Wednesday, 08 May, 2024

ಗೆಲುವಿನ ಮತ್ತಿನಲ್ಲಿರುವ ಕಾಂಗ್ರೆಸ್, ಸೋಲಿನಿಂದ ಸತ್ತಂತಿರುವ ಬಿಜೆಪಿ

Share post

ಚುನಾವಣೆಗಳು ಮುಗಿದು, ಪಲಿತಾಂಶ ಪ್ರಕಟವಾಗಿ ಮೂರುವಾರ ಕಳೆದಿದೆ. ಮೂರೂ ಪ್ರಮುಖ ಪಕ್ಷಗಳು ತಮ್ಮ ನೈಸರ್ಗಿಕ ಗುಣಗಳನ್ನು ಮತ್ತೆ ರಾಜ್ಯದ ಜನರ ಮುಂದೆ ಖುಲ್ಲಂಖುಲ್ಲಾ ಪ್ರದರ್ಶನಕ್ಕಿಟ್ಟಿವೆ. ಚುನಾವಣೆ ಮುಗಿದಕೂಡಲೇ “ಸಧ್ಯಕ್ಕೆ ತಮ್ಮ ಕೆಲಸ ಮುಗಿದಿದೆ, ಇನ್ನು ಐದು ವರ್ಷ ನಮಗೇನೂ ಕೆಲಸವಿಲ್ಲ” ಎನ್ನುತ್ತಾ ಜೆಡಿಎಸ್ ಪುನಃ ನಿದ್ರೆಗೆ ಜಾರಿದೆ. ಬಹುಷಃ ಕುಮಾರಸ್ವಾಮಿಯವರು 2028ರ ಜನವರಿಯಲ್ಲಿ ಮತ್ತೊಂದಷ್ಟು ಹೊಸಹೊಸರೀತಿಯ ಹಾರಗಳ ಆಲೋಚನೆಗಳೊಂದಿಗೆ, ಪಂಚರತ್ನ ಅಷ್ಟಕೋನ ಯಾತ್ರೆಗಳ ಆಲೋಚನೆಯೊಂದಿಗೆ ಚುನಾವಣಾ ಪ್ರಚಾರಕ್ಕೆ ತಯಾರಾಗಿ ಮುನ್ನೆಲೆಗೆ ಬರಲಿದ್ದಾರೆ. ಬಿಜೆಪಿ ಯಥಾಪ್ರಕಾರವಾಗಿ ತನ್ನ ಆತ್ಮವಿಶ್ವಾಸರಹಿತ ವ್ಯಕ್ತಿತ್ವಕ್ಕನುಗುಣವಾಗಿ, ಪ್ರೇಮನಿವೇದನೆಯ ತಿರಸ್ಕಾರಕ್ಕೊಳಗಾಗಿ ಜೀವನವೇ ಮುಗಿದುಹೋಯ್ತು ಎಂದುಕೊಂಡು ಕತ್ತಲಕೋಣೆಯಲ್ಲಿರುವ ಯುವಕನಂತೆ ಕೈಚೆಲ್ಲಿ ಕೂತಿದೆ. ಬಿಜೆಪಿಯ ಸಧ್ಯದ ಪ್ರತಿಕ್ರಿಯೆ (ಅಥವಾ ಪ್ರತಿಕ್ರಿಯಾರಾಹಿತ್ಯ) ನೋಡಿದರೆ ಬಹುಷಃ 2024 ಮತ್ತು 2028ರ ಚುನಾವಣೆಗಳನ್ನೂ ಈಗಲೇ ಸೋತು ಕೂತಂತಿದೆ.

ಕಾಂಗ್ರೆಸ್ಸಿನ ವಿಚಾರಕ್ಕೆ ಬಂದರೆ, ಕಾಂಗ್ರೆಸ್ಸು ಈ ಮೊದಲೂ ತನ್ನ ಮದಕ್ಕೇ ಹೆಸರಾದ ಪಕ್ಷ. ಕೇಂದ್ರಮಟ್ಟದಲ್ಲಾಗಲೀ, ರಾಜ್ಯಮಟ್ಟದಲ್ಲಾಗಲೀ, ಗ್ರಾಮಪಂಚಾಯಿತಿ ಮಟ್ಟದಲ್ಲಾಗಲೀ ಅಧಿಕಾರ ಕೈಗೆ ಬಂದಾಗಲೆಲ್ಲಾ ಕಾಂಗ್ರೆಸ್ ಅದನ್ನು ತನ್ನೆಲ್ಲಾ ವೈಯುಕ್ತಿಕ ದ್ವೇಷಗಳಿಗೆ ಚೆನ್ನಾಗಿ ಬಳಸಿಕೊಂಡಿದೆ. ದ್ವೇಷದ ರಾಜಕಾರಣಕ್ಕೂ ಕಾಂಗ್ರೆಸ್ಸಿಗೂ ಬಹಳ ಹಳೆಯ ಇತಿಹಾಸವಿದೆ. ತನಗಾಗದವರನ್ನು ಮಟ್ಟಹಾಕಿದ ಜವಾಹರ ಲಾಲ್ ನೆಹ್ರೂ, ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ ಇಂದಿರಾಗಾಂಧಿ, ದೊಡ್ಡಮರವೊಂದು ಬಿದ್ದಾಗ ಭೂಮಿ ಅದುರುತ್ತದೆ ಎಂದು ಹೇಳಿ ತನ್ನಮ್ಮನ ಸಾವಿಗೆ ಪ್ರತೀಕಾರವಾಗಿ ಸಿಖ್ ನರಮೇಧವನ್ನು ಸಮರ್ಥಿಸಿಕೊಂಡ ರಾಜೀವ್ ಗಾಂಧಿ, 2002ರಿಂದ ಮೋದಿಯನ್ನು ಇನ್ನಿಲ್ಲದಂತೆ ಕಾಡಿದ ಸೋನಿಯಾ ಮತ್ತವರ ಪಕ್ಷದ ಮುಖಂಡರು….ಈ ಎಲ್ಲ ಕಥೆಗಳೂ ದೇಶದ ಸಾಕ್ಷಿಪ್ರಜ್ಞೆಯಾದ ಮತದಾರನಿಗೆ ತಿಳಿದಿದೆ, ನೆನಪಿದೆ. ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರೇ ಮುಂದೆನಿಂತು ಬಿಜೆಪಿ ಕಾರ್ಯಕರ್ತರ ಮೇಲೆ ಪೋಲೀಸ್ ಕೇಸ್ ಹಾಕಿಸಲು ಪ್ರಯತ್ನಿಸಿದ್ದು, ಸಾಮಾಜಿಕ ತಾಣಗಳ ಕತ್ತುಹಿಸುಕಲು ಪ್ರಯತ್ನಿಸಿದ್ದು ಸುದ್ಧಿಯಾಗಿತ್ತು. ಈ ಬಾರಿಯ ಕರ್ನಾಟಕ ಚುನಾವಣೆಯೂ ಇದಕ್ಕೆ ಹೊರತೇನಲ್ಲ.

ಕಳೆದ ಮೂರುವಾರದ ಘಟನೆಗಳನ್ನೇ ಗಮನಿಸಿನೋಡಿ. ಪಲಿತಾಂಶ ಬಂದ ದಿನದ ನಂತರದ ಮೂರ್ನಾಲ್ಕು ದಿನಗಳಲ್ಲೇ ಕಾಂಗ್ರೆಸ್ ವಿಜಯೋತ್ಸವ ನಡೆದ ಜಾಗಗಳಲ್ಲಿ ಹಿಂಸಾಚಾರ, ಅನಾಗರೀಕ ವರ್ತನೆಗಳು, ಚೂರಿ ಇರಿತ, ಸಾವುಗಳೂ ನಡೆದವು. ಮುಖ್ಯಮಂತ್ರಿಗಳ ಬಗ್ಗೆ ಮಾತಾಡಿದ್ದಾನೆ ಎಂಬ ಕಾರಣಕ್ಕಾಗಿ ಮೊನ್ನೆ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಬೆಂಗಳೂರಿನ ರಸ್ತೆಯಲ್ಲಿ ಜನರಮುಂದೆಯೇ ಅಟ್ಟಾಡಿಸಿ ಹೊಡೆದಾಯ್ತು. ಮಾನ್ಯ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ, ಅವರ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರೇ ಸಾಮಾಜಿಕ ತಾಣಗಳಲ್ಲಿ “ಯಾರಾದರೂ ಸರ್ಕಾರದ ಬಗ್ಗೆ ಅಥವಾ ಮುಖ್ಯಮಂತ್ರಿಗಳ ಬಗ್ಗೆ ಅನುಚಿತವಾಗಿ ಮಾತನಾಡಿದರೆ, ನನಗೆ ತಿಳಿಸಿ. ನಾನೇ ಮುಂದೆ ನಿಂತು ಎಫ್ಐಆರ್ ಮಾಡಿಸಿಕೊಡುತ್ತೇನೆ” ಎನ್ನುತ್ತಾರೆ ಎಂದರೆ, ಕಾಂಗ್ರೆಸ್ ಆಡಳಿತದಲ್ಲಿ ಪೋಲೀಸರು ಅದೆಂತಾ ಹಲ್ಲುಕಿತ್ತ ಹಾವುಗಳಾಗಿರಬಹುದು!? ಯಾರು ಬೇಕಾದರೂ ಪೋಲೀಸರ ಬಳಿ ಹೋಗು ದೂರುಕೊಡಬಹುದು ಎಂಬುದು ನನಗೂ ಗೊತ್ತಿರುವ ವಿಚಾರ. ಆದರೆ ಎಫ್ಐಆರ್ ಆಗಬೇಕೆಂದರೆ ಪೋಲೀಸರಿಗೆ ಆ ದೂರಿನಲ್ಲಿ ಭಾರತೀಯ ದಂಡಸಂಹಿತೆಯ ಆಧಾರದ ಮೇಲೆ ಒಂದೊಳ್ಳೆಯ ಕಾರಣ ಸಿಗಬೇಕು. ಹಾಗೂ ಆ ಕಾರಣ ಪೋಲೀಸರಿಗೇ ಸಿಗಬೇಕು, ದೂರು ಕೊಡುವ ನನಗೆ ನಿಮಗಲ್ಲ. ಅದಿದ್ದಾಗ ಮಾತ್ರ ಎಫ್ಐಆರ್ ದಾಖಲಾಗಲು ಸಾಧ್ಯ. ಪೋಲೀಸರಿಗಿಂತಲೂ ಮುಂಚೆಯೇ ಒಂದುಹೆಜ್ಜೆ ಮುಂದೆಹೋಗಿ ಕಾಂಗ್ರೆಸ್ ಕಾರ್ಯಕರ್ತರು ಎಫ್ಐಆರ್ ಹಾಕಿಸಿಕೊಡುವ ಜವಾಬ್ದಾರಿ ನನ್ನದು ಎನ್ನುತ್ತಾರೆ ಎಂದರೆ, ರಾಜ್ಯದ ಪೋಲೀಸರ ಜವಾಬ್ದಾರಿಯನ್ನೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕೈಗೆ ತೆಗೆದುಕೊಂಡಿದ್ದಾರೇನೋ ಎಂಬ ಅನುಮಾನ ಬಾರದಿರದು. ಮುಂದಿನ ದಿನಗಳಲ್ಲಿ ಸೈಬರ್ ಮತ್ತು ಟ್ರಾಫಿಕ್ ಪೋಲೀಸರ ಜವಾಬ್ದಾರಿಯೂ ಕಾಂಗ್ರೆಸ್ ಕಾರ್ಯಕರ್ತರೇ ನಿರ್ವಹಿಸುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.

ವೈಯುಕ್ತಿಕ ದ್ವೇಷಸಾಧನೆಗೆ ಎಲ್ಲಾ ದಾರಿಗಳನ್ನು ಬಳಸುವ ಅಭ್ಯಾಸವಿರುವ ಕಾಂಗ್ರೆಸ್ ಕಾಲದಲ್ಲಿ, ಅದರ ಶತ್ರುಗಳನ್ನು ಹೆಡೆಮುರಿಕಟ್ಟುವಂತೆ ಈ ಅಧಿಕಾರಿಗಳ ಮೇಲೆ ಅತೀವ ಒತ್ತಡ ಇರುತ್ತದೆ ಎಂಬುದನ್ನು ಮರೆಯಬಾರದು. ಪೋಲೀಸರ ಹಾಗೂ ಆಡಳಿತಾಧಿಕಾರಿಗಳ ಮೇಲೆ ಒತ್ತಡ ಕಾಂಗ್ರೆಸ್ ಆಡಳಿತದಲ್ಲಿ ಇದೇ ಮೊದಲಲ್ಲ. ಹಿಂದಿನ ಅಧಿಕಾರವಧಿಯಲ್ಲಿ ಡಿ.ಕೆ.ರವಿ ಮತ್ತು ಗಣಪತಿಯಂತಾ ಅಧಿಕಾರಿಗಳ ಸಾವು ನಡೆದಿತ್ತು. ಈ ಬಾರಿ ಅದಿನ್ನೆಷ್ಟು ಕೆಎಎಸ್, ಐಎಎಸ್, ಕೆಪಿಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೆಲಸ ಮತ್ತು ಜೀವಕ್ಕೆ ಕುತ್ತು ಕಾದಿದೆಯೋ!? ಈ ಅಧಿಕಾರಗಳನ್ನು ಮಾತ್ರವಲ್ಲದೇ, ನಿಗಮ ಮಂಡಳಿಗಳನ್ನು ವಿಸರ್ಜಿಸಿ ಮತ್ತು ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನೂ ತೆಗೆದುಹಾಕಿ ತಮ್ಮದೇ ಹೊಗಳುಭಟರನ್ನು ತಂದುಕೂರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಹಿಂದಿನ ಎಲ್ಲಾ ನಿಗಮಗಳಿಗೆ ಕೊಡಲಾಗಿದ್ದೆ ಅನುದಾನಗಳನ್ನು ತಡೆಹಿಡಿಯಲಾಗಿದೆ, ಸರ್ಕಾರದ ಎಲ್ಲಾ ಕೆಲಸಕಾರ್ಯಗಳ ಬಿಲ್’ಗಳನ್ನು ತಡೆಹಿಡಿಯಲಾಗಿದೆ. ಪ್ರತ್ಯೇಕ ಸೈಬರ್ ಪೋಲೀಸ್ ಅಧಿಕಾರಿಯನ್ನು ನೇಮಿಸಿ ಸರ್ಕಾರದ ಬಗ್ಗೆ ಬರುವ ಎಲ್ಲಾ ಸುದ್ಧಿಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ. ಒಟ್ಟಿನಲ್ಲಿ ತಮಗೆ ಬೇಕಾದವರನ್ನು ಆಯಕಟ್ಟಿನ ಜಾಗದಲ್ಲಿ ಕೂತು, ತಮಗಾಗದವರನ್ನು ಆಟವಾಡಿಸಲು ಕಾಂಗ್ರೆಸ್ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೆಲ್ಲಾ ಪ್ರಶ್ನಿಸಬೇಕಾದ ಅಥವಾ ಪ್ರತಿಭಟಿಸಬೇಕಾದ ಬಿಜೆಪಿಯಿಂದ ಇದುವರೆಗೂ ಒಂದೇ ಒಂದು ಖಂಡನೆಯ ಹೇಳಿಕೆಯೂ ಬಂದಿಲ್ಲ. ಅಧಿಕಾರದಲ್ಲಿದ್ದಾಗ ಕಠಿಣಕ್ರಮದ ಕೈಗೊಳ್ಳುವ ಮಾತನ್ನಾದರೂ ಆಡುತ್ತಿದ್ದ ಬಿಜೆಪಿ, ಸಧ್ಯಕ್ಕೆ ಹೊಸದಾಗಿ ಮದುವೆಯಾಗಿ ಅತ್ತೆಮನೆಗೆ ಬಂದ, ಮೊದಲದಿನವೇ “ಮೂವತ್ತು ಜನರಿಗೆ ಕಾಫಿ-ತಿಂಡಿ ಮಾಡು, ಮನೆಯಲ್ಲಿ ಕಲಿಸಿರಬೇಕಲ್ಲಾ” ಎಂದು ಗಡುಸಾಗಿ ಹೇಳಿದ ಅತ್ತೆಯ ಮಾತಿಗೆ ಬೆದರಿದ ಸೊಸೆಯಂತೆ ಗಾಬರಿಯಾಗಿ ಕೂತಿದೆ. ಮೊದಲೆರಡು ವಾರಗಳಲ್ಲಿ “ಇನ್ನೂ ತನ್ನ ಸೋಲಿನ ಆಘಾತದಿಂದ ಹೊರಬಂದಿಲ್ಲವೇನೋ” ಎಂದುಕೊಂಡಿದ್ದ ನಮ್ಮೆಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿ, ಸೋಲನ್ನೇ ತಲೆದಿಂಬಾಗಿಸಿಕೊಂಡು, ಸೋಲನ್ನೇ ಚಾದರವನ್ನಾಗಿಸಿಕೊಂಡು ರಾಜ್ಯ ಬಿಜೆಪಿ ಗಡದ್ದಾಗಿ ನಿದ್ದೆಹೊಡೆದುಬಿಟ್ಟಿದೆ. ಎಲ್ಲಾ ಕಡೆಯೂ ಗೆದ್ದ ಅಭ್ಯರ್ಥಿಯೋ, ಪಕ್ಷವೋ ತನ್ನ ವಶೀಲಿ ಬಳಸಿ, ಕ್ಷುಲ್ಲಕ ಕಾರಣಗಳನ್ನು ಹಿಡಿದುಕೊಂಡು ಎದುರಾಳಿಯ ಕಡೆಯವರಿಗೆ ಪೋಲೀಸರ ಬೆತ್ತದ ರುಚಿ ತೋರಿಸುವುದುಂಟು. ಅದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ, ಕಾಂಗ್ರೆಸ್ ಅಧಿಕಾರದಲ್ಲಿರುವಾಗ, ಬಿಜೆಪಿ ರಾಜ್ಯಾಧ್ಯಕ್ಷರ ಪೋಟೋಗೆ ಚಪ್ಪಲಿಹಾರ ಹಾಕಲಾಯ್ತು ಎಂಬ ಕಾರಣಕ್ಕೆ ಬಿಜೆಪಿಯವರೇ ಕೊಟ್ಟದೂರಿನನ್ವಯ ಬಿಜೆಪಿಯದ್ದೇ ನಾಲ್ಕು ಕಾರ್ಯಕರ್ತರನ್ನು ಠಾಣೆಗೆ ಕರೆದೊಯ್ದು, ಅಕ್ಷರಶಃ ರಕ್ತ ಹೆಪ್ಪುಗಟ್ಟುವಂತೆ ಹೊಡೆಯಲಾಯ್ತು!! ಫೋಟೋಗೆ ಚಪ್ಪಲಿ ಹಾರ ಹಾಕಿದ್ದಕ್ಕೇ, ರಕ್ತ ಹೆಪ್ಪುಗಟ್ಟುವಂತೆ, ತೊಡೆಯ ಚರ್ಮ ಸೀಳಿ ಮಾಂಸ ಹೊರಬರುವಂತೆ ಹೊಡೆಯುವ ಯಾವ ಅಗತ್ಯವೂ ಇರಲಿಲ್ಲ. ಇಷ್ಟಾದರೂ ಅಲ್ಲಿನ ಫೋಲೀಸ್ ಅಧಿಕಾರಿಗೆ ಯಾವ ಶಿಕ್ಷೆಯೂ ಆಗಿಲ್ಲ. “ಇದು ನಮ್ಮ ಕೆಲಸವಲ್ಲ, ನಾವಿಂತಾ ಸಣ್ಣಮಟ್ಟದ ರಾಜಕೀಯ ಮಾಡುವುದಿಲ್ಲ” ಎನ್ನುವ ಹೇಳಿಕೆಯಾಗಲೀ ರಾಜಕೀಯದಲ್ಲಿ ತೀರಾ ಸಾಮಾನ್ಯವಾದ “ಇದು ವಿರೋಧಿಗಳ ಕೈವಾಡ” ಎನ್ನುವ ಕ್ಲೀಷೆಯ ಮಾತಾಗಲೀ ಬರದ ಬಿಜೆಪಿಯ ಕಾರ್ಯವೈಖರಿಯೇ ಜನರಿಗೆ ಅನುಮಾನ ಹುಟ್ಟಿಸುವಂತಿದೆ.

ಈಶ್ವರಪ್ಪನವರ ಮೇಲೆ 40% ಭ್ರಷ್ಟಾಚಾರದ ಆರೋಪ ಮಾಡಿದ ಕೆಂಪಣ್ಣನವರು ಡಿ.ಕೆ.ಶಿವಕುಮಾರ್ ಅವರ ನಿಕಟವರ್ತಿ ಹಾಗೂ ಅವರ ಪಿಡಬ್ಲ್ಯೂಡಿ ಲೈಸೆನ್ಸು ಅವಧಿ ಮುಗಿದು 2 ವರ್ಷವಾಗಿದೆ ಎಂಬ ಸುದ್ಧಿಯಿದೆ. ಹಾಗಿದ್ದಮೇಲೆ ಯಾವ ಸರ್ಕಾರೀ ಕೆಲಸಕ್ಕೆ ಅವರು ಲಂಚ ಕೊಟ್ಟರು? ರಾಜ್ಯ ಬಿಜೆಪಿ ಈ ಆರೋಪಗಳ ವಿರುದ್ಧ ಮಾತನಾಡಿದ್ದಾಗಲೀ, ನಿರಾಕರಿಸಿದ್ದಾಗಲೀ ನಾವು ಕೇಳಲಿಲ್ಲ, ಓದಲಿಲ್ಲ, ನೋಡಲಿಲ್ಲ. ಕೇಂದ್ರ ವರಿಷ್ಠರ ಹಿಡಿತದಿಂದ ಹೊರಬರಲಿಕ್ಕೆ, ಹೈಕಮಾಂಡ್ ಅಂಕುಶದಿಂತ ತಪ್ಪಿಸಿಕೊಳ್ಳಲಿಕ್ಕೇ, ರಾಜ್ಯ ಬಿಜೆಪಿ ನಾಯಕರು 40% ಆಪಾದನೆಯನ್ನು ಕುಡಿದು ವಿಷಕಂಠರಾದರೇ? ಎಂಬ ಅನುಮಾನಗಳೂ ಬರದಿರದು.

ಇಷ್ಟರ ನಡುವೆ ಇನ್ನೂ ಬಿಜೆಪಿಯ ಸೋಲಿನ ಆತ್ಮಾವಲೋಕನವೇ ಮುಗಿದಿಲ್ಲ. ಕಳೆದವಾರ ನಡೆದ ಸಭೆಯಲ್ಲಿ ತಮ್ಮ ಸೋಲಿಗೆ ಕಾರಣವಾದ ಒಂದಷ್ಟು ಕಾರಣಗಳನ್ನು ಪಕ್ಷ ವರದಿ ಮಾಡಿತು. ಅದನ್ನು ನೋಡಿದ ಮತದಾರರು ಅದ್ಯಾವ ರೀತಿ ನಕ್ಕಿದ್ದಾರೆಂದರೆ, ಚುನಾವಣೆ ಗೆದ್ದ ದಿನ, ಬಿಜೆಪಿಯ ಹೀನಾಯ ಸೋಲನ್ನು ನೋಡಿ ಕಾಂಗ್ರೆಸ್ಸಿಗರೂ ಅಷ್ಟು ನಕ್ಕಿರಲಿಕ್ಕಿಲ್ಲ. ಬಿಜೆಪಿಗೆ ಇನ್ನೂ ತನ್ನ ಸೋಲನ್ನು, ಸೋಲಿನ ಕಾರಣಗಳನ್ನು ಜೀರ್ಣಿಸಿಕೊಳ್ಳಲಿಕ್ಕೇ ಸಾಧ್ಯವಾಗಿಲ್ಲ. ಹಾಗಾಗಿ ನಿಜವಾದ ಕಾರಣಗಳನ್ನು ಮುಚ್ಚಿಟ್ಟು, ತಾನು ತಿಂದು ಕುರಿಯ ಮೂತಿಗೆ ಒರೆಸಿದ ವಾನರನಂತೆ, ಯಾವ್ಯಾವುದೋ ಕಾರಣಗಳ ಹಿಂದೆ ಅವಿತುಕೊಂಡು, ತನ್ನ ಹೀನಾಯ ತಂತ್ರಗಾರಿಕೆಯನ್ನು ಮರೆಮಾಚುವ ಪ್ರಯತ್ನ ನಡೆಸಿದೆ. ತನ್ನ ಒಳಜಗಳಗಳು, ಪಟ್ಟಿ ಬಿಡುಗಡೆಗೇ ತೆಗೆದುಕೊಂಡ ಗಜಗರ್ಭದ ಸಮಯ, ಕಾರ್ಯಕರ್ತರ ಮಾತನ್ನೂ ಬದಿಗಿಟ್ಟು ಅದ್ಯಾವುದೋ ಸರ್ವೇಗಳ ಮೇಲೆ ಸರ್ವೇ ನಡಿಸಿ ಮಾಡಿದ ಅಭ್ಯರ್ಥಿಗಳ ಕೆಟ್ಟ ಆಯ್ಕೆ, ಆಯ್ಕೆ ಮಾತ್ರವಲ್ಲ ಮತ್ತದನ್ನು ಸಮರ್ಥಿಸಿಕೊಂಡ ಕೆಟ್ಟ ರೀತಿ ಇದ್ಯಾವುದೂ ಇನ್ನೂ ತಿಳಿಯದೇ ಹೋಗಿದೆ ಎಂದಾದರೆ, ನಿಜಕ್ಕೂ ಈ ಬಿಜೆಪಿ ಈ ಮೊದಲು ರಾಜ್ಯದಲ್ಲಿ ಆಡಳಿತ ನಡೆಸಿತ್ತೇ ಎಂಬ ಅನುಮಾನವೂ ಕಾಡುತ್ತದೆ.

ಬಿಜೆಪಿಯ ಆತ್ಮಾವಲೋಕನ ಮಾತ್ರವಲ್ಲ, ಅದರ ಸೋಲೂ ಮುಗಿದಂತೆ ಕಾಣುತ್ತಿಲ್ಲ. ಯಾಕೆಂದರೆ ಹೊಸ ಸರ್ಕಾರದ ಸೊಕ್ಕಿನ ವಿರುದ್ಧ ಮಾತನಾಡುವುದಿರಲಿ, ತಮ್ಮೊಳಗೇ ಒಬ್ಬ ವಿರೋಧಪಕ್ಷದ ನಾಯಕನನ್ನು ಆಯ್ಕೆ ಮಾಡಲಿಕ್ಕೆ ರಾಜ್ಯಬಿಜೆಪಿಗೆ ಸಾಧ್ಯವಾಗಿಲ್ಲ. 40% ಕಮಿಷನ್, ಅಮುಲ್-ನಂದಿನಿ ತಿಕ್ಕಾಟದ ವಿಚಾರಗಳಿಗೆ ಒಂದು ಪ್ರೆಸ್ ಕಾನ್ಫರೆನ್ಸ್ ಅನ್ನೂ ನಡೆಸದೇ, ಮೋದಿಯ ಯೋಜನೆಗಳಲ್ಲಿ ಒಂದೇ ಒಂದನ್ನೂ ಜನರಿಗೆ ತಿಳಿಸುವ ಕೆಲಸ ಮಾಡದೇ, ಆದರೆ ಚುನಾವಣಾ ಪ್ರಚಾರಕ್ಕೆ ಮಾತ್ರ ಮೋದಿ ಯೋಗಿಯನ್ನು ಕರೆಸಿಕೊಂಡು, ಕೆಲಸಕ್ಕೆ ಬಾರದ ಸಾಫ್ಟ್ ಹಿಂದುತ್ವದ ಹಿಂದೆ ಬಿದ್ದು, ಕಠಿಣಕ್ರಮ ಎಂಬ ಜೋಕು ಹೇಳುತ್ತಾ ಸಮಯಕಳೆದ ಹಿಂದಿನ ಸರ್ಕಾರದ ದುರ್ಬಲ ಬ್ರಾಂಡ್-ವ್ಯಾಲ್ಯೂ ನಡುವೆಯೂ ಗೆದ್ದ 66 ಜನರನ್ನು ಅಭಿನಂದಿಸುವ ಒಂದು ಮಾತು ಇನ್ನೂ ಪಕ್ಷದಿಂದ ಬಂದಿಲ್ಲ. ಜನರಿಗೆ ಒಳ್ಳೆಯದಾಗುವಂತಾ ಯಾವುದೋ ಒಂದು ಕೆಲಸವನ್ನು ಮಾಡಿಯೇ 66 ಮಂದಿ ಗೆದ್ದಿದ್ದಾರೆ ಎಂದಮೇಲೆ, ಇವರಲ್ಲೇ ಒಬ್ಬರು ಗಟ್ಟಿಯಿರುವವರು ವಿರೋಧಪಕ್ಷದ ನಾಯಕರಾಗಬೇಕಲ್ಲ!? ಇಲ್ಲ, ಬಹುಷಃ ಬಿಜೆಪಿ ಇದಕ್ಕೂ ಒಂದು ಸರ್ವೇ ನಡೆಸಲು ಸಿದ್ದವಾಗಿದೆಯೇನೋ!

ಆತ್ಮಾವಲೋಕನ ಸಾಕು, ನಿಮ್ಮ ಕೆಲಸ ಏನೆಂಬ ಅವಲೋಕನ ನಡೆಯಲಿ. 2014ರ ಚುನಾವಣೆಯಲ್ಲಿ ಬಿಜೆಪಿಯ 282 ಸೀಟುಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಗೆದ್ದದ್ದು ಕೇವಲ 44 ಸೀಟು. 2019ರಲ್ಲೂ ಬಿಜೆಪಿಯ ದೈತ್ಯ 303 ಸೀಟುಗಳ ಗೆಲುವಿನ ಮುಂದೆ ಕಾಂಗ್ರೆಸ್ ಗೆದ್ದದ್ದು ಚಿಲ್ಲರೆ 52 ಸೀಟುಗಳು. ಕಾಂಗ್ರೆಸ್ಸಿನ ಅಂದಿನ ಪರಿಸ್ಥಿತಿಗಿಂತಾ ನಿಮ್ಮ ಸ್ಥಿತಿಯೇನೂ ಕೆಟ್ಟದಾಗಿಲ್ಲ. ದೇಶದಬಗ್ಗೆ ನಯಾಪೈಸೆ ಗೊತ್ತಿಲ್ಲದ, ಇತ್ತೀಚೆಗಷ್ಟೇ ಅನರ್ಹನೂ ಆದ ನಾಯಕನಿಗೆ ಹೋಲಿಸಿದರೆ, ಚಿನ್ನದಂತಾ ನಾಯಕರು ನಿಮ್ಮಲ್ಲಿದ್ದಾರೆ. ಈಗಲೂ ನೀವು ವಿರೋಧಪಕ್ಷದ ನಾಯಕ ಹುದ್ದೆಗೆ ಜಾತಿ, ವಯಸ್ಸು ಮುಂತಾದವುಗಳ ಸಮೀಕ್ಷೆ ನಡೆಸುತ್ತಾ ಕೂತರೆ, ನಿಮಗೆ ಅಲ್ಲೂಕೂರಲಿಕ್ಕೆ ಅರ್ಹತೆಯಿಲ್ಲವೆಂದು ಜನರು ತೀರ್ಮಾನಿಸುವ ಸಮಯಬರಬಹುದು. ರಾಜ್ಯಚುನಾವಣೆಯಲ್ಲಿ ಸೋತ ಕೆಲವರನ್ನು ಮೋದಿಯ ಹೆಸರಿನ ಅಲೆಯ ಮೇಲೆ ಲೋಕಸಭೆಗೆ ಕಳಿಸುವ ತಂತ್ರದ ಸುದ್ಧಿಯೊಂದು ಮೊನ್ನೆ ಹೊರಬಂತು. ಸಧ್ಯಕ್ಕೆ ಅದನ್ನು ನಗೆಚಟಾಕಿಯೆಂದು ಜನರು ಭಾವಿಸಿದ್ದಾರೆ. ಅದೊಂದು ನಗೆಚಟಾಕಿಯಾಗಿಯೇ ಉಳಿಯಲಿದೆ ಎಂದುಕೊಳ್ಳುತ್ತೇನೆ. ಹಾಗೂ ಈ ಎಲ್ಲಾ ವಿಚಾರಗಳು 2024ರ ಕೇಂದ್ರಚುನಾವಣೆಯ ಮೆಲೆ ನೇರ ಪರಿಣಾಮ ಬೀರಲಿದೆ ಎಂಬುದೂ ಗೊತ್ತಿರದಷ್ಟು ಮುಗ್ಧರು ನೀವಲ್ಲ ಎಂದುಕೊಳ್ಳುತ್ತೇನೆ. ಅಥವಾ…..

0 comments on “ಗೆಲುವಿನ ಮತ್ತಿನಲ್ಲಿರುವ ಕಾಂಗ್ರೆಸ್, ಸೋಲಿನಿಂದ ಸತ್ತಂತಿರುವ ಬಿಜೆಪಿ

Leave a Reply

Your email address will not be published. Required fields are marked *