Tuesday, 16 April, 2024

”ಬಣ್ಣದ ಲೋಕದ ಕಾಮನಬಿಲ್ಲೊಂದರ ಕಥೆ”

Share post

ನಿಮಗೆ ಯಾರಾದರೂ ಜಗತ್ತಿನ ಅತ್ಯಂತ ಲಾಭದಾಯಕ ಉದ್ಯಮ ಯಾವುದು ಎಂದರೆ ನಿಮ್ಮ ಉತ್ತರ ಏನಿರಬಹುದು? ಬಿಡಿ, ಜಗತ್ತಿನ ಅತ್ಯಂತ ಲಾಭದಾಯಕ ಕಂಪನಿ ಯಾವುದು ಎಂದರೆ ನಿಮ್ಮ ಉತ್ತರ ಏನಿರಬಹುದು? ಇಲ್ಲೊಂದು ಕಂಪನಿಯಿದೆ ನೋಡಿ. ತನ್ನ 60ವರ್ಷದ ಇತಿಹಾಸದಲ್ಲಿ ಪ್ರತೀವರ್ಷವೂ ಸರಾಸರಿ 20%ನಷ್ಟು ಬೆಳವಣಿಗೆ ಆಗುತ್ತಿದೆ, PBT – Profit Before Taxes ಲಾಭ ಕಳೆದ ಐವತ್ತು ವರ್ಷಗಳಿಂದ ಕೆಳಗಿಳಿದಿದ್ದೇ ಇಲ್ಲ, ಪ್ರತೀ ವರ್ಷವೂ ಹಿಂದಿನ ವರ್ಷಕ್ಕಿಂತಾ ಹೆಚ್ಚಾಗುತ್ತಿದೆ. ಮಾತ್ರವಲ್ಲ ROCE – Return on Capital Employed ಅಂದರೆ ಹೂಡಿದ ಹಣದ ಮೇಲಿನ ಹಿಂಪಡೆತದ ಗೆರೆ ಕಳೆದ ಮೂವತ್ತು ವರ್ಷಗಳಿಂದ ಒಂದಿನಿತೂ ಕೆಳಗಿಳಿದದ್ದೇ ಇಲ್ಲ. ಅಂದರೆ ಈ ಕಂಪನಿಯಲ್ಲಿ ಹಾಕಿದ ದುಡ್ಡಿಗೆ ಮೋಸವಿಲ್ಲದಂತೆ ಲಾಭ ಪಕ್ಕಾ. ಕಂಪನಿ ಶೇರ್ ಮಾರುಕಟ್ಟೆ ಪ್ರವೇಶಿಸಿದ್ದು 1982ರಲ್ಲಿ. ಅವತ್ತಿನಿಂದ ಇವತ್ತಿನವರೆಗೆ ಕಂಪನಿಯಲ್ಲಿ ಹಣ ಹೂಡಿದವರಿಗೆ 1800 ಪಟ್ಟು ಹಣ ಮರಳಿ ಬಂದಿದೆ. ಹಿಂದಿನ ಸಾಲನ್ನು ಇನ್ನೊಮ್ಮೆ ಓದಿ, ನಾನು 1800% ಅಂದಿದ್ದಲ್ಲ, 1800 ಪಟ್ಟು ಅಂದದ್ದು. ದುಪ್ಪಟ್ಟು ಅಂದರೆ 100% ಅನ್ನೋದು ನೆನಪಿರಲಿ. ಈ ಕಂಪನಿಯ CAGR – Compound Annual Growth Rate ಅಂದರೆ ಸರಳಕನ್ನಡದಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ 28%. ಈ ಅಂಕಿಯ ಮಹತ್ವ ಎಲ್ಲರಿಗೂ ಅರ್ಥವಾಗದಿದ್ದರೂ ಶೇರ್ ಮಾರುಕಟ್ಟೆಯಲ್ಲಿ ಆಸಕ್ತಿಯಿರುವವರಿಗೆ ಅಥವಾ ಅರ್ಥಶಾಸ್ತ್ರದ ಆಸಕ್ತರಿಗೆ ಕಣ್ಣರಳಿಸಬಹುದು. ಸರಳವಾಗಿ ಹೇಳಬೇಕೆಂದರೆ ಬಂದಲಾಭವನ್ನೆಲ್ಲಾ ಈ ಕಂಪನಿ ಪ್ರತೀವರ್ಷವೂ ಮರುಹೂಡಿಕೆ ಮಾಡಿದರೆ ಮರುವರ್ಷದಲ್ಲೇ ಕಂಪನಿ ಮೂರನೇ ಒಂದರಷ್ಟು ಹೆಚ್ಚುಬೆಳೆಯುತ್ತದೆ. ಅಂದರೆ ಪ್ರತೀ ಮೂರುವರ್ಷಕ್ಕೆ ಈ ಕಂಪನಿಯ ಗಾತ್ರ, ಅಂದರೆ ಕಂಪನಿಯ ಮಾರಾಟ, ಲಾಭ, ಶೇರುದಾರರ ಲಾಭ ಎಲ್ಲವೂ ದುಪಟ್ಟಾಗುತ್ತ ಇದೆ! ಕಳೆದ ದಶಕದ ಕಥೆಯೊಂದನ್ನೇ ತೆಗೆದುಕೊಂಡರೆ, ಕಂಪನಿ ಮೂರು ವರ್ಷಕ್ಕಲ್ಲ ಕೇವಲ ಒಂದೂವರೆ ವರ್ಷಕ್ಕೊಂದುಬಾರಿ ದುಪ್ಪಟ್ಟಾಗಿದೆ. 2011ರಲ್ಲಿ 250ರೂಪಾಯಿಯ ಆಸುಪಾಸಿನಲ್ಲಿದ್ದ ಈ ಕಂಪನಿಯ ಶೇರುಗಳು, ಒಂದು ದಶಕದ ನಂತರ 2021ರಲ್ಲಿ 2400ರೂಪಾಯಿಯ ಹತ್ತಿರದಲ್ಲಿದೆ. ಒಟ್ಟಿನಲ್ಲಿ ಇದೊಂದು ಚಿನ್ನದ ಮೊಟ್ಟೆಯಿಡುವ ಕೋಳಿ, ಪ್ರತೀ ಶೇರುಹೂಡಿಕೆದಾರನ ಕನಸಿನ ಕಂಪನಿ. ಶೇರುಮಾರುಕಟ್ಟೆ ಮಾತ್ರವಲ್ಲ ವ್ಯವಹಾರ ಜಗತ್ತಿನ ಕುತೂಹಲಿಗಳು ನೀವಾಗಿದ್ದರೆ ಈ ಕಂಪನಿಯ ಬಗ್ಗೆ ಓದಿ ಬಿಟ್ಟ ಬಾಯಿ ಮುಚ್ಚಲಾಗದಂತೆ ಆಶ್ಚರ್ಯಹೊಂದಬಹುದು.

 

ಯಾವುದಿರಬಹುದು ಕಂಪನಿ? ಹೆಚ್ಚಿನವರು ಮೇಲಿನ ಸಾಲುಗಳನ್ನು ಓದುವಾಗ ಆಪಲ್ ಅಥವಾ ಅಮೆಜಾನ್ ಎಂದುಕೊಂಡಿರಬಹುದು. ಆದರೆ ನೆನಪಿಡಿ ನಾನು ಹೇಳಿದ ಅಂಕಿಅಂಶಗಳೆಲ್ಲವೂ ಕಳೆದ ಐವತ್ತರವತ್ತು ವರ್ಷದ್ದು. ಈ ಕಂಪನಿ ಹುಟ್ಟುವಾಗ ಜಾಬ್ಸ್, ಜೆಫ್, ಗೇಟ್ಸ್’ಗಳಿನ್ನೂ ಹುಟ್ಟೇ ಇರಲಿಲ್ಲ. ಈ ಕಂಪನಿಯ ಧನಾತ್ಮಕ ಬೆಳವಣಿಗೆ ಶುರುವಾದ 50ರ ದಶಕದಲ್ಲಿನ್ನೂ ಇವರೆಲ್ಲಾ ಚಡ್ಡಿಯಲ್ಲಿದ್ದವರು. ಆದ್ದರಿಂದ, ಅಲ್ಲ….ಯಾವ ಕಂಪ್ಯೂಟರ್ ಕಂಪನಿಯೂ ಅಲ್ಲ. ತಗೊಳ್ಳಿ ನಿಮಗೆ ಇನ್ನೊಂದಿಷ್ಟು ಆಶ್ಚರ್ಯಗಳನ್ನು ಕೊಡೋಣ….ಆಪಲ್ ಇವತ್ತು ಜಗತ್ತಿನ ಅತೀ ಶ್ರೀಮಂತ ಕಂಪನಿಯಿರಬಹುದು, ಅಮೆಜಾನ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಯಿರಬಹುದು. ನಾನು ಹೇಳಿದ ಕಂಪನಿಯೇನೂ ಭೂಮಿಯ ಅತೀ ಶ್ರೀಮಂತ ಕಂಪನಿಯಲ್ಲ. ಆದರೆ ಇಡೀ ಭೂಮಿಯ ಚರಿತ್ರೆಯಲ್ಲೇ ಇಷ್ಟು ವೇಗವಾಗಿ, ಮಾತ್ರವಲ್ಲ ಇಷ್ಟು ಸ್ಥಿರವಾದ ದರದಲ್ಲಿ ಇಷ್ಟು ದಶಕಗಳವರೆಗೆ ಇಷ್ಟೊಂದು ಹಣಮಾಡಿದ ಕಂಪನಿ ಇನ್ನೊಂದಿಲ್ಲ. ಕಂಪನಿಯ ಪ್ರಮೋಟರುಗಳ ಆಸ್ತಿ ಸರಿಸುಮಾರು 86,930ಕೋಟಿ!! ಮೈನಾರಿಟೀ ಶೇರ್ ಹೋಲ್ಡರುಗಳ ಆಸ್ತಿ 72,442ಕೋಟಿ!! ಅಂದರೆ ಈ ಕಂಪನಿ ತನ್ನ ಮೂಲ ಮಾಲೀಕರಿಗೆ ಮಾತ್ರವಲ್ಲ, ಹಣ ಹೂಡಿದವರಿಗೆಲ್ಲಾ ಹಣಮಾಡಿಕೊಟ್ಟಿದೆ. ಕರೋನಾ ಕಾಲದಲ್ಲಿ ಉಳಿದೆಲ್ಲಾ ಕಂಪನಿಗಳು ಮುಚ್ಚಿದಾಗ, ಕೆಲಸಗಾರರ ಸಂಬಳ ತುಂಡರಿಸಿದಾಗ, ಕೆಲಸದಿಂದ ಜನರನ್ನು ತೆಗೆಯುತ್ತಿರುವಾಗ, ಈ ಕಂಪನಿ ಎಲ್ಲರಿಗೂ ಸಂಬಳ ಸರಿಯಾಗಿ ಕೊಟ್ಟದ್ದು ಮಾತ್ರವಲ್ಲ, ಬೋನಸ್ ಕೂಡಾ ಘೋಷಿಸಿತು. ಕಳೆದ ವರ್ಷ ಬೋನಸ್ ಘೋಷಿಸಿದ ಮೊದಲ ಕಂಪನಿಯಿದು.

 

ಯಾವುದಿರಬಹುದು ಈ ಕಂಪನಿ!? ನಿಮ್ಮ ತಲೆಯಲ್ಲಿ ಇನ್ನೂ ಒಂದು ಹುಳ ಬಿಡೋಣ. ಇದೊಂದು ಭಾರತೀಯ ಕಂಪನಿ!! ಹೌದು, ಜಗತ್ತಿನ ಚರಿತ್ರೆಯಲ್ಲೇ ಪ್ರತೀವರ್ಷವೂ 20% ಬೆಳೆದ ಏಕೈಕ ಕಂಪನಿ ಭಾರತದದ್ದು. ಅಲ್ಲ ಇನ್ಫೋಸಿಸ್ ಅಲ್ಲ, ವಿಪ್ರೋ ಅಲ್ಲ. ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪನಿ ಅಲ್ಲವೇ ಅಲ್ಲ. ಆದರೆ ಈ ಕಂಪನಿಯ ಯಶೋಗಾಥೆಯ ಹಿಂದೆ ಕಂಪ್ಯೂಟರಿನ ಚಮತ್ಕಾರವಿದೆ. 1970ರಲ್ಲಿ ಭಾರತದಲ್ಲಿ ಮೈನ್-ಫ್ರೇಂ ಮತ್ತು ಸೂಪರ್ ಕಂಪ್ಯೂಟರುಗಳ ಹೆಸರನ್ನೇ ಇನ್ನೂ ಯಾರೂ ಕೇಳಿರದಿದ್ದಾಗ, ಇಸ್ರೋ ಐಐಟಿಗಳ ಬಳಿಯೂ ಇಲ್ಲದಿದ್ದಾಗ, ಈ ಕಂಪನಿ ಭಾರತದ ಮೊತ್ತಮೊದಲ ಮೈನ್-ಫ್ರೇಂ ಕಂಪ್ಯೂಟರನ್ನು ತನ್ನದಾಗಿಸಿಕೊಂಡಿತ್ತು. ವೇಗ ಮತ್ತು ಬುದ್ದಿಮತ್ತೆಗೆ ಹೋಲಿಸಿದರೆ ಅಂದಿನ ಕಾಲಕ್ಕೆ ಭಾರತದ ಮೊತ್ತ ಮೊದಲ ಸೂಪರ್ ಕಂಪ್ಯೂಟರ್ರೇ ಅದು. ಈ ಕಂಪ್ಯೂಟರನ್ನು ಮೀರಿಸುವ ಸೂಪರ್ ಕಂಪ್ಯೂಟರ್ ‘ಪರಮ್’ ಬಂದದ್ದು 21ವರ್ಷಗಳ ನಂತರ 1991ರಲ್ಲಿ. ಬಿಡಿ, ಅದನ್ನು ಆಮೇಲೆ ಮಾತಾಡೋಣ. ಕಂಪನಿಯ ಹೆಸರಿಗೆ ಮರಳಿ ಬನ್ನಿ. ಇದು ಟಾಟಾ ಅಲ್ಲ, ಬಿರ್ಲಾ ಅಲ್ಲ, ಮಹೀಂದ್ರಾ ಅಲ್ಲ. ನೀವುಗಳು ಅಸಹನೆ ಹೆಚ್ಚಾಗಿ ಪುಟ ತಿರುಗಿಸುವ ಮುನ್ನ ಹೇಳಿ ಬಿಡ್ತೇನೆ ಮಾರಾಯರೇ…ಈ ಕಂಪನಿಯ ಹೆಸರು ಏಷ್ಯನ್ ಪೇಂಟ್ಸ್.

ಏಷಿಯನ್ ಪೇಂಟ್ಸ್’ನ ಮೊದಲ ಲೋಗೋ, ಬ್ರಾಂಡ್ ಮಾಸ್ಕಾಟ್ ಗಟ್ಟುವಿನೊಂದಿಗೆ

ಕ್ವಿಟ್ ಇಂಡಿಯಾ ಚಳುವಳಿ ತೀವ್ರರೂಪದಲ್ಲಿದ್ದಾಗ, ಹೊರದೇಶದ ವಸ್ತುಗಳನ್ನು ಭಾರತೀಯರು ತಿರಸ್ಕರಿಸಬೇಕೆಂಬ ಗಾಂಧೀಜಿಯವರ ಕರೆಗೆ ಜನರು ಓಗೊಟ್ಟಿದ್ದಾಗ, ಜೊತೆಗೇ ಎರಡನೇ ಮಹಾಯುದ್ಧ ಅತ್ಯಂತ ನಿರ್ಣಾಯಕ ಹಂತದಲ್ಲಿದ್ದಾಗ ಭಾರತದಲ್ಲಿ ಪೇಂಟಿನ ಆಮದಿನ ಮೇಲೆ ತಾತ್ಕಾಲಿಕ ನಿರ್ಬಂಧವಿದ್ದಿದ್ದರಿಂದ ಮಾರುಕಟ್ಟೆಯಲ್ಲಿ ಪೇಂಟಿನ ತೀವ್ರ ಕೊರತೆಯುಂಟಾಗಿತ್ತು. ಕೊಳ್ಳಬೇಕೆಂದರೂ ಇದ್ದದ್ದು ಒಂದೋ ಶಾಲಿಮಾರ್ ಪೇಂಟ್ಸ್, ಬಿಟ್ಟರೆ ಕೆಲ ವಿದೇಶಿ ಕಂಪನಿಗಳು. ಈ ಪರಿಸ್ಥಿತಿಯನ್ನರಿತ ಚಂಪಕಲಾಲ್ ಚೋಕ್ಸಿ, ಚಿಮನಲಾಲ್ ಚೋಕ್ಸಿ, ಸೂರ್ಯಕಾಂತ್ ದಾನಿ, ಅರವಿಂದ್ ವಕೀಲ್ ಎಂಬ ನಾಲ್ಕು ಜನ ಸ್ನೇಹಿತರು ಮುಂಬೈನ ಗಾಯ್ವಡಿಯ ಗ್ಯಾರೇಜೊಂದರಲ್ಲಿ ಪ್ರಾರಂಭಿಸಿದ ಕಂಪನಿಯೇ ಏಷ್ಯನ್ ಪೇಂಟ್ಸ್. ನನಗ್ಗೊತ್ತು ಚೋಕ್ಸಿ ಎಂದಕೂಡಲೇ ನಿಮಗೆ ಮೆಹುಲ್ ಚೋಕ್ಸಿಯದ್ದೇ ನೆನಪಾಗುತ್ತದೆ ಅಂತಾ. ಅದನ್ನೆಲ್ಲಾ ಬದಿಗಿಟ್ಟು ಸ್ವಲ್ಪ ಈ ಕಥೆಯನ್ನು ಆನಂದಿಸಿ.

ಹೀಗೆ 1942ರ ಫೆಬ್ರವರಿ ಒಂದರಂದು ಪ್ರಾರಂಭವಾದ ಕಂಪನಿ 1945ರಂದು ಏಷ್ಯನ್ ಪೇಂಟ್ಸ್ ಲಿಮಿಟೆಡ್ ಆಯ್ತು. 1952ರಲ್ಲಿ ಮೊತ್ತಮೊದಲ ಬಾರಿಗೆ ಬ್ರೇಕ್-ಈವನ್ ಹಂತವನ್ನು (ಲಾಭ-ನಷ್ಟ ಎರಡು ಸರಿದೂಗಿ, ಹಾಕಿದ ಬಂಡವಾಳ ಪೂರ್ತಿ ಕೈತಲುಪುವ ಹಂತ) ತಲುಪಿದರೂ, ಕೇವಲ 2% ಅಷ್ಟೇ PBT ತೋರಿಸಿದ್ದು. ಆದರೆ 1967ರಲ್ಲಿ, ಪ್ರಾರಂಭವಾದ ಇಪ್ಪತ್ತೈದು ವರ್ಷಗಳಲ್ಲಿ, ಭಾರತದ ಅತಿದೊಡ್ಡ ಪೇಂಟ್ ಕಂಪನಿಯಾಯ್ತು. ಆದರೆ ಇಲ್ಲಿಂದ ಮುಂದೆ ಪ್ರಾರಂಭವಾದದ್ದೇ ಯಶಸ್ಸಿನ ಕಥೆ. ನಾನು ಮೇಲೆ ಕೊಟ್ಟ ಏಷ್ಯನ್ ಪೇಂಟಿನ ಲಾಭದ ಅಂಕಿಅಂಶಗಳನ್ನೆಲ್ಲಾ ಓದಿದಾಗ, ನಿಮಗೆ ಖಂಡಿತಾ “ಇದು ಹೇಗೆ ಇವರು ಇಷ್ಟೊಂದು ಹಣ ಮಾಡ್ತಾ ಇದ್ದಾರೆ. ಕಂಪನಿಯ ಕ್ಯಾಪಿಟಲಿಸ್ಟುಗಳು ತಾವು ಹಣ ಮಾಡ್ತಾ ಇಲ್ಲ, ಹೂಡಿಕೆದಾರರಿಗೂ ಹಣ ಮಾಡಿಕೊಡ್ತಾ ಇದ್ದಾರೆ. ಇದು ಕೇವಲ ಹಣವಲ್ಲ, ಪ್ರತಿಯೊಬ್ಬರಿಗೂ ಸಂಪತ್ತನ್ನೂ ಮಾಡಿಕೊಡ್ತಾ ಇದ್ದಾರೆ. ಇವರೇನು ಐಫೋನ್ ಕೂಡಾ ತಯಾರು ಮಾಡ್ತಿಲ್ಲ. ಮತ್ತೆ ಹೇಗೆ ಇಷ್ಟೊಂದು ಹಣದ ಹೊಳೆ” ಎಂಬ  ಪ್ರಶ್ನೆ ಮನಸ್ಸಿನಲ್ಲಿ ಮೂಡಿರುತ್ತೆ. ನೀವು ಆ ಪೇಂಟಿನ ಡಬ್ಬದ ಮೇಲಿರುವ ಫಾರ್ಮ್ಯುಲಾ ಓದಿದರೆ ಏಷ್ಯನ್ ಪೇಂಟ್ಸ್ ಭಾರತದ ಅತ್ಯುತ್ತಮ ಪೇಂಟ್ ಅಲ್ಲ. ಯಾವುದೇ ಕೆಮಿಕಲ್ ಇಂಜಿನಿಯರಿಂಗ್ ಕೂಡಾ ಅಕ್ಜೋನೋಬೆಲ್ ಕಂಪನಿಯ ಡ್ಯೂಲಕ್ಸ್’ನ ಫಾರ್ಮ್ಯುಲಾ ಏಷ್ಯನ್ ಪೇಂಟಿಗಿಂತಾ ಎಷ್ಟೋ ಒಳ್ಳೆಯದು ಅಂತಾ ಹೇಳಬಲ್ಲ. ಅದೂ ಅಲ್ಲದೇ ಐಸಿಐ (ಡ್ಯೂಲಕ್ಸ್ ಬ್ರಾಂಡ್’ನ ಮಾಲೀಕ ಕಂಪನಿ) ತನ್ನ ವಾರ್ಷಿಕ ಬಜೆಟ್ಟಿನಲ್ಲಿ ಸುಮಾರು 7%ನಷ್ಟು ಹಣವನ್ನು ಬರೀ ಸಂಶೋಧನೆ ಮತ್ತು ಅಭಿವೃದ್ಧಿಗಾಗಿಯೇ ಮೀಸಲಿಡುತ್ತದೆ. ನೀವು ವಾರನ್ ಬಫೆಟ್ ಅಥವಾ ಬೆಂಜಮಿನ್ ಗ್ರಹಾಂನನ್ನು ಓದಿಕೊಂಡವರಾದರೆ ಖಂಡಿತಾ ಆಕ್ಜೋನೋಬೆಲ್ಲಿನಲ್ಲಿಯೇ ಹಣವನ್ನು ಹಾಕುತ್ತೀರಿ. ಯಾಕೆಂದರೆ ಆ ಕಂಪನಿ ಪಶ್ಚಿಮದ ಪ್ರಾರ್ಮ್ಯುಲಾಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅತ್ಯುತ್ತಮ ಪ್ರಾಡಕ್ಟು, ಅತೀ ಹೆಚ್ಚು R&D ಖರ್ಚು, ಐಐಟಿ ಐಐಎಂನ ಪ್ರತಿಭಾನ್ವಿತರಿಂದ ನಡೆಸ್ಪಡುತ್ತಿರುವ ಡಚ್ ದೈತ್ಯ ಕಂಪನಿಯದು! ಹಾಗಿದ್ದಮೇಲೆ ಅಲ್ಲೇ ಹಣ ಹೂಡಬೇಕು ತಾನೇ? ನಮ್ಮ ಏಷಿಯನ್’ನ ಮಾರ್ವಾಡಿಗಳು ಬರೀ 0.4% ಅಷ್ಟೇ R&D ಖರ್ಚು ಮಾಡ್ತಾಇದ್ದಾರೆ! ಆದರೂ ಮಾರುಕಟ್ಟೆಯ 40% ಇವರದ್ದು. ಈ ಉದ್ಯಮದ ಎರಡನೆಯ ಅತೀದೊಡ್ಡ ಕಂಪನಿಯಾದ ಬರ್ಜರಿನದ್ದು 12% ಮಾರ್ಕೆಟ್ ಶೇರ್, ಮೂರನೆಯ ನೆರೋಲ್ಯಾಕಿನದ್ದು 11%, ಉತ್ಕೃಷ್ಟಮಟ್ಟದ ಪ್ರಾಡಕ್ಟ್ ಕೊಡುವ ಅಕ್ಜೋನೋಬೆಲ್ಲಿನದ್ದು 6%. ಹಾಗಂತಾ ಏಷಿಯನ್ನನದ್ದು ಕಳಪೆ ಮಾಲು ಅಂದ್ಕೋಬೇಡಿ. ಒಂದು ಲೀಟರ್ ಪೇಂಟಿಗೆ ಅವರ ಬೆಲೆ ಅಷ್ಟು ಕಡಿಮೆಯಿದೆ, ಮಾತ್ರವಲ್ಲ ಅವರ operating cost ಅಷ್ಟು ಕಡಿಮೆಯಿದೆ. ಹೆಚ್ಚಿನ ಸಮಯ ಮಾರುಕಟ್ಟೆಯಲ್ಲಿ ಇರುವುದರಿಂದ ಅವರ ಬ್ರಾಂಡ್ ಕೂಡಾ ಗಟ್ಟಿಯಿದೆ. ಗ್ರಾಹಕರ ಸಂಖ್ಯೆ ಅಷ್ಟು ದೊಡ್ಡದಿದೆ. ಆದರೆ ಇದೆಲ್ಲಾ ಆಗಿದ್ದು ಹೇಗೆ? ಇದರ ಹಿಂದಿನ ಜೀನಿಯಸ್ ಕಂಪನಿಯ ಮೂಲ ಮಾಲೀಕರಲ್ಲೊಬ್ಬರಾದ ಚಂಪಕಲಾಲ್  ಚೋಕ್ಸಿ. ಕಂಪನಿಯ ಯಶಸ್ಸಿನಲ್ಲಿ ಉಳಿದವರ ಪಾಲು ಕಡಿಮೆಯದ್ದೇನೂ ಅಲ್ಲವಾದರೂ, ಚಂಪಕಲಾಲ್ ತಮ್ಮ ಕಾಲಕ್ಕಿಂತಾ ಎಷ್ಟೋ ಮುಂದಿದ್ದವರು ಹಾಗೂ ಏಷ್ಯನ್ ಪೇಂಟ್ಸಿನ ಭವಿಷ್ಯವನ್ನು ರೂಪಿಸುವಲ್ಲಿ, ಅಂದಿನ ಕಾಲಕ್ಕೆ ‘ಇದು ಖಂಡಿತಾ ಹುಚ್ಚೇ’ ಎಂದೆನಿಸುವಂತಾ ನಿರ್ಣಯಗಳನ್ನು ಕೈಗೊಂಡವರು.

ಸುಮಾರು 1969ರ ತನಕವೂ ಭಾರತದಲ್ಲಿ ಪೇಂಟನ್ನು ನಾನು ನೀವು ಬಳಸುವ FMCG (Fast Moving Consumer Goods) ತರಹವೇ ಮಾರಲಾಗುತ್ತಿತ್ತು. ಅಂದರೆ ನಿಮ್ಮ ಉತ್ಪನ್ನದ ಬಗ್ಗೆ ನೀವೊಂದಷ್ಟು ಜಾಹೀರಾತು ಕೊಡ್ತಾ ಇದ್ರಿ. ಒಂದೊಂದು ನಗರಕ್ಕೊಬ್ಬ ಹೋಲ್-ಸೇಲ್ ಮಾರಾಟಗಾರನಿರುತ್ತಿದ್ದ, ಅವನ ಕೆಳಗೊಂದಷ್ಟು ಜನ ಹಂಚಿಕೆದಾರಿರುತ್ತಿದ್ದರು, ಅವರ ಕೆಳಗೆ ಏರಿಯಾಕ್ಕೊಂದರಂತೆ ಡೀಲರುಗಳಿರುತ್ತಿದ್ದರು. 69ರಲ್ಲಿ ಚಂಪಕಲಾಲ್  ತಮ್ಮ ಹೋಲ್ಸೇಲರುಗಳನ್ನು ಮತ್ತು ಡಿಸ್ಟ್ರಿಬ್ಯೂಟರುಗಳಿಗೆ “ಇನ್ನುಮೇಲೆ ನಮಗೆ ನಿಮ್ಮ ಅಗತ್ಯವಿಲ್ಲ, ನಾನು ನೇರವಾಗಿ ಡೀಲರನೊಂದಿಗೇ ಡೀಲ್ ಮಾಡುತ್ತೇನೆ” ಎಂದುಬಿಟ್ಟರು. ತಮಾಷೆಯೆಂದರೆ ಈ ನಿರ್ಧಾರಕ್ಕೆ ಮೊದಲ ತಡೆ ಬಂದದ್ದು ಕೆಲಸ ಕಳೆದುಕೊಳ್ಳುತ್ತಿದ್ದ ಹೋಲ್ಸೇಲರು ಅಥವಾ ಡಿಸ್ಟ್ರಿಬ್ಯೂಟರನಿಂದಲ್ಲ, ಬದಲಿಗೆ ಡೀಲರುಗಳಿಂದ. ಡೀಲರುಗಳು “ಚೋಕ್ಸಿಜೀ, ನಮಗೆ ನೀವು ಲೀಟರಿಗೆ ಮೂರುರೂಪಾಯಿಯಷ್ಟೇ ಲಾಭಕೊಡ್ತಿದ್ದೀರಿ. ಇಡೀ ಏರಿಯಾಕ್ಕೆ ಬೇಕಾಗುವಷ್ಟು ದಾಸ್ತಾನು ಕೊಳ್ಳಲು ಹಣ ನಮ್ಮಲ್ಲಿಲ್ಲ. ಅಲ್ಲದೇ ನಮ್ಮ ಅಂಗಡಿಗಳು ಸಣ್ಣವು, ಅಷ್ಟೆಲ್ಲಾ ಸ್ಟೋರೇಜ್ ಇಡಲು ಜಾಗವೂ ಇಲ್ಲ. ಡಿಸ್ಟ್ರಿಬ್ಯೂಟರನನ್ನು ಉಳಿಸಿಕೊಳ್ಳಿ. ಆತ ಗೋದಾಮು ಮತ್ತು ದಾಸ್ತಾನಿನ ಫೈನಾನ್ಸಿಂಗ್ ನೋಡಿಕೊಳ್ಳಲಿ. ಈ ರೀತಿ ನಾನು-ಅವನು-ನೀವು ಎಂಬ ಮೂರು ಪಾಯಿಂಟಿನ ನೇರ ಸಮೀರಕರಣ ಉಳಿಯಲಿ” ಅಂತಾ ಹಟಹಿಡಿದು ಕೂತರು. ಆದರೆ ನೀವು ಜಗತ್ತಿನ ಎಲ್ಲಾ ಅಸಾಮಾನ್ಯ ಯಶಸ್ಸಿನ ಕಥೆಗಳನ್ನು ನೋಡಿದರೆ, ಅಲ್ಲೆಲ್ಲಾ ನೇರ ಸಮೀಕರಣ ಇರುವುದೇ ಇಲ್ಲ. ಎಲ್ಲೋ ಒಂದು ಕಡೆ ಅವರು ಸಮೀಕರಣಗಳನ್ನು ಒಡೆದು ವಕ್ರವಾಗಿ ಯೋಚಿಸಿದಾಗಲೇ ಅದು ಅಸಾಮಾನ್ಯವಾದ ಯಶಸ್ಸು ಕಂಡಿರುತ್ತೆ. ಈ ವಕ್ರಯೋಚನೆ ‘ಅಂದಿನ ಕಾಲಕ್ಕೆ’ ತೀರಾ ತಿಕ್ಕಲು ಅನ್ನಿಸಿರುತ್ತೆ, ಆದರೆ ಮೂವತ್ತು ವರ್ಷದ ನಂತರ “ಅಬ್ಬಾ!” ಎನಿಸುವಂತ ಅಸಾಮಾನ್ಯ ನಿರ್ಧಾರ ಎಂದೆನಿಸುತ್ತದೆ. ಸ್ಟೀವ್ ಜಾಬ್ಸ್’ನ ಐಪಾಡ್ ಅಥವಾ ಐಫೋನಿನಂತೆ. ಚೋಕ್ಸಿಯವರ “ತಿಕ್ಕಲು ನಿರ್ಧಾರ” 1969ರದ್ದಾಗಿತ್ತು. ಅವರು ಡೀಲರುಗಳ ಮಾತಿಗೆ ಬಗ್ಗದೇ, “ನೋಡಿ! ಈ ಹೋಲ್ಸೇಲರುಗಳು, ಡಿಸ್ಟ್ರಿಬ್ಯೂಟರುಗಳು ನನ್ನ 20% ಮಾರ್ಜಿನ್ ತಿನ್ನುತ್ತಿದ್ದಾರೆ. ಇವರಿಗೆ ಈ ಹಣಕೊಡಲು ನನಗಿಷ್ಟವಿಲ್ಲ. ನಿಮ್ಮ ಹತ್ತಿರ ಜಾಗ ಅಥವಾ ಹಣವಿಲ್ಲ ತಾನೇ. ಮಾಲನ್ನು ನಾನೇ ಫ್ಯಾಕ್ಟರಿಯಿಂದ ನೇರವಾಗಿ ನಿಮ್ಮ ಅಂಗಡಿಗೆ ನಿಮಗೆ ಬೇಕಾದಾಗ ತಲುಪಿಸುತ್ತೇನೆ. ಪ್ರತಿ ಮೂರ್ನಾಲ್ಕು ಗಂಟೆಗೆ ನನ್ನ ಟ್ರಕ್ ಬರುತ್ತೆ, ನಿಮಗೆ ಬೇಕಾದ ಮಾಲನ್ನಿಳಿಸಿ ಹೋಗುತ್ತೆ” ಎಂದರು. ಕೇಳಿದ ಜನ “ಇವರಿಗೆಲ್ಲೋ ಹುಚ್ಚು. ಪ್ರತಿ ಮೂರುಗಂಟೆಗೆ ಅಂದರೆ ದಿನಕ್ಕೆ ನಾಲ್ಕು ಬಾರಿ, ನಲವತ್ತು ಸಾವಿರ ಡೀಲರುಗಳಿದ್ದಾರೆ. ದಿನಕ್ಕೆ 1.6ಲಕ್ಷ ಬಾರಿ ಫ್ಯಾಕ್ಟರಿಯಿಂದ ಡೀಲರನಿಗೆ ಮಾಲು ಕಳಿಸಬೇಕು. ಹೇಗೆ ಸಾಧ್ಯ!?” ಅಂತಾ ಆಡಿಕೊಂಡರು. ಹೂರಣವಿದ್ದದ್ದೇ ಇಲ್ಲಿ.

 

ಮುಂದಿನ 28 ವರ್ಷ ಚಂಪಕಲಾಲ್  ಅದೆಂತಾ ಬಲಿಷ್ಟ ಸಪ್ಲೈ-ಚೈನ್ ಹಾಗೂ ವ್ಯಾಪರವನ್ನು ಕಟ್ಟಿದರೆಂದರೆ, ಇವತ್ತು ಅಂಬಾನಿ ಜಿಯೋ ಪೇಂಟಿನ ಬ್ಯುಸಿನೆಸ್ ಪ್ರಾರಂಭಿಸಿದರೂ, ಏಷ್ಯನ್ ಪೇಂಟ್ ಅನ್ನು ಗೆಲ್ಲಲಾರ. ಇಲ್ಲಿ ನೋಡಿ, ಅಂಗಡಿಗಳಲ್ಲಿ ನಾನು ನೀವು ಕೊಳ್ಳುವ ದಿನಬಳಕೆಯ ಹಾಲು, ಮೊಸರುಗಳು ದಿನಕ್ಕೊಮ್ಮೆ ರೀಸ್ಟಾಕ್ ಆಗುತ್ತವೆ. FMCG ಉತ್ಪನ್ನಗಳಾದ ಪೇಸ್ಟು, ಸೋಪು, ಶ್ಯಾಂಪೂ, ಬಿಸ್ಕೇಟು, ಮ್ಯಾಗಿ ಇವೆಲ್ಲಾ ವಾರಕ್ಕೆರಡು ಅಥವಾ ಹೆಚ್ಚೆಂದರೆ ಮೂರುಬಾರಿ ರೀಸ್ಟಾಕ್ ಆಗುತ್ತದೆ. ಅದೂ ಫ್ಯಾಕ್ಟರಿ-ಹೋಲ್ಸೇಲರ್-ಡಿಸ್ಟ್ರಿಬ್ಯೂಟರ್-ಡೀಲರ್ (ಅಂಗಡಿ) ಎಂಬ ಸಮೀಕರಣದ ಮೂಲಕ. ಆದರೆ ಏಷ್ಯನ್ ಪೇಂಟ್ಸಿನ ಅಂಗಡಿ ದಿನಕ್ಕೆ ನಾಲ್ಕುಬಾರಿ ಅಂದರೆ ವಾರಕ್ಕೆ 28 ಬಾರಿ ರೀಸ್ಟಾಕ್ ಆಗುತ್ತದೆ!! ಬೇರೆಲ್ಲಾ ಉತ್ಪನ್ನ/ಕಂಪನಿಗಳ ಕಥೆಯಲ್ಲಿ MRPಯ 30-40% ಡಿಸ್ಟ್ರಿಬ್ಯೂಷನ್ ಚಾನೆಲ್ಲಿನ ಪಾಲಾಗುತ್ತದೆ. 60% ತಯಾರಕನ ಜೇಬಿಗೆ ಹೋಗುತ್ತದೆ. ಆದರೆ MRPಯ 97%ಅನ್ನು ತನ್ನ ಜೇಬಿಗಿಳಿಸುವ ಭಾರತದ ಏಕೈಕ ಕಂಪನಿ ಏಷ್ಯನ್ ಪೇಂಟ್ಸ್ (ಉಳಿದ 3% ಡೀಲರನಿಗೆ). ಈಗ ನಿಮಗೆ ಸಣ್ಣಗೆ ಅಂದಾಜಾಗಬಹುದು, ಹೇಗೆ ಏಷ್ಯನ್ ಪೇಂಟ್ಸ್ ಅಷ್ಟೊಂದು ಹಣಮಾಡುತ್ತಿದೆ ಅಂತಾ. ಏಷ್ಯನ್ ಪೇಂಟ್ಸ್ ಬಳಿ ಇವತ್ತು ಎಪ್ಪತ್ತುಸಾವಿರ ಡೀಲರುಗಳಿದ್ದಾರೆ. ಅಂದರೆ ದಿನಕ್ಕೆ ಕನಿಷ್ಟ ಎರಡೂವರೆಯಿಂದ ಮೂರುಲಕ್ಷಬಾರಿ ಈ ಕಂಪನಿ ತನ್ನ ಡೀಲರುಗಳೊಂದಿಗೆ ವ್ಯವಹರಿಸುತ್ತದೆ. ಎರಡನೇ ದೊಡ್ಡಕಂಪನಿ ಬರ್ಜರ್ ದಿನಕ್ಕೆ ನಲವತ್ತುಸಾವಿರ ಬಾರಿ ವ್ಯವಹರಿಸುತ್ತದೆ, ಪ್ರಪಂಚದ ಅತ್ಯುತ್ಕೃಷ್ಟ ಪೇಂಟಿನ ಆಕ್ಜೋನೋಬೆಲ್ ದಿನಕ್ಕೆ ಹತ್ತುಸಾವಿರ ಬಾರಿ ವ್ಯವಹರಿಸುತ್ತದೆ! ಪೇಂಟ್ ಬಿಡಿ, ಇಡೀ ಭಾರತದಲ್ಲಿ ಯಾವುದೇ ಸೆಕ್ಟರಿನಲ್ಲೂ ಯಾವುದೇ ಕಂಪನಿಯೂ ದಿನಕ್ಕಲ್ಲ ವಾರಕ್ಕೂ ಹತ್ತುಸಾವಿರಬಾರಿ ಡೀಲರನನ್ನು ಮುಟ್ಟುವುದಿಲ್ಲ. ಏಷ್ಯನ್ ಪೇಂಟ್ ಅನ್ನು ಎದುರುಹಾಕೊಳ್ಳಬೇಕೆಂದರೆ ಅದೆಂತಾ ಎಂಟ್ರಿಬ್ಯಾರಿಯರ್ ಇದೆ ನೋಡಿ!! ಈಗ ನಿಮಗೆ ಏಷ್ಯನ್ ಪೇಂಟಿನ ಮಾಡೆಲ್ ಅರ್ಥವಾದರೂ ಕೂಡಾ “ರಸ್ತೆಗಳೇ ಸರಿಯಾಗಿಲ್ಲ ಈ ದೇಶದಲ್ಲಿ ಅದು ಹೇಗೆ ಈ ಕಂಪನಿ ತನ್ನ ಡೀಲರುಗಳನ್ನು ಇಷ್ಟೊಂದು ಬಾರಿ ಮುಟ್ಟಲು ಸಾಧ್ಯ? ಯಾರಿಗೆ ಯಾವ ಪೇಂಟ್ ಬೇಕೆಂದು ಇವರಿಗೆ ಹೇಗೆ ಗೊತ್ತು?” ಎಂಬ ಮೂಲ ಪ್ರಶ್ನೆಯೊಂದು ಉಳಿಯುತ್ತದೆ ತಾನೇ. ನೀವು ಇವರ ಯಾವುದೇ ಡೀಲರ್ ಬಳಿ ಹೋಗಿ ‘ಸರ್ ಇವತ್ತು ಸಂಜೆ ಎಂಟುಗಂಟೆಗೆ ಯಾವ ಪೇಂಟ್ ಮಾರ್ತೀರ?’ ಅಂತಾ ಕೇಳಿದ್ರೆ ಅವರು ‘ನನಗದೆಲ್ಲಾ ಗೊತ್ತಿಲ್ಲ ಸರ್, ಪ್ರತಿ ನಾಲ್ಕುಗಂಟೆಗೆ ಕಂಪನಿಯ ಟ್ರಕ್ ಬಂದು ಇಳಿಸಿಹೋಗುತ್ತೆ. ನಾನು ಫೋನಲ್ಲಿ ನೆಟ್ಫ್ಲಿಕ್ಸ್ ನೋಡ್ತಾ ಇರ್ತೀನಿ. ಈಕಡೆ ಮಾರಾಟವಾಗ್ತಾ ಇರುತ್ತೆ’ ಅಂತಾನೆ. “ಸರಿಬಿಡಿ, ನಿಮಗೆ ಗೊತ್ತಿರಲಿಕ್ಕಿಲ್ಲ, ಕಂಪನಿಯವರನ್ನೇ ಕೇಳೋಣ” ಅಂತಾ ನೀವು ಏಷ್ಯನ್ ಪೇಂಟ್ಸ್ನವರ ಏರಿಯಾ ಸೇಲ್ಸ್ ಮ್ಯಾನೇಜರ್ ಬಳಿ ಹೋಗಿ “ನಾಳೆ ಬೆಂಗಳೂರಲ್ಲಿ ಏನು ಮಾರಾಟವಾಗುತ್ತೆ” ಅಂತಾ ಕೇಳಿನೋಡಿ. ಆಕೆ ಕೂಡ “ಸಾರ್ ನೂರಿಪ್ಪತ್ತು ಡೀಲರುಗಳಿದ್ದಾರೆ, ದಿನಕ್ಕೆ ನಾಲ್ಕು ಶಿಫ್ಟ್ ಲೋಡಿಂಗ್ ಇರುತ್ತೆ. ನನಗೆ ಬೆಳಗಿನ ಜಾನ ನಾಲ್ಕೂವರೆಗೆ ಒಂದು ಆಟೋಮ್ಯಾಟಿಕ್ ಈಮೇಲ್ ಬರುತ್ತೆ. ಅದರಲ್ಲಿ ಜಾಲಹಳ್ಳಿಗಿಷ್ಟು, ನೆಲಮಂಗಲಕ್ಕಿಷ್ಟು, ಬಸವನಗುಡಿಗಿಷ್ಟು ಅಂತಾ ಲೋಡಿಂಗ್ ಪಟ್ಟಿಯಿರುತ್ತೆ” ಅಂತಾಳೆ. ನೀವು ಮುಂಬೈ ಫ್ಯಾಕ್ಟರಿಯ ಪ್ರೊಡಕ್ಷನ್ ಮ್ಯಾನೇಜರನನ್ನು ಅಥವಾ ಪ್ರೊಕ್ಯೂರ್ಮೆಂಟಿನವರನ್ನು ಕೇಳಿನೋಡಿ. ಅವರೂ ಇದೇ ಆಟೋಮ್ಯಾಟಿಕ್ ಈಮೇಲ್ ಕಥೆಯನ್ನೇ ಹೇಳ್ತಾರೆ.

 

ಅದೇ ನೀವು ಕಂಪನಿಯ ಡೇಟಾ ಸೈಂಟಿಸ್ಟ್ ಬಳಿ “12ಮೇ ಸಂಜೆ ನಾಲ್ಕಕ್ಕೆ, ನಾಗರಭಾವಿಯ ಡೀಲರ್ಶಿಪ್ಪಿನಲ್ಲಿ ಯಾವ ಡಬ್ಬ ಮಾರಾಟವಾಗುತ್ತೆ” ಅಂತಾ ಕೇಳಿ. ಆತ ನಿಮಗೆ 98% ಕರಾರುವಕ್ಕಾದ ಮಾಹಿತಿ ನೀಡುತ್ತಾನೆ. ಇದು ಏಷ್ಯನ್ ಪೇಂಟ್ಸ್’ನ ಗೋಲ್ಡನ್ ಗೂಸ್, “ತಂತ್ರಜ್ಞಾನ”. ಮೇಲೆ ಹೇಳಿದಂತೆ 1970ರಲ್ಲಿ ಚಂಪಕಲಾಲ್ 8ಕೋಟಿಯಷ್ಟು ತಲೆಧಿಮ್ಮೆನ್ನೆಸುವಂತಾ ಮೊತ್ತತೆತ್ತು ಭಾರತಕ್ಕೆ ಮೊದಲ ಸೂಪರ್-ಕಂಪ್ಯೂಟರ್ ಅನ್ನು ತಂದರು. ‘ಜಗತ್ತಿನ ಅತ್ಯುತ್ತಮ ERP ಇಂಪ್ಲಿಮೆಂಟೇಷನ್ ಎಲ್ಲಿದೆ” ಅಂತಾ ಕೇಳಿದರೆ, ನಾನು ನೀವು ಅಮೆಜಾನ್ ಅಥವಾ ಜಸ್ಟ್-ಇನ್-ಟೈಂ ಪ್ರತಿಪಾದಿಸಿದ ಟೊಯೋಟಾ ಅನ್ನಬಹುದೇನೋ. ಆದರೆ ಜಗತ್ಜ್ಞಾನವಿರುವ SAP ಕನ್ಸಲ್ಟೆಂಟ್ ಏಷ್ಯನ್ ಪೇಂಟ್ಸ್ ಎನ್ನುತ್ತಾನೆ. ಯಾಕೆಂದರೆ ಕಳೆದ ಐವತ್ತು ವರ್ಷಗಳಿಂದ ಏಷ್ಯನ್ ಪೇಂಟ್ಸ್ ಭಾರತದ ಪ್ರತಿಯೊಂದು ನಗರ, ಏರಿಯಾ, ಪಂಚಾಯಿತಿ, ಮೊಹಲ್ಲಾಗಳ ಮಟ್ಟದಲ್ಲಿ ಗಂಟೆಗಂಟೆಗೂ ಮಾಹಿತಿ ಕಲೆಹಾಕಿದೆ. ಯಾರಿಗೆ ಎಲ್ಲಿ ಯಾವತ್ತು ಯಾವ ಟಿನ್ ಸೈಜಿನ ಯಾವ ಬಣ್ಣ ಬೇಕಾಗಬಹುದು ಎಂಬುದರ ಅತ್ಯುತ್ತಮ ಮಾಹಿತಿಭಂಡಾರ ಏಷ್ಯನ್ ಪೇಂಟ್ಸ್ ಬಳಿ ಇದೆ. ಗೂಗಲ್, ಫೇಸ್ಬುಕ್ಕುಗಳು ಬರೀ ಹತ್ತುವರ್ಷದ ಮಾಹಿತಿಯಿಟ್ಟುಕೊಂಡೇ ನಮ್ಮನ್ನು ತಿಳಿಯಬಲ್ಲವೆಂದರೆ, ಐವತ್ತುವರ್ಷಗಳ ಮಾಹಿತಿಯಿಂದ ಏಷ್ಯನ್ ಪೇಂಟ್ಸ್ ನಮ್ಮನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿರಬಹುದು ಆಲೋಚಿಸಿ. ಹಾಗೂ ಈ ಮಾಹಿತಿಯ ಬೆಟ್ಟ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದು ತಂತ್ರಜ್ಞಾನದ ತಾಕತ್ತು. ಮತ್ತಿದನ್ನು ಚಂಪಕಲಾಲ್ ಐವತ್ತುವರ್ಷ ಹಿಂದೆಯೇ ಕಂಡುಕೊಂಡಿದ್ದರು.

 

ಈ ಕಂಪನಿ ತನ್ನ ಕಚ್ಚಾವಸ್ತುಗಳಿಗೆ ಹಾಕಿದ ಪ್ರತಿ ರೂಪಾಯಿಯನ್ನೂ ಎಂಟೇದಿನದಲ್ಲಿ ಮರಳಿಮಡೆಯುತ್ತದೆ. ಬರ್ಜರ್’ಗೆ ಇದೇ ವರ್ಕಿಂಗ್ ಕ್ಯಾಪಿಟಲ್ ಸೈಕಲ್ 45 ದಿನ! ಆಕ್ಜೋನೋಬೆಲ್ಲಿಗೆ 105 ದಿನ!! ಭಾರತದ ಅತ್ಯುತ್ತಮ ಪೇಂಟ್ ಆಕ್ಜೋನೋಬೆಲ್, ಭಾರತದ ಅತ್ಯುತ್ತಮ ಪೇಂಟ್ ಕಂಪನಿ ಏಷ್ಯನ್ ಪೇಂಟ್ 🙂

 

wolframalpha.comನಲ್ಲಿ ಏಷ್ಯನ್ ಮತ್ತು ಆಪಲ್ ಕಂಪನಿಗಳ ಮುಂದಿನ ಎರಡು ವರ್ಷಗಳ ಭವಿಷ್ಯ ಏನು ಹೇಗೆ ಅಂತಾ ನಾನು ಕೇಳಿದ್ದಕ್ಕೆ ಸಿಕ್ಕ ಉತ್ತರ ಇಲ್ಲಿರುವ ಚಿತ್ರದಲ್ಲಿದೆ ನೋಡಿ! ಉಳಿದ ನಿರ್ಧಾರ ಮತ್ತು ತಿಳುವಳಿಕೆಯನ್ನು ನಿಮಗೇ ಬಿಡುತ್ತೇನೆ. ಮೇಕ್ ಇನ್ ಇಂಡಿಯಾ ಅಂದರೆ ನಗುವ, ಭಾರತದ ಕಂಪನಿಗಳು ಅಂದರೆ ಮೂಗುಮುರಿಯುವ, ಮಾರ್ವಾಡಿಗಳು ಅಂದರೆ ಅದೇನೋ ಸ್ಟೀರಿಯೋಟೈಪ್ ಬೆಳೆಸಿಕೊಂಡಿರುವ ಎಲ್ಲರಿಗೂ ತಮ್ಮನ್ನು ತಾವೇ ಅವಲೋಕಿಸಿಕೊಳ್ಳುವಂತೆ ಮಾಡುವ ಕಥೆ ಏಷ್ಯನ್ ಪೇಂಟ್ಸ್’ನದ್ದು ಎಂದು ಹೇಳಿಕೊಳ್ಳುವವ ನಾನು. ಮತ್ತೆ ನೀವು?

0 comments on “”ಬಣ್ಣದ ಲೋಕದ ಕಾಮನಬಿಲ್ಲೊಂದರ ಕಥೆ”

Leave a Reply

Your email address will not be published. Required fields are marked *