
ಜಗತ್ತಿಗೇ ಗೊತ್ತಿರುವ, ಜಗತ್ತಿನ “ಬೇಕಾದವರೆಲ್ಲರೂ” ಇರುವ, ದೊಡ್ಡ ವಿಚಾರಗಳನ್ನೆಲ್ಲಾ ಎರಡೇ ಸಾಲಿನಲ್ಲಿ ಪ್ರಕಟಿಸಿ ಬ್ರೇಕಿಂಗ್ ಸುದ್ಧಿಮಾಡುವ ಟ್ವಿಟರ್ ಗೊತ್ತಿಲ್ಲದವರು ಯಾರಿದ್ದಾರೆ? ಸ್ಮಾರ್ಟ್-ಫೋನಿದ್ದಮೇಲೆ ಟ್ವಿಟರ್ ಗೊತ್ತಿರಲೇ ಬೇಕಲ್ಲ? ಗೊತ್ತಿಲ್ಲದಿದ್ದರೆ ಡಿಜಿಟಲ್ ಯುಗದಲ್ಲಿದ್ದೇ ಶಿಲಾಯುಗದಲ್ಲಿ ಬದುಕುವವರು ನೀವಾಗ್ತೀರಿ. ಯಾಕೆಂದರೆ ಮಾಹಿತಿಯುಗದ ಮುಂಚೂಣಿಯಲ್ಲಿ ನಿಂತು, ಜಗತ್ತು ಯಾವಕಡೆ ಹೋಗಬೇಕೆನ್ನುವುದನ್ನು ನಿರ್ಧರಿಸುವ ಚುಕ್ಕಾಣಿಯನ್ನೇ ಕೈಯಲ್ಲಿ ಹಿಡಿದು ನಿಂತಿರುವ ಟ್ವಿಟರ್, ಪ್ರತಿಯೊಬ್ಬ ತಂತ್ರಜ್ಞಾನ ಸಾಕ್ಷರನ, ಸಾಮಾಜಿಕ ಜಾಲತಾಣಜೀವನದ ತೊದಲುನುಡಿ. ಜಗತ್ತಿನ ಆಗುಹೋಗುಗಳ ಅರಿವಿರುವವರು, ಅರಿವಿರಬೇಕೆಂದು ಬಯಸುವವರು ನೀವಾದರೆ, ಟ್ವಿಟರ್ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಹಾಗೂ ಟ್ವಿಟರಿನಲ್ಲಿ ನೀವಿರಲೇಬೇಕು.
2006ರಲ್ಲಿ ಓಡೆಯೋ ಎಂಬ ಕಂಪನಿಯ ಮಾಲೀಕನಾಗಿದ್ದ ಜಾಕ್ ಡೋರ್ಸಿ ಮತ್ತವನ ಕಾಂಟ್ರಾಕ್ಟರ್ ಫ್ಲೋರಿಯನ್ ವೆಬರ್ ಜಂಟಿಯಾಗಿ ತಯಾರಿಸಿದ ಈ ಎಸ್ಸೆಮ್ಮೆಸ್ ಆಧಾರಿತ ಸೇವೆ ಮೊದಲಿಗೆ ಓಡೆಯೋ ಸಿಬ್ಬಂದಿಗೆ ಮಾತ್ರ ಸೀಮಿತವಾಗಿತ್ತು. 2006ರ ಅಕ್ಟೋಬರಿನಲ್ಲಿ ಬಿಜ್ ಸ್ಟೋನ್ ಮತ್ತು ಎವಾನ್ ವಿಲಿಯಮ್ಸ್ ಎಂಬಿಬ್ಬರು ಇವರ ಜೊತೆ ಸೇರಿ, ಟ್ವಿಟರಿನ ಹೊಸದೊಂದು ವರ್ಷನ್ ತಯಾರಿಸಿ, ಸಾರ್ವಜನಿಕ ಬಳಕೆಗೆ ಬಿಟ್ಟರು. ಅಲ್ಲಿಯವರೆಗೂ ಆಬ್ವಿಯಸ್ ಕಾರ್ಪೊರೇಷನ್ ಅಡಿಯಲ್ಲಿದ್ದ ಟ್ವಿಟರ್, 2007ರ ಏಪ್ರಿಲ್ಲಿನಲ್ಲಿ ತಾನೇ ಸ್ವತಃ ಒಂದು ಕಂಪನಿಯಾಗಿ ಸ್ಥಾಪಿತವಾಯ್ತು. 2010 ಮತ್ತು 2012ರ ನಡುವೆ ‘ಅರಬ್ ಸ್ಪ್ರಿಂಗ್’ ಹೆಸರಿನಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ನಡೆದ ಸಾಲುಸಾಲು ದಂಗೆ ಮತ್ತು ಕ್ರಾಂತಿಗಳಲ್ಲಿ ಮುಖ್ಯವಾಹಿನಿಯಾಗಿ ಬಳಕೆಯಾದ ಟ್ವಿಟರ್, ಮಾಧ್ಯಮನಿರ್ಬಂಧಗಳಿರುವಲ್ಲಿ ಅಥವಾ ಸರ್ಕಾರೀ ಮಾಧ್ಯಮಗಳ ಏಕಸ್ವಾಮ್ಯವಿರುವಲ್ಲಿ, ಪರಿಣಾಮಕಾರಿಯಾದ ಸಾಮಾಜಿಕ ಧ್ವನಿಯಾಗಿ ತನ್ನದೇ ಬ್ರಾಂಡ್ ಆಗಿ ಪರಿವರ್ತನೆಯಾದಂತೆ ಕಂಡುಬಂತು. ಅಲ್ಲಿಂದ ಮುಂದೆ ಏರುಗತಿಯಲ್ಲಿ ಬೆಳೆಯುತ್ತಲೇ ಹೋದ ಟ್ವಿಟರ್, 2013ರಲ್ಲಿ ಪಬ್ಲಿಕ್ ಕಂಪನಿಯಾಗಿಯೂ ಹೆಜ್ಜೆಯಿಟ್ಟಿತು. 2016ರಲ್ಲಿ ಶೇರುಮಾರುಕಟ್ಟೆಯ ಫೇವರಿಟ್’ಗಳಲ್ಲೊಂದಾಗಿದ್ದ ಟ್ವಿಟರ್ ಅನ್ನು ಕೊಳ್ಳಲಿಕ್ಕೆ ಆಲ್ಫಬೆಟ್ (ಅಂದಿನ ಗೂಗಲ್), ಮೈಕ್ರೋಸಾಫ್ಟ್, ಸೇಲ್ಸ್-ಫೋರ್ಸ್, ವೆರಿಝಾನ್ ಮತ್ತು ವಾಲ್ಟ್ ಡಿಸ್ನಿ ಕಂಪನಿಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಟ್ವಿಟರಿನ ಬೋರ್ಡ್ ಮೆಂಬರುಗಳು ಯಾವ ಬೆಲೆಗೂ ತಲೆಬಾಗದ ಕಾರಣ, ಮಾರಾಟ ನಡೆಯಲಿಲ್ಲ. ಟ್ವಿಟರ್ ಟ್ವಿಟರಾಗಿಯೇ ಉಳಿಯಿತು. ಅಷ್ಟೊತ್ತಿಗಾಗಲೇ ಟ್ವಿಟರಿನಲ್ಲಿ ಬರಿ ದ್ವೇಷ ನಿಂದನೆಗಳೇ ತುಂಬಿದೆಯೆಂಬ ಮಾತೂ ಚಾಲ್ತಿಯಲ್ಲಿತ್ತು. ಮೊದಲಿಗೆ ಕೊಳ್ಳಲು ಉತ್ಸುಕತೆ ತೋರಿದ್ದ ಆಲ್ಫಬೆಟ್ ಮತ್ತು ಡಿಸ್ನಿ ಇದೇ ಕಾರಣಕ್ಕೆ ಹಿಂದೆಸರಿದವು ಎಂಬ ಸುದ್ಧಿಯೂ ಇದೆ.
ಕರೋನಾ ಕಳೆದಮೇಲೆ ಮುಂದೇನು ಎಂಬ ಚಿಂತೆಯಲ್ಲಿದ್ದ ಜಗತ್ತಿಗೆ ಭರಪೂರ ಮನರಂಜನೆಯೊದಗಿಸಿದ್ದು, ಎಲೋನ್ ಮಸ್ಕ್ ಎಂಬ ವ್ಯಕ್ತಿ ಟ್ವಿಟರನ್ನು ತನ್ನದಾಗಿಸಿಕೊಂಡ ರೀತಿ. ಆಗುತ್ತೆ, ಆಗಲ್ಲ, 43 ಬಿಲಿಯನ್ ಡಾಲರ್ ಆಫರ್ ಮಾಡಿದ್ದಾನೆ, ಆದರೆ ಅದಕ್ಕೆ ಜಾಕ್ ಡೋರ್ಸಿ ಒಪ್ಪಲಿಲ್ಲ, ಒಪ್ಪಿದ, ಅವನೊಪ್ಪಿದರೂ ಬೋರ್ಡ್ ಒಪ್ಪಲಿಲ್ಲ, ಅವರೆಲ್ಲಾ ಒಪ್ಪಿದರೂ ಸೌದಿಯ ಹೂಡಿಕೆದಾರ ಅಲ್ ವಲೀದ್ ಬಿನ್ ತಲಾಲ್ ಒಪ್ಪಲಿಲ್ಲ, ಕೊನೆಗೆ ಮಸ್ಕ್ ಸ್ವತಃ ತಾನು ಮಾಡಿದ ಆಫರ್’ನಿಂದ ಹಿಂದೆಸರಿದ ಎಂಬೆಲ್ಲಾ ಅಬ್ಬಾಸ್-ಮಸ್ತಾನ್ ಚಿತ್ರವೊಂದರಂತೆ ರೋಚಕ ತಿರುವು-ಮುರುವುಗಳೊಂದಿಗೆ ಸಾಗಿ, ಕೊನೆಗೂ 2022 ಅಕ್ಟೋಬರ್ 27ರಂದು, ಟ್ವಿಟರ್ ಮಸ್ಕನ ತೆಕ್ಕೆಗೆ ಬಂದು ಬಿತ್ತು. ಅದಾದಮೇಲೂ ಜನರ ಮನರಂಜನೆಗೇನೂ ಕಡಿವಾಣ ಬಿಳಲಿಲ್ಲ. ಮುಕ್ತವಾಗಿ ತನ್ನನ್ನು ತಾನು (ಅಮೇರಿಕನ್) ಬಲಪಂಥೀಯ ಎಂದು ಹೇಳಿಕೊಳ್ಳುವ ಮಸ್ಕನ ಈ ಮಹಾದುಬಾರಿ ಶಾಪಿಂಗ್ ಮೇಲೆ ವಿಶ್ವದ ಬೇರೆ ಬೇರೆ ರೀತಿಯ ಎಡಪಂಥೀರೆಲ್ಲರೂ ಮುಗಿಬಿದ್ದರು. ಮೋದಿಬಂದರೆ ಭಾರತ ಬರ್ಬಾದಾಗಿಬಿಡುತ್ತದೆ ಎಂದು ಹುಯಿಲೆಬ್ಬಿಸಿದ ತರಹವೇ, ಮಸ್ಕನ ಒಡೆತನದಲ್ಲಿ ಟ್ವಿಟರ್ ಮತ್ತಷ್ಟು ವಿಷಕಾರುವ ಮುಖ್ಯಭೂಮಿಯಾಗುತ್ತದೆಯೆಂದೂ ಭವಿಷ್ಯ ನುಡಿಯಲಾಯ್ತು. ಒಂದಷ್ಟು ಎಡಪಂಥೀಯರೂ ಟ್ವಿಟರ್ ಬಿಟ್ಟದ್ದೂ ಆಯ್ತು. ಅದಾದಮೇಲೆ ಟ್ವಿಟರ್ ತನಗೆ ಬೇಕಾದವರಿಗೆ ಮಾತ್ರ ಬ್ಲೂ ಟಿಕ್ ಕೊಡುತ್ತಿದೆಯೆಂದೂ, ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಈ ಬ್ಲೂ ಟಿಕ್ ಅನ್ನು ಹಣಕೊಟ್ಟು ಪಡೆಯಬೇಕೆಂದು ಮಸ್ಕ್ ಹೇಳಿದಮೇಲಂತೂ, ಕೆಲಪಂಥೀಯರಿಗೆ ಮೈ ಉರಿದೇ ಹೋಯ್ತು. ಇಷ್ಟಕ್ಕೇ ನಿಲ್ಲದ ಮಸ್ಕ್, ಟಿಟರ್ರಿನ ಹೆಸರನ್ನೆ ಎಕ್ಸ್ ಎಂದು ಬದಲಾಯಿಸಿ, ಮೊದಲೇ ಹೆದರಿದವರ ಮೇಲೆ ಕಪ್ಪೆ ಎಸೆದು, ಸಾಮಾಜಿಕ ತಾಣಗಳ ಮಾರುಕಟ್ಟೆಯನ್ನೇ ಅಲ್ಲೋಲಕಲ್ಲೋಲವಾಗಿಸಿದ. ಈ ಟ್ವಿಟರ್-ಎಕ್ಸ್-ಮಸ್ಕ್ ಮನರಂಜನಾ ಪ್ರಸಂಗ ಇನ್ನೂ ನಡೆಯುತ್ತಲೇ ಇದೆ. ಸಧ್ಯಕ್ಕೆ ಅದನ್ನು ಸಂತೋಷದಿಂದಲೇ ಸ್ವೀಕರಿಸುತ್ತಾ, ಹೊಸದೊಂದು ವಿಚಾರವನ್ನು ತಿಳಿಯೋಣ ಬನ್ನಿ.
ಟ್ವಿಟರ್ ಅನ್ನು ಮಸ್ಕ್ ಖರೀದಿಸಿದಾಗ, ಬಹಳಷ್ಟು ಜನ ಮಸ್ಕನ ಟೆಸ್ಲಾ ಅಥವಾ ಸ್ಪೇಸ್-ಎಕ್ಸ್ ಕಂಪನಿಗಳ ಹಣ ಬಳಸಿದ್ದಾನೆ. ಹಾಗಾಗಿ ಈ ಕಂಪನಿಗಳ ಬೋರ್ಡ್ ಆಫ್ ಡೈರೆಕ್ಟರುಗಳೂ ಟಿಟ್ವರಿನ ಮ್ಯಾನೇಜ್ಮೆಂಟಿಗೆ ಬರಲಿದ್ದಾರೆ ಎಂದುಕೊಂಡಿದ್ದರು. ಆದರೆ, ಕೊನೆಗೂ ಟ್ವಿಟರ್ ಅನ್ನು ಸಂಪೂರ್ಣವಾಗಿ ಖರೀದಿಸಿದ್ದು, ಮಸ್ಕ್ ಒಬ್ಬನದ್ದೇ ಒಡೆತನದಲ್ಲಿರುವ ಎಕ್ಸ್ ಹೋಲ್ಡಿಂಗ್ಸ್ ಕಾರ್ಪೋರೇಶನ್ ಎಂಬ ಕಂಪನಿ. ಈ ಎಕ್ಸ್ ಹೋಲ್ಡಿಂಗ್ ಕಂಪನಿಯ ಹೆಸರನ್ನೇ ಮಸ್ಕ್ ಈಗ ಟ್ವಿಟರಿಗೆ ಇಟ್ಟಿರುವುದು. ಏನಿದು ಎಕ್ಸ್? ಆಡುವ ಮಾತನ್ನೇ ಚಂದವಾಗಿ, ಸಣ್ಣದಾಗಿ ಉಲಿಯುವ ಉಪಮೆಯಲ್ಲಿ ಟ್ವೀಟ್ ಎಂಬ ಹೆಸರಿನಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದ ಟ್ವಿಟರ್, ಯಾವುದೋ ನಿಗೂಡ ಅರ್ಥವನ್ನು ಸ್ಪುರಿಸುವ ಎಕ್ಸ್ ಯಾಕಾಯ್ತು? ಟ್ವಿಟರನ್ನು ಹಾಳು ಮಾಡಲಿಕ್ಕೆಂದೇ ಮಸ್ಕ್ ಈ ಹೆಸರಿಟ್ಟನಾ?
ಈ ಎಕ್ಸ್ ಅನ್ನುವುದು ಕಳೆದವರ್ಷವಷ್ಟೇ ಹುಟ್ಟಿದ ಕಂಪನಿಯಲ್ಲ. ಮಸ್ಕ್ ಬಗ್ಗೆ ಸ್ವಲ್ಪವಾದರೂ ಗೊತ್ತಿರುವವರು ನೀವಾದರೆ, ಅವನ ದೂರದೃಷ್ಟಿಯ ಪ್ಲಾನುಗಳು, ಮತ್ತವನ್ನು ಕಾರ್ಯರೂಪಕ್ಕೆ ತರಲು ಅವನು ಪಡುವ ಶ್ರಮ ಎರಡೂ ನಿಮಗೆ ಗೊತ್ತಿರುತ್ತದೆ. ಈ ಎಕ್ಸ್’ಗೂ ಮಸ್ಕ್’ಗೂ ಇಪ್ಪತ್ತೈದು ವರ್ಷಗಳ ನಂಟಿದೆ. 1999ರಲ್ಲಿ ಮಸ್ಕ್ ಪ್ರಾರಂಭಿಸಿದ, ತನ್ನ ಜೀವನದ ಎರಡನೇ ಕಂಪನಿಯೇ ಎಕ್ಸ್.ಕಾಂ. 1995ರಲ್ಲಿ ಸ್ಟಾನ್ಫರ್ಡ್ ವಿಶ್ವವಿದ್ಯಾಲಯ ಸೇರಿದ ಮಸ್ಕ್, ಎರಡೇ ದಿನಕ್ಕೆ ಅಲ್ಲಿಂದ ಹೊರಬಂದು, ತಮ್ಮ ಸೋದರನಾದ ಕಿಂಬಾಲ್ ಜೊತೆಗೂಡಿ, ಝಿಪ್2 ಎಂಬ ಹೆಸರಿನ ಸಾಫ್ಟ್ವೇರ್ ಕಂಪನಿ ಪ್ರಾರಂಭಿಸಿದ್ದ. ಇದನ್ನು 1999ರಲ್ಲಿ ಕಾಂಪ್ಯಾಕ್’ಗೆ 307 ಮಿಲಿಯನ್ ಡಾಲರಿಗೆ ಮಾರಿ, ತನ್ನ ಪಾಲಿಗೆ ಬಂದ 12 ಮಿಲಿಯನ್ ಡಾಲರ್ ಹಣದಲ್ಲಿ, ಎಕ್ಸ್.ಕಾಂ ಎಂಬ ಹೆಸರಿನ ಡೈರೆಕ್ಟ್ ಬ್ಯಾಂಕ್ ಒಂದನ್ನು ಪ್ರಾರಂಭಿಸಿದ. ಡೈರೆಕ್ಟ್ ಬ್ಯಾಂಕ್ ಎಂದರೆ ಇದಕ್ಕೆ ಯಾವುದೇ ಆಫೀಸು, ಬ್ರಾಂಚು ಇರುವುದಿಲ್ಲ. ಚೆಕ್-ಬುಕ್ ಇಲ್ಲ, ಆರ್ಡಿ, ಎಫ್ಡಿ, ಲಾಕರ್, ಬಡ್ಡಿ ಯಾವುದೂ ಇಲ್ಲ, ಇವರ ವ್ಯವಹಾರ ಏನಿದ್ದರೂ ಇಂಟರ್ನೆಟ್, ಮೊಬೈಲ್ ಆಪ್, ಇಮೇಯ್ಲುಗಳ ಮೂಲಕ ಮಾತ್ರ. ಸಾಂಪ್ರದಾಯಿಕ ಬ್ಯಾಂಕಿಂಗನ್ನೇ ಬುಡಮೇಲು ಮಾಡುತ್ತೇನೆ ಎಂಬ ಧ್ಯೇಯದೊಂದಿಗೆ ಈ ಉದ್ಯಮಕ್ಕೆ ಕಾಲಿಟ್ಟ ಮಸ್ಕ್ ಇದನ್ನು ಮಾಡಿಯೂ ತೋರಿಸಿದ. ಎಕ್ಸ್.ಕಾಂ ಸ್ಥಾಪಿತವಾದ ಒಂದೇ ವರ್ಷದಲ್ಲಿ, ಕಾನ್ಫಿನಿಟಿ ಎಂಬ ಕಂಪನಿಯೊಂದಿಗೆ ಕೈಜೋಡಿಸಿ, ಪೇ-ಪಾಲ್ ಅನ್ನು ಪ್ರಾರಂಭಿಸಿದ. ಆಗ ಕಾನ್ಫಿನಿಟಿ ಇದರಲ್ಲಿ ದೊಡ್ಡ ಪಾಲುದಾರನಾದ್ದರಿಂದ, ಎಕ್ಸ್.ಕಾಂ ಎಂಬ ಹೆಸರನ್ನು ಮಸ್ಕ್ ಕೈಬಿಟ್ಟು ಪೇ-ಪಾಲ್ ಎಂಬ ಹೆಸರಿಗೆ ಒಪ್ಪಬೇಕಾಯ್ತು. ಎಕ್ಸ್ ಹೆಸರಲ್ಲಿ ಏನಾದರೂ ದೊಡ್ಡದು ಮಾಡೋಣ ಎಂದುಕೊಂಡಿದ್ದ ಎಲೋನನ ಆಸೆಗೆ ಎಳ್ಳುನೀರು ಬಿಡಬೇಕಾಯ್ತು.
ಇದಾದ ಎರಡೇ ವರ್ಷದಲ್ಲಿ 2002ರಲ್ಲಿ, ಅಂದಿನ ಆನ್ಲೈನ್ ಮಾರಾಟ ವೇದಿಕೆ ಇ-ಬೇ, ಪೇ-ಪಾಲ್ ಬೆಳೆಯುತ್ತಿರುವ ವೇಗ ನೋಡಿ ಮೆಚ್ಚಿ ಅದನ್ನು 1.5 ಬಿಲಿಯನ್ ಡಾಲರಿಗೆ ಕೊಂಡುಕೊಂಡಿತು. ಹನ್ನೆರಡು ಮಿಲಿಯನ್ ಹೂಡಿದ್ದ ಮಸ್ಕನ ಕೈಗೆ ಬಂದದ್ದು 165 ಮಿಲಿಯನ್ ಡಾಲರ್. ಅದೇ ವರ್ಷದಲ್ಲಿ ಎಲೋನ್ ಮಸ್ಕ್ “ಸ್ಪೇಸ್ ಎಕ್ಪ್ಲೋರೇಷನ್ ಟೆಕ್ನಾಲಜೀಸ್ ಕಾರ್ಪೋರೇಷನ್” ಎಂಬ ಕಂಪನಿಯನ್ನು ಪ್ರಾರಂಭಿಸಿದ. ಎಕ್ಸ್.ಕಾಂ ನಂತರ ನೇಪಥಕ್ಕೆ ಸರಿದಿದ್ದ ಎಕ್ಸ್, ಈಗ ಮತ್ತೆ ಸ್ಪೇಸ್-ಎಕ್ಸ್ ಹೆಸರಿನಲ್ಲಿ ಮತ್ತೆ ಮುನ್ನೆಲೆಗೆ ಬಂತು. ಕಂಪನಿಯ ಬ್ರಾಂಡಿಂಗಿನಲ್ಲೂ ಚಾಕಚಕ್ಯತೆಯಿಂದ ರಾಕೆಟ್ಟಿನ ಹಾರುವ ಪಥವನ್ನು ಎಕ್ಸ್ ಒಳಗೇ ಅಡಕವಾಗಿಸಿಕೊಂಡು, ಮಸ್ಕನ ಎಕ್ಸ್ ಮತ್ತೆ ಜೀವಂತವಾಗುಳಿಯಿತು.
2004ರಲ್ಲಿ ಟೆಸ್ಲಾ ಮೋಟರ್ಸ್ ಎಂಬ ಕಂಪನಿಯಲ್ಲಿ ಹಣ ತೊಡಗಿಸಿದ ಮಸ್ಕ್, ಅಲ್ಲೂ ಎಕ್ಸ್ ಅನ್ನು ಜೀವಂತವಾಗಿಟ್ಟ. ನೆನಪಿದೆಯೇ? ಟೆಸ್ಲಾ ಬಿಡುಗಡೆ ಮಾಡಿದ ಮೂರನೇ ಕಾರಿನ ಹೆಸರು ಮಾಡೆಲ್ ಎಕ್ಸ್! ಇಲ್ಲೂ ಒಂದು ಸಣ್ಣ ಕುತೂಹಲದ ಕಥೆಯಿದೆ. ಮಸ್ಕನಿಗೆ ತನ್ನ ಟೆಸ್ಲಾ ಕಾರುಗಳ ಸರಣಿ, ಅವುಗಳ ವಿನ್ಯಾಸಕ್ಕನುಗುಣವಾಗಿ ಸೆಕ್ಸಿ (SEXY) ಎಂಬ ಪದವನ್ನು ರೂಪಿಸುವಂತಿರಬೇಕು ಎನ್ನುವ ಆಸೆಯಿತ್ತು. ಹಾಗಾಗಿಯೇ ಟೆಸ್ಲಾದ ಮೊದಲ ಕಾರು ಮಾಡೆಲ್ S ಎರಡನೆಯದು ಮಾಡೆಲ್ 3, ಮೂರನೆಯದು ಮಾಡೆಲ್ X, ನಾಲ್ಕನೆಯದು ಮಾಡೆಲ್ Y. ಫೋರ್ಡ್ ಬಳಿ ಅದಾಗಲೇ ಮಾಡೆಲ್ ಇ ಹೆಸರಿನ ಹಕ್ಕುಸ್ವಾಮ್ಯ ಇದ್ದುದ್ದರಿಂದ, E ಅಕ್ಷರದ ಪ್ರತಿಬಿಂಬವಾದ 3 ಅನ್ನು ಬಳಸಿ, ಎರಡನೆಯ ಕಾರಿಗೆ ಮಾಡೆಲ್ 3 ಅಂತಾ ಹೆಸರಿಟ್ಟ ಈ ಭೂಪ! ಇಷ್ಟು ಮಾತ್ರವಲ್ಲ, ಮಸ್ಕನ ಒಬ್ಬ ಮಗನ ಹೆಸರೂ ಎಕ್ಸ್ ಅಂತಲೇ. ಹೀಗೆ ಮಸ್ಕನಿಗೆ ಎಕ್ಸ್ ಮೇಲಿನ ವ್ಯಾಮೋಹ ಇವತ್ತಿನದಲ್ಲ. 1999ರಷ್ಟು ಹಳೆಯದು. ಅದೊಂದು ಹೆಸರಿನ ಕನಸನ್ನು ಇನ್ನೂ ಇಟ್ಟುಕೊಂಡು, ಅದನ್ನೇ ಉಸಿರಾಡುವ ಛಲ ಇರುವವನೇ ಜಗತ್ತಿನಲ್ಲಿ ಇಷ್ಟೆಲ್ಲಾ ತರಲೆ ಮಾಡಲಿಕ್ಕೆ ಸಾಧ್ಯವೇನೋ ಎನಿಸುತ್ತದೆ.
ಮಾರ್ಕೆಟಿಂಗ್ ದೃಷ್ಟಿಯಿಂದ ನೋಡಿದರೆ ಟ್ವಿಟರಿನಂತಹಾ ಜನಪ್ರಿಯ ವೇದಿಕೆಯೊಂದರ ಹೆಸರನ್ನು ಬದಲಾಯಿಸುವುದು ಮೂರ್ಖತನದ ನಿರ್ಧಾರ. ಟ್ವಿಟರಿಗೆ ತನ್ನದೇ ಆದ ಒಂದು ಬ್ರಾಂಡ್ ಇತ್ತು. “ನಾನು ಟ್ವಿಟರಿನಲ್ಲಿ ಏನನ್ನೋ ಬರೆದಿದ್ದೇನೆ” ಎನ್ನುವುದರ ಬದಲು “ಟ್ವಿಟ್ ಮಾಡಿದೆ” ಎನ್ನುವಷ್ಟು ಜನರಿಕ್ ಟ್ರೇಡ್-ಮಾರ್ಕ್ ಆಗಿ ಬೆಳೆದಿತ್ತು. ಎಷ್ಟೋ ಬಾರಿ ಈ ರೀತಿ ಖರೀದಿ ನಡೆದಾಗಲೂ, ಕಂಪನಿಗಳ ಮೊದಲ ಹೆಸರನ್ನು ಬದಲಾಯಿಸದೇ, ವ್ಯವಹಾರ ಸುಗಮವಾಗಿ ನಡೆಯಲಿ ಎಂದು ಹಾಗೇ ಉಳಿಸುತ್ತಾರೆ. ಅಥವಾ ವರ್ಷಾನುಗಟ್ಟಲೇ ಸಮಯ ತಗೆದುಕೊಂಡು ಬದಲಾಯಿಸುತ್ತಾರೆ. ಆದರೆ ಇಲ್ಲಿ ಖರೀದಿಸಿದ ಒಂದೇ ವರ್ಷದಲ್ಲಿ ಹೆಸರು ಬದಲಿಸಿ, ಮಸ್ಕ್ ಎಲ್ಲರ ಹುಬ್ಬೇರಿಸಿದ. “ಗೂಗಲ್ ಕೂಡಾ ತನ್ನ ಹೆಸರನ್ನು ಆಲ್ಫಾಬೆಟ್ ಎಂದು ಬದಲಾಯಿಸಿತಲ್ಲಾ?” ಎಂದು ನೀವು ಕೇಳಬಹುದು. ಅದರೆ ಅಲ್ಲಿ ಕಾರ್ಪೋರೇಟ್ ಮಟ್ಟದಲ್ಲಿ ಹೆಸರು ಬದಲಾಯ್ತೇ ಹೊರತು, ಗೂಗಲ್ ಎಂಬ ಜನಪ್ರಿಯ ಪದಕ್ಕೆ ಯಾವ ಕುತ್ತೂ ಬರಲಿಲ್ಲ. “ಗೂಗಲ್ ಮಾಡಿ” ಎನ್ನುವುದರ ಬದಲಿಗೆ “ಆಲ್ಫಬೆಟ್ ಮಾಡಿ” ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ! ಆಭಾಸವಾಗುತ್ತದೆ ತಾನೇ? ಗೂಗಲ್ ಎಂಬ ಪದಕ್ಕಿರುವ ಶಕ್ತಿ ಅದು. “ದ ಫೇಸ್ಬುಕ್” ಕೂಡಾ, “ಫೇಸ್ಬುಕ್” ಆದಾಗ ಅದರಲ್ಲಿ ಐದು ಮಿಲಿಯನ್ ಬಳಕೆದಾರರಿದ್ದರು. ಆದರೆ ತೀರಾ ಎಳವೆಯಲ್ಲೇ ಅದರ ಮರುನಾಮಕರಣವಾಗಿದ್ದರಿಂದ ಹೆಚ್ಚಿನ ತೊಂದರೆಯೇನು ಆಗಲಿಲ್ಲ. ಟ್ವಿಟರ್ ಅಥವಾ ಟ್ವೀಟ್ ಪದಕ್ಕಿರುವ ಶಕ್ತಿಯನ್ನು ಬಳಸಿಕೊಂಡು ಅದನ್ನು ಹಾಗೆಯೇ ಬಿಟ್ಟಿದ್ದರೆ ಒಳ್ಳೆಯದಿತ್ತು ಎನ್ನುವುದು ನನ್ನ ಅಭಿಪ್ರಾಯ. ಮಸ್ಕ್’ನ ತಲೆಯಲ್ಲಿ ಮುಂದೇನಿದೆಯೋ ಯಾರಿಗೆ ಗೊತ್ತು?