Tuesday, 27 February, 2024

“ಪಾಕಿಸ್ತಾನಿ ಸೈನ್ಯವನ್ನು ಬೆಚ್ಚಿಬೀಳಿಸಿದ್ದ ಭೂತಗಳ ತುಕಡಿ”

Share post

ಭಾರತೀಯ ಸೇನೆ ಮತ್ತದರ ಎಲ್ಲಾ ಘಟಕಗಳಿಗೆ ನಾವು ಅದೆಷ್ಟು ಚಿರಋಣಿಯಾಗಿದ್ದರೂ ಸಾಲದು. ನಮ್ಮ ಬದುಕನ್ನು ಮತ್ತು ಕನಸನ್ನು ಉಳಿಸುವ ಸೈನ್ಯ ಮತ್ತು ಸೈನಿಕರು ಕೂಡಾ ತಮ್ಮ ಕೊಡುಗೆಗೆ ಮಾನ್ಯತೆ ಮತ್ತು ಶಹಬ್ಬಾಸಿಯನ್ನು ಬಯಸುತ್ತಾರೆ. ತಮ್ಮ ಹೆಸರು ಉಳಿಯಬೇಕು, ಮುಂದಿನ ಪೀಳಿಗೆಯೂ ನಮ್ಮ ಬಗ್ಗೆ ತಿಳಿಯಬೇಕು ಎಂದು ಆಸೆಪಡುತ್ತಾರೆ. ಸೇನಾ ಮುಖ್ಯಸ್ಥರು ಭಾಷಣಗಳಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದಾಗ ಅಥವಾ ಸೇನೆಯ ಇತಿಹಾಸದಲ್ಲಿ ದಾಖಲಿಸಿದಾಗ ಅವರಿಗಾಗುವ ಸಂತೋಷ ಅಷ್ಟಿಷ್ಟಲ್ಲ. ಎಂತಹಾ ಪದವಿ, ಚಕ್ರಗಳಿಗಿಂತಲೂ ತನ್ನದೇ ಜನರಿಂದ ಉಲ್ಲೇಖಿಸಲ್ಪಡುವುದು ಸೈನಿಕನಿಗೆ ಅತ್ಯಂತ ದೊಡ್ಡ ಗೌರವ. ಅದರಲ್ಲೂ ಶತ್ರುಪಾಳಯದಿಂದ ಸಿಗುವ ಶಹಬ್ಬಾಸಿ ಎಂತಹ ಸೈನಿಕನಿಗೂ ಇನ್ನೂ ಅಮೂಲ್ಯವಾದದ್ದು.

1965ರ ಯುದ್ಧದಲ್ಲಿ ಅತ್ಯಂತ ಚಾಣಾಕ್ಷತೆ ತೋರಿದ ಅನಾಮಿಕ ಪಾಕಿಸ್ಥಾನಿ ಬಾಂಬರ್ ಪೈಲಟ್’ಗೆ ಭಾರತೀಯ ವಾಯುಸೇನೆ 8 ಪಾಯಿಂಟ್ ಚಾರ್ಲೀ ಎಂಬ ಹೆಸರು ನೀಡಿ ಅಭಿನಂದಿಸಿತ್ತು. 1971ರ ಯುದ್ಧದಲ್ಲಿ ಪೂನಾ ಹಾರ್ಸ್ ರೆಜಿಮೆಂಟಿನ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಹನುತ್ ಸಿಂಗ್, ತನ್ನ ಉನ್ನತ ಹೋರಾಟಕ್ಕಾಗಿ ಪಾಕಿಸ್ತಾನ ಸೇನೆಯಿಂದ ಗೌರವಾನ್ವಿತ ‘ಫಖರ್-ಎ-ಹಿಂದ್’ ಎಂಬ ಬಿರುದನ್ನು ಪಡೆದಿದ್ದರು. 71ರ ಯುದ್ಧದಲ್ಲಿ ಹೀಗೊಂದು ಗೌರವ ಪಡೆದ ಏಕೈಕ ಭಾರತೀಯ ಸೇನಾಧಿಕಾರಿ ಲೆ.ಜ.ಹನುತ್ ಸಿಂಗ್. ಕಾರ್ಗಿಲ್ ಯುದ್ಧದ ಹೀರೋ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರನ್ನು ಕೂಡಾ ಪಾಕಿಸ್ಥಾನೀ ಸೇನೆ ‘ಶೇರ್ ಷಾಹ್’ ಎಂಬ ಬಿರುದು ನೀಡಿ ಗೌರವಿಸಿತು. 1971ರ ಯುದ್ಧದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ವರ್ಷದಲ್ಲಿ ತನ್ನ ಎದುರಾಳಿಗಳಿಂದ ‘ಭೂತಗಳ ರೆಜಿಮೆಂಟ್ Ghost Regiment’ ಎಂಬ ಹೆಸರು ಪಡೆದ ರೆಜಿಮೆಂಟ್‌ನ ಕಥೆಯೊಂದನ್ನು ಕೇಳೋಣ ಬನ್ನಿ. ಈ ಸೇನಾತುಕಡಿ ಪಾಕಿಸ್ತಾನೀಯರನ್ನು ಹೇಗೆ ಬೇಸ್ತುಬೀಳಿಸಿತ್ತೆಂದರೆ ಪಾಕಿಗಳು ಇವರನ್ನು ‘ಖಾಲೈ ಮಖ್ಲೂಕ್’ (ಉರ್ದು: ಅನ್ಯಗ್ರಹಜೀವಿಗಳು) ಎಂದು ಕರೆಯುತ್ತಿದ್ದರಂತೆ.

1971ರ ಯುದ್ಧದಲ್ಲಿ ಪಾಕಿಸ್ಥಾನದ ಸೇನೆಯ ಬಹುಮುಖಿ ಆಕ್ರಮಣಗಳಿಗೆ ತುತ್ತಾಗಿದ್ದ ಭಾರತೀಯ ಸೇನೆ ತನ್ನ ಟ್ಯಾಂಕುಗಳನ್ನು ಮುಂದಿಟ್ಟುಕೊಂಡು ನಾಲ್ಕು ಕಡೆಯಿಂದ ಒತ್ತಡಹೇರಿತು. ಎರಡನೇ ಮಹಾಯುದ್ಧದ ‘ಬ್ಲಿಟ್ಜ್‌ಕ್ರಿಗ್’ಗೆ ಹೋಲಿಸಬಹುದಾದ ಈ ಆಕ್ರಮಣದಲ್ಲಿ ನಮ್ಮ ಸೇನೆ ಪಶ್ಚಿಮದಿಂದ, ಖಾರ್ಗಾ ಕಂಪನಿಯ ಎರಡು ತುಕಡಿಗಳನ್ನು, ಪಿಟಿ-76 ಎಂಬ ಹಗುರವಾದ 12 ಟನ್ ತೂಕದ ಉಭಯಚರಿ ಟ್ಯಾಂಕ್‌ಗಳೊಂದಿಗೆ ನುಗ್ಗಿಸಿತ್ತು. ಚೀನಾನಿರ್ಮಿತ ಟೈಪ್-15 ಹೆಸರಿನ 34 ಟನ್ ತೂಕದ ಟ್ಯಾಂಕ್ ಬಳಸುತ್ತಿದ್ದ ಪಾಕಿಸ್ತಾನೀ ಸೈನ ನಮ್ಮ ಹಗುರವಾದ ಪಿಟಿ-76 ಟ್ಯಾಂಕ್‌ಗಳನ್ನು ‘ಪಿಪಾ’ (ಪಂಜಾಬಿ ಭಾಷೆಯಲ್ಲಿ ತಗಡಿನ ಡಬ್ಬ ಎಂದರ್ಥ) ಎಂದು ಮೂದಲಿಸುತ್ತಿತ್ತು. ಈ ಟ್ಯಾಂಕುಗಳೊಂದಿಗೆ ಅರವತ್ತಮೂರನೇ ಅಶ್ವದಳದ ಟಿ-55 ಟ್ಯಾಂಕ್‌ಗಳ ಸ್ಕ್ವಾಡ್ರನ್ ಅನ್ನೂ ಸೇರಿಸಿ ಆಕ್ರಮಣವನ್ನು ಗಟ್ಟಿಗೊಳಿಸಲಾಗಿತ್ತು. ಟ್ಯಾಂಕುಗಳ ಬಲದೊಂದಿಗೆ ನಮ್ಮ ಸೈನ್ಯ ಸುಲಭವಾಗಿ ಜೆಸ್ಸೂರ್ (ಈಗಿನ ಜಶೋರ್) ಪ್ರಾಂತ್ಯವನ್ನು ವಶಪಡಿಸಿಕೊಂಡಿತು. ಉತ್ತರದಲ್ಲಿ, ಮೂವತ್ತಮೂರನೇ ಕಂಪನಿಯನ್ನು ಮುನ್ನಡೆಸುತ್ತಿದ್ದ ಅರವತ್ತಮೂರನೇ ಅಶ್ವದಳವು ಟಿ-55 ಟ್ಯಾಂಕುಗಳ ಪ್ರಹಾರದೊಂದಿಗೆ ಹಿಲ್ಲಿ ಮತ್ತು ಬೋಗ್ರಾ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತು.

ಸಾಮಾನ್ಯವಾಗಿ ಸೇನೆಯ ಅಶ್ವ ಮತ್ತು ಪದಾತಿದಳಗಳಿಗೆ ತಮ್ಮದೇ ಆದ ಶಸ್ತ್ರಾಸ್ತ್ರ ಸ್ವಾಡ್ರನ್ ಇರುವುದಿಲ್ಲ. ಆದರೆ ಅಪರೂಪಕ್ಕೆ ಅರವತ್ತಮೂರನೇ ದಳ ತನ್ನದೇ ಆದ ಸ್ವತಂತ್ರ ಶಸ್ತ್ರಸಜ್ಜಿತ ಸ್ಕ್ವಾಡ್ರನ್, 5 ಐಎಎಸ್ (Independant Armoured Squadron) ಅನ್ನು ಹೊಂದಿತ್ತು. ಇದರ ಪಿಟಿ-76ಗಳನ್ನು ಟಿ-55 ಗೆ ಪರಿವರ್ತಿಸುವಾಗ, ರೆಜಿಮೆಂಟ್‌ನ ಹಳೆಯ ಟ್ಯಾಂಕ್‌ಗಳನ್ನೂ 5 ಐಎಎಸ್‌ಗೆ ಹಸ್ತಾಂತರಿಸಲಾಯಿತು. ಇವುಗಳೊಂದಿಗೇ ಕೆಲ ಶಸ್ತ್ರಸಜ್ಜಿತ ಜೀಪುಗಳನ್ನೂ ಕೆಲ ನುರಿತ ಸೈನಿಕರನ್ನೂ ಸೇರಿಸಿ ತಾತ್ಕಾಲಿಕ ಐದನೇ ಸ್ಕ್ವಾಡ್ರನ್ ಅನ್ನು ರಚಿಸಲಾಯ್ತು. ಇದರಿಂದ ಭಾರತೀಯ ಸೈನ್ಯಕ್ಕೆ ಮತ್ತೊಂದು ಹೆಚ್ಚುವರಿ ದಳವೊಂದು ಸಿಕ್ಕಂತಾಯಿತು. ಮಜಾ ಏನೆಂದರೆ ಈ ರೆಜಿಮೆಂಟ್‌’ಗಾಗಿ ಯಾವುದೇ ಹೊಸಾ ಸೈನಿಕರ ನೇಮಕನಡೆಯಲಿಲ್ಲ. ಬದಲಾಗಿ ತುಕಡಿಯ ಆಡಳಿತಾತ್ಮಕ ಸಿಬ್ಬಂದಿಗಳು ಅಂದರೆ ಕ್ಯಾಂಟೀನ್ ಸಿಬ್ಬಂದಿ, ಅಕೌಂಟೆಂಟ್, ರೇಡಿಯೋ ಯೂನಿಟ್ಟಿನವರು, ಎಂಜಿನಿಯರುಗಳು ಇವರನ್ನೆಲ್ಲಾ ಜಾಣ್ಮೆಯಿಂದ ಬಳಸಿಕೊಂಡು, ಅವರ ಕೌಶಲ್ಯಕ್ಕೆ ತಕ್ಕಂತೆ ಪಾತ್ರಗಳನ್ನು ವಹಿಸಿಕೊಡಲಾಯ್ತು. ಇವರಲ್ಲಿ ಸಕ್ರಿಯ ಯುದ್ಧದಲ್ಲಿ ಭಾಗವಹಿಸಿದ ಒಬ್ಬನೇ ಆಫೀಸರ್ ಇಲ್ಲದಿದ್ದರೂ ಸಹ, ಇಡೀ ತುಕಡಿಯಲ್ಲಿ ಒಬ್ಬನೇ ಒಬ್ಬ ಸೈನಿಕನೂ ಯುದ್ಧದಿಂದ ಹೊರಗಿರಲು ಬಯಸಲಿಲ್ಲ.

ಭೂತ ತುಕಡಿಯ T 55 ಟ್ಯಾಂಕ್

ನಿಮಗೆ ಗೊತ್ತಿದೆಯೋ ಇಲ್ಲವೋ. ಟ್ಯಾಂಕುಗಳು ಎಷ್ಟು ಸಶಕ್ತವೋ ಅಷ್ಟೇ ದುರ್ಬಲ ಕೂಡಾ. ರಾತ್ರಿಯ ಹೊತ್ತು, ಅಥವಾ ಮಂಜುಮುಸುಕಿದಾಗ ಅವುಗಳನ್ನು ನಡೆಸಲಾಗುವುದಿಲ್ಲ. ಅವುಗಳ ಟ್ಯಾಂಕುಗಳ ಮೇಲೊಂದು ಲೈಟು ಕೂರಿಸುವುದು ಕಡ್ಡಾಯ. ಈ ಲೈಟುಗಳ ಸಹಾಯದಿಂದ ಟ್ಯಾಂಕುಗಳು ಪರಸ್ಪರ ಒಂದಕ್ಕೊಂದು ಡಿಕ್ಕಿಹೊಡೆಯದಂತೆ ನಡೆಸಲು ಅನುಕೂಲವಾಗುತ್ತದೆ. ಮಿಂಚುಹುಳದಂತೆ ಮಿನುಗುವ ಈ ಲೈಟುಗಳು ಸಂದರ್ಭಕ್ಕೆ ತಕ್ಕಂತೆ ಹಸಿರು, ಕೆಂಪು, ತಿಳಿಹಳದಿ ಮತ್ತು ನೀಲಿ (Green Red Amber Blue – GRAB) ಬಣ್ಣದಲ್ಲಿರುತ್ತವೆ. ಭಾರತೀಯ ಸೇನೆಯಲ್ಲಿ ಈ ಲೈಟುಗಳನ್ನು ಜುಗ್ನೂ, Rab-G, Rag-Bajao ಎಂದೂ ಕರೆಯಲಾಗುತ್ತದೆ. ಇದೇ ಲೈಟುಗಳ ಕಾರಣದಿಂದಾಗಿ ಟ್ಯಾಂಕುಗಳ ಇರುವಿಕೆಯನ್ನು ಎಷ್ಟೋ ದೂರದಿಂದ, ಮರುಭೂಮಿಗಳಲ್ಲಾದರೆ ಕಿಲೋಮೀಟರುಗಳ ಮೊದಲೇ ಗುರುತಿಸಬಹುದು. ಗಟ್ಟಿಯಾದ ಹೊರಹೊದಿಕೆಯಿರುವ ಈ ಟ್ಯಾಂಕುಗಳನ್ನು ಅಷ್ಟು ಸುಲಭವಾಗಿ ಯಾರೂ ದೂರದಿಂದ ರೈಫಲ್ ಬಳಸಿ ಹೊಡೆದುಹಾಕಲಾಗುವುದಿಲ್ಲವಾದ್ದರಿಂದ, ತಮ್ಮ ಇರುವಿಕೆಯನ್ನು ಬಿಟ್ಟುಕೊಡುವ ಬಗ್ಗೆ ಟ್ಯಾಂಕ್ ಕಂಪನಿಗಳು ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ.

ಅಗರ್ತಲಾ ಕಡೆಯಿಂದ ದಾಳಿ ಆರಂಭಿಸಿದ ಈ ಸ್ಕ್ವಾಡ್ರನ್ನಿನ ನಮ್ಮ ಹೊಸಾ ಸೈನಿಕರಿಗೆ ತಮ್ಮ ಪಿಟಿ-76ಗಳೊಂದಿಗೆ ರಾತ್ರಿಯ ಹೊತ್ತು ಮಾತ್ರವೇ ಒಂದು ಊರಿಂದ ಇನ್ನೊಂದು ಊರಿಗೆ ಚಲಿಸುವ ನಿರ್ದೇಶನವನ್ನು ಕೊಡಲಾಗಿತ್ತು. ಬ್ರಿಗೇಡ್ ಕಮಾಂಡರ್ “ಲೈಟುಗಳನ್ನು ಬಳಸಿಯೇ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕು. Rab-Gi ಕೇ ಬಿನಾ ಕೋಯೀ ಮೂವ್ಮೆಂಟ್ ನಹೀ ಹೋಗೀ. ಪಾಕಿಸ್ಥಾನದ ಸೈನಕ್ಕಿದು ಮನೆಯಿದ್ದ ಹಾಗೆ. ಅವರಿಗೆ ಇಲ್ಲಿನ ಪ್ರತಿಯೊಂದು ಜಾಗವೂ ಗೊತ್ತು. ಬೆಟ್ಟಗಳ ಮೇಲೆ ಕೂತು ಅವರು ನಮ್ಮೆಲ್ಲ ಚಲನವಲನಗಳನ್ನೂ ನೋಡುತ್ತಿದ್ದಾರೆ. ಜೋಪಾನವಾಗಿ ಹೋಗಿ” ಎಂದು ಹೇಳಿದ್ದರೂ ಕೂಡಾ, ನಮ್ಮ ಹೀರೋಗಳ ಕಮಾಂಡಿಗ್ ಆಫೀಸರ್ ‘ಸ್ವಲ್ಪ ರಿಸ್ಕ್ ತೆಗೆದುಕೊಳ್ಳೋಣ. ಹೇಗಿದ್ದರೂ ನಮ್ಮ ಟ್ಯಾಂಕುಗಳು ಹಗುರವಾದವು. ಅವುಗಳ ಎಂಜಿನ್ ಶಬ್ದವೂ ಕಡಿಮೆ. ಎಲ್ಲಾ ಟ್ಯಾಂಕುಗಳ ಲೈಟುಗಳನ್ನು ಆರಿಬಿಡೋಣ. ನಮ್ಮ ಬಳಿ ಹತ್ತು ಹದಿನೈದು ರಾತ್ರಿಹೊತ್ತು ನೋಡಬಲ್ಲ ಕನ್ನಡಕಗಳಿವೆ. ಪ್ರತಿ ನಾಲ್ಕನೇ ಟ್ಯಾಂಕಿನ ಚಾಲಕನಿಗೆ ಒಂದು ಕನ್ನಡಕ ಕೊಡೋಣ. ಉಳಿದ ಟ್ಯಾಂಕುಗಳು ಅವುಗಳಿಗೆ ತೀರಾ ಹತ್ತಿರವಾಗಿ ದಾರಿ ತಪ್ಪದಂತೆ ಹಿಂಬಾಲಿಸೋಣ” ಎಂದು ನಿರ್ಧರಿಸಿದರು.

ಗಾಳಿಯ ಹರಿವು ಮತ್ತು ಹವಾಮಾನಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಪಡೆ, ಟ್ಯಾಂಕುಗಳ ಲೈಟನ್ನು ಆರಿಸಿಕೊಂಡು, ಇಳಿಜಾರಿನಲ್ಲಿ ಟ್ಯಾಂಕುಗಳ ಎಂಜಿನ್ ಅನ್ನು ಆರಿಸುತ್ತಾ, ಬೇಕಾದಾಗ ಮಾತ್ರ ಎಂಜಿನ್ ಶಬ್ದವಾಗುವಂತೆ ನೋಡಿಕೊಳ್ಳುತ್ತಾ ಆದಷ್ಟೂ ಚಾಕಚಕ್ಯತೆಯಿಂದ ಮುಂದುವರೆಯಿತು. ಗೊತ್ತುಪಡಿಸಿದ ಎಲ್ಲಾ ವಾಂಟೇಜ್ ಪಾಯಿಂಟುಗಳನ್ನು ದಾಟಿ, ಸಾಧಾರಣವಾಗಿ ಪಾಕಿ ಸೈನ್ಯದ ತುಕಡಿಗಳು ಅಡಗಿ ಕೂರುತ್ತಿದ್ದ ಪೂರ್ವ ಚಂಗಾ-ಮಂಗಾ ಎಂಬ ಸಣ್ಣದೊಂದು ಸುರಕ್ಷಿತ ಅರಣ್ಯವನ್ನೂ ದಾಟಿ ಅಲ್ಲಿಂದ ಮುಂದೆಯಿದ್ದ ‘ಚಂಗಾ-ಪಂಗಾ’ ಎಂಬ ಹೆಸರಿನ ಪಾಯಿಂಟನ್ನು ತಲುಪಿ “ನಾವಿಲ್ಲಿಗೆ ತಲುಪಿದ್ದೇವೆ’ ರಿಪೋರ್ಟ್ ಮಾಡಿದಾಗ ಭಾರತೀಯ ಸೈನ್ಯಕ್ಕೇ ಆಶ್ಚರ್ಯ! ಯಾಕೆಂದರೆ ಮೂಲಯೋಜನೆಯ ಪ್ರಕಾರ ಆ ಪಾಯಿಂಟಿಗೆ ತುಕಡಿ ತಲುಪಬೇಕಾದದ್ದು ಮರುದಿನ ಮಧ್ಯಾಹ್ನ! ಪಾಕಿ ಸೈನ್ಯಕ್ಕೆ ಬಿಡಿ, ನಮ್ಮದೇ ಸೈನ್ಯಕ್ಕೂ ಗೊತ್ತಾಗದಂತೆ ಕತ್ತಲಲ್ಲಿ ಒಂದುವರೆ ಪಟ್ಟು ಕೆಲಸ ಮಾಡಿತ್ತು ಈ ತುಕಡಿ! ಇವತ್ತು ರಾತ್ರಿ ಟ್ಯಾಂಕುಗಳ ತುಕಡಿ ಬರುತ್ತದೆಂದು ಕಾದಿದ್ದ ಪಾಕಿಗಳಿಗೆ ಮಂಡೆಬಿಸಿಯಾಗಿತ್ತು. ಮರುದಿನ ಬೆಳಗೆದ್ದು ನೋಡಿದರೆ ಒಂದು ಕಡೆ ಅರವತ್ಮೂರನೇ ತುಕಡಿ ಇನ್ನೊಂದೆಡೆ ಐದನೇ ಐಎಎಸ್ ಅನ್ನು ಹಲವು ಸೂಕ್ಷ್ಮ ಜಾಗಗಳಲ್ಲಿ ಮತ್ತು ಪದಾತಿ, ಅಶ್ವ ಮತ್ತು ಟ್ಯಾಂಕುಗಳ ಮೂರು ವಿಭಿನ್ನ ರೀತಿಯ ದಳಗಳಲ್ಲಿ, ವಿವಿಧ ದಿಕ್ಕುಗಳಲ್ಲಿ ಕಂಡುಬರುತ್ತಿರುವ ರೇಡಿಯೋ ಮತ್ತು ದೃಶ್ಯವರದಿಗಳು ಪಾಕಿಸ್ತಾನಿಗಳನ್ನು ಬೆಚ್ಚಿಬೀಳಿಸಿದವು. ಹತಾಶೆ ಮತ್ತು ಸಿಟ್ಟಿನಿಂದ ಈ ರೆಜಿಮೆಂಟ್ ಅನ್ನು ‘ಘೋಸ್ಟ್ ರೆಜಿಮೆಂಟ್’ ಎಂದು ಉಲ್ಲೇಖಿಸಲಾರಂಭಿಸಿದರು. ಆದರೆ (ಇಷ್ಟವಿಲ್ಲದಿದ್ದರೂ) ಸ್ವಲ್ಪಮಟ್ಟಿನ ಮೆಚ್ಚುಗೆಯೊಂದಿಗೆ “ಖಲೈ ಮಖ್ಲೂಕ್” ಎಂದೂ ಕರೆದರು.

ತಮ್ಮ ಈ ಅಪಾಯಕಾರಿ ನಡೆಗೆ, ಹಾಗೂ ದಾರಿತಪ್ಪಿ ಎಲ್ಲೋ ತಲುಪಿದ್ದಕ್ಕಾಗಿ ಈ ತುಕಡಿ ಭಾರತೀಯ ಸೇನಯಿಂದಲೂ ಬೈಸಿಕೊಂಡರೂ ಸಹ, ಬ್ರಿಗೇಡಿನ ಕಮಾಂಡರ್ ಇವರಿಗೆ ಭೇಷ್ ಕೂಡಾ ಹೇಳಿದರು. ಈ ಭೂತ ನಡೆಯನ್ನು ಉಳಿದವರಿಗೂ ಕಲಿಸುವಂತೆ ಆದೇಶಿಸಿದರು.

Ghost Regiment’s Armored Car

ಹೀಗೆ ತಮ್ಮ ಅನೂಹ್ಯ ನಡೆಗಳಿಂದಾಗಿ ಪಾಕಿಸ್ಥಾನೀ ಸೇನೆಯ ಹಿಡಿತಕ್ಕೇ ಸಿಗದೆ ಸುಲಭವಾಗಿ ಅಖುವಾರಾ ಜಿಲ್ಲೆಯನ್ನು ವಶಪಡಿಸಿಕೊಂಡು, ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸಗತ್ ಸಿಂಗ್ ಅವರ ನೇತೃತ್ವದಲ್ಲಿ, ಎದುರಾಳಿಗಳಿಂದ ಡಬ್ಬಾ ಎಂದು ಕರೆಸಿಕೊಂಡಿದ್ದ ಹಗುರವಾದ ಉಭಯಚರಿ ಟ್ಯಾಂಕುಗಳನ್ನೇ ಬಳಸಿಕೊಂಡು ಪ್ರಬಲ ಹರಿವಿನ ಮೇಘನಾ ನದಿಯನ್ನೂ ದಾಟಿದರು. ಅಲ್ಲಿಂದ ಮುಂದೆ ಯಾವುದೇ ಅಡೆತಡೆಗಳಿಲ್ಲದೇ ತಮ್ಮ ಟ್ಯಾಂಕು, ಸಶಸ್ತ್ರ ಜೀಪುಗಳೊಂದಿಗೆ ಸೀದಾ ಡಾಕಾ ತಲುಪಿದಾಗ, ಅವರಿಗೆ ತಿಳಿದದ್ದೇನೆಂದರೆ ಭಾರತೀಯ ಸೇನೆಯ ಎಲ್ಲಾ ತುಕಡಿಗಳಿಗಿಂತಾ ಮುಂಚೆಯೇ 5 ಐಎಎಸ್‌ನ ಪಿಟಿ-76 ಟ್ಯಾಂಕ್‌ಗಳು ಮಾತ್ರ ಡಾಕಾ ತಲುಪಿದ್ದವು. ಅವರನ್ನೆದುರಿಸಲು ಪಾಕಿಸ್ಥಾನದ ಸೇನೆಯೇ ಇನ್ನೂ ಬಂದಿರಲಿಲ್ಲ. ಎಲ್ಲಾ ನಿರೀಕ್ಷೆಗಳನ್ನು ಮೀರಿ ಮುನ್ನಡೆದ, ಈ ತಾತ್ಕಾಲಿಕ ಸ್ಕ್ವಾಡ್ರನ್ ಸಶಸ್ತ್ರಯುದ್ಧಕ್ಕಿಂತಲೂ ಮುಂಚೆಯೇ ಭಾರತೀಯ ಸೇನೆಯ ಹಲವು ಉದ್ದೇಶಗಳನ್ನು ನೆರವೇರಿಸಿತು. ಸೈನ್ಯದ ಗ್ಯಾರಿಸನ್, ರೇಡಿಯೋ ಸ್ಟೇಷನ್ ಮುಂತಾದವನ್ನು ಸ್ಥಾಪಿಸಿ, ನಂತರ ಬಂದ ತುಕಡಿಗಳ ಸುಲಭ ಮತ್ತು ಪರಿಣಾಮಕಾರಿ ಚಲನೆಗೆ ಸಹಾಯಮಾಡಿತು.

ಹೀಗೆ ತನ್ನವರಿಂದ ಮಾತ್ರವಲ್ಲ, ಎದುರಾಳಿಗಳಿಂದಲೂ ಶಭಾಶ್ ಎನಿಸಿಕೊಂಡ ಭೂತಗಳ ರೆಜೆಮೆಂಟೂ ನಮ್ಮಲ್ಲಿದೆ.

0 comments on ““ಪಾಕಿಸ್ತಾನಿ ಸೈನ್ಯವನ್ನು ಬೆಚ್ಚಿಬೀಳಿಸಿದ್ದ ಭೂತಗಳ ತುಕಡಿ”

Leave a Reply

Your email address will not be published. Required fields are marked *