Saturday, 04 May, 2024

ಆದರ್ಶ ನಾಗರೀಕ: ಭಾರತೀಯ, ಗ್ರೀಕ್ ಮತ್ತು ಯೂರೋಪಿಯನ್ ಪರಿಕಲ್ಪನೆಗಳು

Share post

ಸಮಾಜ ಮತ್ತು ದೇಶವೊಂದು ಮುಂದುವರೆಯಬೇಕಾದರೆ ಕೇವಲ ನಾಯಕ, ಸರ್ಕಾರಗಳು ಮಾತ್ರ ಆದರ್ಶರೀತಿಯಲ್ಲಿದ್ದರೆ ಸಾಲದು. ಅವು ಯಾರಿಗಾಗಿ ರಚಿಸಲ್ಪಟ್ಟಿವೆಯೋ ಆ ಪ್ರಜೆಗಳೂ ಅವರೂ ಆದರ್ಶಗುಣಗಳನ್ನು ಹೊಂದಿರಬೇಕು. ಆದರ್ಶ ನಾಯಕನಿಗೆ ಹೇಗೆ ಗುಣಲಕ್ಷಣಗಳಿವೆಯೋ, ಆದರ್ಶ ಪ್ರಜೆಗೂ ಹಾಗೆಯೇ ಕೆಲ ಗುಣಲಕ್ಷಣಗಳಿವೆ. ಮತ್ತೀ ಗುಣಲಕ್ಷಣಗಳು ಶತಮಾನಗಳ ಕಾಲದಿಂದ, ಹತ್ತಾರು ನಾಗರೀಕತೆಗಳು ಕಲಿತ ಪಾಠದ ಮೂಲಕ ವಿಕಸನಗೊಳ್ಳುತ್ತಾ ಗಟ್ಟಿಯಾಗಿ ರೂಪುಗೊಂಡಿವೆ. ಒಬ್ಬ ವ್ಯಕ್ತಿಯನ್ನು ಆದರ್ಶ ನಾಗರಿಕನನ್ನಾಗಿ ಮಾಡುವ ಗುಣಗಳ ಬಗ್ಗೆ ಜಗತ್ತಿನ ಎರಡು ಶ್ರೇಷ್ಠ ನಾಗರೀಕತೆಗಳಾದ ಭಾರತೀಯ ಮತ್ತು ಗ್ರೀಕರ ತತ್ವಶಾಸ್ತ್ರಗಳು ಗಮನಾರ್ಹ ಮತ್ತು ಸೂಕ್ಷ್ಮ ಒಳನೋಟಗಳನ್ನು ನೀಡಿವೆ.

ಮೊತ್ತಮೊದಲನೆಯದಾಗಿ ಪ್ರಜಾಸತ್ತಾತ್ಮಕ ತತ್ವಗಳ ಪ್ರಕಾರ ಒಬ್ಬ ಆದರ್ಶ ನಾಗರಿಕ, ತನ್ನ ನಾಗರಿಕ ಜವಾಬ್ದಾರಿಯ ಬಲವಾದ ಪ್ರಜ್ಞೆಯನ್ನು ಪ್ರದರ್ಶಿಸಬೇಕು. ಭಾರತೀಯ ತತ್ತ್ವಶಾಸ್ತ್ರದಲ್ಲಿ, ಧರ್ಮದ ಪರಿಕಲ್ಪನೆಯು ಈ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತದೆ. ಧರ್ಮ ಎಂಬ ಪದದ ವ್ಯಾಖ್ಯಾನವೇ “ನೈತಿಕ ಚೌಕಟ್ಟಿನೊಳಗೇ, ಸಮಾಜದೆಡೆಗೆ ಪ್ರಜೆಯೊಬ್ಬ ನಿರ್ವಹಿಸಬಹುದಾದ ಕರ್ತವ್ಯ” ಎಂದು. ಭಗವದ್ಗೀತೆಯೂ ಕೂಡ ಪ್ರತಿಫಲವನ್ನು ನಿರೀಕ್ಷಿಸದೇ ನಿಸ್ವಾರ್ಥವಾಗಿ ಕರ್ತವ್ಯಗಳನ್ನು ನಿರ್ವಹಿಸು ಎಂದು ಹೇಳುವ ಮೂಲಕ, ಪ್ರಜೆಯೊಬ್ಬನಿಗೆ ಜಗತ್ತಿನ ಮಹಾನಾಟಕ ರಂಗದಲ್ಲಿರುವ ಕರ್ತವ್ಯದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಸಮಾಜದೆಡೆಗೆ ಪ್ರಜೆಯೊಬ್ಬನ ನಿಸ್ವಾರ್ಥ ಸೇವೆಯ ಪರಿಕಲ್ಪನೆಯನ್ನು ಕಟ್ಟಿಕೊಡುತ್ತಾ ಈ ತತ್ವ, ಜಾಗತಿಕ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಆದರ್ಶ ನಾಗರಿಕನೊಬ್ಬನ ಮಹತ್ವವೇನು ಎಂಬುದನ್ನು ತಿಳಿಸುತ್ತದೆ. ಗ್ರೀಕ್ ತತ್ವಶಾಸ್ತ್ರ ಕೂಡಾ ಪ್ರಜಾಪ್ರಭುತ್ವದ ಪರಿಕಲ್ಪನೆಯು ಸಾರ್ವಜನಿಕ ವ್ಯವಹಾರಗಳಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯ ಅಗತ್ಯತೆಯನ್ನು ಒತ್ತಿಹೇಳುತ್ತದೆ. ಅರಿಸ್ಟಾಟಲ್ ನಾಗರಿಕರು ತಾವು ವಾಸಿಸುವ ನಗರ ಮತ್ತು ರಾಜ್ಯದ ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಯಾವುದೇ ಸಬೂಬಿಲ್ಲದೇ ತೊಡಗಿಸಿಕೊಂಡಿರಬೇಕು ಎಂದು ನಂಬಿದ್ದ. ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ಸಮುದಾಯದ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ “ನಾಗರಿಕ ಜವಾಬ್ದಾರಿ” ಎಂಬ ಈ ಕಲ್ಪನೆಯು ಅತ್ಯಗತ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸಕ್ರಿಯ ಭಾಗವಹಿಸುವಿಕೆ ಮತ್ತು ನಿಸ್ವಾರ್ಥ ಸೇವೆ ಎಂಬುದು ನಾಗರೀಕನಿಗೆ ಅನಗತ್ಯವೆನ್ನಿಸಿದ ದಿನ, ಪ್ರಜಾಪ್ರಭುತ್ವದ ತಳಹದಿ ಅಲುಗಾಡಲು ಪ್ರಾರಂಭಿಸುತ್ತದೆ.

 

ಎರಡನೆಯದಾಗಿ, ಒಬ್ಬ ಆದರ್ಶ ನಾಗರಿಕ ಸಮಾಜದೊಳಗೆ ಅಡಕವಾಗಿರುವ ಇರುವ ವ್ಯತ್ಯಾಸಗಳನ್ನು ಒಪ್ಪಿಕೊಳ್ಳಬೇಕು ಮತ್ತದನ್ನು ತನ್ನೊಳಗೂ ಅಳವಡಿಸಿಕೊಳ್ಳಬೇಕು. ವೈವಿಧ್ಯತೆಯಲ್ಲಿ ಏಕತೆಗೆ ಒತ್ತು ನೀಡುವ ಭಾರತೀಯ ತತ್ವಶಾಸ್ತ್ರವು ಈ ಗುಣದ ಬಗ್ಗೆ ಅತ್ಯಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ. ಗ್ರೀಕ್ ತತ್ವಶಾಸ್ತ್ರ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳುತ್ತದೆ. ಡಯೋಜಿನೆಸ್ ಪ್ರತಿಪಾದಿಸಿದ ಕಾಸ್ಮೋಪಾಲಿಟನಿಸಂನ ಪರಿಕಲ್ಪನೆ ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ತಮ್ಮೆಲ್ಲರಲ್ಲೂ ಇರುವ ಮಾನವೀಯತೆಯನ್ನು ಗುರುತಿಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ. ಸಮಾಜದ ಪ್ರತಿಯೊಬ್ಬ ನಾಗರೀಕನಿಗೂ, ಅವರ ಹಿನ್ನೆಲೆ ಅಥವಾ ವರ್ಗೀಕರಣ ಏನೇ ಇರಲಿ, ಅದನ್ನು ಲೆಕ್ಕಿಸದೆ ಗೌರವ ಮತ್ತು ಸಮಾನ ಪರಿಗಣನೆಗೆ ಅರ್ಹರು ಎಂಬ ಕಲ್ಪನೆಯನ್ನು ಉತ್ತೇಜಿಸುತ್ತದೆ. ಕಾಸ್ಮೋಪಾಲಿಟನಿಸಂ ಎಲ್ಲರೂ ಸಮಾನರಾಗಬೇಕು ಎಂದರೆ, ಭಾರತೀಯ ತತ್ವಶಾಸ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಾವು ಸಮಾನರು ಮಾತ್ರವಲ್ಲ, ನಾವೆಲ್ಲರೂ ಒಂದೇ, ನಮ್ಮೆಲ್ಲರ ಸಮ್ಮೇಳನವೇ ಒಂದು ಸಮಾಜ, “ವಸುಧೈವ ಕುಟುಂಬಕಂ” ಎನ್ನುತ್ತಾ ಜೀವಿಗಳ ಪರಸ್ಪರ ಸಂಬಂಧದಲ್ಲಿ ಭಾರತೀಯ ದರ್ಶನಕ್ಕಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಸಾಮರಸ್ಯ, ಸಹಿಷ್ಣುತೆ ಮತ್ತು ವೈವಿಧ್ಯಮಯ ದೃಷ್ಟಿಕೋನಗಳ ಸ್ವೀಕಾರವನ್ನು ಉತ್ತೇಜಿಸುತ್ತಾ, ಆ ಮೂಲಕ ಎಲ್ಲರನ್ನೂ ಒಪ್ಪಿಕೊಳ್ಳುವ-ಅಪ್ಪಿಕೊಳ್ಳುವ ಸಮಾಜವನ್ನು ಬೆಳೆಸುತ್ತದೆ.

 

ಮೂರನೆಯದಾಗಿ, ಧರ್ಮದಿಂದ ಮಾರ್ಗದರ್ಶಿತವಾದ ನೈತಿಕ ನಡವಳಿಕೆ ಮತ್ತು ಸತ್ಯಸಂಧತೆ ಆದರ್ಶ ನಾಗರಿಕನ ಇನ್ನೊಂದು ಮೂಲಭೂತ ಗುಣ.ಗ್ರೀಕರು ಯುಡೈಮೋನಿಯಾ (eudaimonia) ಪರಿಕಲ್ಪನೆಯ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬ ನಾಗರೀಕನ ನೈತಿಕ ನಡವಳಿಕೆಯ ಮಹತ್ವವನ್ನು ಒತ್ತಿಹೇಳಿದರು. ಮಾನವ ಪ್ರಭೇದವೆಂಬುದು ಪ್ರವರ್ಧಮಾನದೆಡೆಗೆ ಸಾಗಲಿಕ್ಕೆ ಸಮಾಜದಲ್ಲಿ ಯೋಗಕ್ಷೇಮ, ಸಂತೋಷ ಮತ್ತು ಏಳಿಗೆಯ ಗುರುತುಗಳು ಕಂಡುಬರಲಿಕ್ಕೆ, ಒಬ್ಬ ವ್ಯಕ್ತಿಯಾಗಲೀ, ಒಂದು ವರ್ಗದ ಜನರಾಗಲೀ, ಅಥವಾ ರಾಜನಾಗಲೀ ಒಳ್ಳೆಯವನಿದ್ದರೆ ಸಾಕಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಂತೋಷ, ಯೋಗಕ್ಷೇಮವೇ ಇಡೀ ನಾಗರೀಕತೆಯ ಯೋಗಕ್ಷೇಮಕ್ಕೆ ದಾರಿ ಎಂದರು. ಸಾಕ್ರಟೀಸ್, ಎಪಿಕ್ಟೆಟಸ್ ಮತ್ತು ಮಾರ್ಕಸ್ ಆರೆಲಿಯಸ್ ಮುಂತಾದ ಸ್ಟೊಯಿಕ್ ತತ್ವಜ್ಞಾನಿಗಳು ವೈಯಕ್ತಿಕ ಮತ್ತು ಸಾಮಾಜಿಕ ಸಾಮರಸ್ಯದ ಕೀಲಿಯಾಗಿ ನೈತಿಕ ಸದ್ಗುಣಗಳ ಅಗತ್ಯತೆಯನ್ನು ಒತ್ತಿಹೇಳಿದರು. ಭಾರತೀಯ ತತ್ತ್ವಶಾಸ್ತ್ರ ಕೂಡಾ ಸಮಾಜದಲ್ಲಿ ಪ್ರಾಮಾಣಿಕತೆ, ಸತ್ಯತೆ ಮತ್ತು ಸಹಾನುಭೂತಿಯಂತಹ ಸದ್ಗುಣಗಳ ಕೃಷಿಗೆ ಒತ್ತು ನೀಡುತ್ತದೆ. ಇವುಗಳಿಂದಲೇ ಪ್ರೇರಿತರಾದ ಮಹಾತ್ಮ ಗಾಂಧಿ ಕೂಡಾ ಅಹಿಂಸೆ ಮತ್ತು ಸತ್ಯವನ್ನು ನೈತಿಕ ನಡವಳಿಕೆಯ ಆಧಾರ ಸ್ತಂಭಗಳಾಗಿ ಪ್ರತಿಪಾದಿಸಿದರು. ಅವರ ಬೋಧನೆಗಳು ಸಾಮಾಜಿಕ ಸೇವೆಯಲ್ಲಿ ನಿರತರಾದ ವ್ಯಕ್ತಿಗಳ ಬದುಕಿನಲ್ಲಿ ವೈಯಕ್ತಿಕ ಸಮಗ್ರತೆ ಎಷ್ಟು ಮುಖ್ಯ ಎಂಬುದನ್ನು ಒತ್ತಿಹೇಳುತ್ತವೆ. ನುಡಿದಂತೆಯೇ ನಡೆಯುವುದಕ್ಕೆ ಸ್ವತಃ ಗಾಂಧಿಯವರು ತಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದವರು.

 

ಸಮಾಜದ ಏಳಿಗೆಗೆ ಬೇಕಾದ ಮೂಲಭೂತ ಅಂಶಗಳ ಬಗ್ಗೆ ಭಾರತೀಯ ನಾಗರೀಕತೆಗಳ ಆಲೋಚನೆ ಎಷ್ಟು ಆಳದ್ದಾಗಿತ್ತು, ಹಾಗೂ ಯಾವುದೇ ಸಮಾಜ ಶ್ರೇಷ್ಟವಾಗುವುದು ಸಮಷ್ಟಿಯ ಕಲ್ಪನೆಯಲ್ಲೇ ಹೊರತು ಯಾರೋ ಒಬ್ಬ ಅಥವಾ ಕೇವಲ ಒಂದಷ್ಟು ಜನರಿಂದ ಅಲ್ಲ ಎಂಬುದನ್ನು ನಾವುಗಳು ಎಷ್ಟು ಮುಂಚೆಯೇ ಕಂಡುಕೊಂಡಿದ್ದೆವು ಎಂಬುದು ಗಮನಾರ್ಹ. ನಮ್ಮಲ್ಲಿ, ಧರ್ಮವೆಂಬುದು ಭಾರತೀಯ ತತ್ತ್ವಶಾಸ್ತ್ರದ ಕೇಂದ್ರ ಪರಿಕಲ್ಪನೆಯಾಗಿ ನಿಲ್ಲುತ್ತದೆ ಮತ್ತಿದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪೂರೈಸಬೇಕಾದ ಕರ್ತವ್ಯಗಳು ಮತ್ತು ನೈತಿಕ ಹೊಣೆಗಾರಿಕೆಗಳನ್ನು ಸೂಚಿಸುತ್ತದೆ. ನಮ್ಮಲ್ಲಿ ಆದರ್ಶ ಮನುಷ್ಯನಿಗೂ, ಆದರ್ಶ ಪ್ರಜೆಗೂ ಹೆಚ್ಚಿನ ವ್ಯತ್ಯಾಸವೇ ಇಲ್ಲ. ಆದರ್ಶ ಪ್ರಜೆಯೊಬ್ಬ ತನ್ನ ಕುಟುಂಬ, ಸಮಾಜ ಮಾತ್ರವಲ್ಲ ಇಡೀ ಸೃಷ್ಟಿ-ಸಮಷ್ಟಿಯೆಡೆಗೆ ತನಗಿರುವ ಕರ್ತವ್ಯಗಳನ್ನೂ ಮತ್ತದರ ಪಾಲನೆಗೆ ಅಗತ್ಯವಾದ ಧರ್ಮವನ್ನೂ ಅರ್ಥಮಾಡಿಕೊಳ್ಳುತ್ತಾನೆ ಮತ್ತದನ್ನು ಪಾಲಿಸುತ್ತಾನೆ. ತನ್ನ ಹೆತ್ತವರು, ಶಿಕ್ಷಕರು ಮತ್ತು ತನಗೆ ಜ್ಞಾನ ಮತ್ತು ಮಾರ್ಗದರ್ಶನವನ್ನು ನೀಡುವ ಬುದ್ಧಿವಂತ ವ್ಯಕ್ತಿಗಳಿಗೆ ಗೌರವ ಮತ್ತು ಕೃತಜ್ಞತೆಯನ್ನು ತೋರಿಸುತ್ತಾನೆ. ಅವನಿಗೆ ಕಲಿಕೆಯ ಅಗತ್ಯತೆ ಮತ್ತದರ ಮೌಲ್ಯದ ಅರಿವಿರುತ್ತದೆ ಮತ್ತು ತಾನು ಭೇಟಿಯಾಗುವವರೆಲ್ಲರಿಂದಲೂ ನಾನು ಯಾವ ವಿವೇಕವನ್ನು ಪಡೆಯಬಹುದು ಎಂಬುದನ್ನು ಹುಡುಕುತ್ತಾನೆ. ತನ್ನ ಆಲೋಚನೆ, ಮಾತು ಮತ್ತು ಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಪ್ರತಿಯೊಂದು ಘರ್ಷಣೆಯನ್ನೂ ಶಾಂತಿಯುತವಾಗಿ ಪರಿಹರಿಸುತ್ತಾ, ಇತರರಿಗೆ ಹಾನಿ ಅಥವಾ ಗಾಯವನ್ನು ಉಂಟುಮಾಡುವುದನ್ನು ತಪ್ಪಿಸುತ್ತಾನೆ. ರಾಮಾಯಣದಲ್ಲಿ ಅಂಗಧನೂ, ಮಹಾಭಾರತದಲ್ಲಿ ಶ್ರೀ ಕೃಷ್ಣನೂ ಯುದ್ಧಕ್ಕೆ ಮುನ್ನ ಸಂಧಾನಕ್ಕಾಗಿ ಹೋಗುವುದು ಅನ್ಯಾಯವಾಗಿ ನೂರಾರು ಜನರ ಸಾವನ್ನು ತಪ್ಪಿಸುವ ಸಲುವಾಗಿಯೇ. ಎರಡೂ ಸಂಧಾನಗಳಲ್ಲಿ ಪ್ರಯತ್ನಗಳು ವಿಫಲವಾದಾಗ, ತಮ್ಮನ್ನೇ ಬಂಧಿಸಲು ಬರುವ ಎದುರಾಳಿಗೆ ವಿಶ್ವರೂಪವನ್ನೂ ತೋರಿಸಿಬರುತ್ತಾರೆ. ಸಂಧಾನಕ್ಕೆ ಸದಾ ಬದ್ಧ, ಹಾಗೂ ಶಾಂತಿಗಾಗಿ ಕೆಲ ಸಣ್ಣಪುಟ್ಟ ಅವಮಾನಗಳನ್ನೂ ತಡೆದುಕೊಂಡು ಅಗತ್ಯಕ್ಕಿಂತಾ ಹೆಚ್ಚಿನ ಪರಿಶ್ರಮವನ್ನೂ ನಾವು ಹಾಕಲು ತಯಾರಿದ್ದೇವೆ. ಆದರೆ ತೀರಾ ಮೂಲಭೂತ ಮಾನವೀಯ ಮೌಲ್ಯಗಳನ್ನು ನೀನು ಮರೆತರೆ, ಯುದ್ಧಕ್ಕೂ ಸಿದ್ಧ ಎಂಬ ಭಾರತೀಯ ತಾತ್ವಿಕತೆಯನ್ನು ಈ ಎರಡೂ ಉದಾಹರಣೆಗಳು ತಿಳಿಸುತ್ತವೆ.

ಆದರ್ಶ ನಾಗರಿಕನಿಗೆ ಸ್ವಯಂ-ಶಿಸ್ತು ಮತ್ತು ಸ್ವಯಂ ನಿಯಂತ್ರಣದ ಅರಿವಿರುತ್ತದೆ. ಯೋಗ ಮತ್ತು ಧ್ಯಾನವನ್ನು ಕೇವಲ ಚಿಕಿತ್ಸೆಗೆಂದಷ್ಟೇ ಬಳಸದೇ, ದೈನಂದಿನ ಜೀವನದ ಭಾಗವಾಗಿಸಿಕೊಂಡು ಸಂಯಮ, ಇಂದ್ರಿಯ ಮತ್ತು ಬಯಕೆಗಳನ್ನು ನಿಯಂತ್ರಿಸುವ ಸಾಮರ್ಥ್ಯದಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ. ಆತ ಬ್ರಹ್ಮಚರ್ಯ, ಗೃಹಸ್ಥ ಮತ್ತು ವಾನಪ್ರಸ್ಥಾಶ್ರಮಗಳ ಅರಿವು ಮತ್ತು ಆಚರಣೆಯ ಮೂಲಕ ಸಮತೋಲಿತ ಜೀವನವನ್ನು ನಡೆಸುತ್ತಾ ಮತ್ತು ಸಮಾಜಕ್ಕೆ ಧನಾತ್ಮಕ ಕೊಡುಗೆಯನ್ನೂ ನೀಡುತ್ತಾನೆ. ಅವನಿಗೆ ನಿಸ್ವಾರ್ಥ ಸೇವೆಯ ಅರಿವಿರುತ್ತದೆ. ಆಹಾರ, ಔಷಧ, ಜ್ಞಾನ ಮತ್ತು ಅಭಯ ಈ ನಾಲ್ಕೂ ತರಹದ ದಾನಗಳ ಮೂಲಕ ಸಮಾಜದ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಾನೆ. ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ತೊಡಗುತ್ತಾ ಆಂತರಿಕ ಶಾಂತಿ ಮತ್ತು ಸಾಮರಸ್ಯದ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾನೆ. ವೈಯಕ್ತಿಕ ಬೆಳವಣಿಗೆಯೆಂಬುದು ಒಟ್ಟಾರೆಯಾಗಿ ಸಮಾಜದ ಯೋಗಕ್ಷೇಮದೊಂದಿಗೆ ಹೇಗೆ ಒಂದಾಗಿ ಹೆಣೆದುಕೊಂಡಿದೆ ಎಂದು ಗುರುತಿಸಿಕೊಂಡು ತನ್ನ ಬೆಳವಣಿಗೆಯೊಂದಿಗೇ ಸಮಾಜದ ಬೆಳವಣಿಗೆಗೆ ಪ್ರಯತ್ನಿಸುತ್ತಾನೆ.

 

ಇದಕ್ಕೆ ವ್ಯತಿರಿಕ್ತವಾಗಿ ಶತಮಾನಗಳ ಕಾಲ ಆಳವಾದ ವರ್ಗಸಂಘರ್ಷ, ದಬ್ಬಾಳಿಕೆಯಲ್ಲಿ ಬದುಕೆದ್ದು, ಕೊನೆಗೆ ಕೈಗಾರಿಕಾ ಕ್ರಾಂತಿಯ ಮೂಲಕ ಜೀವನಮಟ್ಟದ ಸುಧಾರಣೆಯನ್ನು ಕಂಡುಕೊಂಡ ಯೂರೋಪಿಯನ್ ಜಗತ್ತಿನ ತತ್ವಶಾಸ್ತ್ರ ಆದರ್ಶ ನಾಗರೀಕನನ್ನು ಬೇರೆಯದೇ ರೀತಿಯಲ್ಲಿ ಕಾಣುತ್ತದೆ. ತನ್ನ ಸಂಘರ್ಷಗಳನ್ನೂ, ರಿಲಿಜಿಯನ್ ಮತ್ತು ಸ್ಟೇಟ್ಎರಡನ್ನೂ ಬೇರ್ಪಡಿಸಲು ಅವರುಗಳು ಪಟ್ಟ ಶ್ರಮ(?)ವನ್ನೂ ಮೈಗೂಡಿಸಿಕೊಂಡ ಯೂರೋಪಿಯನ್ ಸಂವಿಧಾನಗಳೂ, ಯೂರೋಪಿಯನ್ ಚಿಂತನೆಗಳೂ, ಯೂರೋಪಿಯನ್ ಆದರ್ಶ ನಾಗರೀಕರನ್ನು, ಭಾರತೀಯ ವೈದಿಕ ಮತ್ತು ಗ್ರೀಕೋ-ರೋಮನ್ ಆದರ್ಶ ನಾಗರೀಕರಿಗಿಂತಾ ಬೇರೆಯದೇ ರೀತಿಯಲ್ಲಿ ರೂಪಿಸುತ್ತವೆ.

 

ಎನ್ಲೈಟನ್ಮೆಂಟ್ ಯುಗದಲ್ಲಿ ಹೊರಹೊಮ್ಮಿದ ಉದಾರವಾದದ ಚಿಂತನೆಯಿಂದ ಪ್ರಭಾವಿತವಾದ ಆಧುನಿಕ ಯುರೋಪಿಯನ್ ತತ್ವಶಾಸ್ತ್ರವು ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಈ ಸಮಾಜಗಳು ವೈಯಕ್ತಿಕಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಹೆಚ್ಚಾಗಿ ಪ್ರತಿಪಾದಿಸುತ್ತವೆ. ಜಾನ್ ಲಾಕ್ ಮತ್ತು ಜಾನ್ ಸ್ಟುವರ್ಟ್ ಮಿಲ್ ಅವರಂತಹ ಚಿಂತಕರು ವಾಕ್ ಸ್ವಾತಂತ್ರ್ಯ, ಆತ್ಮಸಾಕ್ಷಿ ಮತ್ತು ಸಾಂಘಿಕ ಹಕ್ಕುಗಳು ಸೇರಿದಂತೆ ವೈಯಕ್ತಿಕ ಹಕ್ಕುಗಳಿಗಾಗಿ ಪ್ರತಿಪಾದಿಸಿದರು. ಆಧುನಿಕ ಯುರೋಪಿಯನ್ ತತ್ವಶಾಸ್ತ್ರದಲ್ಲಿ ಆದರ್ಶ ನಾಗರಿಕನ ಮತ್ತೊಂದು ಪ್ರಮುಖ ಅಂಶವೆಂದರೆ ಸಕ್ರಿಯ ನಾಗರಿಕ ಪ್ರಾತಿನಿಧ್ಯತೆ ಮತ್ತು ರಾಜಕೀಯ ಚಟುವಟಿಕೆ. ಪ್ರಜಾಪ್ರಭುತ್ವವನ್ನು ಆಧುನಿಕ ಯುರೋಪಿಯನ್ ಸಮಾಜದ ಮೂಲಾಧಾರವೆಂದು ಹೆಚ್ಚೂ ಕಮ್ಮಿ ಎಲ್ಲಾ (ನೀತ್ಝೆ, ಥಾಮಸ್ ಹಾಬ್ಸ್, ಜೇಮ್ಸ್ ಮ್ಯಾಡಿಸನ್, ಕಾರ್ಲೈಲ್ ಹೊರತುಪಡಿಸಿ) ಯೂರೋಪಿಯನ್ ಚಿಂತಕರೂ ಪ್ರತಿಪಾದಿಸುವುದರಿಂದ, ಚುನಾವಣೆಗಳಲ್ಲಿ ಭಾಗವಹಿಸುವುದು, ನಾಗರಿಕ ಸಂಸ್ಥೆಗಳ ಭಾಗವಾಗುವುದು ಮತ್ತು ಸಾರ್ವಜನಿಕ ವ್ಯವಹಾರಗಳ ಬಗ್ಗೆ ತಿಳುವಳಿಕೆಯುಳ್ಳ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಆದರ್ಶ ನಾಗರಿಕನ ಅತ್ಯಗತ್ಯ ಜವಾಬ್ದಾರಿಗಳೆಂದು ಪರಿಗಣಿಸಲ್ಪಡುತ್ತದೆ. ಜೀನ್-ಜಾಕ್ವೆಸ್ ರೂಸ್ಸೋ ಮತ್ತು ಜ್ಯುರ್ಗೆನ್ ಹ್ಯಾಬರ್ಮಾಸ್ ಅವರಂತಹ ಚಿಂತಕರು ರಾಜಕೀಯ ನಿರ್ಧಾರಗಳನ್ನು ರೂಪಿಸುವಲ್ಲಿ ಸಾರ್ವಜನಿಕ ಚರ್ಚೆ ಮತ್ತು ನಾಗರಿಕರ ಒಳಗೊಳ್ಳುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಈ ಚಿಂತನೆಗಳೇ ಚುನಾವಣಾ ಪ್ರಣಾಳಿಕೆಗಳಂತಹಾ ಜನಾಭಿಪ್ರಾಯ ಸಂಗ್ರಹಣಾ ಸಾಧನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು.

 

ಜಾನ್ ರಾಲ್ಸ್ ಮತ್ತು ಕಾರ್ಲ್ ಮಾರ್ಕ್ಸ್ ಮುಂತಾದವರು ಜನಪ್ರಿಯಗೊಳಿಸಿದ ಕಲ್ಯಾಣರಾಜ್ಯದ ಪರಿಕಲ್ಪನೆಯು ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ದುರ್ಬಲರನ್ನು ರಕ್ಷಿಸುವ ಸಮಾಜಕ್ಕಾಗಿ ಕರೆಕೊಟ್ಟಿತು. ಇಮ್ಯಾನುಯೆಲ್ ಕಾಂಟ್ ಮತ್ತು ಫ್ರೆಡ್ರಿಕ್ ನೀತ್ಝೆ ಅವರಂತಹ ಚಿಂತಕರು ಅನ್ವೇಷಿಸಿದ ವಿಭಿನ್ನ ನೈತಿಕ ಚೌಕಟ್ಟುಗಳ ಮೂಲಕ, ಸದ್ಗುಣಶೀಲ ನಡವಳಿಕೆ ಮತ್ತು ತಮ್ಮ ನಾಯಕರ ನೈತಿಕತೆಯೆನ್ನು ಚರ್ಚಿಸುವ ಮತ್ತು ಪ್ರಶ್ನಿಸುವುದರೆಡೆಗೆ ಹೆಚ್ಚಿನ ಒತ್ತುನೀಡಲಾಯ್ತು. ಇದೇ ಕಾರಣಕ್ಕೆ ಇಂದಿಗೂ ಪಶ್ಚಿಮದ ಪ್ರಜಾಪ್ರಭುತ್ವಗಳಲ್ಲಿ, ಸಾಮಾನ್ಯ ಜನರ ವೈಯುಕ್ತಿಕ ಜನರ ಜೀವನಗಳು ಹೇಗೇ ಇರಲಿ, ತಮ್ಮ ನಾಯಕರ ಅನೈತಿಕ ನಡವಳಿಕೆಗಳನ್ನು ಅವರು ಸಹಿಸುವುದಿಲ್ಲ. ಒಬ್ಬ ನಾಗರೀಕನಿಗೆ ಹತ್ತು ಹಲವು ಸಂಗಾತಿಗಳಿರುವುದನ್ನು ವೈಯುಕ್ತಿಕ ಆಯ್ಕೆಯಡಿಯಲ್ಲಿ ಒಪ್ಪಿಕೊಳ್ಳುವ ಪಾಶ್ಚಿಮಾತ್ಯ ಸಮಾಜ, ತನ್ನ ನಾಯಕ ಮಾತ್ರ ಅತ್ಯಂತ ಸುಭಗನಾಗಿರಬೇಕೆಂದು ಬಯಸುತ್ತದೆ. ಕ್ಲಿಂಟನ್, ಟ್ರಂಪ್, ಬೆರ್ಲುಸ್ಕೋನಿ, ಮ್ಯಾಕರೂನ್ ಮುಂತಾದವರ ಕಥೆಗಳನ್ನೇ ಅವಲೋಕಿಸಿ ನೋಡಿ. ಈ ಎಲ್ಲಾ ದೇಶಗಳಲ್ಲಿ ಯಾರೇ ಸಾಮಾನ್ಯ ಪ್ರಜೆ ಕಚ್ಚೆಹರುಕನಾಗಿದ್ದರೆ, ಜನ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಡೈವೋರ್ಸುಗಳೂ ತೀರಾ ಸಾಮಾನ್ಯವಾಗಿ ನಡೆದು ಹೋಗುತ್ತವೆ. ಆದರೆ ದೇಶದ ಪ್ರಧಾನಿ ಅಥವಾ ಅಧ್ಯಕ್ಷನ ಮದುವೆ ಮುರಿದುಬಿದ್ದರೆ, ಆತ ಅಥವಾ ಆತನ ಹೆಂಡತಿ ಬೇರೆ ಸಂಬಂಧದಲ್ಲಿ ತೊಡಗಿದರೆ, ದೇಶದ ಪ್ರಜೆಗಳ ಎದೆಯೊಡೆದು ಹೋಗುತ್ತದೆ.

One comment on “ಆದರ್ಶ ನಾಗರೀಕ: ಭಾರತೀಯ, ಗ್ರೀಕ್ ಮತ್ತು ಯೂರೋಪಿಯನ್ ಪರಿಕಲ್ಪನೆಗಳು

Nagaraj M

ರಾಘಣ್ಣಾ ನೀವು ಮೇಲೆ ಉಲ್ಲೇಖಿಸಿದ ಮಹನೀಯರ ಮತ್ತು ಚಿಂತಕರ ಯಾವುದೇ ಪುಸ್ತಕಗಳನ್ನು ನಾನು ಓದಿಲ್ಲವಾದರೂ
ಕೊನೆಯಲ್ಲಿ ನೀವು ಬರೆದ ಈ ಅಭಿಪ್ರಾಯ ಬಹಳ ದಿನಗಳಿಂದ ನನ್ನನ್ನೂ ಕಾಡುತ್ತಿದೆ
ವೈಯಕ್ತಿಕವಾಗಿ ನಾವೇ ಅಧಃಪತನ ಹೊಂದಿದ್ದಾಗ ನಮ್ಮ ನಾಯಕರಾದವರನ್ನು ಪ್ರಶ್ನಿಸುವ ನೈತಿಕತೆ ಉಳಿದಿರುತ್ತದೆಯೇ ??
ವಿನಾಕಾರಣ ಒಂದು ನಾಯಿಯನ್ನು ಯಾರಾದರೂ ಹೊಡೆದರೆ ಮರುಗುವ ಮನಸ್ಸಿಗೆ
ಮೇಕೆಯನ್ನು ಕತ್ತರಿಸಿ ತಿಂದರೂ ಏನೂ ಅನ್ನಿಸದಿರಲು ಕಾರಣವೇನು ??
ಹುಲಿ ಸಹಜವಾಗಿ ಜಿಂಕೆಯನ್ನು ಬೇಟೆಯಾಡುವುದನ್ನು ನೋಡಿದಾಗ ಜಿಂಕೆಗಾಗಿ ಮರುಗುವ ಮನಸ್ಸು
ಕುರಿ,ಕೋಳಿ,ಮೇಕೆಗಳಿಗಾಗಿ ಏಕೆ ಮರುಗುವುದಿಲ್ಲ ??
ಇದಕ್ಕೆ ಮಾನವಶಾಸ್ತ್ರಜ್ಞರ ಪ್ರಕಾರ ಏನಾದರೂ ಸಿದ್ಧಾಂತಗಳು ಉಂಟೇ
ನಿಮಗೆ ಇದರ ಬಗ್ಗೆ ಏನಾದರೂ ಮಾಹಿತಿ ಇದ್ದಲ್ಲಿ ತಿಳಿಸಿ 🙏

Reply

Leave a Reply

Your email address will not be published. Required fields are marked *