Friday, 29 March, 2024

“ನಗುತಾ ನಗುತಾ ??? ನೀನು ನೂರು ವರುಷ”

Share post

ಜೀವನವನ್ನು ಹಸನು ಮಾಡುವ ಶಕ್ತಿ ನಗುವಿದ್ದಷ್ಟು ಬೇರಾವುದಕ್ಕೂ ಇಲ್ಲ ಎಂಬುದೊಂದು ನಂಬಿಕೆ. Laughter is the best medicine ಅನ್ನೋದು ಒಂದು ತೀರಾ ಪ್ರಾಕ್ಟಿಕಲ್ ನಾಣ್ಣುಡಿ ಕೂಡಾ. ನಗು….ನೀ ನಗು….ಕಿರು ನಗೆ ನಗು ಅಂತೆಲ್ಲಾ ನಮ್ಮ ಸಿನಿಮಾ ನಾಯಕರು ಬೇರೆ ಪಾತ್ರಗಳನ್ನು ಪುಸಲಾಯಿಸುವುದನ್ನು ನಾವೆಷ್ಟು ನೋಡಿಲ್ಲ. ಎಂತಹುದೇ ಗಂಭೀರ ಸನ್ನಿವೇಶವನ್ನೂ ಕೂಡಾ ತಿಳಿಗೊಳಿಸುವ ಶಕ್ತಿ ನಗುವಿಗಿದೆ. ಆದರೆ ಇದೇ ನಗುವೇ ಗಂಭೀರ ಸನ್ನಿವೇಶಗಳಿಗೂ ಎಡೆಮಾಡಿಕೊಡಬಹುದು, ಸಾವುನೋವಿಗೂ ಕಾರಣವಾಗಬಹುದು ಎಂದರೆ ಒಂದೇಸಲಕ್ಕೆ ನೀವು ನಂಬಲಿಕ್ಕಿಲ್ಲ. ಆದರೆ ಒಮ್ಮೆ ನೆನೆಸಿಕೊಳ್ಳಿ, ಒಂದು ಕಥೆಯ ಪ್ರಕಾರ ಮಹಾಭಾರತದ ಇಡೀ ಪ್ರಹಸನಕ್ಕೆ, ಕುರುಕ್ಷೇತ್ರದ ಯುದ್ಧಕ್ಕೂ ಪರೋಕ್ಷ ಕಾರಣವಾದದ್ದು ಒಂದು ನಗುವೇ ಅಲ್ಲವೇ! ನೆನಪಾಗುತ್ತಿಲ್ಲವೇನು? ಪಾಂಡವರ ರಾಜಧಾನಿಯಾದ ಇಂದ್ರಪ್ರಸ್ಥಕ್ಕೆ ಆಗಮಿಸಿದ ದುರ್ಯೋಧನ ಮಯನಿರ್ಮಿತ ಅರಮನೆಯ ಒಳಾಂಗಣವೊಂದರಲ್ಲಿ, ಅಲ್ಲಿರುವುದು ತಿಳಿಗೊಳವೆಂದರಿಯದೆ ಕಾಲಿಟ್ಟು ನೀರಲ್ಲಿ ಬಿದ್ದಾಗ ದ್ರೌಪದಿ “ದೃಷ್ಟಿಹೀನನ ಮಗನೂ ದೃಷ್ಟಿಹೀನನೇ” ಎಂದು ಹೇಳಿ ನಕ್ಕಳಂತೆ. ಇಂದ್ರಪ್ರಸ್ಥದ ವೈಭವ ಮತ್ತು ಸೌಂದರ್ಯದೊಂದಿಗೆ, ದ್ರೌಪದಿಯ ನಗುವನ್ನೂ ದುರ್ದಾನವಾಗಿ ಸ್ವೀಕರಿಸಿದ ದುರ್ಯೋಧನ ಇದಕ್ಕೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಶಪಥ ಮಾಡಿ ಹೋದವನು, ಶಕುನಿಯೊಡನೆ ಕೂಡಿ ಪಾಂಡವರನ್ನು ಜೂಜಿಗೆ ಆಹ್ವಾನಿಸಿದ್ದು. ಅಲ್ಲಿ ದ್ರೌಪದಿಯ ವಸ್ತ್ರಾಪಹರಣ ನಡೆದು ಕೌರವರೆಲ್ಲರೂ (ವಿಕರ್ಣನೊಬ್ಬನನ್ನು ಬಿಟ್ಟು) ಪಾಂಡವರ ಸ್ಥಿತಿನೋಡಿ ಗಹಗಹಿಸಿ ನಕ್ಕಿದ್ದು. ಅದರಿಂದ ಅವಮಾನಿತಳಾದ ದ್ರೌಪದಿ ಕೌರವರ ಅದರಲ್ಲೂ ದುರ್ಯೋಧನ ಮತ್ತು ದುಶ್ಯಾಸನರ ಸಾವಿಗೆ ಶಪಥ ಮಾಡಿದ್ದು…..ಹೀಗೆ ಮಹಾಭಾರತದಲ್ಲಿ ದ್ರೌಪದಿ ಮತ್ತು ಕೌರವರ ನಗು ಕುರುಕ್ಷೇತ್ರದ ಯುದ್ಧದ ಮೂಲಕ ಸಾವುನೋವಿಗೆ ಕಾರಣವಾದ ಮುಂದಿನ ಕಥೆ ನಮಗೆಲ್ಲರಿಗೂ ಗೊತ್ತೇ ಇದೆ.

ಪುರಾಣದಲ್ಲಿ ಮಾತ್ರವಲ್ಲದೇ ಮನುಷ್ಯನ ಆರೇಳುಸಾವಿರ ವರ್ಷಗಳ ದಾಖಲಿತ ಇತಿಹಾಸದಲ್ಲೂ ನಿಜಜೀವನದಲ್ಲೂ ನಗು ಬೇರೆ ಬೇರೆ ರೀತಿಯಲ್ಲಿ ಸಾವುಗಳಿಗೆ ಕಾರಣವಾದದ್ದುಂಟು. ಅದೂ ಕೂಡಾ ಒಂದುನಗುವಿನಿಂದ ಇನ್ನೇನೋ ನಡೆದು ಅದರಿಂದ ಸಾವು ನಡೆದದ್ದಲ್ಲ, ಜನರು ತಾವೇ ನಗುನಗುತ್ತಾ ಸತ್ತದ್ದೂ ಇದೆ. ಇಲ್ಲ ಇಲ್ಲ ರೋಮಿಯೋನ ತೋಳಿನಲ್ಲಿ ನಗುತ್ತಾ ಸತ್ತ ಜೂಲಿಯೆಟ್ಟಳ ಕಥೆಯಂತಹಾ ಕವಿಸಮಯದ ಬಗ್ಗೆ ನಾನು ಹೇಳುತ್ತಿಲ್ಲ. ಬದಲಿಗೆ ಏನೋ ನಗೆಹನಿ ಕೇಳುತ್ತಲೋ, ಯಾರೋ ಮಾತನಾಡಿದ್ದು ತೀರಾ ಹಾಸ್ಯಾಸ್ಪದವೆನ್ನಿಸಿ, ನಗುತ್ತಾ ನೆಲದಮೇಲೆ ಬಿದ್ದು ಉರುಳಾಡಿ, ಉಸಿರೇಕಟ್ಟಿ ಸತ್ತವರ ಕಥೆ ನಾನು ಹೇಳುತ್ತಿರುವುದು.

ಹೀಗೂ ಉಂಟೇ! ಎನ್ನುತ್ತೀರಾ!? ಹೂಂ ಸ್ವಾಮೀ, ಇಡ್ಲಿ ಅಥವಾ ಬಿಸ್ಕೇಟು ತಿನ್ನುತ್ತಾ ಉಸಿರುಗಟ್ಟಿ ಸಾಯುವ ಕಥೆಗಳಂತೆಯೇ, ಈ ರೀತಿ ನಗುತ್ತಾ ನಗುತ್ತಲೇ ಸತ್ತವರಿದ್ದಾರೆ. ಈ ರೀತಿಯ ವಿಚಿತ್ರ ಮತ್ತು ಅಪರೂಪದ ಸಾವುಗಳಲ್ಲಿ ನಗೆಯಿಂದ ಉಂಟಾಗುವ ಸಾವು ಖಂಡಿತವಾಗಿಯೂ ಎಷ್ಟೋ ಒಳ್ಳೆಯದು ಎಂದೆನಿಸಬಹುದೇನೋ. ವೈದ್ಯಕೀಯ ಪರಿಭಾಷೆಯಲ್ಲಿ ನೋಡುವುದಾದರೆ ಸಾಮಾನ್ಯವಾಗಿ ಈ ಸಾವುಗಳು ಹೃದಯ ಸ್ತಂಭನ ಅಥವಾ ಉಸಿರುಕಟ್ಟುವಿಕೆಯಿಂದ ಉಂಟಾಗುವುದಾದರೂ, ಇದಕ್ಕೆ ಮೂಲಕಾರಣ ನಗೆಯಾದ್ದರಿಂದ ಅವನ್ನು “ನಗೆಯಿಂದ ಬಂದ ಸಾವು” ಎಂದೇ ಪರಿಗಣಿಸುತ್ತಾರೆ. ಮೆದುಳುಬಳ್ಳಿ ಮತ್ತು ಮೆಡ್ಯುಲ್ಲಾ ಅಬ್ಲಾಂಗಾಟಾ ಭಾಗದಲ್ಲಿ ಪೆಟ್ಟಾದಾಗ ಅಥವಾ ಅಲ್ಲಿ ಇನ್ನೂ ಬೇರೆ ಬೇರೆ ಕಾರಣಗಳಿಂದಾಗಿ ಉಂಟಾಗಬಹುದಾದ ಅಂಗಾಂಶಗಳ ಸಾವಿನಿಂದಾಗಿ ನಮ್ಮ ಹತೋಟಿಗೇ ಸಿಗದಂತಾ ನಗುವೂ ಉತ್ಪಾದನೆಯಾಗಬಹುದು. ಚಿತ್ತೋನ್ಮಾದಕ್ಕೆ ಒಳಗಾಗುವ ಮನುಷ್ಯರಲ್ಲೂ ಮೆದುಳುಬಳ್ಳಿಗಳ ಊತವುಂಟಾಗಿ ಅವರು ಕಾರಣವೇ ಇಲ್ಲದೇ ಗಹಗಹಿಸಿ ನಗುವುದು, ವಿಚಿತ್ರವಾಗಿ ತಮಗೇ ಗೊತ್ತಿಲ್ಲದೇ ನಗುವ ಖಾಯಿಲೆಗೂ ಒಳಗಾಗುವುದುಂಟು. ಈ ಕಾರಣವಲ್ಲದೇ ಹತೋಟೀಗೆ ಸಿಗದ ನಗುವಿನಿಂದಾಗಿ ಮಾಂಸಖಂಡಗಳ ಕುಸಿತ, ಹೈಪೋಥಲಾಮಸ್ಸಿನ ಸುಸ್ತಾಗುವಿಕೆಯಿಂದಾಗಿ ತಲೆಸುತ್ತುವಿಕೆ, ಆಮ್ಲಜನಕ ಕೊರತೆ, Gelastic seizuresನಂತಹ ಅಪಸ್ಮಾರಗಳೂ ಉಂಟಾಗಬಹುದು. ಹಾಗೂ ಇದೇ ಕಾರಣಗಳಿಂದಾಗಿ ಸಾವೂ ಸಂಭವಿಸಬಹುದು. Laughter is the best medicine ಅಂತಾ ಹೇಳಿರುವ ಡಾಕ್ಟರುಗಳೇ ಇದನ್ನೂ ನಿಮಗೆ ವಿವರಿಸಬಲ್ಲದು. Ofcourse ಹಾಗಂತಾ ನಗಬೇಡಿ ಅಂತಲ್ಲಾ. ಅತಿಯಾದರೆ ಯಾವುದೂ ವಿಷವೇ ಅಂತಾ ಹೇಳಿದ್ದಷ್ಟೇ.

ಈ ರೀತಿಯೂ ಸಾಯುವುದುಂಟಾ ಎಂದು ನಿಮಗೆ ಆಶ್ಚರ್ಯವಿದ್ದಲ್ಲಿ, ಅಥವಾ ನಗೆಯಿಂದ ಬಂದ ಸಾವುಗಳು ಎಲ್ಲೋ ಒಂದೆರಡುರಬೇಕಷ್ಟೇ ಎಂಬ ಅಭಿಪ್ರಾಯವಿರುವವರು ನೀವಾದರೆ ದಯವಿಟ್ಟು ಆ ತಪ್ಪುತಿಳುವಳಿಕೆಯಿಂದ ಹೊರಬನ್ನಿ. ಇಂದಿಗೂ ಕೂಡಾ ಜಗತ್ತಿನಾದ್ಯಂತ ವರ್ಷಕ್ಕೆ ಹತ್ತಾದರೂ ಸಾವುಗಳು ನಗೆಯ ಮೂಲಕವೇ ಬಾಗಿಲು ಬಡಿಯುತ್ತಾವಂತೆ. ಹಾಗೂ ಈ ರೀತಿಯ ಸಾವಿನ ನಿದರ್ಶನಗಳು ಪ್ರಾಚೀನ ಗ್ರೀಸ್‌ನ ಕಾಲದಿಂದಲೂ ಆಧುನಿಕ ಚರಿತ್ರೆಯವರೆಗೂ ದಾಖಲಾಗಿವೆ.

ಕ್ರಿ.ಪೂ 5ನೇ ಶತಮಾನದ ಗ್ರೀಸಿನಲ್ಲಿ ಜಮೀನ್ದಾರೀ ಶ್ರೀಮಂತೆ ವೃದ್ಧೆಯೊಬ್ಬಳು, ಪ್ರಸಿದ್ಧ ಗ್ರೀಕ್ ವರ್ಣಚಿತ್ರಕಾರ ಜ್ಯೂಕ್ಸಿಸ್’ನನ್ನು ಕರೆಸಿ ನನ್ನನ್ನು ದೇವತೆ ಅಫ್ರೋಡೈಟಳಂತೆ ಚಿತ್ರಿಸು ಎಂದು ಕೇಳಿಕೊಂಡಳಂತೆ. ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಜ್ಯೂಕ್ಸಿಸ್, ಈ ಕೆಲಸ ಪ್ರಾರಂಭಿಸಿದ ಮೂರೇ ದಿನದಲ್ಲಿ ವರ್ಣಚಿತ್ರ ಮೂಡಿಬರುತ್ತಿರುವ ರೀತಿಯನ್ನು ಗಮನಿಸಿ, ಇದ್ಯಾಕೋ ಯಾವ ಕೋನದಿಂದಲೂ ಅಫೋಡೈಟಳಂತೆ ಮೂಡಿಬರುತ್ತಿಲ್ಲ ಹಾಗೂ ಮೂಡಿಬರಲು ಸಾಧ್ಯವೂ ಇಲ್ಲ ಎಂದರಿತು, ಈ ಚಿತ್ರ ಕೊನೆಗೆ ಹೇಗೆ ಕಾಣಬಹುದು ಎಂಬುದನ್ನು ಊಹಿಸಿಕೊಂಡು ನಗಲಾರಂಭಿಸಿದವ, ನಗು ತಡೆಯಲಾರದೇ ನಗುತ್ತಾ ನಗುತ್ತಾ ಸತ್ತೇ ಹೋದನಂತೆ.

ಕ್ರಿ.ಪೂ 3ನೇ ಶತಮಾನದಲ್ಲಿ ಬದುಕಿದ್ದ ಗ್ರೀಕ್ ತತ್ವಜ್ಞಾನಿ ಕ್ರಿಸಿಪ್ಪಸ್‌, ತನ್ನ ವಿದ್ಯಾಭ್ಯಾಸ ಮುಗಿದ ನಂತರ ಅಂದರೆ ತತ್ವಶಾಸ್ತ್ರವನ್ನೇ ಜೀವನಾಧಾರವಾಗಿ ಮಾಡಿಕೊಂಡಾಗಿನಿಂದ ಎಂದೂ ನಕ್ಕವನೇ ಅಲ್ಲ. ನಗುಬಿಡಿ, ಅವನು stoic ತತ್ವಶಾಸ್ತ್ರದ ಶಾಲೆಗೆ ಸೇರಿದವನಾದ್ದರಿಂದ ಹೆಚ್ಚಾಗಿ ಯಾವ ಭಾವನೆಗಳನ್ನೂ ತೋರಿಸಿದವನೇ ಅಲ್ಲ. ಇಂತಹಾ ಕ್ರಿಸಿಪ್ಪಸ್ ಒಂದು ದಿನ ತನ್ನ ಮನೆಯ ಹೊರಾಂಗಣಕ್ಕೆ ಬಂದಾಗ ಕೆಲಸದವ ಒಡೆಯನ ಬೆಳಗಿನ ಉಪಹಾರಕ್ಕಾಗಿ ಇಟ್ಟಿದ್ದ ಅಂಜೂರದ ಹಣ್ಣುಗಳನ್ನು ತನ್ನ ಸಾಕು ಕತ್ತೆ ತಿನ್ನುತ್ತಿರುವುದನ್ನು ನೋಡಿದವನಿಗೆ ಇದ್ದಕ್ಕಿಂದಂತೆ ಅದೇನನ್ನಿಸಿತೋ, ಜೋರಾಗಿ ನಗಲಾರಂಭಿಸಿದ. ನಗುತ್ತಲೇ ತನ್ನ ಕೆಲಸದವನನ್ನು ಕರೆದು “ಅಷ್ಟು ಒಣಹಣ್ಣನ್ನು ತಿಂದ ಈ ಕತ್ತೆಗೆ ಸ್ವಲ್ಪ ದ್ರಾಕ್ಷಾರಸವನ್ನೂ ಕೊಡು” ಎಂದು ಹೇಳುತ್ತಲೇ ನಗು ಹೆಚ್ಚಾಗಿ, ತುಂಬಾ ನಕ್ಕಿದ್ದರಿಂದಲೇ ಅವನು ಸತ್ತುಹೋದನೆಂದು, ಗ್ರೀಕ್ ತತ್ವಶಾಸ್ತ್ರಜ್ಞರ ಜೀವನಗಳನ್ನು ಅಧ್ಯಯಿಸಿದ ಡಿಯೋಜೆನೆಸ್ ಲಾರ್ಟಿಯಸ್ ತನ್ನ ಪುಸ್ತಕದಲ್ಲಿ ಬರೆದಿದ್ದಾನೆ.

ರಾಜರ ಕಾಲದಲ್ಲಿ ಆಸ್ಥಾನ ವಿದೂಷಕರೊಬ್ಬರು ಇದ್ದೇ ಇರುತ್ತಿದ್ದರೆಂದು ನಮಗೆಲ್ಲರಿಗೂ ತಿಳಿದೇ ಇದೆ. ದಿನವಿಡೀ ಗಂಭೀರ ರಾಜಕೀಯ ಚರ್ಚೆಗಳಿಂದ ಬಸವಳಿದ ಆಸ್ಥಾನ ಪಂಡಿತರಿಗೂ, ರಾಜರಿಗೂ ಸ್ವಲ್ಪ ನಗುವನ್ನುಣಬಡಿಸಲೆಂದೇ ಇರುತ್ತಿದ್ದ ವಿದೂಷಕನೇ ಕ್ರಿ.ಶ 1410ರಲ್ಲಿ, ಅರಾಗೊನ್ (ಅಂದಿನ ಬಾರ್ಸಿಲೋನಾ ಮತ್ತು ಸಿಸಿಲಿ ಪ್ರಾಂತ್ಯಗಳ ಒಕ್ಕೂಟ)ದ ರಾಜ ಮಾರ್ಟಿನ್ನನ ಸಾವಿಗೆ ಕಾರಣವಾದ. ಆತ ಹೇಳಿದ ನಗೆಹನಿಯೊಂದರಿಂದ ಮಧ್ಯಾಹ್ನ ಪ್ರಾರಂಭವಾದ ನಗು, ಸಂಜೆಯಹೊತ್ತಿಗೆ ಅಜೀರ್ಣಕ್ಕೆಡೆಮಾಡಿಕೊಟ್ಟು, ಅದರಿಂದ ಬಳಲುತ್ತಲೇ ರಾತ್ರಿಯಿಡೀ ಅನಿಯಂತ್ರಿತವಾಗಿ ನಗುತ್ತಿದ್ದ ಮಾರ್ಟಿನ್ ನಗುವಿನಲ್ಲೇ ಮರಣಹೊಂದಿದ. ಮಾರ್ಟಿನ್ನನಿಗೆ ನಗುತ್ತಾ ಸಾವೇನೋ ಬಂತು. ಆದರೆ ಜೋಕು ಹೇಳಿದ ವಿದೂಷಕ ಮಾತ್ರ ಮರುದಿನ ಅಳುತ್ತಲೇ ಮರಣದಂಡನೆಗೊಳಗಾದ.

ಕ್ರಿ.ಶ 1556ರಲ್ಲಿ, ಇಟಲಿಯ ಪ್ರಸಿದ್ಧ ಕವಿ, ನಾಟಕಕಾರ, ಬರಹಗಾರ ಹಾಗೂ ಸಮಾಜದ ಎಲ್ಲಾ ವರ್ಗಗಳ ತಪ್ಪನ್ನೂ ನಿರ್ಭಿಡೆಯ ಮಾತುಗಳಿಂದ ವ್ಯಂಗ್ಯವಾಗಿ ಟೀಕಿಸುತ್ತಿದ್ದ ಪಿಯೆಟ್ರೊ ಅರೆಟಿನೊ ಕೂಡಾ ತನ್ನದೊಂದು ಬರಹದಲ್ಲಿ ತಮಾಷೆಯನ್ನು ಕಂಡವ ನಗಲಾರಂಭಿಸಿದವ ಉಸಿರುಗಟ್ಟಿ ಸತ್ತೇಹೋದ ಎಂದು ಹೇಳಲಾಗುತ್ತದೆ. ನೀವು ವ್ಯಾಟಿಕನ್ನಿನ ಸಿಸ್ಟೀನ್ ಚಾಪೆಲ್’ಗೆ ಹೋದರೆ ಮೈಕಲೇಂಜಲೋ ಚಿತ್ರಿಸಿದ ‘ದ ಲಾಸ್ಟ್ ಜಡ್ಜ್ಮೆಂಟ್’ ವರ್ಣಚಿತ್ರದಲ್ಲಿ ಸಂತ ಬಾರ್ತಾಲೋಮ್ಯೋನ ಚಿತ್ರಕ್ಕೆ ರೂಪದರ್ಶಿಯಾಗಿ ಕೂತವ ಇದೇ ಪಿಯೆಟ್ರೋ.

ಅರೆಟೀನೋ ರೂಪದರ್ಶಿಯಾಗಿ ಕುಳಿತಿದ್ದ ಸಂತ ಬಾರ್ತಾಲೋಮ್ಯೋನ ಚಿತ್ರ (ಮೈಕಲೇಂಜಲೋ ಚಿತ್ರಿಸಿದ ‘ದ ಲಾಸ್ಟ್ ಜಡ್ಜ್ಮೆಂಟ್’, ಸಿಸ್ಟೀನ್ ಚಾಪೆಲ್, ವ್ಯಾಟಿಕನ್ ಸಿಟಿ)

ಫ್ರಾಂಕೋಯಿಸ್ ರಾಬೆಲೈಸ್ ಅವರ ಬರಹಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದ ಥಾಮಸ್ ಉರ್ಕ್ಹಾರ್ಟ್, 1660ರಲ್ಲಿ ಸ್ಕಾಡ್ಲ್ಯಾಂಡಿನ ದೊರೆಯಾಗಿದ್ದ ಮೊದಲನೇ ಚಾರ್ಲ್ಸ್ ತೀರಿಕೊಂಡ ಎಂದು ತಿಳಿದು ಮೂರುದಿನ ಬೇಸರದಿಂದ್ದವ, ನಾಲ್ಕನೇ ದಿನಕ್ಕೆ ರಾಜಕಾರಣದ ಅಆಇಈ ತಿಳಿಯದ ವಿಲಾಸೀ ರಾಜಕುಮಾರ ಎರಡನೇ ಚಾರ್ಲ್ಸ್ ಸಿಂಹಾಸನದ ಉತ್ತರಾಧಿಪತಿಯಂತೆ ಎಂದು ಕೇಳಿದ ಕೂಡಲೇ ನಗಲಾರಂಭಿಸಿ ಹಾಗೆಯೇ ನಗುತ್ತಲೇ ಸತ್ತನೆಂದು ಹೇಳಲಾಗುತ್ತದೆ.

1799ರಲ್ಲಿ, ಇಂಗ್ಲೆಂಡ್‌ನ ಸೇಂಟ್ ಆಂಡ್ರ್ಯೂಸ್‌ನಲ್ಲಿದ್ದ ವಿಲಿಯಂ ಕುಶಿಂಗ್ ಎಂಬಾತ ಗೆಳೆಯರೊಂದಿಗೆ ಹರಟುತ್ತಿದ್ದವ ಜೋಕ್ ಒಂದಕ್ಕೆ ನಗಲಾರಂಭಿಸಿದವರ ಐದೇ ನಿಮಿಷದಲ್ಲಿ “ವಿಪರೀತ ನಗೆಯಿಂದ” ನಿಧನಹೊಂದಿದ. ಅಕ್ಟೋಬರ್, 1920ರಂದು, ಆಸ್ಟ್ರೇಲಿಯಾದಲ್ಲಿ ಶ್ವಾನ ತರಬೇತುದಾರನಾಗಿದ್ದ 56 ವರ್ಷದ ಆರ್ಥರ್ ಕಾಬ್‌ಕ್ರಾಫ್ಟ್ ಎಂಬಾತನಿಗೆ ಮನೆಯಲ್ಲಿ ಐದು ವರ್ಷ ಹಳೆಯ ವೃತ್ತಪತ್ರಿಕೆಯೊಂದು ಸಿಕ್ಕಿತಂತೆ. ಅದನ್ನು ಓದುತ್ತಾ 1915ರಲ್ಲಿದ್ದ ಕೆಲವು ಸರಕುಗಳ ಬೆಲೆಯನ್ನು 1920ರ ಬೆಲೆಗೆ ಹೋಲಿಸಿ ನಗಲಾರಭಿಸಿದವ, ಹೆಂಡತಿಯನ್ನು ಕರೆದು ಅದನ್ನು ನಗುತ್ತಲೇ ವಿವರಿಸುತ್ತ ನಗುತ್ತಲೇ ಕುಸಿದು ಬಿದ್ದ. ತಕ್ಷಣವೇ ವೈದ್ಯರನ್ನು ಕರೆಸಿದರೂ ಫಲಕಾರಿಯಾಗಲಿಲ್ಲ. ಬಂದ ವೈದ್ಯರು ಈ ಸಾವು ಅತಿಯಾದ ನಗೆಯಿಂದ ಬಂದ ಹೃದಯ ವೈಫಲ್ಯದಿಂದಾಗಿ ನಡೆದಿದೆ ಎಂದರು.

1975ರಲ್ಲಿ ಇಂಗ್ಲೆಂಡಿನ ಕಿಂಗ್ಸ್ ಲಿನ್’ನಲ್ಲಿ ದೂರದರ್ಶಕದಲ್ಲಿ ಬರುತ್ತಿದ್ದ ನಗೆಧಾರಾವಾಹಿ The Goodiesನ ಕುಂಗ್-ಫೂ ಕೇಪರ್ಸ್ ಸಂಚಿಕೆಯನ್ನು ನೋಡುತ್ತಿದ್ದ ಅಲೆಕ್ಸ್ ಮಿಚೆಲ್ ಎಂಬಾತ ನಗೆತಡೆಯಲಾರದೇ ಸತ್ತೇ ಹೋದನಂತೆ. ಆದರೆ ಇಲ್ಲೊಂದು ಆಹ್ಲಾದಕರ ವಿಷಯ ನೋಡಿ! ಆತನ ಪತ್ನಿ, ಧಾರಾವಾಹಿಯ ತಂಡಕ್ಕೆ ಪತ್ರಬರೆದು ಮಿಚೆಲ್ಲನ ಜೀವನದ ಅಂತಿಮ ಕ್ಷಣಗಳನ್ನು ತುಂಬಾ ಆಹ್ಲಾದಕರವಾಗಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಳಂತೆ!! ಇತ್ತೀಚಿನ ನಮ್ಮ ಧಾರಾವಾಹಿಗಳನ್ನು ಗಮನಿಸಿದರೆ ಅದನ್ನು ನೋಡಿದ ಜನ ವಿಷಾದದೊಂದಿಗೆ ಆತ್ಮಹತ್ಯೆಮಾಡಿಕೊಂಡ ಉದಾಹರಣೆಗಳು ಸಿಕ್ಕಾವು, ನಗುತ್ತಾ ಸತ್ತವರನ್ನು ದುರ್ಬೀನು ಹಾಕಿಹುಡುಕಬೇಕೇನೋ!

ಈ ಲೇಖನದ ಉದ್ದೇಶ ನಗಬೇಡಿ ಎಂದು ಹೇಳುವುದಲ್ಲ. Infact ನಾನಂತೂ ಎಲ್ಲರಿಗೂ ಹೆಚ್ಚು ನಗಲೇ ಪ್ರೇರೇಪಿಸುತ್ತೇನೆ. ಆದರೆ ನನಗೆ ನಿಮಗೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ಬಂದದ್ದುಂಟು, ಉಸಿರು ಕಟ್ಟಿದ್ದುಂಟು. ಹೊಟ್ಟೆಹುಣ್ಣಾಗುವಂತೆ ನಕ್ಕರು ಎಂದು ಓದಿದ್ದೇವೆ. ಆದರೆ ಆ ಹೊಟ್ಟೆಹುಣ್ಣಿನಿಂದ ಸತ್ತವರನ್ನು ಕಂಡಿರಲಿಕ್ಕಿಲ್ಲ ಅಲ್ಲವೇ. ನಗುವಿಗೆ ಸಾವನ್ನೂ ತರಬಲ್ಲ ಶಕ್ತಿಯುಂಟು ಮಾರಾಯ್ರೆ, ಜೋಪಾನ ಎಂದು ತಿಳಿಸುವುದಷ್ಟೇ.

0 comments on ““ನಗುತಾ ನಗುತಾ ??? ನೀನು ನೂರು ವರುಷ”

Leave a Reply

Your email address will not be published. Required fields are marked *