Saturday, 27 April, 2024

ಕೆಂಪು ಪೇಪರ್ ಕ್ಲಿಪ್ ಕೊಟ್ಟು, ಎರಡಂತಸ್ತಿನ ಮನೆ ಪಡೆದವನ ಕಥೆ

Share post

ಜೀವನದಲ್ಲಿ ಯಶಸ್ಸು ಸಾಧಿಸಲಿಕ್ಕೆ ಏನು ಮಾಡಬೇಕು? ಅಂತಾ ಕೇಳಿದ್ರೆ ಕೆಲವರು ಕಷ್ಟಪಟ್ಟು ದುಡಿಯಬೇಕು ಅನ್ನಬಹುದು, ಕೆಲವರು ಜ್ಞಾನ ಇರಬೇಕು ಅನ್ನಬಹುದು, ಮತ್ತೆ ಕೆಲವರು “ಏನೇ ಗಳಿಸಬೇಕಾದರೂ ಅದೃಷ್ಟ ಇರಬೇಕು. ಅದಿಲ್ಲದಿದ್ದರೆ ಎಷ್ಟೇ ಬುದ್ಧಿವಂತಿಕೆ, ಶ್ರಮ ಹಾಕಿದರೂ ಏನೂ ಗಿಟ್ಟಲ್ಲ” ಅನ್ನಬಹುದು. ಅವೆಲ್ಲವೂ ಸರಿಯಾದ ಮಾತುಗಳು ಕೂಡಾ ಹೌದು. ಹಣ, ಹೆಸರು, ಸ್ಥಾನ ಮಾತ್ರವಲ್ಲ ಮನಶ್ಶಾಂತಿ ಪಅಡೆಯಲಿಕ್ಕೂ ಕೂಡಾ ಅದನ್ನು ಗಳಿಸುವುದು ಹೇಗೆ ಎನ್ನುವ ಪರಿಜ್ಞಾನ ಇರಬೇಕು. ಆ ಜ್ಞಾನ ಇದ್ದಕೂಡಲೇ ಎಲ್ಲವೂ ಕಾಲಕೆಳಗೆ ಬಂದು ಬೀಳೋದಿಲ್ಲ. ಅದರೆಡೆಗೆ ನಮ್ಮ ಪರಿಶ್ರಮವೂ, ಎಲ್ಲಿ ಯಾವಾಗ ಏನು ಮಾಡಬೇಕೆಂಬ ಯೋಜನೆಯೂ ಬೇಕು. ಇಷ್ಟೆಲ್ಲ ಮಾಡಿದಮೇಲೂ ಎಷ್ಟೋ ವಿಚಾರಗಳು ಕೈಗೂಡುವುದಿಲ್ಲ. “ಮುಂದಿನವರ್ಷ ಮ್ಯಾನೇಜರ್ ಆಗುತ್ತೇನೆ, ಸಂಬಳ ಹೆಚ್ಚಾಗುತ್ತೆ, ಇಎಂಐ ಕಟ್ಟೋಕೆ ಸುಲಭವಾಗುತ್ತೆ, ಆಗ ಹೊಸಾಮನೆ” ಎನ್ನುವ ಪ್ಲಾನ್ ಹಾಕ್ಕೊಂಡು ಕೂತಿರುತ್ತೇವೆ. ಬಾಸ್ ಅಚಾನಕ್ಕಾಗಿ ತನ್ನ ಅಳಿಯನನ್ನ ಆ ಕೆಲಸಕ್ಕೆ ತಂದು ಕೂರಿಸ್ತಾನೆ. ಅಲ್ಲಿಗೆ ನಿಮ್ಮ ಪ್ಲಾನ್ ಪೂರ್ತಿ ಕುಸಿದು ಬೀಳುತ್ತೆ. ಹೀಗೆ ಕೆಲವೊಂದಷ್ಟು ಆಸೆಗಳು ಕೈಗೂಡಲಿಕ್ಕೆ ಅದೃಷ್ಟವೂ ಬೇಕು.

 

ಇದರ ಬಗ್ಗೆಯೇ ಒಂದು ಕಥೆ ಈ ವಾರದ್ದು. ಇದನ್ನು ನೀವು ಪ್ರೇರಣೆಯ ಕಥೆಯೆನ್ನಿ, ಸಿನಿಮೀಯ ಕಥೆಯೆನ್ನಿ ಅಥವಾ ವಿಲಕ್ಶಣ ಕಥೆಯೆನ್ನಿ. “ಅಬ್ಬಬ್ಬಾ!” ಎನಿಸದಿದ್ದರೂ “ಅರೆರೆ!!” ಎನಿಸುವ ಕಥೆಯಂತೂ ಹೌದು. ಕೆನಡಾದ ಮಾಂಟ್ರಿಯಾಲ್’ನ 26ವರ್ಷ ವಯಸ್ಸಿನ ಕೈಲ್ ಮ್ಯಾಕ್‌ಡೊನಾಲ್ಡ್‌ ಒಂದು ಕೆಂಪುಬಣ್ಣದ ಪೇಪರ್ ಕ್ಲಿಪ್ಪಿನಿಂದ ಪ್ರಾರಂಭಿಸಿ, ಆನ್‌ಲೈನ್ ಟ್ರೇಡಿಂಗ್ ನಡೆಸುತ್ತಾ, ಎರಡಂತಸ್ತಿನ ಮನೆಯ ಒಡೆಯನಾದ ಈ ಕಥೆಯಲ್ಲಿ ಜ್ಞಾನ, ಪರಿಶ್ರಮ ಮತ್ತು ಅದೃಷ್ಟ ಇವು ಮೂರೂ ಚೆನ್ನಾಗಿ ಸಮ್ಮಿಳಿಸಿದೆ. ಒಂದು ವರ್ಷದ ಅವಧಿಯಲ್ಲಿ ಹದಿನಾಲ್ಕು ಚತುರ ವ್ಯಾಪಾರಗಳ ಮೂಲಕ ಒಂದು ಪುಟ್ಟಮನೆಯ ಒಡೆಯನಾದ ಈ ಅಸಾಮಾನ್ಯ ಕಥೆಯಲ್ಲಿ ಚತುರತೆ, ಸೃಜನಶೀಲತೆ, ರೋಚಕ ತಿರುವುಗಳು, ಗಮನಾರ್ಹ ವ್ಯಕ್ತಿಗಳ ಭೇಟಿ ಎಲ್ಲವೂ ಇದೆ.

ಕೈಲ್ ಮ್ಯಾಕ್‌ಡೊನಾಲ್ಡ್‌
ಕೈಲ್ ಮ್ಯಾಕ್‌ಡೊನಾಲ್ಡ್‌

ಕೆನಡಾದಲ್ಲಿ ಮಕ್ಕಳು ಆಡುವ ‘ಬಿಗ್ಗರ್, ಬೆಟರ್’ ಆಟದಲ್ಲಿ ಮಕ್ಕಳು ತಮ್ಮಲ್ಲಿರುವ ಏನೋ ಒಂದನ್ನು ಪಕ್ಕದಲ್ಲಿದ್ದವನಿಗೆ ಕೊಟ್ಟು, ಅವನಲ್ಲಿರುವುದನ್ನು ಪಡೆಯುವ ವಹಿವಾಟು ನಡೆಸುತ್ತಾ ಹೋಗುತ್ತಾರೆ. ಆಟದ ಕೊನೆಯಲ್ಲಿ ಯಾರಬಳಿ ಎಲ್ಲಕ್ಕಿಂತಾ ದೊಡ್ಡ ಐಟಂ ಇದೆಯೋ ಅವರೇ ಗೆದ್ದವರು. 2005ರಲ್ಲಿ “ಮುಂದಿನ ಒಂದು ವರ್ಷದಲ್ಲಿ ಒಂದು ಮನೆ ತಗೊಳ್ಳಬೇಕು” ಎಂಬ ಅಸೆಯಿದ್ದ ಮ್ಯಾಕ್‌ಡೊನಾಲ್ಡ್’ನಿಗೆ ಅದನ್ನು ಸಾಧಿಸಲು ಕೈಯಲ್ಲಿ ಯಾವ ಕೆಲಸವೂ ಇರಲಿಲ್ಲ. ‘ಬಿಗ್ಗರ್, ಬೆಟರ್’ ಆಟ ಪ್ರೇರಣೆಯಿಂದಲೇ ಒಂದು ಆನ್ಲೈನ್ ಟ್ರೇಡಿಂಗ್ ವೆಬ್ಸೈಟ್ ಪ್ರಾರಂಭಿಸಿ ಅವತ್ತು ಅವನ ಟೇಬಲ್ ಮೇಲಿದ್ದ ಒಂದು ಕೆಂಪುಬಣ್ಣದ ಪೇಪರ್ ಕ್ಲಿಪ್ ಅನ್ನು ಮಾರಾಟಕ್ಕಿಟ್ಟ. ಹೌದು ಸ್ವಾಮಿ, ಪೇಪರುಗಳನ್ನು ಒಟ್ಟಿಗೆ ಹಿಡಿದಿಡಲು ಬಳಸ್ತೀವಲ್ಲ, ಎರಡುಸಲ U ಆಕಾರದಲ್ಲಿ ಮಡಿಚಿರುತ್ತಲ್ಲಾ ಅದೇ ಕ್ಲಿಪ್. “ಅದನ್ನೆಲ್ಲಾ ಯಾರು ಕೊಳ್ತಾರೆ?” ಅನ್ನೋದು ನಿಮ್ಮ ಪ್ರಶ್ನೆಯಾಗಿದ್ದರೆ ಇವ ಮನೆ ಕೊಂಡ ಕಥೆ ನಿಮ್ಮನ್ನು ಅವಕ್ಕಾಗಿಸುವುದು ಖಂಡಿತಾ. ಇವನ ನಂತರ ಲೆಕ್ಕವಿಲ್ಲದಷ್ಟು ಜನ ಇವನನ್ನೇ ನಕಲಿಸಿ ಇಂತಹುದೇ ಯಶಸ್ಸು ಪಡೆಯಪಲು ಪ್ರಯತ್ನಿಸಿದರು. ಇವನ ಸೈಟಿನಂತದ್ದೇ ಎಷ್ಟೋ ನಕಲಿ ಸೈಟುಗಳು ಬಂದವು, ಯಾರಿಗೂ ಕೈಲ್ ಮ್ಯಾಕ್‌ಡೊನಾಲ್ಡ್’ನ ಅದೃಷ್ಟ ಒಲಿಯಲಿಲ್ಲ.

 

ವೆಬ್ಸೈಟ್ ಶುರುವಾಗಿ ಇಪ್ಪತ್ತೆರಡು ದಿನದ ನಂತರ ಜುಲೈ ಹದಿನಾಲ್ಕು 2005ರಂದು, “ಈ ಪೇಪರ್ ಕ್ಲಿಪ್ ಬದಲಿಗೆ ನಮ್ಮ ಬಳಿಯಿರುವ ಮೀನಿನಾಕಾರದ ಪೆನ್ ಕೊಡ್ತೀವಿ” ಅಂತಾ ವ್ಯಾಂಕೂವರ್’ನಲ್ಲಿದ್ದ ಹುಡುಗಿಯರಿಬ್ಬರು ಕೇಳಿದರು. ಇದಕ್ಕೊಪ್ಪಿದ ಕೈಲ್ ಈ ವಹಿವಾಟನ್ನು ಮುಗಿಸಿದ. ಅದೇ ದಿನ “ಈ ಪೆನ್ ಚಂದುಂಟು, ನನಗೆ ಬೇಕು” ಎಂದು ಅಮೇರಿಕಾದ ಸಿಯಾಟಲ್’ನಲ್ಲಿದ್ದ ಬರಹಗಾರ್ತಿಯೊಬ್ಬಳು ಕೇಳಿ, ಪಡೆದುಕೊಂಡಳು. ಹಾಗೂ ಆ ಪೆನ್ನಿನ ಬದಲಿಗೆ ಚಂದವಿದ್ದ ಒಂದು ಬಾಗಿಲ ಹಿಡಿಯನ್ನು ಕೊಟ್ಟಳು. ಈ ಲೋಹದ ಹಿಡಿ ಸಿಯಾಟಲ್’ನ ಪ್ರಸಿದ್ಧ ಕಲಾಕಾರ ರಾನ್’ನದ್ದಾಗಿತ್ತು. ಸಂಪೂರ್ಣ ಕೈಯಿಂದಲೇ ಮಾಡಿದ್ದ ಆ ಬಾಗಲಹಿಡಿಗೆ ಸ್ವಲ್ಪ ಪಾಲಿಷ್ ಕೊಟ್ಟರೆ ಖಂಡಿತಾ ಐವತ್ತು ಡಾಲರ್ ಬೆಲೆಬಾಳುವಂತಿದ್ದ ಈ ಬಾಗಿಲ ಹಿಡಿಗೆ ಮುಂದಿನ ತಿಂಗಳಲ್ಲಿ ಅಂದರೆ ಜುಲೈ 25ರಂದು ಮೆಸಾಚುಸೆಟ್ಸಿನಿಂದ ಒಬ್ಬ ಗಿರಾಕಿ ಸಿಕ್ಕಿದ. ಬದಲಿಗೆ “ನನ್ನ ಬಳಿ ಕೋಲ್ಮನ್ ಕಂಪನಿಯ ಒಂದು ಕ್ಯಾಂಪಿಂಗ್ ಸ್ಟೋವ್ ತಗೋ” ಎಂದ. ತಿರುಗಾಟದ ಹುಚ್ಚಿದ್ದ ಕೈಲ್’ನ ದೋಸ್ತನೊಬ್ಬ ಅದೇ ಸಮಯಕ್ಕೆ ಬಾಸ್ಟನ್ನಿಗೆ ಹೊರಟಿದ್ದ. ಅವನ ಕಾರಿನಲ್ಲಿ ಹಾರಿ ಮೆಸಾಚುಸೆಟ್ಸ್’ನ ಅಮ್ಹರ್ಸ್ಟ್ ಊರಿಗೆ ಬಂದಿಳಿದು ತನ್ನ ವಹಿವಾಟು ಮುಗಿಸಿ, ಬಾಸ್ಟನ್ನಿನಲ್ಲಿ ಎರಡು ದಿನ ಕಳೆದು ಕೈಲ್ ಮನೆ ತಲುಪಿದ.

 

ನಾಲ್ಕನೇ ವಹಿವಾಟು ನಡೆಯಲು ಕೈಲ್ ಎರಡು ತಿಂಗಳು ಕಾಯುತ್ತಾ ನಮ್ಮ ಹೀರೋ ಪಿಜ್ಜಾ ಡೆಲಿವರಿ ಕೆಲಸಕ್ಕೆ ಸೇರಿದ. ಸೆಪ್ಟೆಂಬರ್ 24ರಂದು ಕ್ಯಾಲಿಫೋರ್ನಿಯಾದವನೊಬ್ಬ “ಈ ಸ್ಟೋವ್ ಬದಲಿಗೆ ನನ್ನ ಬಳಿಯಿರುವ ಹೋಂಡಾ ಜನರೇಟರ್ ತಗೋಬಹುದು, ಅದಕ್ಕೆ ಪೆಟ್ರೋಲೂ ತುಂಬಿಸಿ ಕೊಡ್ತೀನಿ” ಎಂದ. ಕೊರಿಯರ್ ಮೂಲಕ ಸ್ಟೋವ್ ಕಳಿಸಿ, ಜನರೇಟರ್ ತರಿಸಿಕೊಳ್ಳಲಿಕ್ಕೆ ತಗಲುವ ವೆಚ್ಚ ನೋಡಿದ ಕೈಲ್, “ಇದರ ಬದಲಿಗೆ ನಾನೇ ಕ್ಯಾಲಿಫೋರ್ನಿಯಾಗೆ ಹೋಗಿಬರಬಹುದು, ಜೊತೆಗೇ ಊರು ತಿರುಗಿದಂಗೂ ಅಗುತ್ತೆ” ಎಂದವನೇ ಕೆಲಸಕ್ಕೆ ಸೋಡಾಚೀಟಿ ಕೊಟ್ಟು ಎರಡು ತಿಂಗಳಿನ ಸಂಬಳ, ಟಿಪ್ಸ್, ಜೊತೆಗೆ ಅಪ್ಪ ಕೊಟ್ಟ ಮುನ್ನೂರು ಡಾಲರ್ ಹಿಡಕೊಂಡು, ಮಾಂಟ್ರಿಯಾಲಿನಿಂದ ಐದುಸಾವಿರ ಕಿಮೀ ದೂರದಲ್ಲಿದ್ದ ಕ್ಯಾಲಿಫೋರ್ನಿಯಾಕ್ಕೆ ಹೊರಟೇಬಿಟ್ಟ. ಅಲ್ಲಲ್ಲಿ ಕೈ ಅಡ್ಡ ಹಾಕಿ, ಯಾರದ್ದೋ ಕಾರು, ಲಾರಿ ಹತ್ತಿ ಕ್ಯಾಲಿಫೋರ್ನಿಯಾಕ್ಕೆ ಬಂದು ಸ್ಟೋವ್ ಕೊಟ್ಟು ಜನರೇಟರ್ ಪಡೆದ. ಪಿಜ್ಜಾ ಡೆಲಿವರಿ ಮಾಡಿ ಅಭ್ಯಾಸವಿದ್ದ ಕೈಲ್ ಅಲ್ಲೂ ಅದೇ ಕೆಲಸ ಶುರುಮಾಡಿದ. ನವೆಂಬರ್ ಹದಿನಾರಕ್ಕೆ ನ್ಯೂಯಾರ್ಕಿನಿಂದ ಒಬ್ಬ “ಜನರೇಟರ್ ಬದಲಿಗೆ ಐಸ್ಕ್ರೀಂ ಗಾಡಿಯಿದೆ” ಎಂದದ್ದಕ್ಕೆ, ಕೈಲ್ “ಉಪಯೋಗಿಸದೇ ಸುಮ್ಮನೇ ಮೂಲೆಯಲ್ಲಿದ್ದ ಜನರೇಟರ್ ಇಟ್ಟುಕೊಂಡು ಏನು ಮಾಡೋದು? ಈ ನೆಪದಲ್ಲಿ ನ್ಯೂಯಾರ್ಕ್ ನೋಡುವಾ” ಎನ್ನುವ ಪ್ಲಾನಿನೊಂದಿಗೆ, ಕ್ಯಾಲಿಫೋರ್ನಿಯಾದಿಂದ ಒಂಬತ್ತೂವರೆಸಾವಿರ ಕಿಮೀ ದೂರದ ಪೂರ್ವತೀರಕ್ಕೆ ಹೊರಟ. ರೈಲು ಹತ್ತಿ ನ್ಯೂಯಾರ್ಕ್ ತಲುಪಿದರೆ, ಅಲ್ಲಿನ ಅಗ್ನಿಶಾಮಕ ದಳದವರು “ಪೆಟ್ರೋಲ್ ತುಂಬಿರುವ ಜನರೇಟರ್ ಒಂದನ್ನು ರೈಲಿನಲ್ಲಿ ಸಾಗಿಸಿದ್ದು ತಪ್ಪು” ಎಂದು ಹೇಳಿ ಮುಟ್ಟುಗೋಲುಹಾಕಿಕೊಂಡರು. ಅವರಿಗೆ ಇಪ್ಪತ್ತೇಳು ಡಾಲರ್ ದಂಡ ಕಟ್ಟಿ ಜನರೇಟರ್ ಮರಳಿಪಡೆಯುವಷ್ಟರಲ್ಲಿ, ಐಸ್ಕ್ರೀಂ ಗಾಡಿಯವ “ನೀಬಂದದ್ದು ತಡವಾಯ್ತು ನಿನ್ನ ಮಾಲು ಬೇಡ” ಅಂದ. ಅದೃಷ್ಟ ಕುದುರಿ ಇನ್ನೊಬ್ಬ ಕೊಳ್ಳುಗನೇನೋ ಅವತ್ತೇ ಸಿಕ್ಕ. ಆದರೆ ಅವನ ಬಳಿಯಿದ್ದದ್ದು ಒಂದು ಖಾಲಿ ಬಿಯರ್ ಕೆಗ್, ಅದಕ್ಕೆ ಬಿಯರ್ ತುಂಬಿಸುವ ಮಶೀನು, ಮತ್ತೊಂದು ಬಡ್ವೈಸರ್ ನಿಯಾನ್ ಬೋರ್ಡ್ ಸೇರಿದ್ದ ‘ಇನ್ಸ್ಟಂಟ್ ಪಾರ್ಟಿ ಕಿಟ್’ ಅಷ್ಟೇ. ಕೈಲ್ ಹೆಚ್ಚು ತಲೆಬಿಸಿ ಮಾಡಿಕೊಳ್ಳದೇ ಅವನಿಂದ, ಪಾರ್ಟಿ ಕಿಟ್ ಪಡೆದು ಕೆನಾಡಕ್ಕೆ ಮರಳಿದ.

 

ಎರಡು ವಾರದ ನಂತರ ಡಿಸೆಂಬರ್ 8, 2005ರಂದು ಅವನ ಪಾರ್ಟ್ ಕಿಟ್ ಅನ್ನು ಕ್ಯುಬೆಕ್’ನ ಕಮೀಡಿಯನ್ ಮತ್ತು ರೇಡಿಯೋ ಜಾಕಿ ಮೈಕೇಲ್ ಬ್ಯಾರೆಟ್ಟನಿಗೆ ಮಾರಿ, ಅವನಿಂದ ಹಳೆಯ ಸ್ನೋಮೊಬೀಲ್ ಒಂದನ್ನು ಪಡೆದ. ಅದೇ ವಾರದಲ್ಲಿ, ಆ ಸ್ನೋಮೊಬೀಲ್ ಕೊಟ್ಟು, ಬ್ರಿಟಿಷ್ ಕೊಲಂಬಿಯಾದಲ್ಲಿ ಇಬ್ಬರಿಗಾಗಿ ಎಲ್ಲಾ ಖರ್ಚು ಒಳಗೊಂಡ ಪ್ರವಾಸವೊಂದರ ಟಿಕೆಟ್ ಪಡೆದ. ಜನವರಿ 7, 2006ಕ್ಕೆ ಈ ಪ್ರವಾಸದ ಟಿಕೆಟ್ ಮಾರಿ, ಒಂದು ಪುಟಾಣಿ ವ್ಯಾನ್ ಪಡೆದ. ಫೆಬ್ರವರಿ 22ಕ್ಕೆ “ನಿನ್ನ ಕಥೆಯನ್ನೆಲ್ಲಾ ನನಗೆ ಬ್ಯಾರೆಟ್ ಹೇಳಿದ. ನಿನಗೆ ಹಾಡುವ ಆಸೆಯೂ ಇದೆಯಂತಲ್ಲಾ. ನಿನ್ನ ಬಳಿಯಿರುವ ಟ್ರಕ್ ಬದಲಾಗಿ ನಿನಗೊಂದು ರೆಕಾರ್ಡಿಂಗ್ ಕಾಂಟ್ರಾಕ್ಟ್ ಕೊಡಿಸ್ತೀನಿ” ಅಂತಾ ಒಬ್ಬನ ಮೆಸೇಜು ಬಂತು. ಕೈಲ್’ನಿಗೆ ಈ ವಹಿವಾಟು ಬರೀ ಮಾರಾಟದ ವಿಚಾರವಾಗಿರಲಿಲ್ಲ. ಜನರನ್ನು ಭೇಟಿಮಾಡುವ, ಸ್ವಂತಕ್ಕೆ ಏನಾದರೂ ಸಾಧಿಸುವ, ತಿರುಗಾಡುವ ಹುಚ್ಚಿನ ವಿಷವೂ ಆಗಿತ್ತು. ರೆಕಾರ್ಡಿಂಗ್ ಕಾಂಟ್ರಾಕ್ಟ್ ಪಡೆದ ಕೈಲ್’ಗೆ ಕೆನಡಾದ ಕೆಲ ಪ್ರಸಿದ್ಧ ಗಾಯಕರ ಜೊತೆಗೆ ಸಮಯ ಕಳೆಯುವ ಮತ್ತು ಹಾಡುವ ಅವಕಾಶವೂ ಸಿಕ್ಕಿತು. ಆದರೆ ಇದನ್ನೇ ತನ್ನ ಕೆಲಸವಾಗಿಸಿಕೊಳ್ಳಲಿಕ್ಕೆ ಇಷ್ಟವಿರದ ನಮ್ಮ ನಾಯಕ, ಏಪ್ರಿಲ್ 11ಕ್ಕೆ, ಈ ಕಾಂಟ್ರಾಕ್ಟ್ ಅನ್ನು ಜೋಡಿ ಗ್ನಾಟ್ ಎಂಬ ಕಲಾವಿದನಿಗೆ ಮಾರಿ, ದೂರದ ಅರಿಜೋನಾದಲ್ಲಿದ್ದ ಜೋಡಿಯ ಅಪಾರ್ಟ್ಮೆಂಟ್ ಒಂದರಲ್ಲಿ ಒಂದು ವರ್ಷಕ್ಕೆ ಬಾಡಿಗೆಯಿಲ್ಲದೇ ಇರುವ ಅವಕಾಶ ಪಡೆದ.

 

ಆದರೆ ಎರಡೇ ವಾರಕ್ಕೆ, ಏಪ್ರಿಲ್ 26ಕ್ಕೆ ಆ ಅಪಾರ್ಟ್ಮೆಂಟಿನ ಬಾಡಿಗೆಗೆ ಬದಲಾಗಿ ಸುಪ್ರಸಿದ್ದ ಗಾಯಕ ಅಲಿಸ್ ಕೂಪರ್ ಜೊತೆಗೆ ಒಂದು ಸಂಜೆಯನ್ನು ಕಳೆಯುವ ಅವಕಾಶದ ಟಿಕೆಟ್ ಒಂದನ್ನು ಒಬ್ಬರಿಂದ ಕೊಂಡ. ಮೇ ಇಪ್ಪತ್ತಾರಕ್ಕೆ ಆ ಟಿಕೇಟನ್ನು ಕೊಟ್ಟು ಆ ಕಾಲದ ಜನಪ್ರಿಯ ಬ್ಯಾಂಡ್ ಆಗಿದ್ದ KISSನ ಎಲ್ಲಾ ಗಾಯಕರ ಗೊಂಬೆಗಳಿರುವ ಸ್ನೋ-ಗ್ಲೋಬ್ ಒಂದನ್ನು ಪಡೆದ. ಜೂನ್ ಎರಡನೇ ತಾರೀಕು ಕೋರ್ಬಿನ್ ಬ್ರೆನ್ಸ್-ಮ್ಯಾನ್ ಎನ್ನುವ ಹಾಲಿವುಡ್ ನಿರ್ಮಾಪಕನೊಬ್ಬ ತೀರಾ ಲಿಮಿಟೆಡ್ ಎಡಿಷನ್ ಆಗಿದ್ದ ಈ ಸ್ನೋ-ಗ್ಲೋಬ್’ಗೆ ಬದಲಾಗಿ ತನ್ನ “ಡೊನ್ನಾ ಆನ್ ಡಿಮಾಂಡ್” ಎಂಬ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕೈಲ್’ಗೆ ಕೊಟ್ಟ. ಈ ಕೋರ್ಬಿನ್ ಮಹಾಶಯನಿಗೆ ವಿಶಿಷ್ಟವಾದ ಸ್ನೋಗ್ಲೋಬ್’ಗಳನ್ನು ಸಂಗ್ರಹಿಸುವ ದೊಡ್ಡ ಹುಚ್ಚಿತ್ತು. ಸಿನಿಮಾವೊಂದರಲ್ಲಿ ನಟಿಸುವ ಕನಸಿದ್ದರೂ ಕೂಡಾ, ಕೈಲ್ ಕಲಾವಿದನೊಬ್ಬನಿಗೆ ಜುಲೈ ಐದನೇ ತಾರೀಕಿನಂದು ಈ ಸಿನಿಮಾ ಕಾಂಟ್ರಾಕ್ಟ್ ಅನ್ನು ಮಾರಿ, ಬದಲಿಗೆ ಕೆನಾಡದ ಸಾಸ್ಕಚೆವಾನಿನ ಕಿಪ್ಲಿಂಗ್ ಊರಿನ ಎರಡಂಸ್ತಿನ ಮನೆಯೊಂದನ್ನು ಪಡೆದ.

ಹೀಗೆ ಜುಲೈ 14, 2005ರಂದು ಒಂದು ಕೆಂಪು ಪೇಪರ್ ಕ್ಲಿಪ್ಪಿನಿಂದ ಪ್ರಾರಂಭವಾದ ಕೈಲ್ ಮ್ಯಾಕ್‌ಡೊನಾಲ್ಡ್’ನ ಕಥೆ, ಜುಲೈ 5, 2006ಕ್ಕೆ ಮನೆಯ ಒಡೆಯನಾಗುವುದರೊಂದಿಗೆ ಮುಗಿಯಿತು. ಈ ವಿಲಕ್ಷಣ ವ್ಯಾಪಾರಗಳ ಕಥೆಯ ನೆನಪಿಗೆ, ಕೆಂಪು ಕ್ಲಿಪ್ಪಿನ ಲೋಹದ ಶಿಲ್ಪವೊಂದನ್ನು 2007ರಲ್ಲಿ ಕಿಪ್ಲಿಂಗಿನ ಬೆಲ್ ಪಾರ್ಕ್‌ನಲ್ಲಿ ಸ್ಮಾರಕವಾಗಿ ಸ್ಥಾಪಿಸಲಾಯಿತು. ಆ ಕಾಲಕ್ಕೆ, ಇದು ವಿಶ್ವದ ಅತಿದೊಡ್ಡ ಪೇಪರ್ ಕ್ಲಿಪ್ ಆಗಿತ್ತು.

ಇದೇನೂ ನಾಜಿಗಳಿಂದ ತಪ್ಪಿಸಿಕೊಂಡು ಬದುಕುಳಿದವರ ಕಥೆಯಲ್ಲ, ರೊಮಿಯೋ ಜೂಲಿಯೆಟ್ ಕಥೆಯಲ್ಲ. ಬದಲಿಗೆ ಇಂಟರ್ನೆಟ್ಟಿನ ಶಕ್ತಿಯ, ತನ್ನ ಕನಸಿನ ಹಿಂದೆ ಓಡಿದ, ಆ ಕನಸಿನ ಹಾದಿಯಲ್ಲಿ ಸಾವಿರಾರು ಕಿಲೋಮೀಟರ್ ತಿರುಗಾಡಿದ, ಎಷ್ಟೋ ಜನರನ್ನು ಭೇಟಿಯಾದ, ಹದಿನಾಲ್ಕು ವಹಿವಾಟುಗಳಲ್ಲಿ ಒಂದೂ ಡಾಲರ್ ಗಳಿಸದೇ, ಒಂದೂ ಡಾಲರ್ ಕಳೆದುಕೊಳ್ಳದೇ ಮನೆಯೊಂದರ ಒಡೆಯನಾದ ಅಸಾಧಾರಣ ಕಥೆ. ಜಗತ್ತಿನ ಸಾಧ್ಯತೆಗಳು ಅದೆಷ್ಟು ಅಗಾಧ ಹಾಗೂ ಕೆಲವುಬಾರಿ ಎಷ್ಟು ಅನೂಹ್ಯ ಎನ್ನುವುದರ ಬಗ್ಗೆಯೇ ಹೇಳುವ ಕಥೆ.

0 comments on “ಕೆಂಪು ಪೇಪರ್ ಕ್ಲಿಪ್ ಕೊಟ್ಟು, ಎರಡಂತಸ್ತಿನ ಮನೆ ಪಡೆದವನ ಕಥೆ

Leave a Reply

Your email address will not be published. Required fields are marked *