Thursday, 23 May, 2024

ಅಸ್ತಿತ್ವದಲ್ಲೇ ಇಲ್ಲದ ವಿಸ್ತೃತಪದಗಳನ್ನು ಸೃಷ್ಟಿಸುವ backronym ಕೀಟಲೆ

Share post

ಕಳೆದ ವಾರ SIR ಅಂದ್ರೆ Slave I Remain ಅಂತ ಅರ್ಥ! ಬ್ರಿಟಿಷರು ಭಾರತದಲ್ಲಿದ್ದಾಗ, ಇಲ್ಲಿ ಎಲ್ಲರೂ ತಮ್ಮ slaveಗಳಾಗಿರಬೇಕು ಅಂತ ಈ ಬಳಕೆ ತಂದರು ಅನ್ನುವದ್ದೊಂದು ಸಂದೇಶ ವಾಟ್ಸ್ಯಾಪಿನಲ್ಲಿ ಹರಿದಾಡುತ್ತಾ ನನ್ನ ಬಳಿ ಬಂತು. ಈ ಹಿಂದೆ ಕೂಡಾ INDIA ಅಂದರೆ Independent Nation Declared In August ಅನ್ನುವ ಸುದ್ಧಿಯನ್ನೂ, SOS ಎಂದರೆ Save our Souls, Adidas ಕಂಪನಿಯ ಹೆಸರು All Day I Dream About Sport ಎಂಬ ವಾಕ್ಯದ ಸಂಕ್ಷಿಪ್ತರೂಪ, Wiki ಅಂದರೆ What I Know Is ಅಂತೆಲ್ಲಾ ಸಂದೇಶಗಳನ್ನು ನೋಡಿದ್ದ ನನಗೆ ಇದರಿಂದ ಹೆಚ್ಚಿನ ಆಶ್ಚರ್ಯವೇನೂ ಆಗಲಿಲ್ಲ. ಇಂತಹ ಸಂದೇಶಗಳನ್ನು ಸೃಷ್ಟಿಸುವವರ ಬುದ್ಧಿಮತ್ತೆಯ ಬಗ್ಗೆ ನನಗೆ ಮರುಕವೂ, ಹಾಗೂ ಈ ರೀತಿಯ ಸಂದೇಶಗಳು ಹಾಗೂ “ಹತ್ತು ಜನರಿಗೆ ಫಾರ್ವರ್ಡ್ ಮಾಡಿದರೆ ನಿಮಗೆ ಒಳ್ಳೆಯದಾಗುತ್ತೆ” ಎಂಬ ಹರಿದಾಡುವಿಕೆಯ ಹಿಂದೆ ಬೇರೆಯದೇ ಕರಾಮತ್ತು ಇರುವ ವಿಚಾರ ತಿಳಿದಿರುವುದರಿಂದ ಈ ಸಂದೇಶ ಓದಿದಾಗ ಏನೂ ಗಾಬರಿಯಾಗಲಿಲ್ಲ.

ಆಶ್ಚರ್ಯವಾಗಿದ್ದು ಜಗತ್ತನ್ನು ತಿಳಿದವರೇ ಇಂತಹ ಸಂದೇಶಗಳನ್ನು ಕಳಿಸಿದಾಗ. ಯಾಕೆಂದರೆ ಹೇಗೆ ಬಹಳಷ್ಟು ಜನರಿಗೆ ಡಿಸ್ಕವರಿ (ಅನ್ವೇಷಣೆ) ಮತ್ತು ಇನ್ವೆನ್ಷನ್ (ಆವಿಷ್ಕಾರ) ನಡುವೆ ವ್ಯತ್ಯಾಸ ಗೊತ್ತಿಲ್ಲವೋ ಹಾಗೆಯೇ ಈ ರೀತಿಯ ಅನೈಸರ್ಗಿಕ ಹೃಸ್ವರೂಪಗಳ ಹಿಂದಿನ ಕಥೆಯೂ ಗೊತ್ತಿರುವುದಿಲ್ಲ. ಡಿಸ್ಕವರಿಯೆಂದರೆ ಅದಾಗಲೇ ಅಸ್ತಿತ್ವದಲ್ಲಿ ಇರುವ ವಸ್ತು/ಪ್ರದೇಶಗಳನ್ನು ಕಂಡುಹಿಡಿದು ಪ್ರಚುರಪಡಿಸುವುದು. ಪ್ರಾಥಮಿಕ ಶಾಲೆಯಲ್ಲಿ ನಾವು ಓದಿದಂತೆ ಭಾರತಕ್ಕೆ ಹೊರಟಿದ್ದ ಕೊಲಂಬಸ್ ಅಮೇರಿಕಾವನ್ನು ಅನ್ವೇಷಿಸಿದ. ಅದೂ ಕೂಡಾ ತಪ್ಪು ಮಾಹಿತಿ ಬಿಡಿ. ಆತ ಕಾಲಿಟ್ಟದ್ದು ಬಹಾಮಾಸ್ ದ್ವೀಪಗಳಲ್ಲಿ. ಅದಾದ ಹತ್ತು ವರ್ಷದ ನಂತರ ಅಮೆರಿಗೋ ವೆಸ್ಪುಸ್ಸಿ ಅಮೇರಿಕಾ ಖಂಡದ ಮುಖ್ಯ ಭೂಭಾಗಕ್ಕೆ ಕಾಲಿಟ್ಟ. ಅವನ ಹೆಸರಿನಿಂದಾಗಿಯೇ ಆ ಭೂಖಂಡವನ್ನು ಅಮೇರಿಕಾ ಎಂದು ಕರೆಯಲಾಯ್ತು. ಆದರೆ ಇವರಿಬ್ಬರೂ ಕೂಡಾ ಅಮೇರಿಕಾಕ್ಕೆ ಕಾಲಿಟ್ಟ ಮೊದಲ ಮಾನವರೇನೂ ಅಲ್ಲ. ಅಲ್ಲಿ ಮೂಲನಿವಾಸಿಗಳು ಇದ್ದೇ ಇದ್ದರು. ಆ ಭೂಖಂಡಕ್ಕೆ ಅಮೇರಿಕಾವೆನ್ನುವ ಹೆಸರಿರುವ ಮುನ್ನವೇ, ಕೊಲಂಬಸ್’ಗಿಂತಲೂ ಐನೂರು ವರ್ಷ ಮುಂಚೆಯೇ ವೈಕಿಂಗರ ತಂಡವೊಂದನ್ನು ಲೈಯೀಫ್ ಎರಿಕ್ಸನ್ ಅಮೇರಿಕದಲ್ಲಿ ಇಳಿಸಿದ್ದ. ಆದರೆ ಇತಿಹಾಸವನ್ನು ಬರೆಯುವವರ ಶಕ್ತಿಯ ಆಧಾರದ ಮೇಲೆ ಇತಿಹಾಸದ ನಿಖರತೆ ನಿರ್ಧಾರವಾಗುವುದರಿಂದ ಕೊಲಂಬಸ್, ವೆಸ್ಪುಸ್ಸಿಗಳ ಹೆಸರು ಮಾತ್ರ ಉಳಿಯಿತಷ್ಟೇ. ಸಾಕು ಬಿಡಿ ಕಥೆ, ಒಟ್ಟಿನಲ್ಲಿ America was discovered ಅಂದರೆ ಅನ್ವೇಷಿಸಲಾಯ್ತು.

ಈ ಹಿಂದೆ ಇರದ ವಸ್ತು, ಯಂತ್ರ ಅಥವಾ ಪರಿಕಲ್ಪನೆಗಳು ಬರುವುದು ಇನ್ವೆನ್ಷನ್ನಿನ (ಆವಿಷ್ಕಾರ) ಮೂಲಕ. ಅಂತರ್ದಹನ ಎಂಜಿನ್, ಎಡಿಸನ್ನನ ಬಲ್ಬು, ಸಂಸ್ಕರಿತ ಸ್ಯೂರಿಯಾ, ಕಂಪ್ಯೂಟರ್, ರೋಬೋಟ್, ರೇಡಿಯೋ, ದೂರದರ್ಶನ, ಸ್ವಯಂಚಾಲಿತ ಮತ್ತು ಎಲೆಕ್ಟ್ರಿಕ್ ಕಾರುಗಳು, ಲಸಿಕೆ ಇವೆಲ್ಲವೂ ಆವಿಷ್ಕಾರಗಳು. ಇದರಲ್ಲೂ ಕೂಡಾ ಇತಿಹಾಸವನ್ನು ಬರೆಯುವವರ ಶಕ್ತಿಯ ಆಧಾರದ ಮೇಲೆ ಆವಿಷ್ಕಾರಗಳ ನಿಖರತೆ ಮತ್ತು ಮೂಲ ನಿರ್ಧಾರವಾಗಿ ಎಷ್ಟೋ ಆವಿಷ್ಕಾರಗಳು ಯೂರೋಪಿಯನ್ನರ ಪಾಲಾದವು. ರೇಡಿಯೋದ ಪರಿಕಲ್ಪನೆಯನ್ನು ನಮ್ಮವರೇ ಆದ ಜಗದೀಶಚಂದ್ರಭೋಸರು ಕೊಟ್ಟಿದ್ದರೂ, ಭಾರತವನ್ನು ಆಳುತ್ತಿದ್ದ ಬ್ರಿಟೀಷರು “ನಮ್ಮ ವಸಾಹತಿನ ಪ್ರಜೆಯೊಬ್ಬ ಸಂಶೋಧನೆಗಳಲ್ಲಿ ನಮಗಿಂತಾ ಹೆಚ್ಚುಗಾರಿಕೆ ತೋರಿಸಿದರೆ ಸರಿಯಲ್ಲ”ವೆಂದು ಕೊಂಕುಬುದ್ಧಿ ತೋರಿಸಿ ರೇಡಿಯೋಗೆ ಸಂಬಂಧಿಸಿದ ಎಲ್ಲಾ ಮನ್ನಣೆಗಳೂ ಮಾರ್ಕೋನಿಯ ಪಾಲಾಗುವಂತೆ ನೋಡಿಕೊಂಡರು.

ವಿದ್ಯುತ್ಚಕ್ತಿ, ಗುರುತ್ವಾಕರ್ಷಣೆಯ ವಿಚಾರಕ್ಕೆ ಬಂದಾಗ ಅನ್ವೇಷಣೆಯೋ ಆವಿಷ್ಕಾರವೋ ಎಂದು ಗೊಂದಲವಾಗುವುದುಂಟು. ಬೆಂಜಮಿನ್ ಫ್ರಾಂಕ್ಲಿನ್ ವಿದ್ಯುತ್ಚಕ್ತಿಯನ್ನು ಕಂಡುಹಿಡಿದ, ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದ ಎಂಬ ತಪ್ಪು ಸಾಲುಗಳನ್ನು ಬಳಸಲಾಗುತ್ತದೆ. ಫ್ರಾಂಕ್ಲಿನ್ ವಿದ್ಯುತ್ಚಕ್ತಿಯನ್ನೇನೂ ಕಂಡುಹಿಡಿಯಲಿಲ್ಲ, ಅದಾಗಲೇ ಸೃಷ್ಟಿಯಲ್ಲಿ ಇತ್ತು. ಆತ ಗಾಳಿಪಟದ ಪ್ರಯೋಗದ ಮೂಲಕ ವಿದ್ಯುತ್ ಅನ್ನು ಹೇಗೆ ಮೂಲದಿಂದ ಬೇರೆಡೆಗೆ ಸಾಗಿಸಬಹುದು ಹಾಗೂ ಸಂಗ್ರಹಿಸಬಹುದು ಎಂಬುದರ ಬಗ್ಗೆ ಟಿಪ್ಪಣಿ ಬರೆದನಷ್ಟೇ. ಗುರುತ್ವ ಕೂಡಾ ನ್ಯೂಟನ್ ಬಿಡಿ ಜಗತ್ತಿಗಿಂತಾ ಮೊದಲೇ ಇತ್ತು. ಆದರೆ ಅದನ್ನು ವಿವರಿಸುವ ಮೂಲ ಸಮೀಕರಣಗಳನ್ನು ಹಾಗೂ ಜಗತ್ತನ್ನು ಅದು ನಿಯಂತ್ರಿಸುವ ರೀತಿಯನ್ನು ನ್ಯೂಟನ್ ಬರೆದ ಅಷ್ಟೇ.

ಬಿಡಿ ಮೂಲಕಥೆಗೆ ಬರೋಣ. ಈ SIR, INDIA ಇವುಗಳೆಲ್ಲಾ ಮೂಲಪದಗಳಲ್ಲ, ಬದಲಿಗೆ ಸಂಕ್ಷಿಪ್ತ ಪದಗಳು ಅಂತಾ ಸುದ್ಧಿ ಹರಡಿಸುವ ಕೆಟ್ಟಚಾಳಿಯಿದೆಯಲ್ಲಾ ಇದಕ್ಕೊಂದು ಭಾಷಾಪ್ರಕಾರದ ವಿಂಗಡಣೆಯೇ ಇದೆ. ಇವನ್ನು ಇಂಗ್ಳೀಷಿನಲ್ಲಿ Backronym ಅಂತಾರೆ. ಉದ್ದದ ಪದವೊಂದನ್ನು ಸಣ್ಣದಾಗಿಸುವ ಸಂಕ್ಷಿಪ್ತಪದಕ್ಕೆ Acronym ಅಂತಾ ಕರೆಯುತ್ತಾರೆ ಅಂತಾ ನಮಗೆಲ್ಲಾ ಗೊತ್ತು. ಆದರೆ ಇದರಲ್ಲೂ ಹತ್ತಾರು ಬಗೆಗಳಿವೆ ಹಾಗೂ ಅವಕ್ಕೆಲ್ಲಾ ಚೆನ್ನಾಗಿ ಹೆಸರಿಟ್ಟು ವಿಂಗಡಿಸಿಟ್ಟಿದ್ದಾರೆ. ಆಕ್ರೋನಿಂನಿಂದಲೇ ಪ್ರಾರಂಭಿಸೋಣ ತಗೊಳ್ಳಿ. ಹೆಚ್ಚಾಗಿ ವಿಜ್ಞಾನ ಮತ್ತು ತಂತ್ರಜ್ಞಾನಲೋಕದಲ್ಲಿ ಬಳಕೆಯಾಗುವ ಈ ಆಕ್ರೋನಿಂಗಳು, ಕೇವಲ ಉದ್ದದ ಪದವೊಂದನ್ನು ಸಣ್ಣದಾಗಿಸುವುದು ಮಾತ್ರವಲ್ಲ. ಆ ಸಣ್ಣಪದ ಕೂಡಾ ಇಂಗ್ಳೀಷ್ ಭಾಷೆಯ ನಿಯಮಗಳ ಪ್ರಕಾರವೇ ಉಚ್ಚರಿಸಬಲ್ಲ ಇನ್ನೊಂದು ಪದವಾಗಬೇಕು. ಆಗ ಮಾತ್ರ ಅದು ಆಕ್ರೋನಿಂ ಎಂದು ಕರೆಸಿಕೊಳ್ಳುತ್ತದೆ. ಉದಾಹರಣೆ Sound Navigation and Ranging ಅನ್ನು SND ಅಂತಾ ಬರೆದರೆ ಅದು ಅಕ್ರೋನಿಂ ಆಗುವುದಿಲ್ಲ. ಬದಲಿಗೆ SONAR ಎಂದು ಬರೆದು ಅದನ್ನೊಂದು ಪದದಂತೆ ಓದುವಂತಾದಾಗ ಮಾತ್ರ ಅದು ಆಕ್ರೋನಿಂಆಗುತ್ತದೆ. ಉದ್ದದ ಮೂಲಪದಸಮುಚ್ಚಯವನ್ನು ಸಣ್ಣಪದವನ್ನಾಗಿಸಬಲ್ಲ ಲೇಸರ್, ರೇಡಾರ್, ಪಿನ್, ಏಯ್ಡ್ಸ್, ನೇಟೋ, ಸಾರ್ಕ್, ಯುನೆಸ್ಕೋ, ನಾಸಾ, ಇಸ್ರೋ ಇವೆಲ್ಲಾ ಆಕ್ರೋನಿಂಗೆ ಉತ್ತಮ ಉದಾಹರಣೆಗಳು.

ಪದವಾಗಿ ಉಚ್ಚರಿಸಲಾಗದ ಆಕ್ರೋನಿಂಗಳನ್ನೂ ಕೆಲವರು ತಪ್ಪಾಗಿ ಆಕ್ರೋನಿಂ ಎಂದು ಕರೆಯುವುದಿದೆ. ಉದಾಹರಣೆಗೆ Central Bureau of Investigation ಅನ್ನು ನಾವು ಸಿಬಿಐ ಎಂದು ಮೂರು ಬೇರೆ ಬೇರೆ ಅಕ್ಷರಗಳಾಗಿಯೇ ಬರೆಯಬೇಕು ಹಾಗೂ ಓದಬೇಕು. ಇದನ್ನು Initialism ಎನ್ನುತ್ತಾರೆ. ನಮ್ಮ ಐಐಎಂ, ಐಐಟಿ, ಎನ್ಐಟಿ, ವಿಟಿಯು, ಡಿವಿಡಿ, ಎಟಿಎಂ, ಡಬ್ಲೂಎಚ್ಓ, ಬಿಜೆಪಿ, ಸಿಎ, ಎಪಿಎಂಸಿ, ಪಿಎಂಒ ಇವೆಲ್ಲಾ ಇನಿಷಿಲಿಸಂಗೆ ಉದಾಹರಣೆಗಳು.

ಕೆಲವರು ಇನಿಷಿಯಲಿಸಂ ಅನ್ನು abbreviation ಎಂದೂ ಕರೆಯುವುದುಂಟು. ಇದು ತಪ್ಪು. ಎರಡು ಅಥವಾ ಹೆಚ್ಚು ಪದಗಳಿರುವ ಪದಸಮುಚ್ಚಯದ ಮೊದಲಕ್ಷರಗಳಿಂದ ಆಕ್ರೋನಿಂ ಮಾಡಲು ಸಾಧ್ಯವಾಗದಿದ್ದಾಗ, ಅಂದರೆ ಇನಿಷಿಯಲಿಸಂ ಮಾತ್ರ ಸಾಧ್ಯವಿದ್ದಾಗ, ಒಂದಕ್ಕಿಂತಾ ಹೆಚ್ಚು ಅಕ್ಷರಗಳನ್ನು ಸೇರಿಸಿ ಪದದಂತೆ ಉಚ್ಚರಿಸಬಹುದಾದ ಅಕ್ಷರಸಮೂಹಕ್ಕೆ ಅಬ್ರಿವಿಯೇಷನ್ ಎಂಬ ಹೆಸರು ಕೊಡಬಹುದು. 2020ರ ಅತ್ಯಂತ ಪ್ರಸಿದ್ಧ ಪದವಾದ COVID-19 ಎಂಬುದು COrona VIrus Disease – 2019 ಪದಸಮುಚ್ಚಯದ ಒಂದಕ್ಕಿಂತಾ ಹೆಚ್ಚು ಅಕ್ಷರಗಳಿಂದ ಮಾಡಲಾದ ಅಬ್ರಿವಿಯೇಷನ್’ಗೆ ಅತ್ಯುತ್ತಮ ಉದಾಹರಣೆ. ಇದರೊಂದಿಗೇ ಬಿಕಾಂ, ಹಾಪ್ಕಾಂಸ್, ಇನ್ಯ್ಸಾಟ್, ಸೆನ್ಸೆಕ್ಸ್ ಕೂಡಾ ಅಬ್ರಿವಿಯೇಷನ್ನುಗಳೇ.

ಆದರೆ ಇದಕ್ಕೆ ವಿರುದ್ದವಾಗಿ, ಅಂದರೆ ಸಣ್ಣಪದವೊಂದನ್ನು ಎಳೆದು ಉದ್ದಮಾಡುವುದಿದೆಯಲ್ಲ ಈ ಕೀಟಲೆಗೆ backronym ಎನ್ನುತ್ತಾರೆ. ಆಕ್ರೋನಿಂ ಸೃಷ್ಟಿಯ ಹಿಮ್ಮುಖ ನಡೆಯಿಂದ ಸೃಷ್ಟಿಯಾಗುವ ಹೆಚ್ಚಿನ ಬ್ಯಾಕ್ರೋನಿಂಗಳು ಸುಳ್ಳುಸುಳ್ಳೇ ಕಟ್ಟಿದವು. ಸಣ್ಣಪದವೊಂದಕ್ಕೆ ಅದರ ಕಾರ್ಯಕ್ಷೇತ್ರದ ಪರಿಧಿಯಲ್ಲೇ ಅರ್ಥಕೊಡುವಂತೆ ಉದ್ದ ಮಾಡಿ ಅಸ್ತಿತ್ವದಲ್ಲೇ ಇಲ್ಲದ ವಿಸ್ತೃತ ಪದಸಮುಚ್ಚಯವೊಂದನ್ನು ಹುಟ್ಟಿಸುವ ಈ ಬ್ಯಾಕ್ರೋನಿಂಗಳು ಕೆಲವೊಂದು ಸಲ ಸತ್ಯದ ತಲೆಯಮೇಲೇ ಹೊಡೆದಂತೆ ಸತ್ಯವೇನೋ ಎನ್ನಿಸಿಬಿಡುತ್ತವೆ. ಚಿಕ್ಕವನಿದ್ದಾಗ NEWS ಎಂದರೆ ನಾರ್ಥ್, ಈಸ್ಟ್, ವೆಸ್ಟ್, ಸೌಥ್ (ಎಲ್ಲಾಕಡೆಯಿಂದ ಸುದ್ಧಿಗಳ ಸಂಗಮ), WIFE ಎಂದರೆ Worries Invited ForEver, GOLF ಎಂದರೆ Gentlmen Only Ladies Forbidden ಅಂತೆಲ್ಲಾ ಹೇಳಿದ್ದಾಗ ನನಗೂ ಸತ್ಯವೇನೋ ಎನಿಸಿದ್ದುಂಟು. ಆದರೆ ಇಂಡಿಯಾ ಎಂಬುದುರ ಬ್ಯಾಕ್ರೋನಿಂ ಬಂದಾಗ ನಾನು ತಕ್ಷಣವೇ “ಈಸ್ಟ್ ಇಂಡಿಯಾ ಕಂಪನಿಯವರಿಗೆ, ಮುಂದೆ ನಾನ್ನೂರು ವರ್ಷಗಳ ನಂತರ ಭಾರತಕ್ಕೆ ಆಗಸ್ಟಿನಲ್ಲೇ ಸ್ವಾತಂತ್ರ್ಯ ಬರುತ್ತದೆ ಅಂತಾ ಗೊತ್ತಿತ್ತಾ?” ಅಂತಾ ಹೇಳಿ ನಕ್ಕುಬಿಟ್ಟಿದ್ದೆ.

ಅಂದಹಾಗೆ SOSಗೂ Save Our Soulsಗೂ ಯಾವ ಸಂಬಂಧವೂ ಇಲ್ಲ. ಮೋರ್ಸ್ ಕೋಡಿನಲ್ಲಿ ಮೂರು ಡಾಟ್, ಮೂರು ಡ್ಯಾಷ್, ಮೂರು ಡಾಟ್ ಮೂಲಕ ಕಳಿಸಬಹುದಾದ ಅತೀಸುಲಭದ ಕೋಡ್ SOS. Adidas ಎಂದರೆ ಆಲ್ ಡೇ ಐ ಡ್ರೀಮ್ ಅಬೌಟ್ ಸ್ಪೋರ್ಟ್ಸ್ ಎಂಬ ಅಕ್ರೋನಿಂ ಅಲ್ಲ. ಬದಲಿಗೆ ಕಂಪನಿಗ ಸಂಸ್ಥಾಪಕ Adolf “Adi” Dasslerನ ಹೆಸರಿನ ಅಬ್ರಿವಿಯೇಷನ್. ಹಾಗೂ Wiki ಎಂಬ ಪದ ಬೇಗ ಎಂಬರ್ಥ ಕೊಡುವ wiki-wiki ಎಂಬ ಹವಾಯಿಯನ್ ಪದದಿಂದ ಬಂದದ್ದು.

ಈ ವಿಷಯಗಳನ್ನೆಲ್ಲಾ ತಿಳಿಯುವುದರಿಂದ ನಿಮಗೇನೂ ದೈನಂದಿನ ಜೀವನದಲ್ಲಿ ಮಹಾನ್ ಸಹಾಯವಾಗದಿರಬಹುದು. ಆದರೆ ಭಾಷೆ ಮತ್ತದರ ನಿಯಮಗಳು, ವಿಷಯ ವಿಂಗಡಣೆಗಳು, ಕೌತುಕಗಳು ನಮಗೆ ತಿಳಿದಿದ್ದರೆ ಒಳ್ಳೆಯದೇ ಅಲ್ಲವೇ. ನಾಳೆ ನೀವೇನಾದರೂ ಮುಂಬೈ ಅಥವಾ ದೆಹಲಿಗೆ ಹೋದಾಗ ಅಲ್ಲಿರುವ ವಿಕ್ಟೋರಿಯಾ ಟರ್ಮಿನಸ್ ಅಥವಾ ಕನ್ನಾಟ್ ಪ್ಲೇಸ್’ಗೆ VT ಮತ್ತು CP ಎಂಬ ಇನಿಷಿಯಲಿಸಂ ಅನ್ನೂ, ಸೌಥ್ ಬಾಂಬೆ ಅಥವಾ ಡಿಫೆನ್ಸ್ ಕಾಲೋನಿಗೆ ಸೋಬೋ ಮತ್ತು ಡೆಫ್ಕಾಲ್ ಎಂಬ ಅಬ್ರಿವಿಯೇಷನ್ ಅನ್ನೂ ಬಳಸುತ್ತಾರೆ ಎಂಬುದು ಗೊತ್ತಿದ್ದರೆ ಅದನ್ನು ಎದುರಿದ್ದವರಿಗೆ ಹೇಳುತ್ತಾ ಮಾತು ಆರಂಭಿಸಲು ಒಂದೊಳ್ಳೆಯ ಐಸ್-ಬ್ರೇಕರ್ ಅಲ್ಲವೇ!

One comment on “ಅಸ್ತಿತ್ವದಲ್ಲೇ ಇಲ್ಲದ ವಿಸ್ತೃತಪದಗಳನ್ನು ಸೃಷ್ಟಿಸುವ backronym ಕೀಟಲೆ

ವಾಸುಕಿ

backronymphobia ಎಂಬ ಹೊಸ termನ ಅಗತ್ಯವೂ ಇದೆ.

backcronymಗಳನ್ನ ಕಂಡರೆ ಅಸಹ್ಯವೆನಿಸುತ್ತೆ.

Reply

Leave a Reply

Your email address will not be published. Required fields are marked *