Thursday, 18 April, 2024

“ಕೆಲ ಆದರ್ಶಪ್ರಾಯ ಕಂಪನಿಗಳ ಕರಾಳ ಇತಿಹಾಸ”

Share post

ನಮ್ಮಲ್ಲಿ ಹೆಚ್ಚಿನವರು ಕಾರ್ಪೊರೇಟ್ ಅಥವಾ ಖಾಸಗೀ ಕಂಪನಿಗಳ ಹೆಸರು ಕೇಳಿದ ಕೂಡಲೇ ಅದೇನೋ ಹಾವು ತುಳಿದವರಂತೆ ಆಡುವುದುಂಟು. ಕಾರ್ಪೊರೇಟುಗಳೆಂದರೆ ಬಡವರ ರಕ್ತಹೀರುವವರು, ತಮ್ಮ ಲಾಭವನ್ನಷ್ಟೇ ನೋಡಿಕೊಳ್ಳುವವರು, ಅಬಲರನ್ನು ತುಳಿಯುವವರು, ಕಾನೂನನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ಸರ್ಕಾರವನ್ನು ತಮ್ಮದಾಗಿಸಿಕೊಂಡು ತಮಗೆ ಬೇಕಾದದ್ದನ್ನೆಲ್ಲಾ ಮಾಡಿಕೊಳ್ಳುವವರು ಎಂಬ ನಂಬಿಕೆ ಇರುವವರೇ ಹೆಚ್ಚು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಭೋಪಾಲ್’ನಲ್ಲಿ ಅನಿಲ ಸೋರಿಕೆ ಮಾಡಿ ನೂರಾರು ಜನರ ಸಾವಿಗೆ ಕಾರಣನಾದರೂ ಸ್ವತಃ ಪ್ರಧಾನಿ ಕಛೇರಿಯಿಂದ ಬಂದ ಆದೇಶದ ಪ್ರಕಾರ ಸರ್ಕಾರೀ ಭದ್ರತೆಯಲ್ಲಿ ವಿಮಾನದ ಬಾಗಿಲವರೆಗೂ ಸುರಕ್ಷಿತವಾಗಿ ತಲುಪಿ ತಪ್ಪಿಸಿಕೊಂಡ ಯೂನಿಯನ್ ಕಾರ್ಬೇಡ್ ಅಧ್ಯಕ್ಷ, ಮಾರುಕಟ್ಟೆಯಲ್ಲಿ ತನ್ನ ಸಾರಭೌಮತ್ವ ಸ್ಥಾಪನೆಯಾದಕೂಡಲೇ ರೈತರು ತನ್ನ ‘ಟರ್ಮಿನೇಟರ್’ ತಳಿಯ ಬೀಜಗಳನ್ನು ಮಾತ್ರವೇ ಕೊಳ್ಳುವಂತೆ ಕೈತಿರುಚಿದ ಮಾನ್ಸಾಂಟೋ ಕಂಪನಿ, ವಿಶ್ವಬ್ಯಾಂಕಿನ ಸಾಲ ತೀರಿಸಲಾಗದೇ ಅದರ ನಿರ್ದೇಶನದಂತೆ ಬೊಲಿವಿಯಾದ ಸರ್ಕಾರ ಪ್ರಕೃತಿದತ್ತವಾದ ನೀರನ್ನೇ ಖಾಸಗಿಯವರಿಗೆ ಮಾರಿ ಆ ಕಂಪನಿಯವರು ಕುಡಿಯುವ ನೀರಿನ ದರವನ್ನೇ ಹೆಚ್ಚಿಸಿ ಜನರನ್ನು ಕಷ್ಟಕ್ಕೆ ತಳ್ಳಿದ್ದು…ಈ ರೀತಿಯ ಉದಾಹರಣೆಗಳು ನಮ್ಮ ಮುಂದೆಯೇ ಇರುವಾಗ ಕಾರ್ಪೋರೇಟುಗಳು ಎಂದಕೂಡಲೇ ಭಯಕ್ಕೆ ಬೀಳುವುದು ಸಹಜವೇ ಹೌದು. ಆದರೆ ಇವೆಲ್ಲವೂ ಕಾರ್ಪೋರೇಟುಗಳು ತೀರಾ ಬಲಿಷ್ಟವಾದ ಉದಾಹರಣೆಗಳಷ್ಟೇ. ಅದೂ ಕೂಡಾ ಇವೆಲ್ಲಾ ಸರ್ಕಾರಗಳಲ್ಲಿ ಸಾಮಾನ್ಯ ಜನರ ಭಾಗವಹಿಸುವಿಕೆ ತೀರಾ ಕಡಿಮೆಯಿದ್ದಾಗಿನ ಕಾಲದ ಹಾಗೂ ಸಾಮಾಜಿಕ ಹಕ್ಕುಗಳ ಹೋರಾಟ ಕೂಡಾ ಒಂದಿಷ್ಟು ಬಿಂದಿಬ್ರಿಗೇಡು ಮತ್ತು ಎನ್ಜಿಓಗಳ ಏಕಾಧಿಪತ್ಯದಲ್ಲಿದ್ದಗಿನ ಉದಾಹರಣೆಗಳಷ್ಟೇ. ಇವತ್ತು ಕಂಪನಿಯೊಂದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತನ್ನಿಷ್ಟ ಬಂದಂತೆ ಆಟವಾಡಲಾಗುವುದಿಲ್ಲ. ಮಾಧ್ಯಮಗಳು, ಸಾಮಾಜಿಕ ತಾಣಗಳ ಹದ್ದಿನಕಣ್ಣುಗಳು ಇವತ್ತು ಎಲ್ಲವನ್ನೂ ವಿಶ್ಲೇಷಿಸುತ್ತವೆ. ಮಾತ್ರವಲ್ಲ ಸರ್ಕಾರಗಳೂ ಕೂಡಾ ನಿಯಮಾವಳಿಗಳನ್ನು ಬಲಪಡಿಸಿ ಖಾಸಗಿಯವರನ್ನು ಸಾರ್ವಜನಿಕ ಚೌಕಟ್ಟಿನೊಳಗೇ ಹದ್ದುಬಸ್ತಿನಲ್ಲಿಡುವುದನ್ನೂ ಕಲಿತಿವೆ.

ಬಿಡಿ, ಇವತ್ತಿನ ಲೇಖನ ಖಾಸಗೀಕರಣ ಒಳಿತುಕೆಡುಕುಗಳ ಬಗ್ಗೆಯಲ್ಲ. ಈ ಲೇಖನ ನಾವು ಇವತ್ತಿನ ಜಗತ್ತಿನಲ್ಲಿ ಅತ್ಯಂತ ಗೌರವಿಸಲ್ಪಡುವ ಕೆಲ ಕಾರ್ಪೊರೇಟ್ ಕಂಪನಿಗಳು ಹೇಗೆ ತಮ್ಮ ಭೂತಕಾಲದಲ್ಲಿ ಅತ್ಯಂತ ಹೇಯಕೆಲಸಗಳನ್ನು ಮಾಡಿ ಬಚಾವಾಗಿವೆ ಎಂಬುದರ ಬಗ್ಗೆ. ಇದು ಚಾಕಲೇಟಿನಲ್ಲಿ ಹುಳಸಿಕ್ಕರೂ ಬಚಾವಾದ ಕ್ಯಾಡ್ಬರಿ ಅಥವಾ ನೂಡಲ್ಸಿನಲ್ಲಿ ವಿಷಕಾರಿ ರಸಾಯನಿಕಗಳಿವೆ ಎಂಬ ಸುದ್ದಿಬಂದರೂ ಬದುಕುಳಿದ ಮ್ಯಾಗಿ ಅಥವಾ ಅದರ ಮೂಲಕಂಪನಿಯಾದ ನೆಸ್ಟ್ಲೆಯ ಬಗ್ಗೆಯಲ್ಲ. ಈ ಎರಡು ಉದಾಹರಣೆಗಳಲ್ಲೇ, ಅದೆಷ್ಟು ಕೋಟಿಗಟ್ಟಲೇ ಖರ್ಚುಮಾಡಿ ಆ ಕಂಪನಿಗಳು ತಮ್ಮನ್ನು ತಾನು ಜಗತ್ತಿಗೆ ವಿವರಿಸಬೇಕಾಗಿ ಬಂತು ಹಾಗೂ ಹೇಗೆ ದಶಕೋಟಿಗಳಷ್ಟು ಹಣವನ್ನು ತಮ್ಮ ಬ್ರಾಂಡನ್ನು ನವೀಕರಿಸಲು ಹಾಗೂ ಹೊಸಾ ಜಾಹೀರಾತಿಗಾಗಿ ವ್ಯಯಿಸಬೇಕಾಗಿ ಬಂತೆಂದು ನಿಮಗೆ ನೆನಪಿರಬಹುದು. ನಾನು ಮಾತನಾಡುತ್ತಿರುವುದು ನೂರುವರ್ಷಕ್ಕೂ ಕಡಿಮೆ ವರ್ಷಗಳ ಹಿಂದೆಯಷ್ಟೇ ಮನುಕುಲದ ಇತಿಹಾಸದಲ್ಲೇ ಅತ್ಯಂತ ಹೇಯಕೆಲಸಗಳನ್ನು ಮಾಡಿಯೂ, ತಮ್ಮ ಬ್ರಾಂಡ್ ಅನ್ನು ಸ್ವಲ್ಪವೂ ಮುಕ್ಕಾಗಿಸಿಕೊಳ್ಳದೇ ಬದುಕುಳಿದದ್ದು ಮಾತ್ರವಲ್ಲದೇ, ಇವತ್ತು ಜಗತ್ತೇ ‘ಅಬ್ಬಾ’ ಎಂದು ಬೆರಗಿನಿಂದ ತಮ್ಮೆಡೆಗೆ ನೋಡುವಂತೆ ಮಾಡುತ್ತಿರುವ, ‘ಅಲ್ಲಿ ಕೆಲಸಕ್ಕೆ ಸೇರಬೇಕು’ ಅಥವಾ ‘ಅವರ ಪ್ರಾಡಕ್ಟುಗಳನ್ನು ಕೊಳ್ಳಬೇಕು’ ಎನ್ನುವಂತೆ ಮಾಡಿರುವ ಕಂಪನಿಗಳ ಬಗ್ಗೆ. ಯಾವುದು ಈ ಕಂಪನಿಗಳು ಎಂಬ ಕುತೂಹಲವೇ? ಅದಕ್ಕೆ ಉತ್ತರ ಪಡೆಯಬೇಕಾದರೆ ‘ಮನುಕುಲದ ಇತಿಹಾಸದ ಅತ್ಯಂತ ಹೇಯ ಕೆಲಸ’ ಯಾವುದು ಎಂಬುದಕ್ಕೆ ಉತ್ತರಪಡೆಯಬೇಕು.

ಹೇಯ ಕೆಲಸ ಎಂಬುದಕ್ಕೆ ನನ್ನ ನಿಮ್ಮ ವಿವರಣೆಗಳು ಬದಲಾಗಬಹುದು. ನಕ್ಸಲರೆಡೆಗೆ ಗುಂಡಿಡುವುದು ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಹೇಯವೆನಿಸಬಹುದು, ಆದರೆ ಅವರಿಂದ ಕಿರುಕುಳಕ್ಕೊಳಪಟ್ಟವರಿಗೆ ಅದೇ ಸರಿಯೆನಿಸಬಹುದು. ರಷ್ಯಾದ ಥಿಯೇಟರ್ ಒಂದರಲ್ಲಿ ಭಯೋತ್ಪಾದಕರು ನಾಗರೀಕರನ್ನು ಒತ್ತೆಯಾಳಾಗಿರಿಸಿಕೊಂಡಾಗ, ಸರ್ಕಾರ ನಿದ್ರೆಬರಿಸುವ ಅನಿಲವನ್ನು ಬಳಸಿದ್ದು, ಮತ್ತದರಿಂದಾಗಿ ಸುಮಾರು ನೂರಾಮೂವತ್ತು ನಾಗರೀಕರು ಸಾವನ್ನಪ್ಪಿದ್ದು ಒಂದು ಕೋನದಿಂದ ಹೇಯವೆನ್ನಿಸಬಹುದು. ಅಲ್ಲಿ ಬದುಕುಳಿದವರ ಪ್ರಕಾರ ಅದೇ ಸರಿಯಾದ ಮಾರ್ಗವಾಗಿದ್ದಿರಬಹುದು. ಸದ್ದಾಂಹುಸೇನ್ ಅಥವಾ ಗಡ್ಡಾಫಿ ಮಾಡಿದ ಕೆಲಸಗಳೂ ಹೀಗೇ ಚರ್ಚಾರ್ಹವೆನಿಸಬಹುದು. ಆದರೆ ಕೆಲ ಕೆಲಸಗಳು ಎಲ್ಲರ ಪ್ರಕಾರವೂ ಹೇಯವೇ ಎಂಬುದು ನನ್ನ ನಂಬಿಕೆ. ಉದಾಹರಣೆಗೆ ಬಂಗಾಳದ ಧವಸಧಾನ್ಯಗಳನ್ನು ಬೇರೆಡೆ ಹಂಚಿ ಬಂಗಾಳದ ಜನರ ಸಾವಿಗೆ ಕಾರಣವಾದ ಚರ್ಚಿಲ್ಲನ ನಿರ್ಧಾರ, ಮಿಲಿಯನ್ನುಗಟ್ಟಲೇ ಅರ್ಮೇನಿಯನ್ನರ ಜೀವಕ್ಕೆರವಾದ ಒಟ್ಟೋಮನ್ ಸರ್ಕಾರದ ಸಂಚುಗಳು, ಕಮ್ಯೂನಿಷ್ಟ್ ಪೋಲ್-ಪಾಟ್ ಕಾಂಬೋಡಿಯಾದಲ್ಲಿ ನಡೆಸಿದ ಹತ್ಯಾಕಾಂಡ, ಕಮ್ಯೂನಿಷ್ಟ್ ಸ್ಟಾಲಿನ್ನನ ರಷ್ಯನ್ ಹತ್ಯಾಕಾಂಡಗಳು, ಕೆಂಪುಬಾವುಟದವರು ಚೀನಾದ ತಿಯಾನ್ಮನ್’ನಲ್ಲಿ ನಡೆಸಿದ ಸರ್ಕಾರೀ ಪ್ರಾಯೋಜಿತ ಹತ್ಯೆಗಳು, ಉಗಾಂಡದಲ್ಲಿ ಇದಿ ಅಮಿನ್ ತನ್ನದೇ ಪ್ರಜೆಗಳನ್ನು ಕೊಂದದ್ದು, ತೀರಾ ಹೊಸಾ ಉದಾಹರಣೆಯೆಂದರೆ ಐಸಿಸ್ ಒಂದಕ್ಕಿಂದ ಒಂದು ಕ್ರೂರವಾದ ರೀತಿಗಳಲ್ಲಿ ತನ್ನ ಸೆರೆಯಲ್ಲಿದ್ದವರನ್ನು ಕೊಂದದ್ದು…..ಇವೆಲ್ಲವೂ ಯಾರೂ ಸಮರ್ಥಿಸಲಾಗದ ಹೇಯ ಕೃತ್ಯಗಳು.

ತನ್ನದೇ ಆದ ಕಾರಣಗಳಿಂದಾಗಿ, ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಮೊದಲು ನಿಲ್ಲುವುದು ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ನಾಜೀ ಪಾರ್ಟಿ ನಡೆಸಿದ ಯಹೂದಿಗಳ ಹತ್ಯೆ. ಇವತ್ತಿನ ಲೇಖನ ಇದರ ಬಗ್ಗೆ. ಸಾಮಾನ್ಯಮನುಷ್ಯರ ಯಾವುದೇ ತರ್ಕಕ್ಕೂ ನಿಲುಕದ ಸ್ಪಷ್ಟ ಕಾರಣವೇ ಇಲ್ಲದೇ ಹಿಟ್ಲರ್ ಮತ್ತವನ ಪಾರ್ಟಿ ತೆಗೆದುಕೊಂಡ ಈ The Final Solution, ಜಗತ್ತಿನಿಂದ ಕಟ್ಟಕಡೆಯ ಯಹೂದಿಯ ನಿರ್ನಾಮ ಮಾಡುವುದಾಗಿತ್ತು. ಈ ಕೆಲಸ ಕೇವಲ SS, ಜರ್ಮನ್ ಪೋಲೀಸ್, ಜರ್ಮನ್ ಸೈನ್ಯ ಅಥವಾ ನಾಝೀ ಪಾರ್ಟಿಯಿಂದ ಮಾತ್ರ ನಡೆಯಲಿಲ್ಲ. ಆ ಕಾಲದಲ್ಲಿ ಜರ್ಮನಿಯಲ್ಲಿ ಯಹೂದಿಗಳಿಂದ ನಡೆಯಲ್ಪಡದ ಎಲ್ಲಾ ಖಾಸಗೀಕಂಪನಿಗಳ ಮಾಲೀಕರೂ/ಕೆಲಸಗಾರರು ಒಂದಲ್ಲಾ ಒಂದು ರೀತಿ ನಾಜೀ ಪಾರ್ಟಿಗೆ ಸೇರಿದವರೇ ಆಗಿದ್ದರು. ಇಲ್ಲದಿದ್ದಲ್ಲಿ ಅವರ ವ್ಯವಹಾರ ನಡೆಯುವುದು ಹೇಗೆ ಹೇಳಿ! ಇದರಲ್ಲಿ ಕೆಲವರು ಒತ್ತಾಯಕ್ಕೆ ಸೇರಿದವರಾಗಿದ್ದರೂ, ಹೆಚ್ಚಿನವರಿಗೆ ‘ಯಹೂದಿಗಳನ್ನು ಹೆಸರಿಲ್ಲದಂತೆ ಮಾಡುವ’ ಹಿಟ್ಲರನ ಸಂಚಿನಲ್ಲಿ ತಪ್ಪೇನೂ ಕಂಡಿರಲಿಲ್ಲ.

ಯಾರು ಯಹೂದಿಗಳು ಮತ್ತವರು ಎಲ್ಲೆಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿಯನ್ನು ತನ್ನ ಫೈಲುಗಳಿಂದ ಹೆಕ್ಕಿ ಸರ್ಕಾರಕ್ಕೆ ಕೊಟ್ಟಿದ್ದು ಇವತ್ತು ಬ್ಯಾಂಕಿಂಗ್ ಜಗತ್ತಿನ ದೈತ್ಯರೆನಿಸಿಕೊಂಡಿರುವ ಸ್ಟಾಂಡರ್ಡ್ ಚಾರ್ಟರ್ಡ್ ಮತ್ತು ಅಲಿಯಾಂಜ್. ಆಷ್ವಿಟ್ಝ್ ಮತ್ತು ಡಕಾವ್’ಗಳಲ್ಲಿ ಯಹೂದಿಗಳನ್ನು ಬಂಧಿಸಿಡಲು ಹಾಗು ಕೊಲ್ಲಲು ಬೇಕಾದ ಕಾನ್ಸಂಟ್ರೇಶನ್ ಕ್ಯಾಂಪ್‌ಗಳನ್ನು ಕಟ್ಟಲು ಸಾಲ ಕೊಟ್ಟದ್ದು ಡಾಯ್ಶೆ ಬ್ಯಾಂಕ್. ಸೆರೆಯಾಳುಗಳನ್ನು ಸಾಗಿಸಲು ಟ್ರಕ್ಕ್ಕುಗಳು ಮತ್ತು ರೈಲ್ವೇಕೋಚುಗಳನ್ನು ಮಾಡಿಕೊಟ್ಟದ್ದು ಇವತ್ತಿಗೆ ಅತಿಗೌರವಾನ್ವಿತ ಕಂಪನಿಯಾದ ಸೀಮನ್ಸ್. ಕ್ಯಾಂಪುಗಳ ನಿರ್ಮಾಣ ಮತ್ತದಕ್ಕೆ ಬೇಕಾದು ಉಕ್ಕನ್ನು ಥಾಯ್ಸೆನ್ ಎಜಿ ಒದಗಿಸಿದರೆ, ಯಹೂದಿಗಳನ್ನು ಕೊಲ್ಲಲು ಬಳಸಿದ ಸೈನೈಡ್ ಮಿಶ್ರಿತ ಕೀಟನಾಶವಾದ ಝೈಕ್ಲಾನ್-ಬಿ ಅನ್ನು ಉತ್ಪಾದಿಸಿದ್ದು ಕ್ರುಪ್. ಇದೇ ಕಂಪನಿಗಳು ಒಂದಾಗಿ ಇಂದಿನ ಥಾಯ್ಸೆನ್-ಕ್ರುಪ್ ಆಗಿರೋದು. ಈ ವಿಷವನ್ನು ತಯಾರಿಸುವಲ್ಲಿ ಕ್ರುಪ್’ಗೆ ಜೊತೆಗೂಡಿದ್ದು ಐಜಿ ಫಾರ್ಬೆನ್ (ಇವತ್ತು ಈ ಕಂಪನಿ ಹರಿದು ಹಂಚಿ BASF, Bayer, Agfa, Aventis ಮತ್ತು Sanofi ಆಗಿದೆ). ಈ ‘ಝೈಕ್ಲಾನ್-ಬಿ’ಯ ಫಾರ್ಮ್ಯುಲಾವನ್ನು ಕಂಡುಹಿಡಿದದ್ದು ನಮ್ಮ ನಿಮ್ಮ ನೆಚ್ಚಿನ ಆಡಿ ಕಂಪನಿ. ನಾಜಿಗಳಿಂದ ಬಂಧಿತರಾದ ಮತ್ತು ಮಾರಣಹೋಮದಲ್ಲಿ ಸತ್ತವರ ಲೆಕ್ಕವಿಡಲಿಕ್ಕೆಂದೇ (ಅಂದಿನ ಕಾಲದ) ವಿಶೇಷ ಕಂಪ್ಯೂಟರುಗಳನ್ನು ಒದಗಿಸಿದ್ದು ನಮ್ಮೆಲ್ಲರ ಗೌರವಾನ್ವಿತ ಐಬಿಎಂ. ಈ ಎಲ್ಲಾ ಕೆಲಸಕ್ಕೂ ದೊಡ್ಡಮೊತ್ತದ ಹಣಸಹಾಯ ಮಾಡಿದವರಲ್ಲಿ ಜರ್ಮನಿಯ ಕ್ಯಾಪಿಟಲಿಸ್ಟ್ ಲೋಕದಲ್ಲಿದ್ದು ಹಿಟ್ಲರನ ಆರಾಧಕರಾಗಿದ್ದ ಕಂಪನಿ ಮಾಲೀಕರೂ ಸಿಇಓಗಳೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಯಹೂದಿಗಳ ಮಾರಣಹೋಮದಲ್ಲಿ ನೇರ ಕೈವಾಡವಿದ್ದ ಕಂಪನಿಗಳುಇವಿಷ್ಟು ಕಂಪನಿಗಳು ಯಹೂದಿಗಳ ಕೊಲ್ಲುವಿಕೆಯಲ್ಲಿ ನೇರವಾಗಿ ಭಾಗವಹಿಸಿದ ಕಂಪನಿಗಳಾದರೆ, ಇನ್ನು ಯುದ್ಧಕ್ಕೆ ಸಹಕರಿಸಿದ ಹಾಗೂ ನಾಜೀ ಪಕ್ಷಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಣ ಸಹಾಯ ಮಾಡಿದ ಕಂಪನಿಗಳ ಪಟ್ಟಿಯೂ ಉದ್ದವಿದೆ. ವೋಲ್ಕ್ಸ್-ವ್ಯಾಗನ್, ಬಿಎಂಡಬ್ಲೂ, ಮರ್ಸಿಡಿಸ್, ಓಪಲ್, ಶ್ಕೋಡಾ, ಪೋರ್ಷ ಕಂಪನಿಗಳು ಯುದ್ಧಕ್ಕೆ ಬೇಕಾದ ಟ್ರಕ್ಕು ಟ್ಯಾಂಕುಗಳು, ಏರೋಪ್ಲೇನ್ ಮತ್ತು ರಾಕೆಟ್ಟುಗಳನ್ನೂ ಮತ್ತವುಗಳ ಎಂಜಿನ್ನುಗಳನ್ನೂ ಒದಗಿಸಿಕೊಟ್ಟವು. ಸ್ವರೋಸ್ಕಿ, ಹ್ಯೂಗೋ ಬಾಸ್ ಕಂಪನಿಯ ಮಾಲೀಕರು ಮತ್ತು ಉನ್ನತ ಅಧಿಕಾರಿಗಳು ನಾಜೀ ಪಕ್ಷದ ಅತ್ಯುನ್ನತ ಸದಸ್ಯರಾಗಿದ್ದವರು. ಜರ್ಮನ್ ಗೆಸ್ಟಾಪೋ, SS, ವೆಯರ್ಮಾಕ್ಟ್ (ಜರ್ಮನ್ ಸೈನ್ಯ) ಮತ್ತು ಲುಫ್ತ್ವಾಫ್ಫೇ (ಜರ್ಮನ್ ವಾಯುಪಡೆ)ಗಳಿಗೆ ಸಮವಸ್ತ್ರ ವಿನ್ಯಾಸ ಮಾಡಿಕೊಟ್ಟದ್ದು ಇಂದಿನ ಪ್ರಖ್ಯಾತ ಡಿಸೈನರ್ ಹೌಸ್ ಹ್ಯೂಗೋ ಬಾಸ್’ನ ಸ್ಥಾಪಕ ಹ್ಯೂಗೋ ಫರ್ಡಿನಾಂಡ್ ಬಾಸ್. ಸ್ವತಃ ಹಿಟ್ಲರನ ಮಹಾನ್ ಅಭಿಮಾನಿ ಹಾಗೂ ನಾಜೀ ಪಾರ್ಟಿಯ ಸದಸ್ಯನಾಗಿದ್ದ ಹ್ಯೂಗೋ ಜರ್ಮನ್ನರಿಗೆ ಚಂದದ ಸಮವಸ್ತ್ರವನ್ನು ಮಾಡಿಕೊಟ್ಟ. ಇದರ ತಯಾರಿಕೆಗೆ ಯಹೂದಿ ಸೆರೆಯಾಳುಗಳ ಬಳಕೆ ಪುಗಸಟ್ಟೆಯಾಗಿ ಆಗುತ್ತಿತ್ತು ಎಂದೇನೂ ಹೇಳಬೇಕಿಲ್ಲ ತಾನೇ? 30ರ ದಶದಕಲ್ಲಿ ಕೋಕಾ-ಕೋಲಾವನ್ನು ಜರ್ಮನಿಗೆ ತಂದ, ತನ್ನ ವಾರ್ಷಿಕ ಮೀಟಿಂಗುಗಳಲ್ಲಿ ಹಾಕೆನ್ಕ್ರೂಯೆಜ್ (ನಾಜಿಗಳ ‘ಸ್ವಸ್ತಿಕ’ ಚಿಹ್ನೆ) ಅನ್ನು ಎಗ್ಗಿಲ್ಲದೇ ಬಳಸುತ್ತಿದ್ದ ಮ್ಯಾಕ್ಸ್ ಕೀತ್ ಹಿಟ್ಲರನ ಪ್ರತಿಯೊಂದು ಮಾತನ್ನೂ ಅನುಮೋದಿಸುತ್ತಿದವ. ಮಹಾಯುದ್ಧಕ್ಕೆ ಅಮೇರಿಕಾ ಕಾಲಿಟ್ಟು, ತನ್ನ ವೈರಿಗಳ ಪಟ್ಟಿಯಲ್ಲಿ ಕೀತ್’ನನ್ನೂ ಸೇರಿಸಿದಾಗ ಜರ್ಮನಿಗೆ ಕೋಕಾಕೋಲಾದ ಸರಬರಾಜು ನಿಂತುಹೋಯ್ತು. ಆಗ ಕೀತ್ ತನ್ನದೇ ಆದ ಪಾನೀಯವನ್ನು ಪ್ರಾರಂಭಿಸಿದ. ಕಿತ್ತಳೆ ಬಣ್ಣದ ಈ ಸಿಹಿಪಾನೀಯದ ಹೆಸರೇ ಫಾಂಟಾ. ಯುದ್ಧದ ನಂತರ ತನ್ನ ಕ್ಷಮಾದಾನಕ್ಕಾಗಿ ಕೀತ್ ಫಾಂಟಾವನ್ನು ಕೋಕಾಕೋಲಾ ಕಂಪನಿಗೆ ಮಾರಿ ಬದುಕಿಕೊಂಡ. ಮುಂದಿನ ಬಾರಿ ಫಾಂಟಾ ಕುಡಿಯುವಾಗ ಈ ಕಥೆ ನೆನಪಿರಲಿ.

ಹ್ಯೂಗೋ ಬಾಸ್ ವಿನ್ಯಾಸದ ಜರ್ಮನ್ ಸಮವಸ್ತ್ರಗಳು

ಇವಿಷ್ಟೇ ಅಲ್ಲದೇ ಕೊಡಾಕ್, ಅಸೋಸಿಯೇಟೆಡ್ ಪ್ರೆಸ್, ಲೋರಿಯಾಲ್, ಬಾಶ್ ಮುಂತಾದ ಹಲವಾರು ಕಂಪನಿಗಳು ಮುಕ್ತವಾಗಿ ಹಿಟ್ಲರನನ್ನು ಬೆಂಬಲಿಸಿದ್ದೂ ಅಲ್ಲದೇ, ಇಂದಿಗೂ ಕ್ಷಮೆ ಕೂಡಾ ಕೇಳಿಲ್ಲ.

ಇದಿಷ್ಟು ಜರ್ಮನ್ ಕಂಪನಿಗಳ ಕತೆಯಾದರೆ, ಕ್ಯಾಪಿಟಲಿಸಂನ ಕೂಸುಗಳಾದ ಜಗತ್ತಿನಾದ್ಯಂತ ಬಹಳಷ್ಟು ಕಂಪನಿಗಳೂ ಈ ಯುದ್ದದಲ್ಲಿ ಹಾಗೂ ಮಾರಣಹೋಮದಲ್ಲಿ ಒಂದಲ್ಲಾ ಒಂದುರೀತಿಯಲ್ಲಿ ಭಾಗವಾಗಿದ್ದವು. ಅಮೇರಿಕದಲ್ಲಿ ವಾಸವಾಗಿದ್ದ ಜರ್ಮನ್ನರಿಗೆ ನಾಝಿ ವಾರ್ ಬಾಂಡ್’ಗಳನ್ನು ಮಾರಿ ಹಣ ಎತ್ತಿದ್ದು ಅಮೇರಿಕದ ಚೇಸ್ ನ್ಯಾಷನಲ್ ಬ್ಯಾಂಕ್ (ಈಗಿನ ಜೆಪಿಮಾರ್ಗನ್-ಚೇಸ್). ಜರ್ಮನ್ನರ ಮಾರಕ V2 ರಾಕೆಟ್ಟುಗಳಿಗೆ ಟರ್ಬೈನ್ ಮತ್ತು ಹಲವಾರು ಬಾಂಬರ್ ವಿಮಾನಗಳಿಗೆ ಭಾಗಗಳನ್ನು ಒದಗಿಸಿದ್ದು ಫೋರ್ಡ್ ಕಂಪನಿ. ಸೆರೆಯಲ್ಲಿದ್ದ ಯಹೂದಿಗಳನ್ನು ಗುಲಾಮರನ್ನಾಗಿ ಕೆಲಸಕ್ಕೆ ಬಳಸಿಕೊಂಡದ್ದು ಇವತ್ತು ವಿಶ್ವದ ಅತಿದೊಡ್ಡ ಕಂಪನಿಗಳಲ್ಲೊಂದಾದ ನೆಸ್ಟ್ಲೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲೊಬನಾಗಿದ್ದ ಹೆನ್ರಿ ಫೋರ್ಡ್, ಸ್ಟಾಂಡರ್ಡ್ ಆಯಿಲ್ ಕಂಪನಿಯ ಮಾಲೀಕ್ ವಾಲ್ಟರ್ ಟೀಗಲ್, ಸ್ವೀಡನ್ನಿನ ಐಕಿಯಾ ಕಂಪನಿಯ ಸ್ಥಾಪಕ ಇಂಗ್ವಾರ್ ಕಂಪ್ರಾಡ್, ಕೋಕ್’ನ ರಾಬರ್ಟ್ ವುಡ್ರಫ್ ಇವರೆಲ್ಲಾ ಒಂದಲ್ಲಾ ಒಂದು ಸಮಯದಲ್ಲಿ ಹಿಟ್ಲರನನ್ನು ನೇರವಾಗಿಯೋ, ಪರೋಕ್ಷವಾಗಿಯೋ ಬೆಂಬಲಿಸಿದವರೇ.

ಹಿಟ್ಲರನೊಂದಿಗೆ ರಾಬರ್ಟ್ ಬಾಶ್

ಇವತ್ತು ಈ ಕಂಪನಿಗಳು ತಮ್ಮ ರಕ್ತಸಿಕ್ತ ಕೈಗಳನ್ನು ತೊಳೆದುಕೊಂಡು ಸ್ವಚ್ಚವಾಗಿರಬಹುದು. ಆದರೆ ಆ ಯಾತನಾಶಿಬಿರಗಳಲ್ಲಿ ಉಸಿರುಗಟ್ಟಿ ಸತ್ತ ದಶಲಕ್ಷಗಟ್ಟಲೇ ಯಹೂದಿಗಳ ಶಾಪ ಎಂದಿಗೂ ಇವರಿಂದ ದೂರವಾಗಲಾರದು.

0 comments on ““ಕೆಲ ಆದರ್ಶಪ್ರಾಯ ಕಂಪನಿಗಳ ಕರಾಳ ಇತಿಹಾಸ”

Leave a Reply

Your email address will not be published. Required fields are marked *