Wednesday, 08 May, 2024

ಇಲ್ಲದ ಊರುಗಳು, ಕಳ್ಳರನ್ನು ಹಿಡಿಯುವ ಇಲಿಬೋನುಗಳು

Share post

ಇವತ್ತಿನ ಜಗತ್ತಿನಲ್ಲಿ ಕಳ್ಳರಿಗೇನೂ ಕಮ್ಮಿಯಿಲ್ಲ. ಹಣ, ಒಡವೆ, ವಾಹನ, ಸ್ಥಿರಾಸ್ತಿ ಮಾತ್ರವೇ ಕಳ್ಳತನಕ್ಕೆ ಒಳಗಾಗುವ ವಸ್ತುಗಳು ಎಂದುಕೊಂದಿದ್ದ ನಮಗೆ, ಕಳೆದೊಂದು ಶತಮಾನದಿಂದ ದೇಹದ ಮತ್ತದರ ಭಾಗಗಳನ್ನೂ ಕದಿಯಬಹುದೆಂದು ತಿಳಿದುಬಂತು. ಕಳೆದೊಂದು ದಶಕದಿಂದ ಮಾಹಿತಿಯನ್ನು ಕದಿಯುವುದು ಅತ್ಯಂತ ಲಾಭದಾಯಕ ಕಳ್ಳತನವೆಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕಳೆದುಕೊಳ್ಳುವವರು, ಕೊಳ್ಳುವವರು ಇರುವ ತನಕ ಕಳ್ಳತನ ಅವ್ಯಾಹತವಾಗಿ ಸಾಗಲಿದೆ.

 

ಫೇಸ್ಬುಕ್ಕಲ್ಲಿ ನನ್ನ ಪೋಸ್ಟ್ ಇನ್ಯಾರೋ ತಮ್ಮ ಹೆಸರಲ್ಲಿ ಹಾಕಿಕೊಂಡಿದ್ದಾರೆ ಅಂತಾ ಕೆಲವರು ಬೇಸರ ಪಡೋದುಂಟು. ನನಗೇನೂ ನನ್ನ ಲೇಖನಗಳನ್ನು ಯಾರೂ ಕದಿಯಬಾರದು ಅಂತೇನೂ ಇಲ್ಲ. ಹೆಚ್ಚಿನ ಬರವಣಿಗೆಗಳು ಜ್ಞಾನಾರ್ಜನೆಯ ಉದ್ದೇಶದಿಂದಲೇ ಬರೆಯುವುದಾದ್ದರಿಂದ ಅದು ಹೆಚ್ಚು ಜನರಿಗೆ ತಲುಪಿದಷ್ಟೂ ನನಗೆ ಸಂತೋಷವೇ. ಆದರೆ ಕೆಲವರು ಲೇಖನಗಳನ್ನು ಮಕ್ಕೀ ಕಾ ಮಕ್ಕೀ ಕಾಪಿ ಹೊಡೆದು ಜೊತೆಗೆ ತಮ್ಮ ಹೆಸರು ಹಾಕ್ಕೊಂಡು ಪಬ್ಲಿಷ್ ಮಾಡಿ, ತಾವೇ ಬರೆದಂತೆ ಪೋಸ್ ಕೊಟ್ಟು ಕಮೆಂಟಲ್ಲಿ ಪ್ರಶ್ನೆಗಳಿಗೆ ತಪ್ಪುತಪ್ಪು ಉತ್ತರಗಳನ್ನೂ ಕೊಡ್ತಾರೆ ನೋಡಿ ಅಂತವರನ್ನು ಕಂಡುಹಿಡಿಯೋಕ್ಕಾಗಿ, ನಾನು ಬೇಕಂತಲೇ ಲೇಖನದಲ್ಲಿ ಒಂದೆರಡು ಸಣ್ಣ ಕಾಗುಣಿತದ ತಪ್ಪುಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಿರ್ತೀನಿ. ಆ ತಪ್ಪಾದ ಪದವನ್ನ ಫೇಸ್ಬುಕ್ ಸರ್ಚ್ ಬಾರ್’ನಲ್ಲಿ ಕೀಲಿಸಿದರೆ, ಲೇಖನ ಎಲ್ಲೆಲ್ಲಿ ಹಂಚಿ ಹೋಗಿದೆಯೋ ಅವೆಲ್ಲಾ ರಿಸಲ್ಟ್’ಗಳು ಬರುತ್ತವೆ. ಅಲ್ಲಿ ಹೋಗಿ ಸ್ವಘೋಷಿತ ಪಂಡಿತರಿಗೆ ಒಂದೊಳ್ಳೆಯ ಟೆಕ್ನಿಕಲ್ ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸಬಹುದು. ಪಂಡಿತರ ಮುಖವಾಡ ತೆಗೆಯುವುದಕ್ಕಿಂತಾ, ಪಂಡಿತರಂತೆ ಪೋಸುಕೊಡುವವರ ಮುಖವಾಡ ತೆಗೆಯುವ ಮಜಾನೇ ಬೇರೆ.

 

ಈ ರೀತಿ ಪ್ರಜ್ಞಾಪೂರ್ವಕವಾಗಿ ತಪ್ಪುಗಳನ್ನು ತುರುಕಿ ಕೃತಿಚೌರ್ಯಕಾರರನ್ನು ಹಿಡಿದ ಉದಾಹರಣೆಗಳು ಸೃಜನಶೀಲಸಾಹಿತ್ಯದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇದನ್ನು ಬಹಳ ಮುಂಚಿನಿಂದಲೇ ಉಪಯೋಗಿಸಲಾಗುತ್ತಿದೆ. ಸಾಫ್ಟ್ವೇರ್ ಮತ್ತು ಸೇವೆಗಳನ್ನು ಯಾವಾಗ ಹಕ್ಕುಸ್ವಾಮ್ಯಕ್ಕೊಳಪಡಿಸುವ ಪ್ರಕ್ರಿಯೆ ಪ್ರಾರಂಭವಾಯ್ತೋ, ಬೌದ್ಧಿಕ ಹಕ್ಕುಗಳು ಎಂಬ ಕಲ್ಪನೆ ಈ ಜಗತ್ತಿಗೂ ಬಂತೋ ಆಗಿಂದಲೇ ಪ್ರೋಗ್ರಾಮುಗಳನ್ನು ಜನ ಕದಿಯದಂತೆ ಮಾಡಲು, ಅಥವಾ ಕದ್ದರೂ ಗೊತ್ತಾಗುವಂತೆ ಮಾಡಲು ಅಲ್ಲಲ್ಲಿ Phantom Codeಗಳನ್ನು ಬಚ್ಚಿಡುವ ತಂತ್ರ ಪ್ರಾರಂಭವಾಯ್ತು. ಪ್ರೋಗ್ರಾಮ್ ಒಂದರ ಈ ಕೆಲ ಸಾಲುಗಳು ಇಡೀ ತಂತ್ರಾಂಶಕ್ಕೆ ಯಾವರೀತಿಯ ಹೆಚ್ಚಿನ ಮೌಲ್ಯವನ್ನು ಒದಗಿಸದಿದ್ದರೂ, ಅದು ತಂತ್ರಾಂಶದ ಭಾಗದಂತೆಯೇ ಕಾಣುವಂತೆ ಬರೆಯಲಾಗುತ್ತೆ. ಕಳ್ಳ ಅದನ್ನೂ ಮಕ್ಕೀ ಕಾ ಮಕ್ಕೀ ಕದ್ದಾಗ, ಮೂಲ ಕಂಪನಿ ಕಳ್ಳನನ್ನು ಕೋರ್ಟಿಗೆಳೆದು ಕಳ್ಳತನವನ್ನು ನಿರೂಪಿಸಲು ಇದು ಸಹಾಯ ಮಾಡುತ್ತೆ.

ನನಗೆ ಈ ತಂತ್ರದ ಅರಿವಾಗಿದ್ದು ಗೂಗಲ್ ಬಗ್ಗೆ ಲೇಖನಕ್ಕಾಗಿ ಒಂದಷ್ಟು ಮಾಹಿತಿ ಸಂಗ್ರಹಿಸುತಿದ್ದಾಗ. ಗೂಗಲ್ ಜಗತ್ತಿನ ಮೊತ್ತಮೊದಲ ಜನಪ್ರಿಯ ಮ್ಯಾಪ್ ಮತ್ತು ನ್ಯಾವಿಗೇಷನ್ ಸೇವೆ, ಹೌದು ತಾನೇ? ಆದರೆ ಜಗತ್ತನ್ನು ಡಿಜಿಟೀಕರಿಸುವ ಈ ಮ್ಯಾಪ್ ಉಪಾಯ ಹೊಳೆದದ್ದು ಗೂಗಲ್ಲಿಗಲ್ಲ. ಗೂಗಲ್ಲಿಗೂ ಮೊದಲು ಹತ್ತು ಹಲವು ಕಂಪನಿಗಳು, ಸರ್ಕಾರಗಳೂ, ನಾನ್-ಪ್ರಾಫಿಟ್ ಆರ್ಗನೈಸೇಷನ್ನುಗಳೂ ಈ ಕೆಲಸವನ್ನು ಪ್ರಾರಂಭಿಸಿದ್ದವು. ಅವರೆಲ್ಲರ ಉದ್ದೇಶಗಳೂ ಬೇರೆ ಬೇರೆಯದ್ದಾಗಿತ್ತು. ಸರ್ಕಾರಗಳಿಗೆ ಉಪಗ್ರಹಗಳಿಂದ ಭೂಮಿಯ ಫೋಟೊ ತೆಗೆದು ಎಲ್ಲಿ ಏನಿದೆ ಎಂಬ ಮಾಹಿತಿಪಡೆದು, ಆಣೇಕಟ್ಟು ಕಟ್ಟುವುದೆಲ್ಲಿ, ಎಲ್ಲಿ ರಸ್ತೆ ಮಾಡಬಹುದು, ಎಲ್ಲಿ ಶತ್ರುವಿದ್ದಾನೆ ಎಂಬುದನ್ನು ತಿಳಿಯಬಯಸಿದರೆ, ಕಂಪನಿಗಳು ಈ ಮಾಹಿತಿಯನ್ನು ಯಾವ ಸೇವೆಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದವು. ಗೂಗಲ್ ಇದಕ್ಕೊಂದು ಸಮರ್ಥ ರೂಪರೇಷೆ ಕೊಟ್ಟಿತಷ್ಟೇ. ತನ್ನ ಬೇರೆಲ್ಲಾ ಸೇವೆಗಳಂತೆ ಇಲ್ಲೂ ಕೂಡಾ “ಫ್ರೀಯಾಗಿ ನನಗೊಂದು ಉತ್ತಮ ಪ್ರಾಡಕ್ಟ್ ಸಿಕ್ತಾ ಇದೆ” ಎಂಬ ಆಮಿಷವನ್ನು ಗ್ರಾಹಕರಿಗೊಡ್ಡಿ, ಬೆಲೆಕಟ್ಟಲಾಗದಷ್ಟು ಮಾಹಿತಿಯನ್ನು ಅವರಿಂದಲೇ ಪಡೆದು, ಸಣ್ಣ ಮೊತ್ತಕ್ಕೆ ಅದನ್ನು ಲಕ್ಷಾಂತರ ವರ್ತಕರಿಗೆ ಮಾರಿ ಬಿಲಿಯನ್ನುಗಟ್ಟಲೆ ಸಂಪಾದಿಸಿತು. ಹಾಗಂತಾ ಗೂಗಲ್ ಏನೂ ಉಪಗ್ರಹ ಚಿತ್ರಗಳನ್ನು ಪುಗಸಟ್ಟೆ ಪಡೆಯಲಿಲ್ಲ. ಟೆರ್ರಾಡೇಟಾ, ಡಿಜಿಟಲ್-ಗ್ಲೋಬ್, ESRI Imageryಯಂತಹ ಕಂಪನಿಗಳಿಗೆ ಸಹಸ್ರಾರು ಡಾಲರ್ ಹಣಕೊಟ್ಟೇ ಪಡೆದದ್ದು.

 

ಗೂಗಲ್ಲಿನ ವ್ಯವಹಾರ ಹಾಗೂ ಲಾಭಗಳು ಬೆಳೆದಂತೆ, ಅದರಲ್ಲಿನ ಲಾಭವನ್ನು ಗಮನಿಸಿದ ಹಲವು ಕಂಪನಿಗಳು ಗೂಗಲ್ಲಿನಂತದ್ದೇ ಆಪ್-ಗಳನ್ನು ಪ್ರಾರಂಭಿಸಿದರು. ಇವತ್ತು ಮ್ಯಾಪ್ಸ್.ಎಂಇ, ವೇಝ್, ಆಪಲ್ ಮ್ಯಾಪ್ಸ್ ಮುಂತಾದ ಹತ್ತು ಹಲವು ಆಪ್’ಗಳಿವೆ. ಗೂಗಲ್ ತನ್ನ ರೂಟ್ ಆಪ್ಟಿಮೈಸೇಷನ್ ಅಲ್ಗಾರಿದಮ್ ಅನ್ನು ರಹಸ್ಯವಾಗಿಟ್ಟರೂ, ಅದರಲ್ಲಿನ ಎಷ್ಟೋ ಮಾಡ್ಯೂಲುಗಳು ಇವತ್ತಿಗೂ ಓಪನ್-ಸೋರ್ಸ್. ಮಾತ್ರವಲ್ಲ ಎಷ್ಟೋ ರಾಜ್ಯಗಳ ಮ್ಯಾಪೇ ಉಚಿತವಾಗಿ ಎಲ್ಲರಿಗೂ ಸಿಗುವಂತೆಯೇ ಇಟ್ಟಿದ್ದೂ ಉಂಟು. ಈ ರೀತಿಯಾಗಿ ತನ್ನದೇ ಪ್ರತಿಸ್ಪರ್ಧಿಗಳಿಗೆ ಪುಗಸಟ್ಟೆ ಪ್ರಾಡಕ್ಟ್ ಕೊಡುವುದೂ ಒಂದು ವ್ಯವಹಾರ ತಂತ್ರವೇ. ಹೀಗೆ ಗೂಗಲ್ ಫ್ರೀಯಾಗಿ ಕೊಟ್ಟದ್ದನ್ನು ಮಾತ್ರವಲ್ಲದೇ ಕೆಲ ಕಂಪನಿಗಳು ಗೂಗಲ್ಲಿನ ಇಡೀ ಪ್ರಾಡಕ್ಟನ್ನೇ ಯಥಾವತ್ತಾಗಿ ನಕಲಿಸಿಯೂ ಬಿಟ್ಟಿದ್ದುಂಟು. ಊರಿಗೆ ಊರುಗಳನ್ನೇ, ಅವುಗಳ ರಸ್ತೆಗಳನ್ನೂ, ಅಲ್ಲಿರುವ ಅಂಗಡಿ ಮುಂಗಟ್ಟುಗಳನ್ನೂ ಲೇಬಲ್ ಸಮೇತ ಕದ್ದು ತಮ್ಮದೇ ಪ್ರಾಡಕ್ಟಿನಲ್ಲಿ ಸೇರಿಸಿ ಮಾರಿದ್ದುಂಟು.

 

ಇಂತಹ ಯಥಾನಕಲುವೀರರನ್ನು ಹಿಡಿದು ಕೋರ್ಟಿಗೆಳೆಯಲು ಗೂಗಲ್ ಕೆಲ ಪೇಪರ್-ಟೌನುಗಳನ್ನು ಸೃಷ್ಟಿಸಿತು. ಪೇಪರ್ ಟೌನ್ ಎಂದರೆ ಭೂಮಿಯಮೇಲೆ ಇಲ್ಲದಿರುವ ಬರೀ ಕಡತಗಳಲ್ಲಿ ಮಾತ್ರವೇ ಇರುವಂತಹಾ ಒಂದು ಊರು. ಇಂತಹುದೊಂದು ಪೇಪರ್-ಟೌನಿಗೆ ಉದಾಹರಣೆ ಆರ್ಗಲ್ಟನ್ (Argleton). ಬ್ರಿಟನ್ನಿನ ವಾಲ್ಲಸ್ಸೀ ಮತ್ತು ಯಾರ್ಕ್ ನಗರಗಳನ್ನು ಸಂಪರ್ಕಿಸುವ A59 ಹೈವೇಯಲ್ಲಿ ಆಟನ್ (Aughton) ಎಂಬ ಹಳ್ಳಿಯ ಹತ್ತಿರ ಆರ್ಗಲ್ಟನ್ ಎಂಬ ಊರಿದೆ ಅಂತಾ ಲೇಬಲ್ ಹಾಕಿತು. ಅಂದರೆ ಭೂಮಿಯ ಮೇಲೆ ಅಂತಹುದೊಂದು ಊರೇ ಇರದಿದ್ದರೂ, ಅಲ್ಲೊಂದು ಊರಿದೆ ಅಂತಾ ಹೇಳಿತು. ಅಮೇರಿಕದ ಕಂಪನಿಯ ಪ್ರಾಡಕ್ಟ್ ಒಂದನ್ನು ಇಸ್ರೇಲಿನಲ್ಲೋ, ಥೈವಾನಿನಲ್ಲೋ ಕೂತು ಕದಿಯುವವನಿಗೆ ಬ್ರಿಟನ್ನಿನಲ್ಲಿ ಆ ಹಳ್ಳಿ ಇದೆಯೋ ಇಲ್ಲವೋ ಅಂತಾ ಹೇಗೆ ಗೊತ್ತಾಗಬೇಕು? ಅವ ನಕಲಿಸಿ ಮಾರುತ್ತಾನೆ. ಗೂಗಲ್ ಹತ್ತು ಡಾಲರ್ ತೆತ್ತು ಆ ಪ್ರಾಡಕ್ಟಿನ ಒಂದು ಲೈಸೆನ್ಸ್ ಕೊಂಡು ಸೀದಾ ತನ್ನ ಪೇಪರ್ ಟೌನಿನ ಹೆಸರು ಟೈಪಿಸಿದರೆ ಸಾಕಲ್ಲ, ಈ ಪ್ರತಿಸ್ಪರ್ಧಿಯನ್ನ ಕೋರ್ಟಿಗೆಳೆದು ಅವನ ಅಂಗಡಿ ಬಾಗಿಲು ಮುಚ್ಚಿಸಲು! ಪ್ರತಿಸ್ಪರ್ಧಿಗೆ ಫ್ಯಾಂಟಮ್ ಸೆಟಲ್ಮೆಂಟ್ ಅಥವಾ ಪೇಪರ್ ಟೌನ್ ತಂತ್ರದ ಬಗ್ಗೆ ಅನುಮಾನ ಬಂದರೂ ಇಷ್ಟು ದೊಡ್ಡ ಭೂಮಿಯ, ಅಷ್ಟು ದೊಡ್ಡ ಗೂಗಲ್ ಮ್ಯಾಪಿನಲ್ಲಿ ಯಾವ ಊರು ನಿಜ, ಯಾವ ಊರು ಸುಳ್ಳು ಅಂತಾ ಹೇಗೆ ಕಂಡುಹಿಡೀಬೇಕು? ಅವ ಇಡೀ ಭೂಮಿಯ ಮೇಲಿನ ಎಲ್ಲಾ ದೇಶ, ರಾಜ್ಯ, ನಗರ, ಹಳ್ಳಿ, ರಸ್ತೆಗಳನ್ನು ಚೆಕ್ ಮಾಡುತ್ತಾ ಕೂರುವ ಬದಲು ತನ್ನದೇ ಸ್ವಂತ ಉಪಗ್ರಹ ಹಾರಿಬಿಡೋದು ಕಡಿಮೆ ವೆಚ್ಚದ ಕೆಲಸ ಅಂತಾ ಆ ಕಡೆ ಹೋಗ್ತಾನೆ. ಹೀಗೆ ಬೇಕಂತಲೇ ತಪ್ಪು ನುಸುಳಿಸಿ ಕಳ್ಳರನ್ನು ಹಿಡಿಯುವುದೂ ಒಂದು ತಂತ್ರ.

ಹಾಗಂತ ಗೂಗಲ್ ಈ ರೀತಿಯ ತಂತ್ರ ಹೂಡಿದ ಮೊದಲ ಕಂಪನಿಯೇನೂ ಅಲ್ಲ. ಕಾರ್ಟೋಗ್ರಫಿ ಅಂದರೆ ಮ್ಯಾಪ್ ತಯಾರಿಕಾ ಕ್ಷೇತ್ರದಲ್ಲಿ ಈ ತಂತ್ರವನ್ನು 1930ರಲ್ಲೇ ಬಳಸಿಯಾಗಿತ್ತು. ಜನರಲ್ ಡ್ರಾಫ್ಟಿಂಗ್ ಎಂಬ ಕಂಪನಿಯ ಸಂಸ್ಥಾಪಕ ಒಟ್ಟೊ ಜಿ. ಲಿಂಡ್‌ಬರ್ಗ್ ಮತ್ತವನ ಸಹಾಯಕ ಅರ್ನೆಸ್ಟ್ ಆಲ್ಪರ್ಸ್, ನ್ಯೂಯಾರ್ಕಿನ ದಕ್ಷಿಣಕ್ಕಿದ್ದ ಕ್ಯಾಟ್‌ಸ್ಕಿಲ್ ಪರ್ವತಗಳೆಡೆಗೆ ಹೋಗುತ್ತಿದ್ದ ಮಣ್ಣುರಸ್ತೆಯೊಂದು ಮಾರ್ಟನ್ ಹಿಲ್ ರೋಡಿಗೆ ಸೇರುವಲ್ಲಿ, ತಮ್ಮ ಹೆಸರಿನ ಮೊದಲಕ್ಷರಗಳ (O,G,L,E,A) ಅನಗ್ರಾಮ್ ಅನ್ನು ನಿಯೋಜಿಸಿ ಅಗ್ಲೋಯ್ (Agloe) ಎಂಬ ಹಳ್ಳಿಯನ್ನು ಸೃಷ್ಟಿಸಿದರು.ಬೇರೆ ಪ್ರಕಾಶಕರುಗಳು ತಮ್ಮ ನಕ್ಷೆಗಳನ್ನು ನಕಲಿಸುತ್ತಿರುವುದನ್ನು ಪತ್ತೆಹಚ್ಚಲು ಸಾಧ್ಯವಾಗುವಂತೆ Agloe ಎಂಬ ಊರನ್ನು “ಹಕ್ಕುಸ್ವಾಮ್ಯದ ಟ್ರಾಪ್” ಆಗಿ ವಿನ್ಯಾಸಗೊಳಿಸಿದರು. ಕಾರ್ಟೋಗ್ರಫಿ ಆಗಿನ ಕಾಲದಲ್ಲಿ (ಮಾತ್ರವಲ್ಲ ಇಂದಿಗೂ ಕೂಡ) ಅತ್ಯಂತ ದುಬಾರಿ ಬಿಸಿನೆಸ್. ಅದಕ್ಕೆ ಹಾಕಬೇಕಾದ ಶ್ರಮ ಬೆಲೆಕಟ್ಟಲಾಗದ್ದು. ಅಷ್ಟೆಲ್ಲಾ ಬೆನ್ನುಮುರಿಸಿಕೊಂಡು ಬರೆದ ಮ್ಯಾಪನ್ನು ಯಾರಾದರೂ ಕದ್ದು ತಾವೇ ಬರೆದದ್ದು ಅಂತಾ ಹೇಳಿಕೊಂಡರೆ ಅದನ್ನು ನಿರೂಪಿಸುವುದಾದರೂ ಹೇಗೆ? ನ್ಯೂಯಾರ್ಕ್ ಪಕ್ಕದಲ್ಲಿ ನ್ಯೂಜೆರ್ಸಿ ಇದ್ದೇ ಇರುತ್ತೆ, ಬೆಂಗಳೂರಿನಿಂದ ಉತ್ತರಕ್ಕೆ ಯಾರ ಮ್ಯಾಪಲ್ಲೇ ಆದರೂ ತುಮಕೂರೇ ಅಲ್ಲವೇ. ಆದ್ದರಿಂದಲೇ ಈ ಕಾಲ್ಪನಿಕ ಊರುಗಳ ಐಡಿಯಾ ಬಂದದ್ದು. ತಮ್ಮ ಮ್ಯಾಪುಗಳನ್ನು ಯಾರಾದರೂ ಕದ್ದರೆ, ಮೂಲ ಕರ್ತೃ ತನ್ನ ಪ್ರತಿಸ್ಪರ್ಧಿಯ ಒಂದು ಅಟ್ಲಾಸ್ ತಗಂಡು, ತಾನು ಸೃಷ್ಟಿಸಿದ್ದ ಟ್ರಾಪ್ ಊರನ್ನಷ್ಟೇ ಹುಡುಕಿದರಾಯ್ತಲ್ಲ.

ಲಿಂಡ್ಬರ್ಗ್ ಹಾಗೂ ಆಲ್ಪರ್ಸ್ ಅವರ ತಂತ್ರವನ್ನು ಮುಂದೆ ಹೆಚ್ಚೂಕಡಿಮೆ ಎಲ್ಲಾ ಮ್ಯಾಪ್ ಕಂಪನಿಗಳೂ ಬಳಸಲಾರಂಭಿಸಿದವು. ಕಾಲ್ಪನಿಕ ನಗರದ ಹೆಸರು ಮಾತ್ರವಲ್ಲ, ಇಡೀ ಕಾಲ್ಪನಿಕ ನಗರಗಳನ್ನೇ ಕೂಲಂಕುಷವಾಗಿ ವಿನ್ಯಾಸಗೊಳಿಸಿ ಅಂದರೆ ಅಲ್ಲೊಂದು ಸ್ಕೂಲು, ಶೆಟ್ರ ಅಂಗಡಿ, ಮಲಯಾಳಿ ಹೋಟ್ಲು, ಒಂದು ಲಾಡ್ಝ್, ಒಂದು ನೂರೈವತ್ತು ಮನೆಗಳು ಎಲ್ಲವೂ ಇರುವಂತೆ ಹಾಗೂ ಅದನ್ನೆಲ್ಲಾ ಕನೆಕ್ಟ್ ಮಾಡಲು ಬೇರೆ ಬೇರೆ ಕಾಲ್ಪನಿಕ ಹೆಸರಿನ ಮೂವತ್ತೆರಡು ರಸ್ತೆಗಳು ಎಲ್ಲವೂ ಸೃಷ್ಟಿಯಾಗಿ ಒಂದು ಜಟಿಲವಾದ trapಗಳೇ ಸೃಷ್ಟಿಯಾದವು. ಈ ಇಲ್ಲದೂರುಗಳಿಗೆ ನಮ್ಮ ಬಾಗ್ಯದ ಬಳೆಗಾರ ಹೇಗೆ ಹೋಗುತ್ತಿದ್ದನೋ ಏನೋ ಪಾಪ! ಬರೀ ನಮ್ಮೂರು ಅಥವಾ ನಮಗೆ ಬೇಕಾದ ಊರನ್ನಷ್ಟೇ ಅಟ್ಲಾಸಿನಲ್ಲಿ ಹುಡುಕಿಕೊಂಡು ಸುಮ್ಮನಿದ್ದ ನಾವು ನೈಜೀರಿಯಾದಲ್ಲೋ, ನ್ಯೂಝೀಲ್ಯಾಂಡಿನ ಉತ್ತರದಲ್ಲೋ, ಪಪುವಾ ನ್ಯೂಗಿನಿಯ ಪೂರ್ವದಲ್ಲೋ, ಅಂಟಾರ್ಕ್ಟಿಕಾದ ಈಶಾನ್ಯದಲ್ಲಿ ಕದ್ದುಕೂತಿರುವ ಆ ಕಾಲ್ಪನಿಕ ಊರಿನ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗದ್ದರಿಂದ ನಮಗೆ ನಿಮಗೆ ಗೊತ್ತಾಗಲಿಲ್ಲ ಅಷ್ಟೇ. ಅಸ್ತಿತ್ವದಲ್ಲೇ ಇಲ್ಲದ ಊರಿನ ಬಗ್ಗೆ ಯಾರಾದರೂ ಯಾಕೆ ತಲೆಕೆಡಿಸಿಕೊಂಡಾರು ಹೇಳಿ!

 

ಮ್ಯಾಪುಗಳಲ್ಲಿ ಮಾತ್ರವಲ್ಲದೇ ಡಿಕ್ಷನರಿ, ಎನ್ಸೈಕ್ಲೋಪೀಡಿಯಾ, ಡೈರೆಕ್ಟರಿ, ಕೆಲ ಕಾದಂಬರಿಗಳಲ್ಲೂ ಕಳ್ಳರನ್ನು ಕಂಡುಹಿಡಿಯಲು ಇಂತಹ ಫೇಕ್ ಎಂಟ್ರಿಗಳಿರುತ್ತವೆ. ಹೀಗೆ ಫ್ರೀಯಾಗಿ ಕೊಟ್ಟಹಾಗೆ ಮಾಡಿ ಕೊಡದಿರುವುದು, ಹಾಗೂ ಸ್ಪರ್ಧಿಗಳು ಸದಾ ಎಚ್ಚರದಲ್ಲಿರುವಂತೆ ಮಾಡುವುದೂ ಒಂದು ಬ್ಯುಸಿನೆಸ್ ತಂತ್ರ. ನನ್ನ ಬ್ಲಾಗ್ ಮತ್ತು ಫೇಸ್ಬುಕ್ ಲೇಖನಗಳಲ್ಲಿನ ಕೆಲ ತಪ್ಪುಗಳೂ ಕೂಡಾ ಹೀಗೆಯೇ ಬೇಕಂತಲೇ ಇಟ್ಟಿರುವ ಇಲಿಟ್ರಾಪುಗಳು. ಅದು ಯಾವ ಪ್ಯಾರಾದ ಯಾವ ಸಾಲಿನ ಯಾವ ಪದದಲ್ಲಿರುತ್ತೆ, ಅಥವಾ ಯಾವ ರೂಪದಲ್ಲಿರುತ್ತೆ ಅನ್ನೋ ರಹಸ್ಯ ನನಗೆ ಮಾತ್ರ ಗೊತ್ತಿರುತ್ತಾದ್ದರಿಂದ ಅದನ್ನು ಕಳ್ಳರಿಗೆ ಪ್ರತಿಬಾರಿಯೂ ಕಂಡುಹಿಡಿಯುವುದು ಸಾಧ್ಯವೂ ಇಲ್ಲ ಬಿಡಿ. ” ನಿಮ್ಮ ಆ ಲೇಖನದಲ್ಲಿರೋ ತಪ್ಪನ್ನು ಕಂಡುಹಿಡಿದು,ಅದನ್ನು ಸರಿಪಡಿಸಿ ಕದ್ದು ಪೇಸ್ಟ್ ಮಾಡಿದ್ರೆ?” ಅಂತಾ ಪ್ರಶ್ನೆ ಕೇಳ್ತಿರಾ? ನಾನು ಬರೆಯೋ ಉದ್ದುದ್ದ ಲೇಖನಗಳನ್ನ ಓದಿ, ಅದರಲ್ಲಿರೋ ತಪ್ಪು ಕಂಡುಹಿಡಿದು ಸರಿಪಡಿಸಿದ್ದಾರೆ ಅಂದರೆ, ಅವರು ನಿಜಕ್ಕೂ ಜ್ಞಾನಗ್ರಾಹಿಗಳೇ, ಕಲಿಯುವ ಮತ್ತು ಕಲಿಸುವ ಹಸಿವಿನವರೇ. ಅಂತವರು ನಿಜಕ್ಕೂ ನನ್ನ ಸ್ನೇಹಿತರೇ. ಹಾಗಿದ್ದಮೇಲೆ ಅವರು ತಂಪಾಗಿರಲಿ ಎಂದು ಹಾರೈಸುವುದನ್ನು ಬಿಟ್ಟು, ಅವರ ಮೇಲೆ ಇನ್ಯಾವ ಯಾವ ಕ್ರಮ ಕೈಗೊಳ್ಳೋಣ ಹೇಳಿ?

0 comments on “ಇಲ್ಲದ ಊರುಗಳು, ಕಳ್ಳರನ್ನು ಹಿಡಿಯುವ ಇಲಿಬೋನುಗಳು

Leave a Reply

Your email address will not be published. Required fields are marked *