Saturday, 27 April, 2024

ಲೇಸರುಗಳು ಸುಡಲೇಬೇಕಿಲ್ಲ, ಎಐ ಅಂದರೆ ಬರೀ ಚಾಟ್-ಜಿಪಿಟಿಯಲ್ಲ

Share post

ತಂತ್ರಜ್ಞಾನ ಚಂದ. ಆದರೆ ಎಷ್ಟೋ ಜನ ತಂತ್ರಜ್ಞಾನದ ಅತ್ಯುತ್ಕೃಷ್ಟ ಉಪಯೋಗವೆಂದರೆ ಬರೀ ರಾಕೆಟ್ಟುಗಳ ಉಡಾವಣೆ, ಸೂಪರ್ ಕಂಪ್ಯೂಟರ್ ನಿರ್ಮಿಸುವುದು ಎಂದು ಭಾವಿಸುವುದುಂಟು. ಅದು ತಪ್ಪೇನಲ್ಲ. ಆದರೆ ನನ್ನ ಪ್ರಕಾರ ಅತ್ಯುತ್ಕೃಷ್ಟ ತಂತ್ರಜ್ಞಾನವೆಂದರೆ, ಯಾವುದು ಜನರ ಬದುಕನ್ನು ಹಸನು ಮಾಡಬಲ್ಲುದೋ ಅದು. ಅದು ರಾಕೆಟ್ಟಿನಿಂದ ಹಾರಿಸಲ್ಪಟ್ಟ ಉಪಗ್ರಹವೊಂದು ನೂರು ಕಿಲೋಮೀಟರ್ ಎತ್ತರದಿಂದ ನನ್ನ ಗ್ರಾಮದ, ಜಿಲ್ಲೆಯ ಚಿತ್ರ ತೆಗೆದು ಎಲ್ಲಿ ನದಿಯನೀರನ್ನು ಹೆಚ್ಚು ಶೇಖರಿಸಬಹುದು ಎಂದು ತಿಳಿಸುವುದೂ ಆಗಬಹುದು, ಅಥವಾ ದುರ್ಗಮ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬವೊಂದಕ್ಕೆ ತಂತಿಯೇ ಇಲ್ಲದೇ ವಿದ್ಯುತ್ ಅಥವಾ ದೂರಸಂಪರ್ಕವನ್ನು ಒದಗಿಸುವುದೂ ಆಗಬಹುದು. ಸಮಾಜದ ಜೀವನಮಟ್ಟವನ್ನು ಸುಧಾರಿಸದ, ಉಪಯೋಗಕ್ಕೆ ಬರದ ತಂತ್ರಜ್ಞಾನದ ಅಗತ್ಯವೂ ನಮಗಿಲ್ಲ. ಆದರೂ ವರ್ಷವೊಂದಕ್ಕೆ ಜಗತ್ತಿನಲ್ಲಿ ಎಷ್ಟೋ ಬಿಲಿಯನ್ನುಗಳಷ್ಟು ಹಣವನ್ನು ಏರ್-ಕಂಡೀಷನ್ ಶೂ, ವಾಟರ್ ಫ್ರೂಫ್ ಟವಲ್, ತ್ರೀ-ಡಿ ಪ್ರಿಂಟಿಂಗ್ ಎಂಬ ನಿರುಪಯೋಗಿ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಈ ಹಣವೆಲ್ಲವೂ ಜನಸಾಮಾನ್ಯರ ಜೀವನಮಟ್ಟದ ಸುಧಾರಿಸಬಲ್ಲ ವಿಚಾರಗಳಿಗೆ ಬಳಕೆಯಾಗಿದ್ದಿದ್ದರೆ ಎಷ್ಟೂ ಚೆಂದವಿರುತ್ತಿತ್ತು!

 

ಅಂತಹ ಉತ್ಕೃಷ್ಟ ತಂತ್ರಜ್ಞಾನವೊಂದರ ಉದಾಹರಣೆ ಇಲ್ಲಿದೆ. ದುಬೈನ ರಸ್ತೆಗಳು ಚಂದ, ಅದರಲ್ಲಿ ವಾಹನ ಓಡಿಸುವುದೇ ಒಂದು ಮರೆಯಲಾಗದ ಅನುಭವ. ಕೆಲವೆಡೆ ಕನಿಷ್ಠ ವೇಗಮಿತಿಯೇ ಅರವತ್ತು, ಗರಿಷ್ಠ ನೂರಾನಲವತ್ತು ಕಿಮೀ. ಮೋಟರ್-ವೇಗಳನ್ನು ಬಿಡಿ, ನಿಮಗೆ ಬಡಾವಣೆಯೊಂದರ ಒಳರಸ್ತೆಯಲ್ಲೂ ಹೊಂಡಗಳು, ಬಿರುಕುಗಳು, ಅವೈಜ್ಞಾನಿಕ ಹಂಪುಗಳು ಕಾಣುವುದಿಲ್ಲ. ಇಲ್ಲಿನ ಸಾರಿಗೆ ಪ್ರಾಧಿಕಾರ ಏನಿದೆ, ಅದು ತಂತ್ರಜ್ಞಾನ ಬಳಕೆಗ ಹುಚ್ಚಿನಲ್ಲಿ ತುಂಬಾ ಮುಂದೆ. ಇಂಟೆಲಿಜೆಂಟ್ ಟ್ರಾಫಿಕ್ ಸಿಸ್ಟಮ್ (ITS) ಸಹಾಯದಿಂದ ಟ್ರಾಫಿಕ್ ದಟ್ಟಣೆಗಳನ್ನು ಕಂಡುಹಿಡಿದು ಅಲ್ಲಲ್ಲಿ ಹಾಕಿದ ಫಲಕಗಳ ಮೂಲಕ ಚಾಲಕರಿಗೆ ಮಾಹಿತಿ ಮತ್ತು ಬೇರೆ ಮಾರ್ಗಗಳನ್ನು ಬಳಸುವಂತೆ ನಿರ್ದೇಶನಗಳನ್ನು ನೀಡಿ, ದಟ್ಟಣೆಯಿರುವ ಜಾಗದಿಂದ ಮುಂದಿರುವ ಸಿಗ್ನಲ್ಲುಗಳಲ್ಲಿ ಸ್ವಲ್ಪ ಹೆಚ್ಚೇ ಹೊತ್ತು ಹಸಿರುದೀಪ ಹಚ್ಚಿ, ಟ್ರಾಫಿಕ್ಕನ್ನು ಇಲ್ಲವಾಗಿಸುತ್ತಾರೆ. ಮುಖ್ಯ ರಸ್ತೆಗಳಲ್ಲಿ ಡ್ರೋನ್ ಕ್ಯಾಮರಾಗಳನ್ನೂ ಬಳಸಿ, ವಾಹನದಟ್ಟಣೆ, ಟ್ರಕ್ಕುಗಳಿಗೆ ನಿರ್ಬಂಧವಿರುವ ಸಮಯ ಮತ್ತು ಪ್ರದೇಶಗಳಲ್ಲೇನಾದರೂ ಅವು ಬಂದರೆ, ಎರ್ರಾಬಿರ್ರಿ ಗಾಡಿ ಓಡಿಸುವ ಹುಚ್ಚರು, ತೀರಾ ವೇಗ ಅಥವಾ ತೀರಾ ನಿಧಾನ ಚಾಲನೆ ಮಾಡುವವರನ್ನು ಕಂಡುಹಿಡಿದು, ಆ ಸಮಸ್ಯೆಗಳನ್ನು ನೀಗಿಸುವ ಪ್ರಯತ್ನ ಮಾಡುತ್ತಾರೆ. ಹಾಗೂ ತಪ್ಪಿತಸ್ಥರ ಮೊಬೈಲಿಗೆ ಎಚ್ಚರಿಕೆ ಸಂದೇಶಗಳನ್ನೂ ರವಾನಿಸುತ್ತಾರೆ. ರಸ್ತೆಯ ಎರಡೂ ಬದಿಯಲ್ಲಿ ಒಂದು ಕಾರು ಹೋಗುವಷ್ಟು ಜಾಗ ಇಟ್ಟೇ ಹಳದಿಪಟ್ಟಿ ಹಾಕುವುದರಿಂದ (ಹಾಗೂ ಈ ಹಳದಿ ಪಟ್ಟಿಯ ಆಚೆಗೆ ಯಾರೂ ವಾಹನ ಓಡಿಸುವಂತಿಲ್ಲವಾದ್ದರಿಂದ), ಅಪಘಾತಗಳಾದಾಗ ಪೊಲೀಸ್ ಮತ್ತು ಆಂಬ್ಯುಲೆನ್ಸುಗಳು ಆ ಜಾಗವನ್ನು ಬಳಸಿ ತಕ್ಷಣ ತಲುಪಿ, ಪ್ರಥಮ ಚಿಕಿತ್ಸೆಯನ್ನು ಕೊಡಬಹುದು ಹಾಗೂ ವಾಹನ ದಟ್ಟಣೆಯನ್ನು ನೀಗಿಸಬಹುದು. ದುಬೈನಲ್ಲಿ ಯಾವುದೇ ತುರ್ತುಪರಿಸ್ಥಿತಿಯಲ್ಲಿ ಪೊಲೀಸ್, ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕದಳಕ್ಕೆ ತಲುಪಲು ತೆಗೆದುಕೊಳ್ಳುವ ಸಮಯ 6 ನಿಮಿಷ 44 ಸೆಕೆಂಡುಗಳು. ಇಡೀ ಯು.ಎ.ಇ.ಯ ಸರಾಸರಿ 8 ನಿಮಿಷ 29 ಸೆಕೆಂಡುಗಳು. ಹಾಗೂ ಈ ಪ್ರತಿಕ್ರಿಯೆಗೆ ತೆಗೆದುಕೊಳ್ಳುವ ಸಮಯವೇನಿದೆ, ಅದು ಈ ಮೂರೂ ವಿಭಾಗಗಳ KPI (Key Performance Indicator) ಕೂಡಾ ಹೌದು. ಅಂದರೆ ಈ ಸಮಯ ಏನಿದೆ, ಅದು ಈ ವಿಭಾಗಗಳ ದಕ್ಷತೆ ಹಾಗೂ ಕಾರ್ಯಕ್ಷಮತೆಯ ಸೂಚಕ. ಪ್ರತೀವರ್ಷವೂ ಇದರಲ್ಲಿ ಸುಧಾರಣೆಯನ್ನು ತರಲು, ಈ ಇಲಾಖೆಗಳು ಪ್ರಯತ್ನಿಸುತ್ತವೆ, ಹಾಗೂ ಸರ್ಕಾರ ಅದಕ್ಕೆ ಬೇಕಾದ ಆರ್ಥಿಕ ಸಹಾಯ ಮತ್ತು ನಿಯಮಾವಳಿಗಳನ್ನು ರೂಪಿಸುವ ಮಟ್ಟದ ಸಹಾಯಗಳನ್ನೂ ಒದಗಿಸುತ್ತದೆ.

ಈ ಇಡೀ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಮತ್ತು ನಿಜವಾಗಿ ಈ ಇನ್ಫ್ರಾಸ್ಟ್ರಕ್ಚರಿನ ಪೂರ್ಣ ಉಪಯೋಗವನ್ನು ಜನರಿಗೆ ತಲುಪಿಸುವುದರ ಹಿಂದೆ RTA ಅಂದರೆ Roads and Transport Authorityಯ ಒಂದು ಸೈನ್ಯವೇ ಕೆಲಸ ಮಾಡುತ್ತದೆ. ಹೆಚ್ಚಿನ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಾಣ ಮತ್ತು ರಿಪೇರಿಗಳನ್ನು ರಾತ್ರಿಯೇ ಮುಗಿಸಿ, ನಿಮಗೆ ಕೆಲಸ ನಡೆಯುವುದೇ ಗೊತ್ತಾಗದಂತೆ ಮಾಡುವುದರಲ್ಲಿ ಈ RTA ಎತ್ತಿದ ಕೈ. ದುಬೈನಗರದ ಹೃದಯ ಭಾಗದಲ್ಲೇ ಹಾದುಹೋಗುವ, ಹನ್ನೆರಡು ಲೇನುಗಳಷ್ಟು ವಾಹನದಟ್ಟಣೆಯ ಶೇಖ್ ಝಾಯೇದ್ ರಸ್ತೆ ಈ ನಗರದ ಅತೀ ಮುಖ್ಯ ನಾಡಿ. ದುಬೈ ಮಲಗಿದರೂ ಶೇಖ್ ಝಾಯೇದ್ ರಸ್ತೆ ಮಲಗುವುದಿಲ್ಲ. ನಗರದ ನಟ್ಟನಡುವೆಯೇ ಗಂಟೆಗೆ ನೂರಿಪ್ಪತ್ತರ ವೇಗದಲ್ಲಿ ವಾಹನಗಳು ಚಲಿಸುವ ಈ ರಸ್ತೆಯಲ್ಲಿ ದಿನದ ಹೊತ್ತಿನಲ್ಲಿ ಹತ್ತು ಸೆಕೆಂಡಿಗೆ ನೂರು ವಾಹನಗಳು ಹಾದುಹೋಗುತ್ತವೆ. ರಾತ್ರಿ ಎರಡಕ್ಕೆ ಈ ರಸ್ತೆಗೆ ಬಂದರೂ ನಿಮಿಷಕ್ಕೆ ನೂರು ವಾಹನಗಳು ಕಾಣುತ್ತವೆ. 2016ರಲ್ಲಿ ಇಂತಹಾ ರಸ್ತೆಯಲ್ಲೊಂದು ಮೇಲ್ಸೇತುವೆ ನಿರ್ಮಾಣ ಮಾಡಬೇಕಾಗಿ ಬಂದಾಗ, ಪಕ್ಕದಲ್ಲೊಂದು ತಾತ್ಕಾಲಿಕ ರಸ್ತೆಯನ್ನು ಅದೂ ಗುಣಮಟ್ಟದಲ್ಲಿ ಯಾವುದೇ ಕಮ್ಮಿಯಿಲ್ಲದಂತೆ ನಿರ್ಮಿಸಿ, ಇಡೀ ವಾಹನಸಂಚಾರವನ್ನು ಬಲಕ್ಕೆ ಹಾಯಿಸಿ, ಬಳಕೆದಾರರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಂಟು ತಿಂಗಳಲ್ಲಿ ಸೇತುವೆಯೊಂದನ್ನೂ ಅದರಡಿ ಜಲಪಾತವೊಂದನ್ನೂ ಈ RTA ಕಟ್ಟಿ ಮುಗಿಸಿದ ರೀತಿ ಆಶ್ಚರ್ಯಪಡುವಂತದ್ದು. ಇಡೀ ದುಬೈ ಎಂಬ ಮಾಯಾಲೋಕದ ರಸ್ತೆಗಳು, ಆ ರಸ್ತೆಗಳ ಬೋರ್ಡು, ಲೈಟು, ಕ್ಯಾಮರಾ ಸಿಸ್ಟಮ್ಮುಗಳು, ಒಳಚರಂಡಿ ವ್ಯವಸ್ಥೆಗಳು, ಇಡೀ ನಗರವನ್ನು ಬೆಸೆಯುವ ಬಸ್ಸು, ಮೆಟ್ರೋ, ಟ್ರಾಮ್, ಟ್ಯಾಕ್ಸಿ ಮತ್ತು ವಾಟರ್-ಟ್ಯಾಕ್ಸಿಗಳ ಜಾಲ, ಟಿಕೆಟಿಂಗ್ ಮತ್ತು ಪಾರ್ಕಿಂಗ್ ವ್ಯವಸ್ಥೆ, ವಾಹನಗಳ ನೋಂದಣಿ ಮತ್ತು ಮರುನೋಂದಣಿ, ಚಾಲಕರ ಲೈಸೆನ್ಸ್ ನೀಡಿಕೆ ಇವೆಲ್ಲವನ್ನೂ ನಿರ್ವಹಿಸುವ ರೀತಿ, ಎಲ್ಲದಕ್ಕೂ KPI ಮತ್ತು ಉತ್ತರದಾಯಿತ್ವದೊಂದಿಗೆ ಗ್ರಾಹಕರ ಮನಗೆಲ್ಲುವ ಅವರ ಕಾರ್ಯಕ್ಷಮತೆ, ಜೊತೆಗೆ 0% ಭ್ರಷ್ಟಾಚಾರ ಇದೆಯಲ್ಲಾ, ಅದು ಯಾವ ದೇಶದವರಾದರೂ ಕಲಿಯಬೇಕಾದ ಕಥೆ.

 

ನಾಗರೀಕರಾಗಿ ನೀವೂ ಕೂಡಾ RTAಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಬಹುದು. ರಸ್ತೆಯಲ್ಲಿ ಹೊಂಡ, ಬಿರುಕು ಅಥವಾ ಅಡೆತಡೆಗಳು ಕಂಡುಬಂದಲ್ಲಿ ಅವರ ಆಪ್ ಅಥವಾ ಸಹಾಯವಾಣಿ ಬಳಸಿ ತಿಳಿಸಬಹುದು. ಒಂದು ದಿನ ರಸ್ತೆಕೆಲಸ ನಡೆಯುತ್ತಿದ್ದಲ್ಲೊಂದುಕಡೆ ಅವರಿಟ್ಟಿದ್ದ ಬ್ಯಾರಿಕೇಡ್ ಒಂದು ಸ್ವಲ್ಪ ವಾರೆಯಾಗಿ, ವಾಹನ ಓಡಿಸುತ್ತಿದ್ದ ಲೇನಿಗೆ ಇಣುಕಿತ್ತು. ಯಾರೋ ನನಗಿಂತ ಮುಂದೆ ಹೋದವ ಅದಕ್ಕೆ ಸಣ್ಣಕೆ ಗುದ್ದಿರಬೇಕು. ಆ ಪ್ಲಾಸ್ಟಿಕ್ ಬ್ಯಾರಿಕೇಡ್ ಗುದ್ದಿಸಿಕೊಂಡ ಕಡೆ ಒಳಗಾಗಿ, ಇನ್ನೊಂದು ತುದಿ ಹೊರಗೆ ಚಾಚಿಕೊಂಡಿತ್ತು. ರಸ್ತೆ ನೆಟ್ಟಗೇ ಇದ್ದರೂ, ನನ್ನ ಮುಂದಿದ್ದ ಕಾರು ಅಡ್ಡವಿದ್ದ ಕಾರಣ, ನನಗದು ಕೊನೆಯ ಸೆಕೆಂಡಿನವರೆಗೂ ಕಾಣಲೇ ಇಲ್ಲ. ಮುಂದಿನವ ಅದ್ಯಾವ ನಶೆಯಲ್ಲಿ ಓಡಿಸುತ್ತಿದ್ದನೋ, ಅವನ ಮುಂದೆ ಇಡೀ ರಸ್ತೆ ಖಾಲಿಯಿದ್ದರೂ ಕೊನೆಯಕ್ಷಣದವರೆಗೆ ಅವನೂ ನೋಡಿಲ್ಲ. ಅವ ರಪ್ಪನೇ ಸ್ಟೇರಿಂಗ್ ತಿರುಗಿಸಿ ಬಚಾವಾದ. ಅವನ ಹಿಂದೆಯೇ ಇದ್ದ ನನಗೆ ಗಾಬರಿಯಾದರೂ, ಗಮನ ರಸ್ತೆಯ ಮೇಲೇ ಇದ್ದಿದ್ದರಿಂದ ನಾನೂ ರಪ್ಪನೆ ಸ್ಟೇರಿಂಗ್ ತಿರುಗಿಸಿ ನನ್ನ ಬಂಪರ್ರಿಗೆ ತಾಗುವುದನ್ನು ತಪ್ಪಿಸಿಕೊಂಡೆ. ತಕ್ಷಣ RTA ಸಹಾಯವಾಣಿಗೆ ಫೋನಾಯಿಸಿದೆ. ಇಲ್ಲಿಲ್ಲಿ ಹೀಗೀಗೆ ಆಗಿದೆ ಅಂತಾ ಹೇಳಿದೆ. ರಸ್ತೆಯ ಹೆಸರು ಗೊತ್ತಿದ್ದರೂ ಸರಿಯಾಗಿ ಎಲ್ಲಿ ಅಂತಾ ಹೇಳಲಿಕ್ಕೆ ನನಗೂ ಸಾಧ್ಯವಾಗಲಿಲ್ಲ. ಆ ಇಡೀ ರಸ್ತೆ 17 ಕಿಲೋಮೀಟರ್ ಉದ್ದವಿದೆ, ಜೊತೆಗೆ ಹೆಚ್ಚಾಗಿ ರೆಸಿಡೆನ್ಷಿಯಲ್ ಏರಿಯಾ. ಎಲ್ಲಿ ಅಂತಾ ಹೇಳೋಣ ಹೇಳಿ? ಹೀಗೀಗೆ ಇದರ ಹತ್ರ ಅಂತಾ ಹೇಳಿದೆ. ಆದರೆ ಘಟನೆ ನಡೆದು, ನಾನು ಫೋನು ಹಚ್ಚಿ ಅವರ IVR ಆಪ್ಷನ್ನುಗಳನ್ನೆಲ್ಲಾ ತಡಕಾಡಿ ಅವರು ಮಾತನಾಡುವ ಹೊತ್ತಿಗೆಲ್ಲಾ ನಾನು ಆ “ಹತ್ತಿರ”ದಿಂದಲೂ ಕನಿಷ್ಟ ಆರು ಕಿಲೋಮೀಟರ್ ಬಂದಾಗಿತ್ತು. ಆದರೂ ತಾಳ್ಮೆಯಿಂದ ವಿವರವೆಲ್ಲಾ ತಗೊಂಡು ಧನ್ಯವಾದ ಹೇಳಿ ಫೋನಿಟ್ಟರು. ನಾನು “ಸರಿ ಮಾಡ್ತಾರೋ ಇಲ್ವೋ, ಹೋಗ್ಲತ್ಲಾಗೆ, ನನ್ ಕೆಲ್ಸ ನಾನು ಮಾಡಿಯಾಗಿದೆ, ಕರ್ಮಣ್ಯೇವಾಧಿಕಾ….” ಅಂತಾ ಸುಮ್ಮನಾದೆ. ಹತ್ತುನಿಮಿಷದ ನಂತರ ಒಂದು ಫೋನ್ ಬಂತು. “ಸರ್ ನಮ್ಮ ಇನ್ಸ್ಪೆಕ್ಟರುಗಳು ನೀವು ಹೇಳಿದ ಜಾಗಕ್ಕೆ ಹೋಗಿ ನೋಡಿದ್ದಾರೆ. ಹೌದು ಅಲ್ಲಿ ಬ್ಯಾರಿಕೇಡ್ ಸ್ವಲ್ಪ ಆಚೀಚೆಯಾಗಿದ್ದು. ಮತ್ತದು ಟ್ರಾಫಿಕ್ ಸೇಫ್ಟಿಗೆ ಅಪಾಯ ತಂದದ್ದೂ ಹೌದು. ಅದನ್ನ ಸರಿಮಾಡಿದ್ದೇವೆ. ಈ ಕೇಸು ನಿಮ್ಮಿಂದ ಪ್ರಾರಂಭವಾದ್ದರಿಂದ ನಿಮಗೂ ವಾಟ್ಯ್ಸಾಪ್ ಮೂಲಕ ಕೆಲಸ ಮಾಡಿದ್ದರ ಫೋಟೋ ಕಳಿಸಿದ್ದೇವೆ. ತಿಳಿಸಿದ್ದಕ್ಕೆ ಧನ್ಯವಾದ” ಅಂದು ಫೋನಿಟ್ಟರು. ಚಿತ್ರವೂ ವಾಟ್ಸ್ಯಾಪಿನಲ್ಲಿ ಬಂದಿತ್ತು.

 

ಇನ್ನೊಂದು ವಿಷಯ ಗಮನದಲ್ಲಿರಲಿ, ದುಬೈನಲ್ಲಿ ವಾಸಿಸುವವರು ಆದಾಯತೆರಿಗೆ ಕಟ್ಟುವುದಿಲ್ಲ. ಕಳೆದೈದು ವರ್ಷದಿಂದಷ್ಟೇ VAT ಕಟ್ಟುತ್ತಿರೋದು. ಈ ಇಡೀ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣವಾಗಿದ್ದು, ನಡೆಯುತ್ತಿರೋದು ಸರ್ಕಾರದ ಸ್ವಂತ ಹಣದಿಂದ. ಸರ್ಕಾರದ್ದು ಅಂದರೆ ಶೇಖ್ ಮೊಹಮ್ಮದ್ ಬಿನ್ ರಾಷಿದ್ ಅಲ್ ಮಕ್ತೂಮ್ ಅವರ ಹಣದಿಂದಲೇ. ತೆರಿಗೆ ಪಾವತಿಸುವುದಿಲ್ಲವಾದ್ದರಿಂದ, ದೇಶದ ಸಂಪನ್ಮೂಲಗಳ ಮೇಲೆ ನನಗ್ಯಾವ ಹಕ್ಕೂ ಇಲ್ಲ. ತಾರ್ಕಿಕವಾಗಿ ನೋಡಿದರೆ, ಈ ದೇಶದ ರಸ್ತೆಗಳ ಸುವ್ಯವಸ್ಥೆ ಅಥವಾ ಅವ್ಯವಸ್ಥೆಯನ್ನು ನಾನು ಪ್ರಶ್ನಿಸುವಂತೆಯೂ ಇಲ್ಲ. ಆದರೂ ಅವರ ಉತ್ತರದಾಯಿತ್ವ ಹುಬ್ಬೇರಿಸಿತು. ನಮ್ಮಲ್ಲಿ ತೆರಿಗೆ ಕಟ್ಟದವನೂ ಕೂಡಾ “ಇದು ನನ್ನ ತೆರಿಗೆ ಹಣದ್ದು ಕಣ್ರೀ” ಅಂತಾ ಬೊಬ್ಬಿರಿಯುವಾಗ, ತೆರಿಗೆ ಕಟ್ಟಿಸಿಕೊಂಡವರೂ ಕೆಲಸಕ್ಕಿಂತಾ ಹೆಚ್ಚು ಜೇಬಿಗಿಳಿಸುವ ರೀತಿ, ನಿಜಕ್ಕೂ ಉತ್ತರದಾಯಿತ್ವವಿದ್ದರೂ “ಮಾಡ್ತೀವಿ ಬಿಡ್ರೀ” ಅಂತಾ ಉಡಾಫೆಯಲ್ಲಿ ಅನ್ನುವಾಗ ಬೇಸರವಾಗದಿರದು.

 

ಇಲ್ಲಿರುವ ಕ್ಯೂಆರ್ ಕೋಡ್ ಅನ್ನು ನಿಮ್ಮ ಸ್ಮಾರ್ಟ್-ಫೋನ್ ಮೂಲಕ ಸ್ಕ್ಯಾನ್ ಮಾಡಿದರೆ, ಅಥವಾ https://bit.ly/44frsOM ಮೇಲೆ ಕ್ಲಿಕ್ ಮಾಡಿದರೆ, RTAನವರ ಹೊಸಾ ತಂತ್ರಜ್ಞಾನದ ಬಳಕೆಯೊಂದನ್ನು ನೀವು ನೋಡಬಹುದು.

ಕಾರೊಂದರ ಹಿಂದೆ ಲೇಸರುಗಳನ್ನು ಅಳವಡಿಸಿ ರಸ್ತೆಗಳನ್ನು ಸ್ಕ್ಯಾನ್ ಮಾಡಿ, ಅದರಿಂದ ಶೇಖರವಾದ ಮಾಹಿತಿಯನ್ನು AI ತಂತ್ರಜ್ಞಾನದ ಮೂಲಕ ಪ್ರೋಸೆಸ್ ಮಾಡಿ ರಸ್ತೆಯಲ್ಲಿರುವ ಹೊಂಡ, ಉಬ್ಬುತಗ್ಗು, ಬಿರುಕುಗಳನ್ನು ಕಂಡುಹಿಡಿದು, ಅದನ್ನು ಸರಿಪಡಿಸುವ ಹೊಸಾ ಪ್ರಯತ್ನ ನಡೆದಿದೆ. ಕಡಿಮೆ ಜನರ ಬಳಕೆ ಹಾಗೂ ಒಂದು ಮಿಲಿಮೀಟರಿನಷ್ಟು ಸಣ್ಣ ಬಿರುಕನ್ನೂ ಕಂಡುಹಿಡಿಯುವ ಮೂಲಕ, ಮನುಷ್ಯಜನ್ಯ ತಪ್ಪುಗಳನ್ನು ಸಂಪೂರ್ಣ ತೆಗೆದುಹಾಕಿ, ಜಗತ್ತಿನ ಅತ್ಯುತ್ತಮ ರಸ್ತೆಗಳನ್ನು ಸಾರ್ವಜನಿಕರಿಗೆ ನೀಡಲು ನಿರ್ಧರಿಸಿದೆ. ಮನುಷ್ಯಜನ್ಯ ತಪ್ಪುಗಳನ್ನಷ್ಟೇ ತೆಗೆಯುವ ಈ ತಂತ್ರಜ್ಞಾನ ಬಳಸುತ್ತಿರುವ RTA ಇದರಿಂದಾಗಿ ಕೆಲಸದಿಂದ ಯಾರನ್ನೂ ತೆಗೆದಿಲ್ಲ. ವರ್ಷವರ್ಷಕ್ಕೂ ಅವರ ಮಾನವ ಸಂಪನ್ಮೂಲದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೃತಕ ಬುದ್ಧಿಮತ್ತೆಯೆಂದರೆ ಬರೀ ಚಾಟ್-ಜಿಪಿಟಿ, ಲೇಸರುಗಳೆಂದರೆ ಏನೋ ಸುಡಲಿಕ್ಕಿರುವುದು ಎಂಬ ಕಲ್ಪನೆಗಳ ನಡುವೆ ಜನರ ದೈನಂದಿನ ಜೀವನದಲ್ಲೀ ಉಪಯೋಗವಾಗುವ ಈ ತಂತ್ರಜ್ಞಾನಗಳೆಷ್ಟು ಚಂದ. ನನ್ನ ದೇಶದಲ್ಲೂ ಇದನ್ನು ಉಪಯೋಗಿಸಲು ಯಾವ ಕಷ್ಟವೂ ಇಲ್ಲ. ಅದಕ್ಕೊಂದು ದೂರದೃಷ್ಟಿ ಬೇಕಷ್ಟೇ.

0 comments on “ಲೇಸರುಗಳು ಸುಡಲೇಬೇಕಿಲ್ಲ, ಎಐ ಅಂದರೆ ಬರೀ ಚಾಟ್-ಜಿಪಿಟಿಯಲ್ಲ

Leave a Reply

Your email address will not be published. Required fields are marked *