Wednesday, 17 April, 2024

“ಸಾವಿನ ಮನೆಯ ಬಾಗಿಲು ತಟ್ಟಿ, ಹೊಸಿಲು ತೊಳೆದವರು”

Share post

ಸಾವನ್ನು ಎದುರಿಸುವುದು ಸುಲಭವಲ್ಲ. ನಮಗೆ ಸಾವನ್ನು ಎದುರಿಸುವುದು ಎಂದಕ್ಷಣ ಸೈನಿಕನ ನೆನಪಾಗುತ್ತದೆ. ಸೈನ್ಯಕ್ಕೆ ಸೇರುವವರೆಲ್ಲರೂ ಯುದ್ಧಕ್ಕೆ ಹೋಗದಿರಬಹುದು, ಯುದ್ಧಕ್ಕೆ ಹೋದವರೆಲ್ಲರೂ ಸಾಯದಿರಬಹುದು. ಆದರೆ ಸೈನ್ಯದಲ್ಲಿ ಇದ್ದಮೇಲೆ ಸಾವು ಎನ್ನುವುದು ಅನೂಹ್ಯವೇ. ಯಾವತ್ತು ಎಲ್ಲಿಂದ ಹೇಗೆ ಬರಬಹುದೆಂಬುದನ್ನು ಯಾರು ಹೇಳಲು ಸಾಧ್ಯ ಹೇಳಿ. ಯುದ್ಧಕಾಲದಲ್ಲಿ ಮಾತ್ರವಲ್ಲ, ಪ್ರವಾಹ, ವಿಕೋಪ, ಧಂಗೆ ಅಲ್ಲದೇ ಶಾಂತಿಕಾಲದಲ್ಲೂ ಸೈನ್ಯದ ಬಳಕೆಯಾಗುವುದರಿಂದ, ಅವೂ ಕೂಡಾ ಅಪಾಯಗಳಿಂದ ಹೊರತಲ್ಲ. ಒಟ್ಟಿನಲ್ಲಿ ಸೈನ್ಯಕ್ಕೆ ಸೇರುವ ಪತ್ರಕ್ಕೆ ಸಹಿಹಾಕುವಾಗಲೇ, ಸೈನಿಕನೊಬ್ಬ ಯಮರಾಜನಿಗೆ ಇಷ್ಟಬಂದಾಗ ತನ್ನನ್ನು ತೆಗೆದುಕೊಂಡು ಹೋಗುವ ಅನುಮತಿ ಪತ್ರಕ್ಕೂ ಸಹಿಹಾಕಿಬಿಡುತ್ತಾನೆ. ಹಾಗೆ ರುಜುಹಾಕಿ, ಮನೆಯವರಿಗೆ ತಾನು ಯಾವತ್ತು ಮರಳಿಬರುತ್ತೇನೆ ಎಂದು ಹೇಳದೇ, ಮರಳಿಬರದಿರಲು ಕಾರಣವನ್ನೂ ಹೇಳದೇ ರೈಲುಹತ್ತಿ ಹೋಗುವ ಸೈನಿಕನ ಮನಸ್ಸಿನಲ್ಲಿ ಏನೇನು ಓಡುತ್ತಿರಬಹುದು ಎಂಬುದರ ಸಣ್ಣಸುಳಿವೂ ಸಾಮಾನ್ಯ ಮನುಷ್ಯರಿಗೆ ಸಿಗಲು ಸಾಧ್ಯವಿಲ್ಲ.

 

ನಮ್ಮನಿಮ್ಮಂತಹಾ ಸಾಮಾನ್ಯರೂ ಕೂಡಾ ಸಾವನ್ನು ಎದುರಿಸುತ್ತೇವೆ. ನನಗಂತೂ ಬೆಂಗಳೂರಿನಲ್ಲಿ ದ್ವಿಚಕ್ರವಾಹನ ಓಡಿಸುವಾಗಲೆಲ್ಲಾ ಅದರ ದರ್ಶನವಾಗಿದೆ ಎಂದರೆ ತಮಾಷೆಯೇನೂ ಅಲ್ಲ. ಇದು ಮಾತ್ರವಲ್ಲದೇ ಚಿಕಿತ್ಸೆಯೇ ಇಲ್ಲದ ಖಾಯಿಲೆಗೆ ತುತ್ತಾದವರೂ ಕೂಡಾ ಈ ರೀತಿಯ ಅನುಭವಕ್ಕೆ ಒಳಗಾಗುತ್ತಾರೆ. ಇನ್ನಿದಕ್ಕೆ ತಡೆಯಿಲ್ಲ, ಒಂದಲ್ಲಾ ಒಂದು ದಿನ ಸಾವು ಬಂದೇಬರುತ್ತದೆ ಎಂದು ಗೊತ್ತಾದಮೇಲೆ, ಆ ಸಾವಿಗಾಗಿ ಕೂತು ಕಾಯುವುದಿದೆಯಲ್ಲಾ ಅದರಷ್ಟು ದೊಡ್ಡಯಾತನೆ ಇನ್ನೊಂದಿರಲಿಕ್ಕಿಲ್ಲ. ಆದ್ದರಿಂದಲೇ ಕ್ಯಾನ್ಸರಿನಂತಹ ಮಾರಿಯನ್ನು ಗೆದ್ದುಬರುವವರು, ಅದರಲ್ಲೂ ಟರ್ಮಿನಲ್ ಕ್ಯಾನ್ಸರ್ ಅಂತಾ ಘೋಷಿಸಿಯಾದಮೇಲೂ ವರ್ಷಾನುಗಟ್ಟಲೇ ಬದುಕಿ ಕೊನೆಗೆ ಇಳಿವಯಸ್ಸಿನಿಂದಲೋ, ಬೇರೇನೋ ಖಾಯಿಲೆಯಿಂದಲೋ ಸಾಯುವವರಿದ್ದಾರಲ್ಲಾ ಅವರಬಗ್ಗೆ ಸಮಾಜದಲ್ಲಿ ವಿಶೇಷ ಗೌರವ.

 

ಈಗ ಇನ್ನೊಂದು ವರ್ಗದ ಬಗ್ಗೆ ಮಾತನಾಡೋಣ. ಇವರಲ್ಲಿ ಹಲವರಿಗೆ ತಾವು ಸಾವಿನ ಮನೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವೇ ಇರಲಿಲ್ಲ. ಆದರೆ ಏನೋ ಒಂದು ಅಪಾಯದಲ್ಲಿದ್ದೇವೆ ಎಂದು ಗೊತ್ತಿತ್ತು. ಇನ್ನು ಕೆಲವರಿಗೆ ಅರಿವಿತ್ತು, ಆದರೂ ಅವರು ಧೃತಿಗೆಡದೇ ಮುನ್ನುಗಿದರು. ಸಾವೋ ನೋವೋ ಖಾಯಿಲೆಯೋ ಏನೋ ಒಂದು ಬರುತ್ತದೆ ಅಂತ ಹೇಳಲಾಗಿತ್ತು. ಕೆಲವರಿಗೆ ಇದು ಕರ್ತವ್ಯವಾಗಿತ್ತು, ಇನ್ನುಕೆಲವರಿಗೆ ದೇಶಸೇವೆ ಎಂದೆನಿಸಿತ್ತು, ಮತ್ತೆ ಕೆಲವರಿಗೆ ಹೋಗದಿದ್ದರೆ ಸರ್ಕಾರವೇ ನಮ್ಮ ಪ್ರಾಣತೆಗೆಯಬಹುದು ಎಂಬ ಅನುಮಾನವೂ ಇತ್ತು. ಕೆಲಸಮಾಡದೇ ಸರ್ಕಾರದ ಕೈಯಿಂದ ಸತ್ತು ಕುಟುಂಬವನ್ನು ತೊಂದರೆಗೀಡುಮಾಡುವುದಕ್ಕಿಂತಾ ಈ ಕೆಲಸಮಾಡಿ ಅದರ ಪರಿಣಾಮದಿಂದಾಗಿ ಸಾಯುವುದು ಮೇಲು ಎಂದೆನಿಸಿತ್ತು. ಈ ರೀತಿ ಕರ್ತವ್ಯ, ದೇಶಸೇವೆ, ಭಯದಿಂದ ಮುಂದುವರೆದದ್ದು ಸಣ್ಣದೊಂದಷ್ಟು ಜನರ ಗುಂಪಲ್ಲ. ಈ ರೀತಿ ಸಾಯಲೆಂದೇ ಮುಂದೆಬಂದವರ ಒಟ್ಟು ಸಂಖ್ಯೆ ಸುಮಾರು ಆರುಲಕ್ಷಕ್ಕೂ ಹೆಚ್ಚು. ಮನುಕುಲದ ಇತಿಹಾಸದಲ್ಲೇ ಈ ಹಿಂದೆ ಕಂಡುಕೇಳರಿಯದಂತಾ ಅವಘಡ ನಡೆದಾಗ, ಅದನ್ನು ಸರಿಪಡಿಸಲು ಈ ಹಿಂದೆ ಕಂಡುಕೇಳರಿಯದಂತಾ ಪ್ರಯತ್ನದ ಅಗತ್ಯವೂ ಇತ್ತು. ಆ ಅವಘಡದ ಹೆಸರೇ ‘ಚರ್ನೋಬಿಲ್ ದುರಂತ’. ಮತ್ತು ಆ ದುರಂತದ ಮುಂದಿನ ಹೆಜ್ಜೆಯಾಗಿ ನಡೆದದ್ದೇ ಮಾನವ ಇತಿಹಾಸದ ಅತೀದೊಡ್ಡ ಸ್ವಚ್ಚತಾ ಕಾರ್ಯ. ಆ ಕಾರ್ಯಕ್ಕೆ ಕೈಹಾಕಿದ ಈ ಆರುಲಕ್ಷಕ್ಕೂ ಹೆಚ್ಚು ಜನರ ಗುಂಪಿಗೊಂದು “ಚರ್ನೋಬಿಲ್ ಲಿಕ್ವಿಡೇಟರ್ಸ್” ಎಂಬ ಸಮುದಾಯ ವಾಚಕ ಪದವೂ ಇದೆ. ಇಡೀ ಚರ್ನೋಬಿಲ್ ಪರಿಸರವನ್ನು ತಂಪಾಗಿಸಿ, ಅಪಾಯದಿಂದ ದೂರಾಗಿಸಿ, ತಿಕ್ಕಿತೊಳೆದು ತಹಬಂದಿಗೆ ತಂದ ಈ ಸಾಹಸಿಗಳ ಬಗ್ಗೆ ಸ್ವಲ್ಪ ತಿಳಿಯೋಣ.

 

‘ಎಂತಹುದೇ ಪರಿಸ್ಥಿತಿಯಲ್ಲೂ ಸಿಡಿಯಲು ಸಾಧ್ಯವೇ ಇಲ್ಲ’ ಎಂದು ಯುಎಸ್ಎಸ್ಆರ್ ಬೀಗುತ್ತಿದ್ದ ಆರ್ಎಂಬಿಕೆ ರಿಯಾಕ್ಟರುಗಳನ್ನು ಒಂದನ್ನು, ಇಂದಿನ ಯುಕ್ರೇನಿನ ಪ್ರಿಪ್ಯಾತ್ ಎಂಬ ಸಣ್ಣಪಟ್ಟಣದಲ್ಲಿದ್ದ ಚರ್ನೋಬಿಲ್ ಅಣುಸ್ಥಾವರದಲ್ಲಿ ಸ್ಥಾಪಿಸಿತ್ತು. 26 ಏಪ್ರಿಲ್ 1986ರ ಕರಾಳರಾತ್ರಿಯಲ್ಲಿ, ಅಲ್ಲಿದ್ದ ನಾಲ್ಕು ರಿಯಾಕ್ಟರುಗಳಲ್ಲಿ ರಿಯಾಕ್ಟರ್ ನಂಬರ್ 4 ಅನಿಯಂತ್ರಿತವಾಗಿ ಸ್ಪೋಟಿಸಿತು. ನಾಲ್ಕನೇ ರಿಯಾಕ್ಟರ್ ಬ್ಲಾಕಿನ ಎಲ್ಲೆಡೆ ಬೆಂಕಿಹತ್ತಿ, ಸ್ಟೀಲು ಕಾಂಕ್ರೀಟು ಗ್ರಾಫೈಟುಗಳ ಅವಶೇಷಗಳು ಎಲ್ಲೆಡೆ ಚೆಲ್ಲಿತು. ಚೆರೆಂಕೋವ್ ವಿಕಿರಣದ ತಿಳಿನೀಲಿ ಬೆಳಕಿನ ಕಂಬವೊಂದು ನಾಲ್ಕನೇ ರಿಯಾಕ್ಟರಿನಿಂದ ನೇರಮೇಲಕ್ಕೆ ಆಕಾಶದೆಡೆಗೆ ಮುಖಮಾಡಿನಿಂತಿತು. ಈ ಸ್ಪೋಟ ಹೇಗೆ ಸಂಭವಿಸಿತ್ತು ಎಂಬುದನ್ನು ವಿವರಿಸಲಿಕ್ಕೆ ಇನ್ನೊಂದೇ ಲೇಖನ ಬೇಕಾದೀತು ಬಿಡಿ. ಹೀಗೆ ನಡೆದ ಸ್ಪೋಟದಲ್ಲಿ ಸ್ಥಾವರದಲ್ಲಿ ಕೆಲಸಮಾಡುತ್ತಿದ್ದವರು ಯಾರೂ ಸಾಯದಿದ್ದರೂ, ಅದೇನಾಯಿತು ಅಂತಾ ನೋಡಲಿಕ್ಕೆ ಹೋದ ನಾಲ್ಕೈದು ಸಿಬ್ಬಂದಿಯೂ, ಬೆಂಕಿಯನ್ನು ಆರಿಸಬಂದ ಅಗ್ನಿಶಾಮಕದಳದ ಹಲವಾರು ಸಿಬ್ಬಂದಿಯೂ ತೀವ್ರವಾಗಿ ಅಸ್ವಸ್ಥರಾದರು. ರಕ್ತವಾಂತಿಮಾಡುತ್ತಾ ಕುಸಿದರು. ಎಲ್ಲೋ ಒಂದು ಸ್ಪೋಟ ನಡೆದಿದೆ, ಅದರ ಬೆಂಕಿಯನ್ನು ಆರಿಸುತ್ತಿದ್ದೇವೆ ಎಂದಷ್ಟೇ ಇವರೆಲ್ಲರೂ ಅಂದುಕೊಂಡಿತ್ತು. ಸ್ಪೋಟನಡೆದ ಸ್ಥಾವರದ ರಿಯಾಕ್ಟರೊಂದರ ಕೇಂದ್ರವೇ ದೊಡ್ಡದಾಗಿ ಬಾಯಿತೆರೆದು ಕೂತಿದೆ, ಅದರಿಂದ ಹೊರಬಂದಿರುವ ಅಣುವಿಕಿರಣ ನಮ್ಮ ರಕ್ತನಾಳಗಳನ್ನೇ ಹರಿದುಹಾಕುತ್ತಿದೆ ಎಂಬ ಅರಿವೂ ಅವರಿಗಿರಲಿಲ್ಲ. ಯಾಕೆಂದರೆ ಆರ್ಎಂಬಿಕೆ ರಿಯಾಕ್ಟರು ಸಿಡಿಯಲು ಸಾಧ್ಯವೇ ಇಲ್ಲ ಎಂದೇ ಎಲ್ಲರ ನಂಬಿಕೆಯಾಗಿತ್ತು. ಅಥವಾ ಅವರನ್ನು ಹಾಗೆ ನಂಬಿಸಲಾಗಿತ್ತು. ಹೀಗೊಂದು ಅವಘಡ ಆಗಿದೆ, ನಾವೆಲ್ಲರೂ ಅಣುವಿಕಿರಣದ ಆಕ್ರಮಣಕ್ಕೆ ತುತ್ತಾಗಿದ್ದೇವೆ ಎಂದು ಎಲ್ಲರಿಗೂ ತಿಳಿಯುವಷ್ಟರಲ್ಲಿ ಪ್ರಿಪ್ಯಾತ್ ಸುತ್ತಲಿನ ಮುನ್ನೂರು ಚದರ ಕಿಲೋಮೀಟರಿನಲ್ಲಿ ವಾಸಿಸುತ್ತಿದ್ದ ಜನರಷ್ಟೂ ಸರಿಪಡಿಸಲಾಗದ ಖಾಯಿಲೆಯೊಂದಕ್ಕೆ ತುತ್ತಾಗಿದ್ದರು.

 

ಸ್ಪೋಟದ ಮೂಲ, ಮತ್ತದರ ಆಘಾತಕಾರಿ ಪರಿಣಾಮಗಳು ಯುಎಸ್ಎಸ್ಆರಿನ ನಾಯಕತ್ವಕ್ಕೆ ಮನದಟ್ಟಾಗುವಷ್ಟರಲ್ಲಿ ನಲವತ್ತೆಂಟು ಘಂಟೆಗಳಿಗೂ ಹೆಚ್ಚುಸಮಯ ಕಳೆದುಹೋಗಿತ್ತು. ಇಡೀ ಪ್ರಹಸನವನ್ನು ರಹಸ್ಯವಾಗಿ ಮುಚ್ಚಿಡಲು ಕಮ್ಯೂನಿಸ್ಟ್ ಪಾರ್ಟಿ ಮತ್ತು ಕೆಜಿಬಿ ಪ್ರಯತ್ನಿಸಿ, ದೇಶದೊಳಗೆ ಅದನ್ನು ಮಾಡಲು ಸಫಲವಾದರೂ, ವಿಕಿರಣವನ್ನು ತಡೆಯುವವರು ಯಾರು ಹೇಳಿ. ಅದು ಸಾವಿರಾರು ಕಿಲೋಮೀಟರ್ ದೂರವನ್ನು ದಿನವೊಂದರಲ್ಲೇ ಪಯಣಿಸಿ ಸ್ವೀಡನ್ನಿನ್ನ ಅಣುಸ್ಥಾವರವೊಂದರ ರೀಡರ್ ಅನ್ನು ತಲುಪಿ, ವಿಶ್ವ ಮಟ್ಟದ ಸುದ್ಧಿಯಾಯ್ತು. ಮುಖವುಳಿಸಿಕೊಳ್ಳಲು ಸ್ಪೋಟದ ವಿಚಾರವನ್ನು ಅಲ್ಲಗಳೆದ ರಷ್ಯಾ, ಚರ್ನೋಬಿಲ್ ಅನ್ನು ಸ್ವಚ್ಚಗೊಳಿಸಲು ಪ್ರಾಜೆಕ್ಟ್ ಒಂದನ್ನು ಪ್ರಾರಂಭಿಸಿತು. ತನ್ನ ಇಡೀ ಶಕ್ತಿಯನ್ನು ಕೇಂದ್ರೀಕರಿಸಿ ಲಕ್ಷಾಂತರ ಜನರನ್ನು ನೇಮಿಸಿತು. ಈ ಕೆಲಸದಲ್ಲಿ ಪಾಲ್ಗೊಂಡರೆ ಕುಡಿಯಬಹುದಾಷ್ಟು ಪುಗಸಟ್ಟೆ ವೋಡ್ಕಾ, ಸೇದಬಹುದಾದಷ್ಟು ಸಿಗರೇಟು, ಊಟದ ಜೊತೆ ಕೆಲಸಕ್ಕನುಗುಣವಾಗಿ ನಾನೂರರಿಂದ ಸಾವಿರ ರೂಬಲ್ಲಿನ ಸಂಬಳವನ್ನೂ ಘೋಷಿಸಿತು. ಈ ಕೆಲಸಕ್ಕೆ ಮುಂದೆಬಂದವರಲ್ಲಿ ಕೆಲವರಿಗಷ್ಟೇ ಈ ಕೆಲಸ ಅಪಾಯ ಗೊತ್ತಿದ್ದದ್ದು. ಮುಂದಿನ ದಿನಗಳಲ್ಲಿ ನಾವು ಕ್ಯಾನ್ಸರ್’ಗೆ ತುತ್ತಾಗಲಿದ್ದೇವೆ, ನಮಗೆ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿಯುವಷ್ಟರಲ್ಲಿ ಸಮಯಮೀರಿತ್ತು. ಆದರೂ ಆ ಕ್ಷಣದಲ್ಲಿ “ಇದು ದೇಶದ ಮರ್ಯಾದೆ ಪ್ರಶ್ನೆ, ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು, ಸಾವಿಗೂ ಅಂಜದ ಕಾಮ್ರೇಡುಗಳು ನಾವೆಲ್ಲಾ” ಎನ್ನುತ್ತಾ ಕಮ್ಯೂನಿಸಂ ಜನರನ್ನು ಒಗ್ಗೂಡಿಸಿದ ರೀತಿಯನ್ನೂ ಮೆಚ್ಚಲೇಬೇಕು. ಹೌದು ಬಹಳಷ್ಟು ಜನರಿಗೆ ಈ ಕೆಲಸಕ್ಕೆ ಹೋಗದೇ ಇದ್ದರೆ ಕೆಜಿಬಿ ನಮ್ಮ ಜೀವನವನ್ನೇ ನರಕಸದೃಶಗೊಳಿಸಲಿದೆ ಎಂಬ ಭಯವೂ ಇತ್ತು. ಆದರೆ ಬೇರೆ ಆಯ್ಕೆಯಾದರೂ ಏನಿತ್ತು ಹೇಳಿ? ಎಲ್ಲಿಗೆ ಓಡುತ್ತಿದ್ದರು?

 

ಸ್ವಚ್ಚತಾ ಕಾರ್ಯದ ಮೊದಲ ಭಾಗವಾಗಿ, ಇಡೀ ಪಟ್ಟಣವನ್ನು ಸ್ಥಳಾಂತರಗೊಳಿಸಲಾಯಿತು. ಎರಡುದಿನಕ್ಕಾಗುವಷ್ಟು ಬಟ್ಟೆಬರೆ ತೆಗೆದುಕೊಂಡು ಹೊರಡಿ, ಆಮೇಲೆ ವಾಪಾಸು ಬರುತ್ತೀರಿ ಎಂದು ಹೇಳುತ್ತಾ ಎಲ್ಲರನ್ನೂ ಮನೆಯಿಂದ ಹೊರದಬ್ಬಲಾಯಿತು. ಈ ಕೆಲಸಕ್ಕೆ ಸಾವಿರಾರು ಸೈನಿಕರೂ, ನೂರಾರು ಬಸ್ ಡ್ರೈವರುಗಳೂ ಶ್ರಮಿಸಿದರು. ನೂರಕ್ಕೂ ಹೆಚ್ಚು ಹೆಲಿಕಾಪ್ಟರುಗಳು ಹಗಲೂರಾತ್ರಿ ಕೆಲಸಮಾಡಿ ಉರಿಯುತ್ತಿದ್ದ ರಿಯಾಕ್ಟರಿನ ಮೇಲೆ ಮರಳು ಮತ್ತು ಬೋರಾನ್ ಮಿಶ್ರಣವನ್ನು ಸುರಿದವು. ಈ ಪೈಲಟ್ಟುಗಳಷ್ಟೂ ಜನ ಐದುವರ್ಷದೊಳಗೇ ಕ್ಯಾನ್ಸರ್ ಮತ್ತು ಅಂಗವೈಫಲ್ಯದಿಂದಾಗಿ ಸಾವನ್ನಪ್ಪಿದರು. ಸ್ಥಾವರವನ್ನು ಸ್ವಚ್ಚಗೊಳಿಸಲು ನೂರಾರು ಕೆಲಸಗಾರರನ್ನು ರಷ್ಯಾದ ಮೂಲೆಮೂಲೆಯಿಂದ ಕರೆತರಲಾಯಿತು. ಸ್ಪೋಟದೊಂಡ ನಾಲ್ಕನೇ ರಿಯಾಕ್ಟರಿನಿಂದ ಸಾವಿರಗಟ್ಟಲೇ ಸೆಲ್ಷಿಯಸ್ ಬಿಸಿಯ ಯುರೇನಿಯಂ ಭೂಮಿಯನ್ನು ಕೊರೆದು, ಸಮೀಪದ ಪ್ರಿಪ್ಯಾತ್ ನದಿಯನ್ನೂ, ಅಂತರ್ಜಲವನ್ನೂ ಸೇರಿ ಇಡೀ ರಷ್ಯಾವನ್ನು ಕೊಲ್ಲುವುದನ್ನು ತಪ್ಪಿಸಲಿ, ರಿಯಾಕ್ಟರಿಗಿಂತಾ ಮೂವತ್ತು ಅಡಿ ಆಳದಲ್ಲಿ ಸೀಸಮಿಶ್ರಿತ ಕಾಂಕ್ರೀಟಿನ ವೇದಿಕೆಯೊಂದನ್ನು ರಚಿಸಲು ನಾಲ್ಕುನೂರಕ್ಕೂ ಹೆಚ್ಚು ಗಣಿಕೆಲಸಗಾರರು ಸತತ ನಾಲ್ಕುವಾರ ಕೆಲಸಮಾಡಿದರು. ಅಗೆತದಿಂದ ಹೆಚ್ಚಿನ ಕಂಪನಗಳು ಉಂಟಾಗದಂತೆ ತಡೆಯಲು, ಯಾವುದೇ ಯಂತ್ರೋಪಕರಣಗಳನ್ನು ಬಳಸದೇ ಕೆಲಸಗಾರರು ಕೈಯಿಂದಲೇ ಭೂಮಿಯನ್ನು ಅಗೆಯಬೇಕಾಗಿತ್ತು, ಸಿಮೆಂಟಿನ ಇಟ್ಟಿಗೆಗಳನ್ನು ಕೊಂಡೊಯ್ಯಬೇಕಾಗಿತ್ತು. ಈ ಕೆಲಸದಲ್ಲಿ ತೊಡಗಿದ್ದ ಅಷ್ಟೂ ಜನರು ಹತ್ತೇ ವರ್ಷದಲ್ಲಿ ಅಂಗವೈಫಲ್ಯಕ್ಕೊಳಗಾಗಿ, ಬಹಳಷ್ಟು ಜನ ಸಾವಿಗೂ, ಆತ್ಮಹತ್ಯೆಗೂ ಶರಣಾದರು.

 

ಒಂದುತಿಂಗಳ ಒಳಗೇ, ಪ್ರಿಪ್ಯಾತ್ ಪಟ್ಟಣ ಮತ್ತು ಸುತ್ತಲಿನ ಮೂವತ್ತು ಕಿಲೋಮೀಟರ್ ಸುತ್ತಳತೆಯ ಪ್ರದೇಶ ಇನ್ನುಮುಂದೆ ಸದಾಕಾಲಕ್ಕೂ ವಾಸಯೋಗ್ಯವಲ್ಲ ಎಂದು ನಿರ್ಧರಿಸಲ್ಪಟ್ಟಿದ್ದರಿಂದ, ಇಡೀ ಪಟ್ಟಣಬೀಳುವುದು ಖಚಿತವಾಯ್ತು. ಎರಡು ಸಾವಿರ ಸೈನಿಕ-ಅರೆಸೈನಿಕರ ಪಡೆ ಬಂದೂಕುಗಳನ್ನು ಹಿಡಿದು ಊರಿನ ಎಲ್ಲಾ ಕೋಳಿ, ಬೆಕ್ಕು, ನಾಯಿ, ನಾಯಿಗಳನ್ನೂ ಸುತ್ತಲಿನ ಕಾಡಿನಲ್ಲಿದ್ದ ಪ್ರಾಣಿಗಳನ್ನೂ ಕೊಂದು, ಹೊಂಡತೆಗೆದು ಹೂತು, ಅವನ್ನು ಕಾಂಕ್ರೀಟಿನಿಂದ ಮುಚ್ಚಲು ಹೊರಟಿತು. ಆ ಮನೆಗಳಲ್ಲಿ ಉಳಿದಿದ್ದ ಆಹಾರಪದಾರ್ಥಗಳನ್ನು ತಿಂದು ಖಾಯಿಲೆಹರಡಬಹುದಾಗಿದ್ದ ಇಲಿ, ಜಿರಳೆಗಳ ತಲೆಬಿಸಿ ತಪ್ಪಿಸಲು ಎಂಟುನೂರು ಹೆಂಗಸರ ತಂಡವೊಂದು ಮನೆಮನೆಗೂ ಹೋಗಿ ಎಲ್ಲವನ್ನೂ ಖಾಲಿಮಾಡಿತು. ಇಡೀ ಪಟ್ಟಣವನ್ನು, ರಸ್ತೆ, ಗೋಡೆ ಬೋರ್ಡುಗಳನ್ನು ನೂರಾರು ಜನರ ತಂಡಗಳು ತಿಕ್ಕಿ ತೊಳೆದು ಸ್ವಚ್ಚಗೊಳಿಸಿದವು. ನಿರಾಶ್ರಿತರಿಗೆ ಮರುವಸತಿ ಕಲ್ಪಿಸುವ ಪ್ರಾಜೆಕ್ಟಿನಲ್ಲಿ ಸಾವಿರಾರು ಕೆಲಸಗಾರರು ತೊಡಗಿಸಿಕೊಂಡರು. ಇವರ ಮನೋರಂಜನೆಗೆ ಸರ್ಕಾರದ ಸಂಬಳಪಡೆದು ಜೋಕರುಗಳು, ನೃತ್ಯ-ಸಂಗೀತಗಾರರು, ಮೆಜೀಷಿಯನ್ನರು, ಇಡೀ ಪ್ರಾಜೆಕ್ಟನ್ನು ದಾಖಲಿಸಲು ಸರ್ಕಾರೀ ನಿಯೋಜಿತ ಮಾಧ್ಯಮದವರೂ ಬಂದಿಳಿದರು. ಇವರೆಲ್ಲರ ಆರೋಗ್ಯ ಕಾಪಾಡಲು ಲೆಕ್ಕವಿಲ್ಲದಷ್ಟು ವೈದ್ಯಕೀಯ ಸಿಬ್ಬಂದಿ ಬಂದರು. ಮೊದಲದಿನದೊಂದಲೂ ಪರೋಕ್ಷ ವಿಕಿರಣಕ್ಕೀಡಾಗಿದ್ದೇ ಈ ವೈದ್ಯಕೀಯ ಸಿಬ್ಬಂದಿಗಳು. ಇಡೀ ಪ್ರಾಜೆಕ್ಟೆನ ಅಪಾಯಗಳು ತಿಳಿದಿದ್ದರೂ ಯಾರೂ ಹಿಂದೆಗೆಯಲಿಲ್ಲ.

 

ಈ ದುರಂತ ಕಮ್ಯೂನಿಸ್ಟ್ ರಷ್ಯಾದ ಶವಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಗಳಲ್ಲೊಂದಾಯ್ತು. ಈ ದುರಂತ ಹಲವಾರು ನಿರ್ಧಾರಗಳ ಸರಮಾಲೆಗೆ ಕಾರಣವಾಗಿ, ಕೊನೆಗೆ 1991ರಲ್ಲಿ ಗೋರ್ಬಚೇವ್ ಸೋವಿಯತ್ ಯೂನಿಯನ್ ಅನ್ನು ವಿಸರ್ಜಿಸಿ, 15 ಸ್ವತಂತ್ರ ದೇಶಗಳನ್ನು ಘೋಷಿಸುವಲ್ಲಿಗೆ ತಲುಪಿತು. ದುರಂತ ನಡೆದ ಚರ್ನೋಬಿಲ್ ಇವತ್ತಿಗೂ ಉಕ್ರೇನಿನಲ್ಲಿ ನಿಷೇಧಿತ ಪ್ರದೇಶವಾಗಿ ಉಳಿದಿದೆ. ವಿಕಿರಣತಡೆಸಂಬಂಧೀ ಕಾರ್ಯಗಳ ನಂತರವೂ ಮುಂದಿನ 24,000ವರ್ಷಗಳ ಕಾಲ ಅಲ್ಲಿ ಯಾರೂ ಕಾಲಿಡುವಂತಿಲ್ಲ. ಎಂತದೇ ಗಟ್ಟಿಎದೆಯವರನ್ನೂ ಆಳವಾಗಿ ನಡುಗಿಸುವ ನಿಶ್ಯಬ್ದವೊಂದು ಭೂತನಗರ ಪ್ರಿಪ್ಯಾತ್ ಅನ್ನು ಆವರಿಸಿದೆ. ಅಲ್ಲೇ ಈ ದುರಂತಕ್ಕೆ ಸಾಕ್ಷಿಯಾಗಿ “ಜಗತ್ತನ್ನು ಉಳಿಸಿದವರ ಸ್ಮಾರಕ” ಮೂಕವಾಗಿ ನಿಂತಿದೆ.

ಜಗತ್ತನ್ನು ಉಳಿಸಿದವರ ಸ್ಮಾರಕ
Monument of those who saved the world – Closeup

ಈ ಸ್ಪೋಟದ ಉಪ-ಉತ್ಪನ್ನವಾಗಿ ಅಪಾರಪ್ರಮಾಣದ ವಿಕಿರಣಪೂರಿತ ಐಯೋಡಿನ್ ವಾತಾವರಣವನ್ನು ಸೇರಿ ಅಲ್ಲಿಂದ ಮನುಷ್ಯರ ಗಂಟಲಿನಲ್ಲಿರುವ ಥೈರಾಯ್ಡ್ ಗ್ರಂಥಿಯೊಳಗಿಳಿದಿದ್ದರಿಂದ, 1986-96ರ ಮಧ್ಯೆ ಪೂರ್ವ ಯೂಎಸ್ಎಸ್ಆರಿನಲ್ಲಿ ಥೈರಾಯ್ಡ್ ಕ್ಯಾನ್ಸರಿಗೆ ತುತ್ತಾದವರ ಸಂಖ್ಯೆ ಮುಗಿಲುಮುಟ್ಟಿತು. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿಯಾಗಿತ್ತು. ಈ ಶಸ್ತ್ರಚಿಕಿತ್ಸೆಯಿಂದ ಗಂಟಲಿನ ಎಡ ಮತ್ತು ಬಲಭಾಗದಲ್ಲಿ ಉಳಿದ ಉದ್ದದಕಲೆಗೆ ಇಂದಿಗೂ ಚರ್ನೋಬಿಲ್ ನೆಕ್ಲೆಸ್ ಅರ್ಥವಾ ಬೆಲೂರೂಷಿಯನ್ ನೆಕ್ಲೆಸ್ ಎಂಬ ಹೆಸರಿದೆ.

ಚರ್ನೋಬಿಲ್ ನೆಕ್ಲೆಸ್

ಮನುಕುಲದ ಮೊತ್ತಮೊದಲ ಅಣುಸಂಬಂಧೀ ಅವಘಡವಾದ ಚರ್ನೋಬಿಲ್ ದುರಂತದ ನೆನಪನ್ನು ತನ್ನಷ್ಟೇ ಆಳವಾಗಿ ಮತ್ತು ಕುರೂಪವಾಗಿ ಬಿಂಬಿಸುತ್ತಿದೆ. ಮನುಷ್ಯನ ಪಾಪಗಳಿಗೆ ಮನುಷ್ಯನೇ ಬಲಿಯಾಗುವುದು ಹೌದಾದರೂ, ಅದನ್ನು ಸರಿಪಡಿಸಬೇಕಾದದ್ದೂ ಮನುಷ್ಯನೇ ಎಂಬುದನ್ನು ಚರ್ನೋಬಿಲ್ ಲಿಕ್ವೇಡಟರುಗಳು ನಿರೂಪಿಸಿದರು. ಸಾವಿನ ಕಣ್ಣಲ್ಲಿ ಕಣ್ಣಿಟ್ಟು, ಒಸರಿದ ಕಣ್ಣೀರನ್ನು ವಿಶ್ವಕ್ಕೆ ಕಾಣದಂತೆ ಅವಿತಿಟ್ಟು, ತಮ್ಮ ಕೆಲಸವನ್ನು ಮುಗಿಸಿದರು.

ಲಿಕ್ವಿಡೇಟರುಗಳಿಗೆ ಕೊಡಲಾದ ಮೆಡಲ್. ರಕ್ತದಹನಿಯನ್ನು ಆಲ್ಫಾ-ಬೀಟಾ ಮತ್ತು ಗಾಮಾ ಕಿರಣಗಳು ಭೇದಿಸುತ್ತಿರುವುದನ್ನು ಕಾಣಬಹುದು.

ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತಾ, ರಾಜಕೀಯ, ತಪ್ಪು ಒಪ್ಪುಗಳನ್ನು ಬದಿಗಿಟ್ಟು, ಈ ತಿಂಗಳ 26ರಂದು, ದೇವರ ಮುಂದೆ ಅವರ ಹೆಸರಲ್ಲೊಂದು ಬತ್ತಿ ಹಚ್ಚೋಣ.

0 comments on ““ಸಾವಿನ ಮನೆಯ ಬಾಗಿಲು ತಟ್ಟಿ, ಹೊಸಿಲು ತೊಳೆದವರು”

Leave a Reply

Your email address will not be published. Required fields are marked *