Tuesday, 16 April, 2024

“ರೈತ, ಸರ್ಕಾರ ಮತ್ತು ಬಡತನದ ಜುಗಾರಿ ಕ್ರಾಸ್”

Share post

ರೈತರ ಪ್ರತಿಭಟನೆಗಳು ನಾಲ್ಕುತಿಂಗಳು ಮುಗಿಸಿ ಐದನೇ ತಿಂಗಳಿನೆಡೆಗೆ ಧಾವಿಸುತ್ತಿವೆ. ಮಾಧ್ಯಮದವರು ಯಥಾಪ್ರಕಾರ ಜಗತ್ತಿನ ಸರ್ವವಿದ್ಯಮಾನಗಳಿಗೆ ಬಳಸುವ ಬೆಲ್-ಕರ್ವ್ ಸುದ್ದಿಸಂಗ್ರಹಣಾ ವಿಧಾನ ಬಳಸಿ ಮೊದಮೊದಲಿಗೆ ಈ ಸುದ್ಧಿಯನ್ನು ತೀರಾ ನಿರ್ಲಕ್ಷಿಸಿ, ನಂತರದ ದಿನಗಳಲ್ಲಿ ನಿಧಾನಕ್ಕೆ ಹೆಚ್ಚೆಚ್ಚು ಕವರೇಜ್ ಕೊಟ್ಟು, ಒಂದು ಕಾಲದಲ್ಲಂತೂ ಭಾರತದಲ್ಲಿ ಸಧ್ಯಕ್ಕೆ ರೈತಪ್ರತಿಭಟನೆಯನ್ನು ಬಿಟ್ಟು ಬೇರೇನೂ ನಡೆಯುತ್ತಲೇ ಇಲ್ಲ ಎಂಬ ತಾರಕಕ್ಕೆ ತಲುಪಿ, ತಮ್ಮ ಬೇಳೆಗಳು ಯಾವುದೂ ಬೇಯವುದಿಲ್ಲವೆಂದು ತಿಳಿದಮೇಲೆ ನಿಧಾನಕ್ಕೆ ಮತ್ತೆ ನಿರ್ಲಕ್ಷಿಸಿ, ಈಗ ಪೆಟ್ರೋಲ್ ಬೆಲೆಯನ್ನೋ, ಮೋದಿಯ ಗಡ್ಡವನ್ನೋ, ರಾಹುಲನ ಸಿಕ್ಸ್-ಪ್ಯಾಕನ್ನೋ ಚರ್ಚಿಸುವುದರಲ್ಲಿ ನಿರತವಾಗಿವೆ. ದಿನವೂ ಪತ್ರಿಕೆ ಓದುವ, ಸುದ್ದಿಮಾಧ್ಯಮಗಳನ್ನು ನೋಡುವ ಎಷ್ಟು ಜನರಿಗೆ ಈ ಮಾಧ್ಯಮಗಳಿಂದ ನಿಜಕ್ಕೂ ಗುಣಮಟ್ಟದ ಮಾಹಿತಿ ಸಿಕ್ಕಿತು? ಸಮಸ್ಯೆಯ ಅರಿವಾಯ್ತು ಅಥವಾ ಪರಿಹಾರಗಳ ದರ್ಶನವಾಯ್ತು? ಕೆಲವು ಪತ್ರಿಕೆಗಳನ್ನು ಬಿಟ್ಟರೆ ಬೇರಾವ ಮಾಧ್ಯಮಗಳೂ ಕೃಷಿ ಕಾಯ್ದೆಯನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಲು ಹೋಗಲಿಲ್ಲ. ಜನರೊಂದಿಗೆ ಹಂಚಿಕೊಳ್ಳಬಹುದಾದ ಅತ್ಯುತ್ತಮ ಗುಣಮಟ್ಟದ ಸಂವಾದಗಳು ಕಾಣಲಿಲ್ಲ. ಒಂದು ದಿನ ಪ್ರತಿಭಟನಾ ನಿರತರನ್ನು ಇಂದ್ರ ಚಂದ್ರ ಎಂದಾಯ್ತು, ಇನ್ನೊಂದು ದಿನ ಅವರನ್ನೇ ದೇಶದ್ರೋಹಿ ಭಯೋತ್ಪಾದರೆನ್ನಲಾಯ್ತು. ಈ ಸಮಸ್ಯೆಗಳನ್ನು ಜನರಿಗೆ ಅರ್ಥಮಾಡಿಸುವುದು, ಅದಕ್ಕೆ ಸಾಧ್ಯವಿರುವ ಉತ್ತರಗಳನ್ನು ಹುಡುಕುವುದು ನಮ್ಮ ಕೆಲಸವೇ ಅಲ್ಲ ಎಂಬಂತೆ ಹೆಚ್ಚೂಕಡಿಮೆ ಎಲ್ಲಾ ಮಾಧ್ಯಮಗಳು ವರ್ತಿಸಿದವು ಹಾಗೂ ವರ್ತಿಸುತ್ತಿವೆ.

 

ರೈತರ ಬೇಡಿಕೆಗಳಲ್ಲಿ, ಅವನ್ನು ಈಡೇರಿಸುವಲ್ಲಿ, ಅದಕ್ಕಾಗಿ ನೀತಿಗಳನ್ನು ರೂಪಿಸುವಲ್ಲಿ ಸರ್ಕಾರದ ಪಾತ್ರ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಸರಿಯಾದ ಬೆಲೆ ನಿಗದಿಯಿಲ್ಲದಿರುವುದು, ವೈಜ್ಞಾನಿಕವಾಗಿರುವ ಕೃಷಿಸಲಹೆಗಳನ್ನು ನೀಡದಿರುವುದು, ಆಯಕಟ್ಟಿನ ಜಾಗಗಳಲ್ಲಿ ಶೈತ್ಯಾಗಾರ/ಕಣಜಗಳನ್ನು ನಿರ್ಮಿಸದೆ ಸರಿಯಾದ ಸಪ್ಲೈ-ಚೈನ್ ಅನ್ನು ಕಟ್ಟದಿರುವುದು, ಕಡಿಮೆ ದರದ ಸಾಲಗಳನ್ನು ಸಹಕಾರೀ ಮತ್ತು ಸರಕಾರಿ ಬ್ಯಾಂಕುಗಳಿಂದ ಸುಲಭವಾಗಿ ದೊರೆಯದಂತೆ ಮಾಡದಿರುವುದು ಒಂದೇ ಎರಡೇ….ಎಲ್ಲಾ ಸರ್ಕಾರಗಳೂ ಈ  ಎಡವಟ್ಟುಗಳಲ್ಲಿ ಏಕರೂಪದ ಸಹಾಯಹಸ್ತ ನೀಡಿವೆ. ಇದೇ ಸಮಯದಲ್ಲಿ ನಾವು ರೈತರು ಮಾಡುತ್ತಿರುವುದನ್ನೂ ವಿಮರ್ಶಿಸಬೇಕು. ಅದರಲ್ಲಿ ಸರಿತಪ್ಪೆಷ್ಟಿದೆ ಅನ್ನುವುದನ್ನೂ ಗಮನಿಸಬೇಕು. ನಮ್ಮಲ್ಲಿ ಬಹಳಷ್ಟು ಜನ ರೈತರ ಸಮಸ್ಯೆಗಳನ್ನು ಭಾವುಕ ನೆಲೆಗಟ್ಟಿನಲ್ಲಿ ನೋಡಿ, ಸರ್ಕಾರಕ್ಕೊಂದಿಷ್ಟು ಬೈದು, ಅಗತ್ಯವೇ ಇಲ್ಲದಿದ್ದರೂ ಸಹ ಕಾರ್ಪೋರೇಟ್ ಕಂಪನಿಗಳನ್ನು ಚರ್ಚೆಯಲ್ಲಿ ಎಳೆತಂದು (ಹೂಂ….ರೈತರ ಚರ್ಚೆಯಲ್ಲಿ ಅಂಬಾನಿ ಅದಾನಿಯಂತೂ ಇದ್ದವರೇ, ಆದರೀಗ ವಿಪ್ರೋ, ಇನ್ಫೋಸಿಸ್, ಆಪಲ್ ಕಂಪನಿಗಳನ್ನು ಎಳೆತಂದವರೂ ಇದ್ದಾರೆ) ಸುಖಾಸುಮ್ಮನೆ ಯಾವ ಪರಿಹಾರವನ್ನೂ ಸಲಹಿಸದೆ, ಒಟ್ಟು ಸಮಸ್ಯೆಯನ್ನೇ ಹಳ್ಳ ಹತ್ತಿಸಿಬಿಡುತ್ತಾರೆ. ಇಲ್ಲಿ ರೈತರ ಪರವಾಗಿ ಕಂಬನಿ ಸುರಿಸುವ ದಗಲ್ಬಾಜಿಗಳು, ಒಂದು ಪರಿಹಾರ ಹೇಳ್ರಯ್ಯ ಅಂತದ್ರೆ ಭಾಷಣ ಬಿಗೀತಾರೆ. ಸರ್ಕಾರ, ಕಾರ್ಪೊರೇಟ್, ಬೂರ್ಷ್ವಾ ಅಂತಾ ಕೂಗಾಡ್ತಾರೆ. ಪಕ್ಕೆಲುಬು, ಠಕ್ಕ, ಬೆವರು, ಭೂಸ್ವಾಧೀನ ಅಂತಾ ಅರ್ಥವಾಗದ ಕವಿತೆ ಬರೀತಾರೆಯೇ ಹೊರತು ಒಂದು ಪರ್ಯಾಯ ವ್ಯವಸ್ಥೆಯನ್ನು ಸಜೆಸ್ಟ್ ಮಾಡಲಾಗಲೀ, ಅದನ್ನು ಕಾರ್ಯರೂಪಕ್ಕಿಳಿಸಲಾಗಲೀ ಯಾರಲ್ಲೂ ಸಮಯವಿಲ್ಲ. ಇದು ವರ್ಷಗಳಿಂದ ನಡೆದುಬಂದಿದೆ ಮಾತ್ರವಲ್ಲದೇ ಈ ಬಾರಿಯ ಕೃಷಿಕಾಯ್ದೆಯ ವಿಚಾರದಲ್ಲೂ ಮುಂದುವರೆದಿದೆ. ಸಮಸ್ಯೆ ಬಗೆಹರಿಯುವುದಿರಲಿ, ಸಮಸ್ಯೆಯೇ ಯಾವುದೆಂದು ತಿಳಿಯದೇ ಹೋಗುವ ಅಪಾಯವೂ ಇದೆ. ಹಾಗಾಗಿ ಇಲ್ಲಿ ಯಾವುದೇ ಒಬ್ಬರ ತಪ್ಪನ್ನು ಎತ್ತಿಹಿಡಿಯುವುದನ್ನು ಬಿಡುವ ಅಗತ್ಯವಿದೆ. ಆದರೆ ಇದರೊಟ್ಟಿಗೇ ಕೃಷಿಯೆಂಬ ಪರಿಕಲ್ಪನೆಯನ್ನೇ ನಾವು ನೋಡುವ ರೀತಿಯನ್ನೂ ಅಮೂಲಾಗ್ರ ಬದಲಾವಣೆಯ ಅಗತ್ಯವಿದೆ. ಆಗ ಮಾತ್ರ ಕೃಷಿಯ ಸುಧಾರಣೆ ಸಾಧ್ಯ ಎಂದು ನನ್ನ ಅಭಿಪ್ರಾಯ.

 

ಮೊಟ್ಟಮೊದಲನೆಯದಾಗಿ, ನಮ್ಮ ದೇಶ ಕೃಷಿದೇಶವಾಗಿ ಉಳಿದಿಲ್ಲ ಎಂಬ ಸತ್ಯವನ್ನು ಮನಗಾಣಬೇಕು. ಅಭಿವೃದ್ಧಿಯ ಮೂರನೇ ಒಂದು ಭಾಗ ಕೃಷಿಯಿಂದ, ಮೂರನೇ ಒಂದು ಭಾಗ ಕೈಗಾರಿಕೆಗಳಿಂದ, ಇನ್ನುಳಿದ ಮೂರನೇ ಒಂದು ಭಾಗ ಸೇವೆಗಳಿಂದ ಬರುತ್ತಿದೆ ಎಂಬುದು ಸರ್ವವಿಧಿತ ವಿಚಾರ. ಹಾಗಿದ್ದಮೇಲೆ ಕೃಷಿಯ ಬೆಳವಣಿಗೆಗೇ ಒಂದು ದೃಷ್ಟಿಕೋನ, ಉಳಿದೆರಡರ ಬೆಳವಣಿಗೆಗೆ ಯಾಕೆ ಬೇರೆಯೇ ದೃಷ್ಟಿಕೋನ? ಕೈಗಾರಿಕಾ ಉದ್ಯಮಕ್ಕಾಗಿ ಜನರನ್ನು ತಯಾರು ಮಾಡಲು ಐ.ಟಿ.ಐಯಿಂದ ಹಿಡಿದು ಐ.ಐ.ಟಿವರೆಗೆ ಸಂಸ್ಥೆಗಳಿವೆ. ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರ ಅದಕ್ಕಾಗಿ ಮೀಸಲಿಡುತ್ತಿದೆ. ಸೇವಾಉದ್ದಿಮೆಗಳಿಗಾಗಿ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಗಳೂ, ಕಾಲ್ ಸೆಂಟರ್ ಕೋಚಿಂಗ್ ಸೆಂಟರ್ರುಗಳೂ, ಸಾಫ್ಟ್ವೇರ್ ಪಾರ್ಕುಗಳೂ ಹುಟ್ಟಿಕೊಳ್ಳುತ್ತವೆ. ಕೃಷಿಗಾಗಿ ಏನಿದೆ ಈ ದೇಶದಲ್ಲಿ? ಹತ್ತರಿಂದ ಹದಿನೈದು ಕೃಷಿಕಾಲೇಜುಗಳು ಒಂದೆರಡು ಕೃಷಿ ವಿವಿಗಳನ್ನು ಬಿಟ್ಟರೆ? ನೋಡಲಸಾಧ್ಯವಾದ ಚಿತ್ರಗಳನ್ನೆಲ್ಲಾ ಕಕ್ಕುವ ಬಾಲಿವುಡ್ಡು/ಸ್ಯಾಂಡಲ್ವುಡ್ಡುಗಳೆಲ್ಲಾ ಇಂಡಸ್ಟ್ರಿಗಳೆಂದು ಪರಿಗಣಿಸ್ಪಟ್ಟಿರುವಾಗ, ಕೋಟ್ಯಂತರ ಜನರ ಹೊಟ್ಟೆತುಂಬಿಸುವ ಕೃಷಿಯೇಕೆ ಯಾರಿಗೂ ಇನ್ನೂ ಉದ್ಯಮದಂತೆ ಕಾಣುತ್ತಿಲ್ಲ?

 

ಕಬ್ಬು ಎಂಬ ವಾಣಿಜ್ಯ ಬೆಳೆಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅದರ ಮೇಲೆ ಒಂದಿಡೀ ದೈತ್ಯ ಉದ್ಯಮವೇ ನಿಂತಿದೆ. ರೈತರಲ್ಲದೇ, ಇನ್ನೂ ಹಲವು ಸಾವಿರ ಕೆಲಸಗಳು ಈ ಬೆಳೆಯ ಮೇಲೆ ನಿಂತಿವೆ. ಅಂದಮೇಲೆ ಈ ವಾಣಿಜ್ಯಬೆಳೆಯನ್ನು ಸರ್ಕಾರ ಕೂಡಾ ಒಂದು ಬ್ಯುಸಿನೆಸ್ಸಿನಂತೆ ನಿರ್ವಹಿಸಬೇಕು ತಾನೇ? ಅಲ್ಲದೇ ಅದನ್ನು ಬೆಳೆಯುವ ರೈತಕೂಡಾ ಒಂದು ಕಂಪನಿಯ ಮ್ಯಾನೇಜರಿನಂತೆ ವ್ಯವಹರಿಸಬೇಕು ತಾನೇ? ಸುತ್ತಮುತ್ತ ಎಷ್ಟು ಜನ ಕಬ್ಬು ಬೆಳೆಯುತಿದ್ದಾರೆ? ಕಬ್ಬು ಅರೆಯುವ ಕಾರ್ಖಾನೆಗಳೆಷ್ಟಿವೆ? ಸಾಗಾಣಿಕೆ ವೆಚ್ಚ ಎಷ್ಟು? ಕಬ್ಬಿನಕೋಲನ್ನೇ ಸಪ್ಲೈ ಮಾಡಬೇಕೇ ಅಥವಾ ಬೇರೆ ರೂಪದಲ್ಲೂ ಒದಗಿಸಬಹುದೇ? ಕಾರ್ಖಾನೆಯೇ ನಾನಿದ್ದಲ್ಲಿಗೆ ಬರುತ್ತೋ ಅಥವಾ ನಾನೇ ಕಾರ್ಖಾನೆಯ ಹತ್ತಿರ ಹೋಗಬೇಕೋ? ಮೊಲಾಸಸ್ buy-back ಆಯ್ಕೆ ಇದೆಯೇ? ಇಷ್ಟೂ ಯೋಚನೆ ಯಾರೂ ಮಾಡಲ್ಲ. ಈ ಬೆಳೆಗೆ ಸಾಲದ ಅಗತ್ಯವಿದೆಯೇ ಹೊರತು, ಖಂಡಿತಾ ಸಬ್ಸಿಡಿಯ ಅಗತ್ಯವಿಲ್ಲವೆಂದೇ ನನ್ನ ಅಭಿಪ್ರಾಯ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಾಣಿಜ್ಯ ಬೆಳೆಗಳನ್ನು ಆದಾಯತೆರಿಗೆಯ ವ್ಯಾಪ್ತಿಯೊಳಗೂ ತರಬೇಕು ಎಂದು ಪ್ರತಿಪಾದಿಸುತ್ತೇನೆ. ಶೇ.30ರಂತಹ ಅಮಾನವೀಯ ತೆರಿಗೆಯಲ್ಲ. ಆದರೆ ಒಂದು ಸಾಂಕೇತಿಕ ತೆರಿಗೆಯ ಅಗತ್ಯವಿದೆ. ಆಗಲೇ ರೈತನೂ ಕೂಡ ಈ ಇಡೀ ಕೃಷಿಯನ್ನು ವ್ಯಾಪಾರೀ ಮನೋಭಾವದಿಂದ ನೋಡಲು ಸಾಧ್ಯ. ಆ ವರ್ಷದ ಮಳೆ ಮತ್ತು ಇಳುವರಿಗನುಗುಣವಾಗಿ ತೆರಿಗೆಯನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಕೆಲಸ ಸರ್ಕಾರದ್ದು. ಆದರೆ ಬರೀ ಕೃಷಿಕ ಮನೋಭಾವದಿಂದ ವಾಣಿಜ್ಯ ಬೆಳೆ ಬೆಳೆದರೆ, ಅದರಿಂದ ಲಾಭ ಕೃಷಿಯ ಹೆಸರಲ್ಲಿ ಬ್ಯುಸಿನೆಸ್ ಮಾಡುವ ಮಧ್ಯವರ್ತಿಗಳಿಗೇ ಹೊರತು, ರೈತನಿಗಲ್ಲ. ವಾಣಿಜ್ಯ ಬೆಳೆ ಬೆಳೆಯಲು ವಾಣಿಜ್ಯ ಮನೋಭಾವವೂ ಅತ್ಯಗತ್ಯ.

 

ಇನ್ನು ವಾಣಿಜ್ಯ ಬೆಳೆಗಳಲ್ಲದ ಬೆಳೆಗಳಿಗೆ, ವೈಜ್ಞಾನಿಕವಾದ ಆಲೋಚನೆ ಮತ್ತು ದೃಷ್ಟಿಕೋನದ ಅಗತ್ಯವಿದೆ. ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ, ಮತ್ತು ಬೆಳೆಯುವುದು ಎಷ್ಟು ಸುಲಭ ಅಥವಾ ಕಷ್ಟ ಅನ್ನುದನ್ನು ನೋಡದೇ ನಮ್ಮ ರೈತರು, ‘ಅವರು ಬೆಳೆದಿದ್ದಾರಂತೆ, ಒಳ್ಳೆ ರೇಟಂತೆ’ ಅಂದ್ಕೊಂಡು ಬೆಳೆಯುವವರೇ ಹೆಚ್ಚು. ವೆನಿಲ್ಲಾ ಬೆಳೆಗೆ ಆದ ಕಥೆ ಎಲ್ಲರಿಗೂ ತಿಳಿದೆ ಇದೇ. ಇನ್ನುಳಿದವರು, ‘ನಾವು ಮೊದಲಿಂದಲೂ ಭತ್ತವನ್ನೇ ಬೆಳೆದಿದ್ದು. ಅದೂ ವರ್ಷಕ್ಕೆ ಎರಡು ಬೆಳೆ ಅಷ್ಟೆ’ ಎನ್ನುತ್ತಾ ಕೃಷಿಗೋಸ್ಕರವಷ್ಟೇ ಕೃಷಿಕರಾದವರು. ವರ್ಷದಲ್ಲಿ ಐದುತಿಂಗಳು ಗದ್ದೆ ಹಾಳುಭೂಮಿಯಾಗಿ ಬಿದ್ದಿರುತ್ತೆ. ಕ್ರಾಪ್-ರೊಟೇಷನ್ ಮಾಡಿ ಭೂಮಿಯ ಫಲವತ್ತತೆಯನ್ನೂ ಬೆಳೆಸಿಕೊಳ್ಳುವುದಿಲ್ಲ. ಮೆಕಾನೈಸ್ಡ್ ಫಾರ್ಮಿಂಗಿನ ಅರ್ಧವನ್ನೂ ಪಾಲಿಸುವುದಿಲ್ಲ. ಫಸಲು ಕೈಗೆ ಬಂದಾಗ ಕುಯ್ಲಿಗೆ ಕೆಲಸವರಿಲ್ಲಾ ಅಂತಾ ತಲೆಮೇಲೆ ಕೈಹೊತ್ತು ಕೂತಾಯ್ತು. ಇಲ್ಲಾ ಕೃಷಿಭೂಮಿಯನ್ನ ಲೇಔಟ್ ಮಾಡುವ ತೋಳಗಳಿಗೆ ಮಾರಿಯಾಯ್ತು. ಅಥವಾ ಫೇಸ್ಬುಕ್ಕಿನಲ್ಲಿ ಅಲ್ಲೆಲ್ಲೋ ನೆದರ್ಲ್ಯಾಂಡಿನಲ್ಲಿ ನೂರಾಮೂವತ್ತು ಎಕರೆ ಹೊಲದಲ್ಲಿ ಗಂಡ-ಹೆಂಡತಿ ಇಬ್ಬರೇ ಉತ್ತಿ, ಬಿತ್ತಿ, ಗೊಬ್ಬರ ಹಾಕಿ, ಬೆಳೆಸಿ, ಕಟಾವು ಮಾಡಿ, ವಿಂಗಡಿಸಿ, ಸೂಪರ್-ಮಾರ್ಕೆಟ್ಟಿಗೆ ಕಳಿಸಿದ ವಿಡಿಯೋ ನೋಡಿ ‘ಅಬ್ಬಾ! ನೋಡು ಮಾರಾಯ’ ಅಂತಾ ಮೂಗಿನ ಮೇಲೆ ಬೆರಳಿಟ್ಟಾಯ್ತು. ಯಾರೂ ಸಹ ಆ ದೇಶಕ್ಕೆ ಸರ್ಕಾರದ ಮತ್ತು ರೈತಸಂಘದ ಒಂದು ತಂಡವನ್ನು ಕಳಿಸಿ ಅಧ್ಯಯನ ಮಾಡಿಸಿ ಅಂತಾ ಒತ್ತಾಯಿಸುವುದಿಲ್ಲ.

 

ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳ ಅಗತ್ಯವಿದೆ. ರೈತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂದಿಗೂ ವರದಕ್ಷಿಣೆ ನಿಂತಿಲ್ಲ. ಶಿಕ್ಷಣದ ಗುಣಮಟ್ಟ ಮೇಲೇರಿಲ್ಲ. ಕುಡಿತದ ಸಮಸ್ಯೆಗಳು ಕಡಿಮೆಯೇನಿಲ್ಲ. ಕುಡಿತ, ಹೆಣ್ಣಿನ ಹಿಂದೆ ಬಿದ್ದ ಕಾರಣವೋ ಅಥವ ಇನ್ನಾವುದೋ ಚಟ ಹತ್ತಿಸಿಕೊಂಡ ಕಾರಣಕ್ಕಾಗಿಯೂ ಸಹ ರೈತರು ಸಾಲ ಮಾಡುತ್ತಿದ್ದಾರೆ. ಮೊನ್ನೆ ಕಾಫಿ ಕುಡಿಯುವಾಗ ಪಕ್ಕದಟೇಬಲ್ಲಲ್ಲಿ “ಭತ್ತದ ಬೆಳೆ ಬಂತು ಅಂದ್ರೆ, ಮದ್ದೂರು ಮಂಡ್ಯದಲ್ಲಿ ಬೆಂಗಳೂರಿನಿಂದ ಹೈಟೆಕ್ ವೇಶ್ಯೆಯರು ಬಂದು ಬೀಡು ಬಿಡ್ತಾರೆ” ಅಂತಾ ಹೇಳಿದ್ದು ಕೇಳಿಬಂತು. ಹೀಗೆ ಕೃಷಿಯ ಸಮಸ್ಯೆಗಳು ಹೊಲದಲ್ಲಿ ಪ್ರಾರಂಭವಾಗಿ ಹೊಲದಲ್ಲಿ ನಿಲ್ಲುತ್ತಿಲ್ಲ. ಅಲ್ಲಿಂದ ಮುಂದುವರೆದು ಎಲ್ಲೆಲ್ಲಿಗೋ ತಲುಪುತ್ತಿದೆ.

 

ಕೃಷಿಕರೂ ಸಹ, ಸಾಂಪ್ರದಾಯಿಕ ಕೃಷಿಗೇ ಒತ್ತುನೀಡುತ್ತಿದ್ದಾರೆಯೇ ಹೊರತು, ಸಹಉದ್ಯಮಗಳತ್ತ ತಲೆಹಾಕುವುದಿಲ್ಲ. ಒಂದುವರ್ಷ ಮಳೆಬರದಿದ್ದರೆ, ಅದನ್ನೇ ಅವಲಂಭಿಸಿದ ಕೃಷಿಕ, ಸಾಲ-ಸೋಲ ಮಾಡಿದ್ದರೆ, ಅದನ್ನು ತೀರಿಸಲಾಗದೇ, ಅವಮಾನ ತಾಳಲಾರದೇ ಆತ್ಮಹತ್ಯೆಗೇ ಕೊರಳೊಡ್ಡುತ್ತಾನೆ. ಬಡವ ಬಡವನಾಗಿಯೇ ಉಳಿದಂತೆ, ರೈತ ರೈತನಾಗಿಯೇ ಉಳಿಯುತ್ತಾನೆ. ರೈತನನ್ನು ಸ್ವಾವಲಂಭಿಯನಾಗಿ ಮಾಡಲು ಸರ್ಕಾರ ಯಾವ ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಕಾರ್ಪೋರೇಟ್ ಕಂಪನಿಗಳನ್ನು ನೋಡಿ! ಮೂರು ವರ್ಷ ಎಕ್ಸಿಕ್ಯೂಟೀವ್ ಆಗಿದ್ದು, ಇನ್ನೈದು ವರ್ಷ ಮ್ಯಾನೇಜರ್ ಆಗಿದ್ದವ, ಮರುವರ್ಷ ‘ಅದೇ ಕೆಲಸವನ್ನು ಉತ್ತಮವಾಗಿ ಮಾಡುವುದು ಹೇಗೆ?’ ಎಂಬುದನ್ನು ನಿಮಗೇ ತಿಳಿಹೇಳುವ ‘ಕನ್ಸಲ್ಟೆಂಟ್’ ಆಗಿ, ತನ್ನದೊಂದು ಕನ್ಸಲ್ಟೆನ್ಸಿ ತೆರೆಯುತ್ತಾನೆ. ಮೊದಲಿಗಿಂತಾ ಮೂರು ಪಟ್ಟು ಹೆಚ್ಚು ನಿಮ್ಮಿಂದ ಹಣ ಪೀಕಿಸಿ, ನೀವು ಮಾಡುವುದನ್ನೇ ಇನ್ನೂ ಉತ್ತಮವಾಗಿಸುವುದು ಹೇಗೆಂದು ಹೇಳಿಕೊಡುತ್ತಾನೆ. ಹಲವಷ್ಟು ಬಾರಿ ನಿಮಗೇ ಆ ವಿಷಯ ತಿಳಿದಿರುತ್ತದೆ. ಅದೇ ನೀರು ಕನ್ಸಲ್ಟೆಂಟ್ ಎಂಬ ಶಂಖದಿಂದ ಹರಿದುಬರುತ್ತದೆ, ಅಷ್ಟೇ. ಅದೇ ಈ ಕಡೆ ನೋಡಿ, ಮೂವತ್ತು ವರ್ಷ ಬತ್ತ ಬೆಳೆದ ರೈತ, ಯಾವತ್ತೂ ಕ್ರಾಪ್ ಕನ್ಸಲ್ಟೆಂಟ್ ಆಗುವುದಿಲ್ಲ ಅಥವಾ ಖುಷ್ಕಿ ಎಕ್ಸ್ಪರ್ಟ್ ಆಗಿ ಬದಲಾಗುವುದಿಲ್ಲ. ಸರ್ಕಾರಕ್ಕೂ ಅದೂ ಬೇಕಾಗಿಲ್ಲ. ಸ್ಕಿಲ್ ಡೆವಲಪ್ಮೆಂಟ್ ಕೇವಲ ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವೀಸ್ ಉದ್ದಿಮೆಗಳಿಗಷ್ಟೇ ಸೀಮಿತವಾಗಿ ಉಳಿದಿದೆ.

 

ಇದಕ್ಕಾಗಿ ಒಂದು ಪ್ರತ್ಯೇಕ ಇಲಾಖೆಯನ್ನೇ ಸರ್ಕಾರ ತೆರೆಯಬೇಕಾದರೂ ಸರಿ, ಮಾಡಲೇಬೇಕಾದ ಕೆಲಸ. ಅಲ್ಲೂ ಕೆಲಸಗಳು ಸೃಷ್ಟಿಯಾಗಲಿ. ಆಗಬೇಕು ಸಹಾ. ಆದರೆ ಕೃಷಿ ಸಮಸ್ಯೆಗಳನ್ನು ಹೀಗೆಯೇ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲವೆಂದಲ್ಲ. ಆದರೆ ಅದು ಒಬ್ಬರಿಂದ ಅಥವಾ ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ಇದಕ್ಕೆಲ್ಲಾ ಸರಕಾರಗಳಿಗೆ ಧೀ ಶಕ್ತಿ ಬೇಕು ಮತ್ತು ರೈತರಿಗೂ ಬದಲಾಗುವ ಮನಸ್ಥಿತಿ ಬೇಕು.

0 comments on ““ರೈತ, ಸರ್ಕಾರ ಮತ್ತು ಬಡತನದ ಜುಗಾರಿ ಕ್ರಾಸ್”

Leave a Reply

Your email address will not be published. Required fields are marked *