Friday, 19 April, 2024

ಯಕ್ಷ ಪ್ರಶ್ನೋತ್ತರ

Share post

ಒಬ್ಬ ಹಿಂದೂ:

(*) ಒಂದೇ ಭೋದಕನನ್ನೇ ಹಿಡಿದುಕೊಂಡು ನೇತಾಡ್ತಾನಾ? – ಇಲ್ಲ.
ಬದಲಿಗೆ “ಭೋಧಕರಿಗೆ ಕೊನೆಯೇ ಇಲ್ಲ. ಇವತ್ತಿಗೂ ಹೊಸಬರು ಹುಟ್ತಾನೇ ಇದ್ದಾರೆ ನೋಡಿ. ಜಗತ್ತು ಜೀವನ ಸೃಷ್ಟಿ ಸಾವು ಇವನ್ನೆಲ್ಲಾ ಅರ್ಥಸಿಕೊಳ್ಳೋಕೆ ಒಂದು ಜನ್ಮ ಸಾಕಾಗೊಲ್ಲ ಸ್ವಾಮಿ” ಅಂತಾನೇನೋ.

(*) ಒಂದೇ ಪುಸ್ತಕದಲ್ಲಿ ಇಡಿ ಜಗತ್ತಿನ ಮರ್ಮ ಅಡಗಿದೆ ಅಂತಾ ನಂಬ್ತಾನಾ? – ಇಲ್ಲ.
“ಇಡೀ ಜಗತ್ತನ್ನ ಒಂದೇ ಪುಸ್ತಕದಲ್ಲಿ ಅರ್ಥೈಸಿಕೊಳ್ಳಬೇಕಾದರೆ ಆ ಪುಸ್ತಕದ ಕೊನೆಯ ಪುಟಸಂಖ್ಯೆ infinity ಆಗಿರಬೇಕು” ಅಂತಾನೇನೂ. ಗಣಿತಜ್ಞರಿಗೆ ಈ ಸಾಲು ಸುಲಭವಾಗಿ ಅರ್ಥವಾಗಬಹುದು.

(*) ಒಬ್ಬನೇ ದೇವರು ಅಂತಾನಾ? – ಇಲ್ಲ.
“ಒಬ್ಬನೂ ಇಲ್ಲ ಅಂತಾನೆ. ಸಾವಿರವೂ ಇರಬಹುದು ಅಂತಾನೆ. ದೇವರನ್ನು ನಾವು define ಮಾಡುವುದು ಸಾಧ್ಯವಾದ ದಿನ, ನಾವೇ ದೇವರಾಗ್ತೀವಿ. ಆದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಅಂತಾನೇನೋ.

(*) ದೇವರ ಮಾತನ್ನು, ಪುಸ್ತಕಗಳ ಭೋಧನೆಯನ್ನು ಮೀರೋದು ಅಕ್ಷಮ್ಯ ಅಪರಾಧ ಅಂತಾನಾ? – ಇಲ್ಲ.
“ಮೀರಿದವನೇ ಬೆಳೆದಾನು. ಆದರೆ ಮೀರುವುದಕ್ಕೂ ಮಿತಿಯಿರಲಿ. ಯಾಕೆಂದರೆ ಮಿತಿಮೀರಿ ಮಿತಿಮೀರಿದರೆ, ನಾವು ತಲುಪುವುದು ಎತ್ತರವನ್ನಲ್ಲ. ಉತ್ತರವಿಲ್ಲದೆ ತತ್ತರವಾಗುವ ಸ್ಥಿತಿಯನ್ನಷ್ಟೇ” ಅನ್ನಬಹುದು.

(*) ಮನುಸ್ಮೃತಿಯೇ ಪರಮೋಚ್ಛ ಅಂತಾನಾ? – ಇಲ್ಲ.
ಬದಲಿಗೆ, ಇಂತಹದೊಂದು ಪ್ರಶ್ನೆಯನ್ನು ಕೇಳಿದ ನಿಮ್ಮ ಬುದ್ಧಿಮತ್ತೆಯನ್ನು ಅನುಮಾನಿಸಿ ನೋಡುತ್ತಾ, “ಅದು ಸ್ಮೃತಿ. ಅಂದಮೇಲೆ ಅದು ಅದ್ಯಾವುದೋ ಕಾಲದ ನೆನಪಷ್ಟೇ ಆಗಿರಲಿಕ್ಕೆ ಸಾಧ್ಯ. ಅದೇನೂ protocol document ಅಲ್ಲ. ಇಷ್ಟಕ್ಕೂ ನೀನಂದುಕೊಂಡಿರುವ ಮನುಸ್ಮೃತಿ ಸತ್ತು ಯಾವುದೋ ಕಾಲವಾಗಿದೆ. ಮನ್ವಂತರಗಳೇ ಸರಿದುಹೋಗಿವೆ. ನೀನು ಓದಿರಬಹುದಾದ ಸ್ಮೃತಿ ‘ಯಾಜ್ಞವಲ್ಕ್ಯ ಸ್ಮೃತಿ’ಯಾಗಿರಲು ಸಾಧ್ಯವಷ್ಟೇ. ಅದನ್ನೂ ಸಹ ಯಾವ ‘ಅಖಂಡ ಭಾರತ’ದ ರಾಜನೂ ಸಹ ಧರ್ಮಗ್ರಂಥವೆಂದಾಗಲೀ, ಸಮಾಜದ ಕಟ್ಟುಪಾಡುಗಳ ಪುಸ್ತಕವೆಂದಾಗಲೀ ಘೋಷಿಸಿರಲಿಲ್ಲ ಎಂಬುದು ನೆನಪಿಸಿಕೋ” ಎಂದಾನು.

(*) ದೇವರ ಸಾಮ್ರಾಜ್ಯ ಒಂದು ದಿನ ಬಂದೇ ಬರುತ್ತದೆ ಎನ್ನುತ್ತಾನಾ? – ಇಲ್ಲ.
“ದೇವರಂತಹಾ ಜನರು ಬಾಳಿ, ಬದುಕಿ, ಸತ್ತು ವರ್ಷಗಳೇ ಆಗಿವೆ. ಅದರೊಂದಿಗೇ ದೇವರ ಸಾಮ್ರಾಜ್ಯವೂ ಪತನಗೊಂಡಾಗಿದೆ. ಈಗಿರುವುದು ಮನುಷ್ಯರ ಸಾಮ್ರಾಜ್ಯವಷ್ಟೇ. ಹಾಗಾಗಿಯೇ ಧರ್ಮದ ಅರಿವಿನ ಅಗತ್ಯ, ಹಿಂದಿಗಿಂತಲೂ ಇಂದು ಹೆಚ್ಚು. ಬರೀ ‘ಅಭಿವೃದ್ಧಿ’ಯಾದರೆ ಸಾಕಾಗೊಲ್ಲ, ‘ಬೆಳವಣಿಗೆ’ಯೂ ಆಗಬೇಕು. ಆಗಲೇ ಮಾನವ ಈ ಭೂಮಿಯ ಮೇಲೆ ಇನ್ನೂ ಸ್ವಲ್ಪ ಕಾಲ ಬದುಕಲು ಸಾಧ್ಯ. ದೇವರನ್ನು ನಂಬಿ ಕೂರಬೇಡ. ಯಾರಿಗ್ಗೊತ್ತು, ದೇವರೇ ನಮ್ಮನ್ನು ನಂಬಿ ಕೂತಿದ್ರೂ ಕೂತಿರಬಹುದು. ದೇವರ ಸಾಮ್ರಾಜ್ಯದ ಆಸೆ ಬಿಟ್ಟು, ನಿನ್ನದೇ ಆದ ಒಂದು ಧರ್ಮಸಹಿತವಾದ ಸಾಮ್ರಾಜ್ಯ ಕಟ್ಟು” ಅಂದಾನು.
.
.
.
ಎಲ್ಲಾ ದೇವರಮಕ್ಕಳನ್ನು, ಪುಸ್ತಕಗಳನ್ನು, ಪ್ರವಾದಿಗಳನ್ನು, ಮೀರಿದವ ಮಾತ್ರ ನೈಜ ಹಿಂದೂವಾಗಲು ಸಾಧ್ಯ.
ಜೀವನದ ಸಾರವನ್ನು ಅರಿತವನಷ್ಟೇ ನೈಜ ಹಿಂದೂವಾಗಲು ಸಾಧ್ಯ.
ದೇವರನ್ನು ದೇವರ ಮಟ್ಟದಲ್ಲೇ ಅರ್ಥೈಸಿಕೊಂಡವ ಮಾತ್ರ ನೈಜ ಹಿಂದೂವಾಗಲು ಸಾಧ್ಯ.

ಇದೇ ಕಾರಣಕ್ಕೆ ಯಾರೂ ಒಬ್ಬ ಹಿಂದೂ ಎನ್ನುವವನನ್ನು ಧರ್ಮಾಂತರ ಮಾಡಲಾಗುವುದಿಲ್ಲ. ‘ಮತಾಂತರ’ ಎಂಬ ಪದ ಹಿಂದೂಗೆ ಅನ್ವಯವೇ ಆಗೊಲ್ಲ. ಒಂದು ಮತದಿಂದ ಇನ್ನೊಂದು ಮತಕ್ಕೆ ಹಾರುವವನಿಗೆ ಮಾತ್ರ ಅಲ್ಲವೇ ಮತಾಂತರ ಎಂಬ ಪದ ಅನ್ವಯವಾಗುತ್ತೆ? Infact, ಧರ್ಮಾಂತರವೂ ಸರಿಯಾದ ಪದವಲ್ಲ. ಯಾಕಂದರೆ ಒಬ್ಬ ಹಿಂದೂ ಯಾವ ಧರ್ಮಕ್ಕೆ ಬದಲಾದಾನು? ಬೇರೆ “ಧರ್ಮ” ಅದ್ಯಾವುದಿದೆ!? ಎಲ್ಲವೂ ಮತ/ಪಂಥಗಳೇ ಅಲ್ಲವೇ?

0 comments on “ಯಕ್ಷ ಪ್ರಶ್ನೋತ್ತರ

Leave a Reply

Your email address will not be published. Required fields are marked *