Saturday, 25 May, 2024

ನಿರ್ಧಾರಗಳೊಂದಿಗೆ ಚೆಲ್ಲಾಟವೋ? ಆಟಗಳಲ್ಲಿ ತಂತ್ರಜ್ಞಾನವೋ?

Share post

ತಂತ್ರಜ್ಞಾನ ಮನುಷ್ಯನ ಮಿತ್ರ ಎನ್ನುವುರಲ್ಲಿ ಎರಡು ಮಾತಿಲ್ಲ. ಮನುಷ್ಯನ ಜೀವನವನ್ನು ಕಾಲದಿಂದ ಕಾಲಕ್ಕೆ ಹಸನು ಮಾಡುತ್ತಲೇ ಬರುತ್ತಿರುವ ತಂತ್ರಜ್ಞಾನಗಳು, ಪ್ರತಿವರ್ಷವೂ ಹೊಸದನ್ನು ಕಲಿಯುತ್ತಾ ತಮ್ಮನ್ನು ತಾವು ಹೆಚ್ಚೆಚ್ಚು ಉಪಯುಕ್ತಗೊಳಿಸಿಕೊಳ್ಳುತ್ತಿವೆ. ಇವುಗಳ ಉಪಯೋಗ ಮೊದಮೊದಲಿಗೆ ಕೆಲವು ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದರೂ, ಇತ್ತೀಚೆಗೆ ಅವು ಎಲ್ಲಾ ಮಿತಿಗಳನ್ನೂ ದಾಟಿ, ಹೊಸದೊಂದು ಯುಗಕ್ಕೆ ಕಾಲಿಟ್ಟಿವೆ.  ಹೌದು, ತಂತ್ರಜ್ಞಾನಗಳ ಅತಿಯಾದ ಉಪಯೋಗದ ಬಗ್ಗೆ ಮತ್ತವುಗಳ ಅತಿಯಾದ ಮೂಗುತೂರಿಸುವಿಕೆಯ ಬಗ್ಗೆಯೂ ಅಪಸ್ವರಗಳು ಇದ್ದೇ ಇವೆ. ಅವು ಮನುಷ್ಯನ ಕೆಲಸಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಮಾತುಗಳೂ ಆಗಾಗ ಕೇಳಿಬರುತ್ತದೆ. ಅದು ತೀರಾ ಅಸತ್ಯದ ಮಾತೇನೂ ಅಲ್ಲ. ಆದರೆ ಒಂದುದಿನ ಎಲ್ಲವನ್ನೂ ತಂತ್ರಜ್ಞಾನವೇ ನೋಡಿಕೊಳ್ಳುತ್ತದೆ, ಮನುಷ್ಯನಿಗೆ ಕೆಲಸವೇ ಇರುವುದಿಲ್ಲ ಎಂಬುದು ಸುಳ್ಳು. ಇತ್ತೀಚೆಗೆ ನಾನು ಕೃತಕ ಬುದ್ಧಿಮತ್ತೆಯ ಬಗ್ಗೆ ಕೇಳಿದ ಒಂದು ಸಾಲು ತುಂಬಾ ಚೆನ್ನಾಗಿತ್ತು “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಮ್ಮ ಕೆಲಸವನ್ನ ಕದಿಯುವುದಿಲ್ಲ, ಆದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ನಿಮಗಿರಬಹುದಾದ ಅಜ್ಞಾನ ನಿಮ್ಮ ಕೆಲಸವನ್ನು ಕದಿಯಬಹುದು ಅಥವಾ ಕಳೆದುಕೊಳ್ಳುವಂತೆ ಮಾಡಬಹುದು” (AI will not make you lose your job, but not knowing about AI will).

 

ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಾನವಕುಲ ಐದು ಹಂತಗಳನ್ನು ದಾಟಿ ಬಂದಿದೆ. ಮೊದಲಿನೇ ಹಂತದಲ್ಲಿ ತಂತ್ರಜ್ಞಾನವೆನ್ನುವುದು ದೈಹಿಕವಾಗಿ ಶ್ರಮದಾಯಕವಾಗಿದ್ದ ಕೆಲಸಗಳನ್ನು ಸುಲಭಗೊಳಿಸುವುದರೆಡೆಗೆ ಗಮನ ಹರಿಸಿತ್ತು. ಉದಾಹರಣೆಗೆ ಫ್ಯಾಕ್ಟರಿಗಳಲ್ಲಿ ನಡೆಯುತ್ತಿದ್ದ ಭಾರ ಎತ್ತುವ, ಅತಿಯಾದ ಉಷ್ಣತೆ ಅಥವಾ ಶೀತದೊಂದಿಗೆ ಮಾಡುತ್ತಿದ್ದ ಕೆಲಸಗಳು, ಮನುಷ್ಯ ಅಥವಾ ಪ್ರಾಣಿಗಳ ಶಕ್ತಿಯ ಮೂಲಕ ನಿಧಾನವಾಗಿ ನಡೆಯುತ್ತಿದ್ದ ಕೆಲಸಗಳು ಇಂತಹುವನ್ನು ಸುಲಭಗೊಳಿಸುವ ಯಂತ್ರಗಳು ಬಂದವು. ಉದಾಹರಣೆಗೆ ವಿದ್ಯುತ್ಛಕ್ತಿ, ಬಂದೂಕುಗಳು, ಡೈನಮೈಟುಗಳು, ಉಗಿಬಂಡಿ, ಹೈಡ್ರಾಲಿಕ್ ಸಲಕರಣೆಗಳು ಇತ್ಯಾದಿ. ಇದರನಂತರದ ಹಂತದಲ್ಲಿ ತಂತ್ರಜ್ಞಾನಗಳನ್ನು ಉತ್ತಮಗೊಳಿಸುವಾಗ ಸಿಕ್ಕ ಬೈಪ್ರಾಡಕ್ಟುಗಳು ಹೆಚ್ಚೆಚ್ಚು ಮುನ್ನೆಲೆಗೆ ಬಂದವು. ಉದಾಹರಣೆಗೆ ಅಂತರ್ದಹನ ಎಂಜಿನ್ನು ಮತ್ತದರ ಮೂಲಕ ಬಂದ ಕಾರು ಬಸ್ಸು ಲಾರಿಗಳು, ಇವುಗಳನ್ನು ಓಡಿಸಲು ಬೇಕಾದ ಪೆಟ್ರೋಲಿನಿಂದ ಪಡೆದ ಡಾಂಬರು, ಅದರಿಂದ ಸಿಕ್ಕ ಉತ್ತಮದರ್ಜೆಯ ರಸ್ತೆಗಳು, ಹೊಸಾ ತಲೆಮಾರಿನ ಕಾಂಕ್ರೀಟ್ ಸಿಮೆಂಟು ಇತ್ಯಾದಿ. ಮೂರನೆಯಹಂತದಲ್ಲಿ ನಮಗೆ ಕಾಣುವುದು ಎರಡು ಮಹಾಯುದ್ಧಗಳು, ಹಾಗೂ ಇವೆರಡರಿಂದ ನಾಗಾಲೋಟ ಕಂಡ ತಂತ್ರಜ್ಞಾನದ ಅಭಿವೃದ್ಧಿ. 1886ರಲ್ಲಿ ಮೊದಲ ಕಾರು ಬಂದಿದ್ದರೂ, 1906ರಲ್ಲಿ ಮೊದಲ ಫೋರ್ಡ್ ಮಾಡೆಲ್ ಟಿ ಮಾರುಕಟ್ಟೆಗೆ ಬಂದಿದ್ದರೂ, 1914ರಿಂದ 1946ರ ನಡುವೆ ಎರಡು ಮಹಾಯುದ್ಧಗಳು ಮುಗಿಯುವಾಗಿನ ಮೂವತ್ತೆರಡು ವರ್ಷದ ಅವಧಿಯಲ್ಲಿ ಮನುಕುಲದ ಕೈಗೆ ಕಳೆದ ಎರಡು ಸಾವಿರ ವರ್ಷಗಳಲ್ಲಿ ಸಿಕ್ಕ ಒಟ್ಟು ತಾಂತ್ರಿಕ ಉತ್ಪನ್ನಗಳಿಗಿಂತಲೂ ಹೆಚ್ಚಿನ ಹೊಸಾ ಅನ್ವೇಷಣೆಗಳು ಬಂದು ಕೂತವು. V6 V8 V12 ಎಂಜಿನ್ನುಗಳು, ಟ್ಯೂಬ್ಲೆಸ್ ಟೈರುಗಳು, ಟ್ಯಾಂಕುಗಳು, ಕ್ಷಿಪಣಿ, ರಾಕೆಟ್ಟುಗಳು, ಕಂಪ್ಯೂಟರುಗಳು, ಟೆಲಿವಿಷನ್, ಅಣುಬಾಂಬ್, ಕೀ ಹೋಲ್ ಸರ್ಜರಿ, ಡಯಾಲಿಸಿಸ್ …. ಹೀಗೆ ಯುದ್ಧ ಮುಗಿಯುವಷ್ಟರಲ್ಲಿ ಮನುಷ್ಯ ತಂತ್ರಜ್ಞಾನದ ಬೇರೊಂದು ಕನಸಿನ ಲೋಕಕ್ಕೇ ಬಂದಿಳಿದ.

 

 

ನಾಲ್ಕನೇ ಹಂತದಲ್ಲಿ ಎರಡು ಯುದ್ಧಗಳ ನಂತರ ಮನುಷ್ಯ, ತನ್ನ ಜೀವನಮಟ್ಟವನ್ನು ಸುಧಾರಿಸುವ, ಮನುಷ್ಯನ ಜೀವವನ್ನು ಉಳಿಸಬಲ್ಲ, ಜೀವನವನ್ನು ಹೆಚ್ಚು ಹಸನಾಗಿಸಬಲ್ಲ ತಂತ್ರಜ್ಞಾನಗಳೆಡೆಗೆ ಗಮನ ಹರಿಸಿದ. ವೈದ್ಯಕೀಯ ಜಗತ್ತಿನಲ್ಲಿ ಕ್ರಾಂತಿಗಳೇ ನಡೆದವು, ಸಾಮಾನ್ಯನೂ ಕೊಳ್ಳಬಲ್ಲ ರಿಫ್ರಿಜೆರೇಟರ್, ಫೋನುಗಳು, ಏಸಿ, ಮೈಕ್ರೋವೇವ್ ಒವನ್ನುಗಳು, ಬೇರೆ ಬೇರೆ ರೀತಿಯ ಟೀವಿಗಳು, ಕಾರಿನಲ್ಲಿ ಏರ್-ಬ್ಯಾಗುಗಳು, ವಿಮಾನ ತಂತ್ರಜ್ಞಾನದಲ್ಲಿ ಸುಧಾರಣೆಯೂ ಅದರೊಂದಿಗೇ ಮಧ್ಯಮ ವರ್ಗದವರೂ ಪ್ರಯಾಣಿಸಬಲ್ಲ ವಿಮಾನಗಳೂ ಬಂದವು. ಇವುಗಳೊಂದಿಗೇ, ಜನರನ್ನು ಸ್ವಲ್ಪಮಟ್ಟಿಗೆ ಸೋಮಾರಿಯಾಗಿಸುವ ತಂತ್ರಜ್ಞಾನಗಳೂ ಬಂದಿಳಿದವು. ಕೊನೆಯ ಹಂತದಲ್ಲಿ ಅಂದರೆ 1980ರ ನಂತರ ಕಂಪ್ಯೂಟರುಗಳು ಸಾಮಾನ್ಯಜನರ ಜೀವನಕ್ಕೆ ಬಂದಿಳಿದ ಮೇಲಿಂದ, ಜೊತೆಗೇ ರೋಬೋಟಿಕ್ಸ್ ಅಭಿವೃದ್ಧಿಯ ನಂತರ ಮನುಷ್ಯನ ಜೀವನದ ದಿಕ್ಕೇ ಬದಲಾಯ್ತು. ಕೆಲಸಗಳು, ಸಾಧ್ಯತೆಗಳು, ನೋಡುವ ಕಾರ್ಯಕ್ರಮ, ಹಾಕುವ ಬಟ್ಟೆ, ಯೋಚಿಸುವ ರೀತಿ ಎಲ್ಲವೂ ಬದಲಾದವು. ಕಂಪ್ಯೂಟರು ಮತ್ತು ರೋಬೋಟು ಈ ಎರಡು ತಂತ್ರಜ್ಞಾಗಳನ್ನು ಚೆನ್ನಾಗಿ ದುಡಿಸಿಕೊಂಡ ಮನುಷ್ಯ ಹೊಸಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಲೇ ಹೋದ.

 

ತಂತ್ರಜ್ಞಾನಗಳನ್ನು ಜೀವನಮಟ್ಟದ ಸುಧಾರಣೆಗೆ ಹಾಗೂ ತಪ್ಪುಗಳನ್ನು ಕಡಿಮೆ ಮಾಡಲಿಕ್ಕೆ ಬಳಸುವಂತಹಾ ಎಲ್ಲಾ ಸಾಧ್ಯತೆಗಳೂ ನನಗೆ ವೈಯುಕ್ತಿಕವಾಗಿ ಇಷ್ಟ. ಕಂಪ್ಯೂಟರುಗಳನ್ನು ಆಟೋಟ ಜಗತ್ತಿನಲ್ಲಿ ಬಳಸುವುದನ್ನೂ, ಅದರ ಮೂಲಕ ನಿರ್ಣಯಗಳನ್ನು ಹೆಚ್ಚೆಚ್ಚು ಕರಾರುವಕ್ಕಾಗಿಸುವುದನ್ನು ನಾನಂತೂ ಬೆಂಬಲಿಸುತ್ತೇನೆ. ಈ ತಂತ್ರಜ್ಞಾನಗಳು ಅಂಪೈರುಗಳ ಕೆಲಸ ಕಸಿದುಕೊಳ್ಳುತ್ತಿವೆ, ಅವರ ಪ್ರಾಮುಖ್ಯತೆಯನ್ನು ಕಡಿಮೆಮಾಡುತ್ತಿವೆ ಎಂದಾಗಲೆಲ್ಲಾ ನಾನಂತೂ “ನಿರ್ಧಾರವೊಂದು ಲಕ್ಷಾಂತರ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ ಎನ್ನುವಾಗ, ಒಬ್ಬನ ಪ್ರಾಮುಖ್ಯತೆಗಿಂತಾ ನಿಖರ ಪರಿಹಾರ ಕೊಡಬಲ್ಲ ತಂತ್ರಜ್ಞಾನವಿದ್ದರೇ ಒಳ್ಳೆಯದು” ಎಂದೇ ಹೇಳುತ್ತೇನೆ. ಹೆಚ್ಚೆಚ್ಚು ತಂತ್ರಜ್ಞಾನಗಳು ಟೆನಿಸ್, ಕ್ರಿಕೆಟ್, ಫುಟ್ಬಾಲ್ ಮುಂತಾದ ಕ್ರೀಡೆಗಳನ್ನು ಇನ್ನೂ ಹೆಚ್ಚು ಆಸಕ್ತಿದಾಯಕವಾಗುವಂತೆ ಮಾಡಿವೆ. ಕ್ರಿಕೆಟ್ಟಿನಲ್ಲಿ ನಮ್ಮ ಕಾಲಾವಧಿಯಲ್ಲೇ ಬಂದ ತಂತ್ರಜ್ಞಾನಗಳನ್ನೊಮ್ಮೆ ನೆನೆಸಿಕೊಳ್ಳಿ. ನೇರ ಪ್ರಸಾರ, ರೀಪ್ಲೇ, ಸ್ಟಂಪ್ಸ್ ಕ್ಯಾಮರಾ ಮತ್ತು ಮೈಕ್ರೋಫೋನ್, ಅಲ್ಟ್ರಾ ಎಡ್ಜ್, ಹಾಟ್ ಸ್ಪಾಟ್ ಪ್ರತಿಯೊಂದೂ ಕೂಡಾ ಆಟವನ್ನು ಇನ್ನೂ ಹೆಚ್ಚು ಆಸಕ್ತಿದಾಯಕವಾಗಿಸಿವೆ. ಒಂದು ಕಾಲದಲ್ಲಿ ಎಲ್ ಬಿ ಡಬ್ಲೂ ಅತ್ಯಂತ ವಿವಾದಾತ್ಮಕ ನಿರ್ಧಾರಗಳಲ್ಲೊಂದಾಗಿತ್ತು. ಸ್ವತಃ ಕ್ರಿಕೆಟ್ ಅಭಿಮಾನಿಯೂ ಹಾಗೂ ಆಟಗಾರನೂ ಆಗಿದ್ದ ಡಾ. ಪಾಲ್ ಹಾಕಿನ್ಸ್ ಎಂಬಾತ 1999ರಲ್ಲಿ ಕೃತಕಬುದ್ಧಿಮತ್ತೆಯ ವಿಷಯದ ಮೇಲೆ ತನ್ನ ಪಿಎಚ್ಡಿ ಮುಗಿಸಿದ ಕೂಡಲೇ, ಸೋನಿ ಕಂಪನಿಗೆ ಕೆಲಸಕ್ಕೆ ಸೇರಿ ಈ ಎಲ್ಬಿಡಬ್ಲೂ ಸಮಸ್ಯೆಗೊಂದು ಪರಿಹಾರವನ್ನು ಕಂಡುಹಿಡಿಯುವ ಪ್ರಾಜೆಕ್ಟ್ ಕೈಗೆತ್ತಿಕೊಂಡ. ಈತ ನಿರ್ಮಿಸಿದ ಮತ್ತು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನ ಆರುಕ್ಯಾಮರಾಗಳ ಮೂಲಕ ಬೌಲರನ ಕೈಯಿಂದ ಹೊರಟ ಚೆಂಡಿನ ಹಾದಿಯನ್ನು ಟ್ರಾಕ್ ಮಾಡುತ್ತಾ, ನೆಲಕ್ಕೆ ಅಪ್ಪಳಿಸಿದ ನಂತರ ಅದು ಯಾವ ದಿಕ್ಕಿಗೆ, ಎಷ್ಟು ಎತ್ತರದಲ್ಲಿ, ಎಷ್ಟು ವೇಗದಲ್ಲಿ ಹೋಗುತ್ತದೆ ಎಂಬುದನ್ನು ನಿರ್ಧರಿಸುವತ್ತ ಗಮನಹರಿಸಿತು. ಆರುವರ್ಷಗಳ ಕಾಲ ಟೆನಿಸ್ ಮತ್ತು ಕ್ರಿಕೆಟ್ ಆಟಗಳ ಮೂಲಕ ಸಂಶೋಧನೆ ಮತ್ತು ಡೇಟಾ ಮಾಡೆಲ್ ಅನ್ನು ಅಭಿವೃದ್ಧಿಪಡಿಸಿದ ನಂತರ ತನ್ನ ಮೊದಲ ಸಾಫ್ಟ್ವೇರ್ ಅನ್ನು ಬಿಡುಗಡೆ ಮಾಡಿದ. ಐಸಿಸಿ ಇದರ ಬಳಕೆಗೆ ಒಪ್ಪಿರಲಿಲ್ಲವಾದರೂ, ಆಟಗಳ ಪ್ರಸಾರಮಾಡುವ ಕಂಪನಿಗಳ ಬಳಕೆಗೆ ಯಾವ ನಿರ್ಬಂಧವೂ ಇರಲಿಲ್ಲ. ಈ ಸಾಫ್ಟ್ವೇರ್ ಮೂಲಕ ಕಮೆಂಟೇಟರುಗಳು ರೀಪ್ಲೇ ನೋಡುತ್ತಾ ಎಲ್ಬಿಡಬ್ಲೂವಿನ ಪರಿಣಾಮ ಏನಾಗಬಹುದಿತ್ತು ಎಂದು ಹೇಳಲಾರಂಭಿಸಿದರು. ಇದರ ಮೊದಲ ಬಳಕೆಯಾದದ್ದು ಟೆನಿಸ್ಸಿನಲ್ಲಿ ಲೇನ್ ಫಾಲ್ಟ್ ಕಂಡುಹಿಡಿಯಲಿಕ್ಕಾದರೂ, ಕ್ರಿಕೆಟ್’ನಲ್ಲಿ ಇದರ ಜನಪ್ರಿಯತೆ ಬಹುಬೇಗನೇ ಹೆಚ್ಚಿತು. ಇದರ ನಿಖರತೆ ಮತ್ತು ಉಪಯುಕ್ತತೆಯನ್ನು ಮನಗಂಡ ಐಸಿಸಿ 2009ರಲ್ಲಿ ಇದಕ್ಕೆ ಮಾನ್ಯತೆ ಕೊಟ್ಟು, ಅಧಿಕೃತ ಬಳಕೆಗೆ ಅವಕಾಶ ಮಾಡಿಕೊಟ್ಟಿತು. ಇವತ್ತು ಎಲ್ಬಿಡಬ್ಲ್ಯೂ ಎನ್ನುವುದು ತಲೆಬಿಸಿಯ ವಿಚಾರವೇ ಅಲ್ಲ. ಇದಾದ ಎರಡೇ ವರ್ಷಕ್ಕೆ ಟಿನಿಸ್, ರಗ್ಬಿ, ಬ್ಯಾಡ್ಮಿಂಟನ್, ವಾಲಿಬಾಲ್ ಎಲ್ಲಾ ಕಡೆಯೂ ಈ ತಂತ್ರಜ್ಞಾನ ಕಡ್ಡಾಯವಾಗಿ ಬಳಕೆಯಾಗಲಾರಂಭಿಸಿತು. ಪಾಲ್ ಹಾಕಿನ್ಸ್’ನ ಈ ಕನಸಿನ ಕೂಸೇ, ಅವನದೇ ಹೆಸರನ್ನೊಳಗೊಂಡ ಇಂದಿನ “ಹಾಕ್-ಐ” ತಂತ್ರಜ್ಞಾನ.

 

ತಂತ್ರಜ್ಞಾನಗಳನ್ನು ಆದಷ್ಟೂ ಕಡಿಮೆ ಬಳಸಬೇಕು ಹಾಗೂ ರೆಫರೀಗಳಿಗೇ ಪೂರ್ತಿ ನಿರ್ಧಾರದ ಅಧಿಕಾರವಿರಬೇಕು ಎಂದು ಫುಟ್ಬಾಲ್ ಸಂಸ್ಥೆಗಳು ದಶಕಗಟ್ಟಲೇ ದೃಢವಾಗಿ ನಂಬಿದ್ದವು. ಇದಕ್ಕೆ ಮುಖ್ಯ ಕಾರಣ, ತಂತ್ರಜ್ಞಾನದ ಕಡುವಿರೋಧಿಯಾಗಿದ್ದ ಫೀಫಾದ ಆಗಿನ ಅಧ್ಯಕ್ಷ ಸೆಪ್ ಬ್ಲಾಟರ್. 2015ರಲ್ಲಿ ಆತ ಭ್ರಷ್ಟಾಚಾರದ ಹಣೆಪಟ್ಟಿ ಹೊತ್ತು ಕೆಳಗಿಳಿಯುತ್ತಿದ್ದಂತೆಯೇ ಫೀಫಾ VAR ಎಂಬ ವ್ಯವಸ್ಥೆಗೆ ತೆರೆದುಕೊಂಡಿತು. 2016ರ ವಿಶ್ವಕಪ್’ನಲ್ಲಿ ಈ ವ್ಯವಸ್ಥೆ ಅಧಿಕೃತವಾಗಿ ಜಾರಿಗೂ ಬಂತು. ಅದಾದ ಮೇಲಿಂದ ವರ್ಷದಿಂದ ವರ್ಷಕ್ಕೆ ಫುಟ್ಬಾಲ್ ತನ್ನನ್ನು ತಂತ್ರಜ್ಞಾನದ ಬಳಕೆಗೆ ಹೆಚ್ಚಾಗಿಯೇ ತೆರೆದುಕೊಂಡಿದೆ ಹಾಗೂ ಬಳಕೆಯ ಜನಪ್ರಿಯತೆ ಹೆಚ್ಚುತ್ತಲೂ ಇದೆ.

 

ತಂತ್ರಜ್ಞಾನದ ಬಳಕೆಯ ವಿಚಾರದಲ್ಲಿ ಈ ಬಾರಿಯ ಯೂ-ಎಸ್ ಓಪನ್ ಹೊಸದೊಂದು ಭಾಷ್ಯವನ್ನೇ ಬರೆಯಿತು. ಹಾಕ್-ಐ ತಂತ್ರಜ್ಞಾನದ ಅತ್ಯುತ್ತಮ ಬಳಕೆಯ ಮೂಲಕ 2022ರಲ್ಲಿ ಇನ್ನೂರಕ್ಕೂ ಹೆಚ್ಚು ಲೈನ್ ರೆಫ್ರೀಗಳ ಬಳಕೆಯನ್ನೇ ನಿಲ್ಲಿಸಿದ್ದ ಯೂಎಸ್ ಓಪನ್ ಈ ಬಾರಿ, ತನ್ನ ಮೊದಲ ನಾಲ್ಕುಹಂತದ ಆಟಗಳಲ್ಲಿ ಅಂದರೆ ನೇರಪ್ರಸಾರವಿಲ್ಲದ ಕ್ವಾಲಿಫೈಯರ್ ಆಟಗಳು ಮತ್ತು ಅನ್-ಸೀಡೆಡ್ ಆಟಗಾರರ ಅಟಗಳ ಕಮೆಂಟರಿಯನ್ನೂ, ಹಾಗೂ ಹೆಚ್ಚಿನ ಆಟಗಳ ಮುಖ್ಯಾಂಶಗಳ ವಿಡಿಯೋಗಳ ಕಮೆಂಟರಿಯನ್ನೂ ಕೃತಕಬುದ್ಧಿಮತ್ತೆಯ ಮೂಲಕ ಮಾಡಿಸಿ ಎಲ್ಲರ ಹುಬ್ಬೇರಿಸಿದೆ. ಯೂಎಸ್ ಟೆನಿಸ್ ಅಸೋಸಿಯೇಷನ್ನಿನ ಈ ಪ್ರಯತ್ನಕ್ಕೆ ಕೈಜೋಡಿಸಿರುವ ಐಬಿಎಂ ತನ್ನ ವಾಟ್ಸನ್-ಎಕ್ಸ್ ಎಂಬ ಎಐ ಮಾಡೆಲ್ಲಿನ ಮೂಲಕ ಬಾಲ್-ಬೈ-ಬಾಲ್ ಕಾಮೆಂಟರಿಯನ್ನೂ, ಹಾಗೂ ಅದಕ್ಕೊಂದು ಮಾನವ ಧ್ವನಿಯನ್ನೂ ಕೊಟ್ಟು, ನೈಜತೆಗೆ ಅತ್ಯಂತ ಹತ್ತಿರದ ಅನುಭವ ಕೊಡುವ ಪ್ರಯತ್ನಕ್ಕೆ ಕೈ ಹಾಕಿದೆ. ಇಷ್ಟು ಮಾತ್ರವಲ್ಲದೇ, ಆಟಗಾರರ ಹಿನ್ನೆಲೆಯೊಂದಿಗೆ ಯೂಎಸ್ ಓಪನ್ನಿನಲ್ಲಿ ಅವರ ಪ್ರತಿಯೊಂದು ಮ್ಯಾಚಿನ ಚಲನವಲನಗಳನ್ನೂ, ಅವರ ಹೊಡೆತಗಳ ವೇಗ, ಮತ್ತದರ ಫಲಿತಾಂಶ, ಎಷ್ಟು ಸಲ ಬ್ಯಾಕ್ ಹಾಂಡ್ ಎಷ್ಟು ಸಲ ಫೋರ್ ಹ್ಯಾಂಡ್ ಬಳಸಿದರು ಎಂಬೆಲ್ಲಾ ಮಾಹಿತಿಯನ್ನೂ ಸೇರಿಸಿ, ಮುಂದಿನ ಹಂತಕ್ಕೆ ಯಾರ್ಯಾರು ತಲುಪಬಹುದು ಎಂಬ ಮಾಹಿತಿಯನ್ನೂ ಕೊಡುತ್ತಾ, ವೀಕ್ಷಕರ ಫ್ಯಾಂಟಸೀ ಲೀಗ್ ಆಟಕ್ಕೂ ಹೆಚ್ಚಿನ ರೋಮಾಂಚನ ತಂದಿತು. ಇದರ ಬಗ್ಗೆ ಹೆಚ್ಚಿನ ಮಾಹಿತಿಯ ಆಸಕ್ತಿಯಿರುವವರು ibm.com/usopenನಲ್ಲಿ ಇದರ ಬಗ್ಗೆ ಓದಬಹುದು. ಸಾಧ್ಯತೆಗಳ ಬಗ್ಗೆ ಅಚ್ಚರಿಪಡಬಹುದು.

 

 

ತಂತ್ರಜ್ಞಾನ ಹಲವಾರು ಕೆಲಸಗಳನ್ನು ಇಲ್ಲವಾಗಿಸಿದೆ ಹೌದು. ಅದರೆ, ಅಷ್ಟೇ ಮಟ್ಟದ ಹಾಗೂ ಅದಕ್ಕಿಂತಲೂ ಹೆಚ್ಚಿನ ಹೊಸಾ ಕೆಲಸಗಳನ್ನೂ ಸೃಷ್ಟಿಸಿದೆ. ಕಂಪ್ಯೂಟರುಗಳು ಬಂದಾಗ “ಜನರೆಲ್ಲಾ ಕೆಲಸ ಕಳೆದುಕೊಳ್ಳುತ್ತಾರೆ” ಎಂಬುದೊಂದು ಗುಮ್ಮ ಸೃಷ್ಟಿಯಾಗಿತ್ತು. ಇಪ್ಪತ್ತು ವರ್ಷದ ನಂತರ ಈಗ ನೋಡಿದರೆ, ಹಿಂದೆಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಂಪ್ಯೂಟರುಗಳು ಸೃಷ್ಟಿಸಿವೆ. ಆ ಕ್ಷೇತ್ರದಲ್ಲಿ ಕೆಲಸಮಾಡುವ ಜನರ ಜೀವನಮಟ್ಟವೂ ಉನ್ನತಮಟ್ಟಕ್ಕೆ ತಲುಪಿದೆ. ಇದೊಂದು ಕ್ಷೇತ್ರದಿಂದಲೇ, ದೇಶಗಳ ಜಿಡಿಪಿಗಳು ನಾಗಾಲೋಟದಲ್ಲಿವೆ. ಈಗ ಕೃತಕ ಬುದ್ಧಿಮತ್ತೆಯ ವಿಚಾರದಲ್ಲೂ ಅಂತಹುದೇ ಒಂದು ಗುಮ್ಮನನ್ನು ತೋರಿಸಲಾಗುತ್ತಿದೆ. ಎಐ ಕ್ಷೇತ್ರಕ್ಕೆ ಹೆಚ್ಚಿನ ಮಟ್ಟದ ನಿಯಂತ್ರಣ ಬೇಕು, ಅದರ ಸುತ್ತಲೂ ಗಟ್ಟಿಯಾದ ನೀತಿನಿಯಮಾವಳಿಗಳ ಚೌಕಟ್ಟು ಬೇಕು, ಹೌದು. ಆದರೆ ಅದರ ಅಭಿವೃದ್ಧಿಯನ್ನು ನಿಲ್ಲಿಸುವ ಅಗತ್ಯ ಖಂಡಿತಾ ಇಲ್ಲ. ಬ್ಲಾಕ್ ಮಿರರ್ ತರಹದ ಸೀರೀಸುಗಳನ್ನು ನೋಡಿ ಗಾಬರಿಪಡುವ ನಾವು, ತಂತ್ರಜ್ಞಾನದ ಬೆಳವಣಿಗೆ ಮತ್ತು ನಮ್ಮ ಜೀವನದೊಂದಿಗೆ ಅದರ ಧನಾತ್ಮಕ ಸಮ್ಮಿಳಿತದೊಂದಿಗೂ ಸಂತೋಷಪಡಬೇಕು. ಅದರ ಉಪಯುಕ್ತತೆ ಮತ್ತು ಆನಂದವನ್ನು ಅನುಭವಿಸಬೇಕು.

 

0 comments on “ನಿರ್ಧಾರಗಳೊಂದಿಗೆ ಚೆಲ್ಲಾಟವೋ? ಆಟಗಳಲ್ಲಿ ತಂತ್ರಜ್ಞಾನವೋ?

Leave a Reply

Your email address will not be published. Required fields are marked *