Thursday, 18 April, 2024

“ಹಿಂದೂ, ಹಬ್ಬ, ಹೊಗೆ, ಹಗೆ, ಹಾಳುಮೂಳು ಜ್ಞಾನ”

Share post

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಯುಗಾದಿ ಮಾತ್ರವಲ್ಲ, ದೀಪಾವಳಿಯೂ ಮರಳಿ ಮತ್ತೆ ಬರುತ್ತದೆ. ಆದರೆ ದೀಪಾವಳಿ ಯಾವತ್ತೂ ಬರಿಕೈಯಲ್ಲಿ ಬರುವುದಿಲ್ಲ, ಜೊತೆಗೊಂದಷ್ಟು ಚರ್ಚೆಗಳನ್ನೂ ತನ್ನೊಂದಿಗೆ ತರುತ್ತದೆ. ಈ ಚರ್ಚೆಗಳಲ್ಲಿ ಯುಗಾದಿಯ ಹಾಡಿನಂತೆ ಹೊಸದೇನೂ ಇಲ್ಲ. ಅದೊಂದು ಮಾಬಿಯಸ್ ಪಟ್ಟಿಯಮೇಲೆ ನಡೆಯುವ ಇರುವೆಯ ಕಥೆಯಂತೆಯೇ ಹಿಂದೂಗಳಪಾಲಿಗೆ ಮತ್ತದೇ ಕಿವಿಮಾತಿನ ಸಾಲುಸಾಲು ಭಾಷಣಗಳು. ಇದಕ್ಕಾಗಿಯೇ ಕಥೆಬರೆದಿಟ್ಟುಕೊಂಡು ಕೂತವರಂತೆ ಪ್ರಸಿದ್ಧವ್ಯಕ್ತಿಗಳು, ಸಿನಿಮಾನಟನಟಿರು, ಲೇಖಕರು, ಕವಿಗಳು, ಸರ್ಕಾರಗಳು, ನೆಪ್ಚೂನಿನ ಎರಡನೇ ಚಂದ್ರನ ಮೇಲಿನ ನಿವಾಸಿಗಳು ಎಲ್ಲರೂ ಪಟಾಕಿಗಳಿಂದ ಅದೆಷ್ಟು ಕೆಟ್ಟಪರಿಣಾಮಗಳಿವೆ ಹಾಗೂ ಯಾಕದನ್ನು ಸಿಡಿಸಬಾರದು ಎಂಬುದರ ಬಗ್ಗೆ ನೀತಿಪಾಠಗಳನ್ನು ಹೇಳುತ್ತಾರೆ. ಕೆಲವರಿಗೆ ವಾಯುಮಾಲಿನ್ಯದ ಚಿಂತೆ, ಕೆಲವರಿಗೆ ತಮ್ಮ ಬೀದಿಯಲ್ಲಿರುವ ನಾಯಿಗಳ ಚಿಂತೆ, ಕೆಲವರಿಗೆ ತಮ್ಮ ಚಿಕ್ಕಮ್ಮನ ಮಗಳಿಗಿರುವ ಅಸ್ತಮಾ, ಕೆಲವರಿಗೆ ಗ್ಲೋಬಲ್ ವಾರ್ಮಿಂಗ್, ಇನ್ನೂ ಕೆಲವರಿಗೆ ತಾವು ಪ್ರಸ್ತುತವಾಗಿರುವುದರ ಬಗ್ಗೆ ಚಿಂತೆ. ಒಟ್ಟಿನಲ್ಲಿ ದೀಪಾವಳಿ, ಜನಮಾನಸದಿಂದ ದೂರವಾಗಿರುವ ಈ ಎಲ್ಲರಪಾಲಿಗೂ ಆಪದ್ಬಾಂಧವನಂತೆ ಬರುತ್ತದೆ. ಅವರ ಸಂದೇಶಗಳನ್ನು ಹರಡಿ ಅವರಿಗೊಂದಷ್ಟು ಪ್ರಚಾರವನ್ನೂ ಒದಗಿಸಿಹೋಗುತ್ತದೆ.

 

ಹಿಂದೂಹಬ್ಬಗಳೇ ಹಾಗೆ. ಎಲ್ಲರಿಗೂ ಬೇಕು. ಆಚರಿಸಲು ಹಿಂದೂಗಳಿಗೆ, ಕಿರಿಕ್ಕು ತೆಗೆಯೋದಕ್ಕೆ ಪ್ರಗತಿಪರರಿಗೆ, ಒಂದೈನೂರು ಮಣ್ಣಿನದೀಪಗಳನ್ನು ಮಾರಿ ಮನೆಯಲ್ಲೊಂದು ದೀಪಹಚ್ಚಲು ಸಣ್ಣವ್ಯಾಪಾರಿಗಳಿಗೆ, ಅಗತ್ಯವೇ ಇಲ್ಲದ ವಸ್ತುಗಳನ್ನು ಸೇಲುಗಳಲ್ಲಿ ಮಾರಿ ಲಾಭಮಾಡಿಕೊಳ್ಳಲಿಕ್ಕೆ ಕಾರ್ಪೋರೇಟ್ ಕಂಪನಿಗಳಿಗೆ ಎಲ್ಲರಿಗೂ ಬೇಕು. ಆದರೆ ಹೆಚ್ಚಿನವರಿಗೆ ಹಬ್ಬವನ್ನು ಆಚರಿಸುವ ಸಂಭ್ರಮವಾದರೆ, ಕೆಲವರಿಗೆ ಹಬ್ಬವನ್ನು ವಿರೋಧಿಸುವ ಸಂಭ್ರಮ. ಮಾಧ್ಯಮಗಳಂತೂ ಹಿಂದೂಹಬ್ಬಗಳು ಹತ್ತಿರಬಂದರೆ ವಿಚಾರವಾದದ ಕತ್ತಿಝಳಪಿಸುತ್ತಾ ಕಂಡದ್ದನ್ನೆಲ್ಲಾ ಕತ್ತರಿಸುವ ಉಮೇದಿನಲ್ಲಿರುತ್ತವೆ. ಇವರ ಪ್ರಕಾರ ಜಗತ್ತಿನಲ್ಲಿರೋ ಎಲ್ಲಾ ಕೆಟ್ಟ ಆಚರಣೆಗಳೂ ಹಿಂದೂಗಳಲ್ಲೇ ಇವೆ. ಜನವರಿಯಲ್ಲಿ ಸಂಕ್ರಾತಿಯ ಹೆಸರಲ್ಲಿ ಬೆಂಕಿಹಾಕಿ ಅದರ ಮೇಲೆ ದನಕರುಗಳನ್ನ ಹಾಯಿಸೋದು, ಗಾಳಿಪಟ ಹಾರಿಸಿ ಹಕ್ಕಿಗಳಿಗೆ ತೊಂದರೆ ಕೊಡುವುದರಿಂದಾ ಹಿಡಿದು ನವೆಂಬರಿನಲ್ಲಿ ದೀಪಾವಳಿ ಅಂತಾ ಮಾಡಿ ಎಣ್ಣೆ ಪೋಲು ಮಾಡೋದಲ್ಲದೇ, ಪಟಾಕಿ ಹೊಡೆದು ವಾತಾವರಣ ಕಲುಷಿತಗೊಳಿಸೋದರವರೆಗೆ ಪರಿಸರ ಮತ್ತು ಸಮಾಜದ ಮೇಲೆ ಹಿಂದೂಗಳ ಆಕ್ರಮಣ ಒಂದೇ ಎರಡೇ!! ಒಟ್ಟಿನಲ್ಲಿ ಜಗತ್ತಿನ ವಿನಾಶಕ್ಕೆ ನಾವೇ ಕಾರಣ. ಜಾಗತಿಕ ತಾಪಮಾನ ಏರಿಕೆಗೆ, ಆಫ್ರಿಕಾದ ಹಸಿವೆಗೆ, ಸಿರಿಯಾದ ಗಲಾಟೆಗೆ, ಅಂಟಾರ್ಕ್ಟಿಕಾದ ಪೆಂಗ್ವಿನ್ನಿಗೆ ಬಂದ ಜ್ವರಕ್ಕೆ, ಡೋಡೋ ಹಕ್ಕಿಗಳ ವಿನಾಶಕ್ಕೆ ಎಲ್ಲದಕ್ಕೂ ಹಿಂದೂಗಳೇ ಕಾರಣ. ಈ ಎಲ್ಲಾ ಹಬ್ಬಗಳನ್ನ ನಿಲ್ಲಿಸಿಬಿಟ್ಟರೆ ಜಗತ್ತು ಅರ್ಧಕ್ಕರ್ಧ ಸರಿಯಾದಂತೆ. ಅದಾದಮೇಲೆ ಟ್ರಂಪ್ ಅಧ್ಯಕ್ಷ ಆದ್ರೂ, ರಾಹುಲ್ ಪ್ರಧಾನಿಯಾದ್ರೂ ತೊಂದ್ರೆಯೇನಿಲ್ಲ, ಉತ್ತರದ್ರುವ ಪೂರ್ತಿಕರಗಿದ್ರೂ ನೋ ಪ್ರಾಬ್ಲಮ್. ತಮಾಷೆಯೆಂದರೆ ಹಿಂದೂ ಹಬ್ಬಗಳ ಮೇಲೆ ಸದಾಕಿಡಿಕಾರುವ ಎಲ್ಲಾ ಮುದ್ರಣಮಾಧ್ಯಮದ ಕಚೇರಿಗಳು ವರ್ಷಕ್ಕೊಮ್ಮೆ ರಜತಗೆದುಕೊಳ್ಳುವುದು ಆಯುಧಪೂಜೆಯದಿನ ಮಾತ್ರವೇ.

 

ದೀಪಾವಳಿಯ ಸಾಮಾನ್ಯ ಗಲಾಟೆ ಕೇಂದ್ರೀಕೃತವಾಗುವುದು ಪಟಾಕಿಯ ಸುತ್ತಮುತ್ತ. ಕೇಂದ್ರ ಅರೋಗ್ಯಸಚಿವರು ಪಟಾಕಿ ಹೊಡೆಯಬೇಡಿ ಎಂದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೂ ಸಹ ಸರ್ಕಾರದ ಯಥಾವರಸೆಯಂತೆ ಪಟಾಕಿ ನಿಷೇಧ ಮಾಡಿ, ಆಮೇಲೆ ಹಸಿರುಪಟಾಕಿ ಮಾತ್ರ ಹೊಡೆಯಿರಿ ಎಂದಿದ್ದಾರೆ. ಯಾವ ದೇವರೂ ಸಹ ಪಟಾಕಿ ಹೊಡೆಯಿರಿ ಅಂತಾ ಹೇಳಿಲ್ಲ. ಈ ಕಾಲದಲ್ಲಿ ದೆಹಲಿಯಲ್ಲಿ ಮಂಜುಸುರಿಯುತ್ತದೆ ಹಾಗೂ ದೀಪಾವಳಿಯ ಪಟಾಕಿಗಳ ಹೊಗೆ ಅದನ್ನು ನಂಜಾಗಿಸುತ್ತದೆ. ಚೀನಾದಿಂದ ಬಂದ ಪಟಾಕಿ ನಮ್ಮ ಸಂಪ್ರದಾಯವಲ್ಲ ಅನ್ನುವವರಿಗೇನೂ ಕಮ್ಮಿಯಿಲ್ಲ.

 

ಪಟಾಕಿ ಅನ್ನೋದು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದೋ ಅಲ್ಲವೋ ಅನ್ನೋ ಪ್ರಶ್ನೆಯೇ ಅಸಂಬದ್ಧ. ಬಾಂಬಿಗೆ ಹೇಗೆ ಧರ್ಮವಿಲ್ಲವೋ, ಹಾಗೇ ಪಟಾಕಿಗೂ ಧರ್ಮವಿರೋಕೆ ಸಾಧ್ಯವಿಲ್ಲ. ಪಟಾಕಿ ಅನ್ನೋದು ಸಂತೋಷದ ಸಮಯದಲ್ಲಿ ಎಲ್ಲಾ ಧರ್ಮದವರು ಸಿಡಿಸಿ ಸಂತೋಷಪಡುವ ಒಂದು ಸಾಧನ ಅಷ್ಟೇ. ಆದರೆ ಹಿಂದೂಗಳಲ್ಲಿ ವಿಶೇಷ ಏನಂದರೆ ದೀಪಾವಳಿ ಅನ್ನೋದು ದೀಪಗಳ ಬೆಳಕಿನ ಹಬ್ಬ. ಪಟಾಕಿಯೂ ಸಹ ಬೆಳಕನ್ನು ಸೂಸುವುದರಿಂದ ಅದು ನಮ್ಮ ದೀಪಾವಳಿಯೊಂದಿಗೆ ಸಹಜವಾಗಿಯೇ ಮಿಳಿತಗೊಳ್ಳುತ್ತೆ. ಇದೇ ಕಾರಣಕ್ಕೆ ನಾವು ಯುಗಾದಿಗಲ್ಲದೇ ದೀಪಾವಳಿಗೆ ಪಟಾಕಿ ಹೊಡೆಯುವುದು. ಕೊಂಡ ಪಟಾಕಿಗಳಲ್ಲಿ ಸ್ವಲ್ಪವುಳಿಸಿ ತುಳಸೀಪೂಜೆಗೂ ಹೊಡೆಯುತ್ತೇವೆ. ತುಳಸೀಪೂಜೆ ಕೂಡ ಸಂಜೆಯ ಹೊತ್ತು ನಡೆಯುವ ದೀಪಗಳ ಪೂಜೆ. ಹಾಗಾಗಿಯೇ ಕಡೇಪಕ್ಷ ನಮಗೆ ಅಂದರೆ ದಕ್ಷಿಣಭಾರತದವರಿಗೆ, ಪಟಾಕಿ ಅನ್ನುವುದು ಈ ಎರಡುಹಬ್ಬಗಳ ಒಂದು ಭಾಗ. ಇದಕ್ಕೆ ಇತಿಹಾಸ ಕೆದಕುವ ಅಗತ್ಯವೇ ಇಲ್ಲ. ಎಷ್ಟೋ ಆಚರಣೆಗಳು ಬರೇ ಒಂದೆರಡು ತಲೆಮಾರುಗಳಲ್ಲೇ ಅಭ್ಯಾಸವಾಗುವಂತವು. ಹಾಗಿದ್ದಮೇಲೆ ಇವಕ್ಕೆ ಇತಿಹಾಸ, ಪುರಾಣಗಳ ಹಂಗೇಕೆ!? ಯಾರೋ ರಾಜನೊಬ್ಬ ಮಾಡಿದ್ದಷ್ಟೇ ನಮ್ಮ ಸಂಸ್ಕೃತಿಗಳಲ್ಲ. ಮನೆಯೊಳಗೆ ಮಾತ್ರ ನಡೆಯುತ್ತಿದ್ದ ಗಣೇಶ ಹಬ್ಬಕ್ಕೆ ತಿಲಕರು, ಸ್ವಾತಂತ್ರ್ಯಸಂಗ್ರಾಮದ ವೇಳೆ ಸಾಮಾಜಿಕ ಸ್ವರೂಪ ಕೊಟ್ಟರು. ಇದು ಬರೀ ನೂರೈವತ್ತುವರ್ಷದ ಆಚರಣೆ ಅಂತಾ ಹೇಳಿ, ಮುಂದಿನವರ್ಷದಿಂದ ಗಣೇಶನ ಪೆಂಡಾಲನ್ನೂ ಕೀಳೋಣವೇ? ಅದು ಹಳೆಯದೋ ಹೊಸದೋ ಅನ್ನುವುದಕ್ಕಿಂತಾ, ಆ ಆಚರಣೆ ನಮ್ಮನ್ನು ನಾಗರೀಕರಾಗಿ ಹೇಗೆ ಬೆಸೆಯುತ್ತಿದೆ ಅನ್ನೋದು ಮುಖ್ಯ. ಸಮಾರಂಭಗಳಲ್ಲಿ ಜನಗಣಮನ ಹಾಡುವುದೂ ನಮ್ಮದೇ ಸಂಸ್ಕೃತಿ. ಬರೇ ಎಪ್ಪತ್ತು ವರ್ಷಗಳಿಂದ ಪ್ರಾರಂಭವಾದದ್ದು. ಆದರೆ ಭಾರತ ಇರುವಷ್ಟು ವರ್ಷವೂ ಉಳಿಯುವಂತದ್ದು. ಆದ್ದರಿಂದ, ಪಟಾಕಿ ಹಿಂದೂ ಅಂತಾ ಸಂಬಂಧ ಹುಡುಕಲು ಕೂತವರಿಗಿಂತಾ ದಡ್ಡರು ಇನ್ಯಾರೂ ಇಲ್ಲ. ಹಾಗೆ ಹುಡುಕುತ್ತಾ ಹೋದರೆ ನಮ್ಮ ಎಲ್ಲಾ ಆಚರಣೆಗಳೂ ಸಂಬಂಧ ಕಳೆದುಕೊಂಡು ಅಹಿಂದೂ ಆಗುವ ಚಾನ್ಸೇ ಜಾಸ್ತಿ.

 

ಯಾವ ಪ್ರಜ್ಞಾವಂತ ವ್ಯಕ್ತಿಯೇ ಆದರೂ ಸಹ, ತನಗೊಂದು ಉನ್ನತ ಸಲಹೆಬಂದಾಗ ಅದು ಯಾರಿಂದಲೇ ಬಂದರೂ ಸಹ ಅದನ್ನು ಸ್ವೀಕರಿಸುತ್ತಾನೆ. ಆದರೆ ಸಲಹೆ ಕೊಡುವವನಿಗೆ ಕನಿಷ್ಟ ನೈತಿಕ ಹಕ್ಕಿರಬೇಕಷ್ಟೇ. ಬೆಲ್ಲತಿನ್ನುತ್ತಿದ್ದ ಮಗನಚಾಳಿ ಬಿಡಿಸಲು ಪರಮಹಂಸರ ಬಳಿ ಬಂದ ತಾಯಿಯ ಕಥೆ ಎಲ್ಲರಿಗೂ ಗೊತ್ತು? ಸಲ್ಮಾನ್ ಖಾನ್ ಪ್ರಾಣಿಹತ್ಯೆಯ ವಿರುದ್ಧ ಅಥವಾ ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡುವುದು, ಅರವಿಂದ್ ಕೇಜ್ರಿವಾಲ್ ಕೊಟ್ಟಮಾತನ್ನು ಉಳಿಸಿಕೊಳ್ಳುವ ಬಗ್ಗೆ ಮಾತನಾಡುವುದು ಎಷ್ಟು ಹಾಸ್ಯಾಸ್ಪದವೋ, IOCL ಎಂಬ ತೈಲ ತಯಾರಕ ಮತ್ತು ವಿತರಕ ಕಂಪನಿ ದೀಪಾವಳಿಯಂದು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವುದೂ ಅಷ್ಟೇ ಅಸಂಬದ್ಧ. ಟೆಸ್ಲಾ ಎಂಬ ಕಂಪನಿಯವರು “ನಾವು ಎಲೆಕ್ಟ್ರಿಕ್ ಕಾರುಗಳನ್ನ ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಿದ್ದೇವೆ. ನಮ್ಮ ಕಾರುಗಳು ಹೆಚ್ಚು ಇಂಧನದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿವೆ. ಬನ್ನಿ ನಮ್ಮ ಜೊತೆ ಕೈಗೂಡಿಸಿ. ಪರಿಸರವನ್ನು ಇನ್ನೂ ಹೆಚ್ಚು ರಕ್ಷಿಸೋಣ” ಅನ್ನೋ ಜಾಹೀರಾತು ಕೊಟ್ಟರೆ ಜನ ಒಂದು ಪಕ್ಷ ಒಪ್ಪಬಹುದು. ಹೌದು, ಟೆಸ್ಲಾ ಕಾರುಗಳು ಉಪಯೋಗಿಸುವ ವಿದ್ಯುತ್ ಕೂಡಾ ಕಲ್ಲಿದ್ದಲಿಂದಲೇ ಬರುತ್ತೆ. ಅದೇನೂ ನೂರಕ್ಕೆ ನೂರು ಹಸಿರು ವಿದ್ಯುತ್ ಅಲ್ಲಾ ಅಂತಾ ಕೊಂಕುತೆಗೆಯುವವರೂ ಇದ್ದಾರೆ. ಆದರೆ ಜಗತ್ತು ಹೆಚ್ಚೆಚ್ಚು ಪರ್ಯಾಯ ಮಾರ್ಗಗಳಿಂದ ವಿದ್ಯುತ್ ಉತ್ಪಾದಿಸುತ್ತಿದೆ ಹಾಗೂ ವರ್ಷಾನುವರ್ಷ ಈ ನಿಟ್ಟಿನಲ್ಲಿ ಹೆಚ್ಚು ದಕ್ಷವೂ ಆಗುತ್ತಿವೆಯಾದ್ದರಿಂದ, ಆ ಕೊಂಕನ್ನು ಸುಮ್ಮನೇ ಬದಿಗಿಡಬಹುದು. ಆದರೆ ಟೆಸ್ಲಾದವರ ಬದಲು ಜನರಲ್ ಮೋಟಾರ್ಸ್ ಅಥವಾ ಫೋರ್ಡ್ ಡೀಸೆಲ್ ಕಂಪನಿಗಳು ಇಂತಾ ಕರೆಕೊಟ್ಟಾಗ ನಗುಬರುವುದು ಸಹಜವೇ.

ಇವತ್ತು ಜಗತ್ತಿನ ತ್ಯಾಜ್ಯದ 42% ಮತ್ತು 70% ಪರಿಸರನಾಶಕ ವಿಷಗಳು ಎಲೆಕ್ಟ್ರಾನಿಕ್ ವೇಸ್ಟ್’ನಿಂದ ಬಿಡುಗಡೆಯಾಗ್ತಾ ಇವೆ. ವರ್ಷಕ್ಕೊಮ್ಮೆ ಮಾಡಲ್ಲುಗಳು ಬದಲಾಗಿ, ಹಳೆಯ ಮಾಡೆಲ್ಲುಗಳ ಬಿಡಿಭಾಗಗಳು ದೊರೆಯದೇ ನಾವು ಎಸೆಯುವ ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ಬರೇ 2% ಅಷ್ಟೇ ರೀಸೈಕಲ್ ಆಗ್ತಾ ಇರೋದು. ಪರಿಸ್ಥಿತಿ ಹೀಗಿದ್ದಾಗ, ಇದಕ್ಕೆ ಯಾವ ಕ್ರಮವನ್ನೂ ಕೈಗೊಳ್ಳದ, ಯಾವ ಕ್ರಮಕ್ಕೂ ಪ್ರೋತ್ಸಾಹಿಸದ ಎಲ್ಜಿ, ಸ್ಯಾಮ್ಸಂಗ್, ಪ್ಯಾನಾಸೋನಿಕ್’ನಂತಹ ಕಂಪನಿಗಳು “ಪರಿಸರ ನಾಶ ಮಾಡಬೇಡಿ. ನಿಮ್ಮ ಹಬ್ಬಗಳನ್ನ ಆದಷ್ಟೂ ಪರಿಸರಸ್ನೇಹಿಯನ್ನಾಗಿಸಿ” ಅಂತಾ ಕರೆಕೊಟ್ಟರೆ ನಗು ಅಥವಾ ಸಿಟ್ಟು ಬರದೇ, ಇನ್ನೇನು ಪ್ರಶಂಸಿಸಬೇಕೇ? ಪರಿಸರವನ್ನ ನೀವು ನಾಶಪಡಿಸಬೇಡಿ. ನೀವು ಪಟಾಕಿ ಹೊಡೆಯದೇ ಪರಿಸರ ಉಳಿಸಿ, ನಾಶ ಮಾಡುವ ಕೆಲಸ ನಮಗೆ ಬಿಡಿ ಅನ್ನುತ್ತಿದ್ದಾರೋ ಹೇಗೆ?

 

ಇನ್ನು ಬೇರೆ ಸಮುದಾಯದ ಹಬ್ಬಗಳಲ್ಲೂ ಪರಿಸರ/ಮಾನವೀಯ ಮೌಲ್ಯಗಳ ನಾಶ ಕಂಡುಬಂದಿದ್ದರೂ ಅವುಗಳ ವಿರುದ್ಧ ಸೊಲ್ಲೆತ್ತದ, ದೀಪಾವಳಿಯ ಸುತ್ತಮುತ್ತಲಲ್ಲೇ ಮಾತ್ರವೇ ಎಚ್ಚರಗೊಳ್ಳುವ ನಮ್ಮ ಪ್ರೀತಿಯ ಬುದ್ಧಿಜೀವಿಗಳ, ನಟನಟಿಯರ ಪರಿಸರಪ್ರೇಮ ನನಗಂತೂ ಸದಾ ಹಾಸ್ಯಾಸ್ಪದ ವಿಚಾರವೇ. ನಮ್ಮ ಸರ್ಕಾರ ಮತ್ತು ನ್ಯಾಯಾಲಯಗಳೂ ಸಹ ಪಟಾಕಿಗಳ ತಯಾರಿಕೆಯ ಬಗ್ಗೆ ಕಮಕ್ ಕಿಮಕ್ ಎನ್ನದೇ, ಪಟಾಕಿ ಹೊಡೆಯುವುದರ ಬಗ್ಗೆ ಮಾತ್ರವೇ ನಿಷೇಧ ಹೇರುತ್ತವೆ. “2021ರಿಂದ ಭಾರತದಲ್ಲಿರುವ ಎಲ್ಲಾ ಪಟಾಕಿ ಕಾರ್ಖಾನೆಗಳ ಲೈಸೆನ್ಸ್ ರದ್ದುಗೊಳಿಸಲಾಗುತ್ತೆ. ಯಾರೂ ಪಟಾಕಿ ಆಮದು ಕೂಡಾ ಮಾಡುವಂತಿಲ್ಲ. ಎಲ್ಲೂ ಯಾವ ಹಬ್ಬದಲ್ಲೂ, ಸಂದರ್ಭದಲ್ಲೂ ಪಟಾಕಿ ಬಳಸುವಂತಿಲ್ಲ” ಅನ್ನುವ ನಿಯಮ ಜಾರಿಗೆಬಂದರೆ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ನರಾದಿಯಾಗಿ ಎಲ್ಲರೂ ಅದನ್ನು ಸ್ವಾಗತಿಸುತ್ತಾರೆ. ಅದಲ್ಲದೇ “ಬಕ್ರೀದಿನಲ್ಲಿ ಕುರಿಕಡಿಯುವುದು, ಮೊಹರಂ ದಿನ ಮಕ್ಕಳಾಗಲೀ ದೊಡ್ಡವರಾಗಲೀ ಮೈಗೆ ಹೊಡೆದುಕೊಂಡು ರಕ್ತಸುರಿಸುವುದು ಅವರ ಧಾರ್ಮಿಕ ಸ್ವಾತಂತ್ರ್ಯ” ಎಂದು ಮುಕ್ತವಾಗಿ ಹೇಳಿದ ನ್ಯಾಯಾಲಯ ಹಿಂದೂ ಹಬ್ಬದ ಒಂದು ವಾರ ಮುಂಚೆ ಪಟಾಕಿ ಬ್ಯಾನ್ ಮಾಡಿದ್ರೆ ಅದರಲ್ಲಿ ಸೆಕ್ಯುಲರಿಸಂನ ವಾಸನೆ ಬರಲ್ಲ ಅಂತೀರಾ?

 

ಐನೂರು ವರ್ಷ ಮೊಘಲರಿಂದ “ನಿಮ್ಮ ಧರ್ಮ ಸರಿಯಿಲ್ಲ, ನೀವು ಮೂರ್ತಿಪೂಜಕರು, ನಿಮ್ಮ ಆಚರಣೆಗಳು ಸರಿಯಿಲ್ಲ” ಎಂದು ಹೇಳಿಸಿಕೊಂಡು ಅವರಿಂದ ನಮ್ಮ ದೇವಸ್ಥಾನಗಳನ್ನೂ, ನಮ್ಮ ದೇವರುಗಳನ್ನೂ, ನಮ್ಮ ನಂಬಿಕೆಗಳನ್ನೂ ವಿರೂಪಗೊಳಿಸಿಕೊಂಡು, ಈಗ ಅವರನ್ನೇ ಪೂಜಿಸುವ ತಲೆಮಾರಿನ ಚಿಂತಕರ ಮೊಘಲರ ಕನಸನ್ನು ನನಸು ಮಾಡುವ ಪ್ರಯತ್ನಗಳನ್ನು ಸೆಕ್ಯುಲರಿಸಂನ ಹೆಸರಲ್ಲಿ ಸಹಿಸಿಕೊಳ್ಳುವ ಮೂರ್ಖತನ ಈ ನೆಲವಷ್ಟೇ ಮಾಡಬಲ್ಲುದು. ಮೊಘಲರನಂತರ ಇನ್ನೂರೈವತ್ತು ವರ್ಷ ಬ್ರಿಟೀಷರಿಂದ “ನಿಮ್ಮ ಆಚರಣೆಗಳು ಹಾಸ್ಯಾಸ್ಪದವಾಗಿವೆ, ತಮಾಷೆಯಾಗಿವೆ, ಅನಾಗರಿಕವಾಗಿವೆ” ಎಂದು ಮೂದಲಿಸಿಕೊಂಡು, ಅವರು ಯೂರೋಪಿಯನ್ ಕನ್ನಡಕದ ಮೂಲಕ ನೋಡಿ ಬರೆದ  ನಮ್ಮ ಸಂಸ್ಕೃತಿಯ ಟಿಪ್ಪಣಿಗಳನ್ನು ಓದಿಕೊಂಡುಬೆಳೆದ ಇಂದಿನ ಜನಾಂಗದವರಿಗೆ ದೇವರು ಮತ್ತು ಗಾಡ್ ಎಂಬುದರ ವ್ಯತ್ಯಾಸ ಗೊತ್ತಿಲ್ಲ. ಮೋಕ್ಷವೆಂದರೆ ಸಾಲ್ವೇಷನ್ ಎಂಬ ಕಲೋನಿಯಲ್ ಅರ್ಥ ಹೇಳ್ತಾರೆ. ದೇವರನ್ನು ಸ್ನೇಹಿತನೆಂದು ಅಪ್ಪಿಕೊಳ್ಳುವ ಬದಲು blasphemyಯ ಕೊಂಕುಗಳು ಕಾಣಲಾರಂಭಿಸಿವೆ. ಇಂತವರಿಂದ ನಮ್ಮ ಆಚರಣೆಗಳ ಬಗ್ಗೆ ಪಾಠ ಹೇಳಿಸಿಕೊಳ್ಳುವ ಕರ್ಮ ನಮಗೆ! ಇದನ್ನು ಪ್ರತಿಭಟಿಸಲು ನಿಂತಾಗ ಪರಿಸರ ನಾಶದ ಗುರಾಣಿ!! ಅದೂ ಹಿಂದೂಗಳಿಂದಲೇ!!!

 

ಈ ನಿಷೇಧ ಮತ್ತದನ್ನು ಪ್ರಶ್ನಿಸಿದವರನ್ನು ಮೂದಲಿಸುವುದು ಒಂದು social bullying ಅಷ್ಟೇ. ಈ ಬುಲ್ಲಿಯಿಂಗ್ ವಿರುದ್ಧ ನಾಳೆ ಯಾರಾದರೂ ಸೆಟೆದು ನಿಂತದ್ದನ್ನು ಪ್ರಶ್ನಿಸುವ ಅಥವಾ ಆಡಿಕೊಳ್ಳುವ ಯಾರಿಗೂ ಸಹ, ನಾಳೆ ಅವರ ಮಕ್ಕಳನ್ನು ಶಾಲೆಯಲ್ಲಿ ಇನ್ನೊಬ್ಬ ಬಲಿಷ್ಟ ಮಗುವೊಂದು ವಿನಾಕಾರಣ ಬೆದರಿಸಿದರೆ ಅಥವಾ ಆಟಿಕೆ ಕಸಿದುಕೊಂಡರೆ, ಅದರ ವಿರುದ್ಧ ದೂರುಕೊಡುವ ನೈತಿಕಹಕ್ಕಿರುವುದಿಲ್ಲ. ಸರ್ಕಾರ ನಿಷ್ಪಕ್ಷಪಾತವಾಗಿರಬೇಕೇ ಹೊರತು ಸೆಕ್ಯುಲರ್ ಆಗೋ ಅಗತ್ಯವಿಲ್ಲ. ಧರ್ಮನಿರಪೇಕ್ಷತೆಗೆ ನನ್ನ ಬೆಂಬಲವಿದೆ. ಆದರೆ ಜೊಳ್ಳು ಸೆಕ್ಯುಲರಿಸಂಗೆ ಅಲ್ಲ.

0 comments on ““ಹಿಂದೂ, ಹಬ್ಬ, ಹೊಗೆ, ಹಗೆ, ಹಾಳುಮೂಳು ಜ್ಞಾನ”

Leave a Reply

Your email address will not be published. Required fields are marked *