Thursday, 09 May, 2024

ಸೇತುವೆಯೊಂದರ ಹಿಂದಿರುವ ಸಾವಿರ ಕತೆಗಳು

Share post

“ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್…ಫಾಲಿಂಗ್ ಡೌನ್” ಅನ್ನೋ ಶಿಶುಗೀತೆಯನ್ನ ನಾವೆಲ್ಲರೂ ಕೇಳಿದ್ದೀವಿ. ಈ ಹಾಡಿನ ವಿಭಿನ್ನ ಆವೃತ್ತಿಗಳನ್ನು ಪ್ರಪಂಚದಾದ್ಯಂತ ಕಾಣಬಹುದು (ಕೇಳಬಹುದು). ಮಕ್ಕಳು ಇದನ್ನು ಚಂದಾಗಿ ಪ್ರಾಸಬದ್ಧವಾಗಿ ಹಾಡುತ್ತಾರಷ್ಟೇ ಹೊರತು, ಯಾಕೆ ಲಂಡನ್ ಸೇತುವೆ ಬಿತ್ತು ಅಂತಾ ಕೇಳುವ ಸಾಧ್ಯತೆ ಕಡಿಮೆ. ಈ ಹಾಡು ಕೇಳುವುದಕ್ಕೆ ಚಂದವಾಗಿದ್ದರೂ, ಇದರ ಹಿಂದಿನ ಅರ್ಥ ಕರಾಳವಾದದ್ದೇ. ಈ ಪ್ರಾಸದ ಹಾಡಿನ ಕುರಿತಾದ ಆರಂಭಿಕ ದಾಖಲೆಗಳು 17ನೇ ಶತಮಾನದೀಚೆಗೆ ಕಂಡುಬಂದಿರುವಂತಹವು. ಇದರ ಸಾಹಿತ್ಯವನ್ನು 18ನೇ ಶತಮಾನದ ಮಧ್ಯದಲ್ಲಿ ಈಗಿರುವ ಆಧುನಿಕ ರೂಪದಲ್ಲಿ ಮೊದಲಿಗೆ ಮುದ್ರಿಸಲಾಯಿತು ಮತ್ತು 19ನೇ ಶತಮಾನದ ಅವಧಿಯಲ್ಲಿ ವಿಶೇಷವಾಗಿ ಬ್ರಿಟನ್ ಮತ್ತು ಅಮೇರಿಕದಲ್ಲಿ ಜನಪ್ರಿಯವಾಯಿತು. ಈ ಹಾಡಿಗೆ ನಾವು ನೀವು ಬಳಸುತ್ತಿರುವ ರಾಗವನ್ನು ಸುಮಾರು 19ನೇ ಶತಮಾನದ ಕೊನೆಯಲ್ಲಿ ರಚಿಸಲಾಯ್ತು ಎನ್ನಲಾಗುತ್ತದೆ. ಈ ಹಾಡು ಲಂಡನ್ ಸೇತುವೆಯ ಶಿಥಿಲತೆಯನ್ನು ಹಾಗೂ ಅದನ್ನು ಸರಿಪಡಿಸಲಿಕ್ಕೆ ನಡೆಸಲಾದ ವಾಸ್ತವಿಕ ಮತ್ತು ಕಾಲ್ಪನಿಕ ಪ್ರಯತ್ನಗಳನ್ನು ವಿವರಿಸುತ್ತದೆ ಎಂಬುದು, ಆ ಹಾಡಿನ ಸಾಹಿತ್ಯವನ್ನು ಓದಿದ ಹೆಚ್ಚಿನವರಿಗೆ ಗೊತ್ತಿರಬಹುದು. ಆದರೆ ಇದರ ಸುತ್ತಮುತ್ತ, ಅಂದರೆ ಬರೇ ಹಾಡಿನ ಸುತ್ತ ಮಾತ್ರವಲ್ಲ, ಸೇತುವೆಯ ಸುತ್ತಲೂ ಒಂದೆರಡು ಕಥೆಗಳಿವೆ. ಕೇಳೋಣ ಬನ್ನಿ.

 

ಒಂದು ಊಹೆಯ ಪ್ರಕಾರ ಈ ಹಾಡು ಸಾವಿಗೆ, ಅಥವಾ ಸಮಾಜದ ಕೆಲ ಅಂಶಗಳ (ಅಥವಾ ಇಡೀ ಸಮಾಜದ) ಕುಸಿತದ ಹಂತದ ಬಗೆಗಿನ ರೂಪಕ. ಲಂಡನ್ ಸೇತುವೆಯೇ ಕುಸಿಯಬಹುದಾದರೆ, ಸಮಾಜದಲ್ಲಿ ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ಈ ಊಹೆಯನ್ನು ಬಳಸಲಾಗಿದೆ. ಯಾಕೆಂದರೆ ಅಂದಿನ ಕಾಲಕ್ಕೆ ಲೋಹದ ಗರ್ಡರ್‌ಗಳಿಂದ ಬೋಲ್ಟ್‌ಗಳಿಂದ ಕಟ್ಟಲಾದ ಲಂಡನ್ ಸೇತುವೆಯನ್ನು ಎಬ್ಬಿಸಿ ನಿಲ್ಲಿಸುವುದು ನಿಜಕ್ಕೂ ಪ್ರಯಾಸದಾಯಕವಾದ ಕೆಲಸವೇ ಅಗಿರಬೇಕು. ಅಷ್ಟೆಲ್ಲಾ ಕಷ್ಟಪಟ್ಟು ಕಟ್ಟುವ ಹಾದಿಯಲ್ಲಿನ ವಿಫಲತೆಗಳು, ಜೊತೆಗೆ ಮತ್ತೆ ಮತ್ತೆ ಹಾನಿಗೊಳಗಾದ ರೀತಿಯನ್ನು ನೋಡಿ ಈ ಹಾಡು ರಚನೆಯಾಗಿರಬಹುದು ಎಂಬ ಕಥೆಗಳನ್ನೂ ತೇಲಿಬಿಡುತ್ತಾ, ಇದು ನಿಜಕ್ಕು ಶಿಶುಗೀತೆಯೋ ಅಥವಾ ತಾತ್ವಿಕ ಒಳನೋಟಗಳನ್ನೊಳಗೊಂಡ ಕವಿತೆಯೋ ಎಂಬ ಗೊಂದಲವನ್ನು ಮೂಡಿಸುವ ಪ್ರಯತ್ನವೂ ಕಳೆದ ನೂರಾರು ವರ್ಷಗಳಲ್ಲಿ ನಡೆದಿದೆ.

 

ಇಷ್ಟಾಗಿಯೂ ಈ ಹಾಡು ರಚನೆಯಾಗಿರುವುದು ಯಾವ ಲಂಡನ್ ಬ್ರಿಡ್ಜ್ ಬಗ್ಗೆ ಎಂಬುದು ಇನ್ನೂ ನಿಖರವಾಗಿ ತಿಳಿಸಲಾಗದ ಸಂಗತಿಯೇ. “ಅಯ್ಯೋ ಇದೇನು ಹೀಗಂದ್ರಿ? ಇರೋದೊಂದೇ ಲಂಡನ್ ಬ್ರಿಡ್ಜ್ ಅಲ್ವೇ? ಅದೇ ಎರಡು ಗೋಪುರ ಇರೋದು, ಮಧ್ಯದಲ್ಲಿ ಸೇತುವೆ ಇದೆ, ಯಾವುದಾದರೂ ದೋಣಿ ಬಂದ್ರೆ ಆ ಸೇತುವೆ ತೆರೆದುಕೊಂಡು ದೋಣಿಗೆ ಹೋಗೋಕೆ ಅವಕಾಶ ಮಾಡಿಕೊಡುತ್ತಲ್ಲಾ, ಅದೇ ಬ್ರಿಡ್ಜ್ ಅಲ್ವೇ?” ಅಂತಾ ನೀವು ಕೇಳಬಹುದು. ಮುಂದಿನ ಕಥೆ ಹೇಳುವ ಮುನ್ನ ಇದೊಂಚೂರು ಸ್ಪಷ್ಟಮಾಡಿಕೊಂಡು ಬಿಡೋಣ. ಲಂಡನ್ ಬ್ರಿಡ್ಜ್ ಎಂದಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಆ ಎರಡು ಗೋಪುರವಿರುವ (ಇಲ್ಲಿ ಚಿತ್ರ-1ರಲ್ಲಿರುವ) ಸೇತುವೆಯಿದೆಯಲ್ಲಾ, ಅದು ಲಂಡನ್ ಬ್ರಿಡ್ಜ್ ಅಲ್ಲ. ಟವರ್ ಆಫ್ ಲಂಡನ್ ಎಂಬ ಕೋಟೆಯ ಪಕ್ಕವಿರುವ ಆ ಸೇತುವೆಯ ಹೆಸರು “ಟವರ್ ಬ್ರಿಡ್ಜ್”.

ಚಿತ್ರ-1

ಲಂಡನ್ ಬ್ರಿಡ್ಜ್ ಎಂದು ಕರೆಸಿಕೊಳ್ಳುವ ಸೇತುವೆಯಿರೋದು ಈ ಟವರ್ ಬ್ರಿಡ್ಜಿನಿಂದ, ಒಂದರ್ಧ ಮೈಲಿ ದೂರದಲ್ಲಿ (ಚಿತ್ರ-2). ಈ “ನಿಜವಾದ“ ಲಂಡನ್ ಬ್ರಿಡ್ಜಿಗೆ ಯಾವ ಚಂದದ ಆಕಾರವಾಗಲೀ, ಅದರ ಮೇಲೆ ಗೋಪುರವಾಗಲೀ ಇಲ್ಲ. ಈ ಸೇತುವೆಗಿಂತಾ ನಮ್ಮ ತೀರ್ಥಹಳ್ಳಿಯ ಸೇತುವೆಗಾದರೂ ಒಂದು ಚಂದದ ಆಕಾರ ಇದೆ. ತೀರಾ ಸಾಮಾನ್ಯವಾಗಿ ಕಾಣುವ ಈ ಲಂಡನ್ ಬ್ರಿಡ್ಜಿಗೆ ಐತಿಹಾಸಿಕ ಮಹತ್ವವಂತೂ ಇದೆ. ಯಾಕೆಂದರೆ ಈ ಸೇತುವೆಯಿರೋ ಜಾಗದಲ್ಲಿಯೇ ಮೊತ್ತಮೊದಲ ಲಂಡನ್ ಬ್ರಿಡ್ಜ್ ಅನ್ನು ಕಟ್ಟಲಾಯ್ತು ಹಾಗೂ ರೋಮನ್ ದೊರೆಗಳಿಂದ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಲಾದ ಮೊತ್ತಮೊದಲ ಸೇತುವೆ ಇದು. ಈಗ ಥೇಮ್ಸಿಗೆ ಅಡ್ಡಲಾಗಿ ಲಂಡನ್ನಿನೊಳಗೇ 35 ಹಾಗೂ ಒಟ್ಟು 214 ಸೇತುವೆಗಳಿದ್ದರೂ, ಮೊತ್ತಮೊದಲ ಸೇತುವೆಯಾಗಿ ಗುರುತಿಸಿಕೊಳ್ಳುವುದು ಇದೇ “ಲಂಡನ್ ಸೇತುವೆ”.

ಚಿತ್ರ-2

ಆದರೆ ಈ ಸೇತುವೆಗೆ ಸದಾ ಶನಿ ವಕ್ಕರಿಸಿಕೊಂಡೇ ಇರುತ್ತಿತ್ತೇನೋ ಎನ್ನುವಂತೆ ಎಷ್ಟೋ ಬಾರಿ ಸೇತುವೆ ಹಾನಿಗೊಳಗಾಗಿದೆ, ಕುಸಿದುಬಿದ್ದಿದೆ, ಬೆಂಕಿ ಅವಘಡಕ್ಕೆ ಒಳಗಾಗಿದೆ. ಒಟ್ಟಿನಲ್ಲಿ ಇದನ್ನು ಕಟ್ಟೀ ಕಟ್ಟಿ ಸರ್ಕಾರಗಳಿಗೆ ಸುಸ್ತಾಗಿದೆ. ತೆರಿಗೆದಾರರ ಹಣ ಮತ್ತೆ ಮತ್ತೆ ಪೋಲಾಗಿದೆ. ಈಗಿರುವ ಬಾಕ್ಸ್ ಗರ್ಡರ್ ಸೇತುವೆ 1973ರಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ಮುನ್ನ ಇಲ್ಲೊಂದು 1830ರಲ್ಲಿ ಕಟ್ಟಿದ್ದ ಕಲ್ಲಿನ ಕಮಾನಿನ ಸೇತುವೆಯಿತ್ತು. ಆ ಕಲ್ಲಿನ ಕಮಾನುಸೇತುವೆ ಕಟ್ಟುವ ಮುನ್ನ ಅಲ್ಲೊಂದು ಸುಮಾರು 600 ವರ್ಷಗಳಷ್ಟು ಹಳೆಯದಾದ ಕಲ್ಲಿನಿಂದ ನಿರ್ಮಿಸಲಾದ ಮಧ್ಯಕಾಲೀನಯುಗದ ಸೇತುವೆಯೊಂದಿತ್ತು. ಆ ಸೇತುವೆಗೂ ಮುನ್ನ ಸಾ.ಶ.43ರಲ್ಲಿ ರೋಮನ್ನರು ಲಂಡನ್ ಎಂಬ ವಸಾಹತನ್ನು ಕಟ್ಟಿದಾಗಲಿಂದ, ಆ ಜಾಗದಲ್ಲಿ ಥೇಮ್ಸ್ ನದಿಗೆ ಅಡ್ಡಲಾಗಿ ಮತ್ತೆ ಮತ್ತೆ ಮತ್ತೆ ಕಟ್ಟಲಾದ ಮರದ ಸೇತುವೆಗಳ ಸರಣಿಯೇ ಇತ್ತು. ಇದೊಂತರಾ ಥೀಸಿಯಸ್ಸನ ಹಡಗಿನ ಕಥೆಯಿದ್ದಂಗೆ, ಮೊದಲ ಸೇತುವೆಯಿಂದ ಇಲ್ಲಿಯವರೆಗೆ ಎಷ್ಟು ಸೇತುವೆಗಳನ್ನು ಕಟ್ಟಲಾಗಿದೆಯೋ, ಎಷ್ಟು ಬದಲಾಗಿದೆಯೋ ಲೆಕ್ಕವೇ ಇಲ್ಲವಾಗಿ, ನಿಜವಾದ ಲಂಡನ್ ಬ್ರಿಡ್ಜ್ ಯಾವುದು ಅಂತಲೂ ಹೇಳಲೂ ಅಸಾಧ್ಯವೆಂಬಂತಾಗಿದೆ.

 

ಹಾಡಿನ ಪಲ್ಲವಿ ಹಾಗೂ ಚರಣಗಳ ಕೊನೆಯಲ್ಲಿ ಹೇಳಲಾಗಿರುವ “ಫೇರ್ ಲೇಡಿ” ಯಾರೆಂಬುದರ ಬಗ್ಗೆಯೂ ಅನೇಕ ಊಹೆಗಳಿವೆ. ಕೆಲವರ ಪ್ರಕಾರ ಇದು ವರ್ಜಿನ್ ಮೇರಿ. ಯಾಕೆಂದರೆ ಈ ಸಾಲು ಸಾಲು ಲಂಡನ್ ಬ್ರಿಡ್ಜುಗಳ ವಿನಾಶದ ಕಥೆಯಲ್ಲಿ, 1014ರಲ್ಲಿ ವೈಕಿಂಗರು ಲಂಡನ್ ಮೇಲೆ ದಾಳಿ ಮಾಡಿದಾಗ ಸೇತುವೆಗೆ ಬೆಂಕಿಯಿಟ್ಟು ಗಂಭೀರವಾಗಿ ಘಾಸಿಗೊಳಿಸಿದರು ಎಂಬ ಕಥೆಯೂ ಇದೆ. ಆದರೂ, ಅವರಿಗೆ ಲಂಡನ್ ನಗರವನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಕಥೆಯ ಪ್ರಕಾರ ಈ ದಾಳಿ ನಡೆದದ್ದು ಮೇರಿಯ ಜನ್ಮದಿನದಂದು. ಆ ದಿನ ಮೇರಿಯೇ ನಗರವನ್ನು ರಕ್ಷಿಸಿದಳು ಎಂಬ ನಂಬಿಕೆಯಲ್ಲಿ, ಈ ಹಾಡಿನಲ್ಲಿ ಆಕೆಯ ಹೆಸರಿದೆ ಎನ್ನಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಈ “ಫೇರ್ ಲೇಡಿ” 1080 ಮತ್ತು 1118ರ ನಡುವೆ ಇಂಗ್ಲೆಂಡಿನ ರಾಣಿಯಾಗಿದ್ದ, ಸ್ಕಾಟ್ಲೆಂಡಿನ ಮಟಿಲ್ಡಾ. ದೇಶದಾದ್ಯಂತ ಹಲವಾರು ಸೇತುವೆಗಳ ಸರಣಿಯನ್ನು ನಿರ್ಮಾಣಕ್ಕೆ ಕಾರಣಳಾಗಿದ್ದ ಮಟಿಲ್ಡಾಳಿಗೆ ಒಪ್ಪಿಸುವ ಹಾಡಿನ ವರದಿಯೇ ಈ ಶಿಶುಗೀತೆ ಎನ್ನುವ ಊಹೆಗಳೂ ಇವೆ. ಇನ್ನು ಕೆಲವರ ಪ್ರಕಾರ ಇದು 1269 ರಿಂದ 1291ರವರೆಗೆ ಇಂಗ್ಲೆಂಡಿನ ಸೇತುವೆಗಳ ಆಯವ್ಯಯದ ಜವಾಬ್ದಾರಿ ಹೊಂದಿದ್ದ, ಇಂಗ್ಲೆಂಡಿನ ಇನ್ನೊಬ್ಬ ರಾಣಿ ಎಲೆನೋರ್ ಆಫ್ ಪ್ರೊವೆನ್ಸ್. ಒಟ್ಟಿನಲ್ಲಿ ಈ ಫೇರ್ ಲೇಡಿ, ಸಧ್ಯಕ್ಕಂತೂ ಸೀಕ್ರೇಟ್ ಲೇಡಿಯೇ.

 

ನಾನು ಮೇಲೆ ಥೀಸಿಯಸ್ಸನ ಹಡಗಿನ ಬಗ್ಗೆ ಯಾಕೆ ಹೇಳಿದೆ ಎಂದರೆ, ಅದಕ್ಕೂ ಒಂದು ಮಜವಾದ ಹಿನ್ನೆಲೆಯಿದೆ. 1972ರಲ್ಲಿ ಇಲ್ಲಿದ್ದ “ಅಂದಿನ ಲಂಡನ್ ಸೇತುವೆ”ಯನ್ನು, ಕಲ್ಲು ಮತ್ತು ಲೋಹವನ್ನು ಬಳಸಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾದಾಗ, ಕೇವಲ ಕಲ್ಲುಗಳಿಂದ ನಿರ್ಮಿತವಾಗಿದ್ದ ಹಳೆಯ ಸೇತುವೆಯನ್ನು ರಾಬರ್ಟ್ ಮೆಕ್ಕಲ್ಲೋಕ್ ಎಂಬ ಅಮೇರಿಕನ್ ವ್ಯಾಪಾರಿ ಖರೀದಿಸಿದ. ಹೌದು, ಈ ಜಗತ್ತಿನಲ್ಲಿ ಸೇತುವೆಯನ್ನೂ ಖರೀದಿಸಲಾಗುತ್ತದೆ ಸ್ವಾಮೀ. “ಹೇಗಿದ್ದರೂ ಹೊಸಾ ಸೇತುವೆ ಕಟ್ಟುತ್ತಿದ್ದೇವಲ್ಲ, ಹಳೆಯದನ್ನು ಸುಮ್ಮನೇ ಒಡೆದು ಬಿಸಾಕುವುದೇಕೆ, ಮಾರೋಣ” ಎಂಬ ಸಲಹೆಯನ್ನು ಲಂಡನ್ ನಗರ ಕೌನ್ಸಿಲ್ಲಿನ ಸದಸ್ಯನೊಬ್ಬ ಕೊಟ್ಟಾಗ ಎಲ್ಲರೂ ನಕ್ಕಿದ್ದರು. ಕೊನೆಗೆ ಎಲ್ಲರಿಗೂ ಇದರಲ್ಲಿ ಲಾಭ ಕಂಡಮೇಲೆ 1968ರಲ್ಲಿ ಜನವರಿಯಲ್ಲಿ ಸೇತುವೆಯನ್ನು ಮಾರಾಟಕ್ಕಿಡಲಾಯ್ತು. 1968 ಏಪ್ರಿಲ್ 18ರಂದು ರಾಬರ್ಟ್ ಇದನ್ನು ಎರಡೂವರೆ ಮಿಲಿಯನ್ ಡಾಲರ್ರಿಗೆ ಖರೀದಿಸಿಯೂ ಬಿಟ್ಟ. ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಲಂಡನ್ ಬ್ರಿಡ್ಜ್ ಎಂದರೆ ಟವರ್ ಬ್ರಿಡ್ಜ್ ಎಂದು ನಾವಂದುಕೊಂಡಂತೆ, ರಾಬರ್ಟ್ ಕೂಡಾ ಮೊದಲಿಗೆ “ನಾನು ಟವರ್ ಬ್ರಿಡ್ಜ್ ಅನ್ನೇ ಖರೀದಿಸುತ್ತಿದ್ದೇನೆ ಎಂದುಕೊಂಡಿದ್ದ” ಎಂಬ ತಮಾಷೆಯ ಕಥೆಯೂ ಪ್ರಚಲಿತದಲ್ಲಿದೆ. ಇಡೀ ಸೇತುವೆಯಲ್ಲಿದ್ದ ಸುಮಾರು 10,000 ಟನ್ ಗ್ರಾನೈಟ್ ಬ್ಲಾಕ್‌ಗಳನ್ನು ಒಂದೊಂದಾಗಿ ಬಿಡಿಸಿ ಕ್ಯಾಟಲಾಗ್ ನಂಬರ್ ನಮೂದಿಸಿ, ಪನಾಮ ಕಾಲುವೆಯ ಮೂಲಕ ಕ್ಯಾಲಿಫೋರ್ನಿಯಾಗೆ ರವಾನಿಸಲಾಯಿತು. ಆಗಷ್ಟೇ ಬ್ರಿಟನ್ನಿನಲ್ಲಿ ನಿರ್ಮಾಣವಾಗಿದ್ದ, ಆದರೆ ಖಾಲಿಯಾಗಿ ಅಮೇರಿಕಕ್ಕೆ ಹೊರಟಿದ್ದ ಹಡಗೊಂದರ ಬಳಿ ಹೋದ ರಾಬರ್ಟ್ “ಹೇಗಿದ್ದರೂ ಖಾಲಿಯಾಗಿ ಹೋಗ್ತಾ ಇದ್ದೀರಾ, ಈ ಟ್ರಿಪ್ಪಿನ ಇಂಧನ ವೆಚ್ಚ ಮತ್ತು ಎಲ್ಲರ ಸಂಬಳ ನಾನು ಕೊಡ್ತೀನಿ. ಈ ಕಲ್ಲುಗಳನ್ನು ಸಾಗಿಸಿಕೊಡಿ” ಅಂತಾ ವ್ಯವಹಾರ ಕುದುರಿಸಿದ. ಅಮೇರಿಕಾದ ಅರಿಜೋನಾದಲ್ಲಿ ತಾನು ನಿರ್ಮಿಸುತ್ತಿದ್ದ “ಲೇಕ್ ಹವಾಸು ಸಿಟಿ” ಎಂಬ ಹೊಸಾ ನಗರದಲ್ಲಿ (ನಮ್ಮಲ್ಲೂ ಕಟ್ಟಿದ ಲವಾಸಾ ಎಂಬ ನಗರದಂತೆ) ಇಡೀ ಸೇತುವೆಯನ್ನು ಮರುನಿರ್ಮಿಸಿದ. 10 ಅಕ್ಟೋಬರ್ 1971ರಂದು ಲಂಡನ್‌ನ ಲಾರ್ಡ್ ಮೇಯರ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಸೇತುವೆಯನ್ನು ಲೋಕಾರ್ಪಣೆ ಮಾಡಿ, “ಲಂಡನ್ ಬ್ರಿಡ್ಜ್ ಪಕ್ಕದಲ್ಲೇ ವಾಸಿಸಿ ಬನ್ನಿ, ಲೇಕ್ ಹವಾಸುವಿನಲ್ಲಿ ಸೈಟ್ ಕೊಳ್ಳಿ ಬನ್ನಿ” ಎಂಬ ಮಾರ್ಕೆಟಿಂಗ್ ಕ್ಯಾಂಪೇನ್ ನಡೆಸಿದ. ಇವತ್ತಿಗೂ ಈ ಲಂಡನ್ ಬ್ರಿಡ್ಜ್, ಅದೇ ಹೆಸರಿನಿಂದ ಕರೆಯಲ್ಪಡುತ್ತಾ, ಅರಿಜೋನಾದ ಮರುಭೂಮಿಯಂತಾ ಜಾಗದಲ್ಲಿ ಕೊಲರಾಡೋ ನದಿಯನ್ನು ಬಳಸಿ ಸೃಷ್ಟಿಸಲಾದ ಕೃತಕ ಜಲಮಾರ್ಗವೊಂದಕ್ಕೆ ಅಡ್ಡವಾಗಿ, ಬಲಬದಿಯಲ್ಲಿ ಅಮೇರಿಕಾದ ಬಾವುಟವನ್ನೂ, ಎಡಬದಿಯಲ್ಲಿ ಇಂಗ್ಲೆಂಡಿನ ಬಾವುಟವನ್ನೂ ಹಾರಿಸಿಕೊಂಡು ಲೇಕ್ ಹವಾಸು ಸಿಟಿಯಲ್ಲಿ ನಿಂತಿದೆ. ಇದನ್ನು ಚಿತ್ರ-3 ಮತ್ತು ಚಿತ್ರ-4 ರಲ್ಲಿ ನೋಡಬಹುದು.

ಚಿತ್ರ-3
ಚಿತ್ರ – 4

ರಾಬರ್ಟ್ ಖರೀದಿಸಿದ ಲಂಡನ್ ಬ್ರಿಡ್ಜ್ ಜಾಗದಲ್ಲಿ ಸಂಪೂರ್ಣವಾಗಿ ಹೊಸಾ ಕಲ್ಲು ಲೋಹಗಳಿಂದ ಇನ್ನೊಂದು ಲಂಡನ್ ಬ್ರಿಡ್ಜ್ ಅನ್ನು 1972ರಲ್ಲಿ ಕಟ್ಟಲಾಯ್ತು. ಈಗ ನೀವೇ ಹೇಳಿ, ಮೊದಲಿದ್ದ ಸಾಮಗ್ರಿಗಳನ್ನೇ ಬಳಸಿ ಅರಿಜೋನಾದ ಮತ್ತೆಕಟ್ಟಿರುವ ಅದು ನಿಜವಾದ ಲಂಡನ್ ಬ್ರಿಡ್ಜೋ? ಅಥವಾ ಮತ್ತೆ ಮತ್ತೆ ಕಟ್ಟಲಾಗಿರುವ ಹಾಗೂ ಲಂಡನ್ನಿನಲ್ಲಿದೆ ಎಂಬ ಕಾರಣಕ್ಕಾಗಿಯಷ್ಟೇ ಲಂಡನ್ ಬ್ರಿಡ್ಜ್ ಎಂದು ಕರೆಯಲ್ಪಡುವ ಇದು ನಿಜವಾದ ಲಂಡನ್ ಬ್ರಿಡ್ಜೋ? ಒಂದೇ ಸಮಾಧಾನದ ವಿಚಾರವೆಂದರೆ ಇದಾದಮೇಲೆ London bridge has not fallen down.

0 comments on “ಸೇತುವೆಯೊಂದರ ಹಿಂದಿರುವ ಸಾವಿರ ಕತೆಗಳು

Leave a Reply

Your email address will not be published. Required fields are marked *