Saturday, 27 April, 2024

“ಕೆಟ್ಟ ಚಾಲಕರು ಹಾಗೂ ವಾಹನದಟ್ಟಣೆಯನ್ನು ಹುಟ್ಟುಹಾಕುವ ವ್ಯವಸ್ಥೆಯೆಂಬ ಅವ್ಯವಸ್ಥೆ”

Share post

ಕಳೆದ ವಾರ ರಸ್ತೆಗಳಲ್ಲಿ ಭಯೋತ್ಪಾದಕರಂತೆ ವರ್ತಿಸುವ ಚಾಲಕರ ಬಗ್ಗೆ ಮಾತನಾಡಿದ್ದೆ. ಇದರ ಬಗ್ಗೆ ಇನ್ನೂ ಬರೆಯುತ್ತಲೇ ಹೋಗಬಹುದು. ನಮ್ಮ ಚಾಲಕರು ಬರೇ ವಾಹನ ಓಡಿಸುವಾಗ ಮಾತ್ರವಲ್ಲ, ಸಿಗ್ನಲ್ಲುಗಳಲ್ಲಿ ಕಾಯುವಾಗಲೂ ತೀರಾ ಅಪ್ರಬುದ್ದತೆ ಮತ್ತು ಅಸಹನೆಯಿಂದ ತೋರುತ್ತಾರೆ. ರೈಲ್ವೇ ಗೇಟುಗಳಲ್ಲಿ ನಿಂತಾಗ ತಮ್ಮ ಕಡೆಯ ಎಡಬದಿಯಲ್ಲಿ ನಿಂತು ಬಲಬದಿಯನ್ನು ಎದುರಿನಿಂದ ಬರುವವರಿಗೆ ಬಿಡಬೇಕು ಎಂಬುದನ್ನೂ ಮರೆತು, ಇಡೀ ರಸ್ತೆಯನ್ನು ಆಕ್ರಮಿಸಿಕೊಂಡು, ಗೇಟ್ ತೆರೆದಕೂಡಲೇ ಕುರುಕ್ಷೇತ್ರ ಯುದ್ಧದಲ್ಲಿ ಎರಡೂ ಕಡೆಯ ಸೈನ್ಯಗಳು ಓಡಿಬಂದು ಮುಖಾಮುಖಿಯಾದಂತಹಾ ದೃಶ್ಯವನ್ನು ಸೃಷ್ಟಿಸುತ್ತಾ, ಪ್ರತಿದಿನವೂ ನಮ್ಮ ಪುರಾಣವನ್ನು ಜೀವಂತವಾಗಿಡುವ ಈ ಚಾಲಕರ ಧರ್ಮಶ್ರದ್ಧೆ ಅನುಕರಣೀಯ. ಪಾದಚಾರಿಗಳೆಂದರೇ, ಜೀಬ್ರಾ ಕ್ರಾಸ್ ಎಂದರೇ, ಹಳದಿ ಜಂಕ್ಷನ್ ಅಂದರೇ, ಲೇನ್ ಶಿಸ್ತು ಬಿಡಿ ರಸ್ತೆಯ ಯಾವುದೇ ನಿಯಮಗಳೆಂದರೇನೇ ಅಲರ್ಜಿಯಿರುವ ಪ್ರಭೇದವನ್ನು ಡ್ರೈವರೀಯಸ್ ಇಂಡಿಕಾ ಎಂದು ಗುರುತಿಸಬಹುದೇನೋ.

 

ಹಾಗಂತಾ ಈ ರಸ್ತೆಯ ಮೇಲೆ ಎಲ್ಲಾ ಅವ್ಯವಸ್ಥೆಗೂ ಚಾಲಕರಷ್ಟೇ ಹೊಣೆಯೇ? ಈ ರೀತಿಯ ಅವ್ಯವಸ್ಥೆಗೆ ವ್ಯವಸ್ಥೆಯ ಕೊಡುಗೆಯೂ ಇರಬಹುದಲ್ಲವೇ? ಯಾಕೆಂದರೆ ಕೆಲ ತೀರಾ ಅನಾಗರೀಕ ಹಾಗೂ ಅತಿರೇಕದ ವರ್ತನೆಗಳನ್ನು ಬಿಟ್ಟರೆ, ರಸ್ತೆನಿಯಮಗಳ ಬಗ್ಗೆ ಹೆಚ್ಚಿನ ಚಾಲಕರ ಅಪಾಯಕಾರಿ ಮತ್ತು ತಪ್ಪು ತಿಳುವಳಿಕೆಗಳಿಗೆ ನಮ್ಮ ವ್ಯವಸ್ಥೆಯಲ್ಲಿರುವ ಅವವಸ್ಥೆಯೇ ಕಾರಣ. ರಸ್ತೆಸಾರಿಗೆ ಕುರಿತಾದ ಸರ್ಕಾರದ ನಿಯಮಾವಳಿಗಳು ಹಾಗೂ ಅದನ್ನು ಕಾರ್ಯಗತಗೊಳಿಸುವ ಮೂರು ಇಲಾಖೆಗಳೂ (ಲೋಕೋಪಯೋಗಿ, ಆರ್.ಟಿ.ಓ, ಮತ್ತು ಪೋಲೀಸ್) ನಮ್ಮ ರಸ್ತೆಗಳು ಅನಾಚಾರದ ಕೂಪಗಳಾಗಿರಲಿಕ್ಕೆ ಕಾರಣ.

 

ಮೊದಲಿಗೆ ಸರ್ಕಾರದ ಬಗ್ಗೆ ಒಂದು ಸ್ವಲ್ಪ ಆಲೋಚಿಸೋಣ. ನನಗೆ ಬೆಂಗಳೂರು ಮೊದಲಿಂದಲೂ ಅಷ್ಟೇನೂ ಪ್ರಿಯ ನಗರವಲ್ಲ. 2008ರಲ್ಲಿ ದೆಹಲಿಯಿಂದ ಬೆಂಗಳೂರಿಗೆ ಹೊಸಾಕೆಲಸದ ಮೇಲೆ ಬಂದಿಳಿದವನಿಗೆ ಬೆಂಗಳೂರಿನ ಕೆಟ್ಟ ಟ್ರಾಫಿಕ್ಕು, ಅದಕ್ಕೆ ಸರಿಯಾಗಿ ಇಡೀ ನಗರಕ್ಕೆ ಸರ್ಜರಿ ಮಾಡಿ ಹೊಲಿಗೆ ಹಾಕುತ್ತಿದ್ದ ಮೆಟ್ರೋ ಪ್ರಾಜೆಕ್ಟನ್ನು ನೋಡಿ ಬೆಂಗಳೂರನ್ನು ಸದಾಕಾಲಕ್ಕೆ ದ್ವೇಷಿಸುವಂತಾಯಿತು. ಜೊತೆಗೇ ನಮ್ಮ ಸರ್ಕಾರಗಳಿಗೆ ಒಂದೇ ಒಂದು ಅಂಶವೂ ಪರಿಸರದ ಕಾಳಜಿಯಿಲ್ಲದಿರುವುದನ್ನು ನೋಡಿ, ಹೇಸಿಗೆಯೂ ಹುಟ್ಟಿತ್ತು. ಬೆಂಗಳೂರಿನಲ್ಲಿ ನನಗೆ ಕಂಡ ಹಾಗೂ ನಾನಿಷ್ಟಪಟ್ಟ ಒಂದೇ ಪರಿಸರ ಹಾಗೂ ರಸ್ತೆಸ್ನೇಹಿ ಯೋಜನೆಯೆಂದರೆ, ಪ್ರತಿತಿಂಗಳ ನಾಲ್ಕನೇ ತಾರೀಕಿನಂದು ಬೆ.ಮ.ನ.ಸಾ.ಸಂ ನಡೆಸಲುದ್ದೇಶಿಸಿದ “ಬಸ್-ಡೇ”. ಅದನ್ನು ಕೆಟ್ಟದಾಗಿ ನಿರ್ವಹಿಸಿ ಪೂರ್ತಿಯಾಗಿ ಹಳ್ಳ ಹಿಡಿಸಲಾಯಿತಾದರೂ, ಕಡೇಪಕ್ಷ ಅಂತಹದೊಂದು ಯೋಜನೆಯ ಬಗ್ಗೆ ಯೋಚಿಸಲಾಗಿತ್ತು ಎಂಬುದಷ್ಟೇ ಸಮಾಧಾನಕರ ವಿಷಯ. ಅದು ಯಾರ ಸರ್ಕಾರವಾಗಿತ್ತು ಅನ್ನೋದು ಮುಖ್ಯವಲ್ಲವೇ ಅಲ್ಲ. ಯಾಕಂದರೆ ಅದ್ಯಾವ ಮಂತ್ರಿಯ ಕನಸಿನ ಯೋಜನೆಯೂ ಆಗಿರಲಿಲ್ಲ. ನಮ್ಮ ಯಾವ ಮಂತ್ರಿಗಳಿಗೂ ಪರಿಸರಸ್ನೇಹೀ ಯೋಚನೆಗಳು ಹೊಳೆಯಲು ಸಾಧ್ಯವೇ ಇಲ್ಲ ಎಂಬುದು ನನ್ನ ಅಚಲನಂಬಿಕೆ. ಅದು ಖಂಡಿತಾ ಬಿಎಂಟಿಸಿಯ ಯಾರೋ ಒಬ್ಬ ಸಂವೇದನಾಶೀಲ ಅಧಿಕಾರಿಯ ಕೂಸಷ್ಟೇ. ಈಗಲೂ ಪ್ರತಿತಿಂಗಳ ನಾಲ್ಕನೇ ತಾರೀಖು ಬಸ್ ಡೇ ನಡೆಯುತ್ತದೆಯೋ ಇಲ್ಲವೋ ಬೆಂಗಳೂರಿಗರೇ ಹೇಳಬೇಕು. 2008ರಲ್ಲಿ ನಾವೊಂದು 200 ಜನ ಸೇರಿಕೊಂಡು, ಸೈಕಲ್ ಓಡಿಸಲು ಅನುಕೂಲವಾಗುವಂತೆ ಬೆಂಗಳೂರಿನ ಮುಖ್ಯರಸ್ತೆಗಳ ಎಡಬದಿಯಲ್ಲಿ 2.5 ಅಡಿ ಜಾಗ ಮೀಸಲಿಡಿ ಎಂಬ ಕೋರಿಕೆಯನ್ನೂ, ಅದಕ್ಕೆ ಪೂರಕವಾದ ಯೋಜನೆಯನ್ನೂ ತಯಾರಿಸಿಕೊಂಡು ಸಾರಿಗೆ ಸಚಿವರ ಕಚೇರಿ, ಬಿಬಿಎಂಪಿ ಹಾಗೂ ಪೋಲೀಸ್ ಕಮೀಷನರ್ ಕಚೇರಿಗಳಲ್ಲಿ ಅಲೆದದ್ದೇ ಬಂತು. ಎಲ್ಲರೂ ಕಿಸುಕ್ಕೆಂದು ಮುಂದೆ ಸಾಗಹಾಕಿದರು. ಕೊನೆಗೆ ಮೇಯರ್ ಅವರನ್ನೇ ಭೇಟಿಮಾಡಿ ಕೋರಿಕೆ ಮುಂದಿಟ್ಟರೂ, ಒಲ್ಲದ ಮನಸ್ಸಿನಿಂದಲೇ ಅರ್ಜಿ ಹಾಗೂ ರಿಪೋರ್ಟ್ ತೆಗೆದುಕೊಂಡು, ಮೂರು ವಾರದ ನಂತರ ‘ಧನ್ಯವಾದ ಪತ್ರವೊಂದನ್ನು’ ಕಳುಹಿಸಿದರು. ಅಷ್ಟೇ. ಪರಿಸರ ರಕ್ಷಣೆಗೆ, ಪಾದಚಾರಿಗಳಿಗೆ ಮೊದಲ ಆದ್ಯತೆ ಕೊಡದ ನಗರಕ್ಕೆ ಅದೆಷ್ಟೇ ಒಳ್ಳೆಯ ಹವಾಮಾನವಿರಲಿ, ಅದೆಷ್ಟೇ ಇತಿಹಾಸವಿರಲಿ….ನನಗದು ಅಷ್ಟಕ್ಕಷ್ಟೇ.

 

ನಮ್ಮ ಸರ್ಕಾರಗಳಿಗೆ ತಮ್ಮ ಯಾವುದೇ ನಿರ್ಧಾರದ ದೀರ್ಘಪರಿಣಾಮದ ಅರಿವು ಇದೆಯೆಂಬ ನಂಬಿಕೆ ನನಗೆ ಸ್ಟೀಲ್ ಪ್ಲೈ ಓವರ್ ಎಂಬುದೊಂದು ಲಡಾಸು ಯೋಜನೆಯೊಂದನ್ನು ಪರಿಕಲ್ಪಿಸಿದ ದಿನವೇ ಹೊರಟುಹೋಗಿದೆ. “When ministers travel, people have to suffer a bit” ಎಂಬ ಬೇಜಾವಾಬ್ದಾರಿ ಹೇಳಿಕೆ ಕೊಟ್ಟು ಗಹಗಹಿಸಿ ನಕ್ಕ ಸಿದ್ದರಾಮಯ್ಯನಂತವರು, ಹಾಗೂ ತಮ್ಮ ಕಾರುಗಳು ಓಡುವುದಕ್ಕಾಗಿ ಇಡೀ ನಗರವನ್ನೇ ಸ್ತಬ್ಧಗೊಳಿಸಿ ಕೆಂಪುದೀಪದ ಗಾಡಿಯಲ್ಲಿ ಸುಯ್ಯೆಂದು ಸಾಗುವ ಮಂತ್ರಿಗಳು, ಯಾವುದೇ ಯೋಜನೆಯನ್ನಾದರೂ ಜನರ ಬೇನೆ ನೀಗಿಸಲೆಂದೇ ಮಾಡುತ್ತಿದ್ದಾರೆಂದರೆ ಯಾರೂ ನಂಬಲು ಸಾಧ್ಯವಿಲ್ಲ. ಈಗ ನೋಡಿ,

(*)ವಿಂಡ್ಸರ್ ಮ್ಯಾನರ್ ಸಿಗ್ನಲ್ಲಿಂದಾ ಏರ್ಪೋರ್ಟಿಗೆ 31 ಕಿಲೋಮೀಟರ್.

(*)ಜಗತ್ತಿನ “ಸಿಟಿಸೆಂಟರ್’ನಿಂದ ಅತ್ಯಂತ ಹೆಚ್ಚು ದೂರವಿರೋ 15 ಏರ್ಪೋರ್ಟುಗಳ ಪಟ್ಟಿ”ಯಲ್ಲಿ, 15 ಸ್ಥಾನ ಗ್ಲಾಸ್ಗೋ ಏರ್ಪೋರ್ಟಿಗೆ. ಅದು ನಗರ ಮಧ್ಯದಿಂದ 32 ಕಿಲೋಮೀಟರ್ ದೂರವಿದೆ. ಪಟ್ಟಿಯಲ್ಲಿನ ಏರ್ಪೋರ್ಟುಗಳ ಸಂಖ್ಯೆಯನ್ನ 20ಕ್ಕೇರಿಸಿದರೆ, 16ನೇಸ್ಥಾನ ಬೆಂಗಳೂರಿಗೇ. (Actually, ಆ ಪಟ್ಟಿಯಲ್ಲಿ ಮೊದಲ ಮೂರು ಹೆಸರುಗಳನ್ನು ಕೈಬಿಡಬೇಕು. ಯಾಕೆಂದರೆ ಅವು ಅತೀ ಮುಖ್ಯ ಅಂತರಾಷ್ಟ್ರೀಯ ಏರ್ಪೋರ್ಟುಗಳೇನೂ ಅಲ್ಲ. ಆದ್ದರಿಂದ, ಬೆಂಗಳೂರು ಆ ಪಟ್ಟಿಯಲ್ಲಿ ಆಗಲೇ ಇದೆ ಎಂದೇ ಅಂದುಕೊಳ್ಳುವುದೊಳ್ಳೆಯದು).

(*)ಮೇಲಿನ ಪಟ್ಟಿಯಲ್ಲಿರುವ ಹದಿನೈದಕ್ಕೆ ಹದಿಮೂರು ಏರ್ಪೋರ್ಟುಗಳು, ನಗರವನ್ನ ಏರ್ಪೋರ್ಟಿನೊಂದಿಗೆ ‘ಹೈಸ್ಪೀಡ್ ರೈಲ್ ಲಿಂಕ್ (HSRL)’ನಿಂದ ಬೆಸೆಯುತ್ತವೆ.

 

ಈ ಮೂರು ವಿಷಯಗಳಿಂದಲೇ ನಮಗೆ ತಿಳಿದು ಬರೋದೇನೆಂದರೆ, ಬೆಂಗಳೂರಿಗೆ ತುರ್ತಾಗಿ ಬೇಕಿರೋದು ಒಂದು ಮಾಸ್ ಟ್ರಾನ್ಸಿಟ್ ಸಿಸ್ಟಮ್. ಹೆಬ್ಬಾಳದಿಂದ ಏರ್ಪೋರ್ಟಿಗೆ ರೈಲ್ ಲಿಂಕ್ ಮಾಡಿದರೆ, ಬೆಂಗಳೂರಿನ ಪೆಟ್ರೋಲ್ ಬೇಡಿಕೆಯಲ್ಲಿಯೇ 2-3% ಇಳಿಯೋದು ಗ್ಯಾರಂಟಿ. ಅಷ್ಟೇ ಇಳಿಕೆ ವಾಯು ಮಾಲಿನ್ಯದಲ್ಲೂ ಸಾಧ್ಯ. ಅದನ್ನು ಬಿಟ್ಟು ಸ್ಟೀಲ್ ಫ್ಲೈ-ಓವರಿನಂತಹಾ ಯೋಜನೆಗೆ ಸರ್ಕಾರ ಕೈಹಾಕುತ್ತದೆ, ಹಾಗೂ ಮಾಧ್ಯಮಗಳು ಇದನ್ನ ಬೆಂಬಲಿಸುತ್ತವೆಯೆಂದರೆ ಏನು ಹೇಳೋಣ ವಿಶ್ವಕಂಡ ಪತ್ರಿಕೆಯ ಸಂಪಾದಕರೂ ಇಂತಹುದೊಂದು ಯೋಜನೆಯನ್ನು ಸಮರ್ಥಿಸಿಕೊಂಡಿದ್ದರು ಎಂಬುದು ವಿಪರ್ಯಾಸ. ಇವತ್ತಿಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ದರ್ಜೆಯಲ್ಲಿ ಪ್ರಯಾಣಿಸುವ ನಸೀಬು ಬೆಂಗಳೂರಿಗರಿಗಿಲ್ಲ.

 

ಒಂದು ಮೆಟ್ರೋ ಯೋಜನೆಯನ್ನೇ ಸಂಪೂರ್ಣವಾಗಿ ಮುಗಿಸಲು ನಮಗೆ ಹದಿನೈದುವರ್ಷವಾದರೂ ಇನ್ನೂ ಸಾಧ್ಯವಾಗಿಲ್ಲ. ಈಗಿರುವ ಮೆಟ್ರೋ ಬೆಂಗಳೂರಿನ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿದೆಯಾದರೂ, ಲಾಸ್ಟ್ ಮೈಲ್ ಕನೆಕ್ಟಿವಿಟಿ ಇಂದಿಗೂ ಗೊಂದಲದ ಗೂಡೇ. ಹೊರವಲಯದ ಮೆಟ್ರೋ ಸ್ಟೇಷನ್ನುಗಳಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಇನ್ನೂ ಗಗನಕುಸುಮ. ಸೈಕ್ಲಿಕ್ಸ್ಟುಗಳು, ಪಾದಚಾರಿಗಳ ಪಾಡು ಬೆಂಗಳೂರಲ್ಲಿ ಹರೋಹರ. ಅಜ್ಜನ ಕಾಲದ ಲಾರಿಗಳಲ್ಲಿ ಏನೇನನ್ನೋ, ಎಷ್ಟೆಷ್ಟೋ ತುಂಬಿಕೊಂಡು ನಗರದ ನಡುವೆಯೂ, ಹೈವೇಗಳಲ್ಲೂ ರೊಯ್ಯೆಂದು ಹೋಗುತ್ತವೆ. ಅಕ್ಕಪಕ್ಕದಲ್ಲಿ ಚಲಿಸುವ ಸವಾರರ ಜೀವ ಶಿವನಿಗೇ ಒತ್ತೆ. ಬೇರೆಯವೆಲ್ಲಾ ಬಿಡಿ ಜಲ್ಲಿಕಲ್ಲು, ಮರಳು, ಕಲ್ಲು ಮುಂತಾದವುಗಳನ್ನು ತುಂಬಿಕೊಂಡ ಲಾರಿಗಳು ಸಂಪೂರ್ಣವಾಗಿ ಮುಚ್ಚಿರಬೇಕು ಎಂಬ ನಿಯಮಗಳನ್ನು ಬರೆಯಬೇಕಾದ ಸರ್ಕಾರ ಇಂದಿಗೂ ಅದರ ಬಗ್ಗೆ ಯೋಚಿಸಿಯೂ ಇಲ್ಲ.

 

ನಿಯಮವಿಲ್ಲದಿರೋದು ಒಂದು ತಲೆಬಿಸಿಯಾದ್ರೆ, ನಿಯಮ ಬರೆಯುವಾಗಲೂ ಕೂಡಾ ಅದನ್ನು ಕಾರ್ಯಗತಗೊಳಿಸುವ ಮುಖ್ಯವಾದ ಮೂರು ಇಲಾಖೆಗಳ ಸಲಹೆಯನ್ನು ಪಡೆಯುತ್ತದೆ ಹಾಗೂ ಆ ಇಲಾಖೆಗಳು ಒಂದಕ್ಕೊಂದು ಮಾತನಾಡುತ್ತವೆ ಎಂಬುದು ಅನುಮಾನದ ವಿಚಾರವೇ. ಇವು ಮೂರೂ ಪರಸ್ಪರ ದಾಯಾದಿಗಳಂತೆಯೇ ಕೆಲಸ ಮಾಡೋದು ಅನ್ನೋ ವಿಚಾರ ಹೈಸ್ಕೂಲು ಓದುವ ಮಕ್ಕಳಿಗೂ ತಿಳಿದಿರುತ್ತೆ. ಸರ್ಕಾರ ರೂಪಿಸಿದ ರಸ್ತೆ ಸುರಕ್ಷಿತಾ ನಿಯಮಗಳನ್ನು ಕಾರ್ಯಗತ ಮಾಡುವುದು ಲೋಕೋಪಯೋಗಿ ಇಲಾಖೆಯ ಕೆಲಸ. ಅಂದರೆ ಎಲ್ಲೆಲ್ಲಿ ಎಷ್ಟು ವೇಗಮಿತಿಯಿರಬೇಕು, ಹಂಪ್’ಗಳು ಹೇಗೆ ಮತ್ತು ಎಲ್ಲೆಲ್ಲಿ ಇರಬೇಕು ಮುಂತಾದವನ್ನು ನೋಡಿಕೊಳ್ಳುವುದು. ಆದರೆ ಈ ರಸ್ತೆಗಳ ಮೇಲೆ ಚಲಿಸುವ ವಾಹನಗಳಿಗೆ ಪರವಾನಿಗೆ ನೀಡೋದು ಆರ್.ಟಿ.ಒ. ಹೀಗೆ ಪರವಾನಿಗೆ ಪಡೆದ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವುದು, ದಂಡ ಹಾಕೋದು ಟ್ರಾಫಿಕ್ ಪೋಲೀಸ್. ಸಿಗ್ನಲ್ ದಾಟಿ ಐವತ್ತು ಮೀಟರಿಗೇ ಬಸ್ ನಿಲ್ದಾಣಗಳು, ಅದೂ ರಸ್ತೆಯಿಂದ ಒಳಗೆ ಬರದೇ, ರಸ್ತೆಯ ಕೊನೆಯ ಸಾಲಿನಲ್ಲೇ. ಅಲ್ಲಿನಿಂತ ಬಸ್ಸಿನ ಹಿಂದೆ ಮಿಟರುಗಟ್ಟಲೇ ಟ್ರಾಫಿಕ್, ಡೆಸಿಬಲ್ಲುಗಟ್ಲೇ ಹಾರ್ನು. ಲೋಕೋಪಯೋಗಿ ಇಲಾಖೆ ತಪ್ಪಾದ ರೀತಿಯಲ್ಲಿ ಹಂಪ್ ಒಂದನ್ನು ನಿರ್ಮಿಸಿ, ಅದನ್ನು ನೋಡದೇ ಅಥವಾ ಗಾಡಿ ಓಡಿಸಲೇ ಬರದ ಚಾಲಕನಿಂದ ಓಡಿಸಲ್ಪಟ್ಟ ಆರ್.ಟಿ.ಎ ಅನುಮೋದಿತ ಕಾರೊಂದು ಗಾಳಿಯಲ್ಲಿ ಹಾರಿದರೆ, ಆರ್.ಟಿ.ಎ ಅನುಮೋದಿತ ಡ್ರೈವರನಿಗೆ ದಂಡ ವಿಧಿಸುವುದು ಪೋಲೀಸ್. ಅಲ್ಲಾ ಸಾರ್ ಹಂಪೇ ಸರಿಯಿಲ್ಲ, ಇದು ಈ ತೊಂದರೆಯ ಮೂಲ, ನಾನಲ್ಲ ಅಂದರೂ ದಂಡ ಬೀಳುವುದು ನಾಗರೀಕನಿಗೆ. ಅವನದೇ ಹಣದಿಂದ ತಪ್ಪುತಪ್ಪಾಗಿ ಕಟ್ಟಲಾದ ರಸ್ತೆಗೂ, ಅವನೇ ದಂಡತೆರಬೇಕು. ಹೀಗೆ ಒಬ್ಬರಿಗೊಬ್ಬರು ಸಯಾಮಿ ಅವಳಿಗಳಂತೆ ಕೆಲಸ ಮಾಡಬೇಕಾದ ಈ ಇಲಾಖೆಗಳು ಯಾವತ್ತೂ ಒಗ್ಗೂಡದೇ, ಇದು ನಮ್ಮ ಡಿಪಾರ್ಟ್ಮೆಂಟ್ ಅಲ್ಲಾ ಕಣ್ರೀ, ಅಲ್ಲಿ ಹೋಗಿ ಮಾತಾಡಿ ಅಂತಾ ದಿಗಂತದೆಡೆಗೆ ಕೈ ಮಾಡುತ್ತಾರೆ. ಇನ್ನು ಆರ್.ಟಿ.ಒ ಮತ್ತು ಪೋಲೀಸರ ಲಂಚ ಮತ್ತು ಸುಲಿಗೆಯ ಬಗ್ಗೆ ಮಾತಾಡೋದೇ ಬೇಡ ಬಿಡಿ.

 

ಇಡೀ ಬೆಂಗಳೂರಿಗೆ ವೈಟ್ ಟಾಪಿಂಗ್ ಮಾಡಿ ಟ್ರಾಫಿಕ್ಕನ್ನು ಹುಡಿಯೆಬ್ಬಿಸಿದ ಸರ್ಕಾರಕ್ಕಾಗಲೀ, ಆ ರಸ್ತೆಗಳ ವಾಹನ ದಟ್ಟಣೆ ನಿರ್ವಹಿಸುವ ಪೋಲೀಸರಿಗಾಗಲೀ ಈಗಲೇ ಆ ರಸ್ತೆಗಳಲ್ಲಿ ಸೆನ್ಸರುಗಳನ್ನು ಕೂರಿಸಿ, ದಟ್ಟಣೆಗನುಗುಣವಾಗಿ ವೇಗಮಿತಿಯನ್ನು, ಮುಂದಿರುವ ಸಿಗ್ನಲ್ಲಿನ ಸಮಯವನ್ನು ಡೈನಾಮಿಕ್ ಆಗಿಸಬೇಕು ಅನಿಸಲೇ ಇಲ್ಲ. ಅದು ಈಗಲೇ ಅನಿಸಿಬಿಟ್ಟರೆ ಅಥವಾ ಈಗಲೇ ವೈಟ್ ಟಾಪಿಂಗಿನ ಜೊತೆಗೇ ಅನುಮೋದಿಸಲ್ಪಟ್ಟರೆ, ಇನ್ನೊಂದು ಪ್ರಾಜೆಕ್ಟ್ ಮಾಡಬಹುದಾದ ಅವಕಾಶ ತಪ್ಪುತ್ತದಲ್ಲಾ! ಲೈಸೆನ್ಸ್ ಕೊಡಬೇಕಾದ ಆರ್.ಟಿ.ಒ ಸರಿಯಾದ ಪರೀಕ್ಷೆ ಮಾಡಲ್ಲ. ರಸ್ತೆಯನ್ನು ಕಟ್ಟುವ ಪಿಡಬ್ಲೂಡಿ ಸರಿಯಾದ ಅಥವಾ ಸ್ಮಾರ್ಟ್ ರಸ್ತೆಗಳನ್ನ ನಿರ್ಮಿಸಲ್ಲ. ಆದರೆ ಎಲ್ಲದಕ್ಕೂ ಚಾಲಕರನ್ನು ಹೊಣೆಮಾಡಿ ಪೋಲೀಸ್ ಇಲಾಖೆ ನಾಗರೀಕರನ್ನು ಸುಲಿಯುತ್ತೆ. ಒಟ್ಟಿನಲ್ಲಿ ಪ್ರಜೆಗಳ ಪರಿಸ್ಥಿತಿ ಭಾರತದಂತೆಯೇ Chaotic Order, “ಅವ್ಯವಸ್ಥೆಯ ನಡುವೆಯೂ ಹೇಗೋ ನಡೆಯುತ್ತಿರುವ ವ್ಯವಸ್ಥೆ”

0 comments on ““ಕೆಟ್ಟ ಚಾಲಕರು ಹಾಗೂ ವಾಹನದಟ್ಟಣೆಯನ್ನು ಹುಟ್ಟುಹಾಕುವ ವ್ಯವಸ್ಥೆಯೆಂಬ ಅವ್ಯವಸ್ಥೆ”

Leave a Reply

Your email address will not be published. Required fields are marked *