Friday, 26 April, 2024

“ಆರಾಮಕುರ್ಚಿ ಆಕ್ಟಿವಿಸ್ಟುಗಳ ಅಪ್ರಭುದ್ದ ಅಪಸವ್ಯಗಳಿಗೆ ಅಂತ್ಯವೆಂದು?”

Share post

ಮಾತು ಬೆಳ್ಳಿ, ಮೌನ ಬಂಗಾರವೆಂಬ ನಾಣ್ಣುಡಿಯನ್ನು ನೀವು ಕೇಳಿರಬಹುದು. ಯಾವಾಗ ಎಲ್ಲಿ ಏನನ್ನು ಎಷ್ಟು ಮಾತನಾಡಬೇಕು ಎಂದು ತಿಳಿದಿರಬೇಕಾದದ್ದು ಅತೀ ಮುಖ್ಯ. ಆಡಿದ ಮಾತು ಕಾಳ್ಗಿಚ್ಚಿನಂತೆ ಹರಡುವ ಈ ದಿನಗಳಲ್ಲಂತೂ ಇದು ಇನ್ನೂ ಹೆಚ್ಚು ಮುಖ್ಯ. ಸುಳ್ಳನ್ನು, ತಮಗೆ ಬೇಕಾದ ಸತ್ಯಗಳನ್ನೂ, ಅರೆಬೆಂದ ಸತ್ಯಗಳನ್ನೂ ಬೇಕಾಬಿಟ್ಟಿ ಹರಡುವ ಜನರ ಸಂಖ್ಯೆ ಇತ್ತೀಚೆಗೆ ತೀರಾ ಹೆಚ್ಚಾಗಿದೆ. ಇದರ ಜೊತೆಗೇ ಇಂತವರ ಸುಳ್ಸುದ್ಧಿಗಳ ಎದೆಸೀಳಿ ಸತ್ಯವನ್ನು ಹೊರತೆಗೆದು, ಈ ಸೆಲೆಕ್ಟಿವ್ ಹೋರಾಟಗಾರರ ಮುಖಕ್ಕೆ ಉಜ್ಜುವ ಪ್ರಯತ್ನಗಳೂ ಜೋರಾಗಿಯೇ ಸಾಗಿವೆ. ಈ ಕಾರಣದಿಂದಾಗಿಯೇ ಮಾತನಾಡುವಾಗ ಮೂರುಬಾರಿ ಯೋಚಿಸಿ ಮಾತನಾಡುವ ಅಗತ್ಯ ಇವತ್ತು ಹಿಂದೆಂದೆಗಿಂತಲೂ ಹೆಚ್ಚಾಗಿದೆ. ಆದರೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ವ್ಯಾನಿಟಿಬ್ಯಾಗ್ ಎಲ್ಲರ ಕಂಕುಳಲ್ಲೂ ಜೋತಾಡುತ್ತಿರುತ್ತೆ ನೋಡಿ. ಎಲ್ಲರಿಗೂ ಅದರಿಂದ ತಮ್ಮ ತಮ್ಮ ಅಭಿಪ್ರಾಯವನ್ನು ಹೊರತೆಗೆಯುವ ಧಾವಂತ.

ಮೊನ್ನೆ ಚಮೋಲಿ ಜಿಲ್ಲೆಯ ರೈನಿ ಗ್ರಾಮದ ತಪೋವನ್ ಪ್ರದೇಶದಲ್ಲಿ ಹಿಮನದಿಯೊಂದು ಒಡೆದು ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರಿ, ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರೀಪ್ರಮಾಣದ ಪ್ರವಾಹ ಉಂಟಾಯಿತು. ಮೇಘಸ್ಪೋಟ ಮತ್ತದರ ನಂತರಬಂದ ಪ್ರವಾಹದಿಂದ ರೈನಿ ಗ್ರಾಮದ ಸಮೀಪದಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಜಾಗದಲ್ಲಿ ನೀರು ಉಕ್ಕಿ ಹರಿದು ಪ್ರದೇಶದ ನದೀತೀರದಲ್ಲಿದ್ದ ಅನೇಕ ಮನೆಗಳು ನಾಶವಾದವು. ನಾಪತ್ತೆಯಾದ ಗ್ರಾಮಸ್ಥರನ್ನು ಮತ್ತು ನಿರ್ಮಾಣ ಕಾರ್ಮಿಕರನ್ನು ಪತ್ತೆಹಚ್ಚಲು ಉತ್ತರಾಖಂಡ ರಾಜ್ಯಸರ್ಕಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರೆ, ಆರಾಮಕುರ್ಚಿಯಲ್ಲಿ ಪವಡಿಸಿದ ಪರಿಸರವಾದಿಗಳ ಗುಂಪೊಂದು ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿಯೇ ಈ ಅನಾಹುತ ಸಂಭವಿಸಿದ್ದು ಅಂತಾ ಸಾಮಾಜಿಕ ವೇದಿಕೆಗಳಲ್ಲಿ ಸರ್ಕಾರವನ್ನು ದೂಷಿಸಲು ಪ್ರಾರಂಭಿಸಿತು.

ಈ ಸ್ವಯಂಘೋಷಿತ ಪರಿಸರವಾದಿಗಳು ಮತ್ತು ಪರಿಸರತಜ್ಞರ ಪ್ರಕಾರ, ಚಮೋಲಿಯಲ್ಲಿ ಭಾನುವಾರ ಸಂಭವಿಸಿದ ಅನಾಹುತಕ್ಕೆ ಅಣೆಕಟ್ಟುಗಳ ನಿರ್ಮಾಣವೇ ಕಾರಣವಂತೆ. ಈ ಹಸಿರು ಕಾರ್ಯಕರ್ತರು, ಸಾಮಾನ್ಯವಾಗಿ ಎಲ್ಲ ಪರಿಹಾರಗಳಲ್ಲೂ ಸಮಸ್ಯೆ ಹುಡುಕುವ ನಮ್ಮ ತಥಾಕಥಿತ ಎಡ-ಉದಾರವಾದಿ ಮಾಧ್ಯಮಗಳೊಂದಿಗೆ ಸೇರಿಕೊಂಡು ಉತ್ತರಾಖಂಡದ ದುರಂತದ ಸ್ವರೂಪದ ಬಗ್ಗೆ ತಪ್ಪು ಮಾಹಿತಿ ನೀಡಲು ಶುರುಮಾಡಿಕೊಂಡರು ಜೊತೆಗೇ ಈ ಅನಾಹುತಕ್ಕೆ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲು ಮುಂದಾದರು.


ಬಾಲಿವುಡ್‌ನ ಮಾಜಿ ನಟಿ(ಯೆಂದು ಕರೆಸಿಕೊಳ್ಳುವ) ದಿಯಾ ಮಿರ್ಜಾ, ಚಮೋಲಿ ದುರಂತಕ್ಕೆ ಅಣೆಕಟ್ಟುಗಳನ್ನು ದೂಷಿಸುತ್ತಾ ತನ್ನ ಟ್ವಿಟ್ಟರ್ ಟೈಮ್‌ಲೈನ್‌ನಲ್ಲಿ “ಹಿಮಾಲಯ ಪರ್ವತಶ್ರೇಣಿಯಲ್ಲಿ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವುದೇ ಇದಕ್ಕೆ ಕಾರಣ” ಎಂದು ಪ್ರಾರಂಭಿಸಿ ಟ್ವೀಟ್‌ಗಳ ಸರಣಿಯನ್ನೇ ಪೋಸ್ಟ್ ಮಾಡುತ್ತಾ ತನಗೆ ನೈಸರ್ಗಿಕ ಅಪಾಯಗಳ ಬಗ್ಗೆ ಅಥವಾ ವಿಪತ್ತು ನಿರ್ವಹಣೆಯ ಬಗ್ಗೆ ಏನೂ ತಿಳಿದಿಲ್ಲವೆಂದು ಜಗತ್ತಿಗೆ ಮತ್ತೊಮ್ಮೆ ತಿಳಿಸಿಕೊಟ್ಟರು. ಆಕೆಯ ಪ್ರಕಾರ, ಚಮೋಲಿ ದುರಂತವು ಕಾಡುಗಳ ನಾಶ, ಅಣೆಕಟ್ಟುಗಳ ಹೆಸರಲ್ಲಿ ಪರ್ವತಗಳನ್ನು ಕತ್ತರಿಸುವ ಮತ್ತು ಭೂಮಿಯ ಒಡಲನ್ನು ಬಗೆಯುವ ಕಾರ್ಯದೊಂದಿಗೆ, ಜಾಗತಿಕ ಹವಾಮಾನ ಬದಲಾವಣೆಯೂ ಸೇರಿ ಈ ಅನಾಹುತಕ್ಕೆ ಎಣೆಮಾಡಿಕೊಟ್ಟಿದೆ. ಇಂತಹುದೊಂದು ನಿಲುಮೆಯನ್ನು ಕೇವಲ ದಿಯಾ ಮಿರ್ಜಾ ಮಾತ್ರವಲ್ಲ, ಎಡ-ಉದಾರವಾದಿಗಳು, ಕಾಂಗ್ರೆಸ್ ಬೆಂಬಲಿಗರು ಮತ್ತು ಅದರ ಟ್ರೊಲ್ ಸೈನ್ಯ ಕೂಡಾ ಚಮೋಲಿ ದುರಂತಕ್ಕೂ, ಅಣೆಕಟ್ಟುಗಳ ನಿರ್ಮಾಣಕ್ಕೂ ಸಂಬಂಧ ಕಲ್ಪಿಸಿ, ಯಥಾಪ್ರಕಾರ ಸರ್ಕಾರವನ್ನು ದೂಷಿಸುವ ಕೆಲಸವನ್ನು ಮುಂದುವರೆಸಿದರು.

ದಿಯಾಳ ಟ್ವೀಟ್ ಬಂದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಜೊತೆ ಕೆಲಸ ಮಾಡಿದ್ದ ಮಾಜಿ ಪತ್ರಕರ್ತ ಹಾಗೂ ಹಿರಿಯ ಟ್ರೋಲ್ ಮ್ರಿಣಲ್ ಪಾಂಡೆ, ಉಗ್ರ-ಎಡ ಪೋರ್ಟಲ್ ‘ಸ್ಕ್ರಾಲ್’ಗಾಗಿ ಕೆಲಸ ಮಾಡುತ್ತಿರುವ ‘ಪತ್ರಕರ್ತೆ’, ಸುಪ್ರಿಯಾ ಶರ್ಮಾ, ಕಾಂಗ್ರೆಸ್ ಮುಖಂಡ ಸತ್ಯಜೀತ್ ತಂಬೆ ಮುಂತಾದವರು ಸೇರಿಕೊಂಡು “ಸೂಕ್ಷ್ಮ ಪರಿಸರ ವಲಯವನ್ನು ಪ್ರವಾಸಿತಾಣವಾಗಿ ಬಿಂಬಿಸುವುದನ್ನೂ, ಅದನ್ನು ‘ದೇವ್ ಭೂಮಿ’ ಎಂದೆಲ್ಲಾ ಜಾಹೀರಾತು ಕೊಡುವುದನ್ನೂ ನಿಲ್ಲಿಸಬೇಕು. ರಸ್ತೆಗಳ ಅಗಲೀಕರಣ, ದೊಡ್ಡ ದೊಡ್ಡ ಜಲ ಮತ್ತು ವಿದ್ಯುತ್ ಯೋಜನೆಗಳಿಂದಾಗಿ ಉತ್ತರಾಖಂಡದ ಲಕ್ಷಾಂತರ ಕುಟುಂಬಗಳ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತಿವೆ. ಅಣೆಕಟ್ಟು ಮತ್ತು ಹೆದ್ದಾರಿ ಯೋಜನೆಗಳ ಮೂಲಕ ಎಲ್ಲಾ ಪಕ್ಷದ ರಾಜಕಾರಣಿಗಳೂ ಉತ್ತರಾಖಂಡದಲ್ಲಿ ಹಣ ಸಂಪಾದಿಸಿದ್ದಾರೆ. ನಾವು ಜಾಗತಿಕ ತಾಪಮಾನ ಏರಿಕೆ ಮತ್ತು ಅಣೆಕಟ್ಟು ನಿರ್ಮಾಣಗಳ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ಪರಿಗಣಿಸುವ ಸಮಯ ಈಗ ಹಿಂದೆಂದಿಗಿಂತಲೂ ತುರ್ತಾಗಿದೆ” ಎಂದು ಟ್ವಿಟರ್ ಆಂದೋಲನಕ್ಕೆ ಕರೆಕೊಟ್ಟರು. ಇದನ್ನೇ ಆಧಾರವಾಗಿಟ್ಟುಕೊಂಡು ಉತ್ತರಾಖಂಡ ಸರ್ಕಾರ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ‘ಇದೇನಾ ಅಚ್ಚೇದಿನ್?’ ಎಂಬ ಟ್ವಿಟರ್ ಸ್ಟಾರ್ಮ್ ಪ್ರಾರಂಭವಾಯ್ತು.

ಆದರೆ ನಿಜವಾಗಿಯೂ ನಡೆದದ್ದು ನಮ್ಮ ಪರಿಸರ‘ತಜ್ಞರ’ ಹೇಳಿಕೆಗೆ ವಿರುದ್ಧವಾಗಿ. ಆಗಿದ್ದೇನು? ತಪೋವನ್ ಪ್ರದೇಶದ ರೈನಿ ಗ್ರಾಮದ ಹತ್ತಿರ ಆದ ಮೇಘಸ್ಪೋಟ, ಆ ಪ್ರದೇಶದಲ್ಲಿದ್ದ ಹಿಮನದಿಯೊಂದರ ಒಡೆಯುವಿಕೆಗೆ ದಾರಿ ಮಾಡಿಕೊಟ್ಟಿತು. ಮೇಘಸ್ಪೋಟದಿಂದ ಇಳಿದುಬಂದ ನೀರಿನ ಜೊತೆಗೆ ಹಿಮನದಿಯ ತುಣುಕುಗಳು ಮಾತ್ರವಲ್ಲ, ಅದರೊಳಗೆ ಸಿಲುಕಿರಬಹುದಾಗಿದ್ದ ಅಪಾರ ಪ್ರಮಾಣದ ನೀರೂ ಸೇರಿ ಕಣಿವೆಯ ಕೆಳಭಾಗದೆಡೆಗೆ ಧಾವಿಸಿ ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟದ ಏರಿಕೆಗೆ ಕಾರಣವಾಯಿತು. ಈ ಒಡೆದ ಹಿಮನದಿಯ ಬಳಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಲೂ ಇಲ್ಲ, ಅಲ್ಲಿ ಯಾವುದೇ ಚಟುವಟಿಕೆ ಸಾಧ್ಯವೂ ಇಲ್ಲ. ತೀರಾ ನೈಸರ್ಗಿಕ ಕಾರಣಗಳಿಂದಷ್ಟೇ ಹಿಮನದಿಯ ಒಡೆತ ಸಂಭವಿಸಿದೆ, ಮತ್ತದಕ್ಕೆ ಯಾವ ಅಣೆಕಟ್ಟು ಅಥವಾ ರಸ್ತೆಯ ನಿರ್ಮಾಣವಾಗಲೀ, ಅರಣ್ಯನಾಶವಾಗಲೀ ನೇರಕಾರಣವಲ್ಲ.

ಈ ಭಾರೀ ಆಕಸ್ಮಿಕ ಪ್ರವಾಹ ತನ್ನ ಹಾದಿಯಲ್ಲಿದ್ದ ವಿದ್ಯುತ್ ಯೋಜನಾ ಸ್ಥಾವರ ಮತ್ತು ನದೀದಂಡೆಯಲ್ಲಿರುವ ಹತ್ತಾರು ಮನೆಗಳನ್ನು ನಾಶಪಡಿಸಿತು. ಸಧ್ಯಕ್ಕೆ ನೂರಾರು ಜನ ಕಾಣೆಯಾಗಿದ್ದಾರೆ ಮತ್ತು ಇಪ್ಪತ್ತೇಳು ಜನರ ಸಾವಿಗೂ ಈ ಅವಘಡ ಸಾಕ್ಷಿಯಾಗಿದೆ. ಉತ್ತರಾಖಂಡ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಪ್ರವಾಹ ನಿರ್ವಹಣಾ ಕಾರ್ಯಾಚರಣೆ ಕೈಗೊಳ್ಳದಿದ್ದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು. ಪ್ರವಾಹವು ಕೆಳಭಾಗದ ಪ್ರದೇಶಗಳನ್ನು ತಲುಪುತ್ತದೆ ಎಂದು ತಿಳಿದತಕ್ಷಣ, ರಾಜ್ಯಸರ್ಕಾರ ನೀರಿನ ಹರಿವನ್ನು ನಿಯಂತ್ರಿಸಲು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಂಡಿತು. ತೆಹ್ರಿಯಂತಹ ದೊಡ್ಡ ಅಣೆಕಟ್ಟುಗಳು ಮತ್ತು ಬೇರೆ ಜಲಾಶಯಗಳನ್ನು ಬಳಸಿಕೊಂಡು ನದಿಯ ಕೆಳದಂಡೆಯಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಲಾಯ್ತು. ಕ್ಷಣಕ್ಷಣಕ್ಕೂ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ “ರಿಷಿಗಂಗಾ ಮತ್ತು ಅಲಕಾನಂದ ನದಿಗಳಲ್ಲಿ ಹೆಚ್ಚುತ್ತಿರುವ ನೀರಿನ ಹರಿವನ್ನು ಸುಗಮಗೊಳಿಸಲು ಮೇಲ್ದಂಡೆಯಲ್ಲಿರುವ ತೆಹ್ರಿ ಅಣೆಕಟ್ಟಿನಿಂದ ಹರಿವನ್ನು ನಿಲ್ಲಿಸಿ, ಕೆಳದಂಡೆಯಲ್ಲಿರುವ ಶ್ರೀನಗರ್ ಅಣೇಕಟ್ಟಿನಿಂದ ಹರಿವನ್ನು ಹೆಚ್ಚಿಸಲಾಗಿದೆ. ರಾಜ್ಯದ ವಿಪತ್ತು ನಿರ್ವಹಣಾ ಕಾರ್ಯವಿಧಾನವನ್ನು ಆಕ್ಟಿವೇಟ್ ಮಾಡಲಾಗಿದೆ ಮತ್ತೀಗ ಪರಿಸ್ಥಿತಿ ತಹಬಂದಿಯಲ್ಲಿದೆ” ಎಂದು ಟ್ವಿಟರಿನಲ್ಲಿ ಹೇಳಿಕೆ ಹೇಳಿದರು.

ತಪೋವನದ ರೈನಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟು ನಾಶವಾದದ್ದು ಹೌದು. ರಭಸದಿಂದ ಬಂದು ಈ ಅಣೆಕಟ್ಟನ್ನು ನಾಶಮಾಡಿದ ರಿಷಿಗಂಗಾನದಿಯ ಹೆಚ್ಚುವರಿ ನೀರು ಅಲಕಾನಂದ ನದಿಗೆ ಸೇರುತ್ತದೆ. ಅಲಕನಂದಾ ಕೂಡಾ ರಭಸದಿಂದ ಹರಿಯುವ ತುಂಬುನದಿ. ಇದರಿಂದಾಗಿ ನದಿಯ ಕೆಳಭಾಗದಲ್ಲಿ ಪ್ರವಾಹದ ತೀವ್ರತೆ ಹೆಚ್ಚಾಗುತ್ತದೆ. ರಿಷಿಗಂಗಾದ ಪ್ರವಾಹದ ನೀರಿಗೆ ಅನುಕೂಲವಾಗುವಂತೆ ರಾಜ್ಯಸರ್ಕಾರ ತೆಹ್ರಿ ಅಣೆಕಟ್ಟಿನಿಂದ ಹರಿವನ್ನು ತಿರುಗಿಸಿ, ರಿಷಿಗಂಗಾದಿಂದ ಬಂದ ನೀರಿಗೆ ಜಾಗಮಾಡಿಕೊಟ್ಟಿದ್ದರಿಂದಾಗಿ ಪ್ರವಾಹದ ತೀವ್ರತೆ ಕಡಿಮೆಯಾಯಿತು. ನಿಜಕ್ಕೂ ಹೇಳಬೇಕೆಂದರೆ ಉತ್ತರಾಖಂಡದ ಅಣೆಕಟ್ಟುಗಳು ಮತ್ತು ಸರ್ಕಾರದ ಪ್ರವಾಹ ನಿಯಂತ್ರಣ ವ್ಯವಸ್ಥೆ ಮತ್ತು ಪ್ರವಾಹದ ಪರಿಣಾಮಕಾರಿ ನಿರ್ವಹಣೆಯಿಂದಾಗಿಯೇ ನಿನ್ನೆ ಉತ್ತರಾಖಂಡದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.

ನಮ್ಮಲ್ಲಿ ಹಲವಾರು ಜನರಿಗೆ ಪರ್ವತಪ್ರದೇಶಗಳಲ್ಲಿ ಅಣೆಕಟ್ಟು ಕಟ್ಟಬಾರದು ಎಂಬ ಅಭಿಪ್ರಾಯವಿದೆ. ಪರ್ವತಗಳು ಸೂಕ್ಷ್ಮಪ್ರದೇಶಗಳು ಎಂಬುದು ನಿಜ. ಆದರೆ ಇಂದಿನ ಸಿವಿಲ್ ಮತ್ತು ಮೆಕಾನಿಕಲ್ ಅಭಿಯಂತರಿಕೆ ನಾವಂದುಕೊಂಡದ್ದಕ್ಕಿಂತಾ ಬಹಳವೇ ಮುಂದುವರಿದಿದೆ. ಜೊತೆಗೇ ಇನ್ನೊಂದು ವಿಚಾರ. ಜಾಗತಿಕ ಹವಾಮಾನ ಬದಲಾವಣೆ, ಮತ್ತು ತಾಪಮಾನ ಏರಿಕೆ ನಾವು ಕಡೆಗಣಿಸಲಾಗದ ಸತ್ಯ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನದಿಂದಾಗಿ, ಧ್ರುವಗಳಲ್ಲಿರುವ ಹಿಮ ಮಾತ್ರವಲ್ಲ, ಪರ್ವತಪ್ರದೇಶಗಳಲ್ಲಿರುವ ಹಿಮವೂ ಮೊದಲಿಗಿಂತಾ ಹೆಚ್ಚೇ ಕರಗುತ್ತಿದೆ. ಇದರಿಂದಾಗಿ ಇಡೀ ಉತ್ತರ ಮತ್ತು ಈಶಾನ್ಯ ಭಾರತದ ನದಿಗಳ ಹರಿವು ಮತ್ತು ಹರವು ಹೆಚ್ಚಾಗುತ್ತಲೂ ಬದಲಾಗುತ್ತಲೂ ಇದೆ. ಇವನ್ನು ನಿಯಂತ್ರಿಸಲು ಅಣೆಕಟ್ಟುಗಳನ್ನು ಕಟ್ಟುವುದು ಇಂದಿನ ಅಗತ್ಯ. ಮತ್ತು ಈ ಕ್ರಮಗಳನ್ನು ಕೇವಲ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲಾ ರಾಷ್ಟಗಳೂ ತುರ್ತಾಗಿ ಮಾಡುತ್ತಿವೆ. ಸ್ವಿಸ್ ಆಲ್ಫ್ಸ್ ಪರ್ವತಶ್ರೇಣಿಗಳಲ್ಲಿ ಹೆಚ್ಚುತ್ತಿರುವ ಹಿಮಕರಗುವಿಕೆಯನ್ನು ನಿಯಂತ್ರಿಸಲು ನೂರಾರು ಮಧ್ಯಮ ಮತ್ತು ದೊಡ್ಡಗಾತ್ರದ ಅಣೆಕಟ್ಟುಗಳನ್ನು ಸ್ವಿಟ್ಖರ್ಲೆಂಡ್ ಮತ್ತು ಇಟಲಿ ಸರ್ಕಾರಗಳು ನಿರ್ಮಿಸುತ್ತಿವೆ. ಈ ಅಣೆಕಟ್ಟುಗಳು ನೀರಿನ ಹರಿವನ್ನು ನಿಯಂತ್ರಿಸುವುದಲ್ಲದೇ, ಜಲವಿದ್ಯುತ್ತಿನ ದೊಡ್ಡ ಮೂಲವೂ ಆಗಿ ಕೆಲಸಮಾಡುತ್ತಿವೆ.

ಹೌದು ಜಾಗತಿಕ ಹವಾಮಾನ ಬದಲಾವಣೆಯೆಂಬುದು ಸುಳ್ಳಲ್ಲ. ಮೊನ್ನೆ ಹಿಮನದಿ ಒಡೆದದ್ದೂ ಸುಳ್ಳಲ್ಲ. ನಿಜವೇ. ಆದರೆ ಪ್ರಕೃತಿಯ ಪ್ರತಿಯೊಂದು ಹುಚ್ಚಾಟಕ್ಕೂ, ಅವಘಡಕ್ಕೂ ಕ್ಲೈಮೇಟ್ ಚೇಂಜ್ ಒಂದೇ ಕಾರಣವಲ್ಲ. ನಾವು ಸ್ವಾತಂತ್ರ್ಯದ ವಜ್ರಮಹೋತ್ಸವದ ಹೊಸ್ತಿಲಲ್ಲಿದ್ದರೂ ಇನ್ನೂ ಆರ್ಥಿಕವಾಗಿ ಮತ್ತು ಆ ಮೂಲಕ ಸಾಮಾಜಿಕವಾಗಿ ಅಭಿವೃದ್ಧಿ ಹೊಂದದಿರಲು ಒಂದು ಮುಖ್ಯ ಕಾರಣವೆಂದರೆ, ಪ್ರತಿ ಹಂತದಲ್ಲೂ ಮೂಲಭೂತಸೌಕರ್ಯ ಒದಗಿಸುವ ಯೋಜನೆಗಳ ವಿರುದ್ಧ ಪರಿಸರವಾದಿಗಳ ತೀವ್ರ ವಿರೋಧ. ನಮ್ಮ ಸಾಮಾಜಿಕ ತಾಣದಲ್ಲಿ ಮಾತ್ರ ಆಕ್ಟಿವಿಸಂ ನಡೆಸುವ ಆಂದೋಲನ ನಡೆಸುವ ದಿಯಾಮಿರ್ಜಾ ಮತ್ತು ಎಡ-ಉದಾರವಾದಿಗಳಿಗೆ ಪ್ರವಾಹ ನಿಯಂತ್ರಣ ಹಾಗೂ ನೈಸರ್ಗಿಕ ವಿಪತ್ತುಗಳ ಬಗ್ಗೆ ಹಿಂದೆಮುಂದೆ ಗೊತ್ತಿಲ್ಲದೇ ಮಾತನಾಡುವುದು, ಮೂಲಸೌಕರ್ಯಗಳನ್ನೇ ರಾಕ್ಷಸೀಕರಿಸುವುದು ನೆಚ್ಚಿನ ಹವ್ಯಾಸವಾಗಿದೆ. ಸರ್ಕಾರ ಅಭಿವೃದ್ಧಿ ತಂದರೆ “ಇಲ್ಲಿ ನೋಡಿ ಹೀಗಾಯ್ತು ಸರ್ಕಾರದ್ದೇ ತಪ್ಪು” ಅಂತಾರೆ. ಅಭಿವೃದ್ಧಿಯನ್ನೇ ತರದಿದ್ದರೆ “ನೋಡಿ ಮೂಲಸೌಕರ್ಯಗಳೇ ಇಲ್ಲ. ಸರ್ಕಾರದ್ದೇ ತಪ್ಪು ಅಂತಾರೆ”. ಒಟ್ಟಿನಲ್ಲಿ ಇವರಿಗೆ ಕೆಲಸ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ.

0 comments on ““ಆರಾಮಕುರ್ಚಿ ಆಕ್ಟಿವಿಸ್ಟುಗಳ ಅಪ್ರಭುದ್ದ ಅಪಸವ್ಯಗಳಿಗೆ ಅಂತ್ಯವೆಂದು?”

Leave a Reply

Your email address will not be published. Required fields are marked *