Thursday, 18 April, 2024

“ಅಗೋಚRAW ನೆರಳುಗಳ ಜಾಲಕಟ್ಟಿದ ಸರದಾರ ರಾಮೇಶ್ವರ್ ನಾಥ್ ಕಾವ್”

Share post

ಕೆಲಚಲನಚಿತ್ರಗಳನ್ನು ನೋಡುವಾಗ ಅದರಲ್ಲೂ ಆಕ್ಷನ್ ಅಥವಾ ಗೂಡಚರ್ಯೆಪ್ರಧಾನವಾದ ಚಿತ್ರಗಳನ್ನು ನೋಡುವಾಗ, ನಾಯಕನ ಎದುರಾಳಿಗಳ ಪರಿಚಯ ನೀಡುವಾಗ ‘ಸರ್ಕಾರದ ಯಾವುದೇ ಇಲಾಖೆಯ ಬಳಿ ಈತನ ಒಂದೇಒಂದು ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಕೇಳಿರಬಹುದು. ನಿಮಗೆ ಆಗ ಆಶ್ಚರ್ಯವಾಗಬಹುದಲ್ಲವೇ! ಅದು ಹೇಗೆ ಒಬ್ಬ ವೃತ್ತಿನಿರತ ಅಪರಾಧಿಯ ಒಂದೇ ಒಂದು ಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ ಇಲ್ಲದಿರಲು ಸಾಧ್ಯ? ಹೆಸರು ಗೊತ್ತಿದ್ದ ಮೇಲೆ, ಒಬ್ಬ ವ್ಯಕ್ತಿಯ ಇರುವಿಕೆಯ ಬಗ್ಗೆ ಗೊತ್ತಿದ್ದ ಮೇಲೆ, ಅದು ಹೇಗೆ ಬೇರೇನೂ ಗೊತ್ತಿಲ್ಲದಿರಲು ಸಾಧ್ಯ!? ಅಂತೆಲ್ಲಾ ಅನಿಸಬಹುದಲ್ಲವೇ. ಕೇವಲ ಚಲನಚಿತ್ರಗಳಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ಇಂತಹುದೇ ವ್ಯಕ್ತಿಗಳು ಬಹಳ ಜನ ಇದ್ದಾರೆ. ಅದೂ ಅಲ್ಲದೆ ಈ ಚಿತ್ರಗಳ ಖಳನಾಯಕರೆಲ್ಲಾ ಕಾನೂನಿನ ಆಚೆ ಬದಿ ಅಂದರೆ ತಪ್ಪಿನಕಡೆ ಇರುವವರು. ಆದರೆ ಕಾನೂನಿನ ಸರಿಯಾದ ಕಡೆಗೇ ಇದ್ದೂ ತಮ್ಮ ಬಗ್ಗೆ, ಹಾಗೂ ತಮ್ಮ ಖಾಸಗೀ ಜೀವನದ ಬಗ್ಗೆ ಅಷ್ಟೇ ರಹಸ್ಯವನ್ನು ಉಳಿಸಿಕೊಂಡು ಬಂದಿರುವವರೂ ಇದ್ದಾರೆ ಮತ್ತು ಅವರವರ ದೇಶಗಳಿಗೆ ಅಂಥವರ ಸೇವೆ ಬಹಳ ದೊಡ್ಡದು.

ದಾವೂದ್ ಇಬ್ರಾಹಿಂನ ಕಟ್ಟಕಡೆಯ ಫೋಟೋ ಯಾವುದು ಅಂತಲೂ ನಿಮಗೆ ನೆನಪಿರಲಿಕ್ಕಿಲ್ಲ ಅಲ್ಲವೇ. ನಾವೂ ನೀವು ನೋಡುವ ದಾವುದನ ಚಿತ್ರ 1986ರದ್ದು. ಅದಾದ ಮೇಲೆ ಆತ ಹೇಗಾಗಿದ್ದಾನೆ ಅಂತಾ ಯಾರೂ ನೋಡಿಲ್ಲ. ಬಾಂಡ್ ಫಿಲಂ ಖಳರನ್ನೂ ನಾಚಿಸುವ ಜೀವನ ನಡೆಸಿದ, ನಿಜಜೀವನದಲ್ಲಿ ‘ಮರ್ಚೆಂಟ್ ಆಫ್ ಡೆತ್’ ಎಂದೆನಿಸಿಕೊಂಡ, ಅವನ ಫೀಸು ಕೊಡುವಷ್ಟು ಹಣ ನಿಮ್ಮಲ್ಲಿದ್ದರೆ ಏಳುಖಂಡಗಳಲ್ಲಿ ಯಾರಿಗೇನು ಬೇಕಾದರೂ ಕೊಡಿಸಬಹುದಾದ ಅಥವಾ ಪಡೆಯಬಹುದಾದಷ್ಟು ಪ್ರಭಾವವಿಟ್ಟಿದ್ದ ಕುಪ್ರಸಿದ್ದ ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ/ಸ್ಮಗಲರ್ ವಿಕ್ಟರ್ ಬೌತ್’ನನ್ನೂ 2009ರವರೆಗೆ ಯಾರೂ ನೋಡಿದ ದಾಖಲೆಯಿರಲಿಲ್ಲ. ಸಾಮಾನ್ಯಜೀವನ ನಡೆಸುವ ವ್ಯಕ್ತಿಗಳಲ್ಲೂ ಈ ರೀತಿಯವರಿದ್ದಾರೆ. ಪ್ರಖ್ಯಾತ ಹಾಲಿವುಡ್ ವ್ಯಕ್ತಿತ್ವವಾದ ಹೌವಾರ್ಡ್ ಹ್ಯೂಸ್, ಕಾಲ್ವಿನ್ ಅಂಡ್ ಹಾಬ್ಸ್ ಕಾರ್ಟೂನಿನ ಜನಕ ಬಿಲ್ ವಾಟರ್ಸನ್’ರನ್ನು ಮುಖತಃ ಭೇಟಿಮಾಡಿದ್ದ ವ್ಯಕ್ತಿಗಳ ಸಂಖ್ಯೆಯನ್ನು ನೀವು ಕೈಬೆರಳಲ್ಲಿ ಎಣಿಸಬಹುದಂತೆ.

ಇಂತವರಲೊಬ್ಬ ‘ಫ್ಯಾಂಟಮ್’ ವ್ಯಕ್ತಿ ನಮ್ಮ ಭಾರತದಲ್ಲೂ ಇದ್ದರು. ಮತ್ತವರು ಯಾವುದೇ ಕೆಟ್ಟಕೆಲಸಕ್ಕಾಗಿ ಹೆಸರಾದವರಾಗಲೀ, ಯಾವುದೇ ಹಾಲಿವುಡ್ ಬಾಲಿವುಡ್ ನಂಟಿನವರಾಗಲೀ ಆಗಿರಲಿಲ್ಲ. ಅವರೇ ನಮ್ಮ ದೇಶದ ಮಹಾನ್ ಗೂಡಚಾರ ತಂತ್ರಜ್ಞ ರಾಮೇಶ್ವರನಾಥ್ ಕಾವ್. ಭಾರತದ ಮೊತ್ತಮೊದಲ Spymaster.

ನಮ್ಮನಿಮ್ಮ ಕಥೆ ಬಿಡಿ, ಅವರದ್ದೇ ವೃತ್ತಿಯಲ್ಲಿದ್ದ ಜನರಿಗೂ ಅವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ರಾಮೇಶ್ವರನಾಥ್ ಕಾವ್ ಅಲಿಯಾಸ್ ಆರ್ ಎನ್ ಕಾವ್ ಭಾರತದ ಅತ್ಯಂತ ರಹಸ್ಯಮಯ ಇಲಾಖೆಯಾದ “ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ”, ರಾ (RAW – Research and Analysis Wing)ದ ಸಂಸ್ಥಾಪಕ ಪಿತಾಮಹ. ಸ್ವತಃ ರಾ ಜಗತ್ತಿನ ಅತ್ಯಂತ ರಹಸ್ಯಮಯ ರಕ್ಷಣಾ ಇಲಾಖೆಗಳಲ್ಲೊಂದು. ಅಮೇರಿಕಾದ CIA ಬಗ್ಗೆಯಾದರೂ ಭಾರತದ ಜನಕ್ಕೆ ಗೊತ್ತಿದೆಯೇನೋ, ಆದರೆ ರಾ ಬಗ್ಗೆ ವ್ಯಾಪಕವಾಗಿ ತಿಳಿದಿರಲಿಕ್ಕಿಲ್ಲ. ಸರ್ಕಾರಗಳು ‘ರಾ’ದ ಬಗ್ಗೆ ಸ್ಪಷ್ಟಿಕರಣವನ್ನೇ ನೀಡುವುದಿಲ್ಲ. ಇಂದಿಗೂ ರಾ’ದ ಮುಖ್ಯಕಛೇರಿ ಎಲ್ಲಿದೆ ಎಂದು ಯಾರಿಗೂ ತಿಳಿದಿಲ್ಲ. ಸಿಜಿಒ ಕಾಂಪ್ಲೆಕ್ಸಿನಲ್ಲೆಲ್ಲೋ ಇದೆಯೆಂದು ಹೇಳಬಹುದಾದರೂ, ಅದರಲ್ಲೆಲ್ಲಿ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. ಯಾರಾದರೂ ನನಗೆ ರಾ’ದ ಕಛೇರಿ ಗೊತ್ತಿದೆ ಎನ್ನುತ್ತಿದ್ದಾರೆಂದರೆ, ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಗ್ಯಾರಂಟಿ. ಅಷ್ಟು ರಹಸ್ಯಮಯ ಇಲಾಖೆ ಈ RAW. ಅದರಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ, ಅದರ ವಾರ್ಷಿಕ ಬಜೆಟ್ ಎಷ್ಟು, ಅಲ್ಲಿ ಡಿ-ದರ್ಜೆಯ ಕ್ಲರ್ಕ್ ಹುದ್ದೆ ಇದೆಯಾ, ಇದ್ದರೆ ಅಲ್ಲಿ ಕೆಲಸಕ್ಕೆ ಅರ್ಜಿ ಹಾಕುವುದು ಹೇಗೆ ಎಂಬುದೂ ಯಾರಿಗೂ ತಿಳಿದಿಲ್ಲ. ಮಹತ್ವದ ಹುದ್ದೆಗಳಾದ ರಕ್ಷಣಾಮಂತ್ರಿ ಅಥವಾ ಗೃಹಮಂತ್ರಿಗೂ ಉತ್ತರಕೊಡುವಅಗತ್ಯವಿಲ್ಲದ ರಾ, ನೇರವಾಗಿ ಪ್ರಧಾನಿಮಂತ್ರಿಗೆ ವರದಿ ಮಾಡುತ್ತದೆ. ಇಂತಹ ರಹಸ್ಯಮಯ ಸಂಸ್ಥೆಯ ಸಂಸ್ಥಾಪಕ ರಹಸ್ಯಮಯ ವ್ಯಕ್ತಿಯಾಗಿಲ್ಲದಿದ್ದರೆ ಹೇಗೆ?

1918ರಲ್ಲಿ ವಾರಣಾಸಿಯಲ್ಲಿ ಜನಿಸಿದ ಕಾವ್, ಶ್ರೀನಗರದಿಂದ ವಲಸೆಬಂದ ಕಶ್ಮೀರಿ ಪಂಡಿತರ ಕುಟುಂಬದವರು. ಇವರ ತಂದೆತಾಯಿಗಳ ಬಗ್ಗೆ ಯಾವ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಕಾವ್ ಅವರನ್ನು ಬೆಳೆಸಿದ್ದು ಅವರ ಮಾವ ಪಂಡಿತ್ ತ್ರಿಲೋಕಿನಾಥ್ ಕಾವ್ ಅವರ ಪ್ರೋತ್ಸಾಹ ಮತ್ತು ಸಹಾಯದಿಂದ ಅತ್ಯುನ್ನತ ವಿದ್ಯಾಭ್ಯಾಸ ಪಡೆದ ಕಾವ್, 1940ರಲ್ಲಿ ‘ಗುಪ್ತಚರ ದಳ (IB)’ದಲ್ಲಿ ಪೊಲೀಸ್ ಸಹಾಯಕ ಸೂಪರಿಂಟೆಂಡೆಂಟ್ ಆಗಿ ನಿಯುಕ್ತಿಗೊಂಡರು. ಸ್ವಾತಂತ್ರಾನಂತರ ನೆಹರೂರವರ ರಕ್ಷಣಾದಳದ ಮುಖ್ಯಸ್ಥನಾಗಿ ನಿಯೋಜಿತರಾಗಿ, ಆನಂತರ ಒಂದರ ಮೇಲೊಂದು ರೋಚಕ ಮೆಟ್ಟಿಲುಗಳನ್ನೇರುತ್ತಾ ಹೋದರು. ‘ಕಶ್ಮೀರ್ ಪ್ರಿನ್ಸೆಸ್’ ಸ್ಪೋಟ ತನಿಖೆ, 1965ರ ಇಂಡೋ ಪಾಕ್ ಯುದ್ದ, ‘ರಾ’ದ ಸಂಸ್ಥಾಪನೆಯ ಜೊತೆಗೆ ನಿರ್ಮಾಣ ಮತ್ತು ನಿರ್ವಹಣೆ, ಬಾಂಗ್ಲಾದೇಶ ಸ್ವತಂತ್ರ ಯುದ್ದ, ಭಾರತ ಗಣರಾಜ್ಯಕ್ಕೆ ಸಿಕ್ಕಿಂ ಸೇರ್ಪಡೆ, ಮೊತ್ತಮೊದಲ ಪೋಖ್ರಾನ್ ಅಣು ಸ್ಪೋಟ, ಖಲಿಸ್ತಾನ್ ಚಳುವಳಿಯನ್ನು ಹದ್ದುಬಸ್ತಿನಲ್ಲಿಡಲು NSG (National Security Guard)ಯ ಸ್ಥಾಪನೆ….ಹೀಗೆ ದೇಶದ ಆಂತರಿಕ ಭದ್ರತೆಗೆ ಮತ್ತು ಗೂಡಾಚಾರ ಜಾಲಕ್ಕೆ ಅಪಾರವಾದ ಕೊಡುಗೆಗಳನ್ನು ಕೊಟ್ಟರು. 1968ರಲ್ಲಷ್ಟೇ ರಾ ಸ್ಥಾಪಿಸಿದರೂ 1971ರ ಬಾಂಗ್ಲಾ ವಿಮೋಚನಾ ಯುದ್ದದ ಕಾಲಕ್ಕೇ, ಅಂದರೇ ಮೂರೇ ವರ್ಷಕ್ಕೆ ಕಾವ್ ಅದೆಂತಾ ಟೀಂ ಕಟ್ಟಿದ್ದರೆಂದರೆ, ಅಂದವರು ಭಾರತದ ಮೂರನೇ ಮುಖ್ಯ ವ್ಯಕ್ತಿಯಾಗಿದ್ದರು. 1975ರಲ್ಲಿ ನಡೆದ ಸಿಕ್ಕಿಂ ಸೇರ್ಪಡೆಯಲ್ಲೂ ಅವರ ಪಾತ್ರ ಗಣನೀಯ. ಚೀನಾಕ್ಕೆ ಮಣ್ಣುಮುಕ್ಕಿಸಿದ ಏಕೈಕ ಭಾರತೀಯ ಎಂಬ ಹೆಸರೂ ಅವರಿಗೆ ಆಗ ಸಿಕ್ಕಿತ್ತು. ರಾ ಅಂದರೆ ಇಡೀ ಏಷ್ಯಾ ನಡುಗತೊಡಗಿತ್ತು. “ನೀವು ರಾ ಬಗ್ಗೆಯಾಗಲೀ, ಅದರಲ್ಲಿ ಕೆಲಸವನ್ನಾಗಲೀ ಹುಡುಕಲಾಗುವುದಿಲ್ಲ. ಅದಕ್ಕೆ ಅಗತ್ಯವಿದ್ದರೆ ಸ್ವತಃ ರಾ ನಿಮ್ಮ ಬಳಿ ಬರುತ್ತದೆ” ಎಂಬ ರಹಸ್ಯಸ್ವರೂಪದ ಕಾರ್ಯಸೂಚಿಯನ್ನು ಕಟ್ಟಿಕೊಟ್ಟದ್ದೇ ಕಾವ್. ಅವರ ಮಾರ್ಗದರ್ಶನದಲ್ಲಿ ಸೋಲೇಗೊತ್ತಿಲ್ಲದಂತೆ ಕೆಲಸಮಾಡುತ್ತಿದ್ದ ಅವರ ಶಿಷ್ಯಗಣಕ್ಕೆ ಅಂತರರಾಷ್ಟ್ರೀಯ ಭದ್ರತಾವಲಯದಲ್ಲಿ ಕಾವ್-ಬಾಯ್ಸ್ ಎಂಬ ಕಲ್ಟ್ ಹೆಸರಿತ್ತು. ಇಷ್ಟೆಲ್ಲಾ ಇದ್ದರೂ ಶತ್ರು ರಾಷ್ಟ್ರಗಳಿಗೆ ಮತ್ತವುಗಳ ಗೂಡಚಾರ ಇಲಾಖೆಗೆ ರಾ’ದ ಮುಖ್ಯಸ್ಥ ಯಾರು ಮತ್ತವ ನೋಡಲು ಹೇಗಿದ್ದಾನೆ ಎಂಬುದೂ ತಿಳಿದಿರಲಿಲ್ಲ.

ನೆಹರೂ, ಮತ್ತು ಇಂದಿರಾರಿಗೆ ಹತ್ತಿರವಾಗಿದ್ದರೆಂಬ ಕಾರಣಕ್ಕೆ ಅವರನ್ನು ವಿಪಕ್ಷಗಳು ಸದಾ ಗುಮಾನಿಯಿಂದಲೇ ನೋಡುತ್ತಿದ್ದವು. ತುರ್ತುಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಅಧಿಕಾರಕ್ಕೆ ಬಂದಾಗ ತನಗೆ ಒದಗಲಿರುವ ಅಪಾಯವನ್ನು ಮನಗಂಡ ಕಾವ್ ಸದ್ದಿಲ್ಲದೇ ರಾಜೀನಾಮೆ ನೀಡಿ ನೇಪಥ್ಯಕ್ಕೆ ಸರಿದರು. ಮೊರಾರ್ಜಿ ಸರ್ಕಾರ ಅವರೆನ್ನೇನೂ ಸುಮ್ಮನೆ ಬಿಡಲಿಲ್ಲ. ಸತತ 223 ದಿನಗಳ ತನಿಖೆ ನಡೆಸಿತು. ಕೊನೆಗೂ ಅವರ ವಿರುದ್ದ ಯಾವುದೇ ಆರೋಪ ಸಾಬೀತಾಗಲಿಲ್ಲ. ಮುಂದೆ ಮತ್ತೊಮ್ಮೆ ಇಂದಿರಾ ಆಯ್ಕೆಯಾದಾಗ, ಕಾವ್ ಅವರನ್ನು ಸೇವೆಗೆ ಮರುನೇಮಕ ಮಾಡಲಾಯಿತು ಮತ್ತವರು ‘ವಾಯುಸಂಶೋಧನಾ ಕೇಂದ್ರ (ARC – Aviation Research Center)’ ಮತ್ತು ‘ರೇಡಿಯೋ ಸಂಶೋಧನಾ ಕೇಂದ್ರ (RRC – Radio Research Center)’ ಗಳನ್ನು ಸೇರಿಸುವುದರ ಮೂಲಕ ಗೂಡಚಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸುತ್ತಲೇ ಹೋದರು.

ತನ್ನ ಸ್ನೇಹಿತರ ವಲಯದಲ್ಲಿ ‘ರಾಮ್-ಜೀ’ ಎಂದು ಗುರುತಿಸಲ್ಪಡುವ ಕಾವ್ ಬಹಳ ಖಾಸಗೀ ಮನುಷ್ಯ. ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಬದುಕಿದ ಕಾವ್ 70ರ ದಶಕದಲ್ಲಿ “ಜಗತ್ತಿನ ಐದು ಅತ್ಯಂತ ಉನ್ನತ ಗೂಡಾಚಾರ ಸಂಸ್ಥೆಯ ಮುಖ್ಯಸ್ಥ”ರ ಪಟ್ಟಿಯಲ್ಲಿ ಹೆಸರು ಪಡೆದವರು. ಎಂದಿಗೂ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳದ ಕಾವ್, ಒಬ್ಬ ನಾಚಿಕೆ ಸ್ವಭಾವದ, ವಿನಮ್ರ ವ್ಯಕ್ತಿಯಾಗಿದ್ದರು. ಸುಮಾರು ಇಪ್ಪತ್ತಮೂರಕ್ಕೂ ಹೆಚ್ಚುವರ್ಷ ಅತ್ಯುನ್ನತ ಹುದ್ದೆಗಳಲ್ಲಿದ್ದ ಕಾವ್’ರ ಫೋಟೋ ಯಾವತ್ತೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಅವರ ಮೊನಚು ವಸ್ತ್ರಶೈಲಿ, ಅವರ ಕನ್ನಡಕದ ವಿನ್ಯಾಸ, ಅವರ ಸದಾ ಹೊಳೆಯುತ್ತಿದ್ದ ಶೂಗಳ ಬಗ್ಗೆ ಅಷ್ಟಿಷ್ಟು ಮಾಹಿತಿ ಸೋರಿದ್ದಿದ್ದಷ್ಟೇ ಅವರು ಬಿಟ್ಟುಕೊಟ್ಟ ಖಾಸಗೀಮಾಹಿತಿ. ಸದಾ ಗರಿಯಾದ ಸೂಟು, ದಪ್ಪ ಫ್ರೇಮಿನ ಕನ್ನಡಕ ಧರಿಸಿರುತ್ತಿದ್ದ ಕಾವ್ ತಮ್ಮ ಕರಾರುವಕ್ಕಾದ ಮಾಹಿತಿ ಮತ್ತು ನಿರ್ದೇಶನಕ್ಕೆ ಗೌರವಿಸಲ್ಪಟ್ಟವರು. ಎಂದಿಗೂ ಭ್ರಷ್ಟಚಾರ ಮಾಡದ, ಮೃದು ಸ್ವಭಾವದ ಆದರೆ ಅಷ್ಟೇ ಕಠೋರ ವೃತ್ತಿಪರನಾದ, ಸ್ಪುರದ್ರೂಪಿಯಾದ ಕಾವ್ ಬಹಳಷ್ಟು ಭಾರತೀಯ ಚಲನಚಿತ್ರಗಳಲ್ಲಿ ಕಂಡುಬರುವ ‘ರಹಸ್ಯ ಏಜೆಂಟರುಗಳ ಬಾಸ್ ಅಥವಾ ಚೀಫ್’ ಪಾತ್ರಕ್ಕೆ ಸ್ಪೂರ್ತಿ. ಡಾ.ರಾಜ್ ಅವರ ಏಜೆಂಟ್000 ಚಿತ್ರಗಳ ಚೀಫ್ ಅಥವಾ ‘ಫರ್ಜ್(1967)’ ‘ಆಂಖೇ (1968)’ ಚಿತ್ರಗಳಲ್ಲಿ ಜಿತೇಂದ್ರ ಮತ್ತು ಧರ್ಮೇಂದ್ರ ಅವರ ಬಾಸ್’ಗಳ ನೆನಪು ನಿಮಗೆ ಬಂದರೆ, ಅವೆಲ್ಲವೂ ಕಾವ್ ಅವರ ವ್ಯಕ್ತಿತ್ವದಿಂದ ಸ್ಪೂರ್ತಿಪಡೆದವೇ.


1989ರ ನಿವೃತ್ತಿಯ ನಂತರ ದೆಹಲಿಯ ಜಹಾಂಗೀರ್ ರಸ್ತೆಯ ಬಂಗಲೆಯಲ್ಲಿ ತಮ್ಮ ಜೀವನವನ್ನು ಅತೀಖಾಸಗಿಯಾಗಿಯೇ ಕಳೆದ ಕಾವ್ ತಮ್ಮ ವೃತ್ತಿಪರತೆಯ ಕಾರಣದಿಂದ ಎಂದೂ ಸಂದರ್ಶನಗಳನ್ನು ಕೊಡಲಿಲ್ಲ. ಇವತ್ತು ಯಾವುದೋ ಒಂದು ಮ್ಯಾಚ್-ಫಿಕ್ಸಿಂಗಿನ ವಿಷಯ ತಿಳಿದಕೂಡಲೇ ‘ಮಿ.ಎಕ್ಸ್’ ಎಂದು ಹೆಸರಿಟ್ಟುಕೊಂಡು ಸುದ್ದಿವಾಹಿನಿಗಳಿಗೆ ಸಂದರ್ಶನ ಕೊಟ್ಟೋ, ಪುಸ್ತಕಬರೆದೋ ಹೆಸರುವಾಸಿಯಾಗುವ ಅಥವಾ ನಿವೃತ್ತಿಯ ನಂತರ ಪುಸ್ತಕಬರೆದು ಇನ್ಯಾರದ್ದೋ ಮರ್ಯಾದೆ ತೆಗೆಯುವ ಕ್ಷುಲ್ಲಕರನ್ನು ನೆನಪಿಸಿಕೊಳ್ಳಿ! ಬಹುಷಃ ‘He knew too much to make a public statement or to write a book’. ಅವರ ಒಂದು ಸಾರ್ವಜನಿಕ ಹೇಳಿಕೆ ಅಥವಾ ಒಂದು ಪುಸ್ತಕ, ದೇಶದ ಬಗ್ಗೆ ಮತ್ತದರ ನಾಯಕರ ಬಗ್ಗೆ ನಮ್ಮ ನಿಮ್ಮೆಲ್ಲರ ನಂಬಿಕೆಗಳನ್ನು ಭಯಂಕರವಾಗಿ ಅಲುಗಾಡಿಸಬಲ್ಲಂತದು. ತನ್ನ ಒಡಲಿನಲ್ಲಿ ಅಂಥಾ ಅದೆಷ್ಟು ರಹಸ್ಯಗಳನ್ನು ಇಟ್ಟುಕೊಂಡಿತ್ತೋ ಆ ಜೀವ!

ತನ್ನ ಕಶ್ಮೀರಿ ನಂಟಿನ ಬಗ್ಗೆ ಯೋಚಿಸಿದ ಕಾವ್, ನಿವೃತ್ತಿಯ ದಿನಗಳಲ್ಲಿ ಕಶ್ಮೀರಿ ಪಂಡಿತರ ಮಾರಣಹೋಮದ ಬಗ್ಗೆ, ಅವರ ಘನತೆ ಹಾಗೂ ಗೌರವವನ್ನು ಮರಳಿಸುವ ಬಗ್ಗೆ, ಅವರ ಉಳಿವಿನ ಬಗ್ಗೆ ಸದ್ದು ಮಾಡದೇ ಯಾವುದೇ ಪಕ್ಷ ಸೇರದೇ ಹೋರಾಡಿದರು. 2002ರ ತಮ್ಮ ಮರಣದ ಕೊನೆಯ ದಿನದೊಂದಿಗೂ ಸರ್ಕಾರದ ಎಲ್ಲಾ ನಾಯಕರುಗಳೊಂದಿಗೆ ಸದಾ ಮಾತನಾಡುತ್ತಾ, ಕಶ್ಮೀರಿ ಪಂಡಿತರ ಮಾರಣಹೋಮದ ವಿಚಾರವನ್ನು ಜೀವಂತವಾಗಿಟ್ಟರು.

ಭಾರತದ ಆಂತರಿಕ ಭದ್ರತೆಗೆ, ದುಷ್ಟಶಕ್ತಿಗಳ ತಡೆ ಮತ್ತು ದಮನಕ್ಕೆ, ಇಂದು ನಾವೆಲ್ಲಾ ಸುರಕ್ಷಿತವಾಗಿರುವುದಕ್ಕೆ ‘ರಾ’ದ ಕೊಡುಗೆ ಅಪಾರ. ‘ರಾ’ಗೆ ಅದರ ಇರುವಿಕೆಗೆ ಕಾವ್ ಅವರ ಕೊಡುಗೆ ಅಪಾರ. ಇವತ್ತು ‘ರಾ’ ಜಗತ್ತಿನ ಅತ್ಯುತ್ತಮ ಭದ್ರತಾ ಏಜೆನ್ಸಿಗಳಲ್ಲೊಂದು. ಶತಕೋಟಿಡಾಲರುಗಟ್ಟಲೇ ಬಜೆಟ್ ಹೊಂದಿರುವ ಸಿಐಎ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಬಹುದು. ಆದರೆ ಅದರ ಹತ್ತರಲ್ಲೊಂದಷ್ಟು ಬಜೆಟ್ಟಿನಲ್ಲಿ ಅದರಷ್ಟೇ ಘಾತಕಶಕ್ತಿಯ ಏಜೆನ್ಸಿಯೊಂದನ್ನು ಕಟ್ಟಿದ ಕಾವ್ ರಾ’ದ ಇಂದಿನ ಸ್ವರೂಪಕ್ಕೆ ಓಂನಾಮ ಬರೆದವರು. ತಾವು ಸ್ವತಃ ಜೀವನದಲ್ಲಿ ಕೇವಲ ಕೆಲವೇ ಬಾರಿ ಫೋಟೊಗಳಲ್ಲಿ ಕಾಣಿಸಿಕೊಂಡರೂ, ನಮ್ಮ ನಿಮ್ಮ ಚಿತ್ರಗಳು, ನಮ್ಮ ಮಧುರಕ್ಷಣಗಳನ್ನು ಹೊಸಕಿಹಾಕಲು ಸದಾ ಹೊಂಚು ಕಾಯುತ್ತಿರುವ ಶತ್ರುದೇಶಗಳ ಪ್ರಯತ್ನದ ವಿರುದ್ದ ಬಲಿಷ್ಟವಾದ ಗೋಡೆಯೊಂದನ್ನು ಕಟ್ಟಿದರು. ವಿಜಯೀಭಾರತದ ಕನಸುಗಳನ್ನು ಕಟ್ಟಿಕೊಟ್ಟು, ಆ ಭಾರತದ ಕನಸಿನ ರಕ್ಷಣೆಗೆ ರಾ ಎಂಬ ಅಗೋಚರ ಶಕ್ತಿಯನ್ನು ಬೆಳೆಸಿಕೊಟ್ಟ ಆ ‘ಫ್ಯಾಂಟಮ್’ನ ಪುಣ್ಯತಿಥಿ ನಾಳೆ ಜನವರಿ 20ಕ್ಕೆ. ಆ ಅಗೋಚರ ಮನುಷ್ಯನಿಗೊಂದು ನಮನ ನಿಮ್ಮ ಕಡೆಯಿಂದಿರಲಿ.

One comment on ““ಅಗೋಚRAW ನೆರಳುಗಳ ಜಾಲಕಟ್ಟಿದ ಸರದಾರ ರಾಮೇಶ್ವರ್ ನಾಥ್ ಕಾವ್”

ವಾವ್! ಕಾವ್ ಅವರ ಬಗ್ಗೆ, “ರಾ’ ಬಗ್ಗೆ ಲೇಖನದಲ್ಲಿ ಉತ್ತಮ ಮಾಹಿತಿ ನೀಡಿದ್ದೀರಿ ಸರ್.

Reply

Leave a Reply

Your email address will not be published. Required fields are marked *