Sunday, 28 April, 2024

ಅಸಮಾನತೆ ಮತ್ತು ವಿಭಿನ್ನತೆಯ ನಡುವಿನ ವ್ಯತ್ಯಾಸಗಳು

Share post

ಭಾರತವೊಂದು ವೈವಿಧ್ಯತೆಯ ಸಾಗರ. “Unity in diversity”, “ಭಾರತವೊಂದು ದೇಶವಲ್ಲ-ಬದಲಿಗೆ ಒಂದುಉಪಖಂಡ” ಮುಂತಾದ ಸಾಲುಗಳನ್ನ ನಾವು ಕೇಳುತ್ತಲೇ ಇರುತ್ತೇವೆ. ಚಿಕ್ಕವರಿದ್ದಾಗಲಿಂದ ಪ್ರತಿಪಠ್ಯಪುಸ್ತಕದಲ್ಲೂ ಅದನ್ನೇ ನಮಗೆ ಹೇಳಿಕೊಡಲಾಗುತ್ತದೆ. ಬೆಳೆಯುತ್ತಾ ಪ್ರತಿಯೊಂದು ಪಾಠ, ಕಾರ್ಯಕ್ರಮ, ಲೇಖನಗಳಲ್ಲೇ ಅದನ್ನೇ ತಲೆಗೆ ತುಂಬಿ, ಅದರ ಮೂಲಕ ಸೌಹಾರ್ದತೆಯ ಪಾಠಗಳನ್ನು ಕಲಿಸಲಾಗುತ್ತದೆ. ಆದರೆ ಇಂದಿಗೂ ಎಷ್ಟೋ ಜನರಿಗೆ ಅಸಮಾನತೆ ಮತ್ತು ವೈವಿಧ್ಯತೆ/ವಿಭಿನ್ನತೆಗಳ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಹಾಗಂತ ಇದು ಕೇವಲ ಕಲಿಯದಿದ್ದವರ ತಪ್ಪಲ್ಲ. ಕಲಿಸುವವರೂ ಕೂಡಾ ಈ ವಿವಿಧತೆಯಲ್ಲಿ ಏಕತೆ ಎಂಬ ಸವಕಲು ಸಾಲನ್ನು ನಮ್ಮ ಲಿಬರಲ್ಲುಗಳು ಮತ್ತು ಎಡಪಂಥೀಯ ವಿಚಾರಧಾರೆಯ ಮಹಾಮಹಿಮರು, ಮತ್ತವರಿಂದ ಪ್ರಭಾವಿತರಾದ ನಮ್ಮ ಹೆಚ್ಚಿನ ಶಿಕ್ಷಕರು ಹಾಗೂ ಅಧ್ಯಾಪಕರು ನಮಗೆ ಈ ಸಾಲಿನ ಮೂಲಕ ಸರ್ವಧರ್ಮ ಸಮನ್ವಯತೆಯನ್ನು ಹೇಳಿಕೊಡಲು ಬಯಸಿದರೇ ಹೊರತು, ವೈವಿಧ್ಯತೆಯನ್ನು ಸಂಭ್ರಮಿಸುವ ಬಗ್ಗೆ ಏನೂ ಹೇಳಿಕೊಡಲೇ ಇಲ್ಲ. ಇದರಿಂದಾಗಿ ಹೆಚ್ಚಿನವರ ಮನಸ್ಸಿನಲ್ಲಿ ಈ ಏಕತೆಯ ಕರೆ ಯಾವುದೋ ಧಾರ್ಮಿಕ ಮಾತು ಸಾಮಾಜಿಕ ಅಸಮಾನತೆಯಿಂದ ಹುಟ್ಟಿದ್ದು ಎಂದೇ ದಾಖಲಾಗಿದೆ.

ಈ ಕರೆಗಳು ಮಾತ್ರವಲ್ಲ, ಭಾರತದಲ್ಲಿ ಅಸಮಾನತೆ ಅನ್ನೋದು ತಾಂಡವವಾಡ್ತಾ ಇದೆ ಅನ್ನೋದೊಂದು ತಪ್ಪು ತಿಳುವಳಿಕೆ ಹೊರಗಿನವರಿಗೆ ಮಾತ್ರವಲ್ಲ, ಭಾರತಿಯರಿಗೂ ಅನ್ನಿಸುವುದಿದೆ. ಅಸಮಾನತೆ ಇದೆ ಈ ದೇಶದಲ್ಲಿ, ಇಲ್ಲ ಅಂತಲ್ಲ. ಆದರೆ ಇದರ ಬಗೆಗಿನ ಮೂಲಭೂತ ತಿಳುವಳಿಕೆಯಲ್ಲೇ ಬಹಳಷ್ಟು ಜನರಿಗೆ ತಪ್ಪು ಅಭಿಪ್ರಾಯವಿದೆ. ಇವೆರಡೂ ಪದಗಳು ಮತ್ತು ಪರಿಕಲ್ಪನೆಗಳು ಪರಸ್ಪರ ಹೆಣೆದುಕೊಂಡಿವೆ ಹಾಗೂ ಕೆಲವೆಡೆ ಇವೆರಡರ ನಡುವಿನ ಅಂತರ ಬಹಳವೇ ತೆಳುವಾಗಿರುತ್ತದೆ. ಅಧ್ಯಯನ ಅಥವಾ ಸಾಮಾನ್ಯಜ್ಞಾನವಿಲ್ಲದ ಮನಸ್ಸುಗಳು ಇವೆರಡನ್ನೂ ಒಂದೇ ಎಂದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಅಸಮಾನತೆಯೆಂದರೆ, ಒಂದೇ ಕಾಲ-ದೇಶದ ಪರಿಮಿತಿಯ ಅಸ್ತಿತ್ವದಲ್ಲಿರುವ, ಒಂದೇ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಸ್ಥರದಲ್ಲಿರುವ ಇಬ್ಬರು ವ್ಯಕ್ತಿಗಳ ನಡುವೆ ಅವರ ಹಕ್ಕುಗಳು, ಅವರಿಗೆ ಸಿಗುವ ಅವಕಾಶಗಳಲ್ಲಿ ವ್ಯತ್ಯಾಸ ಅಥವಾ ಒಬ್ಬನಿಗೆ ಆಗುವ ಅನ್ಯಾಯ. ಸಾಮಾಜಿಕ ಸ್ಥಾನಮಾನ, ಸಂಬಳ ಅಥವಾ ಸಂಪತ್ತು, ಲಿಂಗ ಅಥವಾ ಜನಾಂಗದಂತಹ ಅಂಶಗಳ ಆಧಾರದ ಮೇಲೆ ಒಬ್ಬ ವ್ಯಕ್ತಿ ಅಥವಾ ಗುಂಪನ್ನು ಮತ್ತೊಬ್ಬರಿಗಿಂತ ಶ್ರೇಷ್ಠ ಅಥವಾ ಕೀಳು ಎಂದು ಪರಿಗಣಿಸುವುದನ್ನು ಅಸಮಾನತೆ ಎನ್ನಬಹುದು. ಇದರಲ್ಲಿ ಆರ್ಥಿಕ ಅಸಮಾನತೆ, ಲಿಂಗ ಆಧಾರಿತ ಅನ್ಯಾಯ ಮತ್ತು ಜಾತಿ ವ್ಯವಸ್ಥೆಗಳನ್ನು ಮುಖ್ಯವಾಗಿ ಉದಾಹರಿಸಬಹುದು.

ಜಗತ್ತಿನ ಎಲ್ಲಾ ಹಲವು ಸಮಾಜಗಳಲ್ಲಿ ಆರ್ಥಿಕ ಅಸಮಾನತೆ ಪ್ರಚಲಿತದಲ್ಲಿದೆ. ಒಬ್ಬ ಶ್ರೀಮಂತ ಉದ್ಯಮಿ ಅದ್ದೂರಿ ಬಂಗಲೆಯಲ್ಲಿ ವಾಸಿಸಿದರೆ, ದೈನಂದಿನ ಹೋರಾಟವನ್ನೇ ಜೀವನವಾಗಿಸಿಕೊಂಡಿರುವ ರೈತನೊಬ್ಬ ಸಣ್ಣ ಮನೆಯಲ್ಲಿ ಜೀವಿಸುತ್ತಾನೆ. ಜಗತ್ತಿನೆಲ್ಲೆಡೆ ಸಂಪತ್ತು ಎನ್ನುವುದು ಅಸಮಾನ ರೀತಿಯಲ್ಲಿ ಹಂಚಿಕೆಯಾಗಿದೆ. ಸಮಾಜದ 1% ಜನರು, ಜಗತ್ತಿನ 75% ಸಂಪತ್ತನ್ನು ಕ್ರೋಢೀಕರಿಸಿಕೊಂಡಿದ್ದಾರೆ. ಹಾಗೂ ಈ ಅಸಮಾನ ಹಂಚಿಕೆ ಎರಡೂ ಗುಂಪಿನ ಜನರಿಗೆ ಸಿಗಬಹುದಾದ ಅವಕಾಶಗಳಲ್ಲೇ ಸಂಪೂರ್ಣ ಅಸಮಾನತೆಯನ್ನು ಸೃಷ್ಟಿಸುತ್ತದೆ. ಸಮಾನ ಅವಕಾಶಗಳಿಲ್ಲದೇ, ಸಮಾನ ಸಂಪತ್ತು ಸಿಗುವುದು ಸಾಧ್ಯವೇ ಇಲ್ಲ. ಇದರಿಂದಾಗಿ ಇದೊಂದು ಸದಾಕಾಲಕ್ಕೂ ಮುಂದುವರೆಯುವ ಸಮಸ್ಯೆಯಾಗಿ ಉಳಿಯುತ್ತದೆ. ಲಿಂಗ-ಆಧಾರಿತ ಅಸಮಾನತೆ ಕೂಡಾ ಒಂದು ಜಾಗತಿಕ ಸಮಸ್ಯೆಯೇ. ಕೆಲವು ನಿರ್ದಿಷ್ಟ ಸಮುದಾಯಗಳಲ್ಲಿ, ಪುರುಷರ ಹೋಲಿಕೆಯಲ್ಲಿ ನೋಡಿದಾಗ, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಹೋರಾಟದ ನಂತರ ಈ ಅವಕಾಶಗಳು ಸಿಕ್ಕರೂ ಸಮಾನ ವೇತನವೆನ್ನುವುದು ಮರೀಚಿಕೆಯೇ.

ಕಟ್ಟುನಿಟ್ಟಾದ ಸಾಮಾಜಿಕ ಶ್ರೇಣಿ ವ್ಯವಸ್ಥೆಯೂ, ವ್ಯಕ್ತಿಗಳನ್ನು ಅವರ ಜನ್ಮದ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವರ್ಗೀಕರಿಸುತ್ತದೆ. ಈ ವ್ಯವಸ್ಥೆ ಅಸಮಾನತೆಯನ್ನು ಚಿಕ್ಕವಯಸ್ಸಿನಿಂದಲೇ ಕಲಿಸುವುದು ಮಾತ್ರವಲ್ಲ, ಈ ಶ್ರೇಣಿಯನ್ನು ಶಾಶ್ವತಗೊಳಿಸುತ್ತದೆ. ಈ ವಿಚಾರದಲ್ಲಿ ಹಿಂದೂ ಸಮಾಜದಲ್ಲಿರುವ ವರ್ಣಗಳನ್ನು ತಪ್ಪಾಗಿ ಜಾತಿ ಎಂದು ಕರೆದು, ಅದನ್ನೇ ಹೆಚ್ಚಿನ ಪ್ರಗತಿಪರರು ಅಸಮಾನತೆಯ ಕಾರಣವೆಂದು ವಿವರಿಸುತ್ತಾರೆ. ಆದರೆ ಈ “ಅಸಮಾತೆಯನ್ನು” ಕೇವಲ ಹಿಂದೂಗಳಿಗೆ ಸೀಮಿತಗೊಳಿಸಿ, ಬೇರೆ ಸಮುದಾಯದಲ್ಲಿರುವ ಶಿಯಾ, ಸುನ್ನಿ, ಅಶ್ರಫ್ ಅತ್ರಫ್, ಅಹ್ಮದಿ, ಹನಾಫಿ, ದಿಯೋಬಂದಿ, ಬರೇಲ್ವಿ, ಕ್ಯಾಥೋಲಿಕ್, ಪ್ರಾಟೆಸ್ಟೆಂಟ್, ಅಡ್ವೆಂಟಿಸ್ಟ್ ಆರ್ಥೋಡಕ್ಸ್ ವಿಂಗಡಣೆಯನ್ನು “ವೈವಿಧ್ಯತೆ” ಎಂದು ಬಣ್ಣಬಳಿಯುತ್ತಾರೆ. ಈ ಮೂರೂ ಕಡೆಯೂ ನಡೆಯುತ್ತಿರುವುದು ಅಸಮಾನತೆಯೇ ಹಾಗೆಯೇ ಅಲ್ಲಿರುವುದು ವೈವಿದ್ಯತೆಯೇ. ನಾವದನ್ನು ನೋಡುವ ರೀತಿ ಸರಿಯಾಗಿರಬೇಕಷ್ಟೇ.

ವಿಭಿನ್ನತೆ ಅಥವಾ ವೈವಿಧ್ಯತೆ ಮಾನವ ಸಹಜವಾದ ಗುಣ. ನಿಮಗಿಷ್ಟವಿರಲಿ ಇಲ್ಲದಿರಲಿ, ಪ್ರತಿಯೊಬ್ಬ ವ್ಯಕ್ತಿಯೂ ನಾನು ಉಳಿದವರಿಗಿಂತ ವಿಭಿನ್ನವಾಗಿರಬೇಕೆಂದು ಬಯಸುತ್ತಾನೆ ಅನ್ನುವುದು ಸತ್ಯವೇ. ಬಯಸುವುದು ಮಾತ್ರವಲ್ಲ ಮನುಷ್ಯರು ಹಾಗೂ ಪಂಗಡಗಳು ತಮ್ಮ ನಂಬಿಕೆಗಳಿಗನುಗುಣವಾಗಿ ವಿಶಿಷ್ಟ ಗುಣಗಳು, ಗುಣಲಕ್ಷಣಗಳು ಮತ್ತು ಅನುಭವಗಳನ್ನು ಪಡೆಯುತ್ತಾ ಹೋಗುತ್ತಾರೆ, ಮಾತ್ರವಲ್ಲ ಈ ವಿಶಿಷ್ಟತೆಗಳನ್ನು ಆ ಸಮಾಜ ಆಚರಿಸುತ್ತದೆ ಕೂಡಾ. ಹಲವು ಸಮಾಜಗಳ ಗುಂಪಾದ ನಾಗರೀಕತೆಯೊಂದು ಶ್ರೀಮಂತವಾಗುವುದೇ ಹೀಗೆ. ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ಅಲ್ಲ ಎನ್ನುವುದೇ ವಿಭಿನ್ನತೆಯ ಮೂಲಕಲ್ಪನೆ. ಆದರೆ ಇದನ್ನು ಅಸಮಾನತೆಯೆಂದು ಕರೆಯುವುದು ಜನರು ಮಾಡುವ ಮೊದಲು ತಪ್ಪು. ವೈವಿಧ್ಯತೆಯಿಂದ ಕೇವಲ ವೈಚಾರಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಶ್ರೀಮಂತಿಕೆ ಬೆಳೆಯಲಷ್ಟೇ ಸಾಧ್ಯ. ಹಾಗಂತಾ ಅಸಮಾನತೆ ಬರೀ ವಿಷವನ್ನೇ ಬಿತ್ತುತ್ತದೆ ಎನ್ನುವುದೂ ತಪ್ಪು ಅಭಿಪ್ರಾಯ. ಅಸಮಾನತೆ ಹೆಚ್ಚಿನ ಬಾರಿ ಮನುಷ್ಯನ ಛಲಕ್ಕೆ ಇಂಬುನೀಡಿ, ಅವನು ಆ ಅಸಮಾನತೆಗಳನ್ನು ಮೀರಿ ನಡೆಯುವ ನಿಟ್ಟಿನಲ್ಲೂ ಬೆಳೆಸುತ್ತದೆ. ನೋಡುವ ಮನಸ್ಸು ಸರಿಯಾಗಿರಬೇಕಷ್ಟೇ.

ಭಾರತ ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು, ಸಂಪ್ರದಾಯಗಳು, ಆಹಾರ ಪ್ರಕಾರಗಳು ಮತ್ತು ಧರ್ಮಗಳ ನಾಡು. ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟ ಪದ್ಧತಿಗಳು, ಪಾಕಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿದೆ. ದೀಪಾವಳಿ, ಈದ್, ಕ್ರಿಸ್‌ಮಸ್ ಮತ್ತು ಪೊಂಗಲ್‌ನ ರೋಮಾಂಚಕ ಹಬ್ಬಗಳು, ಸಾಂಸ್ಕೃತಿಕ ವೈವಿಧ್ಯತೆಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ ಮತ್ತು ವಿಭಿನ್ನವಾಗಿರುವುದರ ಸೌಂದರ್ಯವನ್ನು ಉದಾಹರಿಸುತ್ತವೆ. ಕಲಾತ್ಮಕ ಪ್ರಯತ್ನಗಳು ವೈಯಕ್ತಿಕ ಅಭಿವ್ಯಕ್ತಿಗೆ ಸೃಜನಶೀಲ ಹೊರದಾರಿಯನ್ನು ಒದಗಿಸುತ್ತವೆ ಮತ್ತು ವಿಭಿನ್ನತೆಯನ್ನು ಪ್ರದರ್ಶಿಸುತ್ತವೆ. ಭಾರತೀಯ ಶಾಸ್ತ್ರೀಯ ಸಂಗೀತವು ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಂತಹ ವಿವಿಧ ಶೈಲಿಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಅದರ ವಿಶಿಷ್ಟ ಗುಣಲಕ್ಷಣಗಳು ಮತ್ತು ಮಧುರತೆಯನ್ನು ಹೊಂದಿದೆ. ಈ ವ್ಯತ್ಯಾಸಗಳು ಸಾಂಸ್ಕೃತಿಕ ಹರವನ್ನು ಉತ್ಕೃಷ್ಟಗೊಳಿಸುತ್ತವೆ ಮತ್ತು ರಾಷ್ಟ್ರದ ಕಲಾತ್ಮಕ ಅನುಭವಕ್ಕೆ ಕೊಡುಗೆ ನೀಡುತ್ತವೆ. ಇದ್ಯಾವುದೂ ಅಸಮಾನತೆಯಲ್ಲ, ಇದು ವಿಭಿನ್ನತೆ. ಒಬ್ಬರ ಮನೆಯಲ್ಲಿ ತಿಳಿಸಾರು ಚೆನ್ನಾಗಿದ್ದರೆ, ಇನ್ನೊಬ್ಬರ ಮನೆಯಲ್ಲಿ ಮಟನ್ ಸಾರು ಚೆನ್ನಾಗಿರುತ್ತದೆ. ಇವು ವಿಭಿನ್ನತೆಯೇ ಹೊರತು ಅಸಮಾನತೆಯಲ್ಲ. ವರ್ಷದ ಉಡುಪಿಯ ಮಠಾಧೀಶರು ಒಂದು ಪಂಗಡದ ವ್ಯಕ್ತಿಯ ಮನೆಗೆ ಭೇಟಿನೀಡಿ “ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರೇ, ಮನುಷ್ಯನಷ್ಟೇ ಅಸಮಾನತೆ ಸೃಷ್ಟಿಸಿಕೊಂಡಿದ್ದಾನೆ” ಎಂದಾಗ, ಸಮಾಜದಲ್ಲಿ ಗಣ್ಯರೆನಿಸಿಕೊಂಡಿರುವ ಪ್ರತಿಭೆಗಳು “ಕೇವಲ ಯಾರದ್ದೋ ಮನೆಗೆ ಭೇಟಿಕೊಡುವುದರಿಂದ ಅಸಮಾನತೆಯನ್ನು ಎಲ್ಲಿ ಸರಿಪಡಿಸಿದಂಗಾಯ್ತು? ಆತನ ಮನೆಯಲ್ಲಿ ಈ ಮಠಾಧೀಶರು ಮಾಂಸ ತಿಂದಿದ್ದರೆ, ಬ್ಲಡ್ ಗೊಜ್ಜು ತಿಂದಿದ್ದರೆ ಅದನ್ನು ಸಮಾನತೆಯೆಡಿಗಿನ ಮೊದಲ ಹೆಜ್ಜೆ ಎನ್ನಬಹುದಿತ್ತು” ಎನ್ನುವ ಮಾತುಗಳನ್ನು ಆಡಿದ್ದರು. ಈ ಮಾತನ್ನು ಆಡಿದವರು ಪ್ರತಿಭಾವಂತರೂ, ನಾಡಿನ ಜನ ಮೆಚ್ಚಿದವರೂ ಆಗಿದ್ದರಿಂದ, ನನಗೆ ಆಶ್ಚರ್ಯವೂ ಬೇಸರವೂ ಆಗಿತ್ತು ಕೂಡಾ. ಮಠಾಧೀಶರು ತಿಳಿಸಾರು ಮೊಸರನ್ನ ತಿನ್ನುವುದೂ, ಆತಿಥೀಯನ ಮನೆಯವರು ಮಾಂಸ ಅಥವಾ ಬ್ಲಡ್-ಗೊಜ್ಜು ತಿನ್ನುವುದು ಎರಡೂ ಆ ವ್ಯಕ್ತಿಗಳ ಆಹಾರಪದ್ದತಿಯ ವಿವಿಧತೆಯೇ ಹೊರತು, ಅಸಮಾನತೆಯಲ್ಲ. ಮಠಾಧೀಶರಿಗೆ ಆತಿಥ್ಯ ನೀಡಿದ ವ್ಯಕ್ತಿ ಬಡವನಿರಬಹುದು ಎಂದುಕೊಳ್ಳೊಣ. ನಾಳೆ ಆತ ಶ್ರೀಮಂತನಾದರೂ ಕೂಡಾ ಅವನ ಮನೆಯ ಅಡುಗೆಯೇನೂ ಬದಲಾಗುವುದಿಲ್ಲ. ಅದೇ ಅವನ ಪಂಗಡದ ಸಾಂಸ್ಕೃತಿಕ ವೈಶಿಷ್ಟ್ಯ. ಭಾರತೀಯನೊಬ್ಬ ಅಮೇರಿಕದಲ್ಲಿ ಲಕ್ಷ ಡಾಲರ್ ಸಂಪಾಧಿಸಿದರೂ ಮೊಸರನ್ನ, ಚಿಕನ್ ಸುಕ್ಕಾದಲ್ಲೇ ಸುಖ ಕಂಡುಕೊಳ್ಳುತ್ತಾನೆಯೇ ಹೊರತು, ಶ್ರೀಮಂತಿಕೆಯನ್ನು ತೋರಿಸಲಿಕ್ಕೆ ಪ್ರತಿ ದಿನವೂ ಅಮೇರಿಕನ್ ಬರ್ಗರ್ ಅನ್ನೇ ತಿನ್ನುವುದಿಲ್ಲ.



ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ ಪ್ರತಿಭೆ ಮತ್ತು ಕೌಶಲ್ಯಗಳನ್ನು ಹೊಂದಿದ್ದು, ಆ ಪ್ರತಿಭೆ ಉಳಿದ ಜಗತ್ತಿನಿಂದ ಆತನನ್ನು ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ಒಬ್ಬ ವ್ಯಕ್ತಿ ಗಣಿತದಲ್ಲಿ ಮುಂದಿದ್ದರೆ, ಇನ್ನೊಬ್ಬ ವ್ಯಕ್ತಿಗೆ ಅಸಾಧಾರಣವಾದ ಕಲಾತ್ಮಕ ಪ್ರತಿಭೆ ಸಾಮರ್ಥ್ಯಗಳಿದ್ದರೆ ಅವರಿಬ್ಬರೂ ತಮ್ಮದೇ ರೀತಿಯಲ್ಲಿ ಅನನ್ಯರು. ಆದರೆ ನಮ್ಮ ಪ್ರಗತಿಪರರಿಗೆ ಒಬ್ಬನನ್ನು ಎತ್ತರದಲ್ಲಿ, ಇನ್ನೊಬ್ಬನನ್ನು ಕೆಳಗೆ ನಿಲ್ಲಿಸಿ ಅಸಮಾನತೆ ಸೃಷ್ಟಿಸಿಯೇ ಅಭ್ಯಾಸ. ಬೇರೆ ಬೇರೆ ಪ್ರತಿಭೆಯ ಕತೆ ಬಿಡಿ, ಒಂದೇ ಕ್ಷೇತ್ರದಲ್ಲಿರುವ ಪ್ರತಿಭಾನ್ವಿತರನ್ನೂ ಅಸಮಾನತೆಯ ತಕ್ಕಡಿಯಲ್ಲಿ ತೀಗಿದರೇ ನಮ್ಮವರಿಗೆ ತೃಪ್ತಿ. ಸಚಿನ್ ತೆಂಡುಲ್ಕರ್ ತನ್ನ ಕ್ರಿಕೆಟ್ ಜೀವನದ ಉತ್ತುಂಗದಲ್ಲಿದ್ದಾಗ, ಒಬ್ಬ ಪತ್ರಕರ್ತ ಸಚಿನ್ನನ ಗೆಳೆಯ ಮತ್ತು ಸಮಕಾಲೀನ ಪ್ರತಿಭೆ ವಿನೋದ್ ಕಾಂಬ್ಳಿಯ ಬಗ್ಗೆ ಲೇಖನದಲ್ಲಿ ಕಾಂಬ್ಳಿ ಕೆಳವರ್ಗಕ್ಕೆ ಸೇರಿದವನು ಎಂಬ ಕಾರಣಕ್ಕೆ ತುಳಿಯಲಾಯ್ತು. ಸಚಿನ್ ಮೇಲ್ಜಾತಿಯವನು ಎಂಬ ಕಾರಣಕ್ಕೇ ಆತನಿಗೆ ಹೆಚ್ಚೆಚ್ಚು ಅವಕಾಶಗಳು ದೊರೆತವು ಮತ್ತು ಆತ ಅದರಲ್ಲಿ ಸಫಲನಾದ ಅಂತಾ ಬರೆದುಕೊಂಡಿದ್ದ. ಇವರ ಪ್ರಕಾರ ವಿವಿಪುರಂನಲ್ಲಿ ಪ್ಲೇಟಿಗೆ ಹತ್ತು ರೂಪಾಯಿಗೆ ಜಿಲೇಬಿ ಮಾರುವವನೂ, ಪಕ್ಕದ ಬೀದಿಯಲ್ಲಿ ಪ್ಲೇಟಿಗೆ ಇನ್ನೂರು ರೂಪಾಯಿಯ ಬಿರಿಯಾನಿ ಮಾರುವವನೂ ವೈವಿಧ್ಯರಲ್ಲ, ಬದಲಿಗೆ ಅಸಮಾನರು. ಜಾವಗಲ್ ಎಕ್ಸ್ಪ್ರೆಸ್ ಶ್ರೀನಾಥನೂ, ವೆಂಕಟಪತಿ ರಾಜುವೂ ಅಸಮಾನರು. ರಂಗ್ ದೇ ಬಸಂತಿ ಚಿತ್ರದ ವಿವಿಧ ಪಾತ್ರಗಳೂ ಅಸಮಾನರು. ಇದು ಬದಲಾಗಬೇಕಾದ ಮನಸ್ಥಿತಿ.

ನಿಮ್ಮ ಮನೆಯ ಪಕ್ಕದ ಪಾರ್ಕಿನಲ್ಲಿ ಬೆಳಿಗ್ಗೆ ಭೇಟಿಯಾಗುವ ನಗೆಕೂಟಕ್ಕೆ ಹೋಗಿ, ಜೋರಾಗಿ ನಗುವವನು ದೊಡ್ಡ ಮನುಷ್ಯ, ಸಣ್ಣದಾಗಿ ನಗುವವನು ಕೆಳಸ್ಥರದವನು ಅಂದರೆ, ಅವರೆಲ್ಲಾ ನಗುವುದನ್ನು ಬಿಟ್ಟು ಕೋಪ ಮಾಡಿಕೊಂಡು ನಿಮಗೆ ನಾಲ್ಕು ತದುಕುತ್ತಾರಷ್ಟೇ. ಅಲ್ಲಿ ನಗುವಷ್ಟೇ ಮುಖ್ಯ, ಹಾಗೂ ಪ್ರತಿಯೊಂದು ನಗುವಿಗೂ ಇನ್ನೊಬ್ಬರಿಂದ ನಗುವುಕ್ಕಿಸುವ ಶಕ್ತಿಯಿರುತ್ತದೆ. ಸೀತೆಯನ್ನು ಹುಡುಕುತ್ತಾ ರಾಮ ಹೊರಟಾಗ ಮಾರ್ಗಮಧ್ಯದಲ್ಲಿ ಹನುಮಂತನೆಂಬ ವಾನರನೊಡನೆಯೂ, ಜಾಂಬವಂತನೆಂಬ ಕರಡಿಯೊಂದಿಗೂ, ಸಂಪಾತಿಯೆಂಬ ಹದ್ದಿನೊಂದಿಗೂ ಗೆಳೆತನ ಸಂಪಾದಿಸಿಕೊಂಡು ಮುಂದುವರೆಯುತ್ತಾನೆ. ಇವರೆಲ್ಲರ ಸಾಮರ್ಥ್ಯಗಳು, ದೈಹಿಕಗುಣಲಕ್ಷಣಗಳು, ಸಾಮಾಜಿಕ ಸ್ಥರಗಳೂ ವಿಭಿನ್ನ. ಆದರೂ ಅವರ ವೈಯಕ್ತಿಕ ಕೊಡುಗೆಗಳು “ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೇ ಅಂತಿಮ” ಎಂಬ ಸಂದೇಶವನು ಗಟ್ಟಿಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವರ್ಯಾರೂ ಮುಖ್ಯ, ಅಮುಖ್ಯರಲ್ಲ, ಯಾರ ಕೊಡುಗೆಯೂ ಹೆಚ್ಚಲ್ಲ, ಕಡಿಮೆಯಲ್ಲ, ಯಾರೂ ಅಸಮಾನರಲ್ಲ, ಬದಲಿಗೆ ವಿಭಿನ್ನರಷ್ಟೇ.

ಜಗತ್ತಿನ ಉಳಿದ ಸಮಾಜಗಳನ್ನು ಬದಿಗಿಟ್ಟು, ಕೇವಲ ಕಲೈಡೋಸೋಪಿನಂತಿರುವ ಭಾರತೀಯ ಸಮಾಜವನ್ನೇ ಸರಿಯಾಗಿ ಅಧ್ಯಯನ ಮಾಡಿದರೂ ನಿಮಗೆ ಅಸಮಾನತೆ ಮತ್ತು ವಿಭಿನ್ನತೆಯ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಪುರಾಣದ ಮನರಂಜಿಸುವ ಉಪಾಖ್ಯಾನಗಳು, ನಮ್ಮ ಪಾಕಶಾಲೆಯ ಕೌಶಲ್ಯಗಳು, ಕ್ರೀಡಾ ಕೌಶಲ್ಯಗಳು, ದೈಹಿಕ ನೋಟಗಳು, ಪ್ರತಿಭೆಗಳು ಅಥವಾ ನಂಬಿಕೆಗಳು, ನಮ್ಮ ಅನುಭವದ ಶ್ರೀಮಂತಿಕೆಯನ್ನು ವರ್ಧಿಸುತ್ತವೆ. ಈ ವೈವಿಧ್ಯತೆಯನ್ನೇ ಇನ್ನ್ನೊಬ್ಬರನ್ನು ಕೀಳಾಗಿ ಕಾಣಲು ಅಥವಾ ದಬ್ಬಾಳಿಕೆ ಮಾಡಲು ಆಯುಧವಾಗಿ ಬಳಸಿದಾಗ ಅಸಮಾನತೆ ಉಂಟಾಗುತ್ತದೆ. ಬದಲಿಗೆ ಇದೇ ವ್ಯತ್ಯಾಸಗಳನ್ನು ಒಪ್ಪಿಕೊಂಡು ಆಚರಿಸಿದಾಗ ಸಾಮರಸ್ಯದ ಸಮಾಜ ಬೆಳೆಯುತ್ತದೆ, ಮತ್ತು ಅಲ್ಲಿ ಪ್ರತಿಯೊಬ್ಬರೂ ಪ್ರತಿಭಾನ್ವಿತರು ಹಾಗೂ ಬೇರೆ ಯಾವ ಹೆಚ್ಚಿನ ಯೋಚನೆಯೇ ಇಲ್ಲದೆ ಸಮಾನರು. ಬ್ರಾಹ್ಮಣನೊಬ್ಬ ಸಂಸ್ಕೃತ ಮಂತ್ರಪಠಿಸಿ, ಪಂಚಾಮೃತ ಅಭಿಷೇಕ ಮಾಡಿ ಪೂಜಿಸಿದಕೂಡಲೇ ಎತ್ತರದವನಾಗುವುದಿಲ್ಲ. ಇನ್ನೊಬ್ಬ ಕುರಿಕಡಿದು ದೇವರಿಗೆ ಬಲಿ ಕೊಟ್ಟಕೂಡಲೇ ಕೆಳಗಿನವನಾಗುವುದಿಲ್ಲ. ಅವರಿಬ್ಬರೂ ಅವರದೇ ರೀತಿಯಲ್ಲಿ ವಿಭಿನ್ನರಷ್ಟೇ. ದೇವರಿಗೆ ಅದರಲ್ಲಿ ಯಾವ ಅಸಮಾನತೆಯೂ ಕಾಣಲಿಕ್ಕಿಲ್ಲ. ಹಾಗೆಯೇ ಬ್ರಾಹ್ಮಣನಿಗೆ ಮಾಂಸ ತಿನ್ನಿಸಿ, ದಲಿತನಿಗೆ ಪೌರೋಹಿತ್ಯ ಕೊಡಿಸಿ ಸಮಾನತೆ ತರಲೂ ಸಾಧ್ಯವಿಲ್ಲ. ಇದು ತಿಳಿಯಬೇಕಾದ ಮತ್ತು ಪಾಲಿಸಬೇಕಾದ ಮನಸ್ಥಿತಿ.

0 comments on “ಅಸಮಾನತೆ ಮತ್ತು ವಿಭಿನ್ನತೆಯ ನಡುವಿನ ವ್ಯತ್ಯಾಸಗಳು

Leave a Reply

Your email address will not be published. Required fields are marked *