Monday, 27 May, 2024

“ರೆಜೆಮೆಂಟುಗಳ ರಣಕಹಳೆಗಳು – ಭಾರತದ ಸಾಂಸ್ಕೃತಿಕ ಪ್ರತಿಫಲನ”

Share post

ಸೈನ್ಯ ಎಂಬುದೊಂದು ದೇಶದ ಹೆಮ್ಮೆ. ನಾವಿರುವ ಜಗತ್ತು ದೇಶವೊಂದರ ಶಕ್ತಿಯನ್ನು ಅದರ ಸೈನ್ಯದ ಗಾತ್ರ, ಶಸ್ತ್ರಗಳು, ಸೈನ್ಯದ ಶಿಸ್ತು, ಯುದ್ಧಗಳಲ್ಲಿ ಅದು ತೋರಿದ ಚಾಕಚಕ್ಯತೆ ಅಥವಾ ಸಾಹಸದ ಮೇಲೆ ಅಳೆಯುತ್ತದೆ. ಭಾರತೀಯ ಸೈನ್ಯ ಜಗತ್ತಿನ ಅತೀದೊಡ್ಡ ಸ್ವಯಂಪ್ರೇರಿತ ಸೈನ್ಯ. ಅಂದರೆ ದೇಶದಲ್ಲಿ ಯಾವ ರೀತಿಯ ಕಡ್ಡಾಯ ಸೇನಾಸೇವೆಯ ಸಾಂವಿಧಾನಿಕ ಅಗತ್ಯತೆ ಇಲ್ಲದೆಯೂ ಸಹ ತಾವಾಗಿಯೇ ಸ್ವ-ಇಚ್ಚೆಯಿಂದ ಸೇವೆಗೆ ಸೇರಿದ ಸೈನಿಕರ ಅತೀದೊಡ್ಡ ಸಮೂಹ. ವಿಶ್ವಸಂಸ್ಥೆಯ ಶಾಂತಿಕಾರ್ಯಾಚರಣೆಗಳಿಗೆ ಭಾರತೀಯ ಸೈನ್ಯದ ಕೊಡುಗೆ ಅಪಾರ. ಇವತ್ತಿಗೂ ವಿಶ್ವಸಂಸ್ಥೆಯ ಶಾಂತಿಪಡೆಗಳಿಗೆ ಅತೀಹೆಚ್ಚು ಸೈನಿಕರನ್ನು ಪೂರೈಸಿದ ದೇಶಗಳ ಪೈಕಿ ಭಾರತದ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಇಂದಿಗೂ ದೇಶದ ಸರ್ಕಾರವನ್ನು ಕಿತ್ತೆಯಸದ, ಮತ್ತದಕ್ಕೆ ಪ್ರಯತ್ನಿಸದ ಜಗತ್ತಿನ ಕೆಲವೇ ಕೆಲವು ಸೈನ್ಯಗಳಲ್ಲಿ, ಭಾರತದ ಸೈನ್ಯವೂ ಒಂದು. ಇಷ್ಟೇ ಅಲ್ಲದೇ, ಭಾರತೀಯ ಸೈನ್ಯ ಇಂದಿನವರೆಗೆ ಯಾವಾತ್ತೂ ತಾನಾಗಿಯೇ ಮೊದಲು ಎಲ್ಲೂ ಸಹ ಆಕ್ರಮಣ ಮಾಡಿಲ್ಲ. ಇದು ನಮ್ಮ ಸೈನ್ಯದ ಹೆಗ್ಗಳಿಕೆ.

 

ಪುರಾತನ ಕಾಲದಿಂದಲೂ, ಸೈನ್ಯದಲ್ಲಿ ಅವುಗಳ ಕೆಲಸಗಳಿಗನುಗುಣವಾಗಿ ಬೇರೆಬೇರೆ ತುಕಡಿಗಳನ್ನು ರಚಿಸುವ ವಾಡಿಕೆ ಇದ್ದದ್ದೇ. ರಾಮಾಯಣ-ಮಹಾಭಾರತಗಳಲ್ಲೂ ನಿಮಗೆ ಪದಾತಿದಳ, ಅಶ್ವದಳ, ಗಜಸೈನ್ಯ ಮುಂತಾದವುಗಳ ಬಗ್ಗೆ ಓದಿ ತಿಳಿದಿರಬಹುದು. ಪ್ರಶ್ಯಾದ (ಇಂದಿನ ಜರ್ಮನಿ ಮತ್ತು ಪೋಲೆಂಡ್ ಪ್ರಾಂತ್ಯದಲ್ಲಿದ್ದ, ಪುರಾತನ ರಾಜ್ಯಗಳಲ್ಲೊಂದು) ರಾಜ ಮೊದಲನೇ ವಿಲಿಯಂ ಪ್ರೆಡರಿಕ್ ಏಳುಅಡಿಗಿಂತಾ ಎತ್ತರವಿದ್ದವರದ್ದೇ ಒಂದು ತುಕಡಿಯಿಟ್ಟುಕೊಂಡಿದ್ದನಂತೆ. ಇವರು ಸೈನ್ಯದ ಮುಂಚೂಣಿಯಲ್ಲಿ ನಿಂತು “ಇಡೀ ಸೈನ್ಯವೇ ಇಂತಹಾ ದೈತ್ಯರಿಂದಾ ತುಂಬಿದೆ” ಅಂತಾ ಅನ್ನಿಸುವಂತೆ ಶತ್ರುಗಳನ್ನು ಹೆದರಿಸುತ್ತಿದ್ದರಂತೆ. ಪುರಾತನ ಚೀನಾ, ಮಂಗೋಲಿಯಾದ ಸೈನ್ಯಗಳಲ್ಲಿ ಘೇಂಡಾಮೃಗಗಳ ತುಕಡಿಗಳೂ ಇದ್ದವು. ಪರ್ಶಿಯಾದ ಆಕ್ರಮಣದಿಂದ ರೋಸಿಹೋಗಿದ್ದ ರೋಮನ್ನರು ಕಾಡುಹಂದಿಗಳದ್ದೇ ಒಂದು ತುಕಡಿ ಬೆಳೆಸುತ್ತಿದ್ದರಂತೆ. ಇಲ್ಲ ಇಲ್ಲ ಮುಸ್ಲಿಮರ ಹಂದಿದ್ವೇಷಕ್ಕೂ ಇದಕ್ಕೂ ಸಂಬಂಧವಿಲ್ಲ. ರೋಮನ್ನರ ಈ ಕಥೆ ಕ್ರಿಸ್ತಪೂರ್ವ 2ನೇ ಶತಮಾನದದ್ದು. ಆಗಿನ್ನೂ ಮೆಕ್ಕಾದಲ್ಲಿ ಮರುಭೂಮಿಯಷ್ಟೇ ಇದ್ದದ್ದು. ಕ್ರಿಸ್ತಪೂರ್ವದ ಪರ್ಶಿಯಾ ಜೋರಾಷ್ಟ್ರಿಯನ್ನರಿಗೆ ಸೇರಿತ್ತು. ರೋಮನ್ನರ ಈ ರಣನೀತಿಗೆ ಕಾರಣವೇನೆಂದರೆ, ಪರ್ಶಿಯನ್ ಸೈನ್ಯದ ಮುಂದಿನ ತುಕಡಿ ಯಾವಾಗಲೂ ಗಜಪಡೆಯದ್ದಾಗಿತ್ತು. ರೋಮನ್ನರು ಅದನ್ನು ದಾಟಿ ಎರಡನೇ ತುಕಡಿಯೆಡೆಗೆ ತಲುಪುವಷ್ಟರಲ್ಲಿ, ಆನೆಗಳ ಕಾಲು ಸೊಂಡಿಲಿಗೆ ಸಿಕ್ಕಿ ಅವರ ಅರ್ಧ ಸೈನ್ಯ ಧೂಳೀಪಟವಾಗುತ್ತಿತ್ತು. ಇದನ್ನು ತಡೆಯಲು ಮತ್ತು ಗಜಗೋಡೆಯನ್ನು ಒಡೆಯಲು ರೋಮನ್ನರು ಹಂದಿಗಳ ಪಡೆಯೊಂದನ್ನು ಕಟ್ಟಿದರು. ಯುದ್ಧದ ರಣಘೋಷ ಪ್ರಾರಂಭವಾದಕೂಡಲೇ, ಮೈಗೆ ಟಾರ್ ಅಥವಾ ಕೀಲೆಣ್ಣೆ ಬಳಿಸಿಕೊಂಡ ಈ ಹಂದಿಗಳ ಹಿಂಡನ್ನು ಶತ್ರುಗಳೆಡೆಗೆ ಛೂ ಬಿಡುತ್ತಿದ್ದರು. ಅವು ಪರ್ಶಿಯನ್ ಸೈನ್ಯದ ಹತ್ತಿರಹತ್ತಿರ ತಲುಪಿದ ಕೂಡಲೇ ರೋಮನ್ ಬಿಲ್ಗಾರರ ಪಡೆ, ತಮ್ಮ ಹಂದಿಗಳೆಡೆಗೆ (ಮತ್ತು ಪರ್ಶಿಯನ್ ಪಡೆಯೆಡೆಗೂ ಕೂಡ) ಬೆಂಕಿಹಚ್ಚಿದ ಬಾಣಗಳ ಮಳೆಗರೆಯುತ್ತಿತ್ತು. ಮೈಗೆ ಬೆಂಕಿಬಿದ್ದ ಕಾಡುಹಂದಿಗಳು ಎರ್ರಾಬಿರ್ರಿ ಓಡಾಡಿ ಎದುರಿಗೆ ಬಂದದ್ದನ್ನೆಲ್ಲಾ ಕೋರೆಗಳಿಂದ ತಿವಿದು ತುಳಿದು ಸಾಯಿಸುತ್ತಿದ್ದವು. ಕಾಡುಹಂದಿಗಳ ಕಸುವು ಎಷ್ಟಿರುತ್ತೆ ಅಂತಾ ಅವುಗಳ ಶಿಕಾರಿಮಾಡಿದವರಿಗೆ ಮಾತ್ರ ತಿಳಿಯಲು ಸಾಧ್ಯ. ಇಬ್ಬರು-ಮೂವರು ಮನುಷ್ಯರೊಂದಿಗೆ ಒಂದೇ ಬಾರಿಗೆ ಕಾದಾಡಿ ನೀವು ಗೆಲ್ಲಬಹುದು. ಆದರೆ ಒಂದು ಕಾಡುಹಂದಿ (ಅದರಲ್ಲೂ ಗಾಯಕೊಂಡ ಕಾಡುಹಂದಿ) ಕನಿಷ್ಟ ಐದುಜನರಿಗೆ ಸಮ. ಜೊತೆಗೆ ಈ ಮೈಗೆ ಬೆಂಕಿಬಿದ್ದ ಹಂದಿಗಳ ಚೀರಾಟ ಕೇಳಿಯೇ ಪರ್ಶಿಯನ್ನರ ಎಷ್ಟೋ ಆನೆಗಳು ದಿಕ್ಕಾಪಾಲಾಗುತ್ತಿದ್ದವು, ಹಾಗೂ ಪರ್ಶಿಯನ್ನರನ್ನೇ ತುಳಿದು ಕೊಲ್ಲುತ್ತಿದ್ದವು. ಹಂದಿಗಳು ಹೇಗೆ ಕೂಗುತ್ತವೆ ಅಂತಾ ಗೊತ್ತಿರುವವರಿಗೆ ಇದು ಅರ್ಥವಾಗಬಹುದು. ಈ ಹಂದಿಗಳನ್ನು ಹಿಡಿದು ಕೊಲ್ಲುವಷ್ಟರಲ್ಲಿ ಪರ್ಶಿಯನ್ನರ ಕಥೆ, ನಾಲ್ಕುನೂರು ಎಪಿಸೋಡಿನ ಕನ್ನಡಧಾರಾವಾಹಿ ನೋಡಿದ ವೀಕ್ಷಕನಂತೆ ಹೈರಾಣಾಗುತ್ತಿತ್ತು. ಹೀಗೆ ರೋಮನ್ನರು ತಮ್ಮ ಒಬ್ಬನೇ ಒಬ್ಬ ಸೈನಿಕನನ್ನೂ ಕಳುಹಿಸದೇ ಪರ್ಶಿಯನ್ನರ ಗಜಪಡೆ, ಪದಾದಿದಳ, ಅಶ್ವಾದಳಗಳನ್ನೂ ಪುಡಿಯೆಬ್ಬಿಸುತ್ತಿದ್ದರು.

 

ಹೀಗೆ ಸೈನ್ಯದಲ್ಲಿನ ಬೇರೆಬೇರೆ ದಳಗಳಿಗೆ ಅದರದ್ದೇ ಆದ ಪ್ರಾಮುಖ್ಯತೆಯೂ ಅದರ ಹಿಂದೆ ತಂತಗಳೂ ಇವೆ. ಸೈನ್ಯಗಳಲ್ಲಿ ಸಾಂಸ್ಕೃತಿಕ ಪ್ರಾಮುಖ್ಯತೆ, ಯುದ್ದತಂತ್ರಗಳಿಗನುಗುಣನಾಗಿ ರೆಜಿಮೆಂಟ್’ಗಳನ್ನು ಸೃಷ್ಟಿಸಿದ್ದು ಆಧುನಿಕ ಜಗತ್ತಿಗೆ ಯೂರೋಪಿನ ದೊಡ್ಡ ಕೊಡುಗೆಗಳಲ್ಲೊಂದು. ವಸಾಹತುಶಾಹಿಗಳಾದ ಬ್ರಿಟೀಷರು, ಪ್ರೆಂಚರು, ಪೋರ್ಚುಗಿಸರು, ಡಚ್ಚರು ಹೋದಲ್ಲೆಲ್ಲಾ ಇದನ್ನು ಆಯಾ ದೇಶಗಳಿಗೆ ಬಳುವಳಿಯಾಗಿ ಕೊಟ್ಟರು. ಇವಕ್ಕೆಲ್ಲಾ ಮೂಲವಾಗಿದ್ದು ಪುರಾತನ ಮತ್ತು ಆಧುನಿಕ ಗ್ರೀಕೋ-ರೋಮನ್ ಸೈನ್ಯದ ರಚನೆ. ಗ್ರೀಕರು ಮತ್ತು ರೋಮನ್ನರು ಆಗಿನಕಾಲದಲ್ಲಿ ಬೇರೆಬೇರೆ ಪ್ರಾಂತ್ಯಗಳಿಂದ ಬಂದ ಸೇನೆ ಸೇರಲು ಬಂದವರನ್ನು ಅವರ ಪ್ರಾಂತ್ಯಗಳಿಗನುಗುಣವಾಗಿ ಲೀಜನ್ (ದಳ)ಗಳಿಗೆ ನೇಮಿಸುತ್ತಿದ್ದರು. ಒಂದೇ ಪ್ರಾಂತ್ಯದ ಸಹಸೈನಿಕರು ಒಟ್ಟಿಗೆ ಇರುವುದರಿಂದ, ಅವರಿಗೆ ಮನೆಯಿಂದ ದೂರವಿದ್ದಂತೆ ಅನಿಸುತ್ತಿರಲಿಲ್ಲ. ಆ ದಳದ ಎಲ್ಲಾ ಸೈನಿಕರು ಒಂದೇ ಭಾಷೆ ಮಾತನಾಡುತ್ತಿದ್ದರಿಂದ, ಅವರ ನಡುವಿನ ಸಂವಹನ ಸುಲಭವಾಗುತ್ತಿತ್ತು. ಅದೂ ಅಲ್ಲದೇ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಅವರ ಕೌಶಲ್ಯಗಳೂ ಒಬ್ಬರಿಗೊಬ್ಬರಿಗೆ ಹೊಂದಾಣಿಕೆಯಿದ್ದಿದ್ದರಿಂದ, ಯುದ್ಧತಂತ್ರ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು. ಉದಾಹರಣೆಗೆ: ಮ್ಯಾಸಿಡೋನಿಯನ್ನರು ಎತ್ತರದ ಪ್ರದೇಶಗಳಿಂದ ಬಂದಿದ್ದರಿಂದ, ಹೆಚ್ಚು ಓಡಬಲ್ಲರಾಗಿದ್ದರು. ಅವರ ಊಟದಲ್ಲಿ ಕೊಬ್ಬಿನಂಶ ಹೆಚ್ಚಿರುತ್ತಿತ್ತು. ಸ್ಪಾರ್ಟನ್ನರು ಚಳಿ, ಮಳೆ, ಗಾಳಿ, ಸಮುದ್ರದ ನೆರೆ ಇವುಗಳ ನಡುವೆ ಬದುಕುತ್ತಿದ್ದರಿಂದ ಹೆಚ್ಚು ಧೈರ್ಯಶಾಲಿಗಳೂ, ಬಹುಕುಶಲರೂ ಆಗಿರುತ್ತಿದ್ದರು. ಅವರ ಊಟದಲ್ಲಿ ಗಂಜಿಯಂತಾ ಪದಾರ್ಥಗಳು ಹೆಚ್ಚಿರುತ್ತಿದ್ದವು. ಅವರನ್ನು ಅವರದೇ ಜನರ ದಳಗಳಿಗೆ ಸೇರಿಸಿದಾಗ ಅವರನ್ನು ನಿರ್ವಹಿಸುವುದು ಸುಲಭದ ಕೆಲಸವಾಗಿತ್ತು. ವಸಾಹತುಶಾಹಿಗಳು ಇದನ್ನು ಪ್ರಪಂಚದಾದ್ಯಂತ ಹರಡಿದ್ದಲ್ಲದೇ, ಈ ರೆಜಿಮೆಂಟು, ದಳ, ತುಕಡಿಗಳಿಗೆ ಅವುಗಳ ಹಿನ್ನೆಲೆ, ಸಾಂಸ್ಕೃತಿಕ ಮಹತ್ವಕ್ಕೆ ತಕ್ಕಂತೆ ಅವುಗಳಿಗೆ ಹೊಂದುವ ಸಮವಸ್ತ್ರಗಳನ್ನೂ, ಅವಕ್ಕೊಂದು ಲಾಂಛನ (Insignia), ಧ್ಯೇಯವಾಕ್ಯ (Motto) ಮತ್ತು ಯುದ್ಧಘೋಷಣೆ (Warcry)ಗಳನ್ನೂ ಕೊಟ್ಟರು. ನೀವೆಂದಾದರೂ ನಮ್ಮ ಭಾರತೀಯ ಸೈನ್ಯದ ತುಕಡಿಗಳ ಧ್ಯೇಯವಾಕ್ಯ ಮತ್ತು ಯುದ್ಧೋದ್ಘಾರಗಳನ್ನು ಓದುವ ಪ್ರಯತ್ನ ಮಾಡಿದ್ದೀರಾ? ನಿಜಕ್ಕೂ ಅದೊಂದು ವಿಶಿಷ್ಟ ಅನುಭವ.

 

ಭಾರತೀಯ ಸೈನ್ಯದ ಹಲವಾರು ತುಕಡಿಗಳ ಇತಿಹಾಸ 1750ರಷ್ಟು ಹಿಂದಿನವರೆಗೂ ಇದೆ. 1758ರ ಬ್ರಿಟೀಷ್ ಇಂಡಿಯಾದ ಕಾಲದಲ್ಲಿ ಸ್ಥಾಪಿತಗೊಂಡ ಭಾರತೀಯ ಸೈನ್ಯದ ಅತ್ಯಂತ ಪುರಾತನ ತುಕಡಿಯಾದ ಮದ್ರಾಸ್ ರೆಜಿಮೆಟಿನಿಂದಾ ಹಿಡಿದು 2011ರಲ್ಲಿ ಸ್ಥಾಪನೆಗೊಂಡ ಹೊಚ್ಚಹೊಸ “ಲಯನ್ ಹಾರ್ಟ್ಸ್”ವರೆಗೂ ಪ್ರತಿಯೊಂದು ರೆಜಿಮೆಂಟಿಗೂ ತನ್ನದೇ ಆದ ವಿಶಿಷ್ಟ ಲಾಂಛನ, ಸಮವಸ್ತ್ರ, ಯುದ್ಧಘೋಷಣೆಗಳಿವೆ. ಹೆಚ್ಚಿನ ರೆಜಿಮೆಂಟುಗಳ ಧ್ಯೇಯ ಮತ್ತು ರಣಕಹಳೆಗಳನ್ನು ಸ್ವಾತಂತ್ರ್ಯಾನಂತರ ಕೊಡಲಾಗಿದೆ, ಮತ್ತೆ ಕೆಲವುದರದ್ದು ಸಂಸ್ಕೃತ ಭಾಷೆಯ ಸಾಲುಗಳಾಗಿ ಬದಲಾಗಿವೆ. ಕೆಲ ರೆಜಿಮೆಂಟುಗಳ ಲಾಂಛನವನ್ನು ಬ್ರಿಟೀಷರೇ ಡಿಸೈನ್ ಮಾಡಿದ್ದರಿಂದ, ಅದನ್ನು ಬದಲಾಯಿಸುವುದು ಸರಿಯಲ್ಲವೆಂದು ಹಾಗೆಯೇ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ ಸಮುದ್ರಕ್ಕೆ ಸಂಬಂಧಿಸಿದ ಚಿಹ್ನೆಯಿರುವ ಜಗತ್ತಿನ ಏಕೈಕ ಭೂಸೇನಾ ರೆಜಿಮೆಂಟ್, ನಮ್ಮ ‘ಪಂಜಾಬ್ ರೆಜಿಮೆಂಟ್’. ಬೇರೆಬೇರೆ ದೇಶಗಳಲ್ಲಿ ಸೇವೆ ಸಲ್ಲಿಸಲು ಆ ರೆಜಿಮೆಂಟ್ ಯಾವುದೇ ಹಿಂಜರಿಕೆಯಿಲ್ಲದೇ ತಯಾರಿದ್ದದ್ದನ್ನು ಪ್ರಶಂಸಿಸಿ 1824ರಲ್ಲಿ ಬ್ರಿಟೀಷರು ಈ ರೆಜಿಮೆಂಟಿಗೆ ಹುಟ್ಟುಗೋಲುಗಳಿರುವ ಹಾಯಿದೋಣಿಯ ಚಿಹ್ನೆ ಕೊಟ್ಟಿದ್ದಾರೆ. ಭೂಸೇನೆಗೂ, ಸಮುದ್ರಕ್ಕೂ ಸಂಬಂಧವಿಲ್ಲದ್ದರೂ ಆ ಚಿಹ್ನೆಯನ್ನು ಭಾರತೀಯ ಸೈನ ಬದಲಾಯಿಸದೇ ಅದೇ ಪರಂಪರೆಯನ್ನು ಮುಂದುವರಿಸಿದೆ.

 

ಈ ನೆಲದ ಧರ್ಮ, ದೇವಸ್ಮರಣೆ, ಸಂಸ್ಕೃತ, ಕೆಚ್ಚು, ಆಶಯಗಳು ಸೈನ್ಯದ ಬೇರೆಬೇರೆ ದಳದ ಧ್ಯೇಯ ಮತ್ತು ಯುದ್ಧಘೋಷಣೆಗಳಲ್ಲಿ ತುಂಬಿತುಳುಕುತ್ತಿವೆ. ನಮ್ಮ ಕಮ್ಯೂನಿಸ್ಟರಿಗೆ ದೇಶದ ಸೈನ್ಯ ಕಂಡರೆ ಯಾಕಷ್ಟು ಉರಿ ಅಂತಾ ನಿಮಗೀಗ ಅರ್ಥವಾಗಬಹುದು. ಹೆಚ್ಚಿನ ರೆಜಿಮೆಂಟುಗಳ ರಣಕಹಳೆಗಳು ಅವುಗಳ ಸ್ಥಾಪನಾಪ್ರಾಂತ್ಯದ ಧಾರ್ಮಿಕ ನಂಬಿಕೆಗಳೊಂದಿಗೆ ಗಾಡವಾಗಿ ತಳುಕುಹಾಕಿಕೊಂಡಿವೆ ಹಾಗೂ ಆಯಾ ದೇವರನ್ನು ನೆನಪಿಸಿಕೊಳ್ಳುತ್ತವೆ. ಪಂಜಾಬ್ ಮತ್ತು ಸಿಖ್ ರೆಜಿಮೆಂಟುಗಳು ‘ಜೋ ಬೋಲೇ ಸೋನಿಹಾಲ್, ಸತ್ ಶ್ರೀ ಅಕಾಲ್’ ಅಥವಾ ‘ವಾಹೇ ಗುರೂಜೀ ದಾ ಖಾಲ್ಸಾ, ವಾಹೇ ಗುರುಜೀ ದೀ ಫತೇ’ ಎನ್ನುತ್ತಾ ದಾಳಿ ಪ್ರಾರಂಭಿಸಿದರೆ, ಕುಮಾವೂ ರೆಜಿಮೆಂಟ್ ‘ಕಾಲಿಕಾ ಮಾತಾ ಕೀ ಜೈ’ ಎನ್ನುತ್ತಾ ರಣಕಹಳೆಯೊಂದಿಗೆ ಪ್ರಹಾರವನ್ನು ಆರಂಭಿಸುತ್ತದೆ. ಘೋರ್ಖಾಗಳ ಎಲ್ಲಾ ಏಳೂ ರೆಜಿಮೆಂಟುಗಳೂ ಅವರ ನಂಬುಗೆಯ ಕಾಳಿಮಾತೆಗೆ ನಮಿಸುತ್ತಾ ‘ಜೈ ಮಾ ಕಾಲೀ, ಆಯೋ ಘೋರ್ಖಾಲೀ’ ಎಂದು ಘರ್ಜಿಸಿದರೆ, ಡೋಗ್ರಾ ರೆಜಿಮೆಂಟ್ ‘ಜ್ವಾಲಾ ಮಾತಾ ಕೀ ಜೈ’ ಎಂತಲೂ, ಗಡ್ವಾಲ್ ರೈಫಲ್ಸ್ ‘ಬದರೀ ವಿಶಾಲ್ ಲಾಲ್ ಕೀ ಜೈ’ ಎಂತಲೂ, ಜಮ್ಮು ಅಂಡ್ ಕಾಶ್ಮೀರ್ ರೈಫಲ್ಸ್ ‘ದುರ್ಗಾ ಮಾತಾ ಕೀ ಜೈ’ ಎಂತಲೂ, ನಾಗಾ ರೆಜಿಮೆಂಟ್ ‘ಜೈ ದುರ್ಗಾ ನಾಗಾ’ ಎಂತಲೂ ಜಾಟ್ ರೆಜಿಮೆಂಟ್’ಜಟ್ ಬಲವಾನ್…ಜೈ ಭಗವಾನ್’ ಎಂತಲೂ, ರಜಪೂತ್ ರೆಜಿಮೆಂಟ್ ‘ಬೋಲೋ ಬಜರಂಗ್ ಬಲೀ ಕೀ….ಜೈ’ ಎಂತಲೂ, ರಜ್ಪುತಾನ ರೈಫಲ್ಸ್ ‘ರಾಜಾ ರಾಮಚಂದ್ರ ಕೀ….ಜೈ’ ಎಂತಲೂ, ಬಿಹಾರ್ ರೆಜಿಮೆಂಟ್ ‘ಜೈ ಬಜರಂಗ್ ಬಲೀ’ ಎನ್ನುತ್ತಲೂ ಶತ್ರುಗಳಲ್ಲಿ ನಡುಕ ಹುಟ್ಟಿಸುತ್ತವೆ.

ಧಾವಾ ಹೇಳುತ್ತಿರುವ ಭಾರತೀಯ ಸೈನಿಕ

ದೇವರನಾಮ ಮಾತ್ರವಲ್ಲದೇ ಆ ರೆಜಿಮೆಂಟುಗಳು ಯಾವ ಪ್ರಾಂತ್ಯಕ್ಕೆ ಸೇರಿದ್ದೋ, ಅಲ್ಲಿನ ವಿಶೇಷತೆಯನ್ನೂ ಸೇರಿಸಿರುವ ರಣಕಹಳೆಗಳೂ ಇವೆ. ಮರಾಠಾ ಲೈಟ್ ಇನ್ಫ್ಯಾಂಟ್ರಿ ‘ಬೋಲೋ ಶ್ರೀ ಛತ್ರಪತೀ ಶಿವಾಜಿ ಮಹಾರಾಜ್ ಕೀ….ಜೈ’ ಎನ್ನುತ್ತಾ ಮುಗಿಬಿದ್ದರೆ, ಪ್ರೀತಿಯಿಂದ ಗೂಂಡಾಗಳು ಎಂದೇ ಕರೆಸಿಕೊಳ್ಳುವ ಸೈನ್ಯದ ಅತ್ಯಂತ ಹಳೆಯ ರೆಜಿಮೆಂಟ್ ಆಗಿರುವ ಮದ್ರಾಸ್ ರೆಜಿಮೆಂಟ್ ‘ವೀರ ಮದ್ರಾಸಿ, ಅಡಿ ಕೊಲ್ಲು ಅಡಿ ಕೊಲ್ಲು’ ಎನ್ನುತ್ತಲೂ, ಘೇಂಡಾಮೃಗಗಳಿಗೆ ಹೆಸರಾಗಿರುವ ಅಸ್ಸಾಮಿನ ಅಸ್ಸಾಮ್ ರೆಜಿಮೆಂಟ್ ‘ರೈನ್ಹೋ…ಚಾರ್ಜ್’ ಎಂಬ ಯುದ್ಧಘೋಷಣೆಯೊಂದಿಗೆ ಆಕ್ರಮಿಸುತ್ತವೆ. ಉಳಿದವಕ್ಕೆ ಹೋಲಿಸಿದರೆ ಹೊಸದಾಗಿ ಪ್ರಾರಂಭವಾದ ರೆಜಿಮೆಂಟುಗಳಿಗೆ ಉದಾಹರಣೆಗೆ 1979ರಲ್ಲಿ ಪ್ರಾರಂಭವಾದ ಮೆಕಾನೈಸ್ಡ್ ಇನ್ಫ್ಯಾಂಟ್ರಿ ರೆಜಿಮೆಂಟಿಗೆ ‘ಬೋಲೋ ಭಾರತ್ ಮಾತಾ ಕೀ ಜೈ’, ಜಮ್ಮು ಅಂಡ್ ಕಾಶ್ಮೀರ್ ಲೈಟ್ ಇನ್ಫ್ಯಾಂಟ್ರಿಗೆ ‘ಭಾರತ್ ಮಾತಾ ಕೀ ಜೈ’, ಮಹಾರ್ ರೆಜಿಮೆಂಟಿಗೆ ‘ಬೋಲೋ ಹಿಂದೂಸ್ಥಾನ್ ಕೀ ಜೈ’ ಎಂಬ ಸಾರ್ವತ್ರಿಕ ಘೋಷಣೆಗಳನ್ನು ಕೊಡಲಾಗಿದೆ.

 

ಯುದ್ಧಘೋಷಗಳದ್ದು ಈ ವೈವಿಧ್ಯವಾದರೆ ಈ ರೆಜಿಮೆಂಟುಗಳ ಧ್ಯೇಯವಾಕ್ಯಗಳದ್ದು ಇನ್ನೊಂದೇ ವೈಭವ. ಅವುಗಳನ್ನು ಕೇಳುವುದೂ, ರೆಜಿಮೆಂಟುಗಳ ಹಿನ್ನೆಲೆಯೊಂದಿಗೆ ಅವನ್ನು ಅರ್ಥೈಸಿಕೊಳ್ಳುವುದೂ ಅದೊಂದು ಮೈನವಿರೇಳಿಸುವ ಅನುಭೂತಿ. ಅವುಗಳ ಬಗ್ಗೆ ಅಂತರ್ಜಾಲದಲ್ಲೊಮ್ಮೆ ಹುಡುಕಿ ಓದಲು ಪ್ರಯತ್ನಿಸಿ.

 

ನಿಮಗೆ ಗೊತ್ತೇ ನಮ್ಮ ಮಿಸೈಲ್ ರೆಜಿಮೆಂಟಿನ ಯುದ್ಧಘೋಷ ‘ಸ್ವಾಮಿಯೇ ಶರಣಂ ಅಯ್ಯಪ್ಪ’. ಸೂಪರ್-ಸಾನಿಕ್ ವೇಗದಲ್ಲಿ ಬ್ರಹ್ಮೋಸ್ ಕ್ಷಿಪಣಿ ಶತ್ರುವಿನೆಡೆಗೆ ಧಾವಿಸುತ್ತಿದ್ದರೆ, ಆತ ನಿರುತ್ತರನಾಗಿ ಅಯ್ಯಪ್ಪನಿಗೇ ಶರಣಾಗಬೇಕಾದ್ದರಿಂದ ಈ ಘೋಷಣೆ ಸರಿಯಾಗಿಯೇ ಇದೆ ಬಿಡಿ!

One comment on ““ರೆಜೆಮೆಂಟುಗಳ ರಣಕಹಳೆಗಳು – ಭಾರತದ ಸಾಂಸ್ಕೃತಿಕ ಪ್ರತಿಫಲನ”

Smita

🙏🙏👌

Reply

Leave a Reply

Your email address will not be published. Required fields are marked *