Wednesday, 08 May, 2024

ನಿಮ್ಮ ವಾರಾಂತ್ಯಗಳು ಹೂಡಿಕೆಗಳೋ? ಖರ್ಚೋ?

Share post

ಮಧ್ಯಮಗಾತ್ರದ ಅಥವಾ ದೊಡ್ಡನಗರದಲ್ಲಿ ವಾಸಿಸುವವರು ನೀವಾದರೆ ವೀಕೆಂಡುಗಳಲ್ಲಿ ನಿಮಗೆ ಎರಡು ತರದ ಜನ ಸಿಕ್ತಾರೆ. ಒಂದು ಗುಂಪು ಬೆಳಿಗ್ಗೆದ್ದು ಸೈಕ್ಲಿಂಗು, ರನ್ನಿಂಗು, ಅಥವಾ ಬೈಕ್ ಕ್ಲಬ್ ಜೊತೆ ಲಾಂಗ್ ರೈಡು, ಯಾವುದಾದರೂ ಹಿಲ್-ಸ್ಟೇಷನ್ನಿಗೆ ಓಟ, ಆಮೇಲೆ ಏನೋ ಒಂದು ಹೊಸಾವಿದ್ಯೆಯ ಕ್ಲಾಸು, ಬಾಲ್ಕನಿಯೋ ಟೆರೇಸಲ್ಲೋ ಇರೋ ಗಾರ್ಡನ್ನು ನೋಡ್ಕೊಳ್ಳೋದು ಇತ್ಯಾದಿ ಕೆಲಸಗಳನ್ನು ಹಮ್ಮಿಕೊಳ್ಳೋರು. ಇನ್ನೊಂದು ಗುಂಪು, “ಪೂರ್ತಿ ವೀಕು ಕೆಲಸ ಮಾಡಿ ಸುಸ್ತಾಗಿದೆ. ರಿಲ್ಯಾಕ್ಸ್ ಮಾಡ್ತೀನಿ ಅನ್ನೋರದ್ದು. ಈ ಎರಡನೇ ಗುಂಪಿನೋರು ಹೇಳೋದು ಹಾಗಷ್ಟೇ, ಆದರೆ ಬೆಳಗ್ಗೆ ಮತ್ತು ಮಧ್ಯಾಹ್ನದ ಹೋಟ್ಲು ಊಟ, ಸಂಜೆ ಪಬ್ಬು ಹಾಪಿಂಗೂ ಅವರ ರಿಲ್ಯಾಕ್ಸ್ ಮಾಡೋ ಪ್ಲಾನಿನಲ್ಲಿ ಸೇರಿರುತ್ತೆ. ಈ ಗುಂಪಲ್ಲಿ, ದಿನವಿಡೀ ಹೆಚ್ಚೇನೂ ಮಾಡದೇ ಚೆನ್ನಾಗಿ ನಿದ್ದೆ ಹೊಡೆಯುವವರೂ, ಅಥವಾ ಮಕ್ಕಳೊಂದಿಗೆ ಆಟ ಆಡಿಕೊಂಡಿರುವವರೂ ಇದ್ದಾರೆ ಅನ್ನಿ. ಇದರಲ್ಲಿ ಯಾವಗುಂಪಿನ ಯಾವ ಕೆಲಸವೂ ತಪ್ಪಲ್ಲ, ಅಥವಾ ಹೀಗೆಲ್ಲಾ ಮಾಡಬಾರದು ಅನ್ನೋದು ನನ್ನ ಮಾತಲ್ಲ.

ಆದರೆ ಈ ಎರಡೂ ಗುಂಪುಗಳಲ್ಲಿ ನಾನು ಕಾಣುವ ಸಾಮ್ಯತೆಯೇನೆಂದರೆ, ಇವರೆಲ್ಲರೂ (ಅಥವಾ ಇವರಲ್ಲಿ ಹೆಚ್ಚಿನವರು) ತಮ್ಮ ಶನಿವಾರ ಭಾನುವಾರಗಳಲ್ಲಿ, ವಾರದ ಐದುದಿನ ಮಾಡಿದ ಕೆಲಸಗಳಿಂದ ಅಥವಾ ಆ ಐದುದಿನದ ಜೀವನದಿಂದ ದೂರಕ್ಕೆಲ್ಲೋ ಓಡಿಹೋಗುವ ಪ್ರಯತ್ನದಲ್ಲೇ ಇರುತ್ತಾರೆ. ಇದು ನನಗೆ ಆಶ್ಚರ್ಯತರುವ ವಿಚಾರ. ಕೆಲ ವರ್ಷಗಳ ಹಿಂದೆ ನಾನು ಓದಿದ ಒಂದಷ್ಟು ಸಾಲುಗಳು ನನ್ನನ್ನು ತುಂಬಾ ಪ್ರಭಾವಿಸಿತ್ತು. ಅದೇನೆಂದರೆ “Don’t be fooled by the calendar. There are only as many days in the year as you make use of. One man gets only a week’s value out of a year while another man gets a full year’s value out of a week. Use the Weekend to Build the Life you Want, Instead of Trying to Escape the Life You Have” ಅಂತಾ. “ಈ ಎರಡು ದಿನದ ರಜವನ್ನ ನೀವೇನಾಗಬೇಕು ಅಂತಿದ್ದೀರೋ ಅದಾಗಲಿಕ್ಕೆ ಬಳಸಿಕೊಳ್ಳಿ. ಉಳಿದ ಐದುದಿನ ಏನು ಮಾಡಲಿಕ್ಕಾಗಲಿಲ್ಲವೋ ಅದನ್ನು ಮಾಡೋದಕ್ಕಾಗಲೀ, ಅಥವಾ ಅದರಿಂದ ದೂರ ಓಡೋದಕ್ಕಾಗಲೀ ಅಲ್ಲ” ಅನ್ನೋದು ಆ ಮಾತಿನ ತಿರುಳು. ನಾನೇನು ಈ ಮಾತುಗಳನ್ನ ಪೂರ್ತಿ ಅಳವಡಿಸಿಕೊಂಡಿದ್ದೀನಿ, ಅಥವಾ ನನ್ನ ವೀಕೆಂಡುಗಳನ್ನ ಮಹಾ ಉಪಯೋಗಿಸಿಕೊಳ್ತಾ ಇದ್ದೀನಿ ಅಂತಾ ಕೊಚ್ಚಿಕೊಳ್ತಾ ಇಲ್ಲ. ಆದರೆ ಐದುದಿನಗಳಿಂದ ಓಡಿ ಬೇರೆಯದೇ ಲೋಕಕ್ಕೆ ಹೋಗುವ ತವಕದಲ್ಲಂತೂ ನಾನಿರಲ್ಲ. ಶನಿವಾರ ಭಾನುವಾರವೂ ಆಗಾಗ ಒಂದೆರಡು ಕಾಲ್ ತಗೊಳ್ಳೋದುಂಟು ಅಥವಾ ಮಿಂಚಂಚೆಗಳಿಗೆ ಉತ್ತರ ಬರೆಯುವುದುಂಟು. ಆದರೆ ಹಾಗೆಯೇ ಮಂಗಳವಾರ, ಸೋ ಕಾಲ್ಡ್ ಕೆಲಸದ ದಿನದಲ್ಲೂ, ಬೆಳಿಗ್ಗೆ ಹತ್ತಕ್ಕೇ ಕಾರ್ ತಗಂಡು ಯಾರೂ ಇರದ ದಾರಿಗಳನ್ನ ತಡವಿದ್ದೂ ಇದೆ.

ನನ್ನ ಪ್ರಯತ್ನ ಮತ್ತು ಸಲಹೆ ಎರಡೂ ಕೂಡಾ, ನಾವು ಉಳಿದ ಐದುದಿನದಲ್ಲಿ ಏನಾಗಲಿಕ್ಕೆ ಸಾಧ್ಯವಾಗಲಿಲ್ಲವೋ ಹಾಗೂ “ಈಗ ನಾವು ಮಾಡುತ್ತಿರುವ ಕೆಲಸವಲ್ಲದಿದ್ದರೆ, ನಮ್ಮ ಜೀವನದಲ್ಲಿ ಬೇರೆ ಏನಾಗ ಬಯಸಿದ್ದೆವೋ” ಅದನ್ನು ಕಟ್ಟಿಕೊಳ್ಳಲಿಕ್ಕೆ ವಿನಯೋಗಿಸಿದಷ್ಟೂ ಒಳ್ಳೆಯದು. ನಾನು ಚಿಕ್ಕವನಿದ್ದಾಗ ಸಿದ್ದರಮಠ ಎಂಬ ಹಳ್ಳಿಯಲ್ಲಿ ಸರ್ಕಾರೀ ಕ್ವಾರ್ಟರ್ಸಿನಲ್ಲಿದ್ದೆವು. ಹಳ್ಳಿ ಮನೆಯಾದ್ದರಿಂದ, ಮನೆ ಮುಂದೆ ಸುತ್ತ ಹಿಂದೆ ಎಲ್ಲಾ ಕಡೆಯೂ ಅಮ್ಮ ಹೂಗಿಡಗಳನ್ನೂ ತರಕಾರಿಗಳನ್ನೂ ಬೆಳೆಸಿದ್ದರು. ಇಡೀ ಮನೆಯಲ್ಲಿ ನನ್ನ ಫೇವರಿಟ್ ಜಾಗ ಅದಾಗಿತ್ತು. ಅದರದ್ದು ಭಯಂಕರ ಹುಚ್ಚಿತ್ತು. ನಾನೇ ಮನೆಯೊಳಗೆ ಡಬ್ಬದಲ್ಲಿ ಥಂಡಿ ಮಣ್ಣು ತುಂಬಿಸಿ, ಅಡುಗೆಮನೆಯ ಮೂಲೆಯಲ್ಲಿಟ್ಟು (ಬೀಜ ಮೊಳಕೆಯೊಡೆಯೋಕೆ ಥಂಡಿಯಿರುವ ಬೆಚ್ಚಗಿರುವ ಹಾಗೂ ಆದಷ್ಟೂ ಕತ್ತಲಿರುವ ಜಾಗ ಬೆಸ್ಟು) ಆದರಲ್ಲಿ ಬೀಜಗಳನ್ನು ಮೊಳಕೆಯೊಡೆಸಿ, ಆಮೇಲೆ ಹೊರಗಡೆ ನೆಟ್ಟು ಬೆಳೆಸೋವಷ್ಟು ಕಲಿತಿದ್ದೆ. ಅದಾದ ಮೇಲೆ ನಾವಿದ್ದ ಬೇರೆ ಬಾಡಿಗೆ ಮನೆಗಳಲ್ಲಿ ಎಲ್ಲೂ ನಮ್ಮ ಮನೆಯ ಸುತ್ತ ಹೂವು ತರಕಾರಿ ಬೆಳೆಸೋಕೆ ಆಗಲೇ ಇಲ್ಲ. ಈಗ ನಾನಿರೋ ಮನೆಯ ಮುಂದೆ ಹಿಂದೆ ಸ್ವಲ್ಪ ಜಾಗ ಇರೋದ್ರಿಂದ, ಮತ್ತೆ ಅದರ ಹುಚ್ಚು ಬಂದಿದೆ. ಮನೆಯಲ್ಲಿ ಜಾಗವಿದ್ದಲೆಲ್ಲಾ ಹೂಗಿಡ ಬೆಳೆಸಿಯಾಗಿದೆ. ಈ ಸಲ ಚಳಿಗಾಲದಲ್ಲಿ ತರಕಾರಿಯ ಪ್ರಯೋಗವೂ ಆಗಲಿಕ್ಕುಂಟು.

ಹಾಗೇ ಯೌವನದಲ್ಲಿದ್ದಾಗ ನನಗೆ ಕರಾಟೆ ಹಾಗೂ ಒಂದಾದರೂ ಸಂಗೀತೋಪಕರಣ ಕಲಿಯಬೇಕು ಅಂತಾ ಭಯಂಕರ ಆಸೆಯಿತ್ತು. ಅಪ್ಪನ ಪ್ರಕಾರ ಅವೆರಡೂ ಅವರ ದುಡ್ಡುವೇಸ್ಟು ಮಾಡುವ ಹಾಗೂ ಉಪಯೋಗವಿಲ್ಲದ ಕೆಲಸಗಳಾಗಿದ್ದವು. ಮುಂದಿನ ತಿಂಗಳಲ್ಲಿ ಮಗಳಿಗೆ ಪಿಯಾನೋ ಕ್ಲಾಸು ಶುರುವಾಗಲಿದೆ. ಅವಳನ್ನು ಸೇರಿಸುವಾಗ ನನ್ನ ಹೆಸರೂ ಆ ಪಟ್ಟಿಯಲ್ಲಿ ಸೇರಿಸಿದ್ದೇನೆ. ಅವಳನ್ನು ಅಲ್ಲಿವರೆಗೆ ಡ್ರೈವ್ ಮಾಡಿದಂಗೂ ಆಯ್ತು. ಸುಮ್ಮನೇ ಪಾರ್ಕಿಂಗಲ್ಲಿ ಕೂತು ಕಾಯುವ ಬದಲು ಅವಳ ಜೊತೆಗೆ ನಾನೂ ಕಲಿತಂಗೂ ಆಯ್ತು. ತಾವು ಪೂರೈಸಿಕೊಳ್ಳಲಾಗದ ಕೆಲ ಆಸೆಗಳನ್ನು “ನಾನಂತೂ ಕಲೀಲಿಲ್ಲ ನೀನಾದ್ರೂ ಕಲಿ” ಎಂದು ಹೇಳಿ ಪೋಷಕರು ಮಕ್ಕಳ ಮೇಲೆ ಹೇರುವುದುಂಟು. ಅದರ ಬದಲಿಗೆ ಅವರು ಕಲಿಯುವಾಗ ಜೊತೆಗೆ ನಾವೂ ಕಲಿತರೆ! ಕಲಿತಂಗೂ ಆಯ್ತು, ಮನೆಯಲ್ಲಿ ಒಟ್ಟಿಗೆ ಕೂತು ಪ್ರಾಕ್ಟೀಸು ಮಾಡಲಿಕ್ಕೂ ಆಯ್ತಲ್ಲ.

ಅ ಲೇಖನವನ್ನು ಗ್ರಹಣಾಕಾಂಕ್ಷಿಯಾಗಿ ಓದುವವರು ನೀವಾಗಿದ್ದರೆ, ನಾನು ಹೇಳೋದಿಷ್ಟೇ: Invest Your Weekends. Don’t Spend Them. ವೀಕೆಂಡುಗಳನ್ನು ಕಳೆಯಬೇಡಿ, ನಿಮ್ಮ ಮೇಲಿನ ನಿಮ್ಮ ಹೂಡಿಕೆಯಾಗಬೇಕಿರೋದೇ ಅಲ್ಲಿ. ಅದು ಯಾವಯಾವ ಹುಚ್ಚುಗಳು ತೆವಲುಗಳಿವೆಯೋ ಅದನ್ನು ಕಲಿಯೋಕೆ, ಅವನ್ನು ತೀರಿಸೋಕೆ ಅಂತಲೇ ವೀಕೆಂಡುಗಳು ಆದಷ್ಟೂ ಮೀಸಲಾಗಿರಲಿ. ಹಾಗೂ ಆ ಚಟುವಟಿಕೆಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದನ್ನು ಮರೆಯಬೇಡಿ. ದೈಹಿಕ ಅಗತ್ಯದ ಕೆಲಸಗಳನ್ನು ಬಿಟ್ಟು, ವಾರದ ಉಳಿದ ಐದು ದಿನದಲ್ಲಿ ನೀವು ಮಾಡಿದ ಯಾವ ಕೆಲಸಗಳೂ ಅಲ್ಲಿ ಮತ್ತೆ ಪುನಾವರ್ತನೆಯಾಗಬಾರದು. ಹಾಗೂ ವಾರಾಂತ್ಯದಲ್ಲಿ ಮಾಡುವ ಕೆಲಸಗಳು ನಿಮಗೆ ಸಂಪೂರ್ಣ ಸಂತೋಷ ಮತ್ತು ತೃಪ್ತಿಯನ್ನು ಕೊಡಲೇಬೇಕು. ಆ ಎರಡು ದಿನಗಳಲ್ಲಿ ಮುಂದಿನವಾರದ ತಯಾರಿಯ ಬಗ್ಗೆ ತಲೆಕೆಡಿಸಿಕೊಡಿಸಿಕೊಳ್ಳಬಾರದು. ಬದಲಿಗೆ ಈ ಎರಡು ದಿನ ಇನ್ನೂ ದೊಡ್ಡ ವಿಷಯಕ್ಕಾಗಿ, ಅಂದರೆ ಜೀವನಕ್ಕಾಗಿ, ತಯಾರಾಗುವುದರ ಬಗ್ಗೆ ಕಾಳಜಿ ವಹಿಸಬೇಕು. ಇದನ್ನು ನಾನು ನೀವು ಮತ್ತು ನಮ್ಮ ನಿಮ್ಮ ಸಂಗಾತಿಗಳು ಮಾಡಿದಾಗಲೇ, ನಮ್ಮ ಮಕ್ಕಳೂ ಇದನ್ನು ಕಲಿಯುವುದು. ಮಕ್ಕಳು ಐದು ದಿನ ಶಾಲೆಗೆ ಹೋಗಿ, ವೀಕೆಂಡಲ್ಲಿ ಮತ್ತದೇ ಪುಸ್ತಕ ಓದೋದು ಅಥವಾ ಹೋಂವರ್ಕು ಮಾಡಿ, ಆಮೇಲೆ ಅಯ್ಯೋ ನಮ್ಮ ಮಗು ಕುಡುಮಿಯಾಗ್ತಾ ಇದೆ ಕಣ್ರೀ ಅಂದರೆ ಹೆಂಗೆ ಹೇಳಿ?

(*) ನೀವೇನಾದರೂ ಹೊಸದನ್ನು ಕಲೀಬೇಕು ಅಂತಿದ್ದೀರಾ? ನಿಮ್ಮ ವಾರಾಂತ್ಯಗಳನ್ನು ಬಳಸಿ. ಮೈಕ್ರೋಸಾಫ್ಟ್ ಎಕ್ಸೆಲ್, ಅಡೋಬಿ ಫೋಟೋಶಾಪ್, ಜೇಡಿಮಣ್ಣಲ್ಲಿ ಮೂರ್ತಿ ಮಾಡೋದು ಅಥವಾ ಪಾಟರೀ, ಫೋಟೋಗ್ರಫಿಗಳಿಗಾಗಿಯೇ ಕ್ಲಬ್ಬುಗಳಿವೆ.

(*) ನೀವು ಯಾವಾಗಲೋ ಕಲಿತು ಅರ್ಥ ಮರೆತ ಅಥವಾ ಇನ್ನೂ ಕಲಿಯದಿರುವ ಯಾವುದರಲ್ಲಾದರೂ ಕೌಶಲ್ಯ ಬೆಳೆಸಿಕೊಂಡು, ಅದನ್ನು ಕರಗತ ಮಾಡಿಕೊಳ್ಳಲು ಬಯಸುತ್ತೀರಾ? ನಿಮ್ಮ ವೀಕೆಂಡುಗಳನ್ನ ಬಳಸಿ. ಇದು ಮಹಡಿ ಮೇಲೆ ಗಾರ್ಡನ್ ಬೆಳೆಸುವುದರಿಂದ ಹಿಡಿದು, ಡೀಜೆಯಿಂಗ್ ಅಥವಾ ಡ್ರಿಫ್ಟಿಂಗ್ ಕಲಿಯುವುದರ ತನಕ ಯಾವುದಾದರೂ ಆಗಬಹುದು.

(*) ನಿಮ್ಮೊಂದಿಗೆ ನೀವೇ ಹೆಚ್ಚು ಹತ್ತಿರವಾಗಿ, ನಿಮ್ಮನ್ನು ನೀವೇ ಹೆಚ್ಚು ಅರಿಯಲು ಅಥವಾ ನಿಮ್ಮನ್ನು ಉತ್ತಮಗೊಳಿಸಲು ನೀವು ಬಯಸುವಿರಾ? ನಿಮ್ಮ VO2Max ಹೆಚ್ಚಿಸಿಕೊಳ್ಳಬೇಕಾ, ಅಥವಾ ಒಂದುಸಲವಾದರೂ 10k ಅಥ್ವಾ ಹಾಫ್ ಮ್ಯಾರಾಥಾನ್ ಓಡಬೇಕು ಅಂತಿದ್ದೀರಾ? ಮೃತ್ಯುಂಜಯ ಜಪ ಅಥವಾ ಹನುಮಾನ್ ಚಾಲೀಸವನ್ನು ಬಾಯಿಪಾಠ ಮಾಡಬೇಕು ಅಂತಿದ್ದೀರಾ? Use your weekends.

ನಿಜಕ್ಕೂ ಹೇಳಬೇಕಂದರೆ, ವಾರದ ದಿನಗಳಿಗೂ ಮತ್ತು ವಾರಾಂತ್ಯಗಳಿಗೂ ಯಾವುದೇ ಹೆಚ್ಚಿನ ವ್ಯತ್ಯಾಸವಿಲ್ಲ. ಇವೆಲ್ಲಾ ನಾನು ನೀವು ಕಟ್ಟಿಕೊಂಡಿರೋ ಗೋಡೆಗಳಷ್ಟೇ. ನೀವು ಈ ಗಡಿಯನ್ನು ಎಷ್ಟು ವೇಗವಾಗಿ ದಾಟುತ್ತೀರಿ, ಎಷ್ಟು ಬೇಗ ಆ ಗೋಡೆಗೊಂದು ತೂತುಕೊರೆದುಕೊಳ್ಳುತ್ತೀರೋ, ನಿಮ್ಮ ಜೀವನದ ಲಾಂಗ್-ಟರ್ಮ್ ಗುರಿಗಳನ್ನು ನೀವು ಬೇಗ ಮುಟ್ಟುತ್ತೀರಿ. ಹಳ್ಳಿಗಳ ಕಡೆ ಹೋಗಿ ನೋಡಿದರೆ, ವೀಕೆಂಡ್ ಎನ್ನುವ ಪರಿಕಲ್ಪನೆಯೂ ಇರುವುದಿಲ್ಲ. ಅಲ್ಲಿರುವ ಜನ ಹೆಚ್ಚೆಂದರೆ ಭಾನುವಾರ ಸ್ವಲ್ಪ ಕಡಿಮೆ ಕೆಲಸ ಮಾಡಬಹುದೇನೋ. ಆದರೆ ಕೆಲಸಕ್ಕೂ ಕ್ಯಾಲೆಂಡರಿನ ದಿನಕ್ಕೂ ಹೆಚ್ಚೇನೂ ವ್ಯತ್ಯಾಸವೇ ಇರಲ್ಲ ಅನ್ನೋದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಸೂಕ್ಷವಾಗಿ ಗಮನಿಸುವವರು ನೀವಾದರೆ ಇದೇ ಮನಸ್ಥಿತಿ ಪೇಟೆಯಲ್ಲೂ ಕೆಲವು ವೃತ್ತಿಯಲ್ಲಿರುವವರಲ್ಲಿದೆ. ಆ ಕೆಲಸಗಳಿಗೆ ಹೆಚ್ಚಿನ ಬ್ಯುಸಿನೆಸ್ಸು ಸಿಗೋದೇ ನಮ್ಮ ನಿಮ್ಮ ವೀಕೆಂಡಿನಲ್ಲಿ. ಪುರೋಹಿತರೂ, ಬಾಣಸಿಗರೂ, ಕ್ಷೌರಿಕರೂ, ಟೂರ್ ಆಪರೇಟರುಗಳೂ ಇವ್ರಿಗೆಲ್ಲಾ ನಿಮ್ಮ ವೀಕೆಂಡೇ ಮುಖ್ಯ ಕೆಲಸದ ದಿನಗಳು. ಇದರಲ್ಲೂ ಕೆಲ ವೃತ್ತಿಗಳಲ್ಲಿ ವೀಕೆಂಡು ಅಂದರೇನು ಅಂತಲೇ ಗೊತ್ತಿರಲ್ಲ.

ನಮ್ಮಂತಹಾ ಪಂಚದಿನ ಕಾರ್ಮಿಕರ ವಿಷಯಕ್ಕೆ ಮರಳಿ ಬರುವುದಾದರೆ, ಹೆಚ್ಚೆಂದರೆ ಈ ವೀಕೆಂಡುಗಳು ಲಾಟರಿ ಗೆದ್ದಂತೆ ಅಷ್ಟೇ ಅಂತಾ ಹೇಳಬಲ್ಲೆ. ಆದರೆ ಬಹಳಷ್ಟು ಜನ ವೀಕೆಂಡ್ ಅನ್ನು ಬೋನಸ್ ಅಂತಾ ಪರಿಗಣಿಸಿ, ತಪ್ಪಾಗಿ ಖರ್ಚು ಮಾಡುತ್ತಾರೆ. ಅದಕ್ಕಿಂತಲೂ ತಮಾಷೆಯೆಂದರೆ ಈ ವೀಕೆಂಡಿಗಾಗಿಯೇ ನಮ್ಮಲ್ಲಿ ಬಹಳಷ್ಟು ಜನರು ಹೆಚ್ಚಿನ ಹಣವನ್ನೂ ವ್ಯಯಿಸುತ್ತಾರೆ. ಇಡೀ ವಾರವೂ ಹೊರಗೆ ಊಟಮಾಡಿದರೂ ಖರ್ಚಾದದ್ದಕ್ಕಿಂತಲೂ, ಐದಾರುಪಟ್ಟು ಎರಡು ದಿನದಲ್ಲಿ ಖರ್ಚಾಗಿರುತ್ತದೆ. ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ವಲಯದಲ್ಲಿ ಹೌಸ್-ಮನಿ ಎಫೆಕ್ಟ್ ಎಂಬುದೊಂದು ಥಿಯರಿಯಿದೆ. ಮೊದಲ ಬಾರಿಗೆ ನೀವು ಸ್ಟಾಕ್ ಮಾರ್ಕೆಟ್ ಅಥವಾ ಮ್ಯೂಚುವಲ್ ಫಂಡುಗಳಲ್ಲಿ ಹೂಡಿಕೆಮಾಡುವಾಗ ನಾವು ತುಂಬಾ ಎಚ್ಚರಿಕೆಯಿಂದ ಇರ್ತೀವಿ. ಆದಷ್ಟೂ ಕಡಿಮೆ ರಿಸ್ಕ್ ಇರುವಲ್ಲಿಯೇ ನಮ್ಮ ಹೂಡಿಕೆಯನ್ನು ಮಾಡ್ತೀವಿ. ಆದರೆ ಅದರಿಂದ ಒಂದು ವರ್ಷ ಅಥವಾ ಐದು ವರ್ಷದ ನಂತರ ಬರುವ ಲಾಭದ ಹಣವಿದೆಯಿಲ್ಲಾ ಅದನ್ನು ಮರುಹೂಡಿಕೆ ಮಾಡುವಾಗ ಹೆಚ್ಚಿನ ರಿಸ್ಕ್ ಇರುವಲ್ಲಿ ಹೂಡಿಕೆ ಮಾಡಲಿಕ್ಕೆ ಹೆಚ್ಚು ಯೋಚಿಸಲ್ಲ. ಈ ವರ್ತನೆಯನ್ನು ಹೌಸ್-ಮನಿ ಎಫೆಕ್ಟ್ ಅನ್ನುತ್ತಾರೆ ಹಾಗೂ ಬ್ಯಾಂಕರುಗಳು ನಿಮ್ಮ ಲಾಭವನ್ನು ಮರುಹೂಡಿಕೆಮಾಡಿಸುವಾಗ ಇಲ್ಲಿ ಹೆಚ್ಚಿನ ಲಾಭ ಇದೆ ನೋಡಿ ಸಾರ್ ಅಂತಾ ಹೈ ರಿಸ್ಕ್ ಪೋರ್ಟ್-ಫೋಲಿಯೋದೆಡೆಗೆ ನಿಮ್ಮನ್ನು ಆಕರ್ಷಿಸುತ್ತಾರೆ. ಹಾಗೆಯೇ ನಗರದಲ್ಲಿ ಹೋಟೆಲು ಪಬ್ಬುಗಳು “ಇಲ್ಲಿ ಹೆಚ್ಚು ಮಜಾ ಇದೆ ನೋಡಿ ಸಾರ್” ಎನ್ನುತ್ತಾ ನಿಮ್ಮ ಹೆಚ್ಚಿನ ಖರ್ಚಿನೆಡೆಗೆ ಸೆಳೆಯುತ್ತಾರೆ. ನಿಮ್ಮ ವೀಕೆಂಡುಗಳು ನೀವು ಕಷ್ಟಪಟ್ಟು ಸಂಪಾದಿಸಿದ್ದು. ಅದನ್ನು ವ್ಯಯಿಸುವಾಗ, ಹಾಗೂ ಆ ದಿನಗಳಲ್ಲಿ ನಿಮ್ಮ ಆದಾಯವನ್ನು ವ್ಯಯಿಸುವಾಗಲೂ ಜೋಪಾನವಿರಲಿ.

0 comments on “ನಿಮ್ಮ ವಾರಾಂತ್ಯಗಳು ಹೂಡಿಕೆಗಳೋ? ಖರ್ಚೋ?

Leave a Reply

Your email address will not be published. Required fields are marked *