
ಹಿಂದಿನ (ಪುರುಷಸೂಕ್ತ – 3) ಪೋಸ್ಟಿಗೆ ಪೂರಕವಾಗಿ:
ಕುಡಿಯೋದು. ಕುಡಿದಾದ್ಮೇಲೆ ಹೆಂಗೆ ಮ್ಯಾನೇಜ್ ಮಾಡ್ಕೊಳ್ಳೋದು ಅಂತಾ ಕಲ್ತಿದ್ರೆ ಒಳ್ಳೇದು
ಕುಡಿಯೋದೇ ಕಲಿತಿಲ್ಲ ಅಂತಾದ್ರೆ ಇನ್ನೂ ಒಳ್ಳೇದು
.
.
.
ಯಾಕಂದ್ರೆ ಕುಡಿತ ಕಲಿಯೋದು ತಾಕತ್ತು*.
ಕುಡಿಯದೆಯೂ ಬದುಕಬಲ್ಲೆ ಅಂತಾ ರಿಯಲೈಸ್ ಮಾಡ್ಕೊಳ್ಳೋದು, ಟ್ಯಾಲೆಂಟು. ಜೊತೆಗೇ ಡಬಲ್ ತಾಕತ್ತು.
*ತಾಕತ್ತು ಅಂತಾ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, believe me, ಅಲ್ಕೋಹಾಲು ಯಾವ ರೂಪದಲ್ಲೇ ಆಗಲಿ (ಬಿಯರ್ರು, ರಮ್, ಜಿನ್ನು, ಬ್ರಾಂಡಿ, ಟೆಕೀಲಾ, ವೋಡ್ಕಾ, ವಿಸ್ಕಿ, ವೈನು, ಅಬ್ಸಿಂಥ್, ಸಾರಾಯಿ ಯಾವುದೇ ಆಗಲಿ) ಕುಡಿಯಲು ಕಹಿ. ವಾಸನೆ ತಡೆಯಾಗದಷ್ಟು ಕೆಟ್ಟದ್ದು. ಅದೇ ಕುಡಿತದ ಮೊದಲ ತಡೆಗೋಡೆ, ಒಂತರಾ ಹರ್ಡಲ್ ಇದ್ದಂಗೆ. ಕುಡಿಯುತ್ತಿವವರಲ್ಲಿ ಕೆಲವರ ಮುಖ ನೋಡಿ ಗೊತ್ತಾಗುತ್ತೆ. ಆ ಸಿಪ್ ಒಳಗೆ ಹೋಗೋವಾಗ ಮುಖ ಕಿವುಚಿ, ನಾಲಿಗೆ ಹೊರಗಿಟ್ಟು, ತಲೆ ಕೊಡಕಿ ಏನೇನೋ ಮಾಡ್ತಾರೆ. ಅದರರ್ಥ ಅವರು ಕುಡಿತವನ್ನ ಎಂಜಾಯ್ ಮಾಡೋಕೆ ಕುಡಿಯುತ್ತಿರೋದಲ್ಲ. ಏನನ್ನೋ ಮರೆಯೋಕೆ ಅಥವಾ ಇನ್ನೇನರಿಂದಲೋ ಹೊರಬರೋಕೆ ಕುಡಿಯುತ್ತಿವವರು ಅಥವಾ ಕುಡಿಯೋಕೆ ಹೋದ್ರೆ ಫ್ರೆಂಡ್ಸ್ ಜೊತೆಗಿರಬಹುದು ಅನ್ನೋ ಕಾರಣಕ್ಕೆ ಕುಡಿಯುತ್ತಿರುವವರು. ಅದಕ್ಕೇ ಅವರಿಗೆ ಗುಟುಕು ಒಳಹೋದಕೂಡಲೇ ಆ ರುಚಿಯನ್ನ ನಾಲಿಗೆಯಿಂದ ತೆಗೆಯೋಕೆ ಉಪ್ಪಿನಕಾಯಿ ಬೇಕು (ಕುಡಿಯುವಾಗ ಉಪ್ಪಿನಕಾಯಿ ಬೇಕು ಹೌದು….I agree. ಆದರೆ ಅದು ಡ್ರಿಂಕಿನ ರುಚಿಯನ್ನ ಮರೆಸಲಿಕ್ಕಲ್ಲ )
ನೂರಕ್ಕೆ ಎಂಬತ್ತು ಜನ ಕುಡಿಯೋದು ಆ ಡ್ರಿಂಕಿನ ಸ್ಮೆಲ್ಲಿಗೋ, ರುಚಿಗೋ ಅಲ್ಲ. ಆ ನೀರು ಒಳಗೆ ಹೋದಮೇಲೆ, ರಕ್ತದೊಂದಿಗೆ ಸೇರಿದಮೇಲೆ ನಿಧಾನವಾಗಿ ಮತ್ತೇರಿಸುತ್ತಲ್ಲಾ ಅದಕ್ಕಾಗಿ. ನಿಧಾನವಾಗಿ ನಿಮ್ಮದೇ ದೇಹದ ಅಂಗಾಂಗಗಳನ್ನ ನಿಮ್ಮ ನಿಯಂತ್ರಣದಿಂದ ಹೊರಗಿಡುತ್ತಲ್ಲಾ ಆ ವಿಚಿತ್ರ ಝೋನ್ ಅನ್ನು ತಲುಪುವುದಕ್ಕಾಗಿ.
ಇನ್ನೊಂದು ಗುಂಪಿದೆ. ಅವರಂತೂ ಕುಡೀಬೇಕು ಅಂತಾ ಕುಡಿಯೋರು. ಕುಡಿದು ಕುಡಿದು ಒಂತರಾ ಚಟ ಬಂದೋಗಿದೆ. ಕೈ, ನಾಲಿಗೆ, ಕಾಲು ಇವೆಲ್ಲಾ ಕಂಟ್ರೋಲಲ್ಲಿ ಇದ್ರೇನೇ ಒಂತರಾ ವಿಚಿತ್ರ ಫೀಲಿಂಗು ಅವರಿಗೆ. ಅವೆಲ್ಲಾ ಲೂಸ್ ಲೂಸಾಗಿಯೇ ಇರಬೇಕು. ಸಂಜೆ ಏಳುಘಂಟೆಯಾದಮೇಲೆ ಮನೇಲಿ ಇದ್ರೆ ಹೆಂಡ್ತಿ ಕಿರಿಕಿರಿ ಮಾಡ್ತಾಳೆ ಅಂತಲೋ, ಮಗ ಉಗೀತಾನೇ ಅಂತಲೋ ಎದ್ದುಕೊಂಡು ಬಾರಿಗೆ ಹೋಗೋರು.
ಆ ವಾಸನೆ ರುಚಿ, ಎಫೆಕ್ಟು, ಲೂಸ್-ನೆಸ್ಸು ಇವೆಲ್ಲವನ್ನೂ ನೋಡಿ. ತಡವಿ, ಎಡವಿ, ಬಿದ್ದು ಎದ್ದ ನಂತರವಷ್ಟೇ ಕುಡಿತವನ್ನ ನೀವು ಎಂಜಾಯ್ ಮಾಡೋಕೆ ಸಾಧ್ಯ. ಈ ಗಡಿಗಳನ್ನೆಲ್ಲಾ ದಾಟಿದ್ಮೇಲೆ ಮಾತ್ರ ನಿಮಗೆ ವಿಸ್ಕಿಯಲ್ಲಿ ಹೇಜಲ್-ನಟ್’ನ ಪರಿಮಳ, ಸಂಬೂಕಾದಲ್ಲಿ ಸೋಂಪಿನ ಪರಿಮಳ ಹಾಗೂ ಯಾಗರ್-ಮೈಯಿಸ್ಟರಿನಲ್ಲಿ ಶುಂಟಿಯ ಪರಿಮಳ ಕಂಡುಹಿಡಿಯಲು ಹಾಗೂ ಎಂಜಾಯ್ ಮಾಡಲು ಸಾಧ್ಯ. ಅದೂ ಒಂದು ಅಥವಾ ಎರಡು ಪೆಗ್ಗಿಗೇ ಆ ಲವ್ ಅಫೇರನ್ನು ನಿಲ್ಲಿಸುವಷ್ಟು ತಾಕತ್ತಿದ್ದವನಿಗೆ ಮಾತ್ರ. ಈ ಕೆಟಗರಿಯಲ್ಲಿ ಡ್ರಿಂಕು ನರಮಂಡಲವನ್ನು ಕಂಟ್ರೋಲ್ ಮಾಡೋದಿರ್ಲಿ, ಕೈಯಿಡಕ್ಕೂ ಹೆದರತ್ತೆ. ಯಾಕಂದ್ರೆ ಆಲ್ಕೋಹಾಲೇ ಕುಡಿಯುವವನ ಕಂಟ್ರೋಲಲ್ಲಿರುತ್ತೆ. ಈ ಸಂಖ್ಯೆ ಬಹುಷಃ ನನಗನ್ನಿಸಿದಂತೆ ತೀರಾ ಕಡಿಮೆ. ನಮ್ಮಲ್ಲಿ ಬಹಳಷ್ಟು ಜನ ನಾವೂ ಇದೇ ಕೆಟಗರಿ ಅಂದ್ಕೊಂಡಿತಾರೆ. ಅವರಿಗೆ ಒಂದು ಹಾಫ್ ಗ್ಲಾಸ್ ಸಿಂಗಲ್ ಮಾಲ್ಟ್ ವಿಸ್ಕಿ ಕೊಟ್ಟು ನೋಡಿ. ವಿಷಯ ಹೊರಗೆ ಬರುತ್ತೆ.
ನೀವು ಕುಡುಕರಲ್ಲಿ ಯಾವುದೇ ಕೆಟಗರಿಗೆ ಸೇರಿರಿ.
ಅದರಲ್ಲೇನೂ ಎದೆತಟ್ಟುವಂತಾ ಘನಕಾರ್ಯವೇನಿಲ್ಲ, “ಕುಡಿದಮೇಲೂ ನೀವೂ ನಿಜವಾದ ಗಂಡಸಿನಂತೆ ವರ್ತಿಸಿಬಲ್ಲಿರಿ” ಅನ್ನೋದೊಂದನ್ನು ಬಿಟ್ಟರೆ.
ನೆನಪಿರಲಿ, ಕುಡಿತಕ್ಕೂ, ಪ್ರತಿಭೆಗೂ ಯಾವ ಸಂಬಂಧವೂ ಇಲ್ಲ. ಎರಡು ನೈಂಟಿ ಹೊಡೆಸಿದ್ರೆ ಕವಿತೆ ಬರೀತಿನಿ, ಒಂದು ಬಿಯರ್ ಕುಡಿಸಿದ್ರೆ ಐಡಿಯಾ ಕೊಡ್ತೀನಿ ಅನ್ನೋದೆಲ್ಲಾ ಬರೀ ಬೂಸಿಯಷ್ಟೇ.