Tuesday, 27 February, 2024

ಜನಸಂಖ್ಯಾ ಸ್ಪೋಟ…..ಆದರೆ ಆಗಿಬಿಡಲಿ ಬಿಡಿ, ಒಳ್ಳೆಯದೇ

Share post

ನಾವು ಒಂದು ಹುಡುಗಿ, ಒಬ್ಬಳು ಹೆಂಡತಿ, ಒಂದೋ ಎರಡೋ ಮಕ್ಕಳನ್ನ ಸುಧಾರಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿರ್ತೀವಿ. “ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ…ನಾವಿಬ್ಬರು ನಮಗಿಬ್ಬರು” ಎನ್ನುವಲ್ಲಿಂದ “ಗಂಡ ಹೆಂಡ್ತಿ ಮುಖದಲ್ಲಿ ನಗು, ಬೀದಿಗೊಂದು ಮಗು” ಅನ್ನೋ ಸ್ಥಿತಿಗೆ ಬಹುತೇಕ ಹಿಂದೂಗಳು, ಮಾತ್ರವಲ್ಲ ಇಡೀ ಯೂರೋಪು ಅಮೇರಿಕಾ ತಲುಪಿವೆ. ಅದೇ ಕಾಲಕ್ಕೆ ಶಾಂತಿಬಯಸುವವರು ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಮನೆತುಂಬ, ಊರತುಂಬೆಲ್ಲಾ ಮಕ್ಕಳು ಮಾಡಿಕೊಳ್ಳುತ್ತಿರುವಾಗ, ಅಲ್ಲೊಬ್ಬ “ನಾವು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳದೇ ಇರೋದು, ಮಾನವಕುಲಕ್ಕೆ ಮಾಡ್ತಾ ಇರೋ ದೊಡ್ಡ ಅಪಚಾರ” ಅಂತಿದ್ದಾನೆ. ಜನಸಂಖ್ಯೆ ಹೆಚ್ಚಾಗಿ ಉಣ್ಣೋಕೆ ತಿನ್ನೋಕೇ ಕಷ್ಟ ಆಗ್ತಿರುವಾಗ, ಥಾನೋಸ್, ಬಿಲ್ ಗೇಟ್ಸಿನಂತವರು “ಜಗತ್ತಿನ ಅರ್ಧ ಜನಸಂಖ್ಯೆಯನ್ನೇ ತೆಗೀಬೇಕು” ಅನ್ನುತ್ತಿರುವಾಗ, “ನನಗೆ ಮಕ್ಕಳು ಬೇಡ” ಅನ್ನುವ ಹೆಂಗಸರನ್ನ ಸದ್ಗುರುಗಳೆಲ್ಲಾ ಭಳಿರೇ ಶಭಾಷ್ ಅಂತಾ ಪ್ರೋತ್ಸಾಹಿಸುತ್ತಿರುವಾಗ, ಇದ್ಯಾರಪ್ಪಾ ಮಕ್ಕಳು ಮಾಡ್ಕೊಳಿ, ಮಕ್ಕಳು ಮಾಡ್ಕೊಳಿ ಅಂತಿರೋನು ಅಂತಾ ಕೇಳ್ತಿದೀರಾ?

 

ಎಲೆಕ್ಟ್ರಿಕ್ ಕಾರು, ಹಾರೋಕೆ ರಾಕೆಟ್ಟು, ಅದೇ ರಾಕೆಟ್ಟನ್ನ ಇಳಿಸಿ ಇನ್ನೊಂದ್ಸಲ ಹಾರಿಸೋ ತಂತ್ರಜ್ಞಾನ, ಮೊಬೈಲಿಗೆ ಡೇಟಾ ಕೊಡೋಕೆ ಸ್ಟಾರ್ ಲಿಂಕು ಇನ್ನೊಂದು ಮತ್ತೊಂದು ಎಲ್ಲಾ ತಯಾರಿಸ್ತಾ, ಜಗತ್ತಿನ ಚಹರೆಯನ್ನೇ ಬದಲಾಯಿಸ್ತಾ ಇರೋ ಜಗತ್ತಿನ ಸಧ್ಯದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಇಂತಹುದೊಂದು ವಿಚಾರಧಾರೆಯನ್ನ ಮತ್ತೆ ಮತ್ತೆ ಮುನ್ನೆಲೆಗೆ ತರಲಿಕ್ಕೆ ಪ್ರಯತ್ನಿಸ್ತಾ ಇದ್ದಾನೆ. ಒಂದುಕಡೆ “ಜಗತ್ತಿನ ತೈಲನಿಕ್ಷೇಪವನ್ನೆಲ್ಲಾ ಮನುಷ್ಯರು ಖಾಲಿ ಮಾಡ್ತಾ ಇದ್ದಾರೆ. ಹೀಗಾದ್ರೆ ಜಗತ್ತು ನಿಂತು ಹೋಗುತ್ತೆ” ಅಂತಾ ಹೇಳಿ ಎಲೆಕ್ಟ್ರಿಕ್ ಕಾರು ತಯಾರಿಸಿದವ. “ಹೀಗೇ ಮುಂದುವರೆದ್ರೆ ಭೂಮಿಯಲ್ಲಿ ಬದುಕೋದು ಕಷ್ಟ” ಅಂತಾ ಮಂಗಳನಲ್ಲಿ ಮನೆ ಕಟ್ಟೋಕೆ ತಯಾರಾದವ. ಭೂಮಿಯನ್ನು ನಂಬಿಕೊಂಡಿದ್ರೆ ಆಗಲ್ಲ ಅಂತಾ ಹೇಳುವವ, ಇನ್ನೊಂದು ಕಡೆ “ಹೆಚ್ಚೆಚ್ಚು ಮಕ್ಕಳನ್ನ ಹುಟ್ಟಿಸಿ” ಅಂತಿದ್ದಾನಲ್ಲ! ಅಂತಾ ಆಶ್ಚರ್ಯವಾ?

ಜಗತ್ತೆಲ್ಲಾ ಜನಸಂಖ್ಯಾ ಸ್ಪೋಟ ಆಗ್ತಿದೆ, ಇದನ್ನು ನಿಲ್ಲಿಸಬೇಕು ಅಂತಾ ಪ್ರಯತ್ನಪಡ್ತಾ ಇರುವಾಗ, ಎಲೋನ್ ಹೇಳುವ ಮಾತೇ ಬೇರೆ. ಅವನ ಪ್ರಕಾರ “ಅದು ಕೇವಲ ಒಂದೆರಡು ಜಾಗಗಳಲ್ಲಿ ಮಾತ್ರ ಇರೋ ತೊಂದರೆ. ಬೇರೆ ಕಡೆ under-population, ಅಂದ್ರೆ ಜನಸಂಖ್ಯಾ ಕುಸಿತ ಅದಕ್ಕಿಂತಾ ದೊಡ್ಡ ತೊಂದರೆಯಾಗಿದೆ. ಇಬ್ಬರು ಸೇರಿ ಒಂದೇ ಮಗು ಮಾಡಿಕೊಳ್ಳೋದು, ಇಬ್ಬರು ಸೇರಿದರೂ ಮಕ್ಕಳು ಮಾಡಿಕೊಳ್ಳದೇ ಇರೋದು, ಅದಕ್ಕೆ ಸರಿಯಾಗಿ ಹೆಚ್ಚಾಗ್ತಾ ಇರೋ ಈ ಲೆಸ್ಬಿಯನ್ ಗೇ ಅನುಪಾತ, ಇವೆಲ್ಲಾ ಸೇರಿ ನಮ್ಮ ಪುನರುತ್ಪಾದನಾ ಅನುಪಾತ ಕುಸಿಯುತ್ತಾ ಇದೆ. ಮುಂದಿನ ಐವತ್ತು ವರ್ಷದಲ್ಲಿ ಜಗತ್ತಿನಲ್ಲಿ ಈಗಿರೋ 50%ನಷ್ಟು ಜನ ಮಾತ್ರ ಇರ್ತಾರೆ. ಜನರ ಸಂಖ್ಯೆ ಕಡಿಮೆಯಾದ್ರೆ ಬರೀ ಜನ ಮಾತ್ರ ಕಮ್ಮಿಯಾಗಲ್ಲ, ಬುದ್ಧಿವಂತ ಜನರ ಸಂಖ್ಯೆಯೂ ಕಡಿಮೆಯಾಗುತ್ತೆ. ಇದರಿಂದಾಗಿ ಓವರಾಲ್ ಪೆದ್ದುತನವೇ (ಅಥವಾ ಈಗಿನ ಟ್ವೆರ್ಕಿಂಗ್ ಜನರೇಷನ್ನಿನವರು ಯಾವುದನ್ನ ಕೂಲ್, ಹೆಪ್ ಅಂತಾ ಕರೀತಾರೋ ಆ ಅಪಸವ್ಯವೇ) ಹೆಚ್ಚಾಗುತ್ತೆ ಅನ್ನೋದು ಮಸ್ಕನ ಅಂಬೋಣ. “ನಮಗೆ ಹೆಚ್ಚೆಚ್ಚು ಬುದ್ಧಿವಂತ ಜನರು ಬೇಕು. ಆ ಹೆಚ್ಚು ಬುದ್ಧಿವಂತ ಜನರ ಆವರೇಜ್ ತಲುಪಬೇಕು ಅಂದ್ರೆ ಹೆಚ್ಚೆಚ್ಚು ಜನರೂ ಬೇಕು, ಇಲ್ಲಾಂದ್ರೆ ಭೂಮಿ ಪೂರ್ತಿ ಹಾಳಾಗಿ ಮಂಗಳ ಗ್ರಹಕ್ಕೆ ಹಾರುವ ಹೊತ್ತಿಗೆ ಬೆರಳೆಣಿಕೆಯಷ್ಟೇ ಬುದ್ಧಿವಂತರು, ನಯಾಪೈಸೆ ಕೆಲಸಕ್ಕೆ ಬರದ ಆದರೆ ತಲೆಯೆಲ್ಲಾ ಮಾತನಾಡುವ ಆದರ್ಶವಾದಿಗಳನ್ನೇ ಕರೆದುಕೊಂಡು ಹೋಗಬೇಕಾಗುತ್ತೆ” ಅಂತಾನೆ ಮಸ್ಕ್.

 

ಮತ್ತಿವನ ಮಾತು ಸಂಪೂರ್ಣ ಅಸತ್ಯವೂ ಅಲ್ಲ. ಜಪಾನಿನಲ್ಲಿ ಕುಸಿಯುತ್ತಿರುವ ಜನಸಂಖ್ಯೆಯಿಂದಾಗಿ ಅಲ್ಲಿನ ಸರ್ಕಾರಕ್ಕೆ ತಲೆಬಿಸಿ ಆಗಿದೆಯಂತೆ. ಕೆಲಸ ಮಾಡಬಲ್ಲ ಶಕ್ತ ಯುವಜನರ ಸಂಖ್ಯೆ ಕಮ್ಮಿಯಾಗಿ, ಅಲ್ಲಿನ ವಯಸ್ಸಾದ ಅಜ್ಜ ಅಜ್ಜಿಯರು ಡಬಲ್ ಶಿಫ್ಟ್ ಕೆಲಸ, ರಿಟೈರ್ ಆದಮೇಲೂ ಕೆಲಸ ಮಾಡಬೇಕಾಗಿ ಬಂದಿದೆ. ಜರ್ಮನಿ ಸೇರಿದಂತೆ ಯೂರೋಪಿನ ಎಲ್ಲಾ ದೇಶಗಳು ತಮ್ಮ ಉತ್ಪಾದಕತೆಯನ್ನು ಉಳಿಸಿಕೊಂಡು, ಆರ್ಥಿಕ ಸಬಲತೆಯನ್ನು ಉಳಿಸಿಕೊಳ್ಳಲಿಕ್ಕಾಗಿ ನಿರಾಶ್ರಿತರಿಗೆ ಆಸರೆ ಕೊಡುವ ಅನುಕಂಪದ ಹೆಸರಿನಲ್ಲಿ, ಕೆಲಸ ಮಾಡಬಲ್ಲ ಜನರನ್ನು ಆಮದು ಮಾಡಿಕೊಳ್ಳುತ್ತಿವೆ. ಅಮೇರಿಕಾದ ಕೆಲ ರಾಜ್ಯಗಳು, ಯೂರೋಪಿನ ಹಲವು ದೇಶಗಳು, ಚಿಲಿ, ನ್ಯೂಝೀಲ್ಯಾಂಡ್ ಕೂಡಾ “ಇಲ್ಲಿಗೆ ಬಂದು ಸೆಟಲ್ ಆದರೆ ಇಪ್ಪತ್ತೈದು ಸಾವಿರ ಡಾಲರ್ ಕೊಡ್ತೀವಿ” ಅಂತಿವೆ. ಜಗತ್ತಿಗೆ ಬೇಕಾದ ಎಲ್ಲವನ್ನೂ ತಯಾರಿಸುತ್ತಿರುವ ಚೀನಾದಲ್ಲೂ, ಜನಸಂಖ್ಯೆಯ ಕುರಿತಂತೆ ಸಧ್ಯದ ಸರ್ಕಾರೀ ನಿಯಮಾವಳಿಗಳೇ ಮುಂದುವರಿದರೆ, ಮುಂದಿನ ನಲವತ್ತು ವರ್ಷಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಲಿದೆ.

 

USA Birthrate

 

China Birthrate

“ಒಂದುವೇಳೆ ಮಂಗಳನಲ್ಲಿಗೆ ಹೋಗುವ ಪರಿಸ್ಥಿತಿ ಬರದೇ, ಮನುಕುಲ ಈ ಭೂಮಿಯನ್ನೇ ರಿಪೇರಿ ಮಾಡಿ ಇಲ್ಲೇ ಉಳಿದುಕೊಂಡರೂ, ಜನರ ಸಂಖ್ಯೆಯೇ ಕಡಿಮೆಯಾದಂತೆ, ಸಧ್ಯಕ್ಕೆ ಯಾವ ಕ್ಲೈಮೇಟ್ ಚೇಂಜಿಗಾಗಿ ಈಗಿನ ಜನ ಹೋರಾಡ್ತಾ ಇದ್ದಾರೋ, ಅದರ ಸಂಪೂರ್ಣ ವಿರುದ್ದದ್ದೇ ಪರಿಣಾಮ ಉಂಟಾಗಲಿದೆ, ಪರಿಸರದ ಸಮತೋಲನವೇ ಹಾಳಾಗುತ್ತೆ” ಅಂತಾ ಮಸ್ಕನ ಅಭಿಪ್ರಾಯ. “ಇಷ್ಟೇ ಅಲ್ಲದೇ ಆರ್ಥಿಕವಾಗಿಯೂ ಸಂಪತ್ತಿನ ಅಸಮಾನತೆಯುಂಟಾಗಲಿದೆ. ತಲೆಯಲ್ಲಿ ನಯಾಪೈಸೆ ಬುದ್ಧಿಯಿರದಿದ್ದರೂ ದೈಹಿಕವಾಗಿ ಗಟ್ಟಿಯಿರುವವರ ಬಳಿಯೇ ನೈಸರ್ಗಿಕ ಸಂಪನ್ಮೂಲಗಳೆಲ್ಲಾ ಉಳಿದುಕೊಂಡುಬಿಟ್ಟರೆ, ಭೂಮಿಯಮೇಲೆ ನಾಗರೀಕತೆಯೆನ್ನುವುದು ಉಳಿಯುವುದಿಲ್ಲ. ಬದಲಿಗೆ ಒಬ್ಬರನ್ನೊಬ್ಬರು ಹರಿದುತಿನ್ನುವ ಸಂಕುಲವಷ್ಟೇ ಉಳಿದುಬಿಡುತ್ತದೆ. ಇದಕ್ಕಾಗಿ ನಮಗೆ ಹೆಚ್ಚೆಚ್ಚು ಜನರು ಬೇಕು. ಆದ್ದರಿಂದ ಜನರು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು” ಅಂತಾನೆ. ದೈಹಿಕವಾಗಿ ಗಟ್ಟಿಯಿರುವವರು ಮಾತ್ರವಲ್ಲದೆ, ಜಗತ್ತನ್ನು ಆಪೋಷನ ತೆಗೆದುಕೊಳ್ಳುವ ಮನಸ್ಸುಮಾಡಿ, ತಮ್ಮ ದೇವರೊಂದೇ ಉಳಿಯಬೇಕು ಎಂದು ಹೊರಟು ತಮ್ಮವರ ಜನಸಂಖ್ಯೆಯನ್ನು ಹತ್ತುಪಟ್ಟು ಹೆಚ್ಚಿಸಿಕೊಳ್ಳುತ್ತಿರುವ ಕೆಲ ಮತಗಳನ್ನು ನೋಡಿದರೆ ಮಸ್ಕನ ಈ ಮಾತಿನ ಹಿಂದಿರುವ ಇನ್ನೊಂದು ಭಯವೂ ನಿಮಗೆ ಅಂದಾಜಾಗಬಲ್ಲುದು.

Europe Birthrate

ಮತ್ತಿವ ಬರೀ ಬಾಯಿಮಾತಿನ ಶೂರನಲ್ಲ. ಇದನ್ನೆಲ್ಲಾ ಕೃತಿಯಲ್ಲೂ ಮಾಡಿ ತೋರಿಸಿದ್ದಾನೆ. “ಪಕ್ಕದ ಮನೆಯವನು ಮಕ್ಕಳು ಮಾಡ್ಲಿ, ನಾವು ಬರೀ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕೋಣ” ಅನ್ನೋ ಜನರ ಹಾಗೆ ಕೂರದೇ, ಉಳಿದವರಿಗೆ ಜನಸಂಖ್ಯಾ ಹೆಚ್ಚಳಕ್ಕೆ ಕರೆಕೊಡುತ್ತಲೇ, ಸ್ವತಃ ತಾನು ಎರಡು ಮದುವೆಯಾಗಿ, ಅವೆರಡು ಮಾತ್ರವಲ್ಲದೇ ಇನ್ನೆರಡು ಸಂಬಂಧಗಳಿಂದ ಒಟ್ಟು 9 ಬಾರಿ ತಂದೆಯಾಗಿದ್ದಾನೆ. ಕೊನೆಯದು ಅವಳಿ ಮಕ್ಕಳಾದ್ದರಿಂದ ಒಟ್ಟು ದಸ್ ಬಚ್ಚೋಂಕಾ ಬಾಪ್ ಈ ಮಸ್ತ್ ಮಸ್ತ್ ಮಸ್ಕ್. ಇದುವರೆಗೂ ತಿಳಿದುಬಂದಿರುವ ಇವನ ಮಕ್ಕಳ ಸಂಖ್ಯೆ ಹತ್ತು. ಇನ್ನು ಹೊರಗೆ ಬರದೇ ಇರುವ ಕಥೆಗಳೆಷ್ಟೋ ಗೊತ್ತಿಲ್ಲ! ಆದರೆ ತನ್ನ ಮಕ್ಕಳ ಬಗ್ಗೆಯಾಗಲೀ, ಸಂಬಂಧಗಳ ಬಗ್ಗೆಯಾಗಲೀ ಈವರೆಗೆ ಮುಚ್ಚುಮರೆ ಮಾಡದ, ತನ್ನ ಸರಿ ತಪ್ಪುಗಳನ್ನು ಬಿಂದಾಸಾಗಿ ಒಪ್ಪಿಕೊಳ್ಳುವ ಮಸ್ಕ್ ಈ ವಿಷಯವನ್ನು ಮುಚ್ಚಿಡಲಿಕ್ಕಿಲ್ಲ ಅಂತಾ ಸಧ್ಯದ ಲೆಕ್ಕಾಚಾರ. ನಾಲ್ಕು ತಾಯಂದಿರಿಂದ ಹತ್ತು ಮಕ್ಕಳನ್ನು ಪಡೆದವನಿಗೆ, ಇನ್ನೆರಡು ಮಕ್ಕಳಾದರೆ ಅದರಲ್ಲಿ ಮುಚ್ಚಿಡಲಿಕ್ಕೇನಿರುತ್ತದೆ? ತಾನು ಮಾತ್ರವಲ್ಲ, ತನ್ನ ಕಂಪನಿಗಳಲ್ಲಿ ಕೆಲಸ ಮಾಡುವವರಿಗೂ ಸಹ ಮಸ್ಕ್ ಹೆಚ್ಚೆಚ್ಚು ಮಕ್ಕಳು ಮಾಡಿಕೊಳ್ಳುವಂತೆ ಹೇಳುತ್ತಾನೆ. ಅಪ್ಪ-ಅಮ್ಮ ಆಗಬಯಸುವವರಿಗೆ ಹೆಚ್ಚೆಚ್ಚು ರೀತಿಯ ಆರ್ಥಿಕ ಸಹಾಯಗಳನ್ನೂ, ಕಂಪನಿ ಪಾಲಿಸಿಗಳಲ್ಲಿ ಬೇರೆ ಬೇರೆ ನಿಯಮಗಳ ಸಡಿಲಿಕೆಯನ್ನೂ ತಂದಿದ್ದಾನೆ.

Musk Family Tree

ಹೋದವರ್ಷ ಅಮೇರಿಕಾದ ಸುಪ್ರೀಂ ಕೋರ್ಟ್ ಅಬಾರ್ಷನ್ ಅನ್ನು ಕಾನೂನುಬಾಹಿರ ಅಂತಾ ಘೋಷಿಸಿದ ಬೆನ್ನಲ್ಲೇ, ಮಸ್ಕ್ ತನ್ನ ಟೆಸ್ಲಾ ಮತ್ತು ಸ್ಪೇಸ್-ಎಕ್ಸ್ ಎಂಪ್ಲಾಯಿಗಳಿಗೆ “ನಿಮಗೆ ಫರ್ಟಿಲಿಟಿ ಸಂಬಂಧೀ ಚಿಕಿತ್ಸೆ ಬೇಕಿದ್ದರೆ 40,000 ಡಾಲರ್’ವರೆಗಿನ ಬಿಲ್ ಅನ್ನು ಕಂಪನಿ ಭರಿಸುತ್ತದೆ, ಮಕ್ಕಳು ಹುಟ್ಟಿದರೆ 16 ವಾರಗಳ ಸಂಬಳಸಹಿತ ರಜೆಯನ್ನೂ ಕೊಡಲಿದ್ದೇವೆ” ಅಂತಾ ಘೋಷಿಸಿದ್ದ ಮಸ್ಕ್. “ತನ್ನ ಬೇರೆಕಂಪನಿಗಳಲ್ಲೂ ಇದೇ ಪಾಲಿಸಿ ನಿಧಾನಕ್ಕೆ ಜಾರಿಗೆ ಬರಲಿದೆ, ಹಾಗೂ ಜಗತ್ತಿನ ಬೇರೆ ದೈತ್ಯ ಕಂಪನಿಗಳೂ, ತಮ್ಮ ಕೆಲಸಗಾರರ ಮೆಟರ್ನಿಟಿ/ಪೆಟರ್ನಿಟಿ ಪಾಲಿಸಿಗಳ ಬಗ್ಗೆ ಗಮನಹರಿಸಬೇಕು” ಅಂತಾ ಕೇಳಿಕೊಂಡಿದ್ದಾನೆ.

 

ಹೆಚ್ಚು ಮಕ್ಕಳನ್ನು ಹುಟ್ಟಿಸುವ ಈ ಚಾಳಿ ಮಸ್ಕನಿಗೆ ಬಹುಷಃ ಅವರಪ್ಪನಿಂದ ಬಂದಿದ್ದಿರಬಹುದು. ಯಾಕೆಂದರೆ ಎಲೋನನ ಅಪ್ಪ ಎರೋಲ್ ಮಸ್ಕ್, 1970ರಲ್ಲಿ ಮೇಯ್ ಮಸ್ಕ್’ಳನ್ನು ಮದುವೆಯಾಗಿ ಎಲೋನ್, ಕಿಂಬಾಲ್ ಮತ್ತು ಟೋಸ್ಕಾ ಎಂಬ ಮೂರುಮಕ್ಕಳಿಗೆ ಅಪ್ಪನಾದ. 1979ರಲ್ಲಿ ಈ ದಂಪತಿಗಳು ಬೇರೆಯಾದ ಮೇಲೆ ಈ ಎರೋಲ್, ಹೈಡಿ ಎಂಬಾಕೆಯನ್ನು ಮದುವೆಯಾಗಿ ಹದಿನೆಂಟು ವರ್ಷದ ಆ ವೈವಾಹಿಕ ಜೀವನದಲ್ಲಿ ಜಾಕ್ ಮತ್ತೆ ಹ್ಯಾರಿ ಅನ್ನೋ ಇನ್ನಿಬ್ಬರು ಮಕ್ಕಳನ್ನ ಹುಟ್ಟಿಸಿದ. ಈ ಮದುವೆಯಾಗುವ ಮುನ್ನವೇ ಹೈಡಿಗೆ ಜನಾ ಅನ್ನೋ ನಾಲ್ಕುವರ್ಷದ ಮಗಳಿದ್ಲು. ಈ ಪುಣ್ಯಾತ್ಮ ಎರೋಲ್ ಆ ಹುಡುಗಿಗೂ, ಅಂದರೆ ತನ್ನ ಮಲಮಗಳಿಗೂ ಎರಡು ಮಕ್ಕಳನ್ನು ದಯಪಾಲಿಸಿದ್ದಾನೆ!!! Ofcourse, ಅದಾದದ್ದು ಆಕೆ ವಯಸ್ಕಳಾದ ಮೇಲೆ. ಇವರಿಬ್ಬರಿಗೂ ಈವರೆಗೆ ಒಂದು ಮಗುವಾಗಿತ್ತು ಅನ್ನೋ ಸುದ್ಧಿ ಮೊದಲೇ ಪ್ರಚಾರದಲ್ಲಿತ್ತು. Infact, 2019ರಲ್ಲಿ ಆ ಮೊದಲ ಮಗುವಿನ ವಿಚಾರ ತಿಳಿದಾಗಲೇ ಎಲೋನ್ ಮತ್ತು ಎರೋನ್ ಇಬ್ಬರ ನಡುವೆ ವೈಮನಸ್ಯ ಬಂದು ಪರಸ್ಪರ ದೂರಾಗಿದ್ದರು. ಕಳೆದವರ್ಷ ಈ ಪುಣ್ಯಾತ್ಮ ಎರೋಲ್ ನನಗೂ ಜನಾ’ಗೂ ಎರಡನೇ ಮಗುವೂ ಇದೆ ಅಂತಾ ಸುದ್ಧಿ ಸ್ಪೋಟಿಸಿ ಕುಟುಂಬಕ್ಕೆ ಒಂದಷ್ಟು ಮುಜುಗರ ತಂದಿದ್ದಾನೆ. ಅಷ್ಟೇ ಅಲ್ಲದೇ, “ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸುವುದು ಮನುಷ್ಯನ ಕೆಲಸ ಮಾತ್ರವಲ್ಲ, ಕರ್ತವ್ಯ ಕೂಡಾ” ಎಂದಿದ್ದಾನೆ. ಮಸ್ಕನ ಅಮ್ಮ ಮೇಯ್ ಕೂಡಾ ಎರೋಲ್’ನಿಂದ ಬೇರೆಯಾದ ಮೇಲೆ ಇನ್ನೊಂದು ಮದುವೆಯಾಗಿ ಇನ್ನೆರಡು ಮಕ್ಕಳನ್ನು ಭೂಮಿಗೆ ಪರಿಚಯಿಸಿದ್ದಳು. ಮಸ್ಕನ ಅಪ್ಪ-ಅಮ್ಮಂದಿರು ತಂತಮ್ಮ ಪರಿಧಿಯಲ್ಲಿ ಏಳು ಮಕ್ಕಳನ್ನು ಹೆತ್ತು, ಮಸ್ಕ್ ಒಬ್ಬನೇ ಹತ್ತು ಮಕ್ಕಳ ಜನನಕ್ಕೆ ಕಾರಣನಾಗಿ ಇವರ ಇಡೀ ಕುಟುಂಬ ಜನಸಂಖ್ಯಾ ಹೆಚ್ಚಳಕ್ಕೆ ತಮ್ಮ ಅಳಿಲುಸೇವೆ ಸಲ್ಲಿಸಿದ್ದಾರೆ.

 

ಮಸ್ಕ್ ಕುಟುಂಬದ ಈ ಹೊಸಾ ಸುದ್ಧಿಯ ನೈತಿಕ ಹಳವಂಡಗಳು ಹಲವಿರಬಹುದು. ಮಲಮಗಳಿಗೇ ಮಕ್ಕಳನ್ನು ದಯಪಾಲಿಸುವುದು ಕೆಲವರಿಗೆ ಮಾನಸಿಕವಾಗಿ ವಾಂತಿ ತರಿಸುವ ವಿಚಾರವೂ ಆಗಬಹುದು. ಆದರೆ ಜನಸಂಖ್ಯಾ ಕುಸಿತದ ಪರಿಣಾಮಗಳ ಬಗ್ಗೆ ಕೇವಲ ಎಲೋನ್ ಮಾತ್ರವಲ್ಲ, ಹಲವಾರು ಸಂಶೋಧನೆಗಳು ಸರ್ಕಾರಗಳನ್ನೂ, ದೊಡ್ಡ ದೊಡ್ಡ ಕಂಪನಿಗಳನ್ನೂ ಹಲವುಬಾರಿ ಎಚ್ಚರಿಸಿವೆ. ಮುಂದೊಂದು ದಿನ ನ್ಯೂಕ್ಲಿಯರ್ ಅಪಾಕಲಿಪ್ಸ್ ಆಗಿ, ನ್ಯೂಕ್ಲಿಯರ್ ವಿಂಟರ್ ನಂತರದ ದಿನಗಳಲ್ಲಿ ಜಗತ್ತು ಒಳ್ಳೆಯ ಜನರ ಕೈಯಲ್ಲಿ ಇರಬೇಕೆಂದರೆ, ಜನಸಂಖ್ಯೆಯನ್ನು ಒಂದು ಪಿಡುಗು ಎಂದು ನೋಡುತ್ತಿರುವ ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದು ಮತ್ತೆ ಮತ್ತೆ ಸಾರಿ ಹೇಳಿವೆ. ಇದನ್ನು ಸರಿಪಡಿಸಿ, ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವ ಉಪಾಯ ನಮಗಿನ್ನೂ ತಿಳಿದಿಲ್ಲದಿರಬಹುದು. ಆದರೆ ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸ ನಡೆಯಬೇಕು ಎನ್ನುವುದಂತೂ ನಿಜ.

0 comments on “ಜನಸಂಖ್ಯಾ ಸ್ಪೋಟ…..ಆದರೆ ಆಗಿಬಿಡಲಿ ಬಿಡಿ, ಒಳ್ಳೆಯದೇ

Leave a Reply

Your email address will not be published. Required fields are marked *