Thursday, 18 April, 2024

“ಆದರ್ಶ ಚುನಾವಣಾ ಪ್ರಣಾಳಿಕೆಯೊಂದು ಹೇಗಿರಬೇಕು”

Share post

ಚುನಾವಣೆಗಳು ಹೊಸ್ತಿಲಲ್ಲಿವೆ. ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ತಮ್ಮದೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನ ನಾವು ನೋಡಿಯೇ ಇದ್ದೇವೆ. ಕಳೆದ ಶತಮಾನಕ್ಕೆ ಹೋಲಿಸಿದರೆ, ಈ ಶತಮಾನದ ಚುನಾವಣೆಗಳಲ್ಲಿ ಇದೊಂದು ಧನಾತ್ಮಕ ಬೆಳವಣಿಗೆ. ಮೊದಲು ಬರೀ ಆಶ್ವಾಸನೆಗಳು ಬಾಯಿಮಾತಿನಲ್ಲಿರುತ್ತಿದ್ದವು. ಪ್ರಜೆಗಳು ಬುದ್ಧಿವಂತರಾದಂತೆಲ್ಲಾ ನಿಧಾನಕ್ಕೆ ಈ ಆಶ್ವಾಸನೆಗಳು ಅಕ್ಷರರೂಪಕ್ಕಿಳಿದು, ಪ್ರಣಾಳಿಕೆಯ ರೂಪ ಪಡೆದುಕೊಂಡವು. ಆದರೆ ಚುನಾವಣೆಗೆ ಮುನ್ನ ಆಶ್ವಾಸನೆಗಳ ಬುತ್ತಿಯಾಗುವ ಈ ಪ್ರಣಾಳಿಕೆ, ಸರ್ಕಾರದ ಅವಧಿ ಮುಗಿಯುವ ಸಮಯಕ್ಕೆ ರಿಪೋರ್ಟ್ ಕಾರ್ಡ್ ಕೂಡಾ ಆಗಬೇಕು. ಮತಯಾಚನೆಗೆ ಬರುವವರನ್ನ, ಹಿಂದಿನ ಚುನಾವಣೆಯ ಪ್ರಣಾಳಿಕೆ ತೋರಿಸಿ, ಇದರಲ್ಲೆಷ್ಟು ಮಾಡಿದ್ರಿ ಅಂತಾ ಕೇಳುವಂತಾಗಬೇಕು. ಬಹುಷಃ ನಮ್ಮ ಜನರಿನ್ನೂ ಆ ಮಟ್ಟಕ್ಕೆ ತಲುಪಿಲ್ಲ.

 

ಪ್ರಣಾಳಿಕೆ ಅನ್ನೋದು ರಾಜಕೀಯ ಪಕ್ಷವೊಂದರ ದೃಷ್ಟಿಕೋನ, ನೀತಿಗಳು ಮತ್ತು ಭವಿಷ್ಯದ ಯೋಜನೆಗಳನ್ನು ವಿವರಿಸುವ ಲಿಖಿತ ಘೋಷಣೆ. ಇದು ಮೂಲಭೂತವಾಗಿ ರಾಜಕೀಯ ಪಕ್ಷದ ಗುರಿಗಳು ಮತ್ತು ಉದ್ದೇಶಗಳಿಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ ಮತ್ತು ಅವುಗಳನ್ನು ಸಾಧಿಸಲು ಪಕ್ಷದ ಕಾರ್ಯತಂತ್ರಗಳನ್ನು ವಿವರಿಸುತ್ತದೆ. ಒಂದು ಆದರ್ಶ ರಾಜಕೀಯ ಪಕ್ಷದ ಪ್ರಣಾಳಿಕೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಒಳಗೊಂಡಂತೆ ಆಡಳಿತದ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಸಮಗ್ರ ದಾಖಲೆಯಾಗಿರಬೇಕು. ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವನ್ನು ಅರ್ಥಮಾಡಿಕೊಳ್ಳಲು ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಜೆಗಳಿಗೆ ಇದು ಅತ್ಯಗತ್ಯ ಸಾಧನವಾಗಿ ಕೆಲಸ ಮಾಡಬೇಕು. ಉತ್ತಮವಾಗಿ ರಚಿಸಲಾದ ಪ್ರಣಾಳಿಕೆಯೊಂದು, ಇಂದಿನ ದಿನಗಳಲ್ಲಿ ಪಕ್ಷದ ಪ್ರಚಾರದ ಅಡಿಪಾಯವಾಗಿ ಕೆಲಸ ಮಾಡಿ ಚುನಾವಣೆಗಳನ್ನು ಗೆಲ್ಲಲು ಖಂಡಿತಾ ಸಹಾಯ ಮಾಡುತ್ತದೆ.

 

ಭಾರತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದಷ್ಟೇ ಗಟ್ಟಿಗೊಂಡ ಈ ಪ್ರಣಾಳಿಕೆ ಎಂಬ ಕಲ್ಪನೆಯ ಆರಂಭ, ಸೊಲೊನ್ ಎಂಬ ಒಬ್ಬ ಅಥೆನಿಯನ್ ರಾಜಕಾರಣಿಯಿಂದ ಬಂದದ್ದು ಎನ್ನಲಾಗುತ್ತದೆ. ಕ್ರಿ,ಪೂ 6ನೇ ಶತಮಾನದ ಆರಂಭದಲ್ಲಿ ಆತ ಗುಲಾಮಗಿರಿ, ಅಸಮಾನತೆ ಮತ್ತು ರಾಜಕೀಯ ಭ್ರಷ್ಟಾಚಾರ ಸೇರಿದಂತೆ ಆ ಕಾಲದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು, ಸುಧಾರಣೆಗಳ ಸರಣಿಯೊಂದನ್ನು ಬರೆದ. ಸೊಲೊನ್‌ ಪ್ರಸ್ತುತಪಡಿಸಿದ ಸುಧಾರಣೆಗಳಿಗೆ ಸ್ಪಷ್ಟವಾದ ಗುರಿಗಳಿದ್ದವು.  ಸಾಲ ಪರಿಹಾರ, ಹೊಸ ವರ್ಗದ ನಾಗರಿಕರ ರಚನೆ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಸಮಗ್ರ ದಾಖಲೆಯಾಗಿತ್ತು. ಕೇವಲ ತನ್ನ ಗುರಿಗಳನ್ನು ಗುರುತಿಸುವುದಷ್ಟೇ ಅಲ್ಲ, ಅವನ್ನು ಸಾಧಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಹಾಗೂ ಇಡೀ ಪ್ರಕ್ರಿಯೆಯನ್ನು ವಿವರಿಸುವ ಭವಿಷ್ಯದ ಸ್ಪಷ್ಟ ಮಾರ್ಗಸೂಚಿಯನ್ನೂ ಸಹ ಇದು ಒದಗಿಸಿತ್ತು. ಈ ಸುಧಾರಣೆಗಳನ್ನು “ಸೊಲೊನಿಯನ್ ಸಂವಿಧಾನ” (Solonian constitution) ಎಂದು ದಾಖಲಿಸಲಾಯ್ತು. ಇದೇ ಅಥೇನಿಯನ್ ಪ್ರಜಾಪ್ರಭುತ್ವದ ಆಧಾರವೂ ಆಯಿತು. ಆದರ್ಶ ಪ್ರಣಾಳಿಕೆಯೊಂದು ಹೇಗಿರಬೇಕು ಎಂಬುದಕ್ಕೆ ಸೊಲೊನಿಯನ್ ಸಂವಿಧಾನವು ಅತ್ಯುತ್ತಮ ಉದಾಹರಣೆಯಾಗಿತ್ತು.

 

ರಾಜಕೀಯ ಪ್ರಣಾಳಿಕೆಯ ಕಲ್ಪನೆಗೆ ದೂರದ ಗ್ರೀಸ್ ಮಾತ್ರವಲ್ಲ, ಭಾರತದ ಪ್ರಾಚೀನ ಇತಿಹಾಸವೂ ಕೊಡುಗೆ ನೀಡಿದೆ. ಕ್ರಿಪೂ 3ನೇ ಶತಮಾನದಲ್ಲಿ ಭಾರತೀಯ ತತ್ವಜ್ಞಾನಿ ಕೌಟಿಲ್ಯ ಬರೆದ “ಅರ್ಥಶಾಸ್ತ್ರ” ಕೂಡಾ, ಆಡಳಿತದ ತತ್ವಗಳನ್ನು ಕೂಲಂಕುಷವಾಗಿ ವಿವರಿಸುತ್ತಾ, ವಿದೇಶಾಂಗ ನೀತಿ, ಅರ್ಥಶಾಸ್ತ್ರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಸಾಮಾನ್ಯಜನರಿಗೆ ವಿವರಿಸುವ ಈ ಗ್ರಂಥ ಒಂದು ಸಮಗ್ರ ರಾಜಕೀಯ ಪ್ರಣಾಳಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ರಾಜಕೀಯದ ಆಸಕ್ತಿಯಿರುವ ಎಲ್ಲರೂ ಓದಬೇಕಾದ ಗ್ರಂಥ ಚಾಣಕ್ಯನ ಅರ್ಥಶಾಸ್ತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

 

ಇಂದಿನ ಆಧುನಿಕ ಯುಗದಲ್ಲಿ, ರಾಜಕೀಯ ಪಕ್ಷದ ಪ್ರಣಾಳಿಕೆಗಳು ಮೂಲಭೂತ ಸೌಕರ್ಯಗಳು, ತೆರಿಗೆ, ಆರೋಗ್ಯ ಮತ್ತು ಶಿಕ್ಷಣದಂತಹ ನಿರ್ದಿಷ್ಟ ವಿಷಯಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿವೆ. ಆದಾಗ್ಯೂ, ಆದರ್ಶ ಪ್ರಣಾಳಿಕೆಗಳು ಇನ್ನೂ ವಿಶಾಲ ವ್ಯಾಪ್ತಿಯ ಸಮಸ್ಯೆಗಳನ್ನು ಒಳಗೊಂಡಿರಬೇಕು ಮತ್ತು ಪಕ್ಷದ ಗುರಿಗಳನ್ನು ಸಾಧಿಸಲು ಸ್ಪಷ್ಟ ಮಾರ್ಗಸೂಚಿಯನ್ನು ಒದಗಿಸಬೇಕು ಎಂಬುದು ನನ್ನ ಅಭಿಪ್ರಾಯ. ಆದರ್ಶ ಪ್ರಣಾಳಿಕೆಯೊಂದರ ಪ್ರಮುಖ ಅಂಶವೆಂದರೆ ಪಕ್ಷದ ಮೌಲ್ಯಗಳು ಮತ್ತು ತತ್ವಗಳ ಸ್ಪಷ್ಟ ಹೇಳಿಕೆ. ಇದು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಕಾನೂನಿನ ಪಾಲನೆಯೆಡೆಗೆ ಪಕ್ಷದ ಬದ್ಧತೆಯ ಹೇಳಿಕೆಯನ್ನು ಒಳಗೊಂಡಿರಬೇಕು. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ಪಕ್ಷದ ನಿಲುವನ್ನು ಸಹ ಇದು ವಿವರಿಸಬೇಕು.

 

ಆದರ್ಶ ಪ್ರಣಾಳಿಕೆಯ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಪಕ್ಷದ ನೀತಿಗಳ ಸಮಗ್ರ ವೇದಿಕೆಯಾಗಿರಬೇಕು. ಆರೋಗ್ಯ, ಶಿಕ್ಷಣ, ತೆರಿಗೆ ಮತ್ತು ಸಾಮಾಜಿಕ ಕಲ್ಯಾಣ ಸೇರಿದಂತೆ ವ್ಯಾಪಕ ಶ್ರೇಣಿಯ ಸಮಸ್ಯೆಗಳನ್ನು ಒಳಗೊಂಡಿರಬೇಕು. ಎಲ್ಲಾ ನೀತಿಗಳು ಪುರಾವೆ ಮತ್ತು ಸಂಶೋಧನೆಯನ್ನು ಆಧರಿಸಿರಬೇಕು, ವಾಸ್ತವಿಕವಾಗಿರಬೇಕು ಮತ್ತು ಸಾಧಿಸುವಂತಿರಬೇಕು. ಪಕ್ಷದ ಮೌಲ್ಯಗಳ ಸ್ಪಷ್ಟ ಹೇಳಿಕೆ ಮತ್ತು ಸಮಗ್ರ ನೀತಿ ವೇದಿಕೆಯ ಜೊತೆಗೆ, ಆದರ್ಶ ಪ್ರಣಾಳಿಕೆಯು ಅನುಷ್ಠಾನದ ಯೋಜನೆಯನ್ನು ಸಹ ಒಳಗೊಂಡಿರಬೇಕು. ಅಂದರೆ ಕೇವಲ ಘೋಷಣೆಗಳನ್ನು ಮಾಡುವುದು ಮಾತ್ರವಲ್ಲ, ಅವನ್ನು ಹೇಗೆ ಪೂರೈಸುತ್ತೇವೆ ಎಂಬುದನ್ನೂ ವಿವರಿಸಬೇಕು. ಪಕ್ಷವು ತನ್ನ ಗುರಿಗಳನ್ನು ಸಾಧಿಸಲು ತೆಗೆದುಕೊಳ್ಳುವ ನಿರ್ದಿಷ್ಟ ಕ್ರಮಗಳನ್ನು ಮತ್ತು ಅವುಗಳನ್ನು ಸಾಧಿಸಲು ಸಮಯವನ್ನೂ ವಿವರಿಸಬೇಕು.

 

ಕಾಲಕ್ಕೆ ತಕ್ಕಂತ ಪ್ರಣಾಳಿಕೆಗಳೂ ಬದಲಾಗಿ ಹೊಸ ಶತಮಾನಕ್ಕೆ ತಕ್ಕ ನೀತಿಗಳ ಬಗ್ಗೆಯೂ ಮಾತನಾಡಬೇಕು. ಇನ್ನೂ ಅದೇ ರಸ್ತೆ ಮಾಡಲಾಗುತ್ತದೆ, ನೀರಿನ ಪೈಪು ಹಾಕಲಾಗುತ್ತದೆ, ಮೂರೂ ಹೊತ್ತೂ ಮೂರು ಫೇಸಿನ ವಿದ್ಯುತ್ ಕೊಡಲಾಗುತ್ತದೆ ಮುಂತಾದ ಆಶ್ವಾಸನೆಗಳಿಗೇ ನಿಲ್ಲದೇ, ಉದ್ಯೋಗಸೃಷ್ಟಿ, ಖಾಸಗೀಕರಣ, ಸೈಬರ್ ಕ್ರೈಂ ಮತ್ತು ಸಾಮಾಜಿಕ ತಾಣ ಕಂಪನಿಗಳಿಗೆ ಕಡಿವಾಣ ಹಾಕುವ ಮಾಹಿತಿ ತಂತ್ರಜ್ಞಾನ ನೀತಿಗಳು, ಕಡಿಮೆ ವಯಸ್ಸಿನಲ್ಲಾಗುವ ಗರ್ಭಧಾರಣೆ ಮತ್ತು ಮಹಿಳಾಆರೋಗ್ಯದ ಕುರಿತಾದ ನಿಯಮಗಳು, ಡ್ರಗ್ಸ್ ಬೆಟ್ಟಿಂಗ್ ಮುಂತಾದ ವ್ಯಸನಕಾರೀ ವಹಿವಾಟುಗಳ ಕುರಿತಾದ ನೀತಿ ನಿಯಮಗಳು, ಪ್ರಜೆಗಳ ಮಾನಸಿಕ ಆರೋಗ್ಯ ಕುರಿತಾದ ನಿಯಮಗಳು ಇತ್ಯಾದಿಗಳೂ ಕೂಡಾ ಇಂದಿನ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲಿ ಸೇರಲೇಬೇಕಾದ ವಿಷಯಗಳು.

 

ಸಮಕಾಲೀನ ರಾಜಕೀಯದಲ್ಲಿ, ಪ್ರಪಂಚದಾದ್ಯಂತದ ಅನೇಕ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆಗಳಲ್ಲಿ ಈ ಅಂಶಗಳನ್ನು ಅಳವಡಿಸಿಕೊಂಡಿವೆ. ಯುನೈಟೆಡ್ ಕಿಂಗ್‌ಡಂನಲ್ಲಿನ ಲೇಬರ್ ಪಾರ್ಟಿಯು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸೇರಿದಂತೆ ವ್ಯಾಪಕ ಶ್ರೇಣಿಯ ಸಮಸ್ಯೆಗಳನ್ನು ಒಳಗೊಳ್ಳುವ ಸಮಗ್ರ ನೀತಿವೇದಿಕೆಯನ್ನು ಹೊಂದಿದೆ. ಪಕ್ಷದ ಪ್ರಣಾಳಿಕೆಯು ಅದರ ಗುರಿಗಳನ್ನು ಸಾಧಿಸಲು ನಿರ್ದಿಷ್ಟ ಹಂತಗಳು ಮತ್ತು ಸಮಯಾವಧಿಗಳೊಂದಿಗೆ ಅನುಷ್ಠಾನಕ್ಕೆ ಸ್ಪಷ್ಟವಾದ ಯೋಜನೆಯನ್ನು ಒಳಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ANC), ತನ್ನ ಪಕ್ಷದ ಸಿದ್ಧಾಂತಕ್ಕನುಗುಣವಾಗಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯೆಡೆಗೆ ಪಕ್ಷದ ಬದ್ಧತೆಯನ್ನು ಪ್ರತಿಬಿಂಬಿಸುವ ಪ್ರಣಾಳಿಕೆಯನ್ನು ಹೊಂದಿದೆ. ಪ್ರಣಾಳಿಕೆಯು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಉದ್ಯೋಗ ಸೃಷ್ಟಿಯಂತಹ ವಿಷಯಗಳನ್ನು ಪ್ರಸ್ತಾಪಿಸುವುದು ಮಾತ್ರವಲ್ಲದೇ, ಅವುಗಳ ಅನುಷ್ಠಾನ ಯೋಜನೆಯನ್ನೂ ಉತ್ತಮವಾಗಿ ವಿವರಿಸುತ್ತದೆ. ಜರ್ಮನಿಯಲ್ಲಿ ಗ್ರೀನ್ ಪಾರ್ಟಿಯು, ತನ್ನ ಮುಖ್ಯ ಸಿದ್ಧಾಂತಕ್ಕೆ ಬದ್ದವಾಗಿ ಪರಿಸರವಾದ ಮತ್ತು ಸಾಮಾಜಿಕ ನ್ಯಾಯಕ್ಕೆ ಪಕ್ಷದ ಬದ್ಧತೆಯನ್ನು ಪ್ರತಿಬಿಂಬಿಸುವ ಪ್ರಣಾಳಿಕೆಯನ್ನು ಹೊಂದಿದೆ. ಪಕ್ಷದ ವೇದಿಕೆಯು ಹವಾಮಾನ ಬದಲಾವಣೆ, ವನ್ಯಸಂಕುಲದ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ನೀತಿಗಳನ್ನು ಒಳಗೊಂಡಿದೆ.

 

ಭಾರತದಲ್ಲಿ ನಾನು ಕಂಡಂತೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಾಂಸ್ಕೃತಿಕ, ರಾಷ್ಟ್ರೀಯತೆ ಮತ್ತು ಆರ್ಥಿಕ ಬೆಳವಣಿಗೆಗೆ ಪಕ್ಷದ ಬದ್ಧತೆಯನ್ನು ಪ್ರತಿಬಿಂಬಿಸುವ ಪ್ರಣಾಳಿಕೆಯನ್ನು ಹೊಂದಿದೆ. ಪ್ರಣಾಳಿಕೆಯು ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ, ಉದ್ಯಮಶೀಲತೆಯ ಉತ್ತೇಜನ ಮತ್ತು ಬಲವಾದ ರಾಷ್ಟ್ರೀಯ ರಕ್ಷಣೆಯ ಸ್ಥಾಪನೆ ಸೇರಿದಂತೆ ಹಲವಾರು ನೀತಿಗಳನ್ನು ವಿವರಿಸುತ್ತದೆ. ಮಾತ್ರವಲ್ಲ ತನ್ನ ಗುರಿಗಳನ್ನು ಸಾಧಿಸಲು ನಿರ್ದಿಷ್ಟ ಕಾಲಮಿತಿಗಳೊಂದಿಗೆ ಅನುಷ್ಠಾನಕ್ಕೆ ಸ್ಪಷ್ಟವಾದ ಯೋಜನೆಯನ್ನೂ ಒಳಗೊಂಡಿದೆ.

 

ಈ ಗಂಭೀರ ವಿಷಯದ ಬಗ್ಗೆ ಮಾತನಾಡುವಾಗ ಚುನಾವಣೆಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗದಿದ್ದರೂ, ತಮ್ಮ ಪ್ರಣಾಳಿಕೆಯ ಮೂಲಕ ದೇಶದ ಕೆಲ ಪ್ರಮುಖ ವಿಷಯಗಳತ್ತ ಗಮನ ಸೆಳೆದ ಮತ್ತು ಗಂಭೀರ ರಾಜಕೀಯ ಪ್ರಚಾರದ ಸಮಯದಲ್ಲಿ ಕೆಲವು ಹೆಚ್ಚು ಅಗತ್ಯವಿರುವ ಹಾಸ್ಯವನ್ನು ಒದಗಿಸಿದ ಕೆಲವೊಂದು ಪಕ್ಷಗಳ ಪ್ರಣಾಳಿಕೆಯ ಬಗ್ಗೆಯೂ ನಾವು ತಿಳಿಯಬೇಕು.

 

ಯುನೈಟೆಡ್ ಕಿಂಗ್‌ಡಮ್‌ನ ಅಫೀಷಿಯಲ್ ಮಾನ್‌ಸ್ಟರ್ ರೇವಿಂಗ್ ಲೂನಿ ಪಾರ್ಟಿ (OMRLP) ತನ್ನ ಹಾಸ್ಯಮಯ ರಾಜಕೀಯ ವಿಧಾನಕ್ಕೆ ಹೆಸರುವಾಸಿಯಾಗಿದೆ. ಅವರ ಪ್ರಣಾಳಿಕೆಯು “ಶಾಲಾ ಮಕ್ಕಳಿಗೆ ಉಚಿತ ಮೊಸರು”, “ಪೀ ಎಂದು ಶಬ್ದಮಾಡುವ ರಬ್ಬರ್ ಕೋಳಿಗಳು” ಮತ್ತು “ಮತದಾನದ ವಯಸ್ಸನ್ನು 18 ತಿಂಗಳಿಗೆ ಇಳಿಸುವುದು” ಮುಂತಾದ ನೀತಿಗಳನ್ನು ಒಳಗೊಂಡಿದೆ. ಕೆನಡಾದಲ್ಲಿ 1970 ಮತ್ತು 1980 ರ ದಶಕದಲ್ಲಿ ಅಸ್ತಿತ್ವದಲ್ಲಿದ್ದ, ರೈನೋಸರಸ್ ಪಾರ್ಟಿ ತನ್ನ ವಿಡಂಬನಾತ್ಮಕ ರಾಜಕೀಯಕ್ಕೆ ಹೆಸರಾಗಿತ್ತು. ತನ್ನ ಪ್ರಣಾಳಿಕೆಯಲ್ಲಿ “ಗುರುತ್ವಾಕರ್ಷಣೆಯ ನಿಯಮವನ್ನು ರದ್ದುಗೊಳಿಸುವ ಭರವಸೆ” ಮತ್ತು “ವಿಶ್ವದ ಅತಿದೊಡ್ಡ ಪಾರ್ಕಿಂಗ್ ಸ್ಥಳವನ್ನು ರಚಿಸಲು ಮ್ಯಾನಿಟೋಬಾ ಪ್ರಾಂತ್ಯವನ್ನು ಖಾಲಿಮಾಡುವ ಆಶ್ವಾಸನೆ” ಮುಂತಾದ ಹಾಸ್ಯಚಟಾಕಿಗಳನ್ನು ಸೇರಿಸಿತ್ತು. 1990ರಲ್ಲಿ ಬಿಯರ್ ಮತ್ತು ಸಾಂಪ್ರದಾಯಿಕ ಪೋಲಿಷ್ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಪೋಲಿಷ್ ಬಿಯರ್-ಪ್ರೇಮಿಗಳ ಪಕ್ಷ ತನ್ನ ಪ್ರಣಾಳಿಕೆಯು “ಬಿಯರ್ ಅನ್ನು ಪೋಲೆಂಡ್‌ನ ರಾಷ್ಟ್ರೀಯ ಪಾನೀಯವೆಂದು ಘೋಷಿಸುವುದು” ಮತ್ತು “ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಿಯರ್ ಲಭ್ಯವಾಗುವಂತೆ ಮಾಡುವುದು” ಮುಂತಾದ ನೀತಿಗಳನ್ನು ಒಳಗೊಂಡಿತ್ತು.

 

ಇತ್ತೀಚೆಗೆ ಕರ್ನಾಟಕದಲ್ಲಿ ಪಕ್ಷವೊಂದು ಉಚಿತ ವಿದ್ಯುತ್ಚಕ್ತಿ, ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ, ಹೆಂಗಸರಿಗೆ ಉಚಿತ ಬಸ್ ಪ್ರಯಾಣ ಮುಂತಾದುವನ್ನು ಘೋಷಿಸಿದೆ. ಆದರೆ ಇವುಗಳನ್ನು ಹೇಗೆ ಪೂರೈಸಲಿದೆ, ಇದಕ್ಕೆ ಬೇಕಾದ ಬಜೆಟ್ ಅನ್ನು ಹೇಗೆ ಸರಿದೂಗಿಸಲಿದೆ ಎನ್ನುವುದರ ಬಗ್ಗೆ ಯಾವುದೇ ಪುರಾವೆಯನ್ನು ಅದು ಕೊಟ್ಟಿಲ್ಲ. ರಾಜ್ಯದ ಆದಾಯ ಕನಿಷ್ಟ ನಾಲ್ಕುಪಟ್ಟು ಹೆಚ್ಚಾಗದೇ, ರಾಜ್ಯದ ಪ್ರಜೆಗಳ ಮೇಲಿರುವ ಸಾಲದ ಹೊರೆಯನ್ನು ಹತ್ತುಪಟ್ಟು ಹೆಚ್ಚುಮಾಡದೇ ಇಂತಹ ಉಚಿತಗಳಲ್ಲಿ ಒಂದನ್ನೂ ಕೊಡಲಾಗುವುದಿಲ್ಲ ಎಂದು ಗೊತ್ತಿದ್ದೂ, ಗ್ಯಾರಂಟಿಗಳ ಮೇಲೆ ಗ್ಯಾರಂಟಿ ಬಿಡುಗಡೆ ಮಾಡುತ್ತಿರುವ ಈ ಪಕ್ಷದ ಮುಖ್ಯ ವ್ಯಕ್ತಿಯ ತಮಾಷೆಯ ಮಾತುಗಳಿಗೂ , ಚುನಾವಣೆಯ ಘನಗಂಬೀರದ ವಿಷಯವಾದ ಪ್ರಣಾಳಿಕೆಗೂ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಇಂತಹ ಪ್ರಣಾಳಿಕೆಗಳು ಕೇವಲ ಚರುಮುರಿ ಕಟ್ಟಲಿಕ್ಕಷ್ಟೇ ಬಳಸಬಹುದೇ ಹೊರತು, ಪ್ರಜ್ಞಾವಂತ ಮತದಾರ ಇದರಿಂದ ಆಕರ್ಷಿತಗೊಳ್ಳಲಾರ. ಇಷ್ಟೇ ಅಲ್ಲ, ರಾಜ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದರೂ ಪರವಾಗಿಲ್ಲ, ಒಂದು ವರ್ಗಕ್ಕೆ ಉಚಿತ ದಾನಗಳನ್ನು ಕೊಡುವುದಾಗಿ ನಂಬಿಸುವ ಈ ಪಕ್ಷಗಳನ್ನು ರಾಜ್ಯದ ಮತದಾರ ಸಂಪೂರ್ಣವಾಗಿ ದೂರವಿಡಬೇಕು.

0 comments on ““ಆದರ್ಶ ಚುನಾವಣಾ ಪ್ರಣಾಳಿಕೆಯೊಂದು ಹೇಗಿರಬೇಕು”

Leave a Reply

Your email address will not be published. Required fields are marked *