Tuesday, 27 February, 2024

“ಅಂತರ್ಜಾಲದ ಸಂತೆಯಲ್ಲಿ ಮನೆಯಮಾಡಿ, ಖಾಸಗೀತನ ಬೇಕೆಂದೊಡೆಂತಯ್ಯಾ”

Share post

ಇವತ್ತು ನಮ್ಮ ಬದುಕನ್ನು ಫೋನು, ಲ್ಯಾಪ್ಟಾಪುಗಳು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಅವಿಲ್ಲದೇ ನಮ್ಮ ಜೀವನವೇ ಇಲ್ಲ ಎಂಬಂತಾಗಿದೆ. ಇವುಗಳ ಮೂಲಕ ನಾವು ಮೈಕ್ರೋಸಾಫ್ಟ್’ನ ವಿಂಡೋಸ್, ಆಫೀಸ್, ಗೂಗಲ್’ನ ಹುಟುಕಾಟ, ಮ್ಯಾಪ್ ಸೇವೆ, ಜಿಮೈಲ್ ಮಿಂಚಂಚೆ ವ್ಯವಹಾರ, ಟಿಕ್-ಟಾಕ್, ಟ್ವಿಟರ್, ಫೇಸ್ಬುಕ್, ವಾಟ್ಯ್ಸಾಪ್, ಬ್ಯಾಂಕಿಂಗ್ ಆಪ್’ಗಳನ್ನು ಬಳಸುತ್ತೇವೆ. ಜೊತೆಗೇ ಈ ಸಾಧನಗಳು ನಮಗೆ ಕೊಟ್ಟಿರುವ ಮುಖ್ಯ ವೈಶಿಷ್ಟ್ಯವೆಂದರೆ ಇಂಟರ್ನೆಟ್. ಈ ಅಂತರ್ಜಾಲ ಬಂದಮೇಲೆ ಎಲ್ಲವನ್ನು-ಎಲ್ಲದಕ್ಕೂ, ಎಲ್ಲರನ್ನೂ-ಎಲ್ಲರೊಂದಿಗೆ ಬೆಸೆದ ಮೇಲೆ ಈಗ ಜಗತ್ತು ಒಂದು ದೊಡ್ಡಸಂತೆಯಾಗಿದೆ. ಯಾವುದೇ ತಂತ್ರಾಂಶ ಬಳಸುವ ಮುನ್ನ, ಯಾವುದೇ ವೈಬ್-ಸೈಟಿಗೆ ಭೇಟಿಕೊಡುವ ಮುನ್ನ, ಯಾವುದೇ ಆಪ್ ಬಳಸುವ ಮುನ್ನ ಆ ತಂತ್ರಾಂಶಗಳ-ಸೈಟುಗಳ ತಯಾರಕರು ಮತ್ತು ಒಡೆಯರು ನಿಮ್ಮನ್ನು ಒಂದು ಒಪ್ಪಂದಕ್ಕೆ ಸಹಿ ಹಾಕುವಂತೆ ಕೇಳುತ್ತಾರೆ. ಬೇರೆ ಬೇರೆ ತಯಾರಕರು ಬೇರೆ ಬೇರೆ ರೀತಿಯ ಕರಾರುಗಳಿಡುವ ಈ ಒಪ್ಪಂದವನ್ನು ಸ್ಥೂಲವಾಗಿ ಯೂಲಾ – EULA (End Use License Agreement) ಎನ್ನುತಾರೆ.

ನನ್ನ ಕಳೆದವಾರದ ಅಂಕಣವನ್ನು ನೀವು ಓದಿದ್ದೀರಾದರೆ ನಿಮಗೆ ಬ್ಯಾಂಕುಗಳು ಹೇಗೆ ಈ ರೀತಿಯ ಕರಾರುಗಳನ್ನಿಟ್ಟು ಮೂರ್ಖರನ್ನಾಗಿಸುತ್ತಾರೆ, ಹಾಗೂ ಅಂತಹ ಕರಾರುಗಳ ಪತ್ರವನ್ನೇ ಬದಲಿಸಿದ ಡಿಮಿಟ್ರಿಯ ಬಗ್ಗೆ ಗೊತ್ತಿರಬಹುದು. ಆದರೆ ಈ ತಂತ್ರಾಶ ಸಂಬಂಧೀ EULAದಲ್ಲಿ, ನೂರಾರು ಪೇಜುಗಳಷ್ಟು ಉದ್ದದ ಸಣ್ಣಅಕ್ಷರಗಳ ಒಪ್ಪಂದವನ್ನು ಮುಂದಿಡುವಾಗ ಅಲ್ಲಿ ಅವರು ನಿಮಗೆ ಕೊಡುವ ಆಯ್ಕೆ ಎರಡೇ “ಒಂದೋ ಇದನ್ನು ಒಪ್ಪಿ. ಇಲ್ಲವಾದಲ್ಲಿ ಈ ತಂತ್ರಾಂಶ ನಿಮಗಿಲ್ಲ”. ನಿಮಗೆ ಅಲ್ಲಿರುವ ಒಪ್ಪಂದದ 99% ಒಪ್ಪಿಗೆಯಿದ್ದು ಒಂದಂಶಕ್ಕೆ ಒಪ್ಪಿಗೆಯಿಲ್ಲವಾದರೂ ನೀವು ಅದಕ್ಕೆ ಕೊಸರು ನುಡಿಯುವಂತಿಲ್ಲ. ಅದನ್ನು ಬದಲಾಯಿಸುವಂತೆ ಕೇಳುವ ಆಯ್ಕೆ ನಿಮಗಿಲ್ಲ. ಈ ರೀತಿಯಾಗಿ ನಾವು ಈವರೆಗೂ ಸಾವಿರಾರು ಒಪ್ಪಂದಗಳಿಗೆ ಸಹಿಹಾಕಿದ್ದೇವೆ. ಅದರಲ್ಲೆಲ್ಲಾದರೂ ನಿಮ್ಮ ಕಿಡ್ನಿ, ಲಿವರನ್ನೂ ಗೂಗಲ್ಲಿಗೋ, ಫೇಸ್ಬುಕ್ಕಿಗೋ ಅಮೆಜಾನಿಗೋ ಬರೆದುಕೊಟ್ಟಿದ್ದರೂ ಕೊಟ್ಟಿರಬಹುದು.

ಇಂತಿರ್ಪ ನಾವು, ಕಳೆದ ವಾರ ವಾಟ್ಸ್ಯಾಪಿನ ಬಳಕೆಯ ಕೆಲ ನಿಯಮಗಳನ್ನು ಅದರ ಒಡೆತನದ ಸಂಸ್ಥೆಯಾದ ಫೇಸ್ಬುಕ್ ಬದಲಿಸಿದೆಯೆಂದು ಜನರೆಲ್ಲಾ ಹೌಹಾರಿ ‘ಬನ್ನಿ ಎಲ್ಲರೂ ವಾಟ್ಸ್ಯಾಪ್ ಬಿಡೋಣ’ ಎಂಬ ಕೂಗು ಆರಂಭಿಸಿದರು. ಅದೇ ಕ್ಷಣಕ್ಕೆ ಜಗತ್ತಿನ ಅತೀ ಬುದ್ಧಿವಂತ ಮನುಷ್ಯರಲ್ಲೊಬ್ಬ ಎನಿಸಿಕೊಂಡ ಎಲೋನ್ ಮಸ್ಕ್ ‘ಬನ್ನಿ, ವಾಟ್ಸ್ಯಾಪಿನ ಬದಲಿಗೆ ಸಿಗ್ನಲ್ ಎಂಬ ಹೊಸ ಸಂದೇಶ ತಂತ್ರಾಂಶಕ್ಕೆ ಹೋಗೋಣ ಎಂದ. ಎರಡನ್ನೂ ಒಟ್ಟಿಗೇ ಒದಿಕೊಂಡ ನಮ್ಮ ಜನರು, ಸಿಗ್ನಲ್ ಅನ್ನೋದು ವಾಟ್ಸ್ಯಾಪಿಗಿಂತಾ ಬಹಳಾ ಒಳ್ಳೆಯದು, ನನ್ನ ಖಾಸಗೀತನಕ್ಕೆ ಯಾವ ಧಕ್ಕೆಯನ್ನೂ ತರಲ್ಲ ಅಂತೆಲ್ಲ ಅಂದುಕೊಂಡು, ಇಷ್ಟೆಲ್ಲಾ ವರ್ಷಗಳಿಂದ ಬಳಸುತ್ತಿದ್ದ ವಾಟ್ಯ್ಸಾಪಿಗೆ ಸಿಂಡರಿಸಿಕೊಂಡು ಸಿಗ್ನಲ್ಲಿನೆಡೆಗೆ ಸಾಗಲಾರಂಭಿಸಿದರು.

ಇಷ್ಟಕ್ಕೂ ವಾಟ್ಯ್ಸಾಪ್ ಹೇಳಿದ್ದೇನು? ಅವರ ಮೂಲಸಂದೇಶ “ನಾವು ನಮ್ಮ ಬಳಕೆದಾರರ ಮಾಹಿತಿಯನ್ನು ನಮ್ಮ ಮೂಲಕಂಪನಿಯಾದ ಫೇಸ್ಬುಕ್ಕಿನೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಹಾಗೂ ಫೇಸ್ಬುಕ್ಕನ್ನು ವ್ಯವಹಾರಕ್ಕಾಗಿ ಬಳಸುವವರು ತಮ್ಮ ವಾಟ್ಸ್ಯಪ್ ಮಾತುಕತೆಯನ್ನೂ ಅದರಲ್ಲಿ ಬಳಸಿಕೊಳ್ಳಬಹುದು” ಎಂಬುದಷ್ಟೇ. ಇದೂ ಕೂಡಾ ವಾಟ್ಸ್ಯಾಪ್ ಬಳಕೆದಾರರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಇಷ್ಟು ದಿನ ಇದನ್ನು ಖುಲ್ಲಂಖುಲ್ಲಾ ಹೇಳದ ವಾಟ್ಸ್ಯಾಪ್, ಇವತ್ತು ಹೇಳಿದೆ. ಇದರೊಂದಿಗೇ ವಾಟ್ಸ್ಯಾಪ್ ಅನ್ನು ವರ್ಷಗಳ ಹಿಂದೆ ಖರೀಧಿಸಿದ ಫೇಸ್ಬುಕ್, ತನ್ನ ಸಂಪೂರ್ಣ ಹಿಡಿತವನ್ನು ವಾಟ್ಸ್ಯಾಪ್ ಮೇಲೆ ಸಾಧಿಸಿದೆ ಅಷ್ಟೇ. ನಿಮ್ಮ ಮಾತುಕತೆಗಳು ವಾಟ್ಸ್ಯಾಪಿನಲ್ಲಿ ಮೊದಲೂ ಕೂಡಾ EEE – End to End Encryptionನಿಂದ ಭದ್ರವಾಗಿದ್ದವು, ಈಗಲೂ ಅಷ್ಟೇ ಭದ್ರವಾಗಿವೆ. ನಿಮ್ಮ ಯಾವುದೇ ಮಾತುಕತೆಯನ್ನು ಫೇಸ್ಬುಕ್ ಕೇಳಿಸಿಕೊಳ್ಳುತ್ತಿಲ್ಲ ಅಥವಾ ಓದುತ್ತಿಲ್ಲ. ಇದೊಂದು ಕಾಂಗ್ರೆಸ್ಸಿಗರ “ಬಿಜೆಪಿಯವರು EVM ಹ್ಯಾಕ್ ಮಾಡಿ ಚುನಾವಣೆ ಗೆಲ್ಲುತ್ತಿದ್ದಾರೆ” ಎನ್ನುವಷ್ಟೇ ಸತ್ಯದ ಮಾತು.

ಇನ್ನೊಂದು ವಿಚಾರ. ನಮ್ಮಲ್ಲಿ ಬಹಳಷ್ಟು ಜನ “ನಾನು ಬೆಳಿಗ್ಗೆಯಷ್ಟೇ ಅಮ್ಮನೊಂದಿಗೆ ದೋಸೆಹಿಟ್ಟು ಕಡೆಯೋಕೆ ಯಾವ ಮಿಕ್ಸಿ ಬೆಸ್ಟು ಅಂತಾ ಕೇಳ್ತಿದ್ದೆ. ಬೆಳಿಗ್ಗೆಯಿಂದಾ ಕಂಡಲ್ಲೆಲ್ಲಾ ಬರೀ ಮಿಕ್ಸಿಯದ್ದೇ ಜಾಹೀರಾತುಗಳು ಕಣ್ರೀ” ಎನ್ನುವವರಿದ್ದಾರೆ. ಪ್ರತಿ ಬಾರಿ ಈ ರೀತಿಯ ಮಾತನಾಡಿದಾಗಲೆಲ್ಲಾ ನಾವು ಫೇಸ್ಬುಕ್, ಗೂಗಲ್, ಟ್ವಿಟ್ಟರುಗಳಲ್ಲಿ ಕೂತ ಲಕ್ಷಗಟ್ಟಲೇ ಸಂಬಳ ಎಣಿಸುವ ಎಂಜಿನಿಯರುಗಳಿಗೆ ಅವಮಾನ ಮಾಡುತ್ತಿದ್ದೇವೆ. ಯಾಕೆಂದರೆ ನಿಮ್ಮ ಮಾತನ್ನು ಕೇಳುವ ಅಗತ್ಯ ಈ ಕಂಪನಿಗಳಿಗೆ ಕಂಡಿತಾ ಇಲ್ಲ. ವರ್ಷಾನುಗಟ್ಟಲೇ ನಿಮ್ಮ ಮಾಹಿತಿಯನ್ನು ಶೇಖರಿಸುವ ಅವರಿಗೆ ನಿಮ್ಮ ಮಾತು ಕದ್ದು ಕೇಳಿ ಜಾಹೀರಾತುಗಳನ್ನು ತೋರಿಸುವ ಅಗತ್ಯವಿಲ್ಲ. ಅಂದಹಾಗೆ ಈ “ಶೇಖರಿಸಿರುವ ನಿಮ್ಮ ಮಾಹಿತಿ” ಕೂಡಾ ಅವರೇನೂ ಕದ್ದು ಪಡೆದದ್ದಲ್ಲ. ನೀವೇ ಅವರಿಗೆ ಕೇಳದೆಯೇ ಕೊಟ್ಟದ್ದು. ಅವರಿಗೆ ನಿಮ್ಮ ಹೆಸರು, ವಯಸ್ಸು, ಲಿಂಗ, ಸ್ನೇಹಿತರು, ಊರು, ಕೆಲಸ ಮಾಡುವ ಜಾಗ ಗೊತ್ತು. ನೀವೆಲ್ಲೆಲ್ಲಿ ಯಾವಾಗ ಸುತ್ತಿತ್ತೀರಿ ಅಂತಾ ಗೊತ್ತು. ಯಾವ ಫಿಲಂ ನೋಡಿದ್ದೀರಿ, ಯಾರ ಫಿಲಂ ಹೆಚ್ಚು ನೋಡಿದ್ದೀರಿ, ಯಾರ ಬಗ್ಗೆ ಹೆಚ್ಚು ಬರೆದಿದ್ದೀರಿ, ಅಂದಮೇಲೆ ನಿಮ್ಮಿಷ್ಟದ ನಾಯಕ, ನಾಯಕಿ, ನಿರ್ದೇಶಯ ಯಾರು ಅಂತಾ ಗೊತ್ತು. ನೀವು ಅಲ್ಲಿ ಕುಡಿಯುವ ಕಾಫಿ, ಇಲ್ಲಿ ತಿನ್ನುವ ದೋಸೆ, ಕೇಳುವ ಸಂಗೀತ, ರಾಜಕೀಯ ನಿಲುವು, ನಿಮ್ಮ ಸ್ನೇಹಿತರ ರಾಜಕೀಯ, ನೀವುಗಳು ನಿಮ್ಮ ಡೀಪಿಗೆ ಹಾಕುವ ಫ್ರೇಮುಗಳಿಂದಾಗಿ ನಿಮ್ಮ ಸಾಮಾಜಿಕ ಹೋರಾಟದ ನಿಲುವುಗಳೂ ಗೊತ್ತಿದೆ. ನೀವುಗಳು ಮಾಡುವ 10YearAgo ಫೋಟೋ ಚಾಲೆಂಜಿನಿಂದಾಗಿ ಕಾಲದೊಂದಿಗೇ ನಿಮ್ಮ ಮುಖಚಹರೆ ಹೇಗೆ ಬದಲಾಗಿದೆ ಅಂತಲೂ ಗೊತ್ತು. ಇನ್ಸ್ಟಾಗ್ರಾಮಿನಲ್ಲಿ ಫೋಟೊ ಹಾಕುತ್ತಿದ್ದೇನೆ ಅಂತಾ ನೀವಂದುಕೊಂಡಿದ್ದೀರಿ. ಆದರೆ ಆ ಫೋಟೋದೊಂದಿಗೇ ಅದರ EXIF ಮಾಹಿತಿಯೂ ಫೇಸ್ಬುಕ್ ಅನ್ನು ತಲುಪುತ್ತದೆ. EXIF ಮಾಹಿತಿಯಲ್ಲಿ ಆ ಫೋಟೊ ತೆಗೆದ ಫೋನ್ ಯಾವುದು, ಅದರ ಮಾಡೆಲ್, ಫೋಟೋ ತೆಗೆದ ಜಾಗ, ಯಾವ ಫಿಲ್ಟರ್ ಬಳಸಿದ್ದೀರಿ (ನಿಮ್ಮ/ನಿಮ್ಮ ಫೋಟೋದ ಯಾವ ಅಂಶವನ್ನು ನೀವು ಇಷ್ಟಪಡುತ್ತಿಲ್ಲ), ಯಾವ ಹ್ಯಾಷ್ಟ್ಯಾಗ್ ಬಳಸಿದ್ದೀರಿ (ನಿಮ್ಮ ಮೂಡ್ ಹೇಗಿದೆ), ಯಾವ ವಿಷಯದ ಫೋಟೋಗಳನ್ನು ಲೈಕ್ ಮಾಡುತ್ತೀರಿ (ನಿಮ್ಮ ಆದ್ಯತೆಗಳೇನು) ಎಂಬೆಲ್ಲಾ ಮಾಹಿತಿಗಳೂ ಇನ್ಸ್ಟಾಗ್ರಾಂ ಅನ್ನೂ, ಅದರ ಮೂಲಕ ಫೇಸ್ಬುಕ್ ಅನ್ನೂ ತಲುಪುತ್ತವೆ. ಇಷ್ಟೆಲ್ಲಾ ಮಾಹಿತಿಯ ಆಧಾರದ ಮೇಲೆ ವರ್ಷಾನುಗಟ್ಟಲೇ ಮನಃಶಾಸ್ತ್ರಜ್ಞರೊಂದಿಗೆ, ಮಾಹಿತಿ ವಿಶೇಷಜ್ಞರೊಂದಿಗೆ ಕೂತು ಅಭಿವೃದ್ಧಿಪಡಿಸಲಾದ ಅವರ ತಂತ್ರಜ್ಞಾನಗಳು ನಿಮ್ಮನ್ನು ಅಷ್ಟೂ ಕರಾರುವಕ್ಕಾಗಿ ಊಹಿಸಬಲ್ಲವು. ಎಷ್ಟೋಬಾರಿ ನಿಮಗಿಂತಾ ಹೆಚ್ಚಾಗಿ ಈ ಮಶೀನು ಮತ್ತವುಗಳ ಸಾಫ್ಟ್ವೇರುಗಳು ನಿಮ್ಮನ್ನು ಕರಾರುವಕ್ಕಾಗಿ ಗ್ರಹಿಸಿ ಆದಕ್ಕೆ ತಕ್ಕನಾದ ಜಾಹೀರಾತುಗಳನ್ನು ತೋರಿಸಬಲ್ಲವು. ಬಳಕೆದಾರರ ವರ್ತನೆಯನ್ನು ಊಹಿಸಬಲ್ಲ ಈ ಕೆಲಸಕ್ಕೆ ಪ್ರತಿಯೊಂದು ಕಂಪನಿಯೂ ತನ್ನದೇ ಟ್ರೇಡ್ ಸೀಕ್ರೇಟ್ ಆಲ್ಗಾರಿದಮ್ ಅನ್ನು ಬಳಸುತ್ತದೆ.

ವಾಟ್ಸ್ಯಾಪ್ ಫೇಸ್ಬುಕ್ ಇವೇ ದೊಡ್ಡ ರಾಕ್ಷಸರು ಅಂತಾ ನೀವಂದುಕೊಂಡಿದ್ದರೆ, ಗೂಗಲ್ ಅಮೇಜಾನ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಇವರೆಲ್ಲರಿಗಿಂತಾ ಹೆಚ್ಚಾಗಿ ನಿಮ್ಮ ಖಾಸಗೀತನಕ್ಕೆ ಲಗ್ಗೆ ಹಾಕುತ್ತವೆ ಹಾಗೂ ನಿಮ್ಮಬಗ್ಗೆ ಝಕರಬರ್ಗನಿಗಿಂತಾ ಹೆಚ್ಚು ಮಾಹಿತಿ ಇವರ ಬಳಿಯಿದೆ ಎಂಬುದನ್ನೂ ತಿಳಿದುಕೊಳ್ಳಿ. ಆಂಡ್ರಾಯ್ಡ್ ಫೋನ್ ಅಥವಾ ಬೇರೆ ಫೋನು ಅಥವಾ ಲ್ಯಾಪ್ಟಾಪಿನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಬಳಸುವವರು ನೀವಾದರೆ ನಿಮ್ಮ ಪ್ರತಿಯೊಂದು ಚಲನವಲನವೂ ಗೂಗಲ್ ಬಳಿಯಿದೆ. ಯಾವ ವೆಬ್ಸೈಟಿಗೆ ಬೇಟಿ ನೀಡುತ್ತೀರಿ, ಅದು ಎಂತಹಾ ವೆಬ್ಸೈಟು (ಮಾಹಿತಿಯದ್ದೇ, ಶಾಪಿಂಗಿನದ್ದೇ, ಹೋಟೆಲ್ ಬುಕಿಂಗ್, ಟಿಕೆಟ್ ಬುಕಿಂಗ್ ಇತ್ಯಾದಿ ವ್ಯವಹಾರದ್ದೇ, ಆ ದೇಶದಲ್ಲಿ ಈ ತಿಂಗಳಲ್ಲಿ ಹವಾಮಾನ ಹೇಗಿದೆ ಎಂಬ ವಿಚಾರದ್ದೇ…), ಎಷ್ಟು ಹೊತ್ತು ಒಂದು ಪೇಜಿನಲ್ಲಿರುತ್ತೀರಿ, ನಿಮ್ಮ ಮನೆ ಎಲ್ಲಿದೆ, ಕೆಲಸಮಾಡುವ ಜಾಗ ಯಾವುದು ಎಂಬ ಎಲ್ಲಾ ಮಾಹಿತಿ ಅವರ ಬಳಿಯಿದೆ. ಆಪಲ್ ಫೋನಿನ ಸಫಾರಿ ಬ್ರೌಸರಿನಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಗೂಗಲ್ಲೇ ಆಗಿರುವಂತೆ ನೋಡಿಕೊಳ್ಳಲು, ಗೂಗಲ್ ಆಪಲ್ಲಿಗೆ ಕೋಟ್ಯಾಂತರ ಡಾಲರ್ ಪಾವತಿಸುತ್ತದೆ. ಅದರ ಮೂಲಕ ಆಪಲ್ ಬಳಕೆದಾರರ ಮಾಹಿತಿಯೂ ಗೂಗಲ್ ಪಾಲು. ನಿಮ್ಮ ಲಿಂಕ್ಡಿನ್, ಸ್ಕೈಪ್ ಒಡೆತನದ ಮೈಕ್ರೋಸಾಫ್ಟ್, ನೀವೆಂತಹಾ ಗ್ರಾಹಕ ಎಂಬುದನ್ನು ಇಂಚಿಂಚೂಬಲ್ಲ, ಅಲೆಕ್ಸಾ ಮೂಲಕ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಬಲ್ಲ ಅಮೆಜಾನ್ ಬಗ್ಗೆ ಬರೆಯ ಹೊರಟರೆ ಇನ್ನೂ ಮೂರು ಪುಟ ಹೆಚ್ಚು ಬೇಕು.

ಈ ಲೇಖನದ ಅರ್ಥ ಸಿಗ್ನಲ್ಲಿಗೆ ಹೋಗಬೇಡಿ, ವಾಟ್ಯ್ಸಾಪೇ ಒಳ್ಳೆಯದು ಅಂತೇನಲ್ಲ. ಪುಗಸಟ್ಟೆ ನಿಮಗೆ ಯಾವುದು ಸಿಗುತ್ತದೋ ಅವೆಲ್ಲವೂ ನಿಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಂಡೇ ಬಳಸಿಕೊಳ್ಳುತ್ತವೆ. ವಾಟ್ಸ್ಯಾಪ್ ಕೂಡಾ ಒಂದುಕಾಲದಲ್ಲಿ ನಾವು ಜಾಹೀರಾತು ತೋರಿಸಲ್ಲ ಅಂತಾ ವಾಗ್ದಾನ ನೀಡಿ ಪ್ರಾರಂಭವಾದ ಸಂಸ್ಥೆ. ಫೇಸ್ಬುಕ್ಕಿಗೆ ತನ್ನನ್ನು ತಾನು 22 ಬಿಲಿಯನ್ ಡಾಲರ್ ಮೊತ್ತಕ್ಕೆ ಮಾರಿಕೊಳ್ಳುವಾಗ ಅದಕ್ಕೆ ಮೂರು ಬಿಲಿಯನ್ ಜನ ಬಳಕೆದಾರರಿದ್ದರು. ಇಷ್ಟು ಜನರ ದೈನಂದಿನ ಬಿಲಿಯನ್ನುಗಟ್ಟಲೇ ಸಂದೇಶಗಳನ್ನು ಸಂಗ್ರಹಿಸಿಡಲು ಎಷ್ಟು ದೊಡ್ಡ ಡೇಟಾಸೆಂಟರುಗಳು ಬೇಕು, ಅದನ್ನೆಲ್ಲಾ ನಡೆಸಲಿಕ್ಕೆ ಎಷ್ಟು ಜನ ಬೇಕು ಎಂಬ ಖರ್ಚು-ಲೆಕ್ಕ ಗೊತ್ತಿರುವವರಿಗೆ “ವಾಟ್ಸ್ಯಾಪು ಯಾವತ್ತೂ ಏನನ್ನೂ ಪುಗಸಟ್ಟೆ ಕೊಟ್ಟೇ ಇಲ್ಲ” ಎಂಬ ರಹಸ್ಯ ಗೊತ್ತಿರುತ್ತದೆ. ಇದೇ ವಿಚಾರವನ್ನು ಸಿಗ್ನಲ್ಲಿಗೂ ಲಾಗೂ ಮಾಡಿ ನೋಡಿ. ಯಾರೂ ನಿಮ್ಮ ಮಾಹಿತಿಯನ್ನೂ ಬಳಸಿಕೊಳ್ಳದೇ ಅಥವಾ ಜಾಹೀರಾತನ್ನೂ ತೋರಿಸದೇ ಏನನ್ನೂ ಪುಗಸಟ್ಟೆ ಕೊಡಲ್ಲ. ಎಲ್ಲಾ ಮಾಹಿತಿಯನ್ನೂ ನಾವಾಗಿಯೇ ದಾನಮಾಡಿರುವಾಗ ವಾಟ್ಸ್ಯಾಪಿನ ಈ ಹೊಸಾ ಪಾಲಿಸಿ ನಿಮ್ಮನ್ನು ಹೆಚ್ಚೇನೂ ಬಾಧಿಸುವುದೂ ಇಲ್ಲ. ಆದರೆ ವಾಟ್ಯ್ಸಾಪ್ “ಒಂದೋ ನಮ್ಮ ನಿಯಮಗಳಿಗೆ ಒಪ್ಪಿ, ಇಲ್ಲವೇ ಹೊರಡಿ” ಎಂದು ಹೇಳಿದ್ದರಿಂದ ನಿಮ್ಮ ಅಹಂಗೆ ಪೆಟ್ಟುಬಿದ್ದಿದೆ. ಮೊದಲಬಾರಿಗೆ ನೇರವಾಗಿ ಯಾರೋ ನಿಮ್ಮನ್ನ “ಬಳಸಿ ಬಿಸಾಕಿದ” ಅನುಭವವಾಗಿದೆ. ಅದಕ್ಕಾಗಿ ನಿಮಗೆ ಈ ಕೋಪ. ವರ್ಷಗಟ್ಟಲೇ ಬಳಸಿದ ವಾಟ್ಸ್ಯಾಪಿನಿಂದ ಸಿಗ್ನಲ್ಲಿನೆಡೆಗೆ ನಿಮ್ಮ ನಡೆ ಅಷ್ಟೇ. ಆದರೆ ಒಮ್ಮೆ ಯೋಚಿಸಿ ನೋಡಿ, ಯಾವುದೇ ಆಪ್ ಇನ್ಸ್ಟಾಲ್ ಮಾಡಿಕೊಳ್ಳುವಾಗಲೂ ಅವರು “ನಮ್ಮ ಕಂಡೀಷನ್ನುಗಳಿಗೆ ಒಪ್ಪಿ. ಇಲ್ಲವಾದರೆ ನಿಮಗೇ ಈ ಆಪ್ ಇಲ್ಲ” ಅಂತಲೇ ಹೇಳುವುದು. ಆಗ ಸಿಟ್ಟಾಗದ ನೀವು ಈಗ ಯಾಕೆ ಸಿಟ್ಟಾಗುತ್ತಿದ್ದೀರಿ?

ಕೊನೆಯದಾಗಿ ಒಂದು ಮಾತು. ಸಿಗ್ನಲ್’ನ ಆರ್ಥಿಕ ಬೆನ್ನೆಲುಬಾಗಿರುವ ಸಿಗ್ನಲ್ ಫೌಂಡೇಷನ್ನಿನ ಸ್ಥಾಪಕನ ಹೆಸರು ಬ್ರಿಯಾನ್ ಆಕ್ಟನ್. ವಾಟ್ಸ್ಯಾಪ್ ಅನ್ನು ಸೃಷ್ಟಿಸಿ 2014ರಲ್ಲಿ ಫೇಸ್ಬುಕ್ಕಿಗೆ ಮಾರಿದ್ದು ಇದೇ ಆಕ್ಟನ್ ಮತ್ತವನ ಸ್ನೇಹಿತ ಜಾನ್ ಕೌಮ್. ಉಳಿದ ಸಮೀಕರಣವನ್ನು ನೀವೇ ಬರೆದುಕೊಳ್ಳಿ.

0 comments on ““ಅಂತರ್ಜಾಲದ ಸಂತೆಯಲ್ಲಿ ಮನೆಯಮಾಡಿ, ಖಾಸಗೀತನ ಬೇಕೆಂದೊಡೆಂತಯ್ಯಾ”

Leave a Reply

Your email address will not be published. Required fields are marked *