Wednesday, 24 April, 2024

“ರಸ್ತೆಗಳೆಂಬ ಮರಣಕೂಪಗಳೂ, ಚಾಲಕರೆಂಬ ಭಯೋತ್ಪಾದಕರೂ…”

Share post

ಪ್ರತಿಬಾರಿ ನಾನು ಭಾರತಕ್ಕೆ ಟಿಕೇಟು ಬುಕ್ ಮಾಡಿದಾಗಲೂ ಮನಸ್ಸಿನಲ್ಲಿ ಸಾವಿರ ರೀತಿಯ ಸಂತಸಗಳು ಗರಿಗೆದರಿ ನಿಲ್ಲುತ್ತವೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸೀ ಎಂಬೆಲ್ಲಾ ಸಾಲುಗಳು ಮನಸ್ಸಿನಲ್ಲಿ ತುಂಬಿಕೊಂಡು, ಮನಸ್ಸು ಕಣ್ಣುಗಳೆಲ್ಲಾ ತುಂಬಿಬಂದು ದೇಶಪ್ರೇಮ ಚಿಗುರಿ ನಿಲ್ಲುತ್ತದೆ. ಬೆಂಗಳೂರಿನಲ್ಲಿಳಿದು ಇಮಿಗ್ರೇಷನ್ನು, ಭದ್ರತಾ ತಪಾಸಣೆ ಎಲ್ಲವನ್ನೂ ಬೇಗ ಬೇಗ ಮುಗಿಸಿ, ಬ್ಯಾಗೆತ್ತಿಕೊಂಡು ಹೊರಗಡೆ ಓಡಿ ಕಾಯುತ್ತಿರುವವರನ್ನು ತಬ್ಬಿಕೊಳ್ಳುವ ತವಕ. ಎಲ್ಲರನ್ನೂ ಭೇಟಿಯಾಗಿ ಅಲ್ಲೇ ಒಂದು ಕಾಫಿ ಕುಡಿದು ಕಾರಿನಲ್ಲಿ ಬ್ಯಾಗೆಲ್ಲಾ ತುರುಕಿ ಮನೆಯೆಡೆದಿನ ರಸ್ತೆಯಲ್ಲಿ ಹೊರಟ ಐದೇ ನಿಮಿಷದಲ್ಲಿ…… ಇಲ್ಲಿಯವರೆಗೂ ತುಂಬಿತುಳುಕುತ್ತಿದ್ದ ನನ್ನ ಉತ್ಸಾಹ, ಭಾರತದ ಮೇಲಿನ ದೇಶಭಕ್ತಿ ಎಲ್ಲವೂ ಜರ್ರೆಂದು ಇಳಿದು ತಥ್ ಎನಿಸಿಬಿಡುತ್ತದೆ. ಇದು ನನಗೆ ಪ್ರತಿಬಾರಿಯೂ ಆಗುವ ಅನುಭವ. ಯಾಕೆಂದರೆ ನಮ್ಮ ರಸ್ತೆಗಳ ಮೇಲೆ ವಾಹನ ಚಲಾಯಿಸುತ್ತಿರುವವರ ವರ್ತನೆಗಳು ಹಾಗಿರುತ್ತವೆ.

 

ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬನೂ ಅವಧಾನಿಯೇ ಎಂಬು ನನ್ನ ಅಭಿಪ್ರಾಯ. ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು, ಇನ್ನೊಂದರಲ್ಲಿ ಹಾರ್ನ್ ಒತ್ತುತ್ತಾ, ಆಗಾಗ ಸುತ್ತಮುತ್ತಲಿನವರಿಗೆ ಕೈಸನ್ನೆಗಳಿಂದಾ ‘ಆಶೀರ್ವಾದ’ ಮಾಡುತ್ತಾ, ಒಂದು ಕಿವಿಯಲ್ಲಿ ಫೋನು, ಇನ್ನೊಂದು ಕಿವಿಯಲ್ಲಿ ‘ಕೈ ಕೈಯ್ಯ ಕಚ್ಚಾಸುಡಾ’ ಎನ್ನುವ ಹಾಡಿನ ಆಳದ ತತ್ವಜ್ಞಾನವನ್ನು ಅರ್ಥೈಸಿಕೊಂಡು’, ಹಾಡಿಗೂ ಫೋನಿನಲ್ಲಿ ಬಾಸ್ ಹೇಳಿದ ಮಾತಿಗೂ ಏಕಕಾಲಕ್ಕೆ ಏಕರೂಪದಲ್ಲಿ ತಲೆದೂಗುತ್ತಾ, ಒಂದು ಕಾಲಲ್ಲಿ ಆಕ್ಸಲರೇಟರ್, ಇನ್ನೊಂದು ಕಾಲಲ್ಲಿ ಬ್ರೇಕ್, ಆಗಾಗ ಮಧ್ಯದಲ್ಲಿ ಕ್ಲಚ್ ಒತ್ತುತ್ತಾ, ಇಷ್ಟರ ಮಧ್ಯ ಫೋನಿಗೆ ಬಂದಿಳಿದ ವಾಟ್ಸಾಪ್ ಜೋಕಿಗೆ ನಗುತ್ತಾ, ಟ್ವೀಟುಗಳನ್ನು ಓದಿ, ಮೆಚ್ಚಿ, ತಕ್ಷಣವೇ ಅವನ್ನು ಕದ್ದು ಫೇಸ್ಬುಕ್ ಅಪ್ಡೇಟಿಗೆ ವರ್ಗಾಯಿಸುತ್ತಾ, ತನ್ನ ಪ್ರೊಫೈಲ್ ಫೋಟೋಗೆ ಬಂದ ಲೈಕುಗಳನ್ನು ನೋಡಿ ಹೆಮ್ಮೆಪಡುತ್ತಾ, ಆಂಬ್ಯುಲೆನ್ಸ್ ಕೂಗುತ್ತಿದ್ದರೂ, ಟ್ರಾಫಿಕ್ ಸಿಗ್ನಲ್ ಕೆಂಪಾಗಿದ್ದರೂ ಕ್ಯಾರೇ ಅನ್ನದೇ, ಸುಮ್ಮನೆ ಮುಂದೆ ಹೋಗುತ್ತಾ, ಕೃಷ್ಣ ಪರಮಾತ್ಮ ಬೋಧಿಸಿದ ‘ಸ್ಥಿತಪ್ರಜ್ಞೆ’ಯನ್ನು ಮೆರೆಯುತ್ತಾ ಆಕ್ಸಿಡೆಂಟ್ ಮಾಡದೇ ಆಫೀಸು ತಲುಪುವ ರೀತಿಯನ್ನು ನೋಡಿದರೆ ಯಾವುದೇ ವಿಜ್ಞಾನಿಯೂ ‘ಹೌ ಈಸ್ ದಿಸ್ ಪಾಸಿಬಲ್!?’ ಎಂದು howಹಾರಬೇಕು.

 

ಇಷ್ಟೆಲ್ಲಾ ಮಲ್ಟಿ-ಟಾಸ್ಕ್ ಮಾಡುವ ಚಾಲಕರು ಹಾಗಾದರೆ ಜಗತ್ತಿನ ಅತ್ಯುತ್ತಮ ಚಾಲಕರಾಗಬೇಕಲ್ಲವೇ? ಅದೇ ನೋಡಿ ತಮಾಷೆಯ ವಿಚಾರ, ಜಗತ್ತಿನ ಅತೀಕೆಟ್ಟ ಚಾಲಕರ ಪಟ್ಟವೇನಾದರೂ ಇದ್ದರೆ ಅದು ಭಾರತೀಯರಿಗೇ ಸಲ್ಲಬೇಕು ಅಂತಾ ನನ್ನ ಅಭಿಪ್ರಾಯ. ಮತ್ತಿದನ್ನು ನಾನು ನನಗೆ ಭಾರತದಲ್ಲಿ ಆದ ಕೆಟ್ಟ ಅಭಿಪ್ರಾಯದ ಮೇಲೆ ಹೇಳುತ್ತಿಲ್ಲ. ಬದಲಿಗೆ ಕನಿಷ್ಟ ಹದಿಮೂರು ಬೇರೆ ಬೇರೆ ದೇಶಗಳಲ್ಲಿ ವಾಹನ ಚಲಾಯಿಸಿದ ಅನುಭವದ ಮೇಲೆ ಹೇಳುತ್ತಿದ್ದೇನೆ. ನಮ್ಮದೇ ಪಕ್ಕದಲ್ಲಿರುವ ಪುಟ್ಟದೇಶ ಶ್ರೀಲಂಕಾದಿಂದಲೂ ನಮ್ಮ ಚಾಲಕರು ರಸ್ತೆಯ ನಿಯಮಗಳ ಪಾಲನೆಯ ಬಗ್ಗೆ ದೊಡ್ಡ ಪಾಠ ಕಲಿಯಬೇಕು, ಎನ್ನುವಂತಿದೆ ನಮ್ಮ ರಸ್ತೆಗಳ ಪರಿಸ್ಥಿತಿ.

 

ನಮ್ಮ ಚಾಲಕರು ರಸ್ತೆ ಏಕಮುಖವಾಗಿರಲಿ, ದ್ವಿಮುಖವಾಗಿರಲಿ, ಅದಕ್ಕೆ ಕಿಮ್ಮತ್ತೇ ಇಲ್ಲದೆ ಎಲ್ಲ ಕಡೆಯಿಂದಲೂ ನುಗ್ಗುವವರು. ನೀವು ಯಾವಕಡೆ ಹೋಗುತಿದ್ದೀರಿ,ಆವರು ಯಾವ ಕಡೆ ಹೋಗಬೇಕು ಎಂಬ ಪ್ರಶ್ನೆಗಳೆಲ್ಲಾ ಕೇವಲ ತಾತ್ವಿಕ ಮಟ್ಟದಲ್ಲಷ್ಟೆ ಪರಿಹಾರ ಕೊಡುವ, ಲೌಕಿಕಮಟ್ಟದಲ್ಲಿ ತಲೆಯೇ ಕೆಡಿಸಿಕೊಳ್ಳದವರು. ಉಳಿದಂತೆ ಯಾರು ಎಲ್ಲಿಗೆ ಯಾವಾಗ ಬೇಕಾದರೂ ಹೋಗಬಹುದು ಎಂಬ ನಿರ್ವಾಣ ಸ್ಥಿತಿ ತಲುಪಿದವರು. “ವಾಹನಕಂಪನಿಯವರು ಎಲ್ಲೋ ಒಂದಷ್ಟು ಉಳಿಸಿದ ಪ್ಲಾಸ್ಟಿಕ್ಕಿನಿಂದ ಈ ಇಂಡಿಕೇಟರ್ ಎಂಬ ಅಲಂಕಾರಿಕ ಕೋಲು ಮಾಡಿದ್ದಾರೆ” ಎಂಬ ಮನಸ್ಥಿತಿಯವರು. “ಪಾದಚಾರಿಗಳೆಲ್ಲಾ ನಮ್ಮ ಪರಮ ಶತ್ರುಗಳು. ಗರೀಬಿ ಹಠಾವೋ ಆಗುತ್ತೋ ಇಲ್ವೋ, ಅದಕ್ಕಿಂತಾ ಮುಂಚೆ ಪಾದಚಾರಿ ಹಠಾವೋ ನಡೆಯಬೇಕು” ಎಂಬಷ್ಟು ತಿರಸ್ಕಾರ. ಹಾರ್ನ್ ಇರೋದು ಎದುರಿಗಿರುವವರನ್ನು ಎಚ್ಚರಿಸಲಿಕ್ಕಲ್ಲ, ಬದಲಿಗೆ ನಮ್ಮ ಮನರಂಜನೆಗೆ ಎನ್ನುವಷ್ಟು ಸಂಗೀತ ಸಂಯೋಜನೆಗಳು ನಮ್ಮ ರಸ್ತೆಗಳಲ್ಲಿ. ಸ್ವಲ್ಪ ಸಾಮಾನ್ಯಜ್ಞಾನ ಬಳಸಿದರೂ ಉತ್ತರ ತಿಳಿಯಬಹುದಾದ ಹೆಡ್-ಲೈಟ್ ಯಾವಾಗ ಉಪಯೋಗಿಸಬೇಕು, ಪಾರ್ಕಿಂಗ್ ಲೈಟ್ ಯಾವಾಗ ಬಳಸಬೇಕು, ಹಜಾರ್ಡ್ ಲೈಟ್ ಎಂದರೇನು, ಫಾಗ್ ಲ್ಯಾಂಪಿನ ಬಳಕೆಯೇನು, ಹೈ ಬೀಮ್ ಎಂದರೇನು ಮತ್ತದನ್ನು ಯಾವಾಗ ಬಳಸಬೇಕು ಎಂಬ ಪ್ರಶ್ನೆಗಳೆಲ್ಲಾ ಕ್ಯಾಲ್ಕ್ಯುಲಸ್ ಅಥವಾ ಟ್ರಿಗ್ನಾಮೆಟ್ರಿಯಷ್ಟು ಕ್ಲಿಷ್ಟ ವಿಷಯಗಳೇನೋ ಎನ್ನುವಂತೆ ವರ್ತಿಸುತ್ತಾರೆ.

ಚಾಲನಾ ನಿಯಮದ ಪ್ರಕಾರ ಚಾಲಕನ ಕಡೆಯಿಂದ ಅಂದರೆ ಬಲಗಡೆಯಿಂದ ಓವರ್-ಟೇಕ್ ಮಾಡಬೇಕು. ಓವರ್-ಟೇಕ್ ಮಾಡಬೇಕು ಎಂದರೆ ಮುಂದಿರುವ ಕಾರಿಗಿಂತ ನೀವು ವೇಗವಾಗಿ ಹೋಗಬೇಕು ತಾನೇ. ಆದರೆ ನಮ್ಮ ಮಹಾಜ್ಞಾನಿ ಚಾಲಕರು ಬಲದಲ್ಲೇ ನಿಧಾನಕ್ಕೆ ಹೋದರೆ! ಇನ್ನೂ ವಿಚಿತ್ರವೆಂದರೆ ಟ್ರಕ್ಕುಗಳು ರಸ್ತೆಯ ಬಲಬಾಗದಲ್ಲಿ ಚಲಿಸುವುದು. ರಸ್ತೆಯ ಎಡಕೊನೆಯಲ್ಲಿ ಮಾತ್ರ ಟ್ರಕ್ಕುಗಳು ಹೋಗಬೇಕು ಎಂಬ ಪರಿಜ್ಞಾನವಿಲ್ಲದೇ, ಹೈವೇಗಳಲ್ಲೂ ಕೂಡಾ ಎಲ್ಲಾ ಟ್ರಕ್ಕುಗಳೂ ಬಲಸಾಲಿನಲ್ಲಿ ಅಂದರೆ ಹೈಸ್ಪೀಡ್ ಲೇನಿನಲ್ಲಿ ಆಮೆವೇಗದಲ್ಲಿ ಚಲಿಸುತ್ತಾ ಇರುತ್ತವೆ. ಇದರಿಂದಾಗಿ ಅತೀವೇಗದಲ್ಲಿ ಚಲಿಸುವ ಕಾರು ಜೀಪುಗಳು ಎಡದಿಂದಲೇ ಓವರ್ಟೇಕ್ ಮಾಡಿ ಮುಂದೆಹೋಗುತ್ತಾರೆ. ಹೀಗೆ ಕಾರು ಜೀಪುಗಳು ಟ್ರಕ್ಕುಗಳನ್ನು ಬಳಸಿಕೊಂಡು ಹಾವಿನ ಪ್ಯಾಟರ್ನಿನಲ್ಲಿ ಚಲಿಸಿವುದರಿಂದ ಅಪಘಾತಗಳು ಹೆಚ್ಚುತ್ತವೆ ಎಂಬುದು ಆ ಕಾರಿನವರಿಗಾಗಲೀ, ಈ ಟ್ರಕ್ಕಿನವರಿಗಾಗಲೀ ಗೊತ್ತಿರುವುದು ನನಗೆ ಅನುಮಾನ.

 

ನಾಲ್ಕುರಸ್ತೆ ಸೇರುವ ವೃತ್ತಗಳಲ್ಲಿ ಭಾರತೀಯರು ವಾಹನ ನಡೆಸುವ ರೀತಿ ಯಾವ ಗೊಂದಲಕ್ಕೂ ಕಡಿಮೆಯಿಲ್ಲದ್ದು. ಅರ್ಧಕ್ಕರ್ಧ ಜನ ವೃತ್ತಮಧ್ಯವನ್ನು ಬಳಸಿಕೊಂಡು ಹೋದರೆ, ಇನ್ನರ್ಧ ಜನ ಬಳಸದೇ ಶಾರ್ಟ್-ಕಟ್ ತಗೆದುಕೊಂಡು ಎರಡು ಕಡೆಯುವರೂ ನಾನು ಸರಿಯಾ ಅವನು ಸರಿಯಾ ಎಂಬ ಗೊಂದಲವನ್ನು ಸದಾ ಹಸಿರಾಗಿಡುತ್ತಾರೆ. ಈ ಪರಿಸ್ಥಿತಿಗಳಲ್ಲಿ ಬಳಸಬೇಕಾದ ‘ರೈಟ್ ಆಫ್ ವೇ’ (ಸರಿದಾರಿಯ ಹಕ್ಕು) ಎಂಬ ಪರಿಕಲ್ಪನೆಯ ಬಗ್ಗೆಯೇನಾದರೂ ನಾನು ಮಾತನಾಡಿದರೆ ಇದನ್ನು ಓದುತ್ತಿರುವವರೆಲ್ಲರೂ ರೈಟ್ ಆಫ್ ವೇ ನಾ? ಹಲೋ ನನ್ನದೇ ರಸ್ತೆ, ನಾನೇ ಒಡೆಯ, ನಾನು ಟ್ಯಾಕ್ಸ್ ಕಟ್ತೀನಿ ಗೊತ್ತಾ! ಅಂತಾ ನನಗೆ ಹೊಡೆಬರುತ್ತಾರೆ ಎಂಬ ಬಲವಾದ ನಂಬಿಕೆ ನನ್ನದು. ಇಂಡಿಕೇಟರ್, ಹೈ ಬೀಮ್ ಬಗ್ಗೆಯಂತೂ ಬರೆದಷ್ಟೂ ಮುಗಿಯದ ಕಥೆಗಳು. ಇರುವ ಎರಡು ಲೈಟು ಸಾಕಾಗದು ಅಂತಾ ಇನ್ನೂ ಹತ್ತು ಲೈಟುಗಳನ್ನು ಎಡಬಲಉತ್ತರದಕ್ಷಿಣಗಳಲ್ಲೆಲ್ಲಾ ಕೂರಿಸಿಕೊಂಡು, ಅದೆಲ್ಲವನ್ನೂ ಹೈಬೀಮಿನಲ್ಲೇ ಉರಿಸುತ್ತಾ ಎದುರಿರುವ ಎಲ್ಲಾ ವಾಹನ ಚಾಲಕರೂ ಮೋದಿ ಕಣ್ಣಾಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣಮಾಡುವ ಈ ಕೆಲಚಾಲಕರು ಸ್ಟೇರಿಂಗ್ ಹಿಂದಿರುವ ಭಯೋತ್ಪಾದಕರೇ ಸರಿ.

 

ರಸ್ತೆಗಳಲ್ಲಿ ನಾನು ಕಂಡ ಇನ್ನೊಂದು ವಿಚಿತ್ರ ವಿದ್ಯಮಾನವೆಂದರೆ, ನಿಮ್ಮೆಡೆಗೆ ಬರುತ್ತಿರುವ ವಾಹನಗಳ ಹೆಡ್ಲೈಟನ್ನು ನಿಮ್ಮೆಡೆಗೆ ಫ್ಲಾಷ್ ಮಾಡುತ್ತಾ ಬರುವುದು. ಹೀಗೆ ಮಾಡುವುದರ ಅರ್ಥ “ನಾನು ಮೊದಲು ಪಾಸ್ ಆಗ್ತೀನಿ, ನನಗೆ ದಾರಿ ಬಿಟ್ಟು ಕೊಡು” ಎಂದಂತೆ!! ಆಶ್ಚರ್ಯವೆಂದರೆ ಇಡೀ ಜಗತ್ತಿನಲ್ಲಿ ಇದರ ಅರ್ಥ ಉಲ್ಟಾ. ನಿಮ್ಮೆಡೆಗೆ ಯಾರಾದರೂ ಲೈಟ್ ಹಾಕಿದರೆ “ಮೊದಲು ನೀನು ಹೋಗಪ್ಪಾ” ಅಂತಾ ನಿಮಗೆ ಸನ್ನೆ ಮಾಡಿದಂಗೆ. ಆದರೆ ಭಾರತದಲ್ಲಿ ಹೇಗಿದ್ದರೂ ಎಲ್ಲರೂ ಜಗದ್ಗುರುಗಳೇ ಅಲ್ಲವೇ. ಆದ್ದರಿಂದ ನಾನು ಎಲ್ಲರಿಗಿಂತ ಮುಖ್ಯ. ಆದ್ದರಿಂದ ನನಗೆ ಮೊದಲು ಹೋಗಲುಬಿಡು ಎಂದು ಆದೇಶಿಸುತ್ತಾರೆ. ನಾನೇ ಲೈಟ್ ಹಾಕಿ, ನಾನೇ ಮುನ್ನುಗುವುದು ತಾರ್ಕಿಕವಾಗಿಯೂ ತಪ್ಪು, ನಾನು ತೋರಿಸಿದ ಲೈಟ್ ಮುಂದಿನವನಿಗೆ ಕಂಡಿದೆ ಎಂದು ಏನು ಗ್ಯಾರಂಟಿ! ನನ್ನ ಲೈಟೇ ಹಾಳಾಗಿದ್ದು, ನಾನಿಲ್ಲಿ ಲೈಟಿನ ಗುಂಡಿಯೊತ್ತಿದರೂ ಅದು ಉರಿಯದೇ ಇದ್ದು, ನಾನು ಮುನ್ನುಗ್ಗಿ, ಎದುರಿನವ ಇವನ್ಯಾಕೆ ಹೀಗೆ ಬರ್ತಿದ್ದಾನೆ ಅಂತಾ ಗಾಬರಿಯಾಗಿ, ಅದರಿಂದ ಅಪಘಾತವಾಗಬಹುದು ಎಂಬ ಕನಿಷ್ಟ ಲೆಕ್ಕಾಚಾರವೂ ತಿಳಿಯದ ಜ್ಞಾನಿಗಳು ನನ್ನ ಭಾರತದ ಚಾಲಕರು. ನೀವು ಲೈಟ್ ತೋರಿಸಿ, ನಿಮ್ಮ ಲೈಟು ಕೆಲಸ ಮಾಡುತ್ತಿದ್ದು, ಅದು ಎದುರಿನವನಿಗೆ ಕಂಡರೆ…ಆತ ಮುಂದಿನ ನಿರ್ಧಾರವನ್ನು ಮಾಡಬೇಕಾದದ್ದು. ಇದು ವಾಹನ ಚಲಾಯಿಸುವುದರ ಹಿಂದಿನ ಮೂಲ ಲೆಕ್ಕಾಚಾರ. ಆದರೆ ನಮ್ಮಲ್ಲಿ!?

 

ಇದೆಲ್ಲವನ್ನೂ ನೋಡಿ ಸರಿಪಡಿಸಬೇಕಾದ ಪೋಲಿಸರು ಮಾತ್ರ ಕೆಲಸಕ್ಕೇ ಬಾರದ ಪೊಲ್ಯೂಷನ್ ಸರ್ಟಿಫೇಕೇಟು, ಒರಿಜಿನಲ್ ಡಿಎಲ್ ಹಿಂದೆಯೇ ಸದಾ ಬಿದ್ದುಕೊಂಡು ‘ಮಾಮ’ ಎಂಬ ಹೆಸರಿಗೆ ಅನ್ವರ್ಥವಾಗಿಯೇ ಇರುತ್ತಾರೆ. IND ನಂಬರ್ ಪ್ಲೇಟ್ ಎಂಬ ಇನ್ನೊಂದು ಸ್ಕ್ಯಾಮ್ ನೋಡಿದೆ. RTO ನಿಯಮಗಳಿಗೂ ಆ ಹನ್ನೆರಡು ನಕ್ಷತ್ರಗಳಿರುವ IND ನಂಬರ್-ಪ್ಲೇಟಿಗೂ ಯಾವ ಸಂಬಂಧವೂ ಇಲ್ಲ. ಅದು ಯೂರೋಪಿಯನ್ ಯೂನಿಯನ್ನಿನ ನಂಬರ್ ಪ್ಲೇಟ್ ವಿನ್ಯಾಸ. ಯೂರೋಪಿಯನ್ ಯೂನಿಯನ್ನಿನ ಸ್ಥಾಪಕ ದೇಶಗಳನ್ನು ಪ್ರತಿನಿಧಿಸುವ 12 ನಕ್ಷತ್ರಗಳಿರುವ ಯೂರೋಪಿನ ಬಾವುಟವನ್ನೇ ಅಲ್ಲಿನ ವಾಹನಗಳ ಪ್ಲೇಟಿನಲ್ಲಿ ಬಳಸುತ್ತಾರೆ. ಆ ನಕ್ಷತ್ರಗಳ ಕೆಳಗೆ ಆ ಕಾರು ನೋಂದಣಿಯಾಗಿರುವ ದೇಶದ ಕೋಡ್ ಕೂಡಾ ಇರುತ್ತದೆ. ಯಾರೋ ಯೂರೋಪಿಗೆ ಹೋಗಿಬಂದ ಮಹಾನುಭಾವರು ಅದನ್ನೇ ಇಲ್ಲಿ IND ಬರೆದು ನಕಲಿಸಿದ್ದಾರೆ. 12 ನಕ್ಷತ್ರಗಳಿಗೂ ಭಾರತಕ್ಕೂ ಯಾನ ಸಂಬಂಧ! ಕಡೇಪಕ್ಷ ನಮ್ಮಲ್ಲಿರುವ ರಾಜ್ಯಗಳ ಸಂಖ್ಯೆಯಷ್ಟಾದರೂ ನಕ್ಷತ್ರಗಳಿರಬೇಕಲ್ಲವೇ ಅಂತಲೂ ಯಾರೂ ಕೇಳುವವರಿಲ್ಲ. ಬದಲಿಗೆ ಎಲ್ಲರಿಗೂ ಇದೇ ನಂಬರ್ ಪ್ಲೇಟ್ ಬೇಕಂತೆ. ನಿಜಕ್ಕೂ ಜನ ಪಾಲಿಸಬೇಕಾಗಿರುವುದು HSRP ನಿಯಮವನ್ನ. ಬದಲಿಗೆ ಮೊನ್ನೆ ಒಬ್ಬ ಪೋಲೀಸ್ IND ನಂಬರ್ ಪ್ಲೇಟ್ ಇಲ್ಲ, ತೆಗೀ ಮುನ್ನೂರು ಅಂತಾ ಗದರಿಸಿದ್ದನ್ನು ನೋಡಿದೆ! ಜನ ಮರುಳೋ ಜಾತ್ರೆ ಮರುಳೋ ಗೊತ್ತಾಗ್ಲಿಲ್ಲ. ಹೀಗೇ ಮುಂದುವರೆದರೆ ಒಂದು ದಿನ ಪೋಲೀಸರು ಡಿಎಲ್, ಹೆಲ್ಮೆಟ್ ಎಲ್ಲಾ ಸರಿ, ರುದ್ರ ಹನುಮಾನ್ ಸ್ಟಿಕರ್ರೇ ಇಲ್ಲ. ತೆಗಿ ಮುನ್ನೂರು ಅನ್ನಬಹುದೇನೋ!

 

ನನಗೆ ನನ್ನ ದೇಶದ ಬಗ್ಗೆ ಕೀಳರಿಮೆ ಒಂದಿನಿತೂ ಖಂಡಿತಾ ಇಲ್ಲ. In fact, ನನ್ನ ದೇಶವೂ ಈ ರೀತಿಯ ಸಿವಿಕ್ ಸೆನ್ಸ್ ಬೆಳೆಸಿಕೊಳ್ಳಲಿ ಎಂಬುದಷ್ಟೇ ನನ್ನ ಆಸೆ. ಋಗ್ವೇದದಲ್ಲಿ ಹೇಳಿದಂತೆ ‘ಅನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ” ತಾತ್ಪರ್ಯ: ಎಲ್ಲಾ ರೀತಿಯ ಸದ್ವಿಚಾರಗಳು ಎಲ್ಲೆಡೆಯಿ೦ದಲೂ ಬರಲಿ, ಒಳ್ಳೆದರು ಎಲ್ಲಿದ್ದರೂ ಎಲ್ಲಾದಿಕ್ಕಿನಿಂದಲೂ ನಮ್ಮೆಡೆಗೆ ಬರಲಿ ಎನ್ನುವಂತೆ ನಮಗೂ ಜಗತ್ತಿನ ಕೆಲ ಒಳ್ಳೆಯ ವಿಷಯಗಳು ತಿಳಿಯಲಿ, ನಾವದನ್ನು ಅನುಸರಿಸುವಂತಾಗಲಿ ಎಂಬುದಷ್ಟೇ ಲೇಖನದ ಉದ್ದೇಶ.

0 comments on ““ರಸ್ತೆಗಳೆಂಬ ಮರಣಕೂಪಗಳೂ, ಚಾಲಕರೆಂಬ ಭಯೋತ್ಪಾದಕರೂ…”

Leave a Reply

Your email address will not be published. Required fields are marked *