Tuesday, 27 February, 2024

“ಜಾಹೀರಾತುಗಳ ಅಜೆಂಡಾ ಜಗಜ್ಜಾಹೀರು ಮಾಡಲೇಬೇಕಾಗಿದೆ”

Share post

ಹದಿನೆಂಟನೇ ಶತಮಾನಕ್ಕೂ ಮೊದಲು ನಮಗೆ ಬದುಕುವ ರೀತಿಯನ್ನು ಕಲಿಯಲು ಶಾಲೆಗಳ ಅಗತ್ಯವೇ ಇರಲಿಲ್ಲ. ಜೀವನವೇ ಪಾಠಶಾಲೆಯಾಗಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಗಳಿದ್ದವು. ಸಾಮಾನ್ಯಬದುಕನ್ನು ಬಿಟ್ಟು ಹೆಚ್ಚಿನ ಜ್ಞಾನಾಸಕ್ತಿಯಿದ್ದವರು, ವ್ಯಾಕರಣ ಅಥವಾ ಸಾಹಿತ್ಯಾಸಕ್ತರು, ತತ್ವಜ್ಞಾನದ ಹಿಂದೆಬಿದ್ದವರು ಮತ್ತು ಸ್ಥಿತಿವಂತರು ಗುರುಕುಲಗಳನ್ನು ಆಶ್ರಯಿಸುತ್ತಿದ್ದರು.  ಬ್ರಿಟೀಷರಿಗೆ ಭಾರತದ ಈ ಮಜಲನ್ನು ಅರ್ಥೈಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಚರ್ಚಿನಿಂದ ಕಲಿತದ್ದು ಮಾತ್ರವೇ ಜ್ಞಾನ ಅಥವಾ ಕಲಿಕೆ ಎಂಬ ರಿಲೀಜಿಯನ್ ಮನಸ್ಥಿತಿಯ ಬ್ರಿಟೀಷ್ ಆಡಳಿತ ಕಲಿಕೆಯೆಂಬುದನ್ನು ಎಲ್ಲರಿಗೂ ತಲುಪಿಸಬೇಕು ಎಂಬ ವಸಾಹತುಶಾಹೀ ಆಲೋಚನೆಯೊಂದಿಗೆ ಶಾಲೆಗಳೆಂಬ ಕಲ್ಪನೆಯನ್ನು  ಪ್ರಾರಂಭಿಸಿತು. ಅದೂ ಅಲ್ಲದೇ, ಇಡೀ ದೇಶವನ್ನು ತನ್ನ ನಂಬಿಕೆಗಳಡಿಯಲ್ಲೇ ಒತ್ತೆಯಾಳಾಗಿಟ್ಟುಕೊಳ್ಳಲು, ಭಾರತೀಯರ ಆಲೋಚನೆಗಳನ್ನು ತಲೆಮಾರುಗಳ ಕಾಲ ಬದಲಾಯಿಸಿಲು ಇದೊಂದು ಪರಿಣಾಮಕಾರೀ ಆಯುಧವೆಂದು ಅವರಿಗೆ ತಿಳಿದಿತ್ತು. ಇದೇ ಆಯುಧದ ಮೂಲಕ ಎಲ್ಲಾ ಭಾರತೀಯ ವಿಚಾರಧಾರೆಗಳನ್ನು ಹಳೆಯದು, ಗೊಡ್ಡು, ತಿರೋಗಾಮಿಗಳೆಂದು ಕರೆಯಲಾಯಿತು.

 

ಬ್ರಿಟೀಷರ ನಂತರವೂ ನಮ್ಮ ಪಠ್ಯಕ್ರಮಗಳಲ್ಲಿ ಹಿಂದೂಗಳ ಎಲ್ಲಾ ಆಚರಣೆಗಳೂ, ಸಂಸ್ಕೃತಿ ಮತ್ತು ಪರಂಪರೆಯ ಅವಹೇಳನ ಅವ್ಯಾಹತವಾಗಿ ಸಾಗಿತು. ವಿಕ್ರಮಾದಿತ್ಯ, ಚಂದ್ರಗುಪ್ತಮೌರ್ಯ, ಪುಲಿಕೇಶಿ, ಕೃಷ್ಣದೇವರಾಯ, ಶಿವಾಜಿಯರ ಉದಹರಣೆಗಳಿದ್ದಾಗ್ಯೂ ಸದಾಕಾಲಕ್ಕೂ ನಮ್ಮ ಪುಸ್ತಕಗಳಲ್ಲಿ ಅಕ್ಬರನೇ ‘ದ ಗ್ರೇಟ್’ ಎಂದು ಚಿತ್ರಿಸಲ್ಪಟ್ಟ. ರಾಮಸೇತುವಾಗಲೀ, ರಾಧಾ-ಕೃಷ್ಣ, ರಾಧಾ-ಮೀರಾ, ಉಮಾ-ಮಹೇಶ್ವರರ ಕಥೆಗಳಾಗಲೀ ಪ್ರೇಮಕಥೆಗಳ ಉದಾಹರಣೆಗಳಾಗಲಿಲ್ಲ. ರಾನೀ ಕಿ ವವ್, ಚಾಂದ್-ಬಾವೋರಿ, ಹಂಪಿಯ ಕಮಲ ಮಹಲ್’ಗಳು ಪ್ರೀತಿಗಾಗಿ ಕಟ್ಟಿದ ಮಹಲುಗಳಾಗಲೇ ಇಲ್ಲ, ಬದಲಿಗೆ ತಾಜ್-ಮಹಲ್ ಅಂದರೆ ಪ್ರೀತಿ ಅನ್ನುವಂತೆ ಚಿತ್ರಿಸಲಾಯ್ತು. ಪ್ರಾಥಮಿಕ ಶಾಲೆಗಳಿಂದ ಹಿಡಿದು, ವಿಶ್ವವಿದ್ಯಾನಿಲಯಗಳವರೆಗೆ ಪ್ರಗತಿಪರರು ಕುಳಿತು ಮೊಘಲರ ಆಕ್ರಮಣದ ಕಾಲವನ್ನು, ಭಾರತದ ಮಹತ್ವ ಆಳ್ವಿಕೆಯ ಕಾಲವಾಗಿಸಿದರು. ವಿಜ್ಞಾನವನ್ನು ಭಾರತಕ್ಕೆ ಧಾರೆಯೆರೆದವರೇ ಬ್ರಿಟೀಷರು, ಅವರಿಲ್ಲದಿದ್ದಿದ್ದರೆ ಭಾರತ ಹಿಂದೂಗಳ ಅವಿವೇಕದಿಂದಾಗಿ ಹಾವಾಡಿಗರ ದೇಶವಾಗಿಯೇ ಉಳಿಯುತ್ತಿತ್ತು ಎಂಬ ಕಥೆಗಳನ್ನು ಕಟ್ಟಲಾಯ್ತು. ಒಟ್ಟಿನಲ್ಲಿ ಹಿಂದೂಗಳ ನಂಬಿಕೆಗೆ ಘಾಸಿಗೊಳಿಸುವುದು ಮತ್ತು ಅವರ ಆತ್ಮವಿಶ್ವಾಸಕ್ಕೆ ಪೆಟ್ಟುಕೊಟ್ಟು ಕೂರಿಸುವುದು ಅವ್ಯಾಹತವಾಗಿ ಹಾಗೂ ವ್ಯವಸ್ಥಿತವಾಗಿ ನಡೆದುಬಂದ ಕುಟಿಲತಂತ್ರ.

 

ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಜಗತ್ತು ಹೊಸ ಶಾಲೆಗಳಿಗೆ ತೆರೆದುಕೊಳ್ಳಲಾರಂಭಿಸಿತು. ಆದರೆ ಸಿಮೆಂಟು ಗೋಡೆಗಳ ನಡುವೆ ಕೂತು, ಮಾಸ್ತರರಿಂದ ಕಲಿಯುವ ಶಾಲೆಗಳಲ್ಲ. ಬದಲಿಗೆ ಎಲ್ಲಿ ಬೇಕಾದರೂ ನಿಮ್ಮೊಂದಿಗೆ ಕೊಂಡೊಯ್ಯಬಹುದಾದ ಶಾಲೆಗಳು. ಮೊದಲಿಗೆ ಇವು ಹಾಳೆಯರೂಪದಲ್ಲಿದ್ದು, ಪತ್ರಿಕೆಗಳೆಂದು ಕರೆಸಿಕೊಳ್ಳುತ್ತಿದ್ದವು. ನಿಧಾನಕ್ಕೆ ನಿಮ್ಮ ಮನೆಯ ಹಜಾರದ ಮೂಲೆಯಲ್ಲಿ ದೂರದರ್ಶನವೆಂದ ಹೆಸರಿನಲ್ಲಿ ಪಟ್ಟಾಗಿ ಕೂತು ನಿಮಗೆ ಜಗತ್ತಿನ ಆಗುಹೋಗುಗಳನ್ನು ತಿಳಿಸಲಾರಂಭಿಸಿದವು. ಶಾಲೆಗಳಲ್ಲಿ ಕಲಿತದ್ದೆಲ್ಲವೂ ನಿಜವಲ್ಲ ಎಂಬ ಸತ್ಯಗಳು ಜನರಮುಂದೆ ಬಂದಿಳಿಯಲಾರಂಭಿಸಿತು. ಇದರ ಅಪಾಯವನ್ನು ಮನಗಂಡ ಪ್ರಗತಿಪರರು ತಕ್ಷಣ ಈ ಮುದ್ರಣ ಮಾಧ್ಯಮ ಮತ್ತು ದೂರದರ್ಶನಗಳ ಕಚೇರಿಗಳಿಗೆ ದಾಳಿಯಿಟ್ಟು ತಮ್ಮ ಖಾಯಂನಿವಾಸವಾಗಿಸಿಕೊಂಡರು. ಹಿಂದೂಅವಹೇಳನ ಅಲ್ಲಿಯೂ ಮುಂದುವರೆಯಿತು. ಆದರೆ ಜನರನ್ನು ಆದರೆ ಉತ್ಪನ್ನಗಳ ಹೆಚ್ಚುಗಾರಿಕೆಯ ಬಗ್ಗೆ ಹೇಳಬೇಕಾದ ಜಾಹೀರಾತುಗಳು ಇತ್ತೀಚೆಗೆ ಇದನ್ನು ಬಳಸಿಕೊಂಡು ತಮಗಾಗದವರನ್ನು ಹಳಿಯುವ ಕೆಲಸ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸದೊಂದು ಪ್ರಯೋಗ.

ಸರ್ಫ್-ಎಕ್ಸೆಲ್’ನ ಜಾಹೀರಾತು ಮತ್ತದರ ಸುತ್ತಮುತ್ತಲಿನ ಕಾಂಟ್ರವರ್ಸಿ ಎಲ್ಲರಿಗೂ ನೆನಪಿರಬಹುದು. ಹೋಳಿಹಬ್ಬದ ದಿನ ಮಕ್ಕಳು ಬಣ್ಣದ ನೀರು ಎರಚುತ್ತಿರುವಾಗ, ಹೆಣ್ಣುಮಗುವೊಂದು ಸೈಕಲ್ಲಿನಲ್ಲಿ ಬಂದು “ಹಾಕಿ ಹಾಕಿ ನಂಗೆ ಬಣ್ಣ ಹಾಕಿ” ಅಂತಾ ಎಲ್ಲರಿಂದಲೂ ಬಣ್ಣವನ್ನೆರಚಿಸಿಕೊಂಡು ಅವರ ಸ್ಟಾಕ್ ಖಾಲಿ ಮಾಡಿಸಿ, ಆಮೇಲೆ ತನ್ನ ಗೆಳೆಯನ ಮನೆಗೆ ಹೋಗಿ “ಬಾ ಈಗ. ಎಲ್ಲರದ್ದೂ ಬಣ್ಣ ಖಾಲಿಯಾಯ್ತು” ಅಂತಾ ಕರೆಯುತ್ತಾಳೆ. ಹುಡುಗ ಬಿಳಿ ಜುಬ್ಬ ಪೈಜಾಮ ಟೋಪಿ ಹಾಕಿಕೊಂಡು ಮನೆಯಿಂದ ಹೊರಗೆಬರ್ತಾನೆ. ಎಲ್ಲರ ಮೂಗಿನ ಮೇಲೆ ಬೆರಳಿಡುವಂತೆ ಆ ಹೆಣ್ಣುಮಗು ಆ ತನ್ನ ಗೆಳೆಯನನ್ನ ಕರೆದುಕೊಂಡು ಹೋಗಿ ನಮಾಜು ಮಾಡೋಕೆ ಮಸೀದಿಯ ತನಕ ಬಿಟ್ಟು ಬರುತ್ತಾಳೆ. ಸಮಾಜದ ಮಧ್ಯ ಸಾಮರಸ್ಯ ಮೂಡಿಸುವುದಿದ್ದರೆ, ಕಲೆಗಳು ಒಳ್ಳೆಯವೇ” ಅಂತಾ ಜಾಹೀರಾತಿನವರು ತಮ್ಮ ಶಾಂತಿ ಮಂತ್ರ ಹಾಡ್ತಾರೆ.

ಈ ತರಹ ಮಕ್ಕಳನ್ನು ‘ಮತ-ಧರ್ಮಗಳಿಂದ ಹೊರಗಿಡುವ ವಾದದ’ ಸರ್ಫ್-ಎಕ್ಸೆಲ್’ನವರದ್ದು ಇದೇ ಮೊದಲ ಜಾಹೀರಾತಲ್ಲ. ಇದಕ್ಕೂ ಮುಂಚೆ ರಮ್ಜಾನ್ ಸಮಯದಲ್ಲಿ ಒಬ್ಬ ಮಗು ಹೇಗೆ ಬೆಳಿಗ್ಗೆಯೆದ್ದು, ಪಕ್ಕದ ಬೀದಿಯ ಕಿವುಡ ತಾತನಿಗೆ ಬೆಳಗಿನ ಉಪವಾಸಕ್ಕೆ ಅಲಾರಾಂ ಕೇಳಿರಲಿಕ್ಕಿಲ್ಲ ಅಂತಾ ಹೇಳಿ, ಎಲ್ಲೆಲ್ಲೋ ಎದ್ದು ಬಿದ್ದು ಮೈಯೆಲ್ಲಾ ಗಬ್ಬೆಬ್ಬಿಸಿಕೊಂಡು ಆ ತಾತನನ್ನು ಎಬ್ಬಿಸಿ ‘ಬೇಗ ಏಳದಿದ್ದರೆ ರೋಝಾ ಹೇಗೆ ಮಾಡುತ್ತೀಯಾ!’ ಅಂತಾ ಉಪದೇಶ ಕೊಡುವುದು ಮಾತ್ರವಲ್ಲದೇ, ತನ್ನೊಂದಿಗೆ ತಂದ ಖರ್ಜೂರವನ್ನೂ ಕೊಟ್ಟು ಹೋಗ್ತಾನೆ. ಮನೆಯಲ್ಲಿ ಅಮ್ಮ ಇದನ್ನೆಲ್ಲಾ ಕೇಳಿ “ಎಂತಾ ಒಳ್ಳೆಯ ಮಗ ನನ್ನವ. ಪರಧರ್ಮ ಸಹಿಷ್ಣು” ಅಂತಾ ಸಂತೋಷಪಡ್ತಾಳೆ. ಜಾಹೀರಾತು ಚೆನ್ನಾಗಿಯೇ ಇದೆ. ಮುದ್ದಾದ ಮಕ್ಕಳು. ಚೆಂದದ ಸಿನಿಮಾಟೋಗ್ರಫಿ. ಆ ಹುಡುಗನ ಮಿಂಚಿನಂತಾ ಬಿಳುಪಿನ ಬಟ್ಟೆ…..ಎಷ್ಟು ಚಂದ ಅಂತೀರಿ! ಆದರೆ ಇಲ್ಲಿ ಮಕ್ಕಳ ಹೆಗಲಮೇಲೆ ಬಂದೂಕನ್ನಿಟ್ಟು ಚಲಾಯಿಸಿದ ಬುಲೆಟ್ಟೊಂದು ಯಾರಿಗೂ ಕಾಣೋದೇ ಇಲ್ಲ. ಕಂಡರೂ ಸಹ ಅದನ್ನ ವ್ಯಕ್ತಪಡಿಸೋಕೆ ಜನ ಹೆದರ್ರಾರೆ. ಮಕ್ಕಳ ಮುಗ್ದಮನಸ್ಸಿನ ಜಾಹೀರಾತನ್ನು ಅರಿಯಲಾಗದ ನನ್ನದೇ ತಪ್ಪೇನೋ, ಮಕ್ಕಳ ವಿಚಾರದಲ್ಲಿ ಮತ-ಧರ್ಮಗಳನ್ನು ಬದಿಗಿಡಬೇಕೇನೋ ಎಂದುಕೊಂಡುಬಿಡ್ತಾರೆ. ಯಾಕಂದರೆ ಮಕ್ಕಳನ್ನ ಇಂತಹಾ ಅಜೆಂಡಾಗಳಿಗೂ ಬಳಸಿಕೊಳ್ಳಬಹುದು ಅಂತಾ ಆ ಜನರೂ ಯೋಚಿಸಿರುವುದಿಲ್ಲ. ಆದರೆ ಕಂಪನಿಗಳು ಈ ಮುಗ್ದತೆಯ ಅಡಿಯಲ್ಲೇ ತಮ್ಮದೊಂದು ಬೇಳೆಬೇಯಿಸ್ಕೊಂಡು ಬಿಡ್ತಾರೆ. ಜನ ಅಯ್ಯೋ ಎಷ್ಟು ಕ್ಯೂಟ್ ನೋಡ್ರೆ ಅಂತಾ ಮೂಗಿನ ಮೇಲೆ ಬೆರಳಿಡಬೇಕಾದ್ರೆ, ಆಗಬೇಕಾದಷ್ಟು ಡ್ಯಾಮೇಜ್ ಆಗಿಬಿಟ್ಟಿರುತ್ತೆ.

ಈಗ ನೋಡಿ, ನಮ್ ಲಿಬರಲ್ಲುಗಳ ಸಾಮಾನ್ಯ ವಾದ ಏನು? ಮಕ್ಕಳನ್ನು ಮತ-ಧರ್ಮದ ಹೆಸರಲ್ಲಿ ಕಲುಷಿತಗೊಳಿಸಬಾರದು ಅಂತಾ ಅಲ್ವಾ! ಸರಿ ಒಪ್ಪೋಣ. ಅಂದರೆ ಅವರ ಪ್ರಕಾರ ಮಕ್ಕಳು ತಮ್ಮತಮ್ಮಲ್ಲೇ ಯಾವುದೇ ಮತ-ಧರ್ಮದ ಕಟ್ಟುಪಾಡುಗಳಿಲ್ಲದೇ ಆಟವಾಡಿಕೊಂಡಿರಬೇಕು ತಾನೇ? ಹಾಗಾದ್ರೆ, ಆ ಜಾಹೀರಾತಿನಲ್ಲಿ ಅದು ಹೇಗೆ ಆ ಮುಸ್ಲಿಂ ಹುಡುಗನಿಗೆ ತನ್ನ ಓರಗೆಯವರೊಡನೆ ಸೇರಿ ಹೋಳಿಯಾಟವಾಡುವುದಕ್ಕಿಂತಾ ತನ್ನ ನಮಾಜ್ ಹೆಚ್ಚು ಮುಖ್ಯವಾಗುತ್ತೆ? ನಮಾಜು ಹೇಗಿದ್ರೂ ದಿನಕ್ಕೈದು ಸಲ ಬರುತ್ತೆ, ಹೋಳಿ ಹಬ್ಬ ವರ್ಷಕ್ಕೊಮ್ಮೆ ಬರೋದು. ಇಡೀ ವಠಾರದ ಮಕ್ಕಳೆಲ್ಲಾ ಆಟವಾಡಿಕೊಂಡಿರಬೇಕಾದ್ರೆ, ಪಾಪ ಅವನೊಬ್ಬ ಮಾತ್ರ ಅದರಿಂದ ಹೊರಗುಳಿದು ಪ್ರಾರ್ಥನೆಗೆ ಹೋಗಬೇಕಾ? ಅದನ್ನ ಆ ಮಗು ತಾನಾಗಿಯೇ ಆಯ್ಕೆ ಮಾಡಿಕೊಳ್ತಾ ಅಥವಾ ಧರ್ಮಬೀರು ಪೋಷಕರಿಂದ ಅವನಮೇಲೆ ಹೇರಲ್ಪಡ್ತಾ? ಏಳರಿಂದ ಹದಿನೈದರ ವಯಸ್ಸಿನಲ್ಲಿ ಆಟಕ್ಕಿಂತಾ ಮೇಲೆ ಪ್ರಾರ್ಥನೆಯನ್ನ ಆಯ್ಕೆ ಮಾಡಿಕೊಳ್ಳೋ ಮಕ್ಕಳನ್ನ ನನಗೆ ತೋರಿಸಿ ನೀವು ನೋಡುವಾ! ಆ ಮಗುವಿನ ಮೇಲೆ ದಿನಕ್ಕೈದು ಬಾರಿ ಪ್ರಾರ್ಥಿಸುವಂತೆ, ಅದೂಕೂಡಾ ಆಟ-ಪಾಠ ಹಬ್ಬ-ಹರಿದಿನಗಳನ್ನೆಲ್ಲಾ ಬದಿಗಿಟ್ಟು ಪ್ರಾರ್ಥಿಸುವಂತೆ ಬಲವಂತವಾಗಿ ಹೇರಿದ ಅವನ ಪೋಷಕರ ಮೇಲೆ ನಮ್ಮ ಲಿಬರಲ್ಲುಗಳ ಕೂಗು ಯಾಕಿಲ್ಲ!? ಆದರೆ ಅದು ಹೇಗೆ ರೋಝಾ ಮಾಡೋದು ಮಾತ್ರ ಮಕ್ಕಳ ಮನಸ್ಸಲ್ಲಿ ಧಾರ್ಮಿಕ ಭಾವನೆ ಮೂಡಿಸದೇ ಸೆಕ್ಯುಲರ್ ಆಗುತ್ತೆ, ಹಾಗೂ ಹೋಳಿಯ ಹಬ್ಬ ಮಾತ್ರ ಕಲೆಯನ್ನು ಮೂಡಿಸುತ್ತೆ!? ಈಗ ಈ ಜಾಹೀರಾತು ಧಾರ್ಮಿಕ ಐಕ್ಯತೆಯ ಹರಿಕಾರರು ಮಾಡಿದ್ದು ಅಂತಾ ಸುಖೋನ್ಮಾದದಲ್ಲಿ ತೇಲಾಡ್ತಾಇರೋ ಲಿಬರಲ್ಲುಗಳಿಗೆ, ಇದೇ ಜಾಹೀರಾತು ತಮ್ಮದೇ ಪ್ರಗತಿಪರ, ತೆರೆದಮನಸ್ಸಿನ ಚಿಂತನೆಗೆ ಧಕ್ಕೆಯೊಡ್ತಾ ಇದೆ ಅಂತಾ ಯಾಕನ್ನಿಸುತ್ತಿಲ್ಲ! ಮತ-ಧರ್ಮಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಅನ್ನೋ ಈ ಆಷಾಡಭೂತಿಗಳಿಗೆ, ಇದೇ ಜಾಹೀರಾತಿನಲ್ಲಿ ಎರಡು ಧರ್ಮಗಳು ಅದೆಷ್ಟು ಬೇರೆ ಬೇರೆ, ಹಾಗೂ ಹೇಗೆ ಒಂದು ಮಗುವಿನ ಮೇಲೆ ಅವನ ಆಯ್ಕೆಯ ಬಗ್ಗೆ ತಲೆಕೆಡಿಸಿಕೊಳ್ಳದೆಯೇ ಧರ್ಮ ಹೇರಲ್ಪಟ್ಟಿದೆ ಅನ್ನೋದು ಯಾಕೆ ಕಾಣುತ್ತಿಲ್ಲ!?

ಮೊನ್ನೆಬಂದ ತನಿಷ್ಕ್ ಜಾಹೀರಾತು ಕೂಡಾ ಮೇಲ್ನೋಟಕ್ಕೆ ಚೆಂದ ಅನಿಸಿದರೂ, ಅದರ ಪರವಾದ ವಾದಗಳು ನಿಮಗೊಂದು ಕ್ಷಣಕ್ಕೆ ನಿಜ ಅನಿಸಿದರೂ ಅಲ್ಲಿರುಗ ಗ್ರಹಿಕೆಯ ದೋಷವನ್ನೊಮ್ಮೆ ಗಮನಿಸಿ. ಯಾವ ಮಾಲಿನ ವ್ಯಾಪಾರ ಮಾಡುತ್ತಿದ್ದಿರೋ ಅದರ ಬಗ್ಗೆ ಉತ್ಪ್ರೇಕ್ಷೆ ಮಾಡೋದು, ಸುಳ್ಳು ಹೇಳೋದು ಬೇರೆ ಉದಾ: ಸೋಪೊಂದು 99.9% ಕ್ರಿಮಿಗಳನ್ನು ಕೊಲ್ಲುತ್ತವೆಂಬ ರೀತಿ. ಅದನ್ನು ಎಲ್ಲಾ ಪ್ರಾಡಕ್ಟುಗಳೂ ಮತ್ತವುಗಳ ಜಾಹೀರಾತುಗಳೂ ಮಾಡುತ್ತವೆ. ಈ hyperbole approach ಎನ್ನುವುದು ಒಂದು ಸ್ಥಾಪಿತ ಸಿದ್ಧಾಂತ. ಅದನ್ನು ನೋಡಿ ನಂಬುವುದು ಅವರವರ ಮುಗ್ಧತೆಗೆ ಬಿಟ್ಟದ್ದು. ಆದರೆ, ತನಿಷ್ಕ್ ಮಾರುತ್ತಿರುವುದು ಒಡವೆಗಳನ್ನು. ಅವರು ತಮ್ಮ ಜಾಹೀರಾತಿನಲ್ಲಿ “ಈ ಒಡವೆಯ ಹೊಳಪು ಎಷ್ಟೆಂದರೆ, ನೀವು ಟ್ಯೂಬ್ ಲೈಟ್ ಹಾಕುವ ಅಗತ್ಯವಿಲ್ಲ” ಎಂದೇನೂ ಹೇಳಲಿಲ್ಲ. ಬದಲಿಗೆ, ಆ ಒಡವೆಗಳ ಬಗ್ಗೆ ಒಂದು ಮಾತೂ ಹೇಳದೇ, ಸೀದಾ ಭಾವನೆಗಳ ಬಗ್ಗೆ ಸುಳ್ಳು ಹೇಳಿದರು. ಸೀಮಂತ ಅಥವಾ ಅದರ ಸಮಾನಾರ್ಥಕ ಪದ ಬಳಸದೆ ‘ರಸಮ್ಮು’ ಎಂದರು. ಹುಡುಗಿಯ ಮನೆಯವರನ್ನು ಸಮಾರಂಭದಲ್ಲಿ ತೋರದೇ, ಮುಸ್ಲಿಮನನ್ನು ಮದುವೆಯಾದ ಹಿಂದೂ ಹುಡುಗಿಯನ್ನು ಅವರ ಕುಟುಂಬದವರು ಬಿಟ್ಟೇಬಿಟ್ಟಿದ್ದಾರೆ, ಹಾಗಾಗಿ ಮುಸ್ಲಿಂ ಅತ್ತೆಯೇ ಮುಂದೆನಿಂತು ಎಲ್ಲವನ್ನೂ ಮಾಡಿದಳಿ ಎಂಬಂತೆ ಕೆಟ್ಟವರನ್ನಾಗಿ ಮಾಡಿದರು. ಹಿಂದೂ ಹುಡುಗಿಗೆ, ಹಿಂದೂ ರಸಮ್ಮು ಮಾಡುವಾಗ ಒಂದೂ ಹಿಂದೂಲಾಂಛನ ಇಲ್ಲದಂತೆ ತೋರಿದರು. ಇದೆಲ್ಲಾ surrogate ಸಂಕೇತಗಳು. ಇಲ್ಲಿನ ಸುಳ್ಳು ಕಂಪನಿಮಾರುತ್ತಿರುವ ಸರಕಿನದ್ದಲ್ಲ. ಬದಲಿಗೆ, ಪ್ರೀತಿಯ ಹೆಸರಿನಲ್ಲಿ ಪರೋಕ್ಷವಾಗಿ ಒಂದು ಧರ್ಮದ ವಿರುದ್ಧ ಮಾಡುತ್ತಿರುವ ಅನ್ಯಾಯ. ಒಡವೆಯ ಬಗ್ಗೆ “ಅಲಾಸ್ಕದ ತಂಪುಚಿನ್ನದಿಂದ ಮಾಡಿದ್ದು, ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರು ಮಾಡಿದ್ದು” ಅಂತಾ ಎಷ್ಟಾದರೂ ಸುಳ್ಳುಹೇಳಲಿ. ವ್ಯವಹಾರದಲ್ಲಿ ಅದು ತಪ್ಪಲ್ಲ. ಆದರೆ, ಅದರ ಹೆಸರಿನಲ್ಲಿ ವಾಸ್ತವವನ್ನು ಮರೆಮಾಚಿ ಇಲ್ಲದ ಒಳಿತನ್ನು ಸಾರ್ವತ್ರಿಕ ಮಾಡುವುದು ಬೇಕಿಲ್ಲ. ವಿರೋಧ ಇರುವುದು ಅಲ್ಲಿ. ಇದು ಅರ್ಥವಾಗಬೇಕು. ನೆನಪಿದೆಯೇ, 90ರ ದಶಕದ ಧಾರಾದ ಜಾಹೀರಾತಿನಲ್ಲಿ ಕೂಡಾ ಪ್ರಾಡಕ್ಟಿನ ಬಗ್ಗೆಯಲ್ಲದೇ ಅಮ್ಮನ ಪ್ರೀತಿಯ ಬಗ್ಗೆ ಮಾತನಾಡುವ ಜಾಹೀರಾತೊಂದಿತ್ತು. ಯಾರಾದರೂ ಅದರ ಬಗ್ಗೆ ತಲೆಕೆಡಿಸಿಕೊಂಡಿದ್ದರಾ? ಆ ರೀತಿಯ ಮೃದುಸಂದೇಶದ ಜಾಹೀರಾತುಗಳು ಎಲ್ಲಿ ಹೋದವು?

ಇವರ ಜಾಹೀರಾತುಗಳಲ್ಲಿ (ಚಲನಚಿತ್ರಗಳಲ್ಲೂ ಸಹ), ಬ್ರಾಹ್ಮಣ ಮಾತ್ರ ತಿರೋಗಾಮಿ, ದ್ವೇಷ ಸಾಧಿಸುವವ, ಹಳೇಕಾಲದವ, ಮೂಡನಂಬಿಕೆಗಳ ಪ್ರತಿಪಾದಕ. ಇವರ ಅದೇ ಚಿತ್ರಗಳಲ್ಲಿ ದರ್ಗಾದ ಮುಂದೆ ಕೂತ ದರವೇಶಿ, ಶಾಂತಿದೂತರ ಧರ್ಮಗುರು, ಚರ್ಚಿನ ಫಾದರ್ ಎಂದಿಗೂ ಕೆಟ್ಟವರಾಗಲಾರರು. ಬದಲಿಗೆ ಅವರು ಯಾವತ್ತಿಗೂ ಪ್ರಗತಿಪರ ಆಲೋಚನೆಯುಳ್ಳವರು, ಜಗತ್ತಿನ ಅತ್ಯುತ್ತಮ ತತ್ವಶಾಸ್ತ್ರಜ್ಞರು. ಜ್ಯೋತಿಷ್ಯ ಮೂಡನಂಬಿಕೆ, ಆದರೆ ದರ್ಗಾದ ಬಾಬಾ ಕೊಟ್ಟ ಕಪ್ಪುದಾರ ಜೀವವನ್ನೇ ಉಳಿಸಬಲ್ಲುದು, ಫಾದರ್ ಕೊಟ್ಟ ಶಿಲುಬೆ ಗುಂಡನ್ನೇ ತಡೆದು ಬದುಕಿಸಬಲ್ಲದು. ಬೇರೆಲ್ಲಾ ಸಮಯದಲ್ಲಿ ಹಿಂದೂ ಹಬ್ಬಗಳು ಮತ್ತು ಸಂಪ್ರದಾಯಗಳೆಂದರೆ ರಿಗ್ರೆಸಿವ್, ಪ್ಯಾಟ್ರಿಯಾರ್ಕಿಯಲ್ ಮತ್ತು ಪುರೋಹಿತಶಾಹಿ ಎಂದು ಮೂಗು ಮುರಿಯುವ ಇದೇ ಲಿಬರಲ್ಲುಗಳಿಗೆ ಸೌಹಾರ್ದತೆಯನ್ನು ಸಾರಬೇಕಾದರೆ ಅದೇ ಹಿಂದೂ ಹಬ್ಬಗಳ ಮತ್ತು ಸಂಪ್ರದಾಯಗಳ ನೆನಪಾಗುತ್ತದೆ. ಅನ್ಯಧರ್ಮಿಯನೊಬ್ಬ ಫ್ರೇಮಿನೊಳಗೆ ಬಂದಾಕ್ಷಣ ಇವರ ಪಾಲಿಗೆ ಗೊಡ್ಡು ಸಂಪ್ರದಾಯಗಳಾಗಿದ್ದವೆಲ್ಲಾ “ವಾವ್…ಎಷ್ಟು ಚೆಂದ. ಇದನ್ನೆಲ್ಲಾ ಮಾಡುತ್ತಿರಬೇಕು ನಾವು” ಎನಿಸಿಬಿಡುತ್ತದೆ. ಇದೇ ಇಂಡಿಯಾ, ನಿಜವಾದ ಐಡಿಯಾ ಆಫ್ ಇಂಡಿಯಾ ಎಂದೆಲ್ಲಾ ಪುಂಗಲಾರಂಭಿಸುತ್ತಾರೆ.

ಇಷ್ಟಲ್ಲದೇ ಈ ಕಂಪನಿಗಳಿಗೆ ಹಿಂದೂ ಹಬ್ಬಗಳಲ್ಲಿ ಮಾತ್ರ ಧಾರ್ಮಿಕ ಏಕತೆ ಮೂಡಿಸುವ ಮನಸ್ಸಾಗುತ್ತೆ? ಹಿಂದೂಗಳ ಮನೆಯಿಂದ ಒಳ್ಳೆಯ ಚಹಾದ ಪರಿಮಳ ಬಂದು ಮುಸ್ಲಿಂದಂಪತಿಗಳು ಬಂದು ಚಹಾಕೇಳುವ ಜಾಹೀರಾತು ಯಾಕೆ ಬರುತ್ತಿಲ್ಲ? ಯಾಕೆ ಮೊಹರಂ ದಿನ “ಕಲೆ ಒಳ್ಳೆಯದೇ” ಅನ್ನೋ ಜಾಹೀರಾತು ಬರೋದಿಲ್ಲ? ತನಿಷ್ಕ್ ಜಾಹೀರಾತಿನಲ್ಲಿ ಮದುವೆಯಾದ ದಿನ ಹಿಂದೂಗಂಡನ ಮನೆಗೆ ಬಂದು ಮುಸ್ಲಿಂಮದುಮಗಳಿಗೇಕೆ, ಹಿಂದೂ ಅತ್ತೆ ನಿನ್ನ ಪರ್ದಾ ತೆಗಿ ಮಗಳೇ ಅಂತಾ ಹೇಳಿ, ಅವಳದನ್ನು ತೆಗೆದಾಗ ಆಕೆ ಧರಿಸಿದ ತನಿಷ್ಕಿನ ಒಡವೆಗಳು ಫಳಫಳ ಹೊಳೆಯುವಂತೆ ತೋರಿಸಲಾಗುವುದಿಲ್ಲ. ಮೋರ್ಫಿ ರಿಚರ್ಡ್ಸ್ ಎಂಬ ಕಂಪನಿ ತನ್ನ ಎಪಿಲೇಟರ್ ಜಾಹೀರಾತಿನಲ್ಲಿ ಹಿಂದೂಹೆಣ್ಣೊಬ್ಬಳ ಸೀರೆ ಅಥವಾ ಡ್ರೆಸ್ಸನ್ನು ತೊಡೆಯವರೆಗೆ ಕತ್ತರಿಸಿ ಪೋಸ್ಟರ್ ತಯಾರಿಸಿದೆ. ಯಾಕೆ ಬುರ್ಖಾವನ್ನೂ, ಚರ್ಚಿನ ಸಿಸ್ಟರುಗಳ ರೋಬ್ ಅನ್ನೂ ಹೀಗೇ ಕತ್ತರಿಸಿಯೂ ಹೆಣ್ಣಿನ ಕಾಲಿನ ಸೌಂದರ್ಯದ ರಹಸ್ಯವನ್ನು ಸಾರಲು ಸಾಧ್ಯವಿಲ್ಲ!?

ಎಲ್ಲಕ್ಕೂ ಕೊನೆಯದಾಗಿ, ಸೌಹಾರ್ದತೆಯನ್ನು ಸಾರುವ ಕೆಲಸವನ್ನು ಈ ಜಾಹೀರಾತು ಮಾಧ್ಯಮಕ್ಕೆ ವಹಿಸಿಕೊಟ್ಟವರ್ಯಾರು?

One comment on ““ಜಾಹೀರಾತುಗಳ ಅಜೆಂಡಾ ಜಗಜ್ಜಾಹೀರು ಮಾಡಲೇಬೇಕಾಗಿದೆ”

Sadashivaiah

ಜಾಹಿರಾತಿನಲ್ಲಿ ನ ಹಿಡನ್ ಅಜೆಂಡವನ್ನ ಎಳೆಎಳೆಯಾಗಿ ಬಯಲುಗೊಳಿಸಿದ್ದೀರಿ

Reply

Leave a Reply

Your email address will not be published. Required fields are marked *