ್ ಪವರ್’ ಎನ್ನುತ್ತಾರೆ. ಈ ಸಾಫ್ಟ್ ಪವರ್ರಿನ ಆಟಕ್ಕೆ ಬಹುಷಃ ಅತ್ಯುತ್ತಮ ಉದಾಹರಣೆಯೆಂದರೆ ಜಪಾನ್ ಮತ್ತು ಕೊರಿಯಾ. ಒಂದುಕಾಲದಲ್ಲಿ ಅಮೇರಿಕಾದ ಮುಂದೆ ಕಾಲೂರಬೇಕಾಗಿ ಬಂದರೂ ಜಪಾನ್ ಎದ್ದುನಿಂತ ರೀತಿ ಅನೂಹ್ಯ. ಬರೀ ಎದ್ದುನಿಂತದ್ದು ಮಾತ್ರವಲ್ಲ, ಜಪಾನ್ ಮುಂದಿನ ನಲವತ್ತು ವರ್ಷಗಳಲ್ಲಿ ತನ್ನ ಸಮಾಜದಲ್ಲೇ ಅದೆಂತಾ ಬದಲಾವಣೆಯನ್ನು ತಂದಿತೆಂದರೆ, ಅಮೇರಿಕನ್ನರೇ ಜಪಾನಿಗಳನ್ನು ಕಂಡಲ್ಲಿ ನಿಂತು ನಮಸ್ಕರಿಸುವಷ್ಟು. ಜಪಾನ್ ತನ್ನ ಶಕ್ತಿಗಳನ್ನು ಅರಿತುಕೊಂಡು, ಅದರೆಡೆಗೆ ತನ್ನೆಲ್ಲಾ ಪ್ರಯತ್ನಗಳನ್ನು ಕ್ರೋಡೀಕರಿಸಿ ಮುನ್ನುಗ್ಗಿತು. ಕಳೆದ ಅರವತ್ತು ವರ್ಷಗಳಲ್ಲಿ ಜಪಾನ್ ಎಲ್ಲೂ ಯಾವ ದೇಶವನ್ನೂ ಆಕ್ರಮಿಸಲಿಲ್ಲ, ಗಡಿವಿಚಾರದಲ್ಲಿ ಹೊಸ ಕ್ಯಾತೆ ತೆಗೆಯಲಿಲ್ಲ, ನನ್ನನ್ನು ಗೌರವಿಸಿ ನನಗೆ ಸಹಾಯ ಕೊಡಿ ಎಂದು ಬೇಡಿಕೊಳ್ಳಲಿಲ್ಲ. ತಾಂತ್ರಿಕವಾಗಿ, ಸಾಮಾಜಿಕವಾಗಿ ಹೊಸರೀತಿಯಲ್ಲಿ ಎದ್ದುನಿಂತ ಜಪಾನ್, ಬದುಕುವ ಹೊಸದೊಂದು ದಾರಿಯನ್ನೇ ಜಗತ್ತಿಗೆ ತೋರಿಸಿಕೊಟ್ಟಿತು. ತನ್ನ ಮಿಲಿಟರಿ ಬಲವನ್ನು ಬಳಸಿ ಹೆದರಿಸುವ ಅಮೇರಿಕ ರಷ್ಯಾಗಳ ನಡುವೆ, ಜಪಾನ್ ತನ್ನ ತಾಂತ್ರಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕಲಾತ್ಮಕ ಮತ್ತು ರಾಜತಾಂತ್ರಿಕ ಮಜಲುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತನ್ನದೇ ಆದ ಪ್ರಭಾವಲಯವನ್ನು ಬೆಳೆಸಿಕೊಂಡಿತು. ಜಪಾನಿ ಸಿನಿಮಾಗಳು, ಕಾರು ಮತ್ತು ಎಲೆಕ್ಟ್ರಾನಿಕ್ಸ್ ಸರಕುಗಳು, ತನ್ನ ಅನಿಮೆ ಮತ್ತು ಮಾಂಗಾ ಕಾಮಿಕ್ಸುಗಳು, ಜೆ-ಪಾಪ್ ಸಂಗೀತಪ್ರಕಾರ, ಎಲ್ಲರನ್ನೂ ಗೌರವದಿಂದ ಕಾಣುವ ಮತ್ತು ತನ್ನದಲ್ಲದ ಊರಲ್ಲೂ ಸ್ವಚ್ಛತೆಯನ್ನು ಗೌರವಿಸುವ ಜಪಾನೀ ಮನಸ್ಥಿತಿಗಳ ಮೂಲಕ ಜಪಾನ್ ಹೆಸರೆತ್ತಿದರೇ ಗೌರವ ಮೂಡುವಂತೆ ಮಾಡಿಕೊಂಡಿತು.

 

 

ನಾರ್ವೆ ಕೂಡಾ, ಆರ್ಕಟಿಕ್ ವೃತ್ತದ ಮೇಲೆಲ್ಲೋ ತಣ್ಣಗೆ ಸುಮ್ಮನೇಕೂತಿರುರುವುದನ್ನು ಬಿಟ್ಟು, ಯೂರೋ ಒಕ್ಕೂಟಕ್ಕೆ ಸೇರಿ ಹತ್ತರಲ್ಲಿ ಹನ್ನೊಂದಾಗುವುದರ ಬದಲಿಗೆ, ತನ್ನ ಸರ್ಕಾರೀ ಮತ್ತು ಖಾಸಗೀ ಹಣವನ್ನು ಬುದ್ಧಿವಂತಿಕೆಯಿಂದ ಅಮೇರಿಕನ್ ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿ, ಅವುಗಳ ಬೋರ್ಡ್ ಮಟ್ಟದಲ್ಲಿ ಕೂತು, ಜಗತ್ತನ್ನೇ ಬದಲಾಯಿಸುವ ತಂತ್ರಜ್ಞಾನಗಳು ಮತ್ತವುಗಳನ್ನು ನಿಭಾಯಿಸುವ ನೀತಿನಿಯಮಾವಳಿಗಳನ್ನು ಬರೆಯುವ ಮಟ್ಟದಲ್ಲಿ ಕಾರ್ಯನಿರತವಾಗಿದೆ. ಜಗತ್ತಿನಲ್ಲಿ ಯಾರ ನಡುವೆಯೇ ಶಾಂತಿ ಸಂಧಾನಗಳು ನಡೆಯುವುದಿರಲಿ, ಅಲ್ಲಿ ನಾರ್ವೆಯ ಹೆಸರಿರುತ್ತದೆ. LGBTQ ಹೋರಾಟವನ್ನು ಕಾರ್ಪೊರೇಟ್ ವಲಯಕ್ಕೆ ತರುವುದರಲ್ಲೂ ನಾರ್ವೆಯ ಕೈವಾಡ ಬಹಳಷ್ಟಿದೆ. ದಿನನಿತ್ಯ ತಿನ್ನುವ ಆಲೂಗೆಡ್ಡೆಯನ್ನೂ ಬೇರೆ ದೇಶದಿಂದ ಆಮದುಮಾಡಿಕೊಳ್ಳುವ ನಾರ್ವೆ, ತನ್ನ ಶಕ್ತಿ ಎಲ್ಲಿದೆ ಎಂಬುದನ್ನು ಕಂಡುಕೊಂಡು ಅಲ್ಲಿ ತನ್ನ ಸಾಫ್ಟ್ ಪವರನ್ನು ಚೆನ್ನಾಗಿ ಬೆಳೆಸಿದೆ. ಕೊರಿಯಾ ಮತ್ತು ಸ್ವಿಟ್ಝರ್ಲ್ಯಾಂಡ್’ಗಳೂ ಈ ಸಾಫ್ಟ್ ಪವರ್ ಲೆಕ್ಕಾಚಾರದಲ್ಲಿ ಸಾಧಿಸಿರುವ ಪರಿಣತಿ ಅತ್ಯದ್ಭುತ. ಚೀನಾ ಮೊದಮೊದಲಿಗೆ ಸಾಫ್ಟ್ ಪವರಿನ ಮೂಲಕ ತನ್ನ ಆಟವನ್ನು ಪ್ರಾರಂಭಿಸಿತಾದರೂ, ಇತ್ತೀಚಿಗೆ ಬರೀ ಜಗಳಗಂಟನಾಗಿ ಎಲ್ಲರೊಡನೆಯೂ ಕಿರಿಕಿರಿಮಾಡುತ್ತಾ, ಬರೀ ಹಾರ್ಡ್ ಪವರಿನ ಆಟವನ್ನೇ ಹೆಚ್ಚಾಗಿ ಆಡುತ್ತಿದೆ.

 

ಭಾರತದ ವಿಚಾರಕ್ಕೆ ಬಂದರೆ ನಾವು ಈ ಆಟದಲ್ಲಿ ಕಲಿಯಬೇಕಾದದ್ದು ಮತ್ತು ಮಾಡಬೇಕಾದದ್ದು ಬೇಕಾದಷ್ಟಿದೆ. ನಮ್ಮ ಸಾಂಸ್ಕೃತಿಕ ಮತ್ತು ತಾಂತ್ರಿಕ ಸಾಫ್ಟ್’ಪವರಿಗೆ ಸಾವಿರ ಅನುಕೂಲಗಳಿದ್ದರೂ ಅದು ಅಲ್ಪಸ್ವಲ್ಪ ಗುರುತಿಸಲ್ಪಟ್ಟಿದ್ದು ಬಾಲಿವುಡ್ ಮೂಲಕವಷ್ಟೇ. ಅದೂ ಹೌದೋ ಅಲ್ಲವೋ ಎನ್ನುವಷ್ಟು, ಅದರಲ್ಲೂ ಸ್ಟೀರಿಯೊಟೈಪಿಂಗ್ ಮೂಲಕವೇ. ಸ್ಲಮ್ ಡಾಗ್ ಮಿಲಿಯನೇರ್ ಕೂಡಾ ಭಾರತೀಯರೆಂದರೆ ಕಂಡಕಂಡಲ್ಲಿ ನಿಂತು ಡ್ಯಾನ್ಸ್ ಮಾಡುವವರು, ಸ್ಲಮ್ಮಿನಲ್ಲಿರುವವರು ಅಂತಲೇ ಗುರುತಿಸಿದ್ದು. ಈ ನಿಟ್ಟಿನಲ್ಲಿ ನಾವು ನಿಜಕ್ಕೂ ಹೆಮ್ಮೆಪಡಬೇಕಾಗಿರುವುದು 2013ರ ನಂತರದ ಸರ್ಕಾರಗಳ ಸಾಧನೆಯ ಬಗ್ಗೆ. ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಅಧ್ಯಕ್ಷರಿಗೆ ಭಗವದ್ಗೀತೆಯನ್ನು ಉಡುಗೊರೆಯನ್ನಾಗಿ ಕೊಡುವುದಿರಬಹುದು, ವಿಶ್ವಸಂಸ್ಥೆಯ ಮನವೊಲಿಸಿ ಅಂತರರಾಷ್ಟ್ರೀಯ ಯೋಗದಿನವನ್ನು ಗುರುತಿಸುವಂತೆ ಮಾಡುವುದಿರಬಹುದು, ಮೋದಿ ಹೋದಲ್ಲೆಲ್ಲಾ ಅಲ್ಲಿನ ಭಾರತೀಯರನ್ನು ಕಲೆಹಾಕಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿ ಜಗತ್ತಿನ ಗಮನಸೆಳೆಯುವುದಿರಬಹುದು, ಜನಧನ್ ಅಕೌಂಟ್ ಯೋಜನೆ ಮೂಲಕ ಪ್ರತೀಪ್ರಜೆಗೂ ಒಂದು ಬ್ಯಾಂಕ್ ಅಕೌಂಟ್ ಸಿಗುವಂತೆ ಮಾಡಿದ್ದಿರಬಹುದು, ಡೈರೆಕ್ಟ್ ಕ್ರೆಡಿಟ್ ವ್ಯವಸ್ಥೆಯ ಮೂಲಕ ಸರ್ಕಾರದ ಸಹಾಯಗಳನ್ನು ನೇರವಾಗಿ ಜನರ ಅಕೌಂಟಿಗೆ ತಲುಪಿಸಿದ್ದರಬಹುದು, ಆಯುರ್ವೇದವನ್ನು ಜಗತ್ತಿಗೆ ಇನ್ನೂ ದೊಡ್ಡಮಟ್ಟದಲ್ಲಿ ಪರಿಚಯಿಸಿದ್ದರಬಹುದು, ಡಿಮಾನೆಟೈಸೇಷನ್ನಿನ ಮೂಲಕ ತಂದಿಳಿಸಿದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಿರಬಹುದು, 2015ರ ಪ್ಯಾರಿಸ್ ಒಪ್ಪಂದದ ಘೋಷಣೆಗಳಿರಬಹುದು, ಕೋವಿಡ್ ಸಮಯದಲ್ಲಿ ವ್ಯಾಕ್ಸೀನ್ ಬಳಸಿ ರಾಜತಾಂತ್ರಿಕ ಸಹಾಯಗಳನ್ನು ಮಾಡಿ ಜಗತ್ತಿನ ಮನಸೂರೆಗೊಂಡಿದ್ದಿರಬಹುದು, ಚಂದ್ರಯಾನ ಸೂರ್ಯಯಾನ ಗಗನಯಾನ ಸಮುದ್ರಯಾನದಂತಹಾ ಉಪಕ್ರಮಗಳಲ್ಲಿ ಹಣ ಕೂಡಿಕೆ ಮಾಡಿ ಜಗತ್ತಿನ ಕಣ್ಸೆಳೆಯುವುದಿರಬಹುದು, ಆಟೋಟಗಳಲ್ಲಿ ನಿಧಾನವಾಗಿ ಭಾರತದ ಹೆಸರುಗಳು ಮೇಲೆಬರುವಂತೆ ಮಾಡುವುದಿರಬಹುದು…..ಕಳೆದ ಹತ್ತುವರ್ಷದಲ್ಲಿ ಭಾರತದ “ಸಾಫ್ಟ್ ಪವರ್ ಪುಷ್”, ಹಿಂದಿನ ಅರವತ್ತೈದು ವರ್ಷಗಳ ಒಟ್ಟು ಪ್ರಯತ್ನಕ್ಕಿಂತಾ ಹೆಚ್ಚಿನಮಟ್ಟದಲ್ಲಿದೆ. ನೀವು ಮೋದಿಗೆ “ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳುವ ನಾರ್ಸಿಸಿಸ್ಟ್”, “ಒಂದೂ ಪ್ರೆಸ್ ಕಾನ್ಫರೆನ್ಸ್ ಮಾಡದವ” ಅಂತೆಲ್ಲಾ ಮನಸ್ಸುತೃಪ್ತಿಯಾಗುವಷ್ಟು ಬೈಯ್ಯಬಹುದು. ಆದರೆ ಅವರು ಇದೆಲ್ಲವನ್ನೂ ಚಾಕಚಕ್ಯತೆಯಿಂದ ಯೋಜಿಸಿ, ಒಂದರ ನಂತರ ಇನ್ನೊಂದರಂತೆ ಕೆಲಸಗಳನ್ನು ಮಾಡುತ್ತಾ, ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯೋಗಿಯಂತೆ ತನ್ನ ಕೆಲಸವನ್ನು ಮಾಡುತ್ತಲೇ ಹೋಗುತ್ತಿದ್ದಾರೆ.

 

ಆ ಭಾರಿಯ ಜಿ20 ಶೃಂಗಸಂಭೆಯನ್ನು ಎಲ್ಲರ ಹುಬ್ಬೇರಿಸುವಷ್ಟು ಚಂದದಲ್ಲಿ ನಡೆಸಿದ್ದೂ ಅಲ್ಲದೇ, ಭಾರತೀಯ ಪರಂಪರೆಯನ್ನು ಮುಂಚೂಣಿಯಲ್ಲಿರಿಸಿ, ಸಭೆ ನಡೆಯುವ ಜಾಗಕ್ಕೆ “ಭಾರತ ಮಂಟಪ” ಎಂದೇ ಹೆಸರಿಟ್ಟು, ಅದನ್ನು ಯೋಗ ಮತ್ತು ಭಾರತೀಯ ವಿಜ್ಞಾನದ ಕೊಡುಗೆಗಳಿಂದ ಅಲಂಕರಿಸಿ, ಅದರ ಮುಂದೆ ಇಪ್ಪತ್ತೆಂಟು ಅಡಿಯ ನಟರಾಜನ ಶಿಲ್ಪವನ್ನು ನಿಲ್ಲಿಸಿ, ಬಂದ ಅಧ್ಯಕ್ಷರುಗಳಿಗೆಲ್ಲಾ ಭಾರತದ ವಿಶೇಷ ಖಾದಿಯ ಸ್ಕಾರ್ಫ್ ಹೊದಿಸಿ, ಎಲ್ಲೆಲ್ಲಿ ಫೋಟೋ ಆಪ್’ಗಳು ನಡೆಯುತ್ತಿದ್ದವೋ ಅಲ್ಲೆಲ್ಲಾ ನಲಂದಾ, ಕೊನಾರ್ಕ್, ತಂಜಾವೂರಿನ ಫೋಟೋಗಳು, ಕೃಷ್ಣ ಭಗವದ್ಗೀತೆ ಮಹಾಭಾರತ ರಾಮಾಯಣಗಳನ್ನು ನೆನಪಿಸುವ ವರ್ಣಚಿತ್ರಗಳನ್ನು ನಿಲ್ಲಿಸಿ, ಬಂದ ಅತಿಥಿಗಳಿಂದೆಲ್ಲಾ ಕೊನೆಯ ದಿನದಲ್ಲಿ ವಸುದೈವ ಕುಟುಂಬಕಂ ಎಂದು ಟ್ವೀಟ್ ಮಾಡಿಸಿ,  “ಇದೇ ಭಾರತ, ಇದೇ ನಮ್ಮ ಅಸ್ಮಿತೆ” ಎಂಬುದನ್ನು ಯಾವುದೇ ಹಿಂಜರಿಕೆಯಿಲ್ಲದೇ ಎದೆತಟ್ಟಿ ಹೇಳಿದ ಈ ಭಾರತ, ಇಪ್ಪತ್ತೊಂದನೆಯ ಶತಮಾನದ ಹೆಮ್ಮೆಯ ಭಾರತ.

 

 

ಹಾರ್ಡ್ ಮತ್ತು ಸಾಫ್ಟ್ ಎರಡನ್ನೂ ಸರಿಸಮನಾದ ರೀತಿಯಲ್ಲಿ ಬಳಸುವವನೇ ಇಂದಿನ ರಾಜತಾಂತ್ರಿಕ ಆಟದ ನಿಜವಾದ ವಿಜೇತ. ಈ ಆಟವನ್ನು ಭಾರತ ಮೋದಿಯವರ ಆಡಳಿತದಲ್ಲಿ ಚೆನ್ನಾಗಿ ಆಡುತ್ತಿದೆ, ಮಾತ್ರವಲ್ಲ ನಿಧಾನವಾಗಿ ಪರಿಣತಿಯನ್ನೂ ಪಡೆಯುತ್ತಿದೆ.

 

0 comments on “ಸೆಕ್ಯುಲರಿಸಮ್ಮಿನ ರೋಗ ಅಂಟದೆಯೇ ಮುಗಿದ, G20 ಶೃಂಗಸಭೆ

Leave a Reply

Your email address will not be published. Required fields are marked *