Saturday, 27 April, 2024

ಕನ್ನಡ ಸತ್ಯವಂತೂ ಹೌದು, ಆದರೆ ನಿತ್ಯವಾಗುವುದ್ಯಾವಾಗ?

Share post

ಪ್ರತಿಬಾರಿಯೂ ನವೆಂಬರ್ ಬಂದಾಗ ಕರ್ನಾಟಕದಲ್ಲೊಂದು ವಿಚಿತ್ರವಿದ್ಯಮಾನ ಜರುಗುತ್ತದೆ. ಕನ್ನಡವೆಂದರೆ ಎಲ್ಲರಿಗೂ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಪ್ರೀತಿ ಉಕ್ಕುತ್ತದೆ. ಕೆಲವರಿಗೆ ಹೆಚ್ಚೇ ಉಕ್ಕುತ್ತದೆ. ಕನ್ನಡವನ್ನು ಹಿಂದಿ ನುಂಗಿಹಾಕುತ್ತಿದೆ ಎಂಬ ವಿಚಾರವನ್ನು ನಮ್ಮೆಲ್ಲರಿಗೂ ತಿಳಿಸಿಕೊಡಲಾಗುತ್ತದೆ. ಬೆಂಗಳೂರಿನಲ್ಲಿ ರ್ಯಾಲಿಗಳು, ಭಾಷಣಗಳು, ಉತ್ಸವಗಳು ಜರುಗುತ್ತವೆ. ಕನ್ನಡವನ್ನು ಉಳಿಸಬೇಕು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದ ಕೆಲಸಗಳಲ್ಲಿ ಸರ್ಕಾರಿ ಮಾತ್ರವಲ್ಲ ಖಾಸಗಿ ಕೆಲಸಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ಬೇಕು ಎಂಬ ಕೂಗುಗಳು ಕೇಳಿಬರುತ್ತವೆ. ಅದಾದ ಮರುಮಾಸಕ್ಕೇ ಕ್ರಿಸ್ಮಸ್ ಕ್ಯಾರಲ್ಲುಗಳು ಅನುರಣಿಸುತ್ತವೆ, ಹ್ಯಾಪ್ಪೀ ನ್ಯೂ ಇಯರ್ ಎಂಬ ಹಾಡು ಎಲ್ಲಾ ಮಾಲ್’ಗಳ ಮೈಕುಗಳಲ್ಲೂ ಮುಂದುವರೆಯುತ್ತದೆ. ಮುಂದಿನ ಹತ್ತು ತಿಂಗಳು ಕನ್ನಡವೆಂಬುದು ಹಳೆಯಚಲನಚಿತ್ರಗಳಲ್ಲಿ ಕಂಡುಬರುವ ಅಬಲೆಯಂತೆ “ಯಾರಾದರೂ ನನ್ನ ಕಾಪಾಡಿ” ಎಂದು ಚೀರುತ್ತಿರುತ್ತದೆ.

 

ನಿಮಗೆ ಗೊತ್ತಿದೆಯಾ? ಮಲೆನಾಡಿನಲ್ಲಿ ಯಾವುದೇ ಕನ್ನಡ ಉಳಿಸಿ ಹೋರಾಟ ಸಂಘಟನೆ ಇಲ್ಲ! ಬೆಂಗಳೂರು ಬಿಟ್ಟು ಕರ್ನಾಟಕದ ಬೇರೆ ಯಾವ ಪ್ರದೇಶದಲ್ಲೂ ಮಲೆನಾಡು, ಅರೆಮಲೆನಾಡು, ಬಯಲುಸೀಮೆ, ಕರಾವಳಿ, ಉತ್ತರಕರ್ನಾಟಕ ಎಲ್ಲೂ ಸಹ “ಕನ್ನಡ ಹೋರಾಟದ ವೇದಿಕೆ(ರಿ)”, “ಕಚಟತಪ ಪಡೆ”ಗಳಿಲ್ಲ, “ಅಬಕಡ ವೇದಿಕೆ”ಗಳಿಲ್ಲ. ಯುವಕಸಂಘಗಳಿವೆ, ಮಹಿಳಾಮಂಡಳಿಗಳಿವೆ, ಗೆಳೆಯರ ಬಳಗಗಳಿವೆ ಹಾಗೂ ಅವು ಭಾಷೆ ಹಾಗೂ ಸಂಸ್ಕೃತಿಯ ಉದ್ಧಾರಕ್ಕಾಗಿ ಅತ್ಯುತ್ತಮವಾದ ಕೆಲಸ ನಡೆಸುತ್ತಿವೆ.

 

ಮಲೆನಾಡಿನಲ್ಲಿ ಯಾವುದೇ ಊರಿಗೆ ಹೋಗಿ. ‘ರಾಮದೇವ್ ಫ್ಯಾನ್ಸಿ’ ‘ರಂಗೋಲಿ ಸೆಂಟರ್’ ‘ನಾಕೋಡ ಸ್ಟೀಲ್ ಸೆಂಟರ್’ ಸಿಗ್ತಾವೆ. ಎಲ್ಲವನ್ನೂ ನಡೆಸ್ತಾ ಇರೋದು ರಾಜಸ್ಥಾನದ ಮಾರ್ವಾಡಿಗಳು. ಇಡೀ ಮಲೆನಾಡಿನ ದೊಡ್ಡ ವ್ಯಾಪಾರಿಬಳಗ ಈ ಮಾರ್ವಾಡಿಗಳೇ. ಇವರೇ ನಮ್ಮಲ್ಲಿಗೆ ಬಂದು ಕನ್ನಡ ಕಲಿತುಕೊಳ್ತಾರೆ. “ಹೌದಪ್ಪಾ….ಕಲಿಯದಿದ್ದರೆ ಅವರಿಗೆ ವ್ಯಾಪಾರ ಆಗಬೇಕಲ್ಲಾ” ಅಂತೀರಾ ನೀವು. ಹೌದು ಸಾರ್….ಇದೇ ಯೋಚನಾಲಹರಿಯನ್ನ ಬೆಂಗಳೂರಿಗೂ ಅನ್ವಯಿಸಿ ನೋಡಿ! ವ್ಯಾಪಾರವಾಗಬೇಕಾದದ್ದು ಮಾರ್ವಾಡಿಗೆ ಮಾತ್ರವೇ ಅಲ್ಲ. ನಮಗೂ ಕೂಡಾ ತಾನೇ? ವ್ಯಾಪಾರ ದ್ವಿಮುಖ. ಯಾವತ್ತೂ ಏಕಮುಖವಲ್ಲ. ಮಾರಾಟಗಾರನಾದ ನಾನು ಕನ್ನಡಕಲಿಯದಿದ್ದರೆ ಹಿಂದಿಬರದ ಗ್ರಾಹಕರು ಬೇರೆ ಅಂಗಡಿಗೆ ಹೋಗುತ್ತಾರೆ ಎಂಬ ವ್ಯಾವಹಾರಿಕ ಜ್ಞಾನವಿರುವುದರಿಂದಲೇ ಆತ ಕನ್ನಡ ಕಲಿಯುತ್ತಾನೆ. ಬೆಂಗಳೂರಿನಲ್ಲಿ ‘ಕನ್ನಡ್ ಗೊತ್ತಿಲ್ಲ’ ಅನ್ನುವವರನ್ನು ಏಕಮುಖವಾಗಿ ಬೆಳೆಸಿದ್ದು ನಾವೇ. ಇವತ್ತು ಯಾವುದೇ ಉತ್ತರಭಾರತೀಯ ಕರ್ನಾಟಕಕ್ಕೆ ಬಂದು “ನಾವು ಕರ್ನಾಟಕವನ್ನ ಗೆದ್ದಿದ್ದೇವೆ. ಇಲ್ಲಿ ಹಿಂದಿಯನ್ನೇ ಬಳಕೆಗೆ ತಂದಿದ್ದೇವೆ” ಎಂದುಕೊಂಡರೆ, ಅದಕ್ಕೆ ಅವನು ಪ್ರತಿಬಾರಿಯೂ ಬೆಂಗಳೂರಿನಲ್ಲಿ ಯಾರಬಳಿಯಾದರೂ ಅಂದರೆ ಆಟೋ ಡ್ರೈವರ್, ಬಸ್ ಕಂಡಕ್ಟರ್, ಪೆಟ್ರೋಲ್ ಪಂಪ್ ಅಟೆಂಡೆಂಟ್, ಆಫೀಸ್ ಸಹೋದ್ಯೋಗಿ, ಹೋಟೆಲ್ ಮಾಣಿ/ಕ್ಯಾಷಿಯರ್, ಕಿರಾಣಿ ಅಂಗಡಿ/ಮಾಲ್/ಸೂಪರ್ ಮಾರ್ಕೆಟ್ ಸಿಬ್ಬಂದಿ, ಸಿಗರೇಟ್ ಗೂಡಂಗಡಿಯವ ಹೀಗೆ ಯಾರಬಳಿಯಾದರೂ ವ್ಯವಹರಿಸುವಾಗ ಹಿಂದಿಯಲ್ಲಿ ಏನಾದರೂ ಪ್ರಶ್ನೆ ಕೇಳಿದಾಗ, ಅವನಿಗೆ ಹಿಂದಿಯಲ್ಲೇ ಉತ್ತರ ಕೊಟ್ಟ ನಮ್ಮೆಲ್ಲರದ್ದೂ ತಪ್ಪು. “ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದಲ್ಲಿ ಕನ್ನಡಲ್ಲೇ ಪ್ರಾಶಸ್ತ್ಯ” ಅನ್ನೋದನ್ನ ಮೊತ್ತಮೊದಲ ದಿನದಿಂದ್ಲೇ ಜಾರಿಗೆ ತರದ ನಾವು, ಅವರ ವೈಯ್ಯಾರಕ್ಕೆ ತಕ್ಕಂತೆ ನಮ್ಮ ಬಾಷೆಗಳನ್ನ ಬಳುಕಿಸಿ, ಈಗ “ಅಯ್ಯೋ ಕನ್ನಡದ ಸೊಂಟ ಉಳುಕಿದೆ” ಅಂದ್ರೆ ಹೆಂಗೆ!? ‘ಭಯ್ಯಾ! ಕೋರ್ಮಂಗಲ ಆವೋಗೆ?’ ಅಂತಾ ಕೇಳುವ ಗ್ರಾಹಕರಿಗೆ ‘ಇದನ್ನೇ ಕನ್ನಡದಲ್ಲಿ ಕೇಳಿದರೆ ಖಂಡಿತಾ ಬರ್ತೀನಿ ಸರ್’ ಎನ್ನಲಾಗದೇ, ‘ಮೀಟರ್ ಪೇ ಬೀಸ್ ರುಪ್ಯಾ’ ಅಂತಾ ಹೇಳಿ ಹತ್ತಿಸಿಕೊಂಡೆವು. ಪರಿಣಾಮವಾಗಿ ಇವತ್ತು ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕಬೇಕಾಗಿದೆ. ಆದರೀಗ ನಮ್ಮ ಈ ವೈಫಲ್ಯವನ್ನು ಮುಚ್ಚಿಕೊಳ್ಳಲಿಕ್ಕೆ ‘ಹಿಂದಿ ಹೇರಿಕೆ’ ಎಂಬ ಹೊಸಾದೊಂದು ಗುಮ್ಮವನ್ನು ಕಳೆದೆರಡು ವರ್ಷಗಳಿಂದ ಸೃಷ್ಟಿಸಲಾಗಿದೆ.

 

ಹಿಂದಿ ಹೇರಿಕೆ ಆಗುತ್ತಿಲ್ಲವೆಂದು ನಾನು ಹೇಳುತ್ತಿಲ್ಲ. ಕನ್ನಡದ ಗ್ರಾಹಕನಿಗೆ ಸೇವೆ ಕೊಡಬೇಕಾದಲ್ಲಿ ಕನ್ನಡದ ಬದಲು ಬೇರೆ ಭಾಷೆಗೆ ಪ್ರಾಧಾನ್ಯತೆ ಕೊಡದೆ ಬೇರೆ ಭಾಷೆಗೆ ಕೊಟ್ಟಾಗ ಅದು ಹಿಂದಿಯದ್ದಾಗಲೀ, ಇಂಗ್ಳೀಷಿನದ್ದಾಗಲೀ ಅದು ಖಂಡಿತಾ ಹೇರಿಕೆಯೇ. ಹಾಗಂತಾ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ನಮ್ಮೆಲ್ಲಾ ಕೈಲಾಗದತನಕ್ಕೆ ಹೇರಿಕೆಯ ಕಥೆಹಿಡಿದುಕೊಂಡು ದೆಹಲಿಯನ್ನು ದೂಷಿಸುವುದು ಎಷ್ಟು ಸರಿ? ಬಿಎಂಶ್ರೀ, ಮಾಸ್ತಿ, ತೀನಂಶ್ರೀಯವರ ಕಾಲದ ಹೋರಾಟ ಯಾವುದೇ ಭಾಷೆ ಕನ್ನಡಕ್ಕೆ ಕಂಟಕವಾಗಬಾರದು ಎಂಬ ಕಾರಣಕ್ಕೇ ಹೊರತು, ಹಿಂದಿಯನ್ನೋ ಮಲಯಾಳಂ ಅನ್ನೋ ಗುರಿಯಾಗಿಟ್ಟುಕೊಂಡು ನಾಗ್ಪುರದೆಡೆಗೆ ಬೆರಳು ತೋರಿಸಿ ಹೋರಾಟವನ್ನವರು ಮಾಡಲಿಲ್ಲ. ಗೋಕಾಕರ ಸಮಿತಿ ಕೂಡಾ ಕನ್ನಡಕ್ಕೆ ಮೊದಲಸ್ಥಾನವೆಂದಿತೇ ಹೊರತು, ಯಾವುದೇ ಭಾಷೆಯನ್ನು ಕೊಲ್ಲುವ ಸಲಹೆ ಕೊಟ್ಟಿರಲಿಲ್ಲ. ಸರ್ಕಾರ ತನ್ನ ಸಂವಿಧಾನಿಕ ಮಿತಿಯೊಳಗೇ ತನ್ನ ಕಾರ್ಯಕಾರೀ ಭಾಷೆಯನ್ನು ಪೋಷಿಸುತ್ತಿರುವ ಕ್ರಿಯೆಗೆ ಹೇರಿಕೆಯೆಂಬ ಹೆಸರಿಟ್ಟು ಹಲವುಜನರು ತಮ್ಮ ಜೀವನೋಪಾಯವನ್ನು ಕಂಡುಹಿಡಿದುಕೊಂಡಿರುವುದನ್ನು ನೋಡಿದಾಗ ಈ ಎಲ್ಲಾ ಭಾಷಾ ಹೋರಾಟಗಾರರ ಆಶಯಗಳನ್ನು ಏಕರೂಪವಾಗಿ ಸ್ವೀಕರಿಸುವುದು ಕಷ್ಟವೇ. ಇವರ ಕನ್ನಡವನ್ನು ಬೆಳೆಸಬೇಕೆಂಬ ಬೇಡಿಕೆಯ ಹಿಂದೆ ಹಿಂದಿಯನ್ನು ಕೊಲ್ಲಬೇಕೆಂಬ ಸಂಚು ಎದ್ದುಕಾಣದಿರದು.

 

ಈ ರೀತಿಯ ಉದ್ಯಮೀ ಹೋರಾಟಗಾರರನ್ನು ರೋಲ್ಕಾಲ್ ಹೋರಾಟಗಾರೆಂದು ಆಗಾಗ ಕರೆಯುವುದುಂಟು. ಹಾಗೂ ನಮ್ಮಲ್ಲಿ ಕೆಲವರಿಗೆ ಆ ಪದದ ಬಗ್ಗೆ ಆಕ್ಷೇಪಣೆಯೂ ಉಂಟು. ಆದರೆ ಕನ್ನಡದ ಬಗೆಗಿನ ಯಾವುದೇ ಹೋರಾಟ ವ್ಯಾವಹಾರಿಕವಾದಾಗ ಅದನ್ನು ರೋಲ್ಕಾಲ್ ಅನ್ನದೇ ಬೇರೆ ದಾರಿಯಿಲ್ಲ. ಯಾವ ಹೋರಾಟ ರಾಜಕೀಯ/ರಾಜಕಾರಣ ಪ್ರೇರಿತವೋ, ಯಾವ ಹೋರಾಟ ಅನುಕೂಲಸಿಂಧುವೋ ಅವೆಲ್ಲವೂ ರೋಲ್ಕಾಲ್ ಹೋರಾಟಗಳೇ. ಹೋರಾಟಗಾರರೆಲ್ಲರೂ ರೋಲ್ಕಾಲ್ ಎನ್ನುವುದು ಸಂಕುಚಿತ ಮನೋಭಾವನೆ ಹೌದು. ಆದರೆ ರೋಲ್ಕಾಲ್ ಎಂದರೆ ದುಡ್ಡೇ ಆಗಿರಬೇಕು ಎಂಬುದೂ ಅಷ್ಟೇ ಸಂಕುಚಿತ ಆಲೋಚನೆ. ಚುನಾವಣೆ ಹತ್ತಿರಬಂದಾಗ ನೆನಪಾಗುವ ಕನ್ನಡ ಹೋರಾಟ, ದೆಹಲಿಯಲ್ಲಿರುವ ಪಕ್ಷದ ಆಧಾರದ ಮೇಲೆ ಬದಲಾಗುವ ಹೋರಾಟದ ದಿಕ್ಕು, ಖಾಸಗಿ ಕೆಲಸಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ಇರಲಿ ಎಂದು ಕೈಚಾಚುವ ಬೇಡಿಕೆ, ಬೆಂಗಳೂರಲ್ಲಿ ಮಾತ್ರವೇ ಉಕ್ಕುವ ಕನ್ನಡಕದ ಕಕ್ಕುಲತೆ ಇವೆಲ್ಲವೂ ರೋಲ್ಕಾಲೇ. ಕೆಲವರಿಗೆ ಹಣ ಸಿಕ್ಕಿರಬಹುದು, ಇನ್ನುಕೆಲವರಿಗೆ ಸಿಕ್ಕ ಪಕ್ಷದ ಟಿಕೇಟಿರಬಹುದು, ಮತ್ತೆ ಕೆಲವರಿಗೆ ಸಿಕ್ಕ ಮೀಡಿಯಾ ಮೈಲೇಜು ಇವೂ ರೋಲ್ಕಾಲೇ.

ನಿಜವಾದ ಹೋರಾಟ ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೇ, ಸಣ್ಣ ಸಮುದಾಯದೊಳಗೇ ಬದಲಾವಣೆಯನ್ನು ತರಬಯಸುತ್ತದೆ ಹಾಗೂ ಆ ಬದಲಾವಣೆಯಲ್ಲಿ ಎಲ್ಲರನ್ನೂ ಒಳಗೊಂಡು ಮುಂದುವರೆಯುತ್ತದೆ. ಈ ಮೂರು ಲಕ್ಷಣಗಳಿರುವ ಹೋರಾಟಗಳೇ ನನ್ನ ಮಟ್ಟಿನ ನಿಜವಾದ ಕನ್ನಡಹೋರಾಟ. ನನ್ನ ಬೆಂಗಳೂರಿನ ಸಹೋದ್ಯೋಗಿ ನವೀನ್ ಕುಮಾರ್ ಎಂಬಾತ ನನ್ನಮಟ್ಟಿಗೆ ಉದಾಹರಣೆ ಕೊಡಬಹುದಾದ ಕನ್ನಡದ ಸಿಪಾಯಿ. ಬ್ರಿಟೀಷರೂ ಸೇರಿದಂತೆ ಆಫೀಸಲ್ಲಿದ್ದ ಎಲ್ಲಾ ಇಂಗ್ಲೀಷರಿಗೂ ಕನ್ನಡಕಲಿಸಿದ ಧೀರ ಅವ. ಹಾಗಂತ ಅವನೇನೂ ಅವರಮೇಲೆ ಕನ್ನಡ ಹೇರಲಿಲ್ಲ. ಅವರ ಹತ್ತುಪ್ರಶ್ನೆಗಳಲ್ಲಿ ಏಳಕ್ಕೆ ಇಂಗ್ಳೀಷಲ್ಲೇ ಉತ್ತರಿಸಿ, ಇನ್ನು ಮೂರಕ್ಕೆ ಕನ್ನಡ‍ದಲ್ಲುತ್ತರಿಸಿ, “ಯೂ ಆರ್ ಹಿಯರ್ ಫಾರ್ ಟೂ ಇಯರ್ಸ್ ನೋ. ಯೂ ಟೂ ಶುಡ್ ಲರ್ನ್ ಸಮ್ ಕನ್ನಡ’ ಎಂದು ಅವರ ಮುಖದ ಮೇಲೇ ಹೇಳಿ ಕಲಿಸಿದವ. ಅದರಲ್ಲಿ ಜೋನಾಥನ್ ಎಂಬಾತನಿಗೆ ಮಾತುಮಾತಿಗೆ “ಹೂ ಈಸ್ ಯುವರ್ ಡ್ಯಾಡಿ?” ಅಂತಾ ಛೇಡಿಸುವ ಅಭ್ಯಾಸವಿತ್ತು. ನಮ್ಮ ನವೀನ ಅವನ ಮುಖಕ್ಕೆ ಹೊಡೆದಹಾಗೆ “ಅದು ಹಂಗಲ್ಲಾ. ಯಾರು ನಿನ್ನ ಅಪ್ಪ ಅಂತಾಗಬೇಕು” ಅಂತಾ ಹೇಳಿ, ಒಂದೇ ವಾರದಲ್ಲಿ Who’s your daddyಯನ್ನ “ಯಾರು ನಿನ್ನ ಅಪ್ಪ?” ಮಾಡಿಕೊಟ್ಟಿದ್ದ. ಮುಂದಿನ ಎರಡು ವರ್ಷ ಜೋನಾಥನ್ ಕಂಡಕಂಡವರಿಗೆಲ್ಲಾ “ಯಾರು ನಿನ್ನ ಅಪ್ಪ” ಅಂತಲೇ ಕೇಳ್ತಿದ್ದ. ಆತನ ಕೆಲಸ ಮುಗಿದು ಲಂಡನ್ನಿಗೆ ಮರಳಿಹೋಗುವಾಗ ಅವನಿಗೊಂದು ಬಿಳೀ ಟೀ ಶರ್ಟ್ ಮೇಲೆ ಇಂಗ್ಳೀಷಿನಲ್ಲೇ “Yaaru ninna appa” ಅಂತಾ ಪ್ರಿಂಟ್ ಹೊಡೆಸಿ ಉಡುಗೊರೆಯಾಗಿ ಕೊಟ್ಟಿದ್ದ ನವೀನನಿಗೆ ಇವೆಲ್ಲದರಿಂದ ನಯಾಪೈಸೆ ಉಪಯೋಗವಿರಲಿಲ್ಲ. ಡೊಗ್ಗುಸಲಾಮು ಹೊಡೆದುಕೊಂಡು ಇಂಗ್ಲೀಷಿನಲ್ಲೇ ಮಾತನಾಡಿದ್ದಿದ್ರೆ ಬಹುಷಃ ಎರಡ್ಮೂರು ಸಾವಿರ ಸಂಬಳ ಜಾಸ್ತೀನೂ ಆಗುತ್ತಿತ್ತೇನೋ. ಆದರೆ ಕನ್ನಡ ಹೋರಾಟ ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೇ ನಡೆಯಬೇಕು. ನವೀನ್ ಅದನ್ನು ಪರಿಪಾಲಿಸಿದ.

 

ಇನ್ನು ಕನ್ನಡವನ್ನು ಪೋಷಿಸುತ್ತಿದ್ದೇವೆ, ಬೆಳೆಸುತ್ತಿದ್ದೇವೆ ಎಂದು ಕೊಚ್ಚಿಕೊಳ್ಳುವ ಚಿತ್ರರಂಗದ ಕಥೆಯಂತೂ ಉಲ್ಲೇಖಿಸಲೂ ಅಯೋಗ್ಯವಾದದ್ದು. ಒಮ್ಮೆ ನಾನು ಬೆಂಗಳೂರಿನ ಕ್ಯಾಬಿನಲ್ಲಿ ಕೂತು ರೇಡಿಯೋ ಹಾಕಿದಾಗ ‘ನಾ ನಿನ್ನ ಬಿಡಲಾರೆ’ ಚಿತ್ರದ ‘ನಾನು ನೀನು ಒಂದಾದಮೇಲೆ’ ಎಂಬ ಹಳೆಯ ಹಾಡು ಪ್ರಸಾರವಾಗ್ತಾ ಇತ್ತು. ಅದಾದ ಮೇಲೆ ‘ಏನೆಂದು ಹೆಸರಿಡಲಿ’ ಅನ್ನೋದೊಂದು ಹಾಡು ಬಂತು. ಎರಡು ಹಾಡೂ ಸೇರಿ ಒಟ್ಟು ಒಂದು ಏಳು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡುಗಳು ಒದಗಿಸಿದವು ಎಂಬುವುದು ನಾನು ಪದಗಳಲ್ಲೇ ಹೇಳೋಕಾಗಲ್ಲ. ಆ ಏಳುನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ‘ನಾ ನಿನ್ನ ಬಿಡಲಾರೆ’ಯ ಗುಂಗಿನಲ್ಲಿದ್ದೆ. “ಈಗ ನೆಕ್ಸ್ಟ್ ಸಾಂಗು ಕೇಳೋ ಟೈಮು. ಚಮ್ಕಾಯ್ಸಿ ಚಿಂದಿ ಉಡಾಯಿಸಿ, ಮಸ್ತ್ ಮಜಾ ಮಾಡಿ” ಎಂದೆಲ್ಲಾ ಕೂಗಾಡಿ ಕಂಗ್ಳೀಷಿನಲ್ಲಿ ವಟಗುಟ್ಟಿ ಕಿವಿ ಕಿತ್ತು ಹಾಕಿದ. ಅದಾದ ಕೂಡ್ಲೇ ಹರಿದುಬಂತು ನೋಡಿ ಕರ್ಣಕಠೋರವಾದ ಕನ್ನಡ ಹಾಡು. “ಐತಲಕಡಿ(ಹಿಂಗಂದ್ರೇನು ಅಂತಾ ನನಗೆ ಇವತ್ತಿಗೂ ಗೊತ್ತಿಲ್ಲ)…ಐತಲಕಡಿ” ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ, ಕಮಲಾಕ್ಷಿ ಅಂತೆಲ್ಲಾ ಶತನಾಮವಳಿ ಮುಗಿದ ಮೇಲೆ ನನಗೆ ಅರ್ಥವಾದ ಹಾಡು ಇದು.
“ಐತಲಕಡಿ ಬಾsssರೆ, ಲಗ್ನ ಆಗುಮ, ಪಾಠ ಓದ್ಕುಮ, ಊಟ ಹಾಕುಮ, ಕಟ್ಟಿಕೊ, ಯಮ ಯಮ ಮುದ ಚುಮ”!!

 

ಇಲ್ಲೇ ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡಿನ ಸಾಹಿತ್ಯವಾಗಲೀ, ಅದರಲ್ಲಿದ್ದ ಪಾತ್ರಗಳು ಅದೇನು ಹೇಳಲು ಬಯಸುತ್ತಿವೆ ಎಂಬುದರ ಆಶಯವಾಗಲೀ ಅರ್ಥವೇ ಆಗ್ಲಿಲ್ಲ. ಬಹುಶ: ನನ್ನ ಕನ್ನಡದ ಕುರಿತಾದ ಅಲ್ಪಜ್ಞಾನವೇ ಇದಕ್ಕೆ ಕಾರಣವಿರಬಹುದು ಅಂತಾ ಸುಮ್ಮನಾದೆ. ಅಂತೂ ಸುಮಾರು ಮೂರ್ನಾಲ್ಕು ನಿಮಿಷಗಳತನಕ ಈ ಹಾಡನ್ನು ಸಹಿಸಿಕೊಂಡೆ. “ಯಾಕೆ ಹೊಗಳ್ತೀಯ, ಹೈಟು ಜಾಸ್ತಿ ಮಾಡ್ತೀಯ” ಅಂತ ಏನೇನೋ ಕೂಗಾಡಿ ಆ ಪ್ರಸವವೇದನೆಯನ್ನ ಕೊನೆಗೊಳಿಸಿದರು. ಯಾರೋ “ಮಹಾನ್ ಪ್ರತಿಭಾವಂತ” ಸಾಹಿತಿ ಹಾಗೂ ಸಂಗೀತಕಾರರ ತುಂಬಿದ ಹೊಟ್ಟೆಯಿಂದ ಅಂತೂ ಒಂದು ಹಾಡು ಹೊರಬಂದಿತ್ತು. ಅದಾದ್ಮೇಲೆ ಇನ್ನೂ ಒಂದೇನೋ “ಆಸಿಡ್ ಹಾಕೋದಿಲ್ಲ, ಸಾರಿ ಕೇಳೋದಿಲ್ಲ” ಅಂತೆಲ್ಲಾ ಹೇಳಿ ನಾಯಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸ್ತಾ ಇದ್ದ ಪವಿತ್ರಗೀತೆ ಶುರುವಾಗ್ತಾ ಇತ್ತು. ಅಷ್ಟೊತ್ತಿಗೆ ಮನೆ ತಲುಪಿದ್ದರಿಂದ, “ಕಾಪಾಡಿದೆ ಶಿವನೇ” ಅಂತಾ ಹೇಳಿ ಕಾರಿಂದ ಹೊರಹಾರಿ ಬಚಾವಾದೆ. ಮುಂದಿನ ಮುನ್ನೂರೈವತ್ತೈದು ದಿನಕ್ಕೆ ಸಾಕಾಗುವಷ್ಟು ಭಯ ನನಗೆ ಈ ಒಂದು ಅನುಭವದಿಂದ ದೊರಕಿತ್ತು.

 

ವಿಕಿಪೀಡಿಯಾದ ಪ್ರಕಾರ ವರ್ಷಕ್ಕೆ ಕನಿಷ್ಟ 100 ಕನ್ನಡ ಫಿಲಂ ಬರುತ್ವೆ. ಹಿಂದಿಯಲ್ಲಿ ಕನಿಷ್ಟ 250 ಫಿಲಂ ಬರುತ್ವೆ. ಒಂದೊಂದು ಫಿಲಂನಲ್ಲಿ ಸರಾಸರಿಯಾಗಿ 5 ಹಾಡು. ಅಂದ್ರೆ ಕನ್ನಡದಲ್ಲಿ ಒಂದು 500 ಹಾಡು! ಹಿಂದಿಯಲ್ಲಿ ವರ್ಷಕ್ಕೆ ಸರಾಸರಿ 1125 ಹಾಡು!! ಈ ಅಂಕಿಅಂಶಗಳನ್ನು ನೋಡಿದರೆ ಬಹುತೇಕ ಸಿನಿಮಾ ಹಾಡು ಮತ್ತವುಗಳ ಸಂಗೀತ ಅದ್ಯಾಕೆ ಡಬ್ಬಾದೊಳಗೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ, ಸ್ಲೇಟಿನ ಮೇಲೆ ಉಗುರಲ್ಲಿ ಗೀಚಿದ ಹಾಗೆ ಯಾಕಿರುತ್ತೆ ಅಂತಾ ಅರ್ಥವಾಗಬಹುದು. ಈ ಹಾಡು, ಹಸೆ, ಸಂಗೀತ ಇವೆಲ್ಲಾ ಎಷ್ಟೊಂದು ತಾದಾತ್ಮ್ಯದಿಂದ ಹುಟ್ಟುವ ಕೂಸುಗಳು ಎಂಬ ಅರಿವು, ಅದರಲ್ಲಿ ಮಿಂದೆದ್ದವರಿಗೆ ಮಾತ್ರವೇ ಗೊತ್ತು. ಒಳ್ಳೆಯದು ಅಥವಾ ತುಂಬ ದಿನ ಕಾಡುವ, ತುಂಬ ದಿನ ಉಪಯೋಗಕ್ಕೆ ಬರುವಂಥವುಗಳು ವಿರಳ.

 

ಒಮ್ಮೆ ಜಯಂತ ಕಾಯ್ಕಿಣಿಯ ಸಂದರ್ಶನವೊಂದರಲ್ಲಿ ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ “ಅಸುನೀಗಿತು” ಎಂಬ ಪದದ ಬಳಕೆ ಸಂಗೀತಕಾರನಿಗೂ ಸೇರಿದಂತೆ, ನಿರ್ಮಾಪಕರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದರು. ‘ಅಸುನೀಗಿತು’ ಎಂಬ ಅತೀ ಸರಳ ಕನ್ನಡಪದವೇ ಈಗಿನ ಜನರಲ್ಲಿ ಆಶ್ಚರ್ಯವನ್ನು ಉಂಟುಮಾಡಬೇಕಾದರೆ ಕನ್ನಡದ ತಿಳುವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳವಾಗುತ್ತದೆ. ಕನ್ನಡ ಪುಸ್ತಕಗಳ ಮಾರಾಟ 2014-2020ರ ಮಧ್ಯೆ ಸುಮಾರು 57% ಕುಸಿದಿದೆ. ಅಂದರೆ ಕನ್ನಡ ಓದುಗರ ಸಂಖ್ಯೆ/ಅಥವಾ ಓದುವ ಹವ್ಯಾಸ ಅಷ್ಟು ಕುಸಿದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 37% ಶಾಲೆಗಳು ಬಂದ್ ಆಗಿವೆ. ಎಲ್ಲವೂ ಕನ್ನಡ ಮಾಧ್ಯಮ ಶಾಲೆಗಳು. ಚಲನಚಿತ್ರರಂಗದೊಡನೆ ತಳುಕುಹಾಕಿಕೊಂಡು ಡಬ್ಬಿಂಗ್ ಪರ ಹೋರಾಡುವ ಯಾವ ವೇದಿಕೆ, ಪಡೆ, ಬಳಗಗಳೂ ಇದರ ಬಗ್ಗೆ ಇದರಬಗ್ಗೆ ರಾಜ್ಯದ್ಯಂತ ಜಾಗೃತಿ ಮೂಡಿಸಿದ್ದನ್ನಾಗಲೀ, ಹೋರಾಟ ಮಾಡಿದ್ದನ್ನಾಗಲೀ ನಾನು ನೋಡಿಲ್ಲ. ಈ ರಾಜ್ಯಮಟ್ಟದ ಹೋರಾಟಗಳಲ್ಲಿ ಎಷ್ಟು ಸಂಘಟನೆಗಳು ಎಲ್ಲರನ್ನೂ ಒಳಗೊಂಡಿವೆ. ಯಾವ ಕನ್ನಡ ಉಳಿಸಲು ಹೋರಾಡುತ್ತಿದ್ದಾರೆ ಇವರುಗಳು? ಬೆಂಗಳೂರು ಬಿಟ್ಟು ಹೊರಗಿನ ಎಷ್ಟು ನಗರಗಳಲ್ಲಿ ಕನ್ನಡದ ಮಾತುಗಳು ಕೇಳಿಬಂದಿವೆ?

 

ಉಳಿದವರನ್ನು ದೂಷಿಸುವುದು ತೀರಾ ಸುಲಭದ ಕೆಲಸ. ಆದರೆ ನಮ್ಮನ್ನೂ ನಮ್ಮವರನ್ನೂ ನಾವು ಮೊದಲು ಪ್ರಶ್ನಿಸಿಕೊಳ್ಳಬೇಕು. ನೀವು ಬೆಂಗಳೂರಿನ ಪಂಚತಾರಾ ಹೋಟೆಲುಗಳಿಗೆ, ದುಬಾರಿ ಉಪಾಹಾರಗೃಹಗಳಿಗೆ ಅಥವಾ ಕಾಫಿ-ಡೇಗಳಿಗೆ ಹೋದಾಗ ನಮಗೆ ಕನ್ನಡದಲ್ಲಿ ಸೇವೆಗಳು ದೊರೆಯುತ್ತವೆಯೇ? ಮಾಲ್’ಗಳಲ್ಲಿ ಎಷ್ಟು ಕಡೆ ನಿಮಗೆ ಕನ್ನಡದಲ್ಲೇ ಮಾತನಾಡುವ ಸಿಬ್ಬಂದಿ ಸಿಗುತ್ತಾರೆ? ನಾವುಗಳು, ಇಬ್ಬರು ಕನ್ನಡ ಸಾಫ್ಟ್ವೇರ್ ಇಂಜಿನಿಯರ್ಗಳು ತಮ್ಮ ತಮ್ಮ ಆಫೀಸಿನಲ್ಲಿ ಇಂಗ್ಲೀಷಿನಲ್ಲಿ ಮಾತಾಡಿದ, ಕಸ್ಟಮರ್ ಕೇರ್ ಕರೆಗಳಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿದ ದಿನ, ಎಟಿಎಂಗಳಲ್ಲಿ ಕನ್ನಡವನ್ನೇ ಆಯ್ಕೆ ಮಾಡಿದ ದಿನ, ಹೋಟೆಲ್ ಮತ್ತೆ ಮಾಲ್’ಗಳ ಲ್ಲಿ ಕನ್ನಡ ಮಾತಾಡಿದ ದಿನ ನಾವು ಅನ್ಯಭಾಷಿಕರ ಕನ್ನಡ ಅಸಡ್ಡೆಯ ಬಗ್ಗೆ ಮಾತಾಡೋಣ. ನಮ್ಮ ಕನ್ನಡ ಪ್ರೇಮವನ್ನು ಬೆಂಗಳೂರಿಗೆ, ಮೆಟ್ರೋಗೆ, ಕೆಲಸಕ್ಕೆ ಮಾತ್ರ ಸೀಮಿತಗೊಳಿಸದಿರೋಣ. ಚಿದಾನಂದಮೂರ್ತಿಯಂತವರನ್ನು ಗೂಂಡಾಗಿರಿಯಿಂದ ನಡೆಸಿಕೊಂಡಾಗ, ಭೈರಪ್ಪನಂತವರನ್ನ ಸಾಹಿತ್ಯಸಮ್ಮೇಳನಗಳಿಂದ ದೂರವಿಟ್ಟಾಗ, ಮಾ|| ಹಿರಣ್ಣಯ್ಯನಂತವರನ್ನು ಅಟ್ಟಾಡಿಸಿ ಹೊಡೆದಾಗಲೂ ಮನಸ್ಸು ಮಿಡಿಯಲಿ. ಸಾಹಿತ್ಯದಲ್ಲೂ ಎಡಬಲ ಹುಡುಕುವ ಚಾಳಿಬಿಟ್ಟು ಕನ್ನಡಕ್ಕಾಗಿ ಸಾಹಿತ್ಯ, ಕನ್ನಡದಿಂದ ಸಾಹಿತ್ಯ ಎಂಬ ನಡೆ ನಮ್ಮಿಂದ ಬರಲಿ. ಒಂದೇ ಒಂದು ಔನ್ಸು ಪ್ರತಿಫಲಾಪೇಕ್ಷೆಯಿಲ್ಲದೆ, ಮೀಡಿಯಾ ಕವರೇಜ್ ಇಲ್ಲದೇ, ಎಡಗೈಗಲ್ಲಿ ಮಾಡಿದ್ದು ಬಲಗೈಗೆ ತಿಳಿಯದಂತಾ ಕನ್ನಡ ಸೇವೆ ನಡೆಯಲಿ. ಹೇರಿಕೆಯೆನ್ನೋದು ಹಿಂದಿಯಿಂದ ಮಾತವಲ್ಲ, ಆದರೆ ಇಂಗ್ಲಿಷಿನಿಂದಲೂ, ಉರ್ದು, ಅರೇಬಿಕ್ ಎಲ್ಲದರಿಂದಲೂ, ಯಾವುದು ಆಯ್ಕೆಯಲ್ಲವೋ ಅವೆಲ್ಲದರಿಂದಲೂ ಆಗುತ್ತೆ ಎಂಬ ಸತ್ಯವನ್ನೂ ಜನರಿಗೆ ತಿಳಿಸಿ. ಆಗ ಕನ್ನಡಪರ ಹೋರಾಟಗಾರರನ್ನು ರೋಲ್ಕಾಲುಗಳೆಂದು ಕರೆಯುವವರ ಬಾಯ್ಕಟ್ಟದಿದ್ದರೆ ನೋಡಿ, ಅಲ್ಲಿ ಹುತ್ತಬೆಳೆಯದಿದ್ದರೆ ಕೇಳಿ.
.
.
ಕನ್ನಡವೆಂಬುದು ಬೇರೆಯವರ ಕೊರಳೊತ್ತುವುದರಿಂದ ಬೆಳೆಯಲಾರದು. ನಾನು ನೀನು ಕೊರಳೆತ್ತಿದರಷ್ಟೇ ಬೆಳೆಯಲು ಸಾಧ್ಯ.

0 comments on “ಕನ್ನಡ ಸತ್ಯವಂತೂ ಹೌದು, ಆದರೆ ನಿತ್ಯವಾಗುವುದ್ಯಾವಾಗ?

Leave a Reply

Your email address will not be published. Required fields are marked *